ಸೈನಿಕನ ಕಥೆಗೆ ಬಣ್ಣ ಹಚ್ಚಿದ 'ಆಕ್ಷನ್ ಕಿಂಗ್': ದೇಶಪ್ರೇಮದ ಕಿಚ್ಚು ಹಚ್ಚಲು ಅಯೋಧ್ಯೆಯಿಂದ ಬರ್ತಿದ್ದಾರೆ ಅರ್ಜುನ್ ಸರ್ಜಾ..!
ಪ್ರೆಸಿಡೆನ್ಷಿಯಲ್ ಮೂವೀಸ್ ಇಂಟರ್‌ನ್ಯಾಷನಲ್ ಸಂಸ್ಥೆಯ ಮೂರನೇ ನಿರ್ಮಾಣದ ಚಿತ್ರ ಇದಾಗಿದ್ದು, ರಾಷ್ಟ್ರಪ್ರೇಮದ ಹಿನ್ನೆಲೆಯೊಂದಿಗೆ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗಲಿದೆ.
ನಟ ಹಾಗೂ ನಿರ್ದೇಶಕ ಅರ್ಜುನ್ ಸರ್ಜಾ ಅವರು ದೇಶಭಕ್ತಿಯ ಕಥಾಹಂದರ ಹೊಂದಿರುವ ಬಹುಭಾಷಾ ಸಿನಿಮಾವೊಂದಕ್ಕೆ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಅಭಿನಯಿಸಲಿದ್ದಾರೆ.
ಪ್ರೆಸಿಡೆನ್ಷಿಯಲ್ ಮೂವೀಸ್ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಡಿ ಅನೂಪ್ ಮೋಹನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 2026ರ ನವೆಂಬರ್ 27ರಂದು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಿನಿಮಾದ ಶೀರ್ಷಿಕೆಯನ್ನೂ ಅನಾವರಣಗೊಳಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ.
ಪ್ರೆಸಿಡೆನ್ಷಿಯಲ್ ಮೂವೀಸ್ ಇಂಟರ್‌ನ್ಯಾಷನಲ್ ಸಂಸ್ಥೆಯ ಮೂರನೇ ನಿರ್ಮಾಣದ ಚಿತ್ರ ಇದಾಗಿದ್ದು, ರಾಷ್ಟ್ರಪ್ರೇಮದ ಹಿನ್ನೆಲೆಯೊಂದಿಗೆ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗಲಿದೆ.
ಬಾಲಿವುಡ್ ಸೇರಿದಂತೆ ದೇಶದ ವಿವಿಧ ಭಾಷೆಗಳ ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರು ಈ ಸಿನಿಮಾದಲ್ಲಿ ಕೈಜೋಡಿಸುವ ನಿರೀಕ್ಷೆಯಿದೆ. ಚಿತ್ರದ ಉಳಿದ ತಾರಾಗಣ ಮತ್ತು ತಾಂತ್ರಿಕ ತಂಡದ ವಿವರಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಹಲವು ಭಾರತೀಯ ಭಾಷೆಗಳ ಚಿತ್ರಗಳಲ್ಲಿ ನಟನಾಗಿ ಮತ್ತು ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಅರ್ಜುನ್ ಸರ್ಜಾ ಈ ಸಿನಿಮಾದ ಸಾರಥ್ಯ ವಹಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಳ್ಳಲಿದ್ದಾರೆ. ನಿವೃತ್ತ ಸೇನಾಧಿಕಾರಿ ಮೇಜರ್ ವಿಜಯ್ ಭಾರ್ಗವನ್ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಜೋಸ್ ಎಂ. ಥಾಮಸ್ ರಾಯ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಧೈರ್ಯ, ತ್ಯಾಗ, ಕರ್ತವ್ಯ ಮತ್ತು ದೇಶಭಕ್ತಿಯಂತಹ ಮೌಲ್ಯಗಳನ್ನು ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾ ರೂಪುಗೊಳ್ಳಲಿದೆ ಎನ್ನಲಾಗಿದೆ. ರಾಷ್ಟ್ರದ ಶೌರ್ಯ ಮತ್ತು ಸ್ಫೂರ್ತಿಯನ್ನು ಪ್ರತಿಬಿಂಬಿಸುವ ಕಥೆಯನ್ನು ಭಾವನಾತ್ಮಕ ನಿರೂಪಣೆಯೊಂದಿಗೆ ಅದ್ಧೂರಿ ದೃಶ್ಯ ವೈಭವದಲ್ಲಿ ಪ್ರೇಕ್ಷಕರ ಮುಂದಿಡುವುದು ಚಿತ್ರತಂಡದ ಉದ್ದೇಶವಾಗಿದೆ.
ಅಯೋಧ್ಯೆಯಲ್ಲಿ ನಡೆಯಲಿರುವ ಮುಹೂರ್ತ ಸಮಾರಂಭಕ್ಕೆ ಚಿತ್ರರಂಗದ ಗಣ್ಯರು, ಗಣ್ಯ ಅತಿಥಿಗಳು ಹಾಗೂ ವಿಶೇಷ ಆಹ್ವಾನಿತರು ಭಾಗವಹಿಸುವ ನಿರೀಕ್ಷೆಯಿದೆ. ಪವಿತ್ರ ನಗರಿಯಿಂದಲೇ ಮಹತ್ವದ ಸಿನಿಮಾ ಪ್ರಯಾಣ ಆರಂಭವಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಅರ್ಜುನ್ ಸರ್ಜಾ ಅವರು ಕೊನೆಯದಾಗಿ ಸುಭಾಷ್ ಕೆ. ರಾಜ್ ನಿರ್ದೇಶನದ 'ಬ್ಲಾಸ್ಟ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಅಭಿರಾಮಿ ಮತ್ತು ಪ್ರೀತಿ ಮುಖುಂದನ್ ಕೂಡ ನಟಿಸಿದ್ದರು. ಸದ್ಯ ಅವರ ಕೈಯಲ್ಲಿ 'ಪೊಲಿಮೇರಾ 3' ಚಿತ್ರವಿದ್ದು, ಚಿತ್ರೀಕರಣ ಪ್ರಗತಿಯಲ್ಲಿದೆ.