ಭಾರತದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್ಗಳಲ್ಲಿ ಒಂದಾಗಿರುವ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ 'ಕೆರೆಬೇಟೆ' ಮತ್ತು 'ವೆಂಕ್ಯಾ' ಸಿನಿಮಾಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ.
55ನೇ ‘ಭಾರತೀಯ ಅಂತಾರಾಷ್ಟ್ರೀಯಾ ಸಿನಿಮೋತ್ಸವ’ ಗೋವಾದಲ್ಲಿ ನವೆಂಬರ್ 20ರಿಂದ 28ರ ತನಕ ನಡೆಯಲಿದ್ದು, ಫಿಲ್ಮ್ ಫೆಸ್ಟಿವಲ್ನ ‘ಭಾರತೀಯ ಪನೋರಮಾ’ ವಿಭಾಗದಲ್ಲಿ ಈ ಸಿನಿಮಾಗಳು ಪ್ರದರ್ಶನ ಕಾಣಲಿವೆ.
ಫಿಲ್ಮ್ ಫೆಸ್ಟಿವಲ್ನಲ್ಲಿ ‘ಭಾರತೀಯ ಪನೋರಮಾ’ ವಿಭಾಗ ಪ್ರಮುಖವಾಗಿದ್ದು, ಇದರಲ್ಲಿ 25 ಕಥಾಚಿತ್ರ ಹಾಗೂ 20 ನಾನ್-ಫೀಚರ್ ಸಿನಿಮಾಗಳು ಪ್ರದರ್ಶನಕ್ಕೆ ಆಯ್ಕೆ ಆಗಿದೆ. ಇಂಡಿಯನ್ ಪನೋರಮಾ ವಿಭಾಗದ ಆರಂಭಿಕ ಸಿನಿಮಾವಾಗಿ ಬಾಲಿವುಡ್ನ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾ ಪ್ರದರ್ಶನ ಆಗಲಿದೆ. ಎರಡನೇ ಸಿನಿಮಾವಾಗಿ ಕನ್ನಡದ ‘ಕೆರೆಬೇಟೆ’ ಆಯ್ಕೆ ಆಗಿದೆ. ಪಟ್ಟಿಯ 3ನೇ ಸ್ಥಾನದಲ್ಲಿ ಕನ್ನಡದ ‘ವೆಂಕ್ಯಾ’ ಸಿನಿಮಾ ಇದೆ.
ಗೌರಿಶಂಕರ್ ಮುಖ್ಯಭೂಮಿಕೆಯ ಮತ್ತು ರಾಜ್ ಗುರು ನಿರ್ದೇಶನದ 'ಕೆರೆಬೇಟೆ' ಸಿನಿಮಾ ಮಾರ್ಚ್ ತಿಂಗಳಲ್ಲಿ ತೆರೆಕಂಡು ಯಶಸ್ವಿಯಾಗಿತ್ತು.
ಅಪ್ಪಟ ಹಳ್ಳಿ ಸೊಗಡಿನ ಕೆರೆಬೇಟೆ ಚಿತ್ರ ಮಾರ್ಚ್ 15ಕ್ಕೆ ರಾಜ್ಯಾದ್ಯಂತ ತೆರೆಕಂಡಿತ್ತು. ಜನಮನ ಸಿನಿಮಾ ಸಂಸ್ಥೆಯಡಿ ಮೂಡಿಬಂದ ಈ ಸಿನಿಮಾ, ಮಲೆನಾಡಿನ ಮೀನು ಬೇಟೆ ಸಂಸ್ಕೃತಿಯನ್ನು ಒಳಗೊಂಡಿದೆ. ಗೌರಿಶಂಕರ್, ಬಿಂದು ಗೌಡ ಜೊತೆಗೆ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಹರಿಣಿ ಸೇರಿದಂತೆ ಹಲವರು ನಟಿಸಿದ್ದಾರೆ.
ಕೆರೆಬೇಟೆ ಸಿನಿಮಾದ ಜೊತೆಗೆ ಸಿನಿಮೋತ್ಸವದಲ್ಲಿ 'ವೆಂಕ್ಯಾ' ಚಿತ್ರ ಕೂಡ ಪ್ರದರ್ಶನ ಕಾಣುತ್ತಿದೆ. ಡೊಳ್ಳು ಸಿನಿಮಾ ಮೂಲಕ ನಿರ್ಮಾಣಕ್ಕಿಳಿದು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದ ಪವನ್ ಒಡೆಯರ್ ಹಾಗೂ ಸಾಗರ್ ಪುರಾಣಿಕ್ ಕಾಂಬಿನೇಷನ್ನಲ್ಲಿ ವೆಂಕ್ಯಾ ಚಿತ್ರ ಮೂಡಿಬಂದಿದೆ. ವೆಂಕ್ಯಾನಿಗೆ ಸಾಗರ್ ಪುರಾಣಿಕ್ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ. ಸಾಗರ್ಗೆ ಜೋಡಿಯಾಗಿ ಶಿಮ್ಲಾದ ರೂಪಾಲಿ ಸೂದ್ ಅಭಿನಯಿಸಿದ್ದರು.
ಉತ್ತರ ಕರ್ನಾಟಕ ಕಥೆಯಾಧಾರಿತ ವೆಂಕ್ಯಾ ಸಿನಿಮಾವನ್ನು ಅಪೇಕ್ಷಾ ಒಡೆಯರ್ ಮತ್ತು ಪವನ್ ಒಡೆಯರ್ ನಿರ್ಮಾಣ ಮಾಡಿದ್ದಾರೆ. ಪವನ್ ಸ್ನೇಹಿತರಾದ ಅವಿನಾಶ್ ವಿ.ರೈ ಮತ್ತು ಮೋಹನ್ ಲಾಲ್ ಮೆನನ್ ಅವರ ಸಹ ನಿರ್ಮಾಣವಿದೆ.