ಬೆಂಗಳೂರು: ಸಂಜು ವೆಡ್ಸ್ ಗೀತಾ-2 ಸಿನಿಮಾ ಪ್ರಚಾರ ಕಾರ್ಯಕ್ಕೆ ನಟಿ ರಚಿತಾ ರಾಮ್ ಅಸಹಕಾರ ತೋರಿದ್ದಾರೆ ಎಂದು ಚಿತ್ರತಂಡ ಕನ್ನಡ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಚಿತ್ರತಂಡ ದೂರು ನೀಡಿದೆ. ರಚಿತಾ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚಿತ್ರತಂಡ ದೂರು ನೀಡಿದೆ.
ಶ್ರೀನಗರ ಕಿಟ್ಟಿ ಹಾಗೂ ರಚಿತಾರಾಮ್ ಅಭಿನಯದ ಸಂಜು ವೆಡ್ಸ್ ಗೀತಾ-2 ಸಿನಿಮಾ ಇತ್ತೀಚೆಗಷ್ಟೇ ರಿ ರೀಲೀಸ್ ಆಗಿತ್ತು. ಆದರೆ ಪ್ರಚಾರ ಕಾರ್ಯದಲ್ಲಿ ನಾಯಕಿ ಭಾಗಿಯಾಗಿಲ್ಲ ಎಂಬುದು ಚಿತ್ರತಂಡದ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿರುವ ರಚಿತಾ ರಾಮ್ ಒಂದು ದಿನವೂ ಸಿನಿಮಾದ ಪ್ರಮೋಷನ್‌ಗೆ ಬಂದಿಲ್ಲ. ನಮ್ಮ ಚಿತ್ರದ ಅನ್ನ ತಿಂದು ಹೀಗೆಲ್ಲ ಮಾಡೋದು ತರವಲ್ಲ ಎಂದು ಚಿತ್ರತಂಡ ಗರಂ ಆಗಿದೆ.
ಈ ಸಿನಿಮಾಗೆ ಕೋಟ್ಯಂತರ ರೂಪಾಯಿ ಹಣ ಹಾಕಿರುತ್ತೀವಿ. ಕಲಾವಿದರಿಗೆ ಊಟ ಬಟ್ಟೆಯಿಂದ ಹಿಡಿದು ಸಂಭಾವನೆ, ಗೌರವ ನೀಡಿ ಎಲ್ಲ ಮಾಡಿದ ಮೇಲೆ ಪ್ರಮೋಷನ್ ಟೈಮಲ್ಲಿ ಅವರು ನಮ್ಮ ಕೈಹಿಡಿಯಬೇಕಾಗುತ್ತೆ. ಕಲಾವಿದರು ಅಂದ್ರೆ ಕೇವಲ ಸಿನಿಮಾದಲ್ಲಿ ನಟಿಸುವುದಷ್ಟೇ ಅಲ್ಲ. ಪ್ರಚಾರದ ವೇಳೆಯೂ ಇದು ನಮ್ಮ ಸಿನಿಮಾ ಗೆಲ್ಲಬೇಕು ಎಂಬ ಭಾವನೆ ಇರಬೇಕ ಎಂದು ನಿರ್ದೇಶಕ ನಾಗಶೇಖರ್ ಅವಲತ್ತುಕೊಂಡಿದ್ದಾರೆ.
“ರಚಿತಾ ರಾಮ್ ಅವರು ನಮ್ಮ ಸಿನಿಮಾ ಪ್ರಮೋಷನ್‌ಗೆ ಬಂದಿಲ್ಲ. ಈ ಹಿಂದೆಯೂ ಇದೇ ವಿಚಾರವಾಗಿ ಮನವಿ ಮಾಡಿದ್ದೆವು. ಆ ಮನವಿಗೂ ರಚಿತಾ ರಾಮ್ ಪುರಸ್ಕರಿಸಲಿಲ್ಲ. ಕಲಾವಿದರ ಸಂಘದ ಕಾರ್ಯದರ್ಶಿ ರಾಕ್‌ಲೈನ್ ವೆಂಕಟೇಶ್ ಅವರಿಗೂ ಈ ವಿಚಾರ ತಿಳಿಸಲಾಗಿತ್ತು. ಅವರು ಮನವೊಲಿಸುವ ಪ್ರಯತ್ನ ಮಾಡಿದರು ಆದರೆ ಫಲ ನೀಡಲಿಲ್ಲ.
ಹಾಗೆಯೇ ನಿರ್ಮಾಪಕ ಸೂರಪ್ಪ ಬಾಬು ಸಹ ಕರೆ ಮಾಡಿದ್ದರು. ನಾವೂ ಸಾಕಷ್ಟು ಬಾರಿ ರಚಿತಾ ಮ್ಯಾನೇಜರ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದೆವು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಈವರೆಗೂ ಅಸಹಕಾರ ತೋರುತ್ತಾ ಬಂದಿರುವ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ನಿರ್ಮಾಪಕ ಛಲವಾದಿ ಕುಮಾರ್ ಆಗ್ರಹಿಸಿದ್ದಾರೆ.