ರಾಕ್ಷಸಿ ಸಿನೆಮಾ ವಿಮರ್ಶೆ 
ಸಿನಿಮಾ ವಿಮರ್ಶೆ

ಭಯಕ್ಕಿಂತಲೂ ಪ್ರೀತಿ, ಅನುಭೂತಿ ಮೂಡಿಸುವ ವಿಚಾರಪ್ರಿಯ ದೆವ್ವ

ದೆವ್ವಕ್ಕೂ ವಿಚಾರ, ವಿವೇಕ ಇದ್ದು, ಅದು ಪ್ರೀತಿಯ ಉನ್ಮಾದಲ್ಲಿದ್ದರೆ ಅದರೊಟ್ಟಿಗೆ ನೀವು ಹೇಗೆ ವ್ಯವಹರಿಸುವಿರಿ? ತಮಿಳು ಚಿತ್ರರಂಗದಲ್ಲಿ ವಿಮರ್ಶಕರ ಹಾಗೂ ಅಪಾರ ಜನ ಮೆಚ್ಚುಗೆ ಪಡೆದ...

ದೆವ್ವಕ್ಕೂ ವಿಚಾರ, ವಿವೇಕ ಇದ್ದು, ಅದು ಪ್ರೀತಿಯ ಉನ್ಮಾದಲ್ಲಿದ್ದರೆ ಅದರೊಟ್ಟಿಗೆ ನೀವು ಹೇಗೆ ವ್ಯವಹರಿಸುವಿರಿ? ತಮಿಳು ಚಿತ್ರರಂಗದಲ್ಲಿ ವಿಮರ್ಶಕರ ಹಾಗೂ ಅಪಾರ ಜನ ಮೆಚ್ಚುಗೆ ಪಡೆದ ನಿರ್ದೇಶಕರಲ್ಲೊಬ್ಬರಾದ ಮಿಸ್ಕಿನ್ ಅವರ 'ಪಿಸಾಸು' ಸಿನೆಮಾವನ್ನು ಕನ್ನಡಕ್ಕೆ ತಂದಿದ್ದಾರೆ 'ಆಶ್ರಫ್'. ದೆವ್ವದ ಚಿತ್ರವಾಗಿದ್ದು ಹಾರರ್ ಸಿನೆಮಾ ಎನ್ನಲು ಮನಸಾಗಲಾರದಂತಹ ಸಿನೆಮಾ 'ರಾಕ್ಷಸಿ' ಪ್ರೇಕ್ಷನಿಗೆ ಹೇಗೆ ಕಾಡುತ್ತದೆ?

ಸಿದ್ಧಾರ್ಥ (ನವರಸನ್) ಪಿಟೀಲುವಾದಕ. ಹೃದಯವಂತ. ಇವನ ಹೃದಯವಂತಿಕೆಯನ್ನು ದೂರದಿಂದಲೇ ಮೆಚ್ಚಿ ಭವಾನಿ (ಸಿಂಧು ಲೋಕನಾಥ್) ಅವನಿಗೆ ತಿಳಿಸದೆ ಪ್ರೀತಿಸತೊಡಗುತ್ತಾಳೆ. ಒಮ್ಮೆ ಸಿದ್ಧಾರ್ಥನನ್ನು ಹಿಂಬಾಲಿಸಿಕೊಂಡು ದ್ವಿಚಕ್ರವಾಹನದಲ್ಲಿ ತೆರಳುವಾಗ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಾಳೆ. ಇವಳನ್ನು ಆಸ್ಪತ್ರೆಗೆ ಸೇರಿಸುವ ಸಿದ್ಧಾರ್ಥ, ಅವಳು ಕೊನೆಯುಸಿರೆಳೆಯುವುದನ್ನು ಕಣ್ಣಾರೆ ಕಂಡು ಅವಳ ಪಾದರಕ್ಷೆಯೊಂದನ್ನು ಮನೆಯಲ್ಲಿ ಕಾದಿಟ್ಟುಕೊಳ್ಳುತ್ತಾನೆ. ದೆವ್ವವಾಗಿ ಸಿದ್ಧಾರ್ಥನ ಮನೆ ಹೊಕ್ಕುವ ಭವಾನಿ ಹೇಗೆ ಕಾಡುತ್ತಾಳೆ? ಭವಾನಿಗೆ ಅಪಘಾತ ಮಾಡಿದವರು ಯಾರು? ತಂದೆ ಮಗಳ ಸಾವನ್ನು ಹೇಗೆ ಸ್ವೀಕರಿಸುತ್ತಾನೆ? ಹೀಗೆ ಕಥೆ ಮುಂದುವರೆಯುತ್ತಾ ಹೋಗುತ್ತದೆ.

ಸಾಮಾನ್ಯವಾಗಿ ಭಯವನ್ನೇ ಬಂಡವಾಳವಾಗಿಸಿಕೊಳ್ಳುವ ಹಾರರ್ ಸಿನೆಮಾಗಳಿಗಿಂತ ವಿಭಿನ್ನತೆಯನ್ನು ಮೆರೆಯುವ ಕಥೆಗಾರ ಮಿಸ್ಕಿನ್ ಭಯ, ಪ್ರೀತಿ, ತಿರಸ್ಕಾರ, ಏಕಾಂಗಿತನ, ಹಾಸ್ಯ ಮುಂತಾದ ಉಪ ಪಠ್ಯಗಳ ಕಡೆಗೆ ಗಮನ ಹರಿಸಿರುವುದು ಪ್ರೇಕ್ಷಕನನ್ನು ಸೆಳೆಯುತ್ತದೆ. ನಾಯಕ ನಟ ದೊಡ್ಡ ಸ್ಟುಡಿಯೋಗಳಲ್ಲಿ ಪಿಟೀಲು ಬಾರಿಸಿದರು, ಭಿಕ್ಷುಕರ ಹಾಡುವಲ್ಲಿ ನುಡಿಸಲು ಇವನಿಗೆ ಹೆಚ್ಚು ಪ್ರಿಯ. ಅಪಾರ ಸಿರಿವಂತನಾದ ಇವನಿಗೆ ನಿರ್ಗತಿಕರಿಗೆ ಊಟ ನೀಡುವುದು ನೆಚ್ಚಿನ ಕಾರ್ಯ. ಹೀಗೆ ಹಿರೋವನ್ನು ಬಹಳ ರೊಮ್ಯಾಂಟಿಸೈಸ್ ಮಾಡಿದ್ದರೂ ಅದು ಮಾನವೀಯತೆಯ ಬಗೆಗಿನ ಅನುಕಂಪದ ಧೋರಣೆಯಿಂದಾಗಿಯೇನೋ ಎಲ್ಲೂ ಎಲ್ಲೆಯ ಮಿತಿಮೀರಿ ಹಿಂಸೆ ಎಂದೆನಿಸುವುದಿಲ್ಲ. ಹಾರರ್ ಸಿನೆಮಾಗಳೆಂದರೆ ತೀವ್ರ ವೇಗವಾಗಿ ಮುಂದುವರೆಯಬೇಕು, ಬೆಚ್ಚಿ ಬೀಳಿಸುವ ಶಬ್ದಗಳಿಂದ ತುಂಬಿರಬೇಕು ಎಂಬ ಕಲ್ಪನೆಗೆ ಬ್ರೇಕ್ ಹಾಕಿರುವ ಈ ಸಿನೆಮಾದಲ್ಲಿ ಬಹಳಷ್ಟು ನಿಧಾನವಾಗಿಯೇ ಸಾಗುವ ಕಥೆಯಲ್ಲಿ ಹಲವಾರು ಪಾತ್ರಗಳು ಮನಸ್ಸಿನಲ್ಲಿ ಅಚ್ಚುಳಿಯುತ್ತವೆ. ಆದರೂ ಕೆಲವೊಂದು ದೃಶ್ಯಗಳಿಗೆ ಅಗತ್ಯವಿದ್ದ ವೇಗಕ್ಕೆ ತಡೆ ಹಾಕಿರುವುದು ಅನವಶ್ಯಕ ಎಂದೆನಿಸುತ್ತದೆ. ಅಪಘಾತವಾದಾಗ ಆಸ್ಪತ್ರೆಗೆ ಕೊಂಡೊಯ್ಯುವ ದೃಶ್ಯಗಳು, ಅಲ್ಲಿ ಪರಿಚಾರಕರು, ವೈದ್ಯರು ತೋರಿಸಬೇಕಾದ ತೀವ್ರತೆಯ ಸ್ಪಂದನವನ್ನೂ ಸಮಾಧಾನವಾಗಿ ತೋರಿಸಿರುವುದು ಕಿರಿಕಿರಿ ಮಾಡುತ್ತದೆ. ದೆವ್ವ ಸೃಷ್ಟಿಸುವ ಗೊಂದಲಗಳು ಕೆಲವೊಮ್ಮೆ ಹಾಸ್ಯಮಯವಾಗಿಯೂ, ಇನ್ನೂ ಕೆಲವೊಮ್ಮೆ ನೈತಿಕ ಪಾಠದಂತೆಯೂ ಅಲ್ಲಲ್ಲಿ ಕಚಗುಳಿಯಿಡುತ್ತ ಮುಂದೆ ಸಾಗುವ ಕಥೆ ದ್ವಿತೀಯಾರ್ಧಕ್ಕೆ ಪತ್ತೇದಾರಿ ಜಾಡನ್ನು ಹಿಡಿಯುತ್ತದೆ. ಆ ಪತ್ತೇದಾರಿ, ದೆವ್ವವನ್ನು ಪತ್ತೆ ಹಚ್ಚಲಲ್ಲ, ಬದಲಾಗಿ ಹುಡುಗಿ ಸತ್ತು ದೆವ್ವವಾಗಲು ಕಾರಣವಾದ ಅಪಘಾತ ಮತ್ತು ಆ ಅಪಘಾತ ಮಾಡಿದವನನ್ನು ಪತ್ತೆ ಹಚ್ಚಲು. ಆಗ ಕಥೆಗೆ ಸಿಗುವ ತಿರುವು ಮತ್ತು ನಂತರದ ಘಟನೆಗಳು ಕೂಡ ಬೇಸರ ಮೂಡದಂತೆ ಕಾಯ್ದುಕೊಳ್ಳುತ್ತವೆ. ನಾಯಕ ನಟನಾಗಿ ಅಭಿನಯಿಸಿರುವ ನಿರ್ಮಾಪಕ ನವರಸನ್ ತಮ್ಮ ಚೊಚ್ಚಲ ಸಿನೆಮಾದಲ್ಲಿ ಗಮನೀಯ ಎನ್ನುವ ನಟನೆಯನ್ನೇನೂ ನೀಡಿಲ್ಲ. ಈ ಪಾತ್ರದ ನಟನೆ ಇನ್ನೂ  ಪರಿಣಾಮಕಾರಿಯಾಗಿದ್ದರೆ ಸಿನೆಮಾದ ಆಸ್ವಾದ ಇನ್ನೂ ಹೆಚ್ಚುತ್ತಿತ್ತು. ಸಿಂಧು ಲೋಕನಾಥ್, ಜಿ ಕೆ ರೆಡ್ಡಿ ಅಭಿನಯ ಚೆನ್ನಾಗಿದೆ. ಒಂದು ಹಾಡು ಮತ್ತು ಹಿನ್ನಲೆಯಲ್ಲಿ ಮೂಡುವ ಸಂಗೀತ ಪೂರಕವಾಗಿದ್ದು ಸಿನೆಮಾಗೆ ಬಲ ತಂದಿದೆ. ಹಾಗೆಯೇ ಛಾಯಾಗ್ರಹಣ ಮತ್ತು ಸಂಕಲನ ಪರಿಣಾಮಕಾರಿಯಾಗಿ ಮೂಡಿ ಬಂದಿವೆ. ತಮಿಳಿನಲ್ಲಿರುವ ಸಿನೆಮಾ ಕಥೆಗೆ, ನಿರೂಪಣೆಗೆ ಯಾವುದೇ ಬದಲಾವಣೆ ತರದೇ, ಅದನ್ನೇ ಕನ್ನಡದಲ್ಲಿ ಮರುಕಳಿಸುವುದರಲ್ಲಿ ನಿರ್ದೇಶಕ ಆಶ್ರಫ್ ಅವರ ಉತ್ತಮ ಪ್ರಯತ್ನ ಇದೆ.

ಸಾಮಾನ್ಯವಾಗಿ ದೆವ್ವ-ಭೂತದ ಸಿನೆಮಾಗಳಲ್ಲಿ ದೆವ್ವವು ಒಂದು ಪಾತ್ರವಾಗಿ ಮೂಡುವುದು ವಿರಳ. ಪ್ರೇಕ್ಷಕನಿಗೆ 'ಭಯ' ಮೂಡಿಸುವುದನ್ನೇ ಪ್ರಧಾನವಾಗಿಟ್ಟುಕೊಂಡು ಜೋರಾದ ಶಬ್ದ, ಕಪ್ಪು ಕೋಣೆ ಇಂತಹ ದೃಶ್ಯಗಳ ನಡುವೆಯೇ ಗಿರಕಿ ಹೊಡೆದು, ಕೊನೆಗೆ ಅದು ಭೂತದ ಚೇಷ್ಟೆಯೋ ಅಥವಾ ಮತ್ತಿನ್ನೇನೋ ಎಂಬುದರ ಪತ್ತೆದಾರಿಯಾಗಷ್ಟೇ ಹಾರರ್ ಸಿನೆಮಾಗಳು ಉಳಿದುಬಿಡುತ್ತದೆ. ಆದರೆ ಈ ಸಿನೆಮಾದಲ್ಲಿ ನಮಗೆ ಭೂತ ಇದೆ ಎಂದು ಮೊದಲೇ ಎಶ್ಟಾಬ್ಲಿಶ್ ಆಗಿ, ಭೂತವೇ ಪ್ರಧಾನ ಪಾತ್ರವಾಗಿಬಿಡುತ್ತದೆ. ಪ್ರೇಕ್ಷಕ ನಟರೊಂದಿಗೆ ತೋರಬಹುದಾದ ಅನುಭೂತಿಯನ್ನು ಪ್ರೇತದೊಂದಿಗೂ ತೋರುತ್ತಾನೆ. ಮನುಷ್ಯ ಮನುಷ್ಯರ ನಡುವೆ ಪ್ರೀತಿ ವಿರಳವಾಗುತ್ತಾ ಬಂದಿರುವ ಕಾಲದಲ್ಲಿ ದೆವ್ವ ಪ್ರೀತಿ ಪಾಠವನ್ನು ಹೇಳುವುದು ಮಾರ್ಮಿಕವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BJP, RSS ನಡುವೆ ಭಿನ್ನಾಭಿಪ್ರಾಯ ಇರಬಹುದು, ಆದರೆ ಸಂಘರ್ಷ ಇಲ್ಲ: ಮೋಹನ್ ಭಾಗವತ್

Nation survey: ಇಂದೇ ಲೋಕಸಭೆ ಚುನಾವಣೆ ನಡೆದರೆ NDA ಎಷ್ಟು ಸ್ಥಾನ ಗೆಲ್ಲುತ್ತೆ ಗೊತ್ತಾ?

SCO summit: ಟ್ರಂಪ್ ಗೆ ಸೆಡ್ಡು; ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

"ಭಾರತೀಯರು ಬಗ್ಗದೇ ಹೋದರೆ...": ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾನೇರ ಬೆದರಿಕೆ!

ಯಾವುದೇ ವ್ಯಕ್ತಿ 75 ವರ್ಷಗಳಿಗೆ ನಿವೃತ್ತಿಯಾಗಬೇಕು ಎಂದು ಎಂದಿಗೂ ಹೇಳಿಲ್ಲ: RSS ಮುಖ್ಯಸ್ಥ Mohan bhagwat ಸ್ಪಷ್ಟನೆ

SCROLL FOR NEXT