ಮತ್ತೊಂದು ಮತಸಮರಕ್ಕೆ ಸಾಕ್ಷಿಯಾಗುತ್ತಿರುವ ಈ ಸಂದರ್ಭದಲ್ಲಿ ಮುಖ್ಯವಾಗಿ ಕಾಡುತ್ತಿರುವ ಒಂದು ಪ್ರಶ್ನೆಯೆಂದರೆ ಅಷ್ಟಕ್ಕೂ ರಾಜಕೀಯ ಅಂದ್ರೆ ಏನು? What is politics? ಚುನಾವಣೆಯಲ್ಲಿ ನಿಂತಿರುವ ಒಬ್ಬೊಬ್ಬ ಅಭ್ಯರ್ಥಿಯನ್ನೂ ಕೇಳಬೇಕೆನಿಸುತ್ತಿದೆ. ನೀವು ರಾಜಕಾರಣ ಅಂದ್ರೆ ಏನಂತ ತಿಳಿದುಕೊಂಡಿದ್ದೀರಾ? ಟಿಕೆಟ್ ಗಿಟ್ಟಿಸಲು ಈ ಪರಿ ಹರಸಾಹಸ ಮಾಡುತ್ತಿದ್ದೀರಲ್ಲ, ನೀವು ಗೆದ್ದು ಬಂದು ಏನು ಮಾಡಬೇಕು ಅಂತ ಅಂದುಕೊಂಡಿದ್ದೀರಾ? ನಿಮ್ಮ ದೃಷ್ಟಿಯಲ್ಲಿ ರಾಜಕಾರಣ ಅಂದ್ರೆ ಏನು? 224 ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಎಲ್ಲ ಅಭ್ಯರ್ಥಿಗಳ ಅಭಿಪ್ರಾಯ ಹೇಗಿದ್ದೀರಬಹುದು, ನಿಜಕ್ಕೂ ಕುತೂಹಲಕರ ಅಂಶವೇ.
ಕಳೆದ ಅರವತ್ತಾರು ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿರುವ, ಎರಡು ಬಾರಿ ಪ್ರಧಾನಿ, ಒಂದು ಸಲ ರಕ್ಷಣೆ, ಹಣಕಾಸು, ಸಾರಿಗೆ, ವಿದೇಶಾಂಗ ವ್ಯವಹಾರ ಸಚಿವರಾಗಿದ್ದ, ಹನ್ನೆರಡು ಸಚಿವ ಸಂಪುಟಗಳಲ್ಲಿ ಮಂತ್ರಿಯಾಗಿದ್ದ, ಈಗ ರಾಷ್ಟ್ರಾಧ್ಯಕ್ಷರಾಗಿರುವ ತೊಂಬತ್ತು ವರ್ಷದ ಇಸ್ರೇಲ್‌ನ ಶಿಮೊನ್ ಪೆರೆಸ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಬಂದಾಗ ಯಾರೋ ಕೇಳಿದರು- What is politics? ಅದಕ್ಕೆ ಅವರು ಕೊಟ್ಟ ಉತ್ತರವನ್ನು ಎಲ್ಲಾ ರಾಜಕಾರಣಿಗಳಷ್ಟೇ ಅಲ್ಲ, ಪ್ರತಿಯೊಬ್ಬ ಮತದಾರರೂ ಅರಿತಿರಬೇಕು. ಕಾರಣ ರಾಜಕಾರಣ ಅಂದ್ರೆ ಅದು ರಾಜಕಾರಣಿಗಳಷ್ಟೇ ಅಲ್ಲ, ಪ್ರಜೆಗಳೂ ಅಷ್ಟೇ ಮುಖ್ಯ.
ಶಿಮೊನ್ ಪೆರೆಸ್‌ನಂಥ ಅನುಭವಿ ಹಾಗೂ ನುರಿತ ನಾಯಕನಿಗೆ 'ರಾಜಕಾರಣ ಅಂದ್ರೆ ಏನು?' ಅಂತ ಕೇಳಿದರೆ ಏನೆಂದು ಉತ್ತರಿಸಬಹುದು ಎಂಬ ಬಗ್ಗೆ ನನಗೂ ಸಹಜ ಆಸಕ್ತಿಯುಂಟಾಯಿತು. ಎರಡು ವರ್ಷಗಳ ಹಿಂದೆ ನಮ್ಮ ಎಸ್.ಎಂ.ಕೃಷ್ಣ ಅವರು ವಿದೇಶಾಂಗ ಸಚಿವರಾಗಿದ್ದಾಗ ಅವರೊಂದಿಗೆ ಇಸ್ರೇಲ್‌ಗೆ ಹೋದಾಗ ಶಿಮೊನ್ ಪೆರೆಸ್ ಅವರನ್ನು ಹತ್ತಿರದಿಂದ ಕಾಣುವ ಅವಕಾಶ ಸಿಕ್ಕಿತು.
ಮತ್ತೊಂದು ಚುನಾವಣೆಯನ್ನು ಎದುರಿಗಿಟ್ಟುಕೊಂಡು ಕುಕ್ಕುರಗಾಲಿನಲ್ಲಿ ಕುಳಿತಿರುವ ನಮಗೆ 'ರಾಜಕಾರಣ ಅಂದ್ರೆ ಏನು?' ಎಂಬ ಪ್ರಶ್ನೆ ಕಾಡದಿದ್ದರೆ, ಅದಕ್ಕೆ ಉತ್ತರ ಸಿಗದಿದ್ದರೆ, ನಮ್ಮ ಮತದ ಮಹತ್ವ ನಮಗೇ ಅರ್ಥವಾಗದೇ ಹೋದೀತು. ಹೀಗಾಗಿ ಶಿಮೊನ್ ಪೆರೆಸ್ ಇತ್ತೀಚೆಗೆ ಬರೆದ ಪುಟ್ಟ ಬರಹವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
------
ರಾಜಕೀಯ ಅಥವಾ ರಾಜಕಾರಣ ಎಂದರೇನು? ಒಂದು ವೇಳೆ ರಾಜಕಾರಣವೆಂಬುದು ನಿಷ್ಕ್ರಿಯಗೊಂಡರೆ ಏನಾಗುತ್ತದೆ?
ಈ ಪ್ರಶ್ನೆಗಳಿಗೆ ಹೀಗೆ ಉತ್ತರಿಸಬಹುದು: ಜನಸಾಮಾನ್ಯರ ಬದುಕನ್ನು ನೆಮ್ಮದಿಯ ಹಳಿಗಳ ಮೇಲೆ ಸಾಗುವಂತೆ ಮಾಡುವ ಜವಾಬ್ದಾರಿ ಹೊತ್ತುಕೊಂಡ ಒಂದು ವ್ಯವಸ್ಥೆಗೆ ರಾಜಕೀಯ ಅಥವಾ ರಾಜಕಾರಣ ಎನ್ನುತ್ತಾರೆ. ಅದು ನಿಷ್ಕ್ರಿಯಗೊಂಡರೆ ಬದುಕಿನ ಎಲ್ಲ ಹಂತದಲ್ಲಿ ಅಸ್ಥಿರತೆ ಉಂಟಾಗುತ್ತದೆ. ತಮ್ಮ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಜನ ಹರತಾಳ ಆರಂಭಿಸುತ್ತಾರೆ. ಇದರ ಮುಂದುವರಿದ ಭಾಗವೆಂಬಂತೆ ಪ್ರತಿಭಟನೆಗಳಾಗುತ್ತವೆ. ರಕ್ತಪಾತದಂಥ ದುರ್ಘಟನೆಗಳು ನಡೆಯುತ್ತವೆ. ಹಣ, ಭೂಮಿ ಹಾಗೂ ಇತರೆ ಅಗತ್ಯ ವಸ್ತುಗಳನ್ನು ತಮ್ಮದಾಗಿಸಿಕೊಳ್ಳುವ ಉದ್ದೇಶದಿಂದ ಜನರು ಶಸ್ತ್ರಾಸ್ತ್ರ ಹಿಡಿದು ಹೋರಾಟಕ್ಕೆ ನಿಲ್ಲುತ್ತಾರೆ. ಇದಿಷ್ಟು, ಒಂದು ಸೀಮಿತ ಪ್ರದೇಶದಲ್ಲಿ ರಾಜಕಾರಣವೆಂಬುದು ನಿಷ್ಕ್ರಿಯಗೊಂಡರೆ ಆಗಬಹುದಾದ ಅಡ್ಡ ಪರಿಣಾಮ.
ಎರಡು ರಾಷ್ಟ್ರಗಳ ಮಧ್ಯೆ ರಾಜಕಾರಣವೆಂಬುದು ನಿಷ್ಕ್ರಿಯಗೊಂಡರೆ ವಿನಾಶವೇ ಸಂಭವಿಸಬಹುದು. ಎರಡು ರಾಷ್ಟ್ರಗಳ ನಡುವಣ ರಾಜಕೀಯ ಸಂಬಂಧ ಬಿಗಡಾಯಿಸಲು ಅವು ಪಾಲಿಸಿಕೊಂಡು ಬಂದ ವಿಭಿನ್ನ ಧಾರ್ಮಿಕ ನೀತಿ, ವಿಭಿನ್ನ ಜೀವನ ಶೈಲಿ, ಮತ್ತೊಂದು ದೇಶದ ಜನರಿಂದ ತಮ್ಮ ಭವಿಷ್ಯಕ್ಕೆ ಕೊಡಲಿಪೆಟ್ಟು ಬೀಳುತ್ತದೆ ಎಂಬ ಆತಂಕ, ಭಿನ್ನ ಧರ್ಮ... ಹೀಗೆ ಏನೇನೋ ಕಾರಣಗಳಿರಬಹುದು. ಇಂಥ ಸಂದರ್ಭದಲ್ಲಿ ರಾಜಕಾರಣದ ಪಡಸಾಲೆಯಲ್ಲಿರುವವರು ಯಾರಿಗೂ ತೊಂದರೆ ಉಂಟು ಮಾಡದಂಥ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೀಗೆ ಮಾಡದೇ ಹೋದರೆ, ಎರಡು ರಾಷ್ಟ್ರಗಳ ನಡುವಣ ರಾಜತಾಂತ್ರಿಕ ಸಂಬಂಧ ಹದಗೆಟ್ಟು ಕ್ಷಿಪಣಿ ದಾಳಿಯಂಥ ಘಟನೆಗಳು ನಡೆದು ಸಾವು -ನೋವು ಸಂಭವಿಸಬಹುದು. ಅಥವಾ ಯುದ್ಧವೇ ಆರಂಭವಾಗಿ ಬಿಡಬಹುದು.
ಕೆಟ್ಟ ಅಥವಾ ಸೇಡಿನ ರಾಜಕಾರಣ ಮಹಾವಿನಾಶಕ್ಕೆ ಮುನ್ನುಡಿ ಬರೆಯುತ್ತದೆ ಎಂಬುದು ಪ್ರತ್ಯಕ್ಷ ಕಂಡ ಹಲವು ಘಟನೆಗಳಿಂದ ನನ್ನ ಅರಿವಿಗೆ ಬಂದಿದೆ. ನನ್ನ ತಾಯ್ನಾಡಾದ ಇಸ್ರೇಲ್‌ನ ಸುತ್ತಲೂ ಜೋರ್ಡಾನ್, ಸಿರಿಯಾ, ಲೆಬನಾನ್, ಈಜಿಪ್ಟ್ ಮತ್ತು ಪ್ಯಾಲೆಸ್ತೀನ್ ರಾಷ್ಟ್ರಗಳಿವೆ. ನಾವು ಯಾವುದೇ ಒಂದು ರಾಜಕೀಯ ನಿಲುವು ತೆಗೆದುಕೊಳ್ಳಬೇಕಾದರೂ ನೆರೆಯ ರಾಷ್ಟ್ರಗಳಿಗೆ ಅಸಮಾಧಾನವಾಗದಂಥ ಹೆಜ್ಜೆಯನ್ನೇ ಇಡಬೇಕು. ಏಕೆಂದರೆ, ನಾವು ಕೈಗೊಳ್ಳುವ ಒಂದು ದುಡುಕಿನ ನಿರ್ಧಾರ ನೆರೆಯ ರಾಷ್ಟ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದರೆ ಅದೇ ಕಾರಣಕ್ಕೆ ಯುದ್ಧ ಶುರುವಾಗಬಹುದು. ಉಹುಂ, ಹಾಗಾಗಬಾರದು. ರಾಜಕಾರಣದಿಂದ ದೇಶ-ದೇಶಗಳ ಸಂಬಂಧ ಗಟ್ಟಿಯಾಗಬೇಕೇ ವಿನಃ ಶಿಥಿಲವಾಗಬಾರದು. ಭಿನ್ನ ಭಾಷೆ, ಸಂಸ್ಕೃತಿ, ಜೀವನ ವಿಧಾನ ಹಾಗೂ ಭಿನ್ನ ರಾಜಕೀಯ ನಿಲುವುಗಳ ಮಧ್ಯೆಯೂ ಎರಡು ರಾಷ್ಟ್ರಗಳ ಜನ ಪರಸ್ಪರರನ್ನು ಗೌರವಿಸಲು ಸಾಧ್ಯವಾಗುವಂಥ ವೇದಿಕೆಯೊಂದು ರಾಜಕಾರಣದ ಮೂಲಕ ರೂಪುಗೊಳ್ಳಬೇಕು.
ಎರಡು ರಾಷ್ಟ್ರಗಳ ಸಂಬಂಧ ಹೇಗೆ ಬೆಳೆಯಬೇಕು? ಹೇಗೆ ಗಟ್ಟಿಯಾಗಬೇಕು ಎಂಬುದಕ್ಕೆ ದಾಂಪತ್ಯದ ಉದಾಹರಣೆ ನೀಡಬಹುದು. ಎಲ್ಲರಿಗೂ ಗೊತ್ತಿರುವಂತೆ, ಮದುವೆಯಾಗುವವರೆಗೂ ಹುಡುಗನ ಬಗ್ಗೆ ಹುಡುಗಿಗೆ, ಹುಡುಗಿಯ ಬಗ್ಗೆ ಹುಡುಗನಿಗೆ ಹೆಚ್ಚೇನೂ ತಿಳಿದಿರುವುದಿಲ್ಲ. ಆದರೆ ದಿನಗಳು ಕಳೆದಂತೆಲ್ಲ ಪರಸ್ಪರರ ಶಕ್ತಿ ಹಾಗೂ ದೌರ್ಬಲ್ಯಗಳು ಅರ್ಥವಾಗುತ್ತಾ ಹೋಗುತ್ತವೆ. ಈ ಸಂದರ್ಭದಲ್ಲಿ ಸಮರಸವೇ ಜೀವನ ಎಂದು ನಂಬಿದವರು ಸಂಗಾತಿಯ ದೌರ್ಬಲ್ಯಗಳನ್ನು ಪಕ್ಕಕ್ಕಿಡುತ್ತಾರೆ. ಕೊಟ್ಟು ಪಡೆದುಕೊಳ್ಳುತ್ತಾರೆ. ಆ ಮೂಲಕ, ಬಾಳು ಎಂಬುದನ್ನು ನಂದನವನವನ್ನಾಗಿ ಮಾಡಿಕೊಳ್ಳುತ್ತಾರೆ. ಹೀಗೆ ಮಾಡದೇ ಹೋದರೆ ದಾಂಪತ್ಯವೆಂಬುದು ವಿರಸ, ಮುನಿಸು, ಹೊಡೆದಾಟ ಹಾಗೂ ಜಗಳದ ಅಖಾಡವಾಗುತ್ತದೆ. ಡೈವೋರ್ಸ್ ಎಂಬ ಬಿರುಗಾಳಿ ದಾಂಪತ್ಯದ ಹಡಗನ್ನು ಮುಳುಗಿಸಿ ಬಿಡುತ್ತದೆ.
ಎರಡು ದೇಶಗಳ ನಡುವಣ ಸಂಬಂಧದ ವಿಷಯವೂ ಹೀಗೆಯೇ. ಎರಡೂ ದೇಶಗಳ ಮುಖಂಡರು ಪರಸ್ಪರರ ದೋಷಗಳನ್ನು ಪಕ್ಕಕ್ಕಿಟ್ಟು, ಸಾಮಾನ್ಯ ಜನರ ನೆಮ್ಮದಿಯ ಬಗ್ಗೆ ಯೋಚಿಸಿದರೆ, ಉಭಯ ರಾಷ್ಟ್ರಗಳ ಮಧ್ಯೆ ಒಂದು ಮಧುರ ಬಾಂಧವ್ಯ ಸಾಧ್ಯವಾಗುತ್ತದೆ. ಆದರೆ ಎದುರಾಳಿಯ ದುರ್ಬಲ ಮನಸ್ಸು ಅಥವಾ ತಪ್ಪು ನಡೆಯನ್ನು ಕ್ಷಮಿಸುವ ಔದಾರ್ಯ ಬಹುಪಾಲು ರಾಷ್ಟ್ರದ ಮುಖಂಡರುಗಳಿಗೆ ಇಲ್ಲ ಎಂಬುದು ವಿಷಾದದ ಸಂಗತಿ.
ಯಾಕೆ ಹೀಗಾಗುತ್ತದೆ? ಶತ್ರುತ್ವದಿಂದ, ಯುದ್ಧದಿಂದ, ದ್ವೇಷ ಸಾಧನೆಯಿಂದ ವಿನಾಶಕ್ಕೆ ದಾರಿಯಾಗುತ್ತದೆಯೇ ವಿನಃ ಯಾರಿಗೂ ನಯಾಪೈಸೆಯ ಉಪಯೋಗವಾಗುವುದಿಲ್ಲ ಎಂದು ಗೊತ್ತಿದ್ದರೂ ರಾಜಕೀಯ ಮುಖಂಡರು ಒಮ್ಮೊಮ್ಮೆ ನಾವು ಹೇಳಿದ್ದೇ ಸರಿ ಎಂದು ಹಠ ಹಿಡಿಯುವುದೇಕೆ ಎಂಬ ಪ್ರಶ್ನೆ ಹಲವರನ್ನು ಪದೇ ಪದೆ ಕಾಡಬಹುದು. ಇದಕ್ಕೆ ಕಾರಣವಿಷ್ಟು: ಪ್ರತಿಯೊಂದು ದೇಶದ ರಾಜಕೀಯ ನಾಯಕನೂ ಆಡಳಿತ ಹಾಗೂ ರಾಜಕೀಯ ನಿಲುವುಗಳ ವಿಷಯವಾಗಿ ತನ್ನದೇ ದೃಷ್ಟಿಕೋನ ಹೊಂದಿರುತ್ತಾನೆ. ಎಂಥ ಸಂದರ್ಭವೇ ಬರಲಿ, ಶತ್ರು ರಾಷ್ಟ್ರದ ನಾಯಕನ ಮುಂದೆ ಸೋಲಬಾರದು ಎಂಬ 'ಹಠ' ಹೊಂದಿರುತ್ತಾನೆ. ಒಂದೊಮ್ಮೆ ಶಾಂತ ಸ್ವಭಾವದ ವ್ಯಕ್ತಿಯೇ ಅಧಿಕಾರ ಹಿಡಿದಿದ್ದರೂ ಆತ ತನ್ನಿಷ್ಟದಂತೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಆತ ಒಂದು ಖಡಕ್ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಕೆಲವೊಂದು ರಾಜಿ ಸೂತ್ರಗಳಿಗೆ ಮಣಿಯಲೇ ಬೇಕಾಗುತ್ತದೆ. ಹೀಗೆ, ಮಾರ್ಪಾಟುಗೊಂಡ ಒಂದು ರಾಜಕೀಯ ನಡೆ ಎದುರಾಳಿ ದೇಶದ ಮುಖಂಡರಿಗೆ ಅಪಥ್ಯ ಎನಿಸಬಹುದು. ಅಂಥ ಸಂದರ್ಭದಲ್ಲಿ ಎರಡು ರಾಷ್ಟ್ರಗಳ ನಡುವಣ ರಾಜತಾಂತ್ರಿಕ ಸಂಬಂಧ ಮುರಿದು ಬೀಳುತ್ತದೆ.
ಇದಿಷ್ಟನ್ನೂ ಗಮನಿಸಿದವರು-ಹಾಗಾದರೆ ರಾಜಕಾರಣಿ ಅನ್ನಿಸಿಕೊಂಡಾತ ಹೇಗಿರಬೇಕು? ಆತ ಸದಾ ರಾಜಿ ಮಾಡಿಕೊಂಡೇ ಬದುಕಬೇಕೆ? ಎಂದು ಪ್ರಶ್ನಿಸಬಹುದು. ಅದಕ್ಕೆ ನನ್ನ ಸ್ಪಷ್ಟ ಹಾಗೂ ನೇರ ಉತ್ತರವಿದು: ರಾಜಕಾರಣಿ ಅನ್ನಿಸಿಕೊಂಡಾತ ವಿದ್ಯಾವಂತನಾಗಿರಬೇಕು. ಒಂದು ವೇಳೆ ಪ್ರತಿಕೂಲ ಸಂದರ್ಭಗಳಿಂದಾಗಿ ಹೆಚ್ಚು ಓದಲು ಸಾಧ್ಯವಾಗಲಿಲ್ಲ ಎಂದುಕೊಳ್ಳಿ: ಅಂಥ ಸಂದರ್ಭದಲ್ಲೂ ರಾಜಕಾರಣಕ್ಕೆ ಬಂದವನಿಗೆ, ತಾನು ಪ್ರತಿನಿಧಿಸುವ ಪ್ರದೇಶ, ಅಲ್ಲಿನ ಜನಜೀವನ, ಅವರ ಸಮಸ್ಯೆ, ಅದಕ್ಕೆ ಕಂಡುಕೊಳ್ಳಬೇಕಾದ ಪರಿಹಾರ... ಇವೆಲ್ಲದರ ಸಮಗ್ರ ತಿಳಿವಳಿಕೆ ಇರಬೇಕು. ರಾಜಕಾರಣಿ ಎನ್ನಿಸಿಕೊಂಡಾತ ತಾನೇ ಮುಂದೆ ನಿಂತು ಎಲ್ಲವನ್ನೂ ಮಾಡಲು ಆಗುವುದಿಲ್ಲ. ಹಾಗಾಗಿ, ಆತ ಜನರ ಹಾಗೂ ಒಂದು ಪ್ರದೇಶದಲ್ಲಿ ಆಗಿಂದಾಗ್ಗೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ತಜ್ಞರ ತಂಡವೊಂದನ್ನು ಜೊತೆಗಿಟ್ಟುಕೊಳ್ಳಬೇಕು. ಅವರ ನೆರವಿನಿಂದ ತಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಸಮಸ್ಯೆಗಳೇ ಉದ್ಭವಿಸದಂತೆ ನೋಡಿಕೊಳ್ಳಬೇಕು.
ಎಲ್ಲಕ್ಕಿಂತ ಮುಖ್ಯವಾಗಿ, ನಾನು ಜನನಾಯಕನಲ್ಲ, ಪ್ರಜಾಸೇವಕ ಎಂಬ ಅರಿವು ರಾಜಕಾರಣಿಗೆ ಇರಬೇಕು. ರಾಜಕಾರಣಿಯಾದವನು ಜನರ ಪಾಲಿಗೆ ವಕೀಲನಂತೆ, ರಾಯಭಾರಿಯಂತೆ, ಸೇವಕನಂತೆ ಕೆಲಸ ಮಾಡಬೇಕು. ಎಲ್ಲರಿಗೂ ಸಮಾನ ಹಕ್ಕುಗಳನ್ನು ದೊರಕಿಸಲು ಮುಂದಾಗಬೇಕು. ಮಾನವ ಹಕ್ಕುಗಳ ಸಂರಕ್ಷಣೆಗೆ ಕಟಿಬದ್ಧನಾಗಬೇಕು.
ಕಳೆದ ಮೂವತ್ತು ವರ್ಷಗಳಿಂದಲೂ, ರಾಜಕಾರಣದಲ್ಲಿರುವಾತ ನಾನು. ನನ್ನ ಅನುಭವವನ್ನು ಅಂಗೈಲಿ ಹಿಡಿದುಕೊಂಡೇ ಈ ಮಾತುಗಳನ್ನು ಹೇಳುತ್ತಿದ್ದೇನೆ. ದಶಕಗಳ ಹಿಂದಿದ್ದ ರಾಜಕೀಯಕ್ಕೂ ಈ ಸಂದರ್ಭದ ರಾಜಕಾರಣಕ್ಕೂ ಹೋಲಿಕೆ ಮಾಡಿ ನೋಡಿದರೆ ಗಾಬರಿಯಾಗುತ್ತಿದೆ. ಏಕೆಂದರೆ, ಹಿಂದೆ ಅಧಿಕಾರವೆಂಬುದು ಮುಖಂಡರ ಹಿಡಿತದಲ್ಲಿತ್ತು. ಅದು ಜನಪರ ಕಾಳಜಿಯಿಂದ ಕೂಡಿತ್ತು. ಆದರೆ ಈಗ ಅದು ಜನರ ಮಧ್ಯೆ ಹಂಚಿ ಹೋಗಿದೆ. ರಾಜಕಾರಣ ಎಂಬುದು ಈಗ ಬಿಜಿನೆಸ್ ಆಗಿದೆ. ಜನಸೇವೆಯ ಉದ್ದೇಶ ಈಗ ಯಾರಿಗೂ ಇಲ್ಲ. ತಮ್ಮ ಎದುರಾಳಿ ನಾಯಕರನ್ನು, ಎದುರಾಳಿ ರಾಷ್ಟ್ರವನ್ನು ಹಣಿಯಲು ಎಲ್ಲರೂ ರಾಜಕಾರಣವನ್ನು ಬಳಸಿಕೊಳ್ಳುತ್ತಿದ್ದಾರೆ. ಪರಸ್ಪರರ ವಿರುದ್ಧ ಕತ್ತಿ ಮಸೆಯುತ್ತಾರೆ. ಇಂಥ ಸಂದರ್ಭದಲ್ಲಿ, ತಾನು ನಂಬಿದ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳದೆ ಬದುಕುವುದು ಎಂಥವರಿಗೂ ಕಷ್ಟವಾಗುತ್ತದೆ.
ಈಗ ಮತ್ತೆ, ರಾಷ್ಟ್ರ ರಾಜಕಾರಣದ ವಿಷಯಕ್ಕೆ ಬರೋಣ. ಈ ಭೂಮಂಡಲದಲ್ಲಿರುವ ಎಲ್ಲ ನೆರೆಹೊರೆಯ ರಾಷ್ಟ್ರಗಳೂ ಸದಾ ಕತ್ತಿ ಮಸೆಯುತ್ತಲೇ ಇರುತ್ತವೆ. ಈ ಮಾತಿಗೆ ಉದಾಹರಣೆಯಾಗಿ ಪ್ಯಾಲೆಸ್ತೀನ್ ಹಾಗೂ ಇಸ್ರೇಲ್‌ಗಳನ್ನೇ ತೆಗೆದುಕೊಳ್ಳೋಣ. ಈ ಎರಡೂ ರಾಷ್ಟ್ರಗಳು ದಶಕಗಳಿಂದಲೂ ವೈರತ್ವ ಸಾಧಿಸುತ್ತಿರುವುದು ಯಾವುದೋ ತುಂಡು ಭೂಮಿಗಾಗಿ. ಈ ಸಮಸ್ಯೆಗೆ ಪರಿಹಾರವನ್ನು ಹೀಗೇಕೆ ಯೋಚಿಸಬಾರದು? ಮೊದಲಿಗೆ ಪ್ಯಾಲೆಸ್ತೀನ್ ರಾಷ್ಟ್ರಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡುವುದು. ಅದರ ಜೊತೆಗೇ, ಆ ದೇಶದಲ್ಲಿರುವ ಇಸ್ರೇಲಿಗಳಿಗೆ ಸಂಪೂರ್ಣ ರಕ್ಷಣೆ ಒದಗಿಸುವುದು. ಹೀಗೆ ಮಾಡಿದರೆ, ಮೊದಲಿಗೆ ಎರಡೂ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧ ಸುಧಾರಿಸುತ್ತದೆ. ಅದರ ಹಿಂದೆಯೇ ಎರಡು ಭಿನ್ನ ಸಂಸ್ಕೃತಿಯ ಜನರಲ್ಲಿ ಪರಸ್ಪರ ನಂಬಿಕೆ ಉಂಟಾಗುತ್ತದೆ. ವಿಪರ್ಯಾಸವೇನು ಗೊತ್ತೆ? ಇಂಥದೊಂದು ಬದಲಾವಣೆಗೆ ಈಗಿನ ರಾಜಕಾರಣಿಗಳು ಮನಸ್ಸು ಮಾಡುತ್ತಿಲ್ಲ. ಪರಿಣಾಮವಾಗಿಯೇ ನನ್ನ ತಾಯ್ನಾಡಿನಲ್ಲಿ ಇಸ್ರೇಲಿಗಳು ಹಾಗೂ ಪ್ಯಾಲೇಸ್ತೀನಿಯರ ಮಧ್ಯೆ ಆಗಾಗ್ಗೆ ಘರ್ಷಣೆ ನಡೆಯುತ್ತಲೇ ಇದೆ.
'ಇದನ್ನೆಲ್ಲ ಗಮನಿಸಿದ ನಂತರ ನನಗೆ ಅನಿಸಿದ್ದಿಷ್ಟು: ಎರಡು ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧ ಗಟ್ಟಿಯಾಗಬೇಕೆಂದರೆ, ಕೆಲವೊಮ್ಮೆ ಅವರು, ಕೆಲವೊಮ್ಮೆ ಇವರು ಸೋಲಬೇಕು. ಕೆಲವು ವಿಚಾರಗಳಲ್ಲಿ ರಾಜಿಯಾಗಬೇಕು. ಮುಖ್ಯವಾಗಿ ಲಕ್ಷಾಂತರ ಮಂದಿಯ ಬದುಕು ಹಾಗೂ ನೆಮ್ಮದಿಯನ್ನು ಗಮನದಲ್ಲಿಟ್ಟುಕೊಂಡು ಅಹಮಿಕೆ ಹಾಗೂ ಹಠಮಾರಿತನವನ್ನು ಬಿಟ್ಟು ಮಾತುಕತೆಗೆ ಕೂರಬೇಕು. ಅಂಥವನು ಮಾತ್ರ ದೂರದೃಷ್ಟಿ ಹೊಂದಿದ ನಾಯಕ ಅನ್ನಿಸಿಕೊಳ್ಳುತ್ತಾನೆ.
ಮುಂದೊಂದು ದಿನ ಮೊಮ್ಮಕ್ಕಳು ಎದುರು ನಿಂತು 'ನಾವು ರಾಜಕಾರಣಿಗಳಾಗಿ ಹೊಸದೊಂದು ಆಶಯಕ್ಕೆ ಮುನ್ನುಡಿ ಬರೆಯಬೇಕೆಂದಿದ್ದೇವೆ. ನೀವು ಮಾರ್ಗದರ್ಶನ ಮಾಡಿ' ಎಂದೇನಾದರೂ ಕೇಳಿದರೆ ನಾನಾಗ ಹೇಳುವುದಿಷ್ಟು: ಎಲ್ಲವನ್ನೂ ತೆರೆದ ಮನದಿಂದ ವೀಕ್ಷಿಸಿ. ಆಘಾತ ಉಂಟು ಮಾಡುವ ಸಂದರ್ಭ ಎದುರಾದಾಗ ಕಂಗಾಲಾಗಬೇಡಿ. ಭೂತಕಾಲದ ಬಗ್ಗೆ ಯೋಚಿಸುತ್ತಾ ಕೂರದೆ ಭವಿಷ್ಯದ ಬಗ್ಗೆ ಮಾತ್ರ ಚಿಂತಿಸಿ. ಆಕಸ್ಮಿಕವಾಗಿ ಜೊತೆಯಾಗುವ ಸೋಲು ಅಥವಾ ಹಿನ್ನಡೆಯಿಂದ ನಿಮ್ಮ ಕನಸಿನ ಹಾದಿ ಮುಚ್ಚಿ ಹೋಗಲು ಸಾಧ್ಯವೇ ಇಲ್ಲ. ಸದಾ ಆಶಾವಾದಿಗಳಾಗಿರಿ. ನಿಮ್ಮ ಕನಸು, ಕನವರಿಕೆಗಳು ಆಕಾಶಕ್ಕಿಂತ ಮಿಗಿಲಾದ ವಿಸ್ತಾರ ಹೊಂದಿರಲಿ. ನೀವು ಕೈಗೊಳ್ಳುವ ಒಂದು ನಿರ್ಧಾರದಿಂದ ಸಾವಿರಾರು ಮಂದಿಗೆ ಒಳಿತಾಗುವಂತಿರಲಿ...
- ವಿಶ್ವೇಶ್ವರ ಭಟ್
vbhat@me.com