ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರು ತಿಂಗಳು ಜೈಲುವಾಸ ಅನುಭವಿಸಿ ಷರತ್ತುಬದ್ಧ ಜಾಮೀನು ಮೇಲೆ ಹೊರಬಂದಿರುವ ನಟ ದರ್ಶನ್(challenging star Darshan) ಮೊದಲ ಬಾರಿ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ವಿಡಿಯೊ ಸಂದೇಶ ಕಳುಹಿಸಿದ್ದಾರೆ.
ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ
ಫೆಬ್ರವರಿ 16 ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ. ಪ್ರತಿವರ್ಷದಂತೆ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅವರ ಅಭಿಮಾನಿಗಳಿಗೆ ನೆಚ್ಚಿನ ನಟನ ಹುಟ್ಟುಹಬ್ಬವೆಂದರೆ ಹಬ್ಬದ ರೀತಿ ಸಡಗರ. ಆದರೆ ಈ ವರ್ಷ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ನನಗೆ ವಿಪರೀತ ಕಾಲು ಮತ್ತು ಬೆನ್ನು ನೋವಿದೆ, ಗಂಟೆಗಟ್ಟಲೆ ನಿಂತುಕೊಂಡು ಇರಲು ಸಾಧ್ಯವಾಗುವುದಿಲ್ಲ. ಔಷಧ ತೆಗೆದುಕೊಳ್ಳುತ್ತಿದ್ದೇನೆ, ಅದರ ಪವರ್ ಇರುವವರೆಗೆ 10-15 ದಿನ ನೋವು ಕಡಿಮೆ ಇರುತ್ತದೆ, ಮತ್ತೆ ನೋವು ಆರಂಭವಾಗುತ್ತದೆ, ನನ್ನ ಅನಾರೋಗ್ಯ ಕಾರಣದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲವಷ್ಟೆ, ಯಾರೂ ಬೇಸರ ಮಾಡಿಕೊಳ್ಳಬಾರದು, ಇನ್ನು ಕೆಲವೇ ದಿನಗಳಲ್ಲಿ ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತೇನೆ ಎಂದಿದ್ದಾರೆ.
ಸಿನಿಮಾ ಮಾಡುತ್ತೇನೆ
ಎಂದಿನಂತೆ ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಎಂದು ಕರೆದಿರುವ ದಾಸ, ನಾನು ಎಂದಿಗೂ ನನ್ನ ಪ್ರೀತಿಯ ಅಭಿಮಾನಿ ಸೆಲೆಬ್ರಿಟಿಗಳಿಗೆ ಮೋಸ ಮಾಡುವುದಿಲ್ಲ. ನನ್ನನ್ನು ನಂಬಿ ಹಣ ಹೂಡಿರುವ ನಿರ್ಮಾಪಕರಿಗೆ ಸಹ ತೊಂದರೆ ಕೊಡುವುದಿಲ್ಲ. ಒಪ್ಪಿಕೊಂಡಿರುವ ಸಿನಿಮಾಗಳನ್ನು ಮಾಡಿ ಮುಗಿಸುತ್ತೇನೆ, ಯಾವುದೇ ಊಹಾಪೋಹಗಳನ್ನು ನಂಬಬೇಡಿ, ಸೂರಪ್ಪ ಬಾಬು ಅವರು ನನ್ನ ಬಳಿಗೆ ಸಿನಿಮಾ ಮಾಡಬೇಕೆಂದು ಬಂದಿದ್ದಾಗ ಅವರಿಗೆ ಸಹ ತುಂಬಾ ಕಮಿಟ್ ಮೆಂಟ್ ಗಳಿದ್ದವು.
ಹಾಗಾಗಿ ಅವರ ಜೊತೆ ಸಿನಿಮಾ ಮಾಡಲು ಒಪ್ಪಿಕೊಂಡೆ, ಈ ನಡುವೆ ತುಂಬಾ ವಿಷಯಗಳು ನಡೆದು ವಿಳಂಬವಾಯಿತು, ಸೂರಪ್ಪ ಬಾಬು ಅವರಿಗೆ ಮತ್ತಷ್ಟು ತೊಂದರೆ ಆಗಬಾರದು ಎಂದು ಅವರು ಕೊಟ್ಟ ಮುಂಗಡ ಹಣವನ್ನು ವಾಪಾಸ್ ಕೊಟ್ಟಿದ್ದು ನಿಜ, ಮುಂದೊಂದು ದಿನ ಉತ್ತಮ ಸಬ್ಜೆಕ್ಟ್ ಸಿಕ್ಕಿದರೆ ಸೂರಪ್ಪ ಬಾಬು ಅವರ ಜೊತೆ ಸಿನಿಮಾ ಮಾಡುತ್ತೇನೆ ಎಂದರು.
ಪ್ರೇಮ್ ಜೊತೆ ಸಿನಿಮಾ ಮಾಡುವುದು ಪಕ್ಕಾ
ಇನ್ನು ನಿರ್ದೇಶಕ ಜೋಗಿ ಪ್ರೇಮ್ ಅವರ ಜೊತೆ ಕೂಡ ಸಿನಿಮಾ ಮಾಡುವುದು ಖಂಡಿತ. ಅವರು ನನ್ನ ಗುರುಗಳು, ನನ್ನ ಪ್ರೀತಿಯ ಸ್ನೇಹಿತೆ ರಕ್ಷಿತನ ಆಸೆ ಕೂಡ ನಾನು ಸಿನಿಮಾ ಮಾಡಬೇಕು ಅಂತ. ಕೆವಿಎನ್ ಪ್ರೊಡಕ್ಷನ್ ನಲ್ಲಿ ಈಗಾಗಲೇ ಸಿನಿಮಾ ತಯಾರಾಗುತ್ತಿದೆ. ಅದರ ಮಧ್ಯೆ ಇನ್ನೊಂದು ಸಿನಿಮಾ ಸದ್ಯಕ್ಕೆ ಬೇಡ ಎಂದು ಮುಂದೆ ಹಾಕಿದ್ದೇವೆ. ಮುಂದೆ ಖಂಡಿತಾ ಮಾಡುತ್ತೇನೆ ಎಂದರು.
ಬೇರೆ ಭಾಷೆಗೆ ಹೋಗಲಾರೆ
ದರ್ಶನ್ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಾರೆ ಎಂಬ ವಿಷಯ ಆಗಾಗ ಸುದ್ದಿಯಾಗುತ್ತಿರುತ್ತದೆ. ನನ್ನ ಕೊನೆಯ ಉಸಿರು ಇರುವವರೆಗೂ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವುದಿಲ್ಲ, ಕನ್ನಡದ ಜನತೆ ನನಗೆ ಪ್ರೀತಿ, ಆಶೀರ್ವಾದ ನೀಡಿದ್ದಾರೆ, ಇಲ್ಲಿ ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ. ಇಲ್ಲಿಯೇ ಇದ್ದು ಕನ್ನಡದ ಜನರು ಕೊಟ್ಟಿರುವ ಪ್ರೀತಿ ಉಳಿಸಿ ಕಾಪಾಡಿಕೊಂಡು ಹೋಗುತ್ತೇನೆ ಎಂದರು.
ಮೂವರಿಗೆ ವಿಶೇಷ ಥ್ಯಾಂಕ್ಸ್
ಅಭಿಮಾನಿಗಳ ಪ್ರೀತಿ, ಬೆಂಬಲಕ್ಕೆ ನಾನು ಯಾವಾಗಲೂ ಚಿರಋಣಿ, ನನ್ನ ಕಷ್ಟದ ಸಮಯದಲ್ಲಿ ಏನೇ ಆದರೂ ಸಾಥ್ ಕೊಟ್ಟ ಮೂವರಿಗೆ ನಾನು ಈ ಸಂದರ್ಭದಲ್ಲಿ ವಿಶೇಷವಾಗಿ ಧನ್ಯವಾದ ಹೇಳುತ್ತೇನೆ. ಅದು ನಮ್ಮ ಹೀರೋ ಧನ್ವೀರ್, ಸ್ನೇಹಿತರಾದ ಬುಲ್ ಬುಲ್ ರಚಿತಾ ರಾಮ್ ಮತ್ತು ರಕ್ಷಿತಾ ಎಂದು ಸ್ಮರಿಸಿಕೊಂಡಿದ್ದಾರೆ.