ಸರ್ ರವೀಂದ್ರ ಜಡೇಜಾ
- ನಿಮ್ಮ ಬಗ್ಗೆ ಬರ್ತಾ ಇರೋ 'ಸರ್'ಕ್ಯಾಸ್ಟಿಕ್ ಕಾಮೆಂಟ್ಸ್ ಬಗ್ಗೆ ನಿಮ್ಮ ಅಭಿಪ್ರಾಯ?
ಎಲವೋ ಎಂದರೆ ನರಕ, ಅಯ್ಯಾ ಎಂದರೆ ಸ್ವರ್ಗ ಅಂತಾರಲ್ಲ ಅದರ ಇಂಗ್ಲಿಷ್ ವರ್ಷನ್...ಸರ್ ಎಂದರೆ ಸ್ವರ್ಗ.
- ಆದ್ರೂ ನಿಮ್ಮ ನೇಮ್‌ಗಿಂತ ನಿಮ್ಮ ಸರ್‌ನೇಮೇ ಜಾಸ್ತಿ ಫೇಮಸ್ ಆಗ್ತಾ ಇದೆಯಲ್ಲ?
ಏನ್ ಫೇಮಸ್ಸೋ ಏನೋ, ನನ್ನ 'ಸರ್'ದರ್ದ್ ನಂಗೆ. 'ಜಡೇಜಾ ಟ್ವೆಲ್ತ್ ಪ್ಲೇಯರ್ ಆಗಿದ್ರೂ ಮ್ಯಾನ್ ಆಫ್ ದಿ ಮ್ಯಾಚ್ ಆಗ್ತಾನೆ' ಅಂತ ಕಾಮಿಡಿ ಮಾಡ್ತಿದಾರೆ.
- ಜಡೇಜ ತಮ್ಮ ಬೌಲಿಂಗ್‌ನಲ್ಲಿ ತಾವೇ ಕೀಪಿಂಗ್ ಮಾಡ್ತಾರಂತೆ?
ಓ ಅದರ್ ಜೊತೆ ಇದ್ ಬೇರೆ ಇದ್ಯಾ? ನಂಗೊತ್ತು, ಇದೆಲ್ಲ ಧೋನಿ ಕಿತಾಪತಿ. ಇರಿ, ಒಂದ್ಸಲ ಅವನು ಬ್ಯಾಟಿಂಗ್ ಮಾಡುವಾಗ ನಾನು ಅಂಪೈರ್ ಆದ್ರೆ, ಎಲ್ಲ ಸರಿಹೋಗುತ್ತೆ.
- ಸರಿ, ಧೋನಿ ಮೇಲೆ ಆಣೆ ಇಟ್ಟು ಹೇಳಿ, ನೀವು ಬ್ಯಾಟ್ಸ್‌ಮನ್ನಾ ಬೌಲರ್ರಾ? ಆಲ್ರೌಂಡರ್ ಅಂದ್ರೆ ಯಾರೂ ನಂಬ್ತಿಲ್ಲ...
ಬ್ಯಾಟ್ಸ್‌ಮನ್ನೂ ಬೇಡ, ಬೌಲರ್ರೂ ಬೇಡ. ಒಂದ್ಸಲ ಸುಮ್ನೆ ಕ್ಯಾಪ್ಟನ್ ಮಾಡಿ ನೋಡಲಿ, ಅವಾಗ್ ತೋರಿಸ್ತೀನಿ. ನಾನ್ ಟಾಸ್ ಗೆದ್ರೆ ಮ್ಯಾಚ್ ಗೆದ್ದಂಗೆ ಅಂತ.
- ನೋಡಿ, ಹಿಂಗೆಲ್ಲ, ನಿಮ್ಮನ್ನ ನೀವೇ ಗೇಲಿ ಮಾಡ್ಕೊಂಡ್ರೆ ಇನ್ನು ಬೇರೆಯವರು ಬಿಡ್ತಾರಾ? ಹೋಗ್ಲಿ, ಸುದ್ದಿ ಗೊತ್ತಾಯ್ತಾ? ನಿಮ್ಮ ಅಭಿಮಾನಿಗಳೆಲ್ಲ ಸೇರಿ ಜಡೇಜ ಅವರನ್ನ ಯಾರೂ ಸರ್ ಅಂತ ಕರೆದು ಗೇಲಿ ಮಾಡಬಾರದು ಅಂತ ಸ್ಟೇ ತರಬೇಕು ಅಂತಿದಾರಂತೆ?
ಹೌದಾ, ಆಹಾ, ಸ್ವರ್ಗ ಒಂದ್ ಸೆಕೆಂಡ್ 'ಸರ್ರ್‌ರ್‌ರ್' ಅಂತ ಪಾಸಾದಂಗಾಯ್ತು!
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಸದ್ಯಕ್ಕೆ ಯಾವುದೇ ಸಿನಿಮಾ ಕಾಮಿಡಿಯನ್‌ಗಳಿಗಿಂತ ಎಲ್ಲರನ್ನೂ ಹೆಚ್ಚು ನಗಿಸುತ್ತಿರುವವರು ಸರ್ ರವೀಂದ್ರ ಜಡೇಜಾ. ಅದೇನೋ ಕೆಲವರಿಗೆ ಅದೃಷ್ಠ ಒದ್ದುಕೊಂಡು ಬರುತ್ತದೆ ಎಂಬುದಕ್ಕೆ ಜಡೇಜಾ ಅತ್ಯುತ್ತಮ ಉದಾಹರಣೆ. ಮೊನ್ನೆ ಮೊನ್ನೆ ಯಾರೂ ಕೇರ್ ಮಾಡದೆ ಇದ್ದ ಜಡೇಜಾ ಈಗ ರಜನಿ ಸಾರ್ ಎತ್ತರಕ್ಕೆ ಬೆಳೆದು ಸರ್ ಜಡೇಜಾ ಆಗಿದ್ದಾರೆ. ಸುಮ್ಮನೆ ತಮಾಷೆಗೆ ಎಂದುಕೊಂಡು ಇಲ್ಲಿರುವ ಕೆಲವು ಲಿಂಕ್‌ಗಳನ್ನು ನೋಡಿ.
-bit.ly/ZbhPgh n bit.ly/ZE1Y6r n on.fb.me/17NEDWp n bit.ly/WTevGW n bit.ly/10fc7g5
ಹರಿ-ಕಥೆ
ಊರಿಗೆ ಹೋಗಿದ್ದ ಖೇಮು ಏರ್‌ಪೋರ್ಟ್‌ಗೆ ಬಂದವನೇ 'ಇನ್ನರ್ಧ ಗಂಟೇಲಿ ಮನೇಲಿರ್ತೀನಿ ಡಿಯರ್' ಅಂತ ಹೆಂಡತಿಗೆ ಮೆಸೇಜ್ ಕಳಿಸಿದ. ಕರೆಕ್ಟಾಗಿ ಅರ್ಧಗಂಟೇಲಿ ಮನೆ ತಲುಪಿದವನಿಗೆ ದೊಡ್ಡ ಶಾಕ್ ಕಾದಿತ್ತು. ಹೆಂಡತಿ ತನ್ನ ಬಾಯ್‌ಪ್ರೆಂಡ್‌ನ ಜೊತೆ ಬೆಡ್‌ರೂಮ್‌ನಲ್ಲಿದ್ದಳು. ಅದನ್ನು ನೋಡಿ ಕೆಂಡಾಮಂಡಲವಾದ ಖೇಮು 'ಇನ್ಮೇಲೆ ನಂದೂ ನಿಂದೂ ಸಂಬಂಧ ಮುಗೀತು' ಎನ್ನುತ್ತಾ ಕೂಗಾಡತೊಡಗಿದ. ಬಾಯ್‌ಪ್ರೆಂಡ್ ಓಡಿಹೋದ. ಅಷ್ಟರಲ್ಲಿ ಹೆಂಡತಿಯ ತಾಯಿ ಅಲ್ಲಿಗೆ ಬಂದಳು. 'ಏನಾಯ್ತು ಅಳಿಯಂದ್ರೆ?' ಎಂದು ವಿಚಾರಿಸಿದಾಗ ಖೇಮು ಕೋಪದಿಂದಲೇ ಹೇಳಿದ 'ಎಷ್ಟು ಕೊಬ್ಬಿರಬೇಡ ನಿಮ್ಮ ಮಗಳಿಗೆ, ನನ್ ಜೊತೆಗೇ ಡಬಲ್ ಗೇಮ್ ಆಡ್ತಾಳೆ, 'ಇನ್ನರ್ಧ ಗಂಟೇಲಿ ನಾನು ಬರ್ತಾ ಇದೀನಿ' ಅಂತ ಮೆಸೇಜ್ ಕಳಿಸಿದ್ದೀನಿ, ಬಂದು ನೋಡಿದರೆ ಈ ಪರಿಸ್ಥಿತಿ, ನಿಮ್ಮ ಮಗಳನ್ನು ನಿಮ್ಮ ಮನೆಗೇ ಕರ್ಕೊಂಡ್ ಹೋಗಿ' ಎಂದು ರೇಗಿದ. ಅದಕ್ಕೆ ಅವನ ಅತ್ತೆ, 'ಇಲ್ಲ, ನನ್ನ ಮಗಳು ಹಾಗಲ್ಲ, ಇಲ್ಲೇನೋ ಮಿಸ್ ಅಂಡರ್‌ಸ್ಟ್ಯಾಂಡಿಂಗ್ ಆಗಿದೆ. ಇರಿ ನಾನು ಅವಳತ್ರ ಮಾತಾಡ್ತೀನಿ' ಎಂದವಳೇ ಮಗಳ ಕೋಣೆಯೊಳಕ್ಕೆ ಹೋಗಿ ನಂತರ ವಾಪಸ್ಸು ನಗುಮೊಗದಿಂದ ಹೊರಬಂದಳು. ಬಂದವಳೇ ಅಳಿಯನ ಮುಖ ನೋಡುತ್ತಾ 'ನೋಡಿ, ನಾನ್ ಹೇಳಿರಲಿಲ್ವಾ, ಇಲ್ಲೇನೋ ಮಿಸ್ ಅಂಡರ್‌ಸ್ಟ್ಯಾಂಡಿಂಗ್ ಆಗಿದೆ ಅಂತ, ಈಗ, ನೋಡಿ ನಾನು ಹೇಳಿದ್ದು ನಿಜ ಆಯ್ತು' ಅಂದ್ಳು. ಅಯ್ಯೋ ಹಾಗಾದರೆ ನಾನು ಕಣ್ಣಾರೆ ಕಂಡಿದ್ದು ಸುಳ್ಳಾ ಎಂಬ ಆಶ್ಚರ್ಯ ಖೇಮುಗೆ. ಅಷ್ಟರಲ್ಲಿ ಅತ್ತೆ ಮುಂದುವರಿಸಿದಳು 'ನೀವು ಕಳಿಸಿದ ಮೆಸೇಜ್ ಅವಳಿಗೆ ತಲುಪಿಯೇ ಇಲ್ಲ, ನೆಟ್‌ವರ್ಕ್ ಪ್ರಾಬ್ಲಮ್ಮು'.
ಸ್ಕ್ಯಾಂಡಲ್‌ವುಡ್
ಚಾರ್‌ಮಿನಾರ್‌ನಿಂದ ಆರಂಭಗೊಂಡ ಈ ವರ್ಷದ ಯಶಸ್ಸಿನ ಚಕ್ರ ತಿರುಗುತ್ತಿದೆ. ಸಂತೋಷ್ ಚಿತ್ರಮಂದಿರದಲ್ಲಿ 50 ದಿನ ಪೂರೈಸಿ, ಮೇನಕಾಕ್ಕೆ ಶಿಫ್ಟ್ ಆಗಿ, ಈಗ ಶತದಿನೋತ್ಸವ ಆಚರಿಸಲು ಚಿತ್ರಮಂದಿರ ಸಿಗದಿರುವ ಪರಿಸ್ಥಿತಿ ಚಾರ್‌ಮಿನಾರ್‌ದು. ಇತ್ತೀಚಿನ ಸಿಂಪಲ್ಲಾಗೊಂದ್ ಲವ್‌ಸ್ಟೋರಿ ಕೂಡ 50 ದಿನಗಳನ್ನು ಪೂರೈಸಿದರೂ ಕೆ.ಜಿ. ರೋಡ್‌ನಲ್ಲಿ ಮುಂದುವರಿಯಲು ಥಿಯೇಟರ್ ಸಮಸ್ಯೆ. ಹಾಗಾಗಿ ನಮ್ಮ ಚಿತ್ರ ಮಲ್ಟಿಪ್ಲೆಕ್ಸ್‌ನಲ್ಲೇ ಶತದಿನೋತ್ಸವ ಆಚರಿಸಲಿ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಚಿತ್ರದ ಸೂತ್ರಧಾರ ಸುನಿ. ಮೈನಾ ಚಿತ್ರದ ನಿರ್ಮಾಪಕರು ತಮ್ಮ ಆಪ್ತರ ಬಳಿ ಏನೇ ಗೋಳು ಹೇಳಿಕೊಂಡರೂ, ಮಾಧ್ಯಮಗಳ ಮುಂದೆ, 50 ದಿನ ಓಡಿರುವ ನಮ್ಮ ಮೈನಾ ರೆಕ್ಕೆಗಳು ಬಲಿಷ್ಠವಾಗಿವೆ ಎನ್ನುತ್ತ ಸಿಕ್ಕಿರುವ ಯಶಸ್ಸಿಗೆ ರೆಕ್ಕೆ ಪುಕ್ಕ ಕಟ್ಟಿಯಾದರೂ ಹೇಳಿಕೊಳ್ಳುತ್ತಿದ್ದಾರೆ. ಇನ್ನು ಮೊನ್ನೆ ಬಿಡುಗಡೆಯಾದ ಪರಾರಿ ಕೂಡಾ ಓಡುವ ಲಕ್ಷಣಗಳನ್ನು ತೋರಿಸುತ್ತಿದೆ. ಇಂಥ ಸಂದರ್ಭದಲ್ಲಿ ಗಾಂಧಿನಗರದಲ್ಲಿ 'ಕನ್ನಡ ಪಿಕ್ಚರ್ ಓಡ್ತಾ ಐತೆ ನೋಡ್ಲಾ ಮಗ' ಎನ್ನುವ ಹಾಡು ಫೇಮಸ್ ಆಗುತ್ತಿದ್ದರೆ ಅದಕ್ಕೆ ಈ ವಾರ ಆರು ಚಿತ್ರಗಳು ಬಿಡುಗಡೆಯಾಗಿರುವುದು ಖಂಡಿತಾ ಕಾರಣ ಅಲ್ಲ. ಚಂದನವನ ನಿಜಕ್ಕೂ ಪ್ರಕಾಶಿಸುತ್ತಿದೆ.
ಡಬ್ಕುಡಬಲ್ ತುದಾಂಡಲ್...
- ಎರಡೆರಡು ಕಡೆ ಎಲೆಕ್ಷನ್‌ಗೆ ನಿಂತ್ಕೊಳ್ಳುವವರ ಬಗ್ಗೆ ಕಾಮೆಂಟ್
ಅವನಿಗೆ ಕಾಲು ಒಂದ್‌ಕಡೆ ನಿಲ್ಲಲ್ಲ
- ಬಚ್ಚನ್ ಸಿನಿಮಾ ಮತ್ತು ಅದರ ಜಾಹೀರಾತು ಪಾರ್ಟ್‌ನರ್ ಆದ ಆಲ್‌ಕ್ಲಿಯರ್ ಶ್ಯಾಂಪೂವಿನ ಜಂಟಿ ಟ್ಯಾಗ್‌ಲೈನ್
ಆ್ಯಂಗ್ರಿ ಯಂಗ್ ಮ್ಯಾನ್ ಈಸ್ ಬ್ಯಾಕ್, ಬಟ್ ಡ್ಯಾಂಡ್ರಫ್ ವಿಲ್ ನಾಟ್ ಬಿ ಬ್ಯಾಕ್
ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ ಆದಮೇಲೆ ಕಾನ್ಸ್‌ಟೇಬಲ್ ಖೇಮು ಮೆಟ್ರೋ ಕೆಲಸ ನಡೆಯುತ್ತಿದ್ದ ಜಾಗದಲ್ಲೇ ಬೆಳಿಗ್ಗೆಯಿಂದ ಕಾವಲು ಕಾಯ್ತಾ ಇದ್ದ. ಯಾಕಂದ್ರೆ ಅಲ್ಲಿ ಬೋರ್ಡ್ ಹಾಕಿದ್ರು 'ಸ್ಫೋಟನಾ ಕಾರ್ಯ ಪ್ರಗತಿಯಲ್ಲಿದೆ' ಅಂತ.
- ಮುಂದಿನ ವಾರ ಸರ್ ಜಡೇಜಾ ಮೀಟಿಂಗ್ ಕರೆದಿದ್ದಾರಂತೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಸೆಲೆಕ್ಷನ್ ಕಮಿಟಿ ಆಯ್ಕೆ ಮಾಡೋಕೆ.
-ಹುಟ್ಟುಹಬ್ಬದ ದಿನ ಸಚಿನ್ ನಿವೃತ್ತಿ ಘೋಷಿಸಿದರೆ
ಬರ್ತ್‌ಡೇ Bye
ನಾನು ನಿನ್ನೆ ಸಚಿನ್ ತೆಂಡೂಲ್ಕರ್ ಜೊತೆ ಫೋನ್‌ನಲ್ಲಿ ಮಾತಾಡ್ದೆ ಗೊತ್ತಾ?
ಹೌದಾ? ಸಚಿನ್ ಏನ್ ಹೇಳ್ದ? 'ರಾಂಗ್ ನಂಬರ್' ಅಂದ.
-ಹರಿ
harikannadaprabha@gmail.com