ಅಂಕಣಗಳು

ತಮಿಳ್ನಾಡು ಆನೆಗಳ್ಗೂ ಕುಡ್ಯಾಕೆ ನೀರು, ತಿನ್ನಕ್ಕೆ ಮೇವು ಬೇಕಂತೆ

'ಅಲ್ಲಲೇ ಮೂದೇವಿ, ತಮಿಳ್ನಾಡು ಸಿಯೆಮ್ಮು ಜಯಕ್ಕ ನೀರು ನೀರು ಅಂತ ಕೂಗ್ಗತಾಯಿರ್ತದೆ.

'ಅಲ್ಲಲೇ ಮೂದೇವಿ, ತಮಿಳ್ನಾಡು ಸಿಯೆಮ್ಮು ಜಯಕ್ಕ ನೀರು ನೀರು ಅಂತ ಕೂಗ್ಗತಾಯಿರ್ತದೆ. ನಮ್ ಡ್ಯಾಮ್‌ನಾಗಿರೋ ನೀರೆಲ್ಲ ಬುಟ್ರೂವೆ ವೊಟ್ಟೆ ತುಂಬಕ್ಕಿಲ್ಲ ಅಂತದೆ ಆವಮ್ಮ. ಜಯಕ್ಕ ನೀರು ಕೇಳ್ದಾಗೆಲ್ಲ ನಮ್ ಮೈ ವುರೀತದೆ.

ವಾಟಾಳ್ ನಾಗ್ರಾಜು ಅವ್ರು ಕೈನಾಗೆ ಹೂಹಾರ ಹಿಡ್ಕಂಡು ಯರ್ರಾಬಿರ್ರಿ ವೋಯ್ತಾಯಿದ್ರು. ಹಿಂದ್ಲಾಗಡೆ ತಮ್ಟೆ ಬಡ್ಕಂಡು ಜನಾನೂವೆ ವೊಂಟಿದ್ರು.
ಎತ್ಲಾಗೋ ವೊಂಟಿದ್ದೋನು ಮೈಲಾರಿ ಸೀನ್ ನೋಡಿ ಹಂಗೆ ನಿಂತ್ಕಬುಟ್ಟ. 'ಇದೇನ್ಸಾ, ಹಾರಗೀರ ಹಿಡ್ಕಂಡು ವೊಂಟಿದ್ದೀರಿ. ಎತ್ಲಾಗೆ?' ಅಂತ ಕೇಳ್ದ. 'ಆನೆಗೆ ಸನ್ಮಾನ ಮಡಿಕ್ಕಂಡಿದ್ದೀವಿ ಕಣ್ಲಾ. ಅದುಕ್ಕೆ ವೋಯ್ತಾಯಿರಾದು. ನೀನೂವೆ ಬಾರ್ಲ ಜತ್ಯಾಗೆ' ಅಂತ ನಾಗ್ರಾಜು ಕರುದ್ರು. 'ಹಸ, ಎಮ್ಮೆ, ಹಂದಿ ಅಂತೇಳಿ ನೀವು ಮೆರವಣ್ಗೆ ಮಾಡೋದ್ರಾಗೆ ಪೇಮಸ್ಸು ಬುಡಿ. ಅದುನ್ನೆಲ್ಲ ಬುಟ್ಟು ಆನೆ ಹಿಡ್ಕಂಬುಟ್ಟಿದ್ದೀರಲ್ಲ ಯಾಕೆ?' ಅಂದ ಮೈಲಾರಿ.
'ಆನೆ ಹಿಡ್ಕಂಡು ಬಂದು ಮನ್ಯಾಗೆ ಕಟ್ಟಾಕಿ ಹಾಲು ಕರ್ಯಾಣ ಅಂತ ಕಣಲೇ, ದಡ್‌ಬಡ್ಡಿ ಹೈದ ಕಣ್ಲಾ ನೀನು. ವೋಗಿ ವಸಿ ಆನೆ ಲದ್ದಿನಾದ್ರೂ ಹಣೆಗೆ ಬಳ್ಕ. ತಲ್ಯಾಗೆ ಬುದ್ದಿ ಬೆಳೀತದೆ. ಅಲ್ಲಲೇ, ಯಾರೂ ಮಡ್ದೇಯಿರೋ ಕೆಲ್ಸಾನ ವೊಂದೇ ವೊಂದು ಆನೆ ಮರಿ ಮಾಡದಲ್ಲೋ. ಅದುಕ್ಕೆ ಎಷ್ಟು ಥ್ಯಾಂಕ್ಸ್ ಹೇಳುದ್ರೂ ಸಾಲಕ್ಕಿಲ್ಲ. ಹಿಂಗಾಗಿ ಸನ್ಮಾನ ಮಾಡಕ್ಕೆ ವೋಯ್ತಾಯಿರಾದು' ಅಂದ್ರು ನಾಗ್ರಾಜು. 'ಏನಪ್ಪ ಮಾಡ್ತು ಆನೆ ಅಂತದ್ದು ಘನಂದಾರಿ ಕೆಲ್ಸ. ನಿಮ್ ಎದ್ರು ಪಾರ್ಟಿಯೋರು ತ್ವಾಟುಕ್ಕೆ ನುಗ್ಗೆ ಬೆಳೆಗಿಳೆ ತುಳ್ದಾಕದಾ ಹೆಂಗೆ?' ಅಂತ ಮೈಲಾರಿ ಕೇಳ್ದ.
'ಅಲ್ಲಲೇ ಮೂದೇವಿ, ತಮಿಳ್ಲಾಡು ಸಿಯೆಮ್ಮು ಜಯಕ್ಕ ನೀರು ನೀರು ಅಂತ ಕೂಗ್ಗತಾಯಿರ್ತದೆ. ನಮ್ ಡ್ಯಾಮ್‌ನಾಗಿರೋ ನೀರೆಲ್ಲ ಬುಟ್ರೂವೆ ವೊಟ್ಟೆ ತುಂಬಕ್ಕಿಲ್ಲ ಅಂತದೆ ಆವಮ್ಮ. ಜಯಕ್ಕ ನೀರು ಕೇಳ್ದಾಗೆಲ್ಲ ನಮ್ ಮೈ ವುರೀತದೆ. ಏನರ ಮಾಡಕ್ಕಾಯ್ತದಾ? ಆಗಾಕಿಲ್ಲ, ಯಾಕೇಳು? ಆಯಮ್ಮನ ಸುತ್ತ ಕರಿ ಬಟ್ಟೆ ಹಾಕ್ಕಂಡಿರೋ ಕಮಾಂಡೋದೋರು ಇದ್ದೇ ಇರ್ತರೆ. ಮುಟ್ಟುದ್ರೆ ಬುಡ್ತರಾ? ಡಂ ಅನುಸ್ತರೆ. ಸುಟ್ಟು ಬೂದಿ ಮಾಡಿ, ಆದೇ ಬೂದೀನಾ ಕಾವೇರಿ ನದಿಯಾಗೆ ತರ್ಪಣ ಬುಟ್ಟಾಕ್ತರೆ. ಆದ್ರೆ ಆ ಆನೆಮರಿ ನೋಡ್ಲ, ಈವತ್ತು ನಮ್ ಕರ್ನಾಟಕದ ಜನ್ರೆಲ್ಲಾ ಸೇರಿ ಖುಸಿಪಡೋ ಕೆಲ್ಸ ಮಾಡದೆ' ಅಂದ್ರು ನಾಗ್ರಾಜು ಸಾಹೇಬ್ರು.
'ಅಯ್ಯೋ ಕುಯ್ತಾ ಕೂತ್ಕಬ್ಯಾಡಿ, ಏನು ಅಂತದ್ದು ಮಾಡಿರಾದು ಯೋಳಿ?' ಅಂತ ಮೈಲಾರಿ ಕೇಳ್ದ. 'ಜಯಕ್ಕ ಪಿಕ್‌ನಿಕ್ಕು ಅಂತೇಳಿ ಕಾಡ್ಗೆ ವೋಗಿದ್ರಂತೆ. ಅಲ್ಲಿ ಆನೆಮರಿ ನೋಡ್ಬುಟ್ಟು ಮುದ್ದು ಮಾಡಕ್ಕೆ ವೋದ್ರಂತೆ. ಅದುಕ್ಕೆ ಯದ್ವಾತದ್ವಾ ಶಿಟ್ಟು ಬಂದು ಗುದ್ದಾಕ್ತಂತೆ. ಕಾರ್ನಾಗೆ ವೋಗಿ ಕೂತ್ಕಂಡ್ರು ಬುಡ್ಲಿಲ್ವಂತೆ. ಕಾರ್ನೇ ಪುಡಿ ಮಾಡೋ ಮಟ್ಟುಕ್ಕೆ ಆನೆಮರಿ ವೊಂಟೋಗಿತ್ತಂತೆ. ಆ ಅನೆಮರಿ ಎಲ್ಲೋ ಕರ್ನಾಟಕದ್ದೇ ಇರ್ಬೇಕು ಕಣ್ಲಾ'.
'ನಾವು ಕುಡಿಯೋ ನೀರೂವೆ ಬುಡ್ದೆ ಎಲ್ಲ ಎತ್ಗಂಡು ವೊಂಟೋಯ್ತದೆ ಈವಮ್ಮ ಅಂತೇಳಿ ಅದುಕ್ಕೆ ಕ್ವಾಪ ಬಂದಿರ್ಬೇಕು. ಆವಮ್ಮ ಕೇಳ್ದಾಗೆಲ್ಲ ಬುಡ್ತಾಯಿದ್ರೆ ನದಿ, ನಾಲೆನಾಗೆ ನೀರು ಇರಾಕಿಲ್ಲ. ಆಮ್ಯಾಲೆ ಮೈಮ್ಯಾಗೆ ಬರೇ ಮಣ್ಣು ಸುರ್ಕಂಡು ಇರ್ಬೇಕಾಯ್ತದೆ ಅಂತ ಆನೆ ಯೋಚ್ನೆ ಮಾಡಿರ್ಬೇಕು. ಅದುಕ್ಕೆ ಗುದ್ದಕ್ಕೆ ವೋಬುಟ್ಟದೆ. ಏನರ ಆಗ್ಲಿ ಕಣ್ಲಾ ಆನೆಗೆ ಬಲು ಜೋರಾಗದೆ ಕಣ್ಲಾ ಗುಂಡ್ಗೆ. ಮೆಚ್ಬೇಕು ಬುಡು ಅದುನ್ನ' ಅಂದ್ರು ನಾಗ್ರಾಜು ಸಾಹೇಬ್ರು.
'ವೋ ಹಂಗಾ ಇಸ್ಯ. ಕರ್ನಾಟದೋರೇ ಆನೆ ಬುಟ್ಟಿರಾದು ಅಂತೇಳಿ ಆವಮ್ಮ ಸುಪ್ರೀಂಕೋರ್ಟುಗೆ ವೋಯ್ತದೆ ಇರಿ. ಆನೆ ಗುದ್ದಿ ನಂಗೆ, ಕಾರ್ಗೆ ಲಾಸ್ ಆಗದೆ. ಆಗಿರೋ ಲಾಸ್ ಭರ್ತಿ ಆಬೇಕು ಅಂದ್ರೆ ಮೆಟ್ಟೂರು ಡ್ಯಾಮು ಭರ್ತಿ ಆಗೋಗಂಟ ನೀರು ಬುಡಕ್ಕೆ ಆದೇಸಾವ ಕೊಡಿ ಅಂತ ಕೋರ್ಟುನ್ನ ಕೇಳ್ಕತದೆ. ಆವಾಗ ಏನು ಮಾಡ್ತೀರಿ?' ಅಂದ ಮೈಲಾರಿ. 'ಹೌದಲ್ವಾ? ಸದ್ಯ ಆವಮ್ಮ ಆನೆಮರಿ ಕೈಲಿ ತಗ್ಲಾಂಕ್ಕಂಡ್ರು. ಏನರ ಹುಲಿಮರಿ ಕೈಗೆ ಸಿಕ್ಬುಟ್ಟು ಅದೇನರ ಕಚ್ಬುಟ್ಟಿದ್ರೆ ಏನ್ಲಾ ಗತಿ? ಆಮ್ಯಾಲೆ ನಷ್ಟ ತುಂಬಿ ಕೊಡಕ್ಕೆ ಕರ್ನಾಟಕದಾಗೆ ಇರೋ ಡ್ಯಾಮುಗಳ್ನ ಬುಟ್ಟು ಕೊಡ್ಬೇಕು ಅಂತೇಳಿ ಕೋರ್ಟುಗೆ ವೊಂಟೋಯ್ತಾಯಿತ್ತು. ಸದ್ಯ ಗಾಚಾರ ತಪ್ಪೋಯ್ತು ಕಣ್ಲಾ ಮೈಲಾರಿ. ಸನ್ಮಾನ ಕ್ಯಾನ್ಸಲ್ಲು ಎಲ್ರೂವೆ ವುಂಡ್ಬುಟ್ಟು ಮನೆ ಸೇರ್ಕಳಿ' ಅಂತೇಳಿ ನಾಗ್ರಾಜಪ್ನೋರೂವೆ, ಅವ್ರು ಸಿಸ್ಯರೂವೆ ವೊಂಟೋದ್ರು.
ನಾಗ್ರಾಜಪ್ನೋರ್ಗೆ ಬಾಯ್ ಬಾಯ್ ಅಂತೇಳಿ ಮೈಲಾರಿ ಮನೆಗೋಗಿ ಟೀವಿ ಹಾಕ್ದ. ಅದ್ರಾಗೆ ಹಿಂಗೆ ಬತ್ತಾಯಿತ್ತು ನ್ಯೂಜು. 'ತಮಿಳುನಾಡು ಕಾಡ್ನಾಗೆ ಇರೋ ಆನೆಗಳ್ಗೆ ಕುಡ್ಯಾಕೆ, ಜಳಕ ಮಾಡಕ್ಕೆ ನೀರಿಲ್ಲ. ತಿನ್ನಾಕೆ ಮೇವಿಲ್ಲ. ನೀರು ಬುಟ್ಟು, ಮೇವು ಕಳ್ಸಕ್ಕೆ ಕರ್ನಾಟಕಕ್ಕೆ ಆದೇಶ ಕೊಡ್ಲಿ ಅಂತೇಳಿ ಸುಪ್ರೀಂಕೋರ್ಟ್‌ಗೆ ತಮಿಳ್ನಾಡು ಆರ್ಜಿ'.

-ಕೆ.ವಿ.ಪ್ರಭಾಕರ್
prabhukolar@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ