ಪಿ.ವಿ. ಸಿಂಧು 
ಅಂಕಣಗಳು

ಚೀನಾದ ಮಹಾಗೋಡೆಗೆ ಕನ್ನ ಹಾಕಿದ ಸಿಂಧು

ಪ್ರಾಯಶಃ ಇಂತಹ ಒಂದು ನಿರೀಕ್ಷೆ ಯಾರಿಗೂ ಇರಲಿಲ್ಲ. ಕಳೆದೆರಡು ದಶಕಗಳಿಂದ...

ಪ್ರಾಯಶಃ ಇಂತಹ ಒಂದು ನಿರೀಕ್ಷೆ ಯಾರಿಗೂ ಇರಲಿಲ್ಲ. ಕಳೆದೆರಡು ದಶಕಗಳಿಂದ ವಿಶ್ವ ಬ್ಯಾಡ್ಮಿಂಟನ್ನಲ್ಲಿ ಸಾಟಿ ಇಲ್ಲದೆ ಮೆರೆಯುತ್ತಿದ್ದ ಚೀನಾ ಎರಡು ದಿನಗಳಲ್ಲಿ ಎರಡು ಬಾರಿ ಮಣ್ಣು ಮುಕ್ಕುತ್ತದೆ, ಅದೂ ಕಳೆದ ತಿಂಗಳಷ್ಟೇ 18ನೇ ವರ್ಷಕ್ಕೆ ಕಾಲಿಟ್ಟ ಭಾರತದ ಆಟಗಾರ್ತಿಯ ಕೈಯಲ್ಲಿ ಎಂಬ ಕಲ್ಪನೆ ಸಹ ಯಾರಿಗೂ ಇರಲಿಲ್ಲ. ವಿಶ್ವ ಬ್ಯಾಡ್ಮಿಂಟನ್ನಲ್ಲಿ ಯೂರೋಪ್ ಅದರಲ್ಲೂ ಡೆನ್ಮಾರ್ಕ್ ಆಟಗಾರರ ಅಟ್ಟಹಾಸಕ್ಕೆ ಇಂಡೋನೇಷ್ಯಾ ಕೊನೆ ಹಾಡಿದರೆ ಅದನ್ನು ಮುಂದಿಕ್ಕಿ ಸರ್ವ ಯಶಸ್ಸನ್ನು ತನ್ನದಾಗಿಸಿಕೊಂಡಿದ್ದು ಚೀನಾ. ಅಂತಹ ಚೀನಾದ ಅತ್ಯಂತ ಪ್ರಬಲ ಆಟಗಾರ್ತಿಯರನ್ನು ಸರದಿ ಸಾಲಿನಂತೆ ಮೆಟ್ಟಿ ನಿಲ್ಲುವುದು ಸುಲಭದ ಮಾತಲ್ಲ. ಇಷ್ಟಕ್ಕೂ ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಲು ಭಾರತದ ದಂಡು ಹೊರಟು ನಿಂತಾಗ ಎಲ್ಲರ ಕಣ್ಣು ಇದ್ದದ್ದು, ನಿರೀಕ್ಷೆಯ ಮೂಟೆ ಹೊತ್ತಿದ್ದು ಸೈನಾ ನೆಹವಾಲ್ ಮತ್ತು ಪಾರುಪಳ್ಳಿ ಕಶ್ಯಪ್. ಆದರೆ ಈ ಎಣಿಕೆಯನ್ನು ಬುಡಮೇಲು ಮಾಡಿ ಭಾರತಕ್ಕೆ ಈ ಚಾಂಪಿಯನ್ಶಿಪ್ನ ಮಹಿಳೆಯರ ವಿಭಾಗದಲ್ಲಿ ಚೊಚ್ಚಲ ಪದಕ(ಕಂಚು) ತಂದಿದ್ದ ಮಾತ್ರ Dark horse ಆಗಿದ್ದ ಪಿ.ವಿ. ಸಿಂಧು.
ಯಾರೀಕೆ? ಖಂಡಿತ ಕೆಲವೇ ತಿಂಗಳ ಹಿಂದೆ ಈ ಹೆಸರಿನ ಜೊತೆಗೆ ಈ ಪ್ರಶ್ನೆ ಬರುತ್ತಿತ್ತು. ಸ್ವತಃ ಕಟ್ಟಾ ಬ್ಯಾಡ್ಮಿಂಟನ್ ಬೆಂಬಲಿಗರಿಗೂ ಸಿಂಧು ಯಾರೆಂದು ಗೊತ್ತಿರಲಿಕ್ಕಿರಲಿಲ್ಲ. ಅಂತಹುದರಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಿದ ಸಿಂಧು ಪದಕ ತರುವುದು ಇರಲಿ ಒಂದೆರಡು ಸುತ್ತು ಮುಂದುವರಿಯುವ ಬಗ್ಗೆಯೂ ಯಾರಿಗೂ ಅಷ್ಟಾಗಿ ಭರವಸೆ ಇರಲಿಲ್ಲ. ಅದರಲ್ಲೂ ಕ್ವಾರ್ಟರ್ ಫೈನಲ್ ಹಂತದಲ್ಲಿ ಸೈನಾ ಮತ್ತು ಕಶ್ಯಪ್ ನಿರ್ಗನಿಸಿದಾಗ ಈ ಬಾರಿಯೂ ವಿಶ್ವಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಬಾಗಿಲು ಬಂದ್ ಆಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಸಣ್ಣದೊಂದು ಅಚ್ಚರಿ ಕಾದಿತ್ತು. ಈ ಸಣ್ಣ ಅಚ್ಚರಿ ನಂತರ ಭರವಸೆಯ ಮೂಟೆಯಾಯಿತು. ಎರಡೇ ದಿನದಲ್ಲಿ ಈ ಭರವಸೆಯ ಕಾಯಿ ಮಾಗಿ ನಿರೀಕ್ಷೆಯ ಫಲವನ್ನು ನೀಡಿತು! ರ್ಯಾಂಕಿಂಗ್ನಲ್ಲಿ ತನಗಿಂತಲೂ ಕೆಳಗಿನ ಸ್ಥಾನದಲ್ಲಿದ್ದ ಚೀನಾದ ಆಟಗಾರ್ತಿಯ ಕೈಯಲ್ಲಿ ಸೈನಾ ನೆಹವಾಲ್ ಸೋತ ನಂತರ ಕಣಕ್ಕಿಳಿದ ಸಿಂಧು ಎದುರಿಸಿದ್ದಾದರೂ ಯಾರನ್ನು? ಕಳೆದ ವರ್ಷದ ಚಾಂಪಿಯನ್ ಯಿಹಾನ್ವಾಂಗ್ ನೆಟ್ನ ಆಚೆ ಬದಿ ಸಿಂಧು ಮೇಲೆರಗಲು ಸಿದ್ಧವಾಗಿದ್ದಳು. ಯಿಹಾನ್ ಕೇವಲ ಕಳೆದ ವರ್ಷದ ಚಾಂಪಿಯನ್ ಎಂಬ ಕಾರಣಕ್ಕೆ ಪ್ರಬಲ ಎನಿಸಿರಲಿಲ್ಲ. ಬದಲಿಗೆ ಭಾರತದ ಯಾವೊಬ್ಬ ಆಟಗಾರ್ತಿಗೂ ಈಕೆಯನ್ನು ಮಣಿಸಲು ಸಾಧ್ಯವಾಗಿರಲಿಲ್ಲ. ದೇಶದ ಆಗ್ರ ಆಟಗಾರ್ತಿ ಸೈನಾ ಏಳು ಬಾರಿ ಯಿಹಾನ್ ವಿರುದ್ಧ ತೊಡೆತಟ್ಟಿ ನಿಂತಿದ್ದರೂ ಒಮ್ಮೆಯೂ ಜಯಗಳಿಸಿರಲಿಲ್ಲ. ನಿಜವಾದ ಅರ್ಥದಲ್ಲಿ ಈಕೆ ಭಾರತೀಯ ಆಟಗಾರ್ತಿಯರ ಪಾಲಿಗೆ ಚೀನಾದ ಮಹಾಗೋಡೆಯೇ ಆಗಿದ್ದರು. ಆದರೆ ಮುಂದಿನ 55 ನಿಮಿಷಗಳಲ್ಲಿ ಭಾರತೀಯ ಆಟಗಾರ್ತಿಯರ ದೃಷ್ಟಿಯಲ್ಲಿ ಯಿಹಾನ್ ಮೇಲಿದ್ದ ಪ್ರಭಾವಳಿ ಸಂಪೂರ್ಣ ಕಳಚಿತು. ಸಿಂಧುರನ್ನು ತನ್ನ ಪ್ರಬಲ ಹೊಡೆತಗಳ ಮೂಲಕ ಬೆದರಿಸಿ ಓಡಿಸಬಹುದು ಎಂಬ ಯಿಹಾನ್ ಲೆಕ್ಕಾಚಾರ ಸಂಪೂರ್ಣವಾಗಿ ತಲೆಕೆಳಗಾಯಿತು. ಎದುರಾಳಿಯ ಒಂದೊಂದು ಹೊಡೆತಕ್ಕೂ ಗಾಳಿಯಲ್ಲಿ ಹಾರಿ ಪ್ರತಿ ಹೊಡೆತ ನೀಡಿದ ಸಿಂಧು ಮೊದಲ ಗೇಮ್ ತನ್ನದಾಗಿಸಿಕೊಂಡು ಎರಡನೆಯದರಲ್ಲೂ ಮುನ್ನಡೆದಳು. ಆದರೆ ಯಿಹಾನ್ಳ ಅನುಭವ ಆಕೆಯ ಕೈಹಿಡಿಯಿತು. ಎರಡನೇ ಗೇಮ್ನಲ್ಲಿ ನಾಲ್ಕು ಗೇಮ್ ಪಾಯಿಂಟ್ ಕಸಿದುಕೊಂಡ ಯಿಹಾನ್ ಅಂಕದಲ್ಲಿ ಸಮಸ್ಥಿತಿ ತಲುಪಿದಳು. ಇನ್ನು ಸಿಂಧುಗೆ ಕಷ್ಟ ಎಂಬ ಭಾವನೆ ಮೂಡಿತ್ತು. ಈ ಪಂದ್ಯಕ್ಕೆ ಮುನ್ನ ಒಂದೇ ಒಂದು ಬಾರಿ ಯಿಹಾನ್ ವಿರುದ್ಧ ಆಡಿ ಸೋತಿದ್ದ ಸಿಂಧು, (ಸುದೀರ್ಮನ್ ಕಪ್ ಪಂದ್ಯಾವಳಿ) ಈ ಬಾರಿ ಹಾಗಾಗದಂತೆ ಎಚ್ಚರಿಕೆ ವಹಿಸಿದಳು. ಚೀನಾದ ಮಹಾಗೋಡೆಯಿಂದ ಒಂದು ಕಲ್ಲನ್ನು ಉರುಳಿಸಿದಳು. ಕ್ರೀಡೆಯಲ್ಲಿ ಒಮ್ಮೊಮ್ಮೆ ಅನನುಭವಿ ಆಟಗಾರರು ಅತ್ಯಂತ ಪ್ರಬಲ ಎದುರಾಳಿಗಳನ್ನು ಪರಾಭವಗೊಳಿಸಿದರೆ ಅದನ್ನು Fluke ಎನ್ನುವುದುಂಟು. 1983ರ ಕ್ರಿಕೆಟ್ ವಿಶ್ವಕಪ್ನಲ್ಲಿ ಕಪಿಲನ ಹನ್ನೊಂದು ಹಸಿದ ತೋಳಗಳು ಒಂದೊಂದೇ ಜಯ ಸಾಧಿಸಿದಾಗಲೂ ಹೀಗೆಯೇ ಹೇಳಲಾಗಿತ್ತು. ಕೊನೆಗೆ ಅವರ ಹಸಿವಿಗೆ ವಿಶ್ವಕಪ್ ಆಹಾರವಾದಾಗಲಷ್ಟೇ ಈ ವಾದಕ್ಕೆ ತೆರೆ ಬಿದ್ದಿದ್ದು. ಇಲ್ಲಿ ಸಹ ಯಿಹಾನ್ ವಿರುದ್ಧ ಸಿಂಧು ಗೆದ್ದಾಗ ಅದು Fluke ಇರಬಹುದಾ ಎಂಬ ಅನುಮಾನ ಕಾಡಿತ್ತು. ಕ್ವಾರ್ಟರ್ ಫೈನಲ್ನಲ್ಲಿ ಸಿಂಧು ಎದುರಿದ್ದಿದ್ದು ವಿಶ್ವದ ಏಳನೇ ರ್ಯಾಂಕ್ ಆಟಗಾರ್ತಿ ಹಾಗೂ ಏಷ್ಯನ್ ಚಾಂಪಿಯನ್ ವಾಂಗ್ ಶಿಶಿಯಾನ್. ಮೂರು ತಿಂಗಳ ಹಿಂದಷ್ಟೇ ಸಿಂಧು ಮಲೇಷಿಯನ್ ಓಪನ್ ಸೀರೀಸ್ ಪಂದ್ಯಾವಳಿಯಲ್ಲಿ ವಾಂಗ್ ವಿರುದ್ಧ ಸೆಣಸಿದ್ದಳು. ಐದಡಿ 11 ಅಂಗುಲ ಎತ್ತರದ ಈ ಭಾರತೀಯ ಆಟಗಾರ್ತಿ ಸುಲಭದ ಎದುರಾಳಿ ಅಲ್ಲ ಎಂಬುದು ವಾಂಗ್ಗೆ ಆಗಲೇ ಮನದಟ್ಟಾಗಿತ್ತು. ಅಂದು ವಾಂಗ್ ವಿರುದ್ಧ ಗೆದ್ದ ಸಿಂಧು ತನ್ನ ಚೊಚ್ಚಲ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಲಗ್ಗೆ ಹಾಕಿದ್ದಳು. ಅದೇ ಜೋಶ್ ಇಲ್ಲೂ ಹರಿಯಿತು. ವಾಂಗ್ ಮತ್ತೆ ಸಿಂಧು ಕೈಯಲ್ಲಿ ಇಂಗು ತಿನ್ನಬೇಕಾಯಿತು. ಅಂದರೆ ಕೇವಲ ಮೂರು ತಿಂಗಳ ಅವಧಿಯಲ್ಲಿ ಸಿಂಧು ಚೀನಾದ ಅಗ್ರಕ್ರಮಾಂಕದ ಆಟಗಾರ್ತಿಯರ ಮೇಲೆ ಮೂರು ಬಾರಿ ಸವಾರಿ ಮಾಡಿದ್ದಳು! ಇದೇನೂ ಸಾಮಾನ್ಯ ಸಾಧನೆಯಲ್ಲ. ದೇಶದ ನಂಬರ್ ಒನ್ ಆಟಗಾರ್ತಿ ಸೈನಾ ನೆಹವಾಲ್ ಸಹ ಈ ಸಾಧನೆ ಮಾಡಿಲ್ಲ. ಈ ಎರಡು ಪಂದ್ಯಗಳನ್ನು ಗೆದ್ದು ಕಂಚಿನ ಪದಕ ಗ್ಯಾರಂಟಿ ಮಾಡಿಕೊಂಡ ಬಳಿಕ ಸಿಂಧು ಹೇಳಿದ್ದು 'ಚೀನಾದ ಸವಾಲು ಅಬೇಧ್ಯ ಎಂದು ನನಗೆ ಎಂದೂ ಅನಿಸಿಲ್ಲ. ನಮ್ಮ ನಡೆಯನ್ನು ನಾವು ಗಟ್ಟಿ ಮಾಡಿಕೊಂಡರೆ ಯಾರನ್ನು ಬೇಕಾದರೂ ಸೋಲಿಸಬಹುದು' ಎಂದು. ಇದರಲ್ಲೇ ಆಕೆಯ ಆತ್ಮವಿಶ್ವಾಸ ಎಷ್ಟರ ಮಟ್ಟಿಗಿದೆ ಎಂಬುದು ವೇದ್ಯವಾಗುತ್ತದೆ.
ಇಷ್ಟಕ್ಕೂ ಅಂಥದ್ದೇನಿದೆ ಈಕೆಯ ಆಟದಲ್ಲಿ? ನಿಜಕ್ಕೂ ಸಿಂಧು ಪ್ರತಿಭಾವಂತಳೇ? ಈ ಯಶಸ್ಸನ್ನು ಸ್ಥಿರವಾಗಿ ಉಳಿಸಿಕೊಳ್ಳಬಲ್ಲಳೇ? ಎಂಬ ಪ್ರಶ್ನೆ ಸಹಜ. ಆದರೆ ಕಳೆದ ಒಂದು ವರ್ಷದಲ್ಲಿ ಈಕೆಯ ಪ್ರಗತಿ ಗಮನಿಸಿದವರಿಗೆ ಪ್ರಶ್ನೆ ಕಗ್ಗಂಟೇನಲ್ಲ. ಸಿಂಧುಳ ಅತಿ ಪ್ರಬಲ ಅಸ್ತ್ರ ಎಂದರೆ ಆಕೆಯ ಎತ್ತರ. ಸೈನಾ ಇರಬಹುದು ಅದಕ್ಕೆ ಮುನ್ನ ಅಪರ್ಣಾ ಪೊಪಟ್ ಇರಬಹುದು. ಇವರಿಗೆ ಈ Height advantage ಇರಲಿಲ್ಲ. ಹಾಗಾಗಿ ಕೇವಲ ಆ್ಯಂಗಲ್ಗಳ ಮೇಲೆ ಅವಲಂಬಿಸಬೇಕಿತ್ತು. ಪೂರಕವಾಗಿ ನೆಟ್ ಸುತ್ತಲೇ ತಮ್ಮ ಆಟ ಕಟ್ಟಿಕೊಳ್ಳಬೇಕಾಗಿತ್ತು. ಆದರೆ ಸಿಂಧು ಇದಕ್ಕೆ ತದ್ವಿರುದ್ಧ. ತನ್ನ ಎತ್ತರದ ಲಾಭ ಪಡೆದು ಕಾಕ್ ಅನ್ನು ಕೋರ್ಟ್ನ ಎಲ್ಲ ಮೂಲೆಗಳಿಗೆ ಅಟ್ಟುವುದುರ ಜೊತೆಗೆ ಪ್ರಬಲ ಮತ್ತು ಪರಿಣಾಮಕಾರಿಯಾಗಿ ಸ್ಮ್ಯಾಶ್ (ರಭಸದ ಹೊಡೆತ) ಮಾಡಬಲ್ಲಳು. ಆ ಕಾರಣಕ್ಕೇ ಇತರ ಭಾರತೀಯ ಆಟಗಾರರಲ್ಲಿ ಕಾಣದ Aggression ಈಕೆಯ ಆಟದಲ್ಲಿ ಕಾಣಬಹುದು. ಇದರ ಜೊತೆಗೆ ಎದುರಾಳಿಯ ದಿಕ್ಕು ತಪ್ಪಿಸುವ ಕೈಚಳಕ (Deception)  ಹಾಗೂ ನೆಟ್ಪ್ಲೇನಲ್ಲಿ ಇನ್ನಷ್ಟು ಸುಧಾರಣೆ ಮಾಡಿಕೊಂಡರೆ ಸಿಂಧು ಯಶಸ್ಸಿನ ಹಾದಿಯಲ್ಲಿ ಬಲುದೂರ ಸಾಗಬಹುದು. ಇವೆರಡರ ಕೊರತೆ ಸೆಮಿಫೈನಲ್ ಕಾದಾಟದಲ್ಲಿ ಸ್ಪಷ್ಟವಾಗಿ ಕಂಡು ಬಂದಿತು. ಚೀನಿ ಆಟಗಾರ್ತಿಯರ ವಿರುದ್ಧ ತೋರಿದ್ದ ಆಕ್ರಮಣಕ್ಕೆ ಆಸ್ಪದವೇ ನೀಡದಂತೆ ಥಾಯ್ಲೆಂಡ್ನ ಇಂಟನಾನ್ (ಅಂತಿಮವಾಗಿ ವಿಶ್ವ ಚಾಂಪಿಯನ್ ಆದ ಆಟಗಾರ್ತಿ) ಸಿಂಧುಳನ್ನು ಸುಲಭವಾಗಿ ಸೋಲಿನ ಬಲೆಗೆ ಬೀಳಿಸಿದಳು. ಇನ್ನು ಕಳೆದ ವರ್ಷದಲ್ಲಿ ಈಕೆಯ ಸಾಧನೆ, ಸ್ಥಿರತೆಯ ಪ್ರಶ್ನೆಗೆ ಉತ್ತರ ನೀಡುತ್ತದೆ. ಪ್ರಕಾಶ್ ಪಡುಕೋಣೆ ನಂತರ ದೇಶದ ಜೂನಿಯರ್ ಮತ್ತು ಸೀನಿಯರ್ ಚಾಂಪಿಯನ್ ಆದ ಹೆಗ್ಗಳಿಕೆ ಸಿಂಧುಗಿದೆ. ಅದಾದ ಬಳಿಕ ವಿಶ್ವ ಜೂನಿಯರ್ ಚಾಂಪಿಯನ್ಶಿಪ್, ಏಷ್ಯನ್ ಚಾಂಪಿಯನ್ಶಿಪ್ನಲ್ಲಿನ ತೃಪ್ತಿಕರ ಸಾಧನೆ, ಹಿರಿಯರ ವಿಭಾಗದಲ್ಲಿ ಮಲೇಷಿಯನ್ ಓಪನ್ ಮತ್ತು ಈಗ ವಿಶ್ವ ಚಾಂಪಿಯನ್ಶಿಪ್ ಕಂಚು ಆಕೆಯ ಆಟದಲ್ಲಿ ಸ್ಥಿರ ಪ್ರಗತಿ ತೋರಿಸುತ್ತದೆ. ಸಿಂಧುಳ ಪೋಷಕರು ಸ್ವತಃ ಕ್ರೀಡಾಪಟುಗಳು. ಇಬ್ಬರೂ ವಾಲಿಬಾಲ್ ಆಟಗಾರರು. ತಂದೆ ರಮಣ 1986ರ ಸೋಲ್ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದ ಭಾರತ ವಾಲಿಬಾಲ್ ತಂಡದಲ್ಲಿದ್ದವರು. ಅಲ್ಲದೆ ಅರ್ಜುನ ಪ್ರಶಸ್ತಿ ಸಹ ಪಡೆದಿದ್ದಾರೆ. ಎಂಟರ ವಯಸ್ಸಿನಲ್ಲಿ ಮಗಳು ಬ್ಯಾಡ್ಮಿಂಟನ್ ರ್ಯಾಕೆಟ್ ಹಿಡಿದಾಗ ಮರು ಮಾತಾಡದೆ ಹುರಿದುಂಬಿಸಿದವರು. ಇಷ್ಟಾದರೂ ಈಕೆಯ ಸಾಧನೆಯ ಕನಸಿನ ಹುತ್ತಕ್ಕೆ ಹಾಲೆರೆದು ಪೋಷಿಸುತ್ತಿರುವ ವ್ಯಕ್ತಿ ಎಂದರೆ ಅದು ಪುಲ್ಲೇಲ ಗೋಪಿಚಂದ್. ಬಹುತೇಕ ಯಶಸ್ವಿ ಆಟಗಾರರು ನಿವೃತ್ತಿಯ ನಂತರ ತಾವು ಗಳಿಸಿದ ಯಶಸ್ಸು, ಸಂಪತ್ತಿನ ಭೋಗದಲ್ಲಿಯೇ ಕಳೆದು ಹೋಗುತ್ತಾರೆ. ಅಥವಾ ಸಂಪತ್ತು ವೃದ್ಧಿಸುವ, ಪ್ರಚಾರದಲ್ಲಿ ಉಳಿಸುವ ಕಾರ್ಯಗಳಲ್ಲಿ ಮಗ್ನರಾಗಿ ಬಿಡುತ್ತಾರೆ. ಇಂಥವರ ಮಧ್ಯೆ ಒಬ್ಬ ಪ್ರಕಾಶ್ ಪಡುಕೋಣೆ ಮತ್ತು ಒಬ್ಬ ಗೋಪಿಚಂದ್ ಭಿನ್ನರಾಗುತ್ತಾರೆ. ಭಾರತ ಕಂಡ ಅತ್ಯಂತ ಯಶಸ್ವಿ ಆಟಗಾರ, ಭಾರತೀಯ ಬ್ಯಾಡ್ಮಿಂಟನ್ನ ಐಕಾನ್ ಪ್ರಕಾಶ್ ಪಡುಕೋಣೆ. ಆಟದ ಕಣದಿಂದ ತೆರೆಮರೆಗೆ ಸರಿದರೂ ಬೆಸುಗೆ ಕಳೆದುಕೊಳ್ಳಲಿಲ್ಲ. ನಿಂತ ನೀರಾಗಿದ್ದ ಬ್ಯಾಡ್ಮಿಂಟನ್ ಆಡಳಿತದ ವಿರುದ್ಧ ಸಿಡಿದೆದ್ದು ಅದರ ಚುಕ್ಕಾಣಿ ಹಿಡಿದು ಹೊಸ ದಾರಿ ತೋರಿಸಿಕೊಟ್ಟಿದ್ದೇ ಅಲ್ಲದೆ ಇಂದಿಗೂ ತಮ್ಮದೇ ಅಕಾಡೆಮಿಯ ಮೂಲಕ ನವತಾರೆಗಳನ್ನು ಅಣಿ ಮಾಡುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಈಗ ಗೋಪಿಚಂದ್ ಸಹ ಅದೇ ಹಾದಿ ತುಳಿದಿದ್ದಾರೆ. ಕಾಲುನೋವಿನ ಸಮಸ್ಯೆಯಿಂದಾಗಿ ಆಟಕ್ಕೆ ಗುಡ್ಬೈ ಹೇಳಿದ ಮೇಲೆ ಗೋಪಿ ಹಟಕ್ಕೆ ಬಿದ್ದವರಂತೆ ಆಟದ ಜೊತೆಗಿನ ನಂಟು ಗಟ್ಟಿ ಮಾಡಿಕೊಂಡಿದ್ದಾರೆ. 2003ರಲ್ಲಿ ಆಂಧ್ರದ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಅವರ ಮನವೊಲಿಸಿ ಹೈದರಾಬಾದ್ ಬಳಿ ಐದೆಕೆರೆ ಜಾಗ ಪಡೆದು ಅಕಾಡೆಮಿ ಕಟ್ಟಲು ಹಣವಿಲ್ಲದೆ ಅವರಿವರ ಬಳಿ ಸಹಾಯ ಹಸ್ತ ಚಾಚಿದ್ದಿದೆ. 2006ರ ಸುಮಾರಿಗೆ ತೀರಾ ಸುಸಜ್ಜಿತ ಅಕಾಡೆಮಿ ತೆರೆದ ನಂತರ ಗೋಪಿಗೆ ಅದೇ ಮನೆಯಾಗಿದೆ. ದಿನದ 14 ತಾಸು ಆತ ಕಳೆಯುವುದು ಅಲ್ಲಿಯೇ. ಸಿಂಧು ಮತ್ತು ಅವಳಂತಹ ಅನೇಕ ಪ್ರತಿಭೆಗಳು ಅಲ್ಲಿಂದಲೇ ಅರಳುತ್ತಿವೆ. ಹೀಗಾಗಿ ಸಿಂಧು ಯಶಸ್ಸಿನಲ್ಲಿ ಗೋಪಿಚಂದ್ಗೂ ಸಿಂಹ ಪಾಲಿದೆ.
ಕ್ರಿಕೆಟ್, ಹಾಕಿ, ಫುಟ್ಬಾಲ್ನಲ್ಲಾದರೆ 11 ಮಂದಿ ಆಡುತ್ತಾರೆ. ಅವರಲ್ಲಿ ಯಾರಾದರೊಬ್ಬರು ಹೊಣೆ ಹೊತ್ತು 'ಇಂದು ನನ್ನ ದಿನ, ಕೈಜೋಡಿಸಿ' ಎಂದು ಹೇಳಬಹುದು. ಅವರ ಸುತ್ತ ಆಟ ಕಟ್ಟಬಹುದು. ಗೆಲುವು ಸೋಲನ್ನು ಹಂಚಿಕೊಳ್ಳಬಹುದು. ಆದರೆ ಬ್ಯಾಡ್ಮಿಂಟನ್ನಂತಹ ವೈಯಕ್ತಿಕ ಕ್ರೀಡೆಗಳಲ್ಲಿ ಆಟಗಾರ ನಿಜಕ್ಕೂ ಏಕಾಂಗಿ. ಸಂಭ್ರಮಕ್ಕೂ, ಸಂಕಟಕ್ಕೂ ಅವರೇ ಹೊಣೆ. ಈ ಕಾರಣಕ್ಕಾಗಿಯೇ ಪ್ರಕಾಶ್ ಪಡುಕೋಣೆ, ವಿಲ್ಸನ್ ಜೋನ್ಸ್, ಮೈಕೆಲ್ ಫೆರೆರಾ, ಗೀತ್ಸೇಥಿ, ಪಂಕಜ್ ಆಡ್ವಾಣಿ, ಪಿ.ಟಿ. ಉಷಾ, ಮಿಲ್ಖಾಸಿಂಗ್, ಅಂಜು ಜಾರ್ಜ್, ಸೈನಾ ಮತ್ತು ಸಿಂಧು ಅವರುಗಳ ಸಾಧನೆ ಎದೆಯುಬ್ಬಿಸುವಂತೆ ಮಾಡುತ್ತದೆ. ಒಂದು ಸಣ್ಣ ಯಶಸ್ಸು ಸಹ ಮೈಲಿಗಲ್ಲಾಗುತ್ತದೆ. ಸಿಂಧು ಅಂತಹ ಒಂದು ಮೈಲಿಗಲ್ಲು ನೆಟ್ಟಿದ್ದಾಳೆ.

- ಕೆ.ಎಸ್.ಜಗನ್ನಾಥ್
jagannath.kudinoor@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ