ಅಂಕಣಗಳು

ರಾಜಕೀಯ ಅಲ್ವಂತೆ, ಗೊಂಬೆ ಆಟ ಆಗೋಗದಂತೆ

ವತ್ತಾರೆ ಎದ್ದೇಟ್ಗೆ ಮೈಲಾರಿ ಸುರಿಯೋ ಮಳೆನಾಗೆ ಕೊಡೆ ಹಿಡ್ಕಂಡು ಸವಾರಿ...

ವತ್ತಾರೆ ಎದ್ದೇಟ್ಗೆ ಮೈಲಾರಿ ಸುರಿಯೋ ಮಳೆನಾಗೆ ಕೊಡೆ ಹಿಡ್ಕಂಡು ಸವಾರಿ ವೊಂಟ. ಸೀದಾ ಆಮಾಸೆ ಮನೆತವ ವೋದ. ವೋಬುಟ್ಟು 'ಆಮಾಸೆ ಆಮಾಸೆ...' ಅಂತ ಕೂಗಾಕ್ತ ಜೋರಾಗಿ ಬಾಗ್ಲು ಬಡ್ದಾಕ್ಬುಟ್ಟ.
ಆಮಾಸೆ ಕಣ್ಣುಜ್ಕಂಡು ಬಂದು ಬಾಗ್ಲು ತಗ್ದ. 'ಲೇ, ಬೇವಾರ್ಸಿ ಮುಂಡೇದೆ, ಬಾಗ್ಲು ಮೆತ್ಗೆ ಬಡಿಯಲೇ, ಇರಾದು ವೊಂದೇ ಬಾಗ್ಲು. ಮುರ್ದೋದ್ರೆ ಏನ್ಲಾ ಮಾಡಾದು' ಅಂತ ರೇಗ್ಬುಟ್ಟ.
'ಆಯ್ತು, ವಸಿ ಬಟ್ಟೆ ಹಾಕ್ಕಂಡು ಬಾರಲೇ ವೋಗಾಮ' ಅಂತ ಮೈಲಾರಿ ಕರ್ದ. 'ಮೈಮ್ಯಾಲೆ ಇರಾದೆ ವಸಿ ಬಟ್ಟೆ ಕಣ್ಲಾ. ಈ ಅವ್ತಾರ್ದಾಗೆ ಎಲ್ಲಿಗೆ ಕರ್ಕಂಡು ವೋಯ್ತಾಯಿದ್ದೀಯ. ಬೀದಿನಾಗೆ ಹಿಂಗೆ ವೋಬುಟ್ರೆ ಅಷ್ಟೇ ನಾಯಿಗ್ಳು ಆಟ್ಟಾಡುಸ್ಬುಡ್ತವೆ' ಅಂದ ಅಮಾಸೆ. 'ನಿಂದೊಳ್ಳೆ ಕಂತೆ ಪುರಾಣ ಆಯ್ತು. ಬ್ಯಾಗ್ನೆ ಬಟ್ಟೆ ಹಾಕ್ಕಂಡು ಬಾರಲೇ. ಕೆಲ್ಸ ಅದೆ. ಪ್ಯಾಟೆಗಂಟ ವೋಗಿ ಬರಾಣ' ಅಂದ ಮೈಲಾರಿ.
'ಲೇ, ಈಟೋತ್ನಾಗೆ ಏನ್ಲಾ ಅದೆ ಕೆಲ್ಸ. ನಿದ್ದೆ ಹಾಳು ಮಾಡ್ಬುಟ್ಟಲ್ಲೋ ಮುಂಡೇದೆ' ಅಂದ ಅಮಾಸೆ. 'ಏನಿಲ್ಲಲೇ, ನಾಳಿದ್ದು ಮನ್ಯಾಗೆ ನಮ್ ತಾತಂದು ತಿಥಿ ಅದೆ. ಅದುಕ್ಕೆ ದ್ಯಾವೇಗೌಡ್ರುನ್ನ ಕರ್ಯಕ್ಕೆ ಅಂತ ವೋತಾಯಿದ್ದೀನಿ. ಜತ್ಯಾಗೆ ನೀನೂವೆ ಇದ್ರೆ ವೊಳ್ಳೇದು' ಅಂದ ಮೈಲಾರಿ.
'ಅಲ್ಲಲೇ, ಯಾವತ್ತೋ ಸಿವನ ಪಾದ ಸೇರ್ಕಂಡಿರೋ ನಿಮ್ ತಾತನ ತಿಥಿಗೂ ದ್ಯಾವೇಗೌಡ್ರುಗೂ ಏನ್ಲಾ ಸಂಬಂಧ ?' ಅಂತ ಅಮಾಸೆ ಕೇಳ್ದ. 'ಏನ್ಲಾ ಹಿಂಗೆ ಕೇಳೀಯ ?. ಸಿಎಂ ಸಿದ್ರಾಮಣ್ಣ ಯೋಳವ್ರೆ. ದ್ಯಾವೇಗೌಡ್ರುಗೆ ತಿಥಿ ವೂಟ ಅಂತಂದ್ರೆ ಸ್ಯಾನೆ ಇಷ್ಟ ಅಂತ. ಅದುಕ್ಕೆ ಕರ್ಯಾಕೆ ವೋಯ್ತಾಯಿರಾದು. ಬ್ಯಾಗ್ನೆ ಬಾರ್ಲಾ, ಬಸ್ಸು ವೊಂಟೋಯ್ತದೆ' ಅಂದ ಮೈಲಾರಿ. 'ನೀನೇನರ ವೋಗಿ ಕರ್ದೆ ಅನ್ನು ಗೌಡ್ರು ಕೆರ ತಕ್ಕಂಡು ಜರ ಬರೋಗಂಟ ವೊಡೀತರೆ ಅಷ್ಟೇಯ. ನಿನ್ ಯಾವಾರುಕ್ಕೆ ನಾನು ಬರಾಂಗಿಲ್ಲ. ಮುಚ್ಕಂಡು ವೋಗಿ ಬಾರಪ್ಪ' ಅಂತೇಳಿ ಅಮಾಸೆ ರಪ್ ಅಂತ ಬಾಗ್ಲು ಬಡ್ಕಂಡ. 'ವೊಳ್ಳೆ ಕಮಂಗಿ ಥರ ಆಡ್ತೀಯಲ್ಲೋ, ಸಿದ್ರಾಮಣ್ಣ ಯೋಳವ್ರೆ ಅಂತ ಕರ್ಯಾಕೆ ವೋಯ್ತಾಯಿರಾದು. ಇದ್ರಾಗೆ ಏನದೆ ತಪ್ಪು ?' ಅಂದ ಮೈಲಾರಿ.
'ಅವ್ರು ಯೋಳಿರಾದು ಬೇರೆ ಥರುಕ್ಕೆ. ರಾಜ್ಕೀಯದಾಗೆ ತಮ್ಗೆ ಆಗ್ದೇಯಿರೋರ್ನ ದ್ಯಾವೇಗೌಡ್ರು ಮುಗುಸ್ತರೆ ಅಂತ. ಅದುನ್ನ ನೀನು ಹೆಂಗೆಂಗೋ ತಿಳ್ಕಂಬುಟ್ಟು ತಿಥಿ ವೂಟುಕ್ಕೆ ಕರ್ಯಕ್ಕೆ ವೋಯ್ತಾಯಿದ್ದೀಯ. ವೋಗು ವೋಗು, ನಿನ್ನುನ್ನ ಅಲ್ಲೆ ಮಲುಗ್ಸಿ ಎಡೆ ಹಾಕ್ಬುಡ್ತರೆ. ಅಮ್ಯಾಲೆ ನಿನ್ ತಿಥಿ ವೂಟ ವುಣ್ಣಕ್ಕೆ ನಾನು ಬತ್ತೀನಿ' ಅಂದ ಅಮಾಸೆ.  'ಥೂತ್ತೇರಿಕೆ, ಎಡ್ವಟ್ಟು ಆಗೋಯ್ತಾಯಿತ್ತಲ್ಲೋ ಅಮಾಸೆ. ಈ ರಾಜ್ಕೀಯದೋರು ಮಾತಾಡೋದೆ ಹಿಂಗೆ. ಸರ್ಯಾಗಿ ಹೇಳಲ್ಲ, ಬುಡಲ್ಲ' ಅಂತ ಗೊಣಕ್ಕಂಡು ಮೈಲಾರಿ ಮನೆಕಡೀಕೆ ವೊಂಟ. 'ವೋಗ್ಲಿ ಬಾರ್ಲಾ ಇಲ್ಲಿ, ಹಾಲು ಕುಡ್ಕಂಡು ವೋಗೂವಂತೆ' ಅಂತ ಅಮಾಸೆ ಕರ್ದ. 'ಅಲ್ಲಲೇ, ಮನ್ಯಾಗೆ ಕಾಪಿ,ಟೀ, ಹಾಲು ಕುಡಿಯಾಕಿಲ್ಲ ಅಂತ ಹೇಳಿದ್ದೆ. ಹಸ ಏನರ ತಕ್ಕಂಡು ಬಂದಿದ್ದೀಯ ಹೆಂಗೆ ?' ಅಂತ ಮೈಲಾರಿ ಕೇಳ್ದ. 'ಅದೆಲ್ಲ ಏನೂ ಇಲ್ಲಪ್ಪ, ಇಸ್ಕೂಲ್ನಾಗೆ ಮಕ್ಳುಗೆ ಹಾಲು ಪೌಡ್ರು ಕೊಡ್ತರೆ. ನಮ್ಮೋವು ಹಾಲು ಕುಡ್ಯಾಕಿಲ್ಲ. ಅದುಕ್ಕೆ ಮನ್ಯಾಗೆ ಸ್ಟಾಕು ಇದ್ದೋಗದೆ. ಕಾಯ್ಸಿ ತತ್ತೀನಿರು' ಅಂದ ಅಮಾಸೆ.  'ನಿನ್ ಮಖ್ಖೆ ಮಂಗ್ಳಾರ್ತಿ ಎತ್ತ. ಮಕ್ಳು ಹಾಲು ಬುಡಾಕಿಲ್ವಲ್ಲೋ ನೀನು ದರ್ಬೇಸಿ ಮುಂಡೇದೆ' ಅಂತ ಬೈದು ಮೈಲಾರಿ ವೊಂಟ. ದಾರಿನಾಗೆ ಕೈ ಪಕ್ಸದ ಲೀಡ್ರು ಡಿಕೆ ಸಿವಕುಮಾರು ಸಿಕ್ರು. 'ನಮುಸ್ಕಾರ ಧಣಿ, ಏನಿದು ? ಈಟೋತ್ನಾಗೆ ನೀವಿಲ್ಲಿ ?' ಅಂತ ಮೈಲಾರಿ ಕೇಳ್ದ. 'ವೂ ಕಣ್ಲಾ ವಸಿ ಕೆಲ್ಸ ಇತ್ತೇಳು ಅದುಕ್ಕೆ ಬಂದಿದ್ದೆ' ಅಂದ್ರು ಸಿವಕುಮಾರು. 'ನಮ್ಮೂರು ಕಡೀಕೆ ಏನಪ್ಪಾ ಅಂತ ಕೆಲ್ಸ ಇದ್ದಾತು ?' ಅಂತ ಮೈಲಾರಿ ಕೇಳ್ದ. 'ಎಲಾ ಇವ್ನ, ರಾಜ್ಕೀಯ ಅಂದ್ಮೇಕೆ ಇರ್ತದೆ ನೂರಾ ವೊಂದು ಕೆಲ್ಸ. ಏನಿಲ್ಲಾ ಪಾರ್ಲಿಮೆಂಟು ಎಲೆಕ್ಸನ್ ಬಂದದೆ. ಬ್ಯಾಡ ಬ್ಯಾಡ ಅಂದ್ರೂವೆ ಪಕ್ಸುದೋರು ನನ್ ತಮ್ಮುನ್ನ ನಿಲ್ಸವ್ರೆ. ಅದುಕ್ಕೆ ಸಪೋರ್ಟು ಕೇಳಾವ ಅಂತ ತೇಜಮ್ನೋರು ಮನೆತವ ವೋಗಿದ್ದೆ' ಅಂದ್ರು ಸಿವಕುಮಾರು. 'ಇದೇನಣ್ಣೋ, ಬುಡ್ತು ಅನ್ನು. ನಿಮ್ ದುಸ್ಮನ್ ಮನೆತವ, ಅದೂ ನೀವು ಅಂತಂದ ಮೈಲಾರಿ. ಏನ್ಲಾ ಮಾಡಾದು ಪೊಜಿಸನ್ನು ಹಂಗದೆ. ವೋಟು ಬೇಕಲ್ಲಪ್ಪ. ಅದುಕ್ಕೆ ವೋಬೇಕಾಯ್ತದೆ' ಅಂದ್ರು ಸಿವಕುಮಾರು. 'ಎಲ್ಲಾ ಗಾಚಾರ. ಇದು ಕಲಿಗಾಲ ಬುಡಿ. ನೀವ್ ತಾನೆ ಏನ್ ಮಾಡಕ್ಕಾಯ್ತದೆ' ಅಂದ ಮೈಲಾರಿ. 'ಗಾಚಾರ ಅಲ್ಲಲೇ , ಇದು ಗೊಂಬೆ ಆಟ, ಗೊಂಬೆ ಆಟ' ಅಂತೇಳಿ ಸಿವಕುಮಾರು ವೊಂಟ್ರು.

- ಕೆ.ವಿ.ಪ್ರಭಾಕರ್
prabhukolar@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ