ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅಧಿಕಾರ ಇಲ್ಲದಿದ್ದರೆ ಎಲ್ಲಾ ಉಲ್ಟಾ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಕ್ಕೆ ಮಾತ್ರ ಬೆಲೆ ಎಂಬುದು ಅನೇಕ ಪ್ರಕರಣಗಳಲ್ಲಿ...

Srinivasa Murthy VN
Updated On : 5 Aug 2013, 12:53 pm

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಕ್ಕೆ ಮಾತ್ರ ಬೆಲೆ ಎಂಬುದು ಅನೇಕ ಪ್ರಕರಣಗಳಲ್ಲಿ ಸಾಬೀತಾಗಿದೆ. ಎಲ್ಲರೂ ಗೆದ್ದೆತ್ತಿನ ಬಾಲ ಹಿಡಿಯೋರೆ. ಅಧಿಕಾರ ಇರುವಾಗ ಎಲ್ಲಾ ನೆಂಟರು, ಅಧಿಕಾರ ಇಲ್ಲದಿದ್ದರೆ ಯಾರೂ ಇಲ್ಲ. ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಕಳೆದ ವಾರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದರು. ಯಡಿಯೂರಪ್ಪ ಅವರೊಂದಿಗೆ ಕೆಜೆಪಿ ಜಿಲ್ಲಾಧ್ಯಕ್ಷ ಬಿ.ಎಂ. ರಾಮು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿದ್ದ ಎಂ. ಅಪ್ಪಣ್ಣ, ಕಾ.ಪು. ಸಿದ್ದಲಿಂಗಸ್ವಾಮಿ ಇದ್ದರೆ, ಶೋಭಾ ಕರಂದ್ಲಾಜೆ ಅವರೊಂದಿಗೆ ಇದ್ದಿದ್ದು ಶಾಸಕಿ ಭಾರತಿ ಶೆಟ್ಟಿ ಮಾತ್ರ! ಶೋಭಾ ಅವರು ಪ್ರತಿವರ್ಷ ಆಷಾಢ ಶುಕ್ರವಾರ ಸಂದರ್ಭದಲ್ಲಿ ಒಂದು ಬಾರಿ ಬರಿಗಾಲಿನಲ್ಲಿ ಚಾಮುಂಡಿಬೆಟ್ಟದ 1001 ಮೆಟ್ಟಿಲು ಹತ್ತಿ, ಪೂಜೆ ಸಲ್ಲಿಸುತ್ತಾರೆ. ಅವರು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವೆಯಾಗಿದ್ದಾಗ ಬೆಟ್ಟ ಹತ್ತಲು ಹೊರಟರೆ ಹಿಂದೆ ನೂರಾರು ಮಂದಿ. ಆದರೆ ಈ ಬಾರಿ ಹಿಂದೆ ಯಾರೂ ಇರಲಿಲ್ಲ. ಅಲ್ಲದೆ, ಚಾಮುಂಡಿಬೆಟ್ಟದ ಮಧ್ಯ ಭಾಗದಲ್ಲಿರುವ ನಂದಿಯ ಬೃಹತ್ ವಿಗ್ರಹಕ್ಕೆ ಪೂಜೆ ಸಲ್ಲಿಸಲು ಶೋಭಾ ಅವರು ಸರತಿಯ ಸಾಲಿನಲ್ಲಿ ನಿಂತಾಗ ಮುಂದಿದ್ದವರು ಯಾರೂ ಜಾಗ ಬಿಟ್ಟು ಕೊಡಲಿಲ್ಲ. ಹೀಗಾಗಿ ಶೋಭಾ ಅವರು ಸರತಿಯಸಾನಿನಲ್ಲಿಯೇ ಸಾಗಿ ಪೂಜೆ ಸಲ್ಲಿಸಬೇಕಾಯಿತು. ಶೋಭಾ ಅವರು ಬರಿಗಾಲ ಯಾತ್ರೆಯನ್ನು ಟಿವಿ ಚಾನೆಲ್‌ಗಳ ಕ್ಯಾಮೆರಾಮನ್‌ಗಳು ಸೆರೆ ಹಿಡಿಯುತ್ತಿದ್ದರೂ ಜನ ನಮ್ಮನ್ನೇ ಸೆರೆ ಹಿಡಿಯುತ್ತಿರಬಹುದು ಎಂದು ಭಾವಿಸಿ ಖುಷಿಪಟ್ಟರೆ ಹೊರತು ಹಿಂದೆ ಮಾಜಿ ಸಚಿವೆ ಇದ್ದಾರೆ ಎಂದು ತಿರುಗಿಯೂ ನೋಡಲಿಲ್ಲ!

ಸಿಎಂ ಪಕ್ಕ ನಿಲ್ಲಲು ಅಂಬಿ ಅವಾಜ್ ಹಾಕಿದರು!
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಅಧಿಕಾರ ಇಲ್ಲದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರದು ಆ ಪಾಡಾದರೆ ಅಧಿಕಾರ ಇರುವ ಸಿಎಂ ಸಿದ್ದರಾಮಯ್ಯ, ಸಚಿವ ಅಂಬರೀಷ್ ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಸಲ್ಲಿಸಲು ಬಂದಾಗ ವಿಪರೀತ ಜನಜಂಗುಳಿ. ಕೆಲವರು ಪೊಲೀಸರಿಗೆ ಅವಾಜ್ ಹಾಕುತ್ತಿದ್ದರೆ ಮತ್ತೆ ಕೆಲವರು ಬಾಗಿನ ಅರ್ಪಿಸುವ ಸ್ಥಳದಲ್ಲಿ ನೂಕುನುಗ್ಗಲಿನಲ್ಲಿ ತೊಡಗಿದ್ದರು. ಇದರಿಂದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಅಂಬರೀಷ್ ಅವರಿಗೆ ಸರಿಯಾಗಿ ಸಿಎಂ ಪಕ್ಕದಲ್ಲಿ ನಿಲ್ಲಲು ಜಾಗ ಸಿಗಲಿಲ್ಲ. ಆಗ ಅಂಬರೀಷ್ ಎಂದಿನಂತೆ ತಮ್ಮ ಮಂಡ್ಯ ಸ್ಟೈಲ್‌ನಲ್ಲಿ ಅವಾಜ್ ಹಾಕುತ್ತಿದ್ದಂತೆಯೇ ಪೊಲೀಸರಾದಿಯಾಗಿ ಎಲ್ಲರೂ ದಾರಿಬಿಟ್ಟರು. ಅಂಬರೀಷ್ ಭಾಷೆಯೇ ಅಂಥದ್ದು. ಜಾಗ ಬಿಡದೆ ಬೇರೆ ದಾರಿಯೇ ಇರಲಿಲ್ಲ.

ಪ್ರೆಸ್‌ನೋಟ್ ರಿಲೀಸ್ ಶಾಸಕ ಬಾಗವಾನ್!
ಸಾಮಾನ್ಯವಾಗಿ ಸಾರ್ವಜನಿಕರು, ಅಧಿಕಾರಿಗಳು ಪ್ರೆಸ್ ನೋಟ್ ನೀಡುವುದು ಗೊತ್ತು. ಆದರೆ, ಬಿಜಾಪುರ ಶಾಸಕ ಡಾ. ಮಕ್ಬುಲ್ ಬಾಗವಾನ್ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ ಎಂದು ಪ್ರೆಸ್‌ನೋಟ್ ಕಳುಹಿಸುತ್ತಾರೆ! ಶಾಸಕರಾದವರು ತಮ್ಮ ಕ್ಷೇತ್ರದ ಸಮಸ್ಯೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಚರ್ಚಿಸುತ್ತಾರೆ. ನಂತರ ಸಾಮಾನ್ಯವಾಗಿ ಚರ್ಚಿತ ವಿಷಯಕ್ಕೆ ಸಂಬಂಧಿಸಿದಂತೆ ಖುದ್ದು ಅಧಿಕಾರಿಗಳೇ ಪ್ರೆಸ್‌ನೋಟ್ ಕಳುಹಿಸುತ್ತಾರೆ. ಅಥವಾ ಶಾಸಕರೇ ಪತ್ರಿಕಾಗೋಷ್ಠಿ ಕರೆದು ಸಭೆಯಲ್ಲಿ ವಿವರವನ್ನು ನೀಡುತ್ತಾರೆ. ಆದರೆ ಬಿಜಾಪುರ ನಗರ ಶಾಸಕರು ಮಾತ್ರ ಈ ಎಲ್ಲ ಉಸಾಬರಿಗೆ ಹೋಗದೆ ಖಾಸಗಿ ಕಾರ್ಯದರ್ಶಿ ಮೂಲಕ ಪ್ರೆಸ್‌ನೋಟ್ ಪತ್ರಿಕೆ ಕಚೇರಿ ಮುಟ್ಟಿಸುವ ವಿನೂತನ ಸೇವೆ ಆರಂಭಿಸಿದ್ದಾರೆ. ಶಾಸಕರು ಸಾರ್ವಜನಿಕರಿಗೂ ಸಿಗುವುದಿಲ್ಲ. ಅದಕ್ಕೆ ಸಾರ್ವಜನಿಕರು ಶಾಸಕರ ಕಚೇರಿಗೆ ಮನವಿ ಪತ್ರ ನೀಡಿ, ಮರುದಿನ ಪತ್ರಿಕೆಯಲ್ಲಿ ಉತ್ತರ ಬರುತ್ತದೆ ಎಂದು ಕಾಯುತ್ತಾರೆ. ಈರುಳ್ಳಿ ಮತ್ತು ಇತರೆ ದಿನಸಿಗಳ ಬಿಸಿನೆಸ್ ಇರುವ ಶಾಸಕರಿಗೆ ರಾಜಕಾರಣ ಮಾಡುವಷ್ಟು ಪುರುಸೊತ್ತಿಲ್ಲ! ಮಾಧ್ಯಮ ಸೇರಿದಂತೆ ಯಾರ ಕೈಗೂ ಸಿಗದ ಈ ಶಾಸಕರಿಗೆ 'ಪ್ರೆಸ್ ರಿಲೀಸ್‌' ಶಾಸಕ ಎಂದೇ ಜನರು ಹೊಸದಾಗಿ ನಾಮಕರಣ ಮಾಡಿದ್ದಾರೆ!

ಬಾಗಲಕೋಟೆ ಅರಣ್ಯಇಲಾಖೆಗೆ ಶನಿ ಕಾಟ!
ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ಶಿರೂರು ಗ್ರಾಮದಲ್ಲಿ ಕೋತಿ ಉಪಟಳ ಹೆಚ್ಚಾಗಿತ್ತು. ಇದರಿಂದ ಕಂಗಾಲಾದ ಜನತೆ ಅರಣ್ಯ ಇಲಾಖೆಗೆ ಕೋತಿ ಓಡಿಸುವಂತೆ ಮನವಿ ಮಾಡಿದರು. ಇದನ್ನು ಲಘುವಾಗಿ ಪರಿಗಣಿಸಿದ ಅಧಿಕಾರಿಗಳು ಸುಮ್ಮನಿದ್ದರು. ರಾಜ್ಯಾದ್ಯಂತ ಸುದ್ದಿಯಾಗುತ್ತಿದ್ದಂತೆ ದೌಡಾಯಿಸಿ ಮೂರು ದಿನ ಕಸರತ್ತು ನಡೆಸಿದರೂ ಕೋತಿ ಮಾತ್ರ ಬಲೆಗೆ ಬೀಳಲಿಲ್ಲ. ಕೊನೆಗೆ ಆರ್‌ಎಫ್‌ಓ ರಘುನಾಥ ಅವರಿಗೆ ಹೊಳೆದ ಸಖತ್ ಐಡಿಯಾ ಎಂದರೆ 'ಇದು ಶನಿ ಕಾಟ'. ಹೋಮ, ಹವನ ಮಾಡಿಸಿದರೆ ಇದು ಕಡಿಮೆಯಾಗುತ್ತದೆ ಎಂದು ಊರವರ ಮುಂದೆಲ್ಲಾ ಹೇಳಿದರು. ಆಶ್ಚರ್ಯವೆಂದರೆ ರಘುನಾಥ್ ಅವರು ಶನಿ ಕಾಟದ ಮಾತು ಹೇಳಿದ ಮಾರನೇ ದಿನವೇ ಕೋತಿ ಮೃತಪಟ್ಟಿತು. ಜನರೆಲ್ಲಾ ಶನಿ ಕಾಟ ಹೋಮ ಮಾಡಿಸದೇ ತಪ್ಪಿತು ಎಂದು ನಿಟ್ಟುಸಿರು ಬಿಟ್ಟರು. ಆದರೆ, ಕೋತಿ ಸತ್ತಿದ್ದುಅರಣ್ಯ ಇಲಾಖೆ ಗುಂಡಿನಿಂದ ಎಂದು ಸರ್ಕಾರಕ್ಕೆ ಅರ್ಜಿಯೊಂದು ಸಲ್ಲಿಕೆಯಾಗಿದೆ. ಹೀಗಾಗಿ ಈಗ ರಘುನಾಥ್ ಅವರಿಗೆ ಶನಿ ಕಾಟ ಶುರುವಾಗಿದೆ. ಏಕೆಂದರೆ ಅರಣ್ಯ ಮತ್ತು ವನ್ಯ ಜೀವಿ ಕಾಯ್ದೆ ಅನ್ವಯ ಯಾವುದೇ ಪ್ರಾಣಿಯನ್ನು ಗುಂಡಕ್ಕಿ ಕೊಲ್ಲುವಂತಿಲ್ಲ, ಒಂದು ವೇಳೆ ಕೊಂದಿದ್ದರೆ ಅವರಿಗೆ ಕಠಿಣ ಶಿಕ್ಷೆಯಾಗಲಿದೆ!

ವಿವರ ಕೇಳಲು ಹೋದವರಿಗೆ ಅಡ್ಮಿಷನ್ ಮಾಡ್ಸು ಅಂದ್ರು!
ನೋಡಿದ್ದು ಸುಳ್ಳಾಗಬಹುದು. ಕೇಳಿದ್ದು ಸುಳ್ಳಾಗಬಹುದು. ನಿಧಾನಿಸಿ ಯೋಚಿಸಿದಾಗ ನಿಜವು ತಿಳಿಯುವುದು. ಈಗ ಪತ್ರಿಕೋದ್ಯಮಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಮೈಸೂರಿನ ಪ್ರಮುಖ ಆಂಗ್ಲ ಪತ್ರಿಕೆಯ ಯುವ ವರದಿಗಾರನೊಬ್ಬ ಪಿಯುಸಿ ಪ್ರವೇಶಾತಿಯ ವಿವರ ಪಡೆಯಲು ಉಪ ನಿರ್ದೇಶಕರ ಕಚೇರಿಗೆ ಹೋಗಿ, ಪಿಯುಸಿ ಅಡ್ಮಿಷನ್ ಎನ್ನುತ್ತಿದ್ದಂತೆಯೇ ಅಲ್ಲಿದ್ದ ಸಿಬ್ಬಂದಿ, ಏಯ್ ಬೇಗ ಹೋಗು. ನಿಮ್ಮಂಥವರಿಂದಲೇ ಅಡ್ಮಿಷನ್ ಲೇಟಾಗ್ತಿದೆ. ನಾಡಿದ್ದೇ ಲಾಸ್ಟ್‌ಡೇಟ್ ಅಂದ್ರು. ಈ ಪತ್ರಕರ್ತ ನಾನು ವಿದ್ಯಾರ್ಥಿಯಲ್ಲ ಎಂದು ಹೇಳಲು ಯತ್ನಿಸಿದರೂ ಆ ನೌಕರ ಬಿಡದೇ ಹೊರಗೆ ಸಾಗ ಹಾಕಲು ನೋಡಿದ. ಆ ನೌಕರ ಮಾತು ನಿಲ್ಲಿಸಿದ ನಂತರ, ಈ ಪತ್ರಕರ್ತ ತನ್ನ ಪರಿಚಯ ಹೇಳಿ ವಿವರ ಕೇಳಿದಾಗ ಆ ನೌಕರ ಸುಸ್ತು!

- ನಂಬೀರಾಜ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement