ಅಂಕಣಗಳು

ನಮ್ಮ ಗ್ರಹಚಾರವೇ ನೆಟ್ಟಗಿಲ್ಲ, ಮತ್ತೊಂದು ಗ್ರಹ ಬೇಕಾ?

ನಮ್ಮದು ಚಿತ್ರ ವಿಚಿತ್ರವಾದ ಕನಸು. ಬಹುಶಃ ಮನುಷ್ಯ ಹುಟ್ಟಿದ ದಿನದಂದೇ ಈ ಕನಸೂ...

ನಮ್ಮದು ಚಿತ್ರ ವಿಚಿತ್ರವಾದ ಕನಸು. ಬಹುಶಃ ಮನುಷ್ಯ ಹುಟ್ಟಿದ ದಿನದಂದೇ ಈ ಕನಸೂ ಹುಟ್ಟಿಕೊಂಡಿರಬೇಕು. ಆಕಾಶಕ್ಕೆ ಏಣಿ ಹಾಕುವ ಸಾಹಸದಲ್ಲಿ ನಾವೆಂದಿಗೂ ಹಿಂದೆ ಬಿದ್ದವರೇ ಅಲ್ಲ. ಭೂಮಿಯ ಮೇಲೆ ನಿಂತುಕೊಂಡೇ ಆಗಸದತ್ತ ದೃಷ್ಟಿ ನೆಟ್ಟಿರುತ್ತೇವೆ. ನಮ್ಮ ನೆಟ್ಟು, ಇಂಟರ್ನೆಟ್ಟು ಇತ್ಯಾದಿ ಇತ್ಯಾದಿ ಎಲ್ಲ ತಿರಸಟ್ಟುಗಳಿಗೂ ಆಗಸವೇ ವೇದಿಕೆ. ಆವತ್ತಿಂದ ಈವತ್ತಿನವರೆಗೂ ನಾವು ನಮ್ಮ ಕನಸಿನ ಮತ್ತೊಂದು ಭೂಮಿಯ ಹುಡುಕಾಟದಲ್ಲಿ ಲಕ್ಷಾಂತರ ಕೋಟಿ ಹಣವನ್ನು ಆಗಸಕ್ಕೆ ಹಾರಿಸಿಬಿಟ್ಟಿದ್ದೇವೆ. ಬಾನಂಗಳದಲ್ಲಿ, ಅದರಿಂದಾಚೆಗೆ ಎಲ್ಲಾದರೂ ಒಂದೇ ಒಂದು ಪ್ರತಿಭೂಮಿ ಇದ್ದಿರಬಹುದೇ? ಅಲ್ಲೊಂದಿಷ್ಟು ನೀರು, ಗಾಳಿಯ ಸುಳಿವು ಸಿಕ್ಕೀತೆ ಎಂಬ ಹುಡುಕಾಟದಲ್ಲಿ ತಾಳ್ಮೆ ಕಳೆದುಕೊಂಡದ್ದೇ ಇಲ್ಲ. ಪ್ರತಿಭೂಮಿಯ ಕನಸಿಗೆ ಇನ್ನಷ್ಟು ಕಲ್ಪನೆಯನ್ನು ಕಟ್ಟಿ ಜೀವಿಗಳ ಲೋಕವೊಂದನ್ನು ಕಾಣಬೇಕು, ಅಲ್ಲಿ ಹೋಗಿ ನಾವು ನಮ್ಮದೇ ಸಾಮ್ರಾಜ್ಯವನ್ನು ನಿರ್ಮಿಸಬೇಕು. ಅದರ ಅಧಿಪತಿಗಳಾಗಿ ಮೆರೆಯಬೇಕೆಂದಿರುವ ಭೂಮಿಜರ ಆಸೆಯಲ್ಲಿ ಎಂದಿಗೂ ಪ್ರತಿಮಾನವನಿಗೆ ಜಾಗವಿಲ್ಲ. ಹೀಗಾಗಿಯೇ ಎಲ್ಲ ಸಿನೆಮಾಗಳಲ್ಲಿ, ಕಥೆಗಳ ಫ್ಯಾಂಟಸಿಯಲ್ಲಿ ನಮ್ಮ ಕಲ್ಪನೆ ಅನ್ಯಗ್ರಹಜೀವಿಗಳ ಸೃಷ್ಟಿಗೆ ಸೀಮಿತವೇ ಹೊರತೂ ಅಲ್ಲಿ ಮಾನವನಿಲ್ಲ.
ಪೈಟೋಟಿಗೆ ಸಿದ್ಧವಿಲ್ಲದ ನಮ್ಮ ಮನಸ್ಥಿತಿ ಮತ್ತೊಂದು ಗ್ರಹದ ಮಾನವನನ್ನು, ಅಲ್ಲಿ ನಮ್ಮಂಥದ್ದೇ ಬದುಕನ್ನು ಒಪ್ಪಿಕೊಳ್ಳಲು ಸಿದ್ಧವೇ ಇಲ್ಲ. ಅದರ ಬದಲು ಉಳಿದೆಲ್ಲವೂ ಈ ಭೂಮಿಯ ಮೇಲಿದ್ದಂತೆಯೇ ಇರಲಿ, ಮನುಷ್ಯ ಮಾತ್ರ ಇಲ್ಲಿಂದಲೇ ಅಲ್ಲಿಗೆ ಪಯಣಿಸಲಿ ಎಂಬ ಹೆಬ್ಬಯಕೆ ಹೊತ್ತು ಮೇಲಿಂದ ಮೇಲೆ ಬಾನಯಾನ ನಡೆಸುತ್ತಲೇ ಬರುತ್ತಿದ್ದೇವೆ. ಅದೃಷ್ಟವೋ, ದುರದೃಷ್ಟವೋ ಅಂಥದ್ದು ಪತ್ತೆಯಾಗಿಲ್ಲ. ಚಂದ್ರನಲ್ಲಿ ನೀರಿತ್ತೋ, ಇಲ್ಲವೋ... ಇನ್ನೂ ಖಚಿತವಾಗಿಲ್ಲ. ಸದ್ಯಕ್ಕೆ ನಮ್ಮ ಮುಗಿಯದ ಬಾನಯಾನಕ್ಕೆ ಅವನು ತಂಗುದಾಣವಾಗಿ ಪರಿಗಣಿತನಾಗಿದ್ದಾನೆ. ಮಂಗಳನ ವಿಚಾರದಲ್ಲಿ ತರ್ಕಕ್ಕೆ ಕೊನೆ ಸಿಕ್ಕಿಲ್ಲ. ಮತ್ತೆಲ್ಲೋ ಉಪಗ್ರಹವೊಂದು ಭೂಮಿಯನ್ನು ಹೋಲುತ್ತದೆ ಎಂಬ ಗುಲ್ಲು ವಿಜ್ಞಾನಿಗಳ ವಲಯದಲ್ಲಿ ಹಬ್ಬಿತ್ತು. ಸದ್ಯಕ್ಕಂತೂ ನಮಗೆ ಇರುವುದೊಂದೇ ಭೂಮಿ. ಹೀಗಾಗಿ ಕಳೆದುಕೊಂಡ ಬಾಲವನ್ನು ಮನುಷ್ಯ ಹೆಚ್ಚಿಗೆ ಬಿಚ್ಚಲು ಹೋಗುತ್ತಿಲ್ಲ. ಪ್ರತಿಭೂಮಿಯ ಬಗೆಗಿನ ಇಷ್ಟೆಲ್ಲಾ ಹುಡುಕಾಟಕ್ಕೆ ಕಾರಣವಾದರೂ ಏನು? ಇರುವ ಭೂಮಿಯಲ್ಲಿ ನಮಗೆ ಜಾಗ ಸಾಕಾಗುತ್ತಿಲ್ಲ. ಇದ್ದ ಜಾಗವನ್ನು ಸುಸ್ಥಿತಿಯಲ್ಲಿಟ್ಟುಕೊಂಡಿಲ್ಲ.
ಸದ್ಯಕ್ಕಂತೂ ಸೌರಮಂಡಲದಲ್ಲಿ ಜೀವಿಗಳನ್ನು ಹೊಂದಿರುವ ಏಕೈಕ ಗ್ರಹ ನಮ್ಮ ಭೂಮಿ. ವಿಜ್ಞಾನಿಗಳು ಹೇಳುವ ಪ್ರಕಾರ, ಈ ಭೂಮಿಯ ಮೇಲೆ ಜೀವಿಗಳ ಅಸ್ತಿತ್ವ ಕಾಣಿಸಿಕೊಂಡು ಸುಮಾರು 300 ಶತಕೋಟಿ ವರ್ಷಗಳಾಯಿತಂತೆ. ಮೊಟ್ಟಮೊದಲು ಜೀವಿ ಅದ್ಯಾವುದೆಂದು ಗೊತ್ತಿಲ್ಲದಿದ್ದರೂ ಅವು ಹಾಗೆಯೇ ಬೆಳೆಯುತ್ತಾ ಸಾಗಿ, ವೈವಿಧ್ಯಮಯ ಆಕಾರವನ್ನು ಪಡೆದುಕೊಂಡವಂತೆ. ಅಂಥ ಬೆಳವಣಿಗೆ ನಿಲ್ಲಲೇ ಇಲ್ಲ. ನಿತ್ಯ ನಿರಂತರ ಸಾಗಿದ ಇಂಥ ಜೀವ ಅಭಿವೃದ್ಧಿ ಇಂದಿನ ಜೈವಿಕ ಲೋಕವನ್ನು ಸೃಷ್ಟಿಸಿತು. ಅಂದಾಜು ಇವತ್ತು ಭೂಮಿಯ ಮೇಲೆ ಏನಿಲ್ಲವೆಂದರೂ 12ರಿಂದ 20 ಶತಕೋಟಿ ಜೀವಿಗಳಿವೆ ಎನ್ನುತ್ತಾರೆ ವಿಜ್ಞಾನಿಗಳು. ಆದರೆ ಈ ವರೆಗೆ ಸ್ಪಷ್ಟವಾಗಿ ಅಭ್ಯಾಸಕ್ಕೆ ದಕ್ಕಿದ್ದು ಸುಮಾರು 14 ಶತಕೋಟಿ ಜೀವಿಗಳು ಮಾತ್ರವೇ. ಅದರಲ್ಲೂ 2,25,000 ಗಿಡಗಳು, 23 ಸಾವಿರ ಶಿಲೀಂದ್ರಗಳು, 2500 ಆಲ್ಗೆಗಳು, 900 ರೀತಿಯ ಬ್ರಯೋಫೈಟಾಗಳು, 250 ರೀತಿಯ ಸಸ್ತನಿಗಳು, 75,000 ಕೀಟಗಳು, 32,000 ಮೀನುಗಳು. 15,000 ಇರುವೆಗಳು 450 ಸರೀಸೃಪಗಳು ಹೀಗೆ ಪಟ್ಟಿ ಮುಂದುವರಿಯುತ್ತಾ ಹೋಗುತ್ತದೆ.
ಹಾಗೆ ನೋಡಿದರೆ ಇಂಥ ವೈವಿಧ್ಯಮಯ, ಸಮೃದ್ಧ ಜೀವರಾಶಿಯುಳ್ಳ ಮತ್ತೊಂದು ಭೂಮಿ ಈ ಸೃಷ್ಟಿಯಲ್ಲೇ ಇರಲಿಕ್ಕೆ ಸಾಧ್ಯ ಇಲ್ಲ. ಪ್ರಾಣಿಗಳು, ಅದಕ್ಕೆ ಪೂರಕ ಸಸ್ಯವರ್ಗ- ಹೀಗೆ ಪರಸ್ಪರ ಅವಲಂಬಿಗಳಾಗೇ ಬೆಳೆಯುತ್ತಾ ಬಂದಿವೆ. ವಿಕಾಸವೂ ಇಂಥ ಅವಲಂಬನೆಯನ್ನೇ ಪುಷ್ಟೀಕರಿಸುತ್ತದೆ. ಅದಕ್ಕಾಗಿಯೇ ಪ್ರಾಚೀನ ಕಾಲದಿಂದಲೂ ನಾವು ಪ್ರಕೃತಿಯನ್ನು ಆರಾಧಿಸುತ್ತಲೇ ಬಂದಿದ್ದೇವೆ. ಅಲ್ಲಿ ವಿವೇಕ- ವಿಕಾಸ ಎರಡೂ ಮಿಳಿತಗೊಂಡಿದ್ದವು. ಬದುಕೂ ಹಾಗೆಯೇ ವಿಚಾರಪರವಾಗಿಯೇ ಸಾಗಿಕೊಂಡು ಬಂದಿತ್ತು. ಇವತ್ತು ವಿಚಾರ ಕಾಣೆಯಾಗಿದೆ, ವಿವೇಕ ಮರೆತಿದ್ದೇವೆ. ವಿಕಾಸ ನಿಂತುಹೋಗಿದೆ. ಪ್ರಕೃತಿಯಿಂದ ಹೊರತಾದ ಮತ್ತಾವುದೇ ವಿಕಾಸಕ್ಕೆ ಅರ್ಥವೇ ಇಲ್ಲ. ಅತಿ ಅಸೆಯ ಜತೆಗೆ ಅಭಿವೃದ್ಧಿಯ ಹುಸಿ ನಂಬಿಕೆಗೆ ಜೋತು ಬಿದ್ದು ಭೂಮಿಯ ಸಮತೋಲನ ತಪ್ಪಿದೆ. ಮನುಷ್ಯ ತನ್ನ ವಿಕಾಸದ ಭರದಲ್ಲಿ ಪರಿಸರವನ್ನು ಮುರುಟಿಸಿದ್ದಾನೆ.
ಈ ಸೃಷ್ಟಿಯಲ್ಲಿ ಕಾಡು ಎಂಬ ಎರಡಕ್ಷರದ ಮೇಲೆಯೇ ಉಳಿದೆಲ್ಲ ಜೀವಿಗಳ ಬದುಕೂ ನಿಂತಿತ್ತು. ಅದನ್ನು ನಮ್ಮ ಹಿಂದಿನ ತಲೆಮಾರು ಅರ್ಥಮಾಡಿಕೊಂಡಷ್ಟು ನಾವು ಅರ್ಥಮಾಡಿಕೊಂಡಿಲ್ಲ. ಪರಿಣಾಮ ಕಾಡಿನೊಂದಿಗೆ ನಾಡೂ ವಿನಾಶದತ್ತ ಸಾಗುತ್ತಿದೆ. ಒಂದು ಉದಾಹರಣೆ ತೆಗೆದುಕೊಳ್ಳೋಣ. ಮಲೆನಾಡಿನ ಸಾಮಾನ್ಯ ಸೊಪ್ಪಿನ ಬೆಟ್ಟದಲ್ಲಿ ಮೊದಲ ಮಳೆಗೆ ಮುನ್ನ ಒಂದಷ್ಟು ಅಗೆತಗಳು ನಡೆಯುತ್ತಿದ್ದವು. ಹಾಗೆ ಅಗೆದುಬಿಟ್ಟ ಜಾಗದಲ್ಲಿ ಒಂದಷ್ಟು ಮುಳ್ಳುಕಂಟಿಗಳು, ಪೊದೆ, ಕುರುಚಲು ಮೊಳೆಯುತ್ತಿದ್ದವು. ಅದರ ಸಾಂದ್ರತೆಯಡಿಯಲ್ಲಿ ಬೆಲೆಬಾಳುವ ಸಸ್ಯ ವೈವಿಧ್ಯವೂ ಸೃಷ್ಟಿಯಾಗುತ್ತಿದ್ದವು. ಸುತ್ತಲೂ ಮುಳ್ಳಿನ ನೈಸರ್ಗಿಕ ಬೇಲಿ. ಹೀಗಾಗಿ ಅದರ ನಡುವಿನ ಸಸ್ಯ ಪ್ರಭೇದ ಸುರಕ್ಷಿತ. ಒಂದು ಹಂತಕ್ಕೆ ಬೆಳೆದು ನಿಂತ ಮೇಲೆ ಅವು ಯಾವುದೇ ಸಂರಕ್ಷಣೆಯೂ ಇಲ್ಲದೇ ಸ್ವತಂತ್ರವಾಗಿ ಎದ್ದು ನಿಲ್ಲುತ್ತಿದ್ದವು. ಹಾಗೆ ಮಳೆಗಾಲಕ್ಕೆ ಮುನ್ನ ಅರಣ್ಯ ಪ್ರದೇಶದಲ್ಲಿ ಹೊಡೆಯುತ್ತಿದ್ದ ಟ್ರೆಂಚ್‌ಗಳಲ್ಲಿ ನೀರೂ ಇಂಗಿ ಅಂತರ್ಜಲವೂ ಸುಧಾರಣೆ ಕಾಣುತ್ತಿತ್ತು. ಇವತ್ತು ಅರಣ್ಯ ಭೂಮಿಗಳೆಲ್ಲವೂ ಬೆಂಕಿಯ ಬಾಯಿಗೆ ಸಿಕ್ಕು ಬರಡಾಗುತ್ತಿದೆ. ಮಲೆನಾಡಿನ ಕಾಡಿನಲ್ಲಿ ರಬ್ಬರ್, ಶುಂಠಿಯಂಥ ಬೆಳೆಗಳೂ ಅಕ್ರಮವಾಗಿ ನುಸುಳುತ್ತಿವೆ. ನೈಸರ್ಗಿಕ ಸಸ್ಯವರ್ಗ ಕಣ್ಮರೆಯಾಗುತ್ತಿದೆ. ನೀರು ಇಂಗುವ ಬದಲು ಬಸಿದು ಓಡುತ್ತಿದೆ.
ಆದಿವಾಸಿ, ಗ್ರಾಮೀಣ ಸಂಸ್ಕೃತಿಯ ನಿಸರ್ಗದ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿತ್ತು. ಜನರಿಗೆ ಪರಿಸರದ ಮೌಲ್ಯದ ಅರಿವಿತ್ತು. ಜನರ ಜೀವನ ವಿಧಾನವೂ ಪರಿಸರಕ್ಕೆ ಪೂರಕವಾಗಿಯೇ ಇತ್ತು. ಹಾಗೆಂದು ಕಾಡಿನ ನಡುವೆ ಕೃಷಿಯೇ ಇರಲಿಲ್ಲವೆಂದೇನೂ ಅಲ್ಲ. ಆದರೆ ಅಲ್ಲೇ ಪಾಳೆಯಗಾರಿಕೆಗೆ ಅವಕಾಶವಿರಲಿಲ್ಲ. ಆದಿವಾಸಿಗಳು ನಿರಂತರ ಕಾಡಿನಾದ್ಯಂತ ಅಲೆದಾಡುತ್ತಿದ್ದರು. ಒಂದೆರಡು ವರ್ಷ ನಿರ್ದಿಷ್ಟ ಪ್ರದೇಶದಲ್ಲಿ ನೆಲೆನಿಂತು ಅಲ್ಲಿನ ಸುತ್ತಮುತ್ತಲ ಭೂಮಿಯನ್ನು ಹಸನು ಮಾಡಿ ಬೇಸಾಯ ನಡೆಸುತ್ತಿದ್ದರು. ನಂತರ ಆ ಜಾಗ ತೆರವು ಮಾಡಿ ಬೇರೆಡೆಗೆ ತೆರಳುತ್ತಿದ್ದರು. ಮೊದಲಿನ ಜಾಗದಲ್ಲಿ ಅರಣ್ಯ ಮತ್ತೆ ಬೆಳೆಯುತ್ತಿತ್ತು. ಪ್ರಕೃತಿಯೇ ಅವರ ಆರಾಧನೆಯ ಕೇಂದ್ರಬಿಂದು. ಕಾಡಿನ ಮರಗಿಡಗಳು, ಪ್ರಾಣಿ- ಪಕ್ಷಿಗಳೇ ಅವರ ಪಾಲಿಗೆ ದೇವರು. ಅವರ ಕುಲಚಿಹ್ನೆಯೂ ಅರಣ್ಯದ ಭಾಗವೇ. ತಾವು ತಂತಮ್ಮ ಕುಲಕ್ಕೆ ಗುರುತಿಸಿಕೊಂಡ ಸಸ್ಯ ಅಥವಾ ಪ್ರಾಣಿವರ್ಗವನ್ನು ಪೂಜಿಸುವ ಜತೆಗೆ ಅವನ್ನು ಸಂರಕ್ಷಿಸುತ್ತಲೇ ಬಂದಿದ್ದರು. ನಾಗವನ, ಜಟ್ಟಿಗನ ಬನ, ಹುಲಿಬನ, ಭೂತದ ಕಾಡು ಇಂಥ ಪೂಜೆಯ ಪ್ರತೀಕ. ದೇವರ ಕಾಡಿನ ಕಲ್ಪನೆ ಹುಟ್ಟಿದ್ದೇ ಈ ರೀತಿ. ವಿಶೇಷವೆಂದರೆ ಈ ಎಲ್ಲ ಅರಾಧನಾ ಕೇಂದ್ರದ ಸುತ್ತಲೂ ಒಂದಿಲ್ಲೊಂದು ಜಲಮೂಲಗಳು ಇದ್ದೇ ಇರುತ್ತಿದ್ದವು. ಅಂಥ ನೀರಿನ ಪಾವಿತ್ರ್ಯ ರಕ್ಷಣೆಯೂ ಆರಾಧನೆಯ ಭಾಗವಾಗಿರುತ್ತಿತ್ತು. ನೀರು- ಕಾಡು ಯಾವತ್ತಿಗೂ ಪ್ರತ್ಯೇಕವಾಗಿ ಕಾಣಲೇ ಇಲ್ಲ ನಮ್ಮ ಪೂರ್ವಜರಿಗೆ.
ಇವತ್ತು ಅರಣ್ಯ ಸಂರಕ್ಷಣೆಗೆ ಪ್ರತ್ಯೇಕ ಇಲಾಖೆಯೇ ಇದೆ. ಸ್ವಾಭಾವಿಕ ಅರಣ್ಯಗಳು ನಾಶವಾದ ಜಾಗದಲ್ಲಿ (ನಾಶವಾಗದೇ ಇದ್ದಲ್ಲಿ ಅದನ್ನು ನಾಶ ಮಾಡಿ) ನೆಡುತೋಪುಗಳನ್ನು ಸೃಷ್ಟಿಸಲಾಗುತ್ತಿದೆ. ನರ್ಸರಿಗಳಲ್ಲಿ ಬೆಳೆಸಿ ತಂದ ಒಂದೇ ಜಾತಿಯ, ಬೇಗನೆ ಬೆಳೆಯುವ ಸಸ್ಯಗಳನ್ನು ತಂದು ಬೆಟ್ಟ ಗುಡ್ಡಗಳೆನ್ನದೇ ನೆಡಲಾಗುತ್ತಿದೆ. ಎರಡು ವರ್ಷಗಳಲ್ಲಿ ಅವು ಬೆಳೆದು ಪಕ್ಕಾ ಯೂನಿಫಾರಂ ತೊಟ್ಟ ನರ್ಸರಿ ಮಕ್ಕಳಂತೆಯೇ ಕಾಣುತ್ತಿವೆ. ಫಾರಂಗಳಲ್ಲಿ ಬೆಳೆದ ಸಸ್ಯಗಳಿಂದಾಗಿ ನಮ್ಮ ಸಸ್ಯವೈವಿಧ್ಯಕ್ಕೆ ಕುತ್ತು. ಇದಕ್ಕಿಂಥ ಅಪಾಯಕಾರಿ ಸಂಗತಿಯೆಂದರೆ ಅತಿ ಶೀಘ್ರವಾಗಿ ಬೆಳೆಯುವ ಸಸ್ಯಗಳೆಂದು ನಾವು ಯಾವುದನ್ನು ತಂದು ತುಂಬಿಸುತ್ತಿದ್ದೇವೋ ಅವು ಅಷ್ಟೇ ಶೀಘ್ರದಲ್ಲಿ ನೆಲದೊಡಲ ನೀರನ್ನೂ ಬರಿದು ಮಾಡುತ್ತಿವೆ. ಹೀಗಾಗಿ ಮಳೆ ಬಂದು ಭೂಮಿಯಲ್ಲಿ ಇಂಗಿ ಮತ್ತೆ ಅಂತರ್ಜಲ ತುಂಬಿಕೊಳ್ಳುವ ಪ್ರಮೇಯವೇ ಇಲ್ಲವಾಗಿದೆ.
ಪ್ರಕೃತಿಯ ಆರಾಧನೆ ಎನ್ನುವುದನ್ನು ಕೇವಲ ನಂಬಿಕೆಯೆಂದು ಎಂದಿಗೂ ಪರಿಗಣಿಸಲಾಗದು. ಅದು ವೈಜ್ಞಾನಿಕ ಸಂರಕ್ಷಣಾ ವಿಧಾನ. ನಿಸರ್ಗ ಜನಪದರ ಮಾತೆ. ಅವರ ನಿತ್ಯದ ಬೆಳಗು ಆರಂಭವಾಗುವುದೇ ಆ ಮಾತೆಯ ಸ್ಮರಣೆಯಿಂದ. ಗ್ರಾಮೀಣ ಹಬ್ಬಗಳಲ್ಲಿ ಬಹುಪಾಲು ಪ್ರಕೃತಿ, ಪರಿಸರಗಳಿಗೆ ಸಂಬಂಧಿಸಿದ್ದೇ ಆಗಿರುತ್ತಿತ್ತು. ಕೃಷಿ, ಪರಿಸರ, ಪ್ರಾಣಿ- ಪಕ್ಷಿ ಸಂಕುಲಗಳೇ ಹಬ್ಬಕ್ಕೆ ಬುನಾದಿ. ಒಂದಲ್ಲಾ ಒಂದು ರೀತಿಯಲ್ಲಿ ಈ ಹಬ್ಬಗಳು ಪ್ರಕೃತಿಯ ಜೊತೆಗೆ ಸೌಹಾರ್ದಯುತ ಸ್ನೇಹ ಸಂಬಂಧವನ್ನು ಬೆಸೆಯುತ್ತಿದ್ದವು. ಒಂದು ರೀತಿಯಲ್ಲಿ ಪರ್ಯಾಯ ಜಗತ್ತು ಪ್ರಕೃತಿ, ಕಾಡೇ ಆಗಿತ್ತು. ನಮ್ಮ ಖಷಿ ಸಂಸ್ಕೃತಿ, ವಾನಪ್ರಸ್ಥದ ಕಲ್ಪನೆ ಎಲ್ಲದರ ಉದ್ದೇಶವೂ ನಾಡಿಗಾಗಿ ಕಾಡಿನ ಸಂರಕ್ಷಣೆಯ ಮತ್ತೊಂದು ಮಜಲೇ. ಮಾನವ ಇಂಥ ಅನ್ಯೋನ್ಯ ಪರಿಸರದಿಂದ ದೂರ ಸರಿಯುತ್ತ ಬಂದು, ತನ್ನ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ನಾಗರಿಕತೆಯ ಹೆಸರಿನಲ್ಲಿ ದಿನೇ ದಿನೇ ಸ್ವಾರ್ಥಿಯಾಗುತ್ತಿದ್ದೇವೆ ನಾವು. ಅಭಿವೃದ್ಧಿಯ ಅಹಂ ನಮ್ಮನ್ನು ಆವರಿಸಿಕೊಳ್ಳತೊಡಗಿದೆ. ಭೋಗಕ್ಕಾಗಿಯೇ ನಿಸರ್ಗ ಸಂಪತ್ತಿರುವುದೆಂಬ ಮನೋಭಾವ ಮೊಳೆತ ಕ್ಷಣದಲ್ಲಿಯೇ ಸಮುದಾಯದ ಆಸ್ತಿಯಾಗಿದ್ದ ನಿಸರ್ಗಕ್ಕೆ ಕೃತಕ ಕಾವಲು, ಅದಕ್ಕೊಂದು ಇಲಾಖೆ, ಅದರ ಸಂರಕ್ಷಣೆಗೆ ಕಾನೂನು ಸೃಷ್ಟಿಯಾಯಿತು. ಸಂಪತ್ತಿನ ಲೂಟಿಯೂ ಹೆಚ್ಚತೊಡಗಿತು.
ನಾವಿಂದು ಸಸ್ಯ ಮತ್ತು ಪ್ರಾಣಿ ಜಗತ್ತಷ್ಟೇ ನಾಶಮಾಡಿಲ್ಲ. ನಮ್ಮ ಬದುಕಿನ ಬುಡಕ್ಕೆ ಕೊಡಲಿ ಏಟು ಹಾಕಿಕೊಂಡಿದ್ದೇವೆ. ಪ್ರಗತಿಯ ಹೆಸರಿನಲ್ಲಿ ಕಾಡು ಕಡಿದು ಊರು ಮುಳುಗಿಸಿ ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸುತ್ತಿದ್ದೇವೆ. ಆರ್ಥಿಕತೆಯ ಹೆಸರಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಿದ್ದೇವೆ. ಆಧುನಿಕತೆಯ ದೃಷ್ಟಿಯಲ್ಲಿ ಗಣಿ ಅಗೆತ, ಅಣು ಸ್ಥಾವರವನ್ನು ಹೆಚ್ಚಿಸಿದ್ದೇವೆ. ಪರಿಸರ ಮಾಲಿನ್ಯ, ಭೂಮಾಲಿನ್ಯ, ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯ ಹೀಗೆ ಮಾಲಿನ್ಯಗಳ ಸರಣಿಯೇ ಹುಟ್ಟಿಕೊಂಡಿದೆ.
ಶುದ್ಧ ಗಾಳಿ, ನೀರು, ನೆಲಗಳ ಅಭಾವ. ಪ್ರಾಣಿ- ಪಕ್ಷಿಗಳ ಎಷ್ಟೋ ತಳಿಗಳ ನಾಶ ನಿತ್ಯದ ಸಮಾಚಾರಗಳಾಗಿವೆ. ಮೊಬೈಲ್ ತರಂಗಗಳು ಜೇನ್ನೊಣಗಳನ್ನು ನಾಶ ಮಾಡಿವೆ. ಸೊಳ್ಳೆ ಕಾಯಿಲ್ಲು ಗುಬ್ಬಚ್ಚಿಯನ್ನು ಕೊಂದಿವೆ. ಮತ್ತಾವುದೋ ಆಧುನಿಕ ಕ್ರಾಂತಿ ಹದ್ದುಮೀರಿದ ಪರಿಣಾಮ ಹದ್ದುಗಳ ಕುಲವೇ ನಾಶವಾಗಿ ನಗರಗಳು ಕೊಳೆತು ನಾರುತ್ತಿವೆ. ಮೈಕ್ರೋವೇವ್‌ನ ವಿದ್ಯುತ್ ವಿದ್ಯಮಾನ ಇಡೀ ಸಸ್ಯ ಸಂಕುಲಕ್ಕೇ ಧಕ್ಕೆ ತಂದಿದೆ. ಫ್ರಿಡ್ಜ್, ಏರ್‌ಕಂಡೀಶನರ್‌ಗಳು, ನಮ್ಮ ಓಝೋನ್ ಪರದೆಯನ್ನೇ ಹರಿಯುತ್ತಿದೆ. ಕಾರ್ಖಾನೆಗಳ ಹೊಗೆ, ಅವು ವಿಸರ್ಜಿಸುವ ವಿಷವಸ್ತುಗಳು ನದಿಗಳನ್ನು ಸೇರಿ ಜಲಚರಗಳು, ಅಪರೂಪದ ಜಲಸಸ್ಯಗಳು ನಾಶವಾಗುತ್ತಿವೆ. ಹೆಚ್ಚುತ್ತಿರುವ ವಾಹನಗಳ ಹೊಗೆ ಜನರನ್ನೇ ತಿಂದುಕೊಳ್ಳುತ್ತಿದೆ. ಅಣುಸ್ಥಾವರಗಳ ವಿಕಿರಣದಿಂದ ಆಗುತ್ತಿರುವ ಅಪಾಯವಂತೂ ಅತಿಘೋರ. ವಾಯುಮಂಡಲದಲ್ಲಿ ಆಮ್ಲಜನಕದ ಪ್ರಮಾಣ ದಿನೇ ದಿನೇ ಕುಗ್ಗುತ್ತಿದೆ ಎಂದು ವಿಜ್ಞಾನಿಗಳು ಬೊಬ್ಬಿಡುತ್ತಿದ್ದರೆ.
ಭೂಮಿಯ ಉಷ್ಣತೆ ಹೆಚ್ಚುತ್ತಿದೆ. ಅಂತರ್ಜಲ ಆರಿದೆ. ನಮ್ಮ ಪರಿಸರ ಪ್ರೇಮ ಇವೆಲ್ಲವನ್ನೂ ಮೀರಿ 'ಪರಿಸರ ಉಳಿಸಿ' ಹೋರಾಟ, ಚಳವಳಿ, ಘೋಷಣೆಗಳಿಗೆ ಮೀಸಲಾಗಿದೆ. ಕೂಗಿದಾಕ್ಷಣ, ಪಟ್ಟಣಗಳ ಬೀದಿಬೀದಿಗಳಲ್ಲಿ ಮೆರವಣಿಗೆ ನಡೆಸಿದಾಕ್ಷಣ, ಬ್ಯಾನರ್ ಕಟೌಟ್ ಕಟ್ಟಿದಾಕ್ಷಣ, ವಿಚಾರ ಸಂಕಿರಣ, ಗ್ಲೋಬಲ್ ಮೀಟ್‌ಗಳಲ್ಲಿ ಚರ್ಚಿಸಿದಾಕ್ಷಣ ಉಳಿಯುವ ಪರಿಸರವೇ ನಮ್ಮದು? ಭವಿಷ್ಯದ ಭಯ ಹೆಚ್ಚುತ್ತಿರುವಾಗಲೇ ನಮ್ಮ ಪರಿಸರ ಪ್ರೇಮದ ಬಗ್ಗೆ ನಗೆಯುಕ್ಕುತ್ತದೆ. ಮೊನ್ನೆ ಮೊನ್ನೆಯಷ್ಟೇ (ಏ.22) ಮುಗಿದ 'ವಿಶ್ವ ಭೂದಿನ'ದ ನೆನಪಲ್ಲಿ ನಮ್ಮನ್ನು ನಾವು ಅವಲೋಕನಕ್ಕಿಟ್ಟುಕೊಳ್ಳಲು ಇದುಸಕಾಲ.

-ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ