ಅಂಕಣಗಳು

ಅರೆ ಕ್ಷಣದ ಕೋಪ, ಅನುಗಾಲವೂ ತಾಪ...

'ಶ್ರಾವಣ ಮಾಸದಲ್ಲಿ ಹುಟ್ಟಿದವಳು ಎಂಬ ಕಾರಣದಿಂದಲೇ ನನಗೆ ಶ್ರಾವಣಿ...

'ಶ್ರಾವಣ ಮಾಸದಲ್ಲಿ ಹುಟ್ಟಿದವಳು ಎಂಬ ಕಾರಣದಿಂದಲೇ ನನಗೆ ಶ್ರಾವಣಿ ಎಂದು ಹೆಸರಿಟ್ಟರಂತೆ. 38 ಸದಸ್ಯರನ್ನು ಹೊಂದಿದ ಅವಿಭಕ್ತ ಕುಟುಂಬ ನಮ್ಮದು. ಯಾವುದೇ ಒಂದು ಕೆಲಸ ಆಗಬೇಕು ಅಂದರೂ ಅದಕ್ಕೆ ಕುಟುಂಬದ ಎಲ್ಲರ ಒಪ್ಪಿಗೆ ಸಿಗಬೇಕು. ಅದರಲ್ಲೂ ಅಂತರ್ಜಾತಿ ವಿವಾಹಕ್ಕೆ ನಮ್ಮ ಮನೇಲಿ ಒಪ್ಪಿಗೆ ಸಿಗೋದು ಬಹಳ ಕಷ್ಟ. ಹಾಗಾಗಿ ನನ್ನ ಬಗ್ಗೆ ಆಸೆ ಇಟ್ಕೋಬೇಡ. ನಿಮ್ಮ ಮನೆಯವರು ತೋರಿಸ್ತಾರಲ್ಲ; ಆ ಹುಡುಗೀನ ಮದುವೆಯಾಗಿ ಹಾಯಾಗಿರು...' ಪ್ರೇಮಭಿಕ್ಷೆ ಬೇಡಿದ ಮಲ್ಲಿಕಾರ್ಜುನನಿಗೆ ತುಂಬ ಸ್ಪಷ್ಟವಾಗಿ ಹೇಳಿದ್ದಳು ಶ್ರಾವಣಿ. ಇವಳ ಮಾತುಗಳನ್ನು ಅವನು ಒಪ್ಪಲಿಲ್ಲ. ಈಗಾಗಲೇ ಅಂತರ್ಜಾತಿ ವಿವಾಹವಾಗಿ ನೆಮ್ಮದಿಯಿಂದ ಬದುಕುತ್ತಿರುವವರ ಪಟ್ಟಿಯನ್ನೇ ಮುಂದಿಟ್ಟ. ಸಿವಿಲ್ ಎಂಜಿನಿಯರಿಂಗ್ ಡಿಗ್ರಿ ಕೈಲಿರುವುದರಿಂದ ಭವಿಷ್ಯದಲ್ಲಿ ಚೆನ್ನಾಗಿ ನೋಡ್ಕೋತೇನೆ ಎಂದು ಭರವಸೆ ಕೊಟ್ಟ. ಒಂದೆರಡು ವರ್ಷ ಕಳೆದ ಮೇಲೆ ಮನೆಯವರು ಸಿಟ್ಟು ಮರೆಯುತ್ತಾರೆ ಎಂದು ಧೈರ್ಯ ಹೇಳಿದ. ನೀನು ಸಿಗದೇ ಹೋದ್ರೆ ಖಂಡಿತ ಸತ್ತು ಹೋಗ್ತೇನೆ ಎಂದು ರಕ್ತದಲ್ಲೇ ಬರೆದು ಕೊಟ್ಟ. ಅವಳಿಗೆ ಗೆಳೆಯರಿಂದ ಹೇಳಿಸಿದ. ಕೈ ಮುಗಿದು ಪ್ರಾರ್ಥಿಸಿದ. ಪರಿಣಾಮವಾಗಿ, ಚಾಮರಾಜನಗರ ಸೀಮೆಯ ಕುರುಬರ ಹುಡುಗ ಮಲ್ಲಿಕಾರ್ಜುನನಿಗೂ, ಮಂಡ್ಯದ ಒಕ್ಕಲಿಗರ ಹುಡುಗಿ ಶ್ರಾವಣಿಗೂ ಬೆಂಗಳೂರಿನ ಸಬ್‌ರಿಜಿಸ್ಟ್ರಾರ್ ಆಫೀಸಿನಲ್ಲಿ ತರಾತುರಿಯಲ್ಲಿ ಮದುವೆಯಾಯಿತು.
ಸುದ್ದಿ ತಿಳಿದದ್ದೇ ತಡ, ಶ್ರಾವಣಿಯ ಕುಟುಂಬದವರು  ಕೆಂಡಾಮಂಡಲವಾದರು. ಒಂದು ವ್ಯಾನ್ ತುಂಬಾ ಹುಡುಗರನ್ನು ಇಟ್ಟುಕೊಂಡು ಬೆಂಗಳೂರಿನ ಗಲ್ಲಿಗಲ್ಲಿ ಹುಡುಕಿದರು. ಸಿಕ್ಕಿದರೆ, ಮಲ್ಲಿಕಾರ್ಜುನನ ಕೈ ಕಾಲು ಮುರಿದು, ಶ್ರಾವಣಿಯನ್ನು ಊರಿಗೆ ಎಳೆದೊಯ್ದು ಬೇರೊಂದು ಮದುವೆ ಮಾಡಿಸುವುದು ಅವರ ಉದ್ದೇಶವಾಗಿತ್ತು. ಪುಣ್ಯವಶಾತ್ ಈ ನವದಂಪತಿ ಯಾರ ಕೈಗೂ ಸಿಗಲಿಲ್ಲ. ಈಗ ಶ್ರಾವಣಿಯ ಕುಟುಂಬದವರ ಸಿಟ್ಟು ಮಲ್ಲಿಕಾರ್ಜುನನ ಹೆತ್ತವರ ಕಡೆಗೆ ತಿರುಗಿತು. ವ್ಯಾನ್ ಮಾಡಿಕೊಂಡು ಸೀದಾ ಚಾಮರಾಜನಗರಕ್ಕೇ ಹೋದರು. ಮಂಡ್ಯದ ಗೌಡರನ್ನು ಕೆಣಕುವಷ್ಟು ಧೈರ್ಯ ಬಂತೇನ್ರೋ ಎಂದೆಲ್ಲ ಕೂಗಾಡಿ ಮಲ್ಲಿಕಾರ್ಜುನನ ಹೆತ್ತವರಿಗೆ ನಾಲ್ಕು ಧರ್ಮದೇಟು ಹಾಕಿಬಿಟ್ಟರು. ನಂತರ, ಅದೇ ಸಿಟ್ಟಿನಲ್ಲಿ ಊರಿಗೆ ಬಂದು ಶ್ರಾವಣಿಯ ಶ್ರಾದ್ಧವನ್ನೂ ಮಾಡಿ, ಮಗಳು ನಮ್ಮ ಪಾಲಿಗೆ ಸತ್ತು ಹೋದಳು ಎಂದೂ ಸಾರಿಬಿಟ್ಟರು. ಇದೆಲ್ಲಾ ಪತ್ರಿಕೆಗಳಲ್ಲಿ ಸುದ್ದಿಯಾಯಿತು.
ಬೆಂಗಳೂರಲ್ಲಿ ಎಲ್ಲೆಲ್ಲೂ ಅಪಾರ್ಟ್‌ಮೆಂಟ್‌ಗಳು ತಲೆಯೆತ್ತಿದವಲ್ಲ; ಆಗ ಮಲ್ಲಿಕಾರ್ಜುನನ ಪ್ರತಿಭಾ ಪ್ರದರ್ಶನಕ್ಕೆ ಒಂದು ವೇದಿಕೆ ಸಿಕ್ಕಿತು. ಈತನ ತರಹೇವಾರಿ ಪ್ಲಾನ್‌ಗಳಿಗೆ ಬಿಲ್ಡರ್‌ಗಳು ಕ್ಯೂ ನಿಂತರು. ನಾಲ್ಕು ವರ್ಷ ಡಿಸೈನ್ ಎಂಜಿನಿಯರ್ ಆಗಿದ್ದವನು ನಂತರ ಕಂಟ್ರಾಕ್ಟರ್ ಆದ. ಚೆನ್ನಾಗಿ ದುಡಿದ. ಬಂಗಲೆ ಕಟ್ಟಿಸಿದ. ಹಡಗಿನಂಥ ಕಾರು ಖರೀದಿಸಿದ. ಅವನ ಬೆಳವಣಿಗೆಯ ಒಂದೊಂದೇ ಸುದ್ದಿ ಪರಿಚಯದವರ ಮೂಲಕ ಎರಡೂ ಕಡೆಯ ಹೆತ್ತವರನ್ನು ತಲುಪುತ್ತಿದ್ದವು. ಈ ವೇಳೆಗೆ ಮದುವೆಯಾಗಿ ಆರು ವರ್ಷಗಳೇ ಕಳೆದಿದ್ದವು. ಆದರೂ ಶ್ರಾವಣಿಯ ಮನೆಯವರ ಸಿಟ್ಟು ಕಡಿಮೆಯಾಗಿರಲಿಲ್ಲ. ಮಗನಿಂದ ಮನೆಯ ಮರ್ಯಾದೆ ಹೋಯ್ತು ಎಂದು ಅದುವರೆಗೂ ಹೇಳುತ್ತಿದ್ದ ಮಲ್ಲಿಕಾರ್ಜುನನ ಹೆತ್ತವರು, ಅವನ ಬಳಿ ಚೆನ್ನಾಗಿ ಹಣ ಓಡಾಡುತ್ತಿದೆ ಎಂದು ತಿಳಿದ ನಂತರ ವರಸೆ ಬದಲಿಸಿದ್ದರು. ಮೇಲಿಂದ ಮೇಲೆ ಮಗನ ಮನೆಗೆ ಬಂದು ಹೋಗುತ್ತಿದ್ದರು.
ಮದುವೆಯಾಗಿ ಎಂಟು ವರ್ಷ ಕಳೆದರೂ ಮಲ್ಲಿಕಾರ್ಜುನ-ಶ್ರಾವಣಿ ದಂಪತಿಗೆ ಮಕ್ಕಳಾಗಲಿಲ್ಲ. ವೈದ್ಯರು, ಇಬ್ಬರಿಗೂ ಯಾವುದೇ ತೊಂದರೆಯೂ ಇಲ್ಲ ಎಂದು ಸರ್ಟಿಫಿಕೇಟ್ ಕೊಟ್ಟರು. ಆಮೇಲೂ ಮಕ್ಕಳಾಗಲಿಲ್ಲ. ಈ ಸಂದರ್ಭದಲ್ಲಿಯೇ ಮಧ್ಯೆ ಪ್ರವೇಶಿಸಿದ ಮಲ್ಲಿಕ್‌ನ ಹೆತ್ತವರು-'ಕೊನೆಗಾಲದಲ್ಲಿ ಮೊಮ್ಮಕ್ಕಳ ಜೊತೆ ಆಡಿಕೊಂಡು ಬದುಕಬೇಕು ಅಂತ ನಮಗೂ ಆಸೆ ಇರ್ತದೆ. ಆದ್ರೆ ಈ ಮನೇಲಿ ಮಕ್ಕಳೇ ಇಲ್ಲ. ಅಮ್ಮಾ ಶ್ರಾವಣಿ, ಒಂದು ಕೆಲ್ಸ ಮಾಡೋಣ. ಹಣೆಬರಹವನ್ನು ಯಾರಿಂದಲೂ ತಪ್ಪಿಸಲು ಆಗಲ್ಲ. ಈ ಮನೆಗೆ ಯಜಮಾನಿ ಅಂತ ನೀನೇ ಇರು. ಆದ್ರೆ ನಮ್ಮ ಮಗನಿಗೆ ಇನ್ನೊಂದು ಮದುವೆ ಮಾಡಿಸೋಣ. ಹೀಗೆ ಮಾಡುವುದರಿಂದ ಜಾತಿಯೂ ಉಳಿಯುತ್ತೆ. ವಂಶವೂ ಬೆಳೆಯುತ್ತೆ'.... ಎಂಬ ವಾದ ಶುರುವಿಟ್ಟರು. ಎಲ್ಲ ವಿಷಯ ತಿಳಿದ ಮಲ್ಲಿಕಾರ್ಜುನ ಸಿಟ್ಟಿನಿಂದ ಕಿಡಿಯಾದ. ಎದ್ದು ಹೋಗಿ ಇಲ್ಲಿಂದ ಎಂದು ಅಬ್ಬರಿಸಿದ. ಆದರೆ ಅವನ ಹೆತ್ತವರು ಬಂಧುಗಳನ್ನೆಲ್ಲ ಹಿಂದಿಟ್ಟುಕೊಂಡೇ ಮಾತಿಗೆ ನಿಂತಿದ್ದರು. 'ಹತ್ತು ವರ್ಷ ತುಂಬುವವರೆಗೂ ಕಾದು ನೋಡುವುದೆಂದೂ, ಆ ನಂತರವೂ ಶ್ರಾವಣಿಗೆ ಮಕ್ಕಳಾಗದೇ ಹೋದರೆ ಎರಡನೇ ಮದುವೆ ಮಾಡುವುದೆಂದೂ' ನಿರ್ಧರಿಸಿಯೇ ಬಿಟ್ಟರು.
ಮದುವೆಯಾಗಿ ಎಂಟು ವರ್ಷಗಳು ಕಳೆದುಹೋಗಿದ್ದವು. ಉಳಿದ ಎರಡು ವರ್ಷಗಳಲ್ಲಿ ಮಡಿಲಿಗೊಂದು ಮಗು ಬಾರದಿದ್ದರೆ ಗಂಡನಿಗೆ ಮತ್ತೆ ಮದುವೆಯಾಗುತ್ತದೆ ಎಂದು ತಿಳಿದಾಗ ಶ್ರಾವಣಿ ನಿಂತಲ್ಲೇ ನಡುಗಿದಳು. ಅಂಥದೊಂದು ಸಂದರ್ಭ ಬರೋಕೆ ನಾನು ಖಂಡಿತ ಅವಕಾಶ ಕೊಡಲ್ಲ ಎಂದು ಮಲ್ಲಿಕಾರ್ಜುನ ಆಣೆ-ಪ್ರಮಾಣ ಮಾಡಿ ಹೇಳಿದರೂ ಈಕೆಗೆ ಭಯ ಕಡಿಮೆಯಾಗಲಿಲ್ಲ. ತನ್ನ ಸಮಸ್ಯೆಗೆ ಪರಿಹಾರ ಸೂಚಿಸುವಂತೆ ಹತ್ತಾರು ವೈದ್ಯರ ಮೊರೆ ಹೋದಳು. ಫೇಸ್‌ಬುಕ್ ಅಕೌಂಟ್‌ನಲ್ಲೂ ತನ್ನ ಸಮಸ್ಯೆ ಹೇಳಿಕೊಂಡು, ಬಗೆಬಗೆಯ ವೈದ್ಯಕೀಯ ಚಿಕಿತ್ಸೆಗಳ ಬಗ್ಗೆ ತಿಳಿದಿರುವವರು ದಯಮಾಡಿ ಸಲಹೆ ನೀಡಿ ಎಂದು ವಿನಂತಿಸಿಕೊಂಡಿದ್ದಳು.
ಹೀಗೇ ದಿನಗಳು ಉರುಳುತ್ತಿದ್ದವು. ಒಂದೆರಡು ವಾರಗಳಿಂದ ಶ್ರಾವಣಿ ತುಂಬಾ ಗೆಲುವಾಗಿರುವುದನ್ನು ಮಲ್ಲಿಕಾರ್ಜುನ ಗಮನಿಸಿದ್ದ. ಆದರೆ ಕಾರಣ ಕೇಳಿರಲಿಲ್ಲ. ಅವತ್ತು ಏನಾಯಿತೆಂದರೆ, ಸ್ವಲ್ಪ ಬೇಗನೆ ಮನೆಯತ್ತ ಬಂದವನಿಗೆ, ಹತ್ತಿರದ ಪಾರ್ಕ್‌ನಲ್ಲಿ ಶ್ರಾವಣಿ ವಾಕಿಂಗ್ ಮಾಡುತ್ತಿದ್ದುದು ಕಾಣಿಸಿತು. ವಿಶೇಷವೆಂದರೆ, ಅವಳೊಂದಿಗೆ ಒಬ್ಬ ಪುರುಷನಿದ್ದ. ಅವನ ಕೈ ಶ್ರಾವಣಿಯ ಹೆಗಲ ಮೇಲಿತ್ತು. ಹಳೆಯ ಪರಿಚಯದವರಂತೆ ಅವರಿಬ್ಬರೂ ತಿರುಗಾಡುತ್ತಿದ್ದರು. ಬಾಲ್ಕನಿಯಲ್ಲಿ ನಿಂತೇ ಎಲ್ಲವನ್ನೂ ಗಮನಿಸಿದ ಮಲ್ಲಿಕ್, ಹೆಂಡತಿಯೇನಾದ್ರೂ ತಪ್ಪು ಮಾಡ್ತಿದ್ದಾಳಾ ಎಂದು ಯೋಚಿಸಿದ. ಉತ್ತರ ಹೊಳೆಯಲಿಲ್ಲ. ಸ್ವಲ್ಪ ಹೊತ್ತಿನ ನಂತರ ಮನೆಗೆ ಬಂದ ಶ್ರಾವಣಿ, ಗಂಡನನ್ನು ಕಂಡು -'ಓಹ್, ಬೇಗ ಬಂದಿದೀರ' ಎನ್ನುತ್ತಾ ನಸುನಕ್ಕು ಒಳಗೆ ಹೋದಳು. ಮಲ್ಲಿಕಾರ್ಜುನ ಅಸಹನೆಯಿಂದ ನಿಂತಲ್ಲೇ ಚಡಪಡಿಸಿದ.
ಅವತ್ತಿಂದ ಹೆಂಡತಿಯ ಕುರಿತು ಅನುಮಾನದ ಮುಳ್ಳೊಂದು ಮಲ್ಲಿಕಾರ್ಜುನನ ಮನದಲ್ಲಿ ಉಳಿದು ಹೋಯಿತು. ಆತ ಹೆಂಡತಿಗೆ ತಿಳಿಯದಂತೆ ಅವಳನ್ನು ಗಮನಿಸಲು ಶುರು ಮಾಡಿದ. 15 ದಿನ ಕಳೆಯುವಷ್ಟರಲ್ಲಿ ಅದೇ ಗಂಡಸೊಂದಿಗೆ ಶ್ರಾವಣಿ ಪದೇ ಪದೆ ನಗುತ್ತ, ಅವನ ಕೈ ಹಿಡಿದುಕೊಂಡೇ ತಿರುಗಾಡುತ್ತಿದ್ದ ದೃಶ್ಯ ಕಾಣಿಸಿತು. ಒಂದು ಮಧ್ಯಾಹ್ನವಂತೂ,ಯಾರದೋ ಕಾರ್ ಹತ್ತಿ ಹೆಂಡತಿ ಹೊರಹೋಗಿದ್ದನ್ನು ಮಲ್ಲಿಕ್ ಗಮನಿಸಿದ. ಎರಡು ಗಂಟೆಯ ನಂತರ ಕಾರು ಹಿಂದಿರುಗಿತು. ಡ್ರೈವರ್‌ನ ಪಕ್ಕದಲ್ಲೇ ಶ್ರಾವಣಿ ಕುಳಿತಿದ್ದಳು. ಇಳಿಯುವ ಮುನ್ನ, ಡ್ರೈವರ್ ಆಕೆಯ ಹಣೆಗೆ ಮುತ್ತಿಟ್ಟು ಬೈ ಬೈ ಎಂದ.
ಅದನ್ನು ಪ್ರತ್ಯಕ್ಷ ಕಂಡ ನಂತರವಂತೂ ಮಲ್ಲಿಕಾರ್ಜುನನಿಗೆ ಅನುಮಾನ ಉಳಿಯಲಿಲ್ಲ. ಹೇಗಾದರೂ ಸರಿ, ಮಕ್ಕಳನ್ನು ಪಡೆಯಬೇಕು ಎಂಬ ಒಂದೇ ಕಾರಣದಿಂದ ಹೆಂಡತಿ ಹಾದಿ ತಪ್ಪಿದ್ದಾಳೆ ಎಂದು ಈತ ನಿರ್ಧರಿಸಿದ. ಅದೇ ವೇಳೆಗೆ, ದಿನವೂ ಪತ್ರಿಕೆಗಳಲ್ಲಿ ಓದುವ, ಟಿ.ವಿ.ಯಲ್ಲಿ ನೋಡುವ ಕ್ರೈಂ ಸುದ್ದಿಗಳ ನೆನಪಾಯಿತು. ಹೆಂಡತಿ ಮೋಸ ಮಾಡುತ್ತಿದ್ದಾಳೆ ಎಂಬ ಭಾವನೆ ಬಂದಾಗಲೆಲ್ಲ ಕಟಕಟನೆ ಹಲ್ಲು ಕಡಿಯುತ್ತಿದ್ದ. ಆದರೆ ಮನೆಯಲ್ಲಿ ಈ ವಿಷಯವನ್ನು ಹೇಗೆ ಪ್ರಸ್ತಾಪ ಮಾಡಬೇಕೆಂದೇ ಅವನಿಗೆ ಹೊಳೆಯಲಿಲ್ಲ.
ಅವತ್ತು ಭಾನುವಾರ. ಮಲ್ಲಿಕಾರ್ಜುನ ಮನೆಯಲ್ಲಿದ್ದ. ಒಂದೂ ಮಾತಿಲ್ಲದೆ ತಿಂಡಿ ಮುಗಿಸಿದ. ಯಜಮಾನರು ಬ್ಯುಸಿ ಇರಬೇಕೆಂದು ಭಾವಿಸಿ, ಶ್ರಾವಣಿಯೂ ಮಾತಾಡಿಸಲಿಲ್ಲ. ಆಕೆ ವಿಶೇಷ ಅಡುಗೆಯ ಸಿದ್ಧತೆಯಲ್ಲಿದ್ದಳು. ಮಧ್ಯಾಹ್ನ ಹನ್ನೆರಡು ಗಂಟೆ ಹೊಡೆದಾಕ್ಷಣ, ಒಂದು ಗಾಜಿನ ಲೋಟದಲ್ಲಿ ಜ್ಯೂಸ್ ತಂದಿಟ್ಟು ಖಿಲ್ಲನೆ ನಕ್ಕು ಹೋಗಿಬಿಟ್ಟಳು. ಎರಡು ಬಾರಿ ಗುಟುಕರಿಸಿ ಇತ್ತ ತಿರುಗಿದಾಗಲೇ ಫೋನ್ ರಿಂಗಣಿಸಿತು. ಮಲ್ಲಿಕ್ ರಿಸೀವರ್ ಎತ್ತಿಕೊಂಡಾಕ್ಷಣ ಆ ಕಡೆಯ ದನಿ ಉಲಿಯಿತು: 'ಚಿನ್ನೂ, ಸಂಜೆ ನಾಲ್ಕೂವರೆಗೆ ಬರ್ತೀನಿ. ಮೊದಲು ಮನೇಲಿ ತಿಂಡಿ ತಿನ್ನೋಣ. ಆಮೇಲೆ ಒಟ್ಟಿಗೆ ವಾಕ್ ಹೋಗೋಣ. ನಾನು ಬರುವ ಸುದ್ದಿ ಯಾರಿಗೂ ಗೊತ್ತಾಗಬಾರ್ದು ಪ್ಲೀಸ್..' ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ಮಲ್ಲಿಕಾರ್ಜುನನ ಬಿ.ಪಿ. ಹೆಚ್ಚಾಯಿತು. ಹೆಂಡತಿಯ ಸರಸ ಪಾರ್ಕ್‌ನ ಅಂಗಳ ದಾಟಿ ಮನೆಗೇ ಬರುತ್ತಿದೆ ಅಂದುಕೊಂಡ. ಸಂಜೆಯಾಗುತ್ತಿದ್ದಂತೆಯೇ ಹೆಂಡತಿ ತನಗೊಂದು ಮಾತೂ ಹೇಳದೆ ಗೆಳೆಯನೊಂದಿಗೆ ವಾಕ್ ಹೋಗುವ ಸಂದರ್ಭವನ್ನು ಕಲ್ಪಿಸಿಕೊಂಡ. ಬಿ.ಪಿ. ಮತ್ತಷ್ಟು ಹೆಚ್ಚಿತು. ಮರುಕ್ಷಣವೇ 'ಬಾಸ್ಟರ್ಡ್‌'ಎಂದು ಚೀರಿ ಫೋನ್ ಕುಕ್ಕಿದ. ಆ ರಭಸಕ್ಕೆ ಟೇಬಲ್‌ನ ಮೇಲಿದ್ದ ಗಾಜಿನ ಲೋಟ ಕೆಳಗೆ ಬಿದ್ದು ಫಳ್‌ಫಳ್ ಎಂದು ಸದ್ದು ಮಾಡಿ ಚೂರು ಚೂರಾಯಿತು.
ಆಕಸ್ಮಿಕವಾಗಿ ಉಂಟಾದ ಈ ಗದ್ದಲದಿಂದ ಗಲಿಬಿಲಿಗೊಂಡ ಶ್ರಾವಣಿ, ಅಡುಗೆ ಮನೆಯಿಂದ ಓಡೋಡಿ ಬಂದು, ಗಂಡನ ಮುಂದೆ ನಿಂತು ಗಾಬರಿಯಿಂದ ಕೇಳಿದಳು: 'ರೀ, ಯಾರ ಮೇಲೋ ರೇಗಿದ ಹಾಗೆ ಕೇಳಿಸ್ತು. ಲೋಟ ಕೆಳಗೆ ಬಿದ್ದಂತೆ ಸದ್ದಾಯ್ತು. ಏನಾಯ್ತು ರೀ? ಯಾರಾದ್ರೂ ಫೋನ್ ಮಾಡಿದ್ರಾ? ನಿಮ್ಮ ಆಫೀಸಿಗೆ ಸಂಬಂಧಿಸಿದ ವಿಷಯವಾ? ಏನಾಯ್ತು ರೀ,...ಹೇಳ್ರೀ...'
ಹೆಂಡತಿಯ ನಯವಾದ ಮಾತುಗಳನ್ನು ಕೇಳಿ ಮಲ್ಲಿಕಾರ್ಜುನ ಕೋಪ ಮತ್ತಷ್ಟು ಹೆಚ್ಚಿತು. ಈಕೆ ಮಾಡುವುದೆಲ್ಲ ಮಾಡಿ ಈಗ ಮಳ್ಳಿಯ ಥರಾ ನಟಿಸ್ತಾ ಇದ್ದಾಳೆ. ಫೋನ್ ಮಾಡಿದ್ದು ಯಾರು ಅಂತ ಗೊತ್ತಿದ್ರೂ ಗೊತ್ತಿಲ್ಲದವಳ ಥರಾ ಕೇಳ್ತಾ ಇದಾಳೆ ಅಂದುಕೊಂಡ. ಅದೇ ಆವೇಶದಲ್ಲಿ ಏನೂ ಉತ್ತರ ಹೇಳದೆ ಹೆಂಡತಿಯ ಕೆನ್ನೆಗೆ ಬೀಸಿ ಹೊಡೆದ. ಗಂಡನಿಂದ ಇಂಥ ವರ್ತನೆಯನ್ನು ನಿರೀಕ್ಷಿಸಿರದಿದ್ದ ಆಕೆ ಹೋ ಎನ್ನುತ್ತಾ ಆಯತಪ್ಪಿ ಬಿದ್ದು ಬಿಟ್ಟಳು.
ಒಂದೆರಡು ನಿಮಿಷದ ನಂತರ ಮಲ್ಲಿಕಾರ್ಜುನನ ಕೋಪ ಇಳಿಯಿತು. ಶ್ರಾವಣಿ ಆಗಲೂ ನೆಲದ ಮೇಲೇ ಬಿದ್ದಿದ್ದಳು. ಅವಳ ಕೈಯಲ್ಲಿ ಎರಡು ಕವರ್‌ಗಳಿದ್ದವು. ಒಂದರ ಮೇಲೆ: 'ನನ್ನ ಹೃದಯೇಶ್ವರ ಮಲ್ಲಿಕಾರ್ಜುನನಿಗೆ' ಎಂದು ಬರೆದಿತ್ತು. ಈತ ನಡುಗುವ ಕೈಗಳಿಂದಲೇ ಆ ಕವರ್ ಒಡೆದು ಅದರೊಳಗಿದ್ದ ಪತ್ರ ಓದತೊಡಗಿದ: 'ಡಿಯರ್ ಮಲ್ಲಿಕ್, ಹತ್ತನೇ ವರ್ಷ ಮುಗಿಯುವುದರೊಳಗೆ ಮಕ್ಕಳಾಗದೇ ಹೋದ್ರೆ ನಿಮಗೆ ಇನ್ನೊಂದು ಮದುವೆ ಮಾಡ್ತಾರೆ ಅನ್ನಿಸಿದ ಕ್ಷಣದಿಂದ ನಾನು ನಾನಾಗಿರಲಿಲ್ಲ. ನನಗೆ ದಾರಿ ತೋರುವಂತೆ, ಸಲಹೆ ನೀಡುವಂತೆ, ಸಹಾಯ ಮಾಡುವಂತೆ ಹಲವರಲ್ಲಿ ವಿನಂತಿಸಿದೆ. ಫೇಸ್‌ಬುಕ್‌ನಲ್ಲಿ ನನ್ನ ಕಷ್ಟದ ಬಗ್ಗೆ ಬರೆದುಕೊಂಡೆ. ಮುಂದೆ ಏನಾಯ್ತು ಗೊತ್ತಾ? ಗಂಗಾಧರ್ ಎಂಬ ಡಾಕ್ಟರ್ ಸಿಕ್ಕಿದ್ರು. ಆತ ಬೇರೆ ಯಾರೂ ಅಲ್ಲ. ನಮ್ಮ ದೊಡ್ಡಪ್ಪನ ಮಗ! ನಮ್ಮ ಅಣ್ಣ. ನಮ್ಮ ಮದುವೆಯ ನಂತರ, ಅಕಸ್ಮಾತ್ ಸಿಕ್ಕಿದ್ರೂ ಶ್ರಾವಣೀನ ಯಾರೂ ಮಾತಾಡಿಸಬಾರ್ದು ಅಂತ ಮನೇಲಿ ಎಲ್ಲರಿಂದ ಆಣೆ ಮಾಡಿಸಿದ್ರಂತೆ. ಹಾಗಾಗಿ ಅವನೂ ದೂರವೇ ಇದ್ದನಂತೆ. ಫೇಸ್‌ಬುಕ್‌ನಲ್ಲಿ ನನ್ನ ಸಮಸ್ಯೆ ಬಗ್ಗೆ ತಿಳಿದು ಅವನು ಎಲ್ಲವನ್ನೂ ಮರೆತು ಬಂದ. ಹತ್ತಾರು ಆಸ್ಪತ್ರೆಗೆ ಕರೆದೊಯ್ದ. ಬಗೆಬಗೆಯ ಔಷಧಿ ಕೊಡಿಸಿದ. ಯಾವ ಸಂದರ್ಭದಲ್ಲಿ ಗಂಡನೊಂದಿಗೆ ಜೊತೆಗಿದ್ರೆ ಒಳ್ಳೇದು ಅಂತ ಮಕ್ಕಳಿಗೆ ಹೇಳಿದಂತೆ ಹೇಳಿಕೊಟ್ಟ. ಅವನ ಸೂಚನೆಗಳನ್ನೆಲ್ಲ ಪಾಲಿಸಿದೆ. ಕಳೆದ ತಿಂಗಳು ಮತ್ತೆ ಚೆಕಪ್‌ಗೆ ಹೋಗಿ ಬಂದೆ. ಅಲ್ಲಿದ್ದ ವೈದ್ಯರು ಪರೀಕ್ಷಿಸಿ: 'ನಿಮಗೆ 3 ತಿಂಗಳು. ಅವಳಿ ಮಕ್ಕಳಾಗ್ತವೆ' ಅಂದರು. ಅವತ್ತಿಂದ ನಮ್ಮಣ್ಣ ಗಂಗಾಧರ್, ನನ್ನನ್ನು ವಾರಕ್ಕೆ ಮೂರು ಬಾರಿ ವಾಕಿಂಗ್ ಕರ್ಕೋಂಡು ಹೋಗ್ತಾನೆ. ಮದುವೆಯ ನಂತರ ನಿಮ್ಮ ಯಜಮಾನರಿಗೆ ನೋವಾಗುವ ಹಾಗೆ ನಾವೆಲ್ಲಾ ನಡ್ಕೊಂಡಿದೀವಿ. ಹಾಗಾಗಿ ಅವರಿಗೆ ಮುಖ ತೋರಿಸಲು ಸಂಕೋಚ ಎನ್ನುತ್ತಾ ಮನೆಗೆ ಬರದೇ ಹೋಗಿ ಬಿಡುತ್ತಿದ್ದ. ಅವನನ್ನು, ಇವತ್ತು ಮನೆಗೆ ಬರಲೇಬೇಕು ಎಂದು ಒತ್ತಾಯಿಸಿದ್ದೇನೆ. ಸಂಜೆಗೆ ಬರ್ತಾನೆ. ಕಾಫಿ ಕುಡಿದು, ತಿಂಡಿ ತಿಂದು ಮೂವರೂ ವಾಕ್ ಹೋಗೋಣ. ನಾನು ಬರುವ ವಿಷಯವನ್ನು ಗುಟ್ಟಾಗಿಡು. ನಿಮ್ಮ ಯಜಮಾನರಿಗೆ ಸರ್‌ಫ್ರೈಸ್ ಕೊಡೋಣ ಎಂದು ಹೇಳಿದ್ದಾನೆ. ಆದರೆ ನೀವು ಅವನ ಮೇಲೆ ರೇಗಾಡಿ ಬಿಟ್ರೆ ಗತಿಯೇನು ಅನಿಸಿದ್ದರಿಂದ, ಎಲ್ಲವನ್ನೂ ಮಾತಲ್ಲಿ ಹೇಳುವ ಬದಲು ಅಕ್ಷರಗಳ ಮೂಲಕ ತಿಳಿಸಿದರೆ ಚೆಂದ ಅನಿಸಿದ್ದರಿಂದ ಈ ಪತ್ರ ಬರೆದಿದ್ದೇನೆ. ಇಲ್ಲಿರುವ ಇನ್ನೊಂದು ಕವರಿನಲ್ಲಿ ಮೆಡಿಕಲ್ ರಿಪೋರ್ಟ್ ಇದೆ. ಹೌದೂರೀ, ನೀವೀಗ ಅವಳಿ ಮಕ್ಕಳ ತಂದೆಯಾಗ್ತಾ ಇದೀರ. ಇವತ್ತು ರಾತ್ರಿಯೇ ನಿಮ್ಮ ಅಪ್ಪ-ಅಮ್ಮನಿಗೂ ವಿಷಯ ತಿಳಿಸೋಣ. ಈಗ ನಿಮ್ಮ ಇಷ್ಟದ ಗಸಗಸೆ ಪಾಯಸ ಮಾಡಿದೀನಿ. ಪ್ಲೀಸ್ ಕಣ್ರಿ, ನಮ್ಮ ಅಣ್ಣ ಬಂದಾಗ ಪ್ರೀತಿಯಿಂದ ಮಾತಾಡ್ಸಿ...'
ಪತ್ರ ಓದಿ ಮುಗಿಸಿದ ಮಲ್ಲಿಕಾರ್ಜುನ ಖುಷಿ, ನಾಚಿಕೆ, ಗಾಬರಿಯಿಂದ ಹೆಂಡತಿಯತ್ತ ನೋಡಿದ. ಆಕೆ ಇನ್ನೂ ಹಾಗೆಯೇ ಬಿದ್ದಿದ್ದಳು. ಇವನು ಗಾಬರಿಯಿಂದ ನೆಲದ ಮೇಲೆ ಕೂತು ಶ್ರಾವಣೀ, ಶ್ರಾವಣೀ ಎಂದ. ಅವಳ ತಲೆ ಹಿಡಿದು ಎತ್ತಿದ. ಮೊದಲೇ ನೆಲಕ್ಕೆ ಬಿದ್ದಿದ್ದ ಗಾಜಿನ ದೊಡ್ಡ ಚೂರು ಶ್ರಾವಣಿಯ ತಲೆಗೆ ನಾಟಿತ್ತು. ಅಷ್ಟುದ್ದಕ್ಕೂ ರಕ್ತ ಹರಿದಿತ್ತು. ಆಕೆಯ ದೇಹ ತಣ್ಣಗಾಗಿ ಹೋಗಿತ್ತು. ನಡೆದಿರುವ ಅನಾಹುತವನ್ನು ಅರ್ಥ ಮಾಡಿಕೊಂಡ ಮಲ್ಲಿಕಾರ್ಜುನ 'ಶ್ರಾವಣೀ' ಎಂದು ಚೀರುತ್ತಾ ಗೋಳಾಡ ತೊಡಗಿದ.
--
ಕೋಪದ ಕೈಗೆ ಬುದ್ಧಿ ಕೊಡಬಾರದು. ಎಂಥ ಸಂದರ್ಭದಲ್ಲೂ ದುಡುಕಬಾರದು ಎಂಬುದಕ್ಕೆ ಸಾಕ್ಷಿಯಾಗುವ ಈ ಕಥೆಯ ಎಳೆ ಇಂಟರ್‌ನೆಟ್‌ನದ್ದು...

- ಎ.ಆರ್. ಮಣಿಕಾಂತ್
armanikanth@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!