ಅಂಕಣಗಳು

ಬೆನ್ನಿಗೆ ಬಿದ್ದರೂ ಭಾರವಾಗದ ಅನುಪಮ ಸಂಬಂಧವಿದು!

ಎಲ್ಲವೂ 'ವ್ಯಾವಹಾರಿಕ' ಆಗಿರುವ ಈ ಸಂದರ್ಭದಲ್ಲಿ ಸೋದರ-ಸೋದರಿ...

ಎಲ್ಲವೂ 'ವ್ಯಾವಹಾರಿಕ' ಆಗಿರುವ ಈ ಸಂದರ್ಭದಲ್ಲಿ ಸೋದರ-ಸೋದರಿ ಸಂಬಂಧವೂ ಶಿಥಿಲವಾಗುತ್ತಿದೆ. ಅದನ್ನೆಲ್ಲ ನೆನಪಿಸಿಕೊಂಡಾಗಲೇ ಹಳೆಯ ಕಥೆಯೊಂದು ಕೈ ಹಿಡಿಯಿತು. ಅಶರೀರವಾಣಿಯಂತೆ ಜೊತೆಯಾದಮಮತಾಮಯಿಯೊಬ್ಬಳು ತನ್ನ ತಮ್ಮನ ಕಥೆ ಹೇಳಲು ಮುಂದಾದಳು. ಆ ಕಥೆ ಮುಂದುವರಿದಿದ್ದು ಹೀಗೆ.  
***
ಮನೆಯಲ್ಲಿ ಅಪ್ಪ-ಅಮ್ಮನೊಂದಿಗೆ ಇದ್ದದ್ದು ನಾವಿಬ್ಬರೇ: ನಾನು-ತಮ್ಮ. ಅವನು ನನಗಿಂತ ಮೂರು ವರ್ಷ ಚಿಕ್ಕವನಿದ್ದ. ಕೊನೆಯ ಮಗ ಎಂಬ ಕಾರಣಕ್ಕೆ ಮುದ್ದು ಮಾಡಿದ್ದ ಕಾರಣಕ್ಕೋ ಏನೋ; ಓದಿನಲ್ಲಿ ನನಗಿಂತ ಸ್ವಲ್ಪ ವೀಕ್ ಇದ್ದ.
ನಾನು ಏಳನೇ ತರಗತಿಯಲ್ಲಿದ್ದಾಗ, ಗೆಳತಿಯರೆಲ್ಲ ದಿನಕ್ಕೊಂದು ಥರದ ಹ್ಯಾಂಡ್‌ಕರ್ಚೀಫ್ ತರ್ತಾ ಇದ್ರು. ನನಗೂ ಒಂದೆರಡು ಹ್ಯಾಂಡ್‌ಕರ್ಚಿಫ್ ತೆಗೆದುಕೊಡಮ್ಮಾ ಎನ್ನುತ್ತಾ ಅಮ್ಮನ ಎದುರು ನಿಂತೆ. 'ನೋಡೂ, ಶೋಕಿಗೆ ಹೆಣ್ಣು ಮಕ್ಕಳ ಮನಸ್ಸು ಮುಂದಾಗುವುದೇ ಇಂಥ ಸಣ್ಣ ಆಸೆಗಳಿಂದ. ನಿಂಗೆ ಹ್ಯಾಂಡ್‌ಕರ್ಚೀಫ್‌ಗಳ ಅಗತ್ಯವಾದ್ರೂ ಏನಿದೆ? ಇಂಥ ವಸ್ತುಗಳ ಖರೀದಿಯಿಂದ ದುಡ್ಡು ವೇಸ್ಟು. ಅದೆಲ್ಲಾ ಕೇಳಬಾರ್ದು ನೀನು ಎಂದು ಅಮ್ಮ ಕಡ್ಡಿ ಮುರಿದಂತೆ ಹೇಳಿಬಿಟ್ಟಳು. ಆದರೂ ನನಗೆ ಹ್ಯಾಂಡ್‌ಕರ್ಚೀಫ್ ಮೇಲಿನ ಮೋಹ ಹೋಗಲಿಲ್ಲ. ಅಂಗಡಿಯಲ್ಲಿ ವಿಚಾರಿಸಿದಾಗ, 2 ಹ್ಯಾಂಡ್‌ಕರ್ಚೀಫ್‌ಗಳ ಬೆಲೆ 10 ರೂಪಾಯಿ ಎಂದು ತಿಳಿದುಬಂತು.
ಪಾಕೆಟ್‌ಮನಿಯಿಂದ ಮಕ್ಕಳು ಕೆಟ್ಟು ಹೋಗ್ತಾರೆ ಎಂಬುದು ಅಪ್ಪನ ನಂಬಿಕೆಯಾಗಿತ್ತು. ಜೊತೆಗೆ, ಈಗಾಗಲೇ ಅಮ್ಮ, ಹ್ಯಾಂಡ್‌ಕರ್ಚೀಫ್ ಬೇಡ ಎಂದಿದ್ದರಿಂದ, ಅದೇ ವಿಷಯಕ್ಕೆ ಅಪ್ಪನ ಬಳಿ ಹಣ ಕೇಳಲು ಸಾಧ್ಯವೇ ಇರಲಿಲ್ಲ. ಈ ಸಂದರ್ಭದಲ್ಲಿಯೇ ನಾನು ಒಂದು ಕೆಟ್ಟ ಕೆಲಸ ಮಾಡಿದೆ: ಅಪ್ಪನ ಜೇಬಿನಿಂದ 10 ರೂಪಾಯಿ ಕದ್ದು ಬಿಟ್ಟೆ. ಅಪ್ಪನ ಜೇಬು ಸದಾ ನೋಟುಗಳಿಂದಲೇ ತುಂಬಿರುವುದು ನನಗೆ ಗೊತ್ತಿತ್ತು. ಹಾಗಾಗಿ, ಈ ಹತ್ತು ರೂಪಾಯಿ ಕಳುವಾಗಿರುವುದು ಅಪ್ಪನಿಗೆ ಗೊತ್ತಾಗಲಾರದು ಎಂದೇ ಭಾವಿಸಿದ್ದೆ. ಆದರೆ, ನಾನು ಅಂಗಡಿಗೆ ಹೋಗುವ ಮೊದಲೇ ಹಣ ಕಳುವಾಗಿರುವ ವಿಷಯ ಅಪ್ಪನಿಗೆ ಗೊತ್ತಾಗಿ ಹೋಯ್ತು. ಅವರು ನಮ್ಮಿಬ್ಬರನ್ನೂ ಕರೆದು, ಒಂಟಿ ಕಾಲಲ್ಲಿ ನಿಲ್ಲಿಸಿದರು. ಆನಂತರ ಬಿದಿರುಕಡ್ಡಿಯನ್ನು ಕೈಗೆತ್ತಿಕೊಂಡು-'ಮೊನ್ನೆ 10 ರೂಪಾಯಿ ಕಳುವಾಗಿದೆ. ನಿಮ್ಮಿಬ್ಬರಲ್ಲಿ ಯಾರು ತಗೊಂಡ್ರಿ ಅಂತ ಹೇಳಿದ್ರೆ ಏಟು ಬೀಳಲ್ಲ. ಹುಂ, ಬೇಗ ಉತ್ತರ ಹೇಳಿ' ಅಂದರು.
ನಾನು ಹೆದರಿಕೆಯಿಂದ ತತ್ತರಿಸಿ ಹೋಗಿದ್ದೆ. ಮಾತೇ ಹೊರಡದೆ ನಡುಗುತ್ತಾ ನಿಂತಿದ್ದೆ. ತಮ್ಮನ ಪರಿಸ್ಥಿತಿ ನನಗಿಂತ ಭಿನ್ನವಾಗಿರಲಿಲ್ಲ. ಐದು ನಿಮಿಷ ಕಳೆದರೂ ನಾವು ಮಾತೇ ಆಡದ್ದರಿಂದ ಸಿಟ್ಟಾದ ತಂದೆಯವರು, ಒಳ್ಳೆಯ ಮಾತಲ್ಲಿ ಹೇಳಿದ್ರೆ ನೀವು ಬಾಯಿ ಬಿಡಲ್ಲ. ಈಗ ಇಬ್ಬರಿಗೂ ಪೆಟ್ಟು ಕೊಡ್ತೇನೆ. ಬಾಯಿ ಬಿಡದವರಿಗೆ ಅದೇ ಸರಿಯಾದ ಶಿಕ್ಷೆ ಎಂದು ಅಬ್ಬರಿಸುತ್ತಾ ಮೇಲೆದ್ದರು. ಮರುಕ್ಷಣವೇ ಅವರ ಮುಂದೆ ನಿಂತ ತಮ್ಮ-'ಅಪ್ಪಾ, ದುಡ್ಡು ಕದ್ದಿದ್ದು ನಾನೇ. ಸಾರಿ ಕಣಪ್ಪಾ' ಅಂದುಬಿಟ್ಟ.
ತಂದೆಯವರ ಸಿಟ್ಟು ನೆತ್ತಿಗೇರಿತು. ಇಷ್ಟು ಹೊತ್ತೂ ಮೂಗನ ಥರಾ ನಿಂತಿದ್ಯಲ್ಲೋ ಕತ್ತೆ ಭಡವಾ, ಈ ಚಿಕ್ಕ ವಯಸ್ಸಿಗೇ ಕದಿಯೋದು ಕಲಿತೆಯೇನೋ, ಇನ್ನೊಂದ್ಸಲ ಹೀಗೆ ಮಾಡ್ತೀಯೇನೋ ಎಂದು ಬೈಯ್ಯುತ್ತಾ ಕೋಲು ಮುರಿದು ಹೋಗುವವರೆಗೂ ಹೊಡೆದರು. ಅವತ್ತು ರಾತ್ರಿ ತಮ್ಮನ ಇಕ್ಕೆಲಗಳಲ್ಲಿ ನಾನು, ಅಮ್ಮ ಇದ್ದೆವು. ಬಾಸುಂಡೆಗಳಿಂದ ಅವನ ಮೈ ಪೂರಾ ಊದಿಕೊಂಡಿತ್ತು. ಅಮ್ಮ ಉಪ್ಪಿನ ಶಾಖ ಕೊಡುತ್ತಾ- ಅಂಥ ಕೆಟ್ಟ ಬುದ್ದಿ ನಿನಗೇಕೆ ಬಂತೋ ರಾಜಾ ಎಂದು ಬಿಕ್ಕಳಿಸಿದರು. ಉಹುಂ, ಆಗಲೂ ತಮ್ಮ ಮಾತಾಡಲಿಲ್ಲ. ಮಧ್ಯರಾತ್ರಿ ನಾನು ದಿಢೀರನೆ ಎದ್ದು ಕೂತು, 'ಹೋ' ಎಂದು ಅಳಲು ಪ್ರಾರಂಭಿಸಿದೆ. ಆಗ ತಮ್ಮ ಹೇಳಿದ: 'ಅಕ್ಕಾ, ಆಗಿದ್ದು ಆಗಿಹೋಯ್ತು. ಈಗ ಅತ್ತು ಪ್ರಯೋಜನವಿಲ್ಲ. ಪ್ಲೀಸ್, ಈಗ ನೆಮ್ಮದಿಯಾಗಿ ನಿದ್ರೆ ಮಾಡು...'
ಹೀಗೇ ವರ್ಷಗಳು ಉರುಳಿದವು. ಈ ನಡುವೆ ಆಗೊಮ್ಮೆ ಈಗೊಮ್ಮೆ ತಮ್ಮನೊಂದಿಗೆ ಕೋಳಿ ಜಗಳ ನಡೆಯುತ್ತಿತ್ತು. ಹೆಚ್ಚಿನ ಸಂದರ್ಭಗಳಲ್ಲಿ ಅವನೇ ಸೋಲುತ್ತಿದ್ದ. ಆಗೆಲ್ಲ, ಹಣ ಕದಿಯದಿದ್ದರೂ, ಹಿಂದೊಮ್ಮೆ ಅವನು ಏಟು ತಿಂದ ಸಂದರ್ಭ ನೆನಪಾಗಿ ನಾಚಿಕೆಯೂ, ಸಂಕಟವೂ ಒಟ್ಟಿಗೇ ಆಗುತ್ತಿತ್ತು. ಹೀಗಿರುವಾಗಲೇ ನಾನು ಪಿಯುಸಿ ಮುಗಿಸಿದ್ದೆ. ತಮ್ಮ ಎಸ್ಸೆಸ್ಸೆಲ್ಸಿಗೆ ಬಂದಿದ್ದ. ಆ ವರ್ಷ ಅಪ್ಪನಿಗೆ ಮೇಲಿಂದ ಮೇಲೆ ಸೋಲುಗಳು ಎದುರಾಗಿದ್ದವು. ವ್ಯಾಪಾರದಲ್ಲಿ ಲಾಸ್ ಆಗಿತ್ತು. ಇಬ್ಬರಿಗೂ ಡೊನೇಷನ್ ಹಣ ಹೊಂದಿಸುವುದು ಹೇಗೆಂದು ತಿಳಿಯದೆ ಅಪ್ಪ ಕಂಗಾಲಾಗಿದ್ದರು. ಅದೊಂದು ಮುಂಜಾನೆ ಮಾಂಗಲ್ಯ ಸರವನ್ನು ಅಪ್ಪನ ಕೈಗಿಟ್ಟು, ಇದನ್ನು ಮಾರಿ ಬಂದ ಹಣದಿಂದ ಮಕ್ಕಳನ್ನು ಓದಿಸೋಣ ಅಂದಳು ಅಮ್ಮ. 'ಇದನ್ನು ಮಾರುವುದರಿಂದ ಬರುವ ಹಣ ಒಬ್ಬರ ವಿದ್ಯಾಭ್ಯಾಸಕ್ಕೂ ಸಾಲುವುದಿಲ್ಲ' ಎನ್ನುತ್ತಾ ಅಪ್ಪ ಕಣ್ತುಂಬಿಕೊಂಡಿದ್ದರು. ಇದನ್ನೆಲ್ಲ ಕೇಳಿಸಿಕೊಂಡ ತಮ್ಮ, ತಂದೆಯವರ ಮುಂದೆ ನಿಂತು ಹೇಳಿಬಿಟ್ಟ: 'ಅಪ್ಪಾ, ಅಕ್ಕನನ್ನು ಓದಿಸು. ನಾನು ಯಾವುದಾದ್ರೂ ಕೆಲಸಕ್ಕೆ ಸೇರಿ ನಿನಗೆ ಸಹಾಯ ಮಾಡ್ತೇನೆ.'
ಕುಲಪುತ್ರ ಅನ್ನಿಸಿಕೊಂಡ ಮಗ ಹೀಗೆ ಮಧ್ಯೆ ಪ್ರವೇಶಿಸಿ ಮಾತಾಡಿದ್ದು ಅಪ್ಪನಿಗೆ ಇಷ್ಟವಾಗಲಿಲ್ಲ. ಅವರು ಏಕಾಏಕಿ ಸಿಟ್ಟಾದರು. ಎದುರು ನಿಂತಿದ್ದ ತಮ್ಮನ ಕೆನ್ನೆಗೆ ಛಟೀರ್ ಎಂದು ಹೊಡೆದು 'ಶಾಲೆ ಬಿಡ್ತೇನೆ ಎಂದು ನನಗೇ ಹೇಳುವಷ್ಟು ಧೈರ್ಯ ಬಂತೇನೋ? ನಾನು ಮನೆ ಮನೇಲಿ ಭಿಕ್ಷೆ ಬೇಡಿದ್ರೂ ಪರವಾಗಿಲ್ಲ. ನಿಮ್ಮಿಬ್ಬರನ್ನೂ ಓದಿಸ್ತೇನೆ' ಎಂದರು.
ನಮ್ಮಿಬ್ಬರ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸುವ ಉದ್ದೇಶದಿಂದ ಅಪ್ಪ, ಮರುದಿನದಿಂದಲೇ ಗೆಳೆಯರು ಹಾಗೂ ಬಂಧುಗಳ ಮನೆಯ ಬಾಗಿಲು ಬಡಿಯತೊಡಗಿದರು. ಎಲ್ಲರ ಮುಂದೆ ದೇಹೀ ಎಂದು ಅಂಗಲಾಚಿದ್ದೇ ಬಂತು. ನಯಾ ಪೈಸೆಯ ಪ್ರಯೋಜನವಾಗಲಿಲ್ಲ. ಈ ಸಂದರ್ಭದಲ್ಲಿ 'ಅಕ್ಕಾ, ಡಿಗ್ರಿ ಮುಗಿಸಬೇಕು ಎಂಬುದು ಎಲ್ಲರ ಕನಸಾಗಿರುತ್ತೆ. ನೀನೀಗ ಆ ಸ್ಟೇಜ್‌ನಲ್ಲಿ ನಿಂತಿದೀಯ. ನಾನೂ ಮನೇಲಿದ್ರೆ ನಿನ್ನನ್ನು ಕಾಲೇಜು ಬಿಡಿಸಿ ನನ್ನನ್ನು ಓದಿಸ್ತಾರೆ. ಹಾಗಾಗೋದು ಬೇಡ. ನಾನು ಎಲ್ಲಾದ್ರೂ ಕೆಲ್ಸ ಮಾಡಿ ಬದುಕ್ತೇನೆ. ಹೆತ್ತವರಿಗೆ ಹೊರೆಯಾಗಲು ನನಗೆ ಇಷ್ಟವಿಲ್ಲ' ಎಂದು ನನಗೊಂದು ಪತ್ರ ಬರೆದಿಟ್ಟು, ಪುಟ್ಟ ಲಗೇಜಿನೊಂದಿಗೆ ನನ್ನ ತಮ್ಮ ಮನೆ ಬಿಟ್ಟು ಓಡಿ ಹೋಗಿದ್ದ. ಈ ಘಟನೆಯಿಂದ ಶಾಕ್‌ಗೆ ಒಳಗಾದ ಅಪ್ಪ-ಅಮ್ಮ ಒಂದೆರಡು ದಿನ ಗೋಳಾಡಿದರು. ತಮ್ಮನ ಹುಡುಕಾಟಕ್ಕೆ ನಿಂತರು. ಆತ ಸಿಗದೇ ಹೋದಾಗ ತಮ್ಮ ಹಣೆಬರಹವನ್ನು ಹಳಿದುಕೊಂಡರು. ಕೆಲದಿನಗಳ ನಂತರ, ಪದವಿ ಓದುವ ಉದ್ದೇಶದಿಂದ ನಾನು ನಗರದಲ್ಲಿದ್ದ ಹಾಸ್ಟೆಲ್ ಸೇರಿಕೊಂಡೆ.
ಅವತ್ತು ನೋಟ್ಸ್ ಬರೆಯುತ್ತಾ ಕೂತಿದ್ದಾಗ ವಾಚ್‌ಮನ್ ಬಂದು ಹೇಳಿದ: 'ಮೇಡಂ ಯಾರೋ ಹಳ್ಳಿಯಿಂದ ನಿಮ್ಮನ್ನು ನೋಡಲು ಬಂದಿದ್ದಾರೆ. ಗೇಟ್‌ನಿಂದಾಚೆ ನಿಂತಿದ್ದಾರೆ...' ಯಾರು ಬಂದಿರಬಹುದು ಎಂದು ಎಷ್ಟು ಯೋಚಿಸಿದರೂ ಹೊಳೆಯಲಿಲ್ಲ. ಕುತೂಹಲದಿಂದಲೇ ಹೊರಗೆ ಬಂದು ನೋಡಿದರೆ ಅಲ್ಲಿ ನಿಂತಿದ್ದವನು ನನ್ನ ತಮ್ಮ! ಆತ ಕೃಶನಾಗಿದ್ದ. ಕೊಳೆ ಬಟ್ಟೆಗಳನ್ನು ಧರಿಸಿದ್ದ. ಅವನನ್ನು ಆಕ್ಷೇಪಿಸುತ್ತಾ ಕೇಳಿದೆ: 'ಯಾರೋ ಹಳ್ಳಿಯವರು ಬಂದಿದ್ದಾರೆ' ಅಂತ ಯಾಕೋ ಹೇಳಿದೆ? ನಮ್ಮ ಅಕ್ಕನನ್ನು ಕರೆಯಿರಿ ಅಂದಿದ್ರೆ ನಿನ್ನ ಗಂಟು ಹೋಗ್ತಿತ್ತಾ?' ಅವನು ಒಮ್ಮೆ ನಸು ನಕ್ಕು ಹೇಳಿದ: 'ಒಂದ್ಸಲ ನನ್ನ ಬಟ್ಟೆ ನೋಡು. ಅವು ಪೂರ್ತಿ ಗಲೀಜಾಗಿವೆ. ನಾನು ಕೊಳಕನ ಥರಾನೇ ಇದೀನಿ. ಇಂಥವನು ನಿನ್ನ ತಮ್ಮ ಅಂದ್ರೆ ನಿನ್ನ ಫ್ರೆಂಡ್ಸ್ ಎಲ್ಲಾ ನಗ್ತಾರೆ. ನಿನ್ನನ್ನು ಆಡಿಕೋತಾರೆ ಅನ್ನಿಸ್ತು. ಅದಕ್ಕೇ ಹಳ್ಳಿಯವನು ಅಂತ ಹೇಳ್ದೆ...' ಹೀಗೆಂದವನು ಪ್ಯಾಂಟ್ ಜೇಬಿನಿಂದ ಒಂದು ಪುಟ್ಟ ಕವರ್ ತೆಗೆದುಕೊಟ್ಟ. ಅದರಲ್ಲಿ ಬಣ್ಣಬಣ್ಣದ ಹೇರ್‌ಕ್ಲಿಪ್, ಕಡಗ ಹಾಗೂ ನಾನಾ ಡಿಸೈನ್‌ನ ಓಲೆಗಳಿದ್ದವು. 'ಕಾಲೇಜಿಗೆ ಹೋಗುವ ಹೆಚ್ಚಿನ ಹುಡುಗಿಯರು ಇಂಥದನ್ನು ಹಾಕ್ಕೊಂಡು ಓಡಾಡ್ತಾರೆ. ಇಂಥವನ್ನು ಹಾಕ್ಕೊಂಡ್ರೆ ನೀನೂ ಮುದ್ದಾಗಿ ಕಾಣಿಸ್ತೀಯ ಅನ್ನಿಸ್ತು. ಅದಕ್ಕೆ ತಗೊಂಡ್‌ಬಂದೆ' ಅಂದ. ಅವನ ಪರಿಶುದ್ಧ ಮನಸ್ಸು ಕಂಡು ಕಣ್ತುಂಬಿ ಬಂತು. ನಾನು ನಿಂತಿರೋದು  ಲೇಡಿಸ್ ಹಾಸ್ಟೆಲ್‌ನ ಹೊರಗೆ ಎಂಬುದನ್ನು ಮರೆತು, ಅವನನ್ನು ತಬ್ಬಿಕೊಂಡು ಅತ್ತು ಹಗುರಾದೆ. ಬೀಳ್ಕೊಡುವ ಮುನ್ನ ಅವನ ವಿಳಾಸ ತಗೊಂಡೆ. ವಾರದ ನಂತರ ಅವನು ತಂದೆಯವರನ್ನು ಭೇಟಿಯಾದ ಸುದ್ದಿ ಬಂತು.
ಡಿಗ್ರಿ ಮುಗೀತಿದ್ದಂತೆಯೇ, ಶ್ರೀಮಂತ ವರನೊಂದಿಗೆ ನನ್ನ ಮದುವೆ ನಿಶ್ಚಯವಾಯಿತು. ನನ್ನ ಪರೀಕ್ಷೆ ಮುಗಿದ ಮರುದಿನವೇ ಗಂಡಿನ ಕಡೆಯವರೆಲ್ಲ ಮನೆಗೆ ಬಂದರು. ನಾನು ಹಿಂದಿನ ದಿನವಷ್ಟೇ ಮನೆ ತಲುಪಿದ್ದೆ. ಈ ವೇಳೆಗೆ, ವಯಸ್ಸಿನ ಕಾರಣದಿಂದ ಅಪ್ಪ-ಅಮ್ಮ ನಿತ್ರಾಣರಾಗಿದ್ದರು. ಆದರೆ ನಮ್ಮ ಮನೆ ಲಕಲಕ ಹೊಳೆಯುತ್ತಿತ್ತು. ಗಂಡಿನ ಕಡೆಯವರು ಮನೆಯ ಅಂದ ಚೆಂದ ಕಂಡು ಖುಷಿಯಾಗಿದ್ದರು. ಅವತ್ತು ಇಡೀ ದಿನ ತಮ್ಮ ಕಾಣಿಸಲೇ ಇಲ್ಲ. ಗಂಡಿನ ಕಡೆಯವರೆಲ್ಲ ಹೋದ ನಂತರ ಅಮ್ಮನ್ನು ಕೇಳಿದೆ. 'ಸರಭರನೆ ಹತ್ತು ಹೆಜ್ಜೆ ಹೋಗುವುದಕ್ಕೂ ತುಂಬಾ ಕಷ್ಟಪಡ್ತೀಯ. ಹಾಗಿದ್ರೂ ಮನೆಯನ್ನು ಇಷ್ಟೊಂದು ನೀಟ್ ಆಗಿ ಇಟ್ಟಿದ್ದೀಯ. ಇದು ನಿನಗೆ ಹೇಗೆ ಸಾಧ್ಯವಾಯ್ತು?' 'ಇದೆಲ್ಲಾ ನಿನ್ನ ತಮ್ಮನ ಕೆಲಸ ಕಣಮ್ಮಾ. ಗಂಡಿನ ಕಡೆಯವರು ಬರ್ತಾರೆ ಅಂತ ಗೊತ್ತಾದ ದಿನದಿಂದ ಅವನು ಹಗಲೂ ರಾತ್ರಿ ದುಡಿದ. ನಿನ್ನೆ ಆಯತಪ್ಪಿ ಜಾರಿ ಬಿದ್ದು ಆಸ್ಪತ್ರೆ ಸೇರಿದ್ದಾನೆ' ಎಂದಳು ಅಮ್ಮ. ತಕ್ಷಣವೇ ಬಿಟ್ಟ ಬಾಣದಂತೆ ಆಸ್ಪತ್ರೆಗೆ ಹೋದೆ. ಕೈ-ಕಾಲಿಗೆ ಬ್ಯಾಂಡೇಜ್ ಹಾಕಿಸಿಕೊಂಡು ಮಲಗಿದ್ದವನನ್ನು ಕಂಡು-'ಏನು ಮಾಡಿಕೊಂಡ್ಯೋ, ಏನಿದೆಲ್ಲಾ? ತುಂಬಾ ನೋವಿದೆಯಾ?' ಎಂದು ಪ್ರಶ್ನಿಸಿದರೆ, ಅವನು ಹೇಳಿದ: 'ಅಕ್ಕಾ, ನಿನ್ನ ನೆಮ್ಮದಿಯ ಬದುಕಿಗಾಗಿ ಇಂಥ ಸಾವಿರ ಪೆಟ್ಟು ಮಾಡಿಕೊಳ್ಳಲೂ ನಾನು ಸಿದ್ಧ!'
ಮದುವೆಯಾದ ಕೆಲವೇ ದಿನಗಳಲ್ಲಿ ಯಜಮಾನರೊಂದಿಗೆ ನಮ್ಮ ಮನೆಯ ಕಥೆ ಹೇಳಿಕೊಂಡೆ. ಅವರು, ನಮ್ಮ ತಂದೆ-ತಾಯಿಯ ಎದುರು ನಿಂತು ಹೇಳಿದರು: 'ನೀವೂ ನಮ್ಮೊಂದಿಗೆ ಉಳಿದುಕೊಳ್ಳಿ. ಅದರಿಂದ ಯಾರಿಗೂ ತೊಂದರೆಯಿಲ್ಲ...' ಈ ಆಹ್ವಾನವನ್ನು ಅಪ್ಪ-ಅಮ್ಮ ನಯವಾಗಿಯೇ ನಿರಾಕರಿಸಿದರು. 2 ದಿನಗಳ ನಂತರ ದಿಢೀರ್ ಎದುರಾದ ತಮ್ಮ ಹೇಳಿದ: 'ನಮ್ಮ ಮನೆಯವರಿಗಾಗಿ ಯಾವುದಕ್ಕೂ ಪ್ರಾರ್ಥಿಸಬೇಡ. ಹಾಗೇನಾದ್ರೂ ಮಾಡಿದ್ರೆ ಮದುವೆ ಆಗ್ತಿದ್ದಂಗೇ ಗಂಡನನ್ನು ಬುಟ್ಟಿಗೆ ಹಾಕ್ಕೊಂಡ್ಳು ಎಂಬ ಅಪಖ್ಯಾತಿ ನಿನ್ನದಾಗುತ್ತೆ...'
ಈ ಮಧ್ಯೆ ನನ್ನವರಿಗೆ ಕಂಪನಿಯ ಎಂ.ಡಿ. ಹುದ್ದೆಗೆ ಪ್ರಮೋಷನ್ ಸಿಕ್ಕಿತು. 'ನಾನೀಗ ಒಳ್ಳೆಯ ಪೋಸ್ಟಲ್ಲಿ ಇದ್ದೀನಿ. ಕಂಪನಿಗೆ ಮ್ಯಾನೇಜರ್‌ಗಳನ್ನು ನೇಮಕ ಮಾಡಿಕೊಳ್ಳುವ ಸ್ವಾತಂತ್ರ್ಯ ನನಗಿದೆ. ನಾನೇ ಕೆಲಸ ಕೊಡ್ತೇನೆ. ಪ್ಲೀಸ್ ಬನ್ನಿ' ಎಂದು ಪ್ರೀತಿಯಿಂದಲೇ ನನ್ನವರು ಕರೆದರು. ಆದರೂ ಅವನು ಬರಲಿಲ್ಲ. ಇದಾಗಿ ಹತ್ತೇ ದಿನಕ್ಕೆ, ಮನೆ ಕಟ್ಟಿಸುವ ಕೆಲಸದ ಗುತ್ತಿಗೆ ಹಿಡಿದಿದ್ದ ತಮ್ಮ, ಎರಡಂತಸ್ತಿನ ಬಿಲ್ಡಿಂಗ್‌ನಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾನೆ ಎಂದು ಸುದ್ದಿ ಬಂತು. ಎಲ್ಲರೂ ಆಸ್ಪತ್ರೆಗೆ ಧಾವಿಸಿದೆವು. ನನಗೆ ದುಃಖ ತಡೆಯಲು ಸಾಧ್ಯವಾಗಲಿಲ್ಲ. ಅವನ ಕೈ ಹಿಡಿದುಕೊಂಡು ಬಿಕ್ಕಳಿಸುತ್ತಲೇ ಹೀಗೆಂದೆ: ಇದೆಲ್ಲಾ ನಿನಗೆ ಬೇಕಿತ್ತಾ? ನನ್ನ, ಯಜಮಾನರ ಮಾತಿನಂತೆ ನಡೆದಿದ್ರೆ ಕಂಪನಿಯ ಮ್ಯಾನೇಜರ್ ಆಗಿ ನೆಮ್ಮದಿಯಿಂದ ಇರಬಹುದಿತ್ತು ಅಲ್ವಾ? ಇದೆಂಥ ಹಠ ನಿನ್ನದು?
ನನ್ನ ತಮ್ಮ ಆಗಲೂ ಸಂಯಮ ಕಳೆದುಕೊಳ್ಳಲಿಲ್ಲ. ಅದೇ ಶಾಂತ ಸ್ವರದಲ್ಲಿ ಹೇಳಿದ: 'ಅಕ್ಕಾ, ಒಮ್ಮೆ ಸೂಕ್ಷ್ಮವಾಗಿ ಯೋಚಿಸು. ಭಾವನಿಗೆ ಈಗ ತಾನೆ ಪ್ರಮೋಷನ್ ಸಿಕ್ಕಿದೆ. ಅವರಿಗೆ ಶತ್ರುಗಳು ಹಾಗೂ ಮಿತ್ರರು ಸಮ-ಸಮ ಎಂಬಂತೆ ಇರುತ್ತಾರೆ. ಅಂಥ ಸಂದರ್ಭದಲ್ಲಿ ನಾನು ಮ್ಯಾನೇಜರ್ ಎಂದು ಸೇರಿಕೊಂಡಿದ್ದರೆ, ಭಾವನ ಮೇಲೆ ಅಧಿಕಾರ ದುರುಪಯೋಗದ ಆರೋಪ ಬರುತ್ತಿತ್ತು. ಅವರ ಮರ್ಯಾದೆ ಹೋಗುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ಒಂದು ದೊಡ್ಡ ಕಂಪನಿಯ ಮ್ಯಾನೇಜರ್ ಆಗಬೇಕಾದರೆ ಕನಿಷ್ಠ ಡಿಗ್ರಿ ಆಗಿರಬೇಕು. ಆ ಅರ್ಹತೆ ನನಗಿಲ್ಲ. ಇದೆಲ್ಲ ಗೊತ್ತಿದ್ದ್ದೂ ನಾನು ಮ್ಯಾನೇಜರ್ ಆಗಿದ್ದಿದ್ರೆ ಭಾವನ ವಿಷಯವಾಗಿ ಹೇಗೆಲ್ಲಾ ರೂಮರ್‌ಗಳು ಹಬ್ಬಿರುತ್ತಿದ್ದವೋ ಅಂದಾಜು ಮಾಡಿಕೋ...' ಅವನ ದೂರದೃಷ್ಟಿಯನ್ನು ಅರ್ಥ ಮಾಡಿಕೊಂಡ ಮೇಲೆ ಏನು ಮಾತಾಡಬೇಕೆಂದು ಯಾರಿಗೂ ಹೊಳೆಯಲಿಲ್ಲ.
ಆನಂತರದಲ್ಲಿ ತಮ್ಮ ತುಂಬ ಬೇಗನೆ ಚೇತರಿಸಿಕೊಂಡ. ಕೆಲಸದಲ್ಲಿ ಅವನಿಗಿರುವ ಶ್ರದ್ಧೆಯನ್ನು ಗಮನಿಸಿದ ಶ್ರೀಮಂತರೊಬ್ಬರು, ಮನೆ ಅಳಿಯನನ್ನಾಗಿ ಮಾಡಿಕೊಳ್ಳಲು ಮುಂದೆ ಬಂದರು. ಮದುವೆಯ ರಿಸೆಪ್ಶ್‌ನ್‌ನಲ್ಲಿ ತಮ್ಮನ ಕೈಗೆ ಮೈಕ್ ಕೊಟ್ಟು, ಆರ್ಕೆಸ್ಟ್ರಾ ತಂಡದ ಮುಖ್ಯಸ್ಥರು ಕೇಳಿದರು: 'ಜೀವನದಲ್ಲಿ  ನೀವು ಯಾವತ್ತೂ ಮರೆಯಲಾಗದಂಥ ವ್ಯಕ್ತಿ ಯಾರು?
ಮದುವೆಯ ಈ ಸಂದರ್ಭದಲ್ಲಿ ಅವನು ಹೆಂಡತಿಯ ಹೆಸರು ಹೇಳುತ್ತಾನೆಂದೇ ಎಲ್ಲರೂ ಭಾವಿಸಿದ್ದರು. ನಾನೂ ಹಾಗೇ ಅಂದುಕೊಂಡಿದ್ದೆ. ಆದರೆ ಎಲ್ಲರ ನಿರೀಕ್ಷೆಗೆ ವಿರುದ್ಧವಾಗಿ ಉತ್ತರಿಸಿದ ನನ್ನ ತಮ್ಮ-ಸಾಯುವವರೆಗೂ ನಾನು ಮರೆಯಲಾಗದಂಥ ವ್ಯಕ್ತಿಯೆಂದರೆ ನಮ್ಮ ಅಕ್ಕ' ಎಂದು ಬಿಟ್ಟ. ಅವನ ಉತ್ತರದಿಂದ ಎಲ್ಲರಿಗೂ ಶಾಕ್ ಆಯಿತು. ಅದನ್ನು ಗಮನಿಸಿದ ಆತ ಹೀಗೆಂದ: 'ಬಾಲ್ಯದಲ್ಲಿ ನಾನು ಪರಮತುಂಟನಾಗಿದ್ದೆ. ಸಾಕ್ಸ್, ಶೂ, ಪೆನ್ನು, ಪೆನ್ಸಿಲ್, ಬ್ಯಾಗು... ಹೀಗೆ ಪ್ರತಿಯೊಂದನ್ನೂ ಹಾಳು ಮಾಡುತ್ತಿದ್ದೆ. ಇಂಥ ಸಂದರ್ಭಗಳಲ್ಲಿ ತನ್ನ ವಸ್ತುಗಳನ್ನೆಲ್ಲ ನನ್ನ ಮುಂದಿಟ್ಟು ನನ್ನ ಸಂತೋಷವನ್ನು ಹೆಚ್ಚಿಸಿದವಳು ನನ್ನ ಅಕ್ಕ. ನನಗೆ ಶೂ ಬಿಚ್ಚಿಕೊಟ್ಟ ಕಾರಣದಿಂದ ಆಕೆಯ ಪಾದಗಳಿಗೆ ಮುಳ್ಳು ಚುಚ್ಚಿಕೊಂಡವು. ಆಕೆಯ ಪೆನ್ನು, ಪೆನ್ಸಿಲ್, ಜಾಮಿಟ್ರಿ ಬಾಕ್ಸ್‌ಗಳು ನನ್ನಲ್ಲಿದ್ದುದರಿಂದ ಶಿಕ್ಷಕರಿಂದ ಆಕೆಗೆ ಪದೇ ಪದೆ ಪೆಟ್ಟು ಬಿದ್ದವು. ಇಂಥದಕ್ಕೆಲ್ಲ ಒಮ್ಮೆಯೂ ಬೇಸರ ಮಾಡಿಕೊಳ್ಳದ ತಾಯಿ ಮನಸ್ಸು ಅವಳದು. ಈಗ ಹೇಳಿ; ಅಂಥವಳನ್ನು ನಾನು ಮರೆಯುವುದಾದರೂ ಹೇಗೆ?'
ತಮ್ಮನ ಮಾತುಗಳನ್ನು ಕೇಳಿದ ಜನ ಭಾವುಕರಾಗಿ ಕಣ್ತುಂಬಿಕೊಂಡರು. ನಂತರ ಒಂದೇ ಸಮನೆ ಚಪ್ಪಾಳೆ ಹೊಡೆದರು.

-ಎ.ಆರ್. ಮಣಿಕಾಂತ್
armanikanth@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!