ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13ರ ಆಟಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ದಸರಾ ಹಬ್ಬದ ವಿಶೇಷ ಸಂಚಿಕೆಯಲ್ಲಿ ಇಬ್ಬರು ಜನಪ್ರಿಯ ಮಹಿಳಾ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಕಾಲಿಟ್ಟಿದ್ದು, ವೀಕ್ಷಕರಲ್ಲಿ ಕುತೂಹಲ ದುಪ್ಪಟ್ಟಾಗಿದೆ.
ದೊಡ್ಮನೆಗೆ ಕಾಮನ್ ಮ್ಯಾನ್ ಕರೆತರಲು ನಡೆಸಲಾಗಿದ್ದ 'ಅಗ್ನಿಪರೀಕ್ಷೆ'ಯಲ್ಲಿ ಲಕ್ಷ್ಮಿ ಗೌಡ ಮತ್ತು ಲಾವಣ್ಯ ಕುಮಾರಿ ಭಾಗವಹಿಸಿ, ಹೆಸರು ಗಳಿಸಿದ್ದರು.
'ಅಗ್ನಿಪರೀಕ್ಷೆ'ಯಲ್ಲಿ ತಮ್ಮ ಹಳ್ಳಿ ಸೊಗಡಿನ ಮುಗ್ಧ ಮಾತುಗಳು ಹಾಗೂ ಪಂಚ್ ಡೈಲಾಗ್‌ಗಳ ಮೂಲಕವೇ ಕುಮಾರಿ ಅವರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರು. ಅನಾರೋಗ್ಯದ ಕಾರಣದಿಂದ ಆ ಶೋನಿಂದ ಅರ್ಧಕ್ಕೆ ಹೊರನಡೆದಿದ್ದರು.
ಆದರೆ, ಅವರ ಜನಪ್ರಿಯತೆಯನ್ನು ಗುರುತಿಸಿ ಈಗ ನೇರವಾಗಿ ಬಿಗ್ ಬಾಸ್ ಮುಖ್ಯ ಮನೆಗೆ ಕಳುಹಿಸಲಾಗಿದೆ. ತಮ್ಮ ನಿಷ್ಕಲ್ಮಶ ಮಾತುಗಳಿಂದಲೇ ಎಲ್ಲರನ್ನೂ ನಗಿಸಿದ ಕುಮಾರಿ, ಬಿಗ್ ಬಾಸ್ ಮನೆಯಲ್ಲೂ ಜನರ ಮನಸ್ಸು ಗೆಲ್ಲುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಈ ನಡುವೆ ಅಗ್ನಿಪರೀಕ್ಷೆಯಲ್ಲಿ ಟಾಪ್ 10 ಸ್ಪರ್ಧಿಗಳಲ್ಲಿ ಒಬ್ಬರಾಗಿ ಕಠಿಣ ಸವಾಲುಗಳನ್ನು ಎದುರಿಸಿದ್ದ ಲಕ್ಷ್ಮಿ ಗೌಡ ಅವರು ಕೂಡ ಕುಮಾರಿ ಅವರೊಂದಿಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶಿಸಿದ್ದಾರೆ. ಇವರ ಸ್ಟ್ರಾಂಗ್ ಅಟಿಟ್ಯೂಡ್ ಬಿಗ್ ಬಾಸ್ ಮನೆಯ ಇತರೆ ಸ್ಪರ್ಧಿಗಳಿಗೆ ಪೈಪೋಟಿ ನೀಡುವ ಸಾಧ್ಯತೆಗಳಿವೆ.
ದೊಡ್ಮನೆಗೆ ಈ ಇಬ್ಬರ ಅದ್ದೂರಿ ಎಂಟ್ರಿಯಾಗಿದ್ದು, ಇವರ ಆಗಮನದಿಂದ ಮನೆಯೊಳಗೆ ಹೊಸ ಸಂಚಲನ ಮೂಡಿದೆ. ಈಗಾಗಲೇ ಹಲವು ವಿವಾದ ಹಾಗೂ ಜಗಳಗಳಿಂದ ಕಾವೇರಿರುವ ಬಿಗ್ ಬಾಸ್ ಮನೆಗೆ ಈ ಇಬ್ಬರು ಹೊಸ ಸ್ಪರ್ಧಿಗಳು ಎಂಟ್ರಿ ಕೊಟ್ಟಿರುವುದು ಆಟಕ್ಕೆ ಯಾವ ರೀತಿಯ ಬದಲಾವಣೆಗಳು ಬರಲಿವೆ ಎಂಬುದನ್ನು ಕಾದು ನೋಡಬೇಕಿದೆ.