ಬುಧವಾರ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ Surprise live ಬಂದಿದ್ದ ಕನ್ನಡದ ಸೂಪರ್‌ಸ್ಟಾರ್ ರಕ್ಷಿತ್ ಶೆಟ್ಟಿ ಚಾರ್ಲಿಯ ನವಜಾತ ನಾಯಿಮರಿಗಳನ್ನು ಪರಿಚಯಿಸಿದ್ದಾರೆ. ಕಿರಣರಾಜ್ ಕೆ ನಿರ್ದೇಶಿಸಿದ ಮತ್ತು ಪರಂವಾ ಸ್ಟುಡಿಯೋಸ್ ನಿರ್ಮಿಸಿದ 2022ರ ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ 777 ಚಾರ್ಲಿ' ಯಲ್ಲಿ ಚಾರ್ಲಿ ರಕ್ಷಿತ್ ಶೆಟ್ಟಿಯೊಂದಿಗೆ ನಟಿಸಿದೆ.
ಈ ಚಿತ್ರದಲ್ಲಿ ಚಾರ್ಲಿಯ ಹೃದಯಸ್ಪರ್ಶಿ ಅಭಿನಯ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಮಾತ್ರವಲ್ಲದೆ ಪ್ಯಾನ್-ಇಂಡಿಯಾ ಪ್ರೇಕ್ಷಕರನ್ನೂ ಗೆದ್ದಿತ್ತು. ಇದೀಗ ಚಾರ್ಲಿ ತಾಯಿಯಾಗಿರುವ ಸುದ್ದಿಯನ್ನು ಅಭಿಮಾನಿಗಳೊಂದಿಗೆ ರಕ್ಷಿತ್ ಶೆಟ್ಟಿ ಲೈವ್ ನಲ್ಲಿ ಹಂಚಿಕೊಂಡಿದ್ದಾರೆ.
ಮೈಸೂರಿನಲ್ಲಿ ಪ್ರಮೋದ್ ಚಾರ್ಲಿಯನ್ನು ನೋಡಿಕೊಳ್ಳುತ್ತಿದ್ದಾರೆ. ಅದು ಯಾವಾಗ ಮರಿಗಳಿಗೆ ಜನ್ಮ ನೀಡುತ್ತದೆ ಎಂದು ಪ್ರಮೋದ್‌ಗೆ ಕೇಳುತ್ತಿದ್ದೆ. ಅದಕ್ಕೆ ವಯಸ್ಸಾಗುತ್ತಿರುವುದರಿಂದ ಅದು ಖಚಿತವಾಗಿಲ್ಲ ಎಂದು ಪ್ರಮೋದ್ ಯಾವಾಗಲೂ ಹೇಳುತ್ತಿದ್ದರು ಎಂದು ಹೇಳಿದರು. ರಕ್ಷಿತ್ ಶೆಟ್ಟಿ ಪ್ರಕಾರ ಮೇ 9ರಂದು ಚಾರ್ಲಿ ಆರು ಮರಿಗಳಿಗೆ ಜನ್ಮ ನೀಡಿದೆ. ಇದರಲ್ಲಿ ಒಂದು ಗಂಡು, ಐದು ಹೆಣ್ಣು ಮರಿಗಳಿವೆ. ನಾಯಿಮರಿಗಳನ್ನು ನೋಡಲು ಮೈಸೂರಿಗೆ ಬಂದಿರುವುದಾಗಿ ಅವರು ತಿಳಿಸಿದರು.