ಡ್ರೀಂ ವೀವರ್ಸ್ ನೌಕರರೊಂದಿಗೆ ಸಿರಿಲ್ -ಡೆನ್ನಿಸ್‌ 
ಅಂಕಣಗಳು

ಕೈ ಒರೆಸಿ ಬಿಸಾಡುವ ನ್ಯಾಪ್‌ಕಿನ್ ಕೈ ಹಿಡಿಯಿತು

ಬಿಸಿನೆಸ್‌ನಲ್ಲಿ ಯಶಸ್ಸು ಕಾಣುವುದು ಹೇಗೆ? ಇವತ್ತಿನ ಸಂದರ್ಭದಲ್ಲಿ ಎಲ್ಲರೂ...

ಬಿಸಿನೆಸ್‌ನಲ್ಲಿ ಯಶಸ್ಸು ಕಾಣುವುದು ಹೇಗೆ?
ಇವತ್ತಿನ ಸಂದರ್ಭದಲ್ಲಿ ಎಲ್ಲರೂ ಕೇಳುತ್ತಿರುವ ಪ್ರಶ್ನೆ ಇದು. ಇವತ್ತು, ಯಶಸ್ಸು ಪಡೆಯುವುದು ಹೇಗೆ ಎಂಬುದನ್ನು ವಿವರಿಸುವ ಪುಸ್ತಕಗಳು ಬಂದಿವೆ. ಗೆಲುವಿನ ಗುಟ್ಟು ತಿಳಿಸುವ ಸಿ.ಡಿ.ಗಳೂ ಮಾರುಕಟ್ಟೆಯಲ್ಲಿವೆ. ವ್ಯವಹಾರದಲ್ಲಿ ಗೆಲ್ಲಲು ಏನೇನೆಲ್ಲಾ ಮಾಡಬೇಕು ಎಂದು ಉದಾಹರಣೆ ಸಹಿತ ಹೇಳುವ ಕೋರ್ಸ್‌ಗಳೂ ಆರಂಭವಾಗಿವೆ. ಹಾಗಿದ್ದರೂ, ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಓದಿದವರೆಲ್ಲ ಯಶಸ್ವಿ ಉದ್ಯಮಿಗಳಾಗಲು ಸಾಧ್ಯವಾಗಿಲ್ಲ. 'ಇಂಥದೇ ಮಾರ್ಗ ಅನುಸರಿಸುವುದರಿಂದ ಗೆಲುವು ಪಡೆಯಬಹುದು' ಎಂದು ಖಡಕ್ಕಾಗಿ ಹೇಳಲು, ಅಂತಾರಾಷ್ಟ್ರೀಯ ಖ್ಯಾತಿಯ ಮ್ಯಾನೇಜ್‌ಮೆಂಟ್ ಗುರುಗಳಿಗೂ ಕೂಡ ಸಾಧ್ಯವಾಗಿಲ್ಲ.
 ಸಂದರ್ಭ ಹೀಗಿರುವಾಗ, ಚಾಲ್ತಿಯಲ್ಲಿರುವ ಯಾವುದೇ ಸಿದ್ಧ ಸೂತ್ರಗಳನ್ನು ಅನುಸರಿಸದೆ, ಭಂಡ ಧೈರ್ಯದಿಂದ ಬಿಜಿನೆಸ್ ಆರಂಭಿಸುವ ಕೆಲವರು ಸತತ ಪರಿಶ್ರಮದಿಂದ ಗೆದ್ದು ಬಿಡುವುದುಂಟು. ಅಂಥದೊಂದು ಸಕ್ಸಸ್ ಸ್ಟೋರಿಯ ವಿವರಣೆ ಇಲ್ಲಿದೆ. ಅಂದಹಾಗೆ, ಚೆನ್ನೈನಲ್ಲಿರುವ ಈ ಕಂಪನಿಯ ಹೆಸರು ಡ್ರೀಂ ವೀವರ್ಸ್. ಇಸವಿ 2008ರಲ್ಲಿ, ಕೇವಲ 500 ರುಪಾಯಿ ಬಂಡವಾಳದೊಂದಿಗೆ ಸಿರಿಲ್-ಡೆನ್ನಿಸ್ ಎಂಬ ತಾಯಿ-ಮಗಳು ಆರಂಭಿಸಿದ ಈ ಕಂಪನಿ, ಈಗ ವಾರ್ಷಿಕ 30 ಲಕ್ಷ ರುಪಾಯಿಗಳ ವ್ಯವಹಾರ ನಡೆಸುತ್ತಿದೆ. ಹಲವು ವಿಶೇಷಗಳಿಂದ ಕೂಡಿರುವ ಡ್ರೀಂ ವೀವರ್ಸ್‌ನ ಹುಟ್ಟು, ಬೆಳವಣಿಗೆ ಹಾಗೂ ಯಶೋಗಾಥೆಯ ಕುರಿತು ಸಿರಿಲ್ ಅವರೇ ಮಾತನಾಡಿದ್ದಾರೆ. ಆ ವಿವರಣೆ ಹೀಗೆ:
 'ವೃತ್ತಿಯಿಂದ ನಾನು ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ. ನನ್ನ ಯಜಮಾನರೂ ಅದೇ ಕೆಲಸದಲ್ಲಿದ್ದರು. ನಮಗೆ ಇಬ್ಬರು ಮಕ್ಕಳು. ಒಂದು ಗಂಡು, ಒಂದು ಹೆಣ್ಣು. ಮಗಳ ಹೆಸರು ಡೆನ್ನಿಸ್. ನನ್ನ ತಂದೆ-ತಾಯಿ, ನನ್ನ ಗಂಡನ ತಂದೆ-ತಾಯಿ; ಹೀಗೆ ಒಟ್ಟು ಎಂಟು ಜನರಿದ್ದ ತುಂಬು ಕುಟುಂಬ ನಮ್ಮದು. ಸ್ಕೂಲ್ ಟೀಚರ್ಸ್ ಅಂದ ಮೇಲೆ ವಿವರಿಸಬೇಕಿಲ್ಲ ತಾನೆ? ನಮಗೆ ಬರುತ್ತಿದ್ದ ಸಂಬಳ ತುಂಬಾ ಕಡಿಮೆಯಿತ್ತು. ವೃದ್ದಾಪ್ಯದ ಕಾರಣದಿಂದ ನನ್ನ ತಂದೆ-ತಾಯಿ ಹಾಗೂ ಅತ್ತೆ-ಮಾವನನ್ನು ಮೇಲಿಂದ ಮೇಲೆ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಈ ಕಾರಣದಿಂದಾಗಿ ಆಯಾ ತಿಂಗಳ ಸಂಬಳ ಅಲ್ಲಿಗಲ್ಲಿಗೆ ಸರಿಹೋಗುತ್ತಿತ್ತು. ಹೇಗಾದರೂ ಮಾಡಿ ಒಂದಿಷ್ಟು ಹಣ ಉಳಿಸಬೇಕು ಎಂದು ಪ್ರತಿ ತಿಂಗಳೂ ಅಂದುಕೊಳ್ತಾನೇ ಇದ್ವಿ. ಆದರೆ ಹಣ ಉಳಿಯುತ್ತಲೇ ಇರಲಿಲ್ಲ. ಅಂಥ ಸಂದರ್ಭದಲ್ಲೆಲ್ಲ- 'ಛೆ, ಮಧ್ಯಮ ವರ್ಗದವರ ಹಣೆ ಬರಹವೇ ಇಷ್ಟು' ಎಂದುಕೊಂಡು ಸುಮ್ಮನಾಗುತ್ತಿದ್ದೆ.
ಈ ಮಧ್ಯೆ ನನ್ನ ಮಗಳು ಡೆನ್ನಿಸ್ ಎಂ.ಬಿ.ಎ.ಗೆ ಸೇರಿಕೊಂಡಿದ್ದಳು. ಅವಳಿಗೆ ಚಿಕ್ಕಂದಿನಿಂದಲೂ ಬಡವರು, ಅಂಗವಿಕಲರ ಬಗ್ಗೆ ವಿಪರೀತ ಕಾಳಜಿ. ಸಮಯ ಸಿಕ್ಕಾಗಲೆಲ್ಲ 'ದುರ್ಬಲರಿಗೆ ನಾವು ನೆರವಾಗೋಣ ಅಮ್ಮಾ' ಎನ್ನುತ್ತಿದ್ದಳು. ಬರುತ್ತಿದ್ದ ಸಂಬಳ ಕುಟುಂಬ ನಿರ್ವಹಣೆಗೇ ಸಾಲುತ್ತಿರಲಿಲ್ಲ. ಹಾಗಾಗಿ ನಾನು ಏನೂ ಹೇಳದೆ ಸುಮ್ಮನಾಗುತ್ತಿದ್ದೆ. ಹೀಗಿರುವಾಗಲೇ, 2008ರಲ್ಲಿ ಏಪ್ರಿಲ್‌ನಲ್ಲಿ ಮದುವೆಯ ರಿಸೆಪ್ಷನ್‌ಗೆ ಹೋಗಬೇಕಾಗಿ ಬಂತು. ಅಲ್ಲಿ ಊಟದ ನಂತರ ಕೈ ಒರೆಸಿಕೊಳ್ಳಲು, ವಿಶೇಷ ವಿನ್ಯಾಸ ಮಾಡಿದ್ದ, ಪೇಪರ್‌ನಿಂದ ತಯಾರಿಸಲಾಗಿದ್ದ ನ್ಯಾಪ್‌ಕಿನ್‌ಗಳನ್ನು ಕೊಟ್ಟರು. ಮದುವೆ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ, ಡೆನ್ನಿಸ್ ಹೇಳಿದಳು: 'ಅಮ್ಮಾ, ಈಗ ಮದುವೆ ಮನೇಲಿ ಕೊಟ್ಟರಲ್ಲ; ಅದೇ ಥರದ ನ್ಯಾಪ್‌ಕಿನ್ ಹಾಗೂ ಇತರೆ ವಸ್ತುಗಳನ್ನು ನಾವು ತಯಾರಿಸೋಣ. ಅವನ್ನೆಲ್ಲ ಮಾರಿ ಬದುಕು ಸಾಗಿಸೋಣ. ಮುಂದಿನ ತಿಂಗಳು ನೀನು ಟೀಚರ್ ಕೆಲಸಕ್ಕೆ ರಾಜಿನಾಮೆ ಕೊಟ್ಟುಬಿಡು. ಈ ಹೊಸ ಬಿಜಿನೆಸ್‌ನಲ್ಲಿ ನಾವು ಖಂಡಿತಾ ಗೆಲ್ತೀವಿ. ನೀನು ಯೋಚಿಸಬೇಡ. ಹೆದರಬೇಡ, ಗಾಬರಿಯಾಗಬೇಡ. ಧೈರ್ಯವಾಗಿ ರಾಜಿನಾಮೆ ಕೊಡು...!'
 ಅವತ್ತಿಗೆ, ಡೆನ್ನಿಸ್ ಎಂ.ಬಿ.ಎ. ಮುಗಿಸಿದ್ದಳು. ಮುಂದೆ ಅವಳು ಏನಾದ್ರೂ ಬಿಜಿನೆಸ್ ಮಾಡ್ತಾಳೇನೋ ಎಂಬ ನಿರೀಕ್ಷೆಯಿತ್ತು. ಆದರೆ, ಈ ರೀತಿ ಮಾತಾಡುತ್ತಾಳೆಂಬ ಅಂದಾಜು ಖಂಡಿತ ಇರಲಿಲ್ಲ. ಎಂಟು ಜನರ ಹೊಟ್ಟೆ ತುಂಬಬೇಕಿದ್ದರೆ ನಾನು ಕೆಲಸಕ್ಕೆ ಹೋಗಲೇಬೇಕಿತ್ತು. ಬರುತ್ತಿದ್ದ ಸಂಬಳದ ಮೊತ್ತ ಚಿಕ್ಕದಿತ್ತು ನಿಜ. ಆದರೆ ಅದು ಸರ್ಕಾರಿ ನೌಕರಿ ಎಂಬುದನ್ನು ನಾನು ಮರೆತಿರಲಿಲ್ಲ. ಮಗಳಿಗೆ ಅದನ್ನೇ ಹೇಳಿದೆ. ಬಿಜಿನೆಸ್ ಅಂದ್ರೆ ಹುಡುಗಾಟವಲ್ಲ. ಅದು ಗಂಡಸರೇ ದರ್ಬಾರು ನಡೆಸುವ ಕ್ಷೇತ್ರ. ಎಲ್ಲಕ್ಕಿಂತ ಹೆಚ್ಚಾಗಿ ಬಿಜಿನೆಸ್ ಆರಂಭಿಸಲಿಕ್ಕೆ ಲಕ್ಷಾಂತರ ರು. ಬಂಡವಾಳ ಬೇಕು. ಮಾರ್ಕೆಟ್‌ನಲ್ಲಿ ಗ್ರಾಹಕರನ್ನು ಹಿಡಿಯೋಕೆ ತುಂಬಾ ಓಡಾಡಬೇಕು. ಇದೆಲ್ಲಾ ಬಹಳ ಕಷ್ಟದ ಕೆಲಸ. ರಿಸ್ಕ್ ತಗೊಳ್ಳಲಿಕ್ಕೆ ನಾನಂತೂ ರೆಡಿ ಇಲ್ಲ. ಹೇಗಿದ್ರೂ ಡಿಗ್ರಿ ಮುಗಿಸಿದ್ದೀಯ. ಎಲ್ಲಾದ್ರೂ ಒಂದು ಕಡೆ ಕೆಲಸಕ್ಕೆ ಸೇರಿಕೊಂಡು ನೆಮ್ಮದಿಯಾಗಿ ಬದುಕು ಎಂದು ಬುದ್ಧಿ ಹೇಳಿದೆ.
ಅವತ್ತು ರಾತ್ರಿ ಬಹಳ ಹೊತ್ತಿನವರೆಗೆ ಡೆನ್ನಿಸ್ ನಿದ್ರೆ ಮಾಡಲಿಲ್ಲ. ಬೆಳಗ್ಗೆ ಎದ್ದು ನೋಡಿದರೆ, ಸ್ವಂತ ಕಂಪನಿ ಆರಂಭಿಸಿ ನಾವು ಯಾವ್ಯಾವ ವರೈಟಿಯ ವಸ್ತುಗಳನ್ನು ತಯಾರಿಸಬಹುದೆಂಬ ಪಟ್ಟಿ ಮಾಡಿದ್ದಳು. ಅಷ್ಟೇ ಅಲ್ಲ, ಕಚ್ಚಾ ಪೇಪರ್‌ಗಳನ್ನು ಉಪಯೋಗಿಸಿ ಕೆಲವೊಂದು ಸ್ಯಾಂಪಲ್‌ಗಳನ್ನೂ ತಯಾರಿಸಿದ್ದಳು. ಇಷ್ಟಾದರೂ ಸರ್ಕಾರಿ ನೌಕರಿ ಬಿಡಲು ನನ್ನ ಮನಸ್ಸು ಒಪ್ಪಲಿಲ್ಲ. ಈ ಸಂದರ್ಭದಲ್ಲಿ ನನ್ನ ಮಗಳು ಹಠ ಹಿಡಿದಳು. ಜಗಳಕ್ಕೆ ನಿಂತಳು. ಉಪವಾಸ ಕೂತಳು. ಈ ಸಂದರ್ಭದಲ್ಲಿಯೇ ನಾನು ಮನಸ್ಸು ಬದಲಿಸುವಂಥ ಘಟನೆಯೊಂದು ನಡೆದುಹೋಯಿತು. ಏನಾಯಿತೆಂದರೆ - ಕಳೆದ 20 ವರ್ಷಗಳಿಂದಲೂ ನಮ್ಮ ಮನೆಯ ಸದಸ್ಯೆಯಂತೆಯೇ ಇದ್ದ ಪ್ರೇಮಾ ಎಂಬಾಕೆಗೆ ಸಕ್ಕರೆ ಕಾಯಿಲೆ ಉಲ್ಬಣಿಸಿತು. ಅದೇ ಸಂದರ್ಭಕ್ಕೆ ಆಕೆಯ ಎಡಗಾಲಿಗೆ ಗಾಯವೂ ಆಗಿಬಿಟ್ಟಿತು. ಚಿಕಿತ್ಸೆಗೆಂದು ಹೋದರೆ, ವೈದ್ಯರು ಹಿಮ್ಮಡಿಯವರೆಗೆ ಕಾಲು ತೆಗೆಯಲೇಬೇಕು ಎಂದರು. ಕಾಲಿಲ್ಲದ ಹೆಂಗಸು ಎಂದು ಗೊತ್ತಾದ ತಕ್ಷಣ, ಅಳಿಯನೇ ಆಕೆಯನ್ನು ಮನೆಯಿಂದ ಹೊರಹಾಕಿದ. ಆಕೆ ನಮ್ಮಲ್ಲಿಗೆ ಬಂದು 'ಯಾವುದಾದ್ರೂ ಅನಾಥಾಶ್ರಮಕ್ಕೆ ಸೇರಿಸಿಬಿಡಿ. ನಾನು ಹೇಗಾದ್ರೂ ಬದುಕಿಕೊಳ್ತೇನೆ' ಅಂದಳು. ತಕ್ಷಣವೇ ನನ್ನ ಮಗಳು - 'ಅಮ್ಮಾ, ನಾವೇ ಸ್ವಂತ ಬಿಜಿನೆಸ್ ಶುರು ಮಾಡಿದ್ರೆ ಇಂಥ ಹತ್ತಾರು ಮಂದಿಗೆ ಆಶ್ರಯ ನೀಡಬಹುದು. ಈಗಲಾದ್ರೂ ಮನಸ್ಸು ಬದಲಿಸು' ಅಂದಳು.
  ಮತ್ತೆ ಮತ್ತೆ ಅವಳ ಮಾತನ್ನೇ ಮೆಲುಕು ಹಾಕಿದ ಮೇಲೆ, ರಿಸ್ಕ್ ತಗೋಬಾರದೇಕೆ ಅನ್ನಿಸಿತು. ಕಡೆಗೊಮ್ಮೆ ಗಟ್ಟಿ ನಿರ್ಧಾರ ಮಾಡಿ ಕೆಲಸಕ್ಕೆ ರಾಜೀನಾಮೆ ಕೊಟ್ಟೆ. ಅದೇ ಸಂದರ್ಭಕ್ಕೆ ಬೇರ್ಯಾವುದೋ ಖರ್ಚು ಬಂತು. ಕಡೆಗೊಮ್ಮೆ ನನ್ನಲ್ಲಿ ಉಳಿದಿದ್ದು ಕೇವಲ 500 ರುಪಾಯಿ. ಈ ಅಲ್ಪ ಬಂಡವಾಳದಿಂದಲೇ ಬಿಜಿನೆಸ್ ಆರಂಭಿಸಿದೆ. ಈ ಹೊತ್ತಿಗಾಗಲೇ ಮಗಳು ಡ್ರೀಂ ವೀವರ್ಸ್ ಎಂಬ ಹೆಸರನ್ನು ಆಯ್ಕೆ ಮಾಡಿದ್ದಳು. ಒಂದು ವ್ಯಾವಹಾರಿಕ ಕಂಪನಿ ಅಂದ ಮೇಲೆ ಅದರ ರಿಜಿಸ್ಟ್ರೇಷನ್ ಮಾಡಿಸಬೇಕು ಅನ್ನಿಸಿತು. ಮರುದಿನದಿಂದಲೇ ಸರ್ಕಾರಿ ಕಚೇರಿಗಳ ಮೆಟ್ಟಿಲು ಹತ್ತಿ ಇಳಿಯುವ ಕೆಲಸ ಆರಂಭವಾಯಿತು. ಒಂದು ತಿಂಗಳ ನಂತರ ಕಡೆಗೂ ಡ್ರೀಂ ವೀವರ್ಸ್ ಕಂಪನಿಯ ಹೆಸರು ಸರ್ಕಾರಿ ದಾಖಲೆಗಳ ಪಟ್ಟಿಗೆ ಸೇರ್ಪಡೆಯಾಯಿತು.
ಲೇಡಿಸ್ ಬ್ಯೂಟಿ ಪಾರ್ಲರ್‌ಗಳು ಹಾಗೂ ಸ್ಪಾಗಳಲ್ಲಿ ಬಳಸುವ ನ್ಯಾಪ್‌ಕಿನ್‌ಗಳು, ಬ್ರಾ, ಒಳ ಉಡುಪುಗಳು, ಫೇಶಿಯಲ್ ಮಾಡುವ ಸಂದರ್ಭದಲ್ಲಿ ಬಳಸುವ ಮೆದುವಾದ ಟವೆಲ್... ಇತ್ಯಾದಿ ವಸ್ತುಗಳನ್ನು ಉತ್ಪಾದಿಸುವುದು, ನಂತರ ಅವುಗಳನ್ನು ಕೊಂಡೊಯ್ದು ಬ್ಯೂಟಿ ಪಾರ್ಲರ್‌ಗಳಿಗೆ ಮಾರುವುದು ನನ್ನ ಮಗಳ ಉದ್ದೇಶವಾಗಿತ್ತು. ಎಲ್ಲವೂ ಪರಿಸರ ಸ್ನೇಹಿ ಉತ್ಪನ್ನಗಳು. ಪ್ಲಾಸ್ಟಿಕ್ ಬಳಸದೆ ತಯಾರಿಸಿದಂಥವಾಗಿದ್ದರಿಂದ, ನಮ್ಮ ಉತ್ಪನ್ನಗಳಿಗೆ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆ ಸಿಗುತ್ತದೆ ಎಂಬ ನಂಬಿಕೆಯೂ ನಮ್ಮದಿತ್ತು. ಆದರೆ, ಕಚ್ಚಾ ವಸ್ತುಗಳನ್ನು ತರಲು ಅಗತ್ಯವಿದ್ದ ಬಂಡವಾಳವೇ ನಮ್ಮಲ್ಲಿರಲಿಲ್ಲ. ಹಾಗಾಗಿ, ಮೊದಲ ಹಂತದಲ್ಲಿ ನೂರರ ಸಂಖ್ಯೆಯಲ್ಲಿ ಮಾತ್ರ ವಸ್ತುಗಳನ್ನು ತಯಾರಿಸಿ ಅವುಗಳೊಂದಿಗೆ ಬ್ಯೂಟಿ ಪಾರ್ಲರ್‌ಗಳು ಹಾಗೂ ಹೆಸರಾಂತ ಸ್ಪಾ ಕಂಪನಿಗಳ ಮೆಟ್ಟಿಲು ಹತ್ತಿದೆ.
ಅಲ್ಲಿ ದೊರೆತ ಪ್ರತಿಕ್ರಿಯೆ ಬಹಳ ಕೆಟ್ಟದಿತ್ತು. ಬಹಳಷ್ಟು ಕಂಪನಿಗಳಲ್ಲಿ ನಾವು ತಯಾರಿಸಿದ ವಸ್ತುಗಳನ್ನು ನೋಡುವುದಕ್ಕೂ ಒಪ್ಪಲಿಲ್ಲ. ಮತ್ತೆ ಕೆಲವು ಕಡೆಗಳಲ್ಲಿ ಕಂಪನಿಯ ಮುಖ್ಯಸ್ಥರನ್ನು ಭೇಟಿ ಮಾಡುವುದಕ್ಕೆ ಅವಕಾಶವೇ ಸಿಗಲಿಲ್ಲ. ರಿಸೆಷ್ಶನ್‌ನಲ್ಲಿ ಕೂತಿದ್ದ ಜನ, ಬಹಳ ಸಂದರ್ಭಗಳಲ್ಲಿ ಕೆಟ್ಟದಾಗಿ ವರ್ತಿಸಿದರು. ನಮ್ಮನ್ನು ಅನುಮಾನದಿಂದ ನೋಡಿದರು. ಅವಮಾನಿಸಿದರು ಕೂಡಾ. ಇಂಥ ಸಂದರ್ಭಗಳಲ್ಲೆಲ್ಲ ಛೆ, ನಾನು ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿ ತಪ್ಪು ಮಾಡಿಬಿಟ್ಟೆ' ಅನಿಸುತ್ತಿತ್ತು. ಅದನ್ನೇ ಮಗಳಿಗೆ ಹೇಳಿದರೆ- 'ಹಾಗೆಲ್ಲಾ ಅಂದ್ಕೋ ಬೇಡ. ಒಳ್ಳೆಯ ದಿನಗಳು ಹತ್ತಿರದಲ್ಲೇ ಇವೆ' ಎಂದು ಡೆನ್ನಿಸ್ ಧೈರ್ಯ ಹೇಳುತ್ತಿದ್ದಳು. ಈ ವೇಳೆಗೆ ಕಾಲು ಕಳೆದುಕೊಂಡಿದ್ದ ಪ್ರೇಮಾಳನ್ನು ನಮ್ಮೊಂದಿಗೇ ಇರಿಸಿಕೊಂಡಿದ್ದೆವು. ಇನ್‌ಸ್ಟಾಲ್ ಮೆಂಟ್‌ನಲ್ಲಿ ಒಂದು ಹೊಲಿಗೆ ಯಂತ್ರ ಖರೀದಿಸಿದ್ದೆವು. ಡೆನಿಸ್ ಹೇಳಿದ ವಿನ್ಯಾಸಕ್ಕೆ ತಕ್ಕಂತೆ ಬಟ್ಟೆಗಳನ್ನು ಪ್ರೇಮಾ ಕಟ್ ಮಾಡುತ್ತಿದ್ದಳು. ಡೆನ್ನಿಸ್ ಹೊಲಿಗೆಯ ಕೆಲಸ ನಿರ್ವಹಿಸುತ್ತಿದ್ದಳು.
ಹೀಗಿರುವಾಗಲೇ ಬ್ಯೂಟಿಪಾರ್ಲರ್, ಸ್ಪಾ ಮತ್ತು ಆಸ್ಪತ್ರೆಗಳಿಗೆ ಸಿಂಗಲ್ ಝೂಸ್ ಪ್ರಾಡಕ್ಟ್ (ಒಮ್ಮೆ ಮಾತ್ರ ಬಳಸಿ ಬಿಸಾಕುವಂಥ) ವಸ್ತುಗಳನ್ನು ಪೂರೈಸುವ ಹಿಂದೂಸ್ತಾನ್ ಲೀವರ್‌ನ ಅಂಗ ಸಂಸ್ಥೆಯಾದ ಆಯುಷ್ ಕಂಪನಿಗೆ ನಮ್ಮ ತಯಾರಿಕೆಯ ಉತ್ಪನ್ನಗಳೊಂದಿಗೆ ಹೋದೆ. ಎಲ್ಲವನ್ನೂ ಕೂಲಕಂಷವಾಗಿ ಪರೀಕ್ಷಿಸಿದ ಅಲ್ಲಿನ ಮುಖ್ಯಸ್ಥರು, ತಕ್ಷಣವೇ 5000 ರುಪಾಯಿ ಮೌಲ್ಯದ ವಸ್ತುಗಳಿಗೆ ಆರ್ಡರ್ ಕೊಟ್ಟರು. ಕೇವಲ 500 ರೂಪಾಯಿ ಬಂಡವಾಳದಲ್ಲಿ ಕಂಪನಿ ಆರಂಭಿಸಿ ಎರಡು ತಿಂಗಳು ಕಳೆಯುವುದರೊಳಗೆ 5000 ರೂ.ನ ಆರ್ಡರ್ ಬಂದರೆ ಖುಷಿಯಾಗುವುದಿಲ್ಲವೆ? ಈ ಬಿಜಿನೆಸ್‌ನಲ್ಲಿ ಗೆಲ್ಲಬಹುದು ಎಂಬ ವಿಶ್ವಾಸ ಆ ಕ್ಷಣದಲ್ಲೇ ಗಟ್ಟಿಯಾಯಿತು. ತಕ್ಷಣವೇ ನಾಲ್ಕು ಹೊಸ ಹೊಲಿಗೆ ಯಂತ್ರಗಳನ್ನು ಖರೀದಿಸಿದೆವು. ಕಾಕತಾಳೀಯ ಎಂಬಂತೆ, ಜೀವನದಲ್ಲಿ ಬಹಳ ನೊಂದಿದ್ದ ಶೀಬಾ ಮತ್ತು ದೇವಿ ಎಂಬಿಬ್ಬರು ಮಹಿಳೆಯರೂ ಅದೇ ಸಂದರ್ಭದಲ್ಲಿ ಪರಿಚಯವಾದರು. ಇಬ್ಬರ ಮುಂದೆಯೂ ಮಕ್ಕಳನ್ನು ಸಾಕಬೇಕಾದ, ಅದಕ್ಕಾಗಿ ಬದುಕಲೇಬೇಕಾದ ಅನಿವಾರ್ಯತೆಯಿತ್ತು. ಇಬ್ಬರಿಗೂ ಟೈಲರಿಂಗ್‌ನಲ್ಲಿ ತರಬೇತಿ ನೀಡಿ ಕೆಲಸ ಕೊಟ್ಟೆವು. ಈ ವೇಳೆಗೆ, ಆಯುಷ್ ಕಂಪನಿಯಿಂದ ಪ್ರತಿ ತಿಂಗಳೂ ನಮಗೆ ಆರ್ಡರ್ ಬರತೊಡಗಿತ್ತು.
ಬಾಡಿ ಮಸಾಜ್ ಮಾಡುವ ಸಂದರ್ಭದಲ್ಲಿ ಬಳಕೆಯಾಗುವ ಸಿಂಗಲ್ ಯೂಸ್ ವಸ್ತುಗಳಾದ ಮೌತ್ ಮಾಸ್ಕ್, ಒಳ ಉಡುಪುಗಳು, ಕರ್ಚಿಫ್, ಟವಲ್, ಬೆಡ್‌ಶೀಟ್, ಸಾಕ್ಸ್, ಚಪ್ಪಲ್ಸ್, ಪೇಪರ್ ಬ್ಯಾಗ್ಸ್, ಆಸ್ಪತ್ರೆಗಳಲ್ಲಿ ಬಳಕೆಯಾಗುವ ಏಪ್ರನ್, ತಲೆಗೆ ಬಳಸುವ ಟೋಪಿ, ಲೇಡೀಸ್ ಬ್ಯೂಟಿ ಪಾರ್ಲರ್‌ಗಳಲ್ಲಿ ಹೇರ್ ಕಟಿಂಗ್‌ನ ಸಂದರ್ಭದಲ್ಲಿ ಬಳಸುವ ಗೌನ್, ಲಾಂಡ್ರಿ ಬ್ಯಾಗ್ ಸೇರಿದಂತೆ 40ಕ್ಕೂ ಹೆಚ್ಚು ವಸ್ತುಗಳನ್ನು ಡ್ರೀಂ ವೀವರ್ಸ್ ಕಂಪನಿ ಉತ್ಪಾದಿಸುತ್ತದೆ. ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಬಳಕೆಯಾಗುವ ವಸ್ತುವಿನ ಪೈಕಿ ಹೆಚ್ಚಿನದ್ದು ಡ್ರೀಂ ವೀವರ್ಸ್ ಕಂಪನಿ ತಯಾರಿಸಿದ್ದೇ ಆಗಿರುತ್ತದೆ. ಕಂಪನಿ ಆರಂಭಿಸಿದ ಮೊದಲ ವರ್ಷ ದೊಡ್ಡ ಮಟ್ಟದ ಲಾಭ ಬರಲಿಲ್ಲ. ಆದರೆ 2009 ರಿಂದ ಬೇಡಿಕೆ ಹೆಚ್ಚಿತು. ಒಂದು ಕಾಲದಲ್ಲಿ ನಮ್ಮನ್ನು ಹತ್ತಿರಕ್ಕೂ ಸೇರಿಸದಿದ್ದ ಬ್ಯೂಟಿ ಪಾರ್ಲರ್ ಹಾಗೂ ಸ್ಪಾಗಳ ಮಾಲೀಕರು ಪೈಪೋಟಿಯ ಮೇಲೆ ನಮ್ಮ ಕಂಪನಿಯ ಉತ್ಪನ್ನಗಳನ್ನು ಖರೀದಿಸಿದರು. ಪರಿಣಾಮ, ಕೆಲವೇ ದಿನಗಳಲ್ಲಿ ಕಂಪನಿಯ ವಹಿವಾಟು ಲಕ್ಷ ರೂ.ಗಳನ್ನು ದಾಟಿತು. ಈ ಸಂದರ್ಭದಲ್ಲಿ ನಾವು ತಪ್ಪದೇ ನೆನಪಿಸಿಕೊಳ್ಳಬೇಕಾದವರು ಒಬ್ಬರಿದ್ದಾರೆ. ಅವರೇ, ಭಾರತೀಯ ಯುವ ಶಕ್ತಿ ಟ್ರಸ್ಟ್‌ನ ಅಧ್ಯಕ್ಷೆ ಲಕ್ಷ್ಮೀ ವೆಂಕಟರಾಮನ್. ವ್ಯವಹಾರದ ಎಬಿಸಿಡಿ ಗೊತ್ತಿಲ್ಲದೆ, ಆರ್ಥಿಕ ಬಿಕ್ಕಟ್ಟಿನಿಂದ ನಾವು ಕಂಗಾಲಾಗಿದ್ದ ಸಂದರ್ಭದಲ್ಲಿ ಬ್ಯಾಂಕ್‌ನಿಂದ 2.5 ಲಕ್ಷ ರೂ.ಗಳ ಸಾಲ ಕೊಡಿಸಿ ಧೈರ್ಯ ತುಂಬಿದವರು ಆಕೆ.
  ಈಗ ಏನಾಗಿದೆಯೆಂದರೆ, ನಮ್ಮ ಕಂಪನಿಯ ಉತ್ಪನ್ನಗಳು ದುಬೈ, ಮಲೇಷ್ಯಾ, ಸಿಂಗಾಪುರ್, ಆಸ್ಟ್ರೇಲಿಯಾಗಳಿಗೆ ರಫ್ತಾಗುತ್ತಿವೆ. ಪುರುಷ ಪ್ರಧಾನವಾಗಿರುವ ವ್ಯವಹಾರ ಕ್ಷೇತ್ರದಲ್ಲಿ ನಾವು ಗೆದ್ದಿದ್ದೇವೆ. ಭಾರತದಲ್ಲಿ, 15ಕ್ಕೂ ಹೆಚ್ಚು ದೊಡ್ಡ ಕಂಪನಿಗಳು ಹಾಗೂ 50ಕ್ಕೂ ಹೆಚ್ಚು ಚಿಕ್ಕ ಕಂಪನಿಗಳು ನಮ್ಮ ಗ್ರಾಹಕರಾಗಿದ್ದಾರೆ. ಈ ವರ್ಷ ನಮ್ಮ ವಾರ್ಷಿಕ ವಹಿವಾಟು 30 ಲಕ್ಷ ತಲುಪಿದೆ. ಐದು ವರ್ಷಗಳ ಹಿಂದೆ ಗ್ಯಾರೇಜಿನಂಥ ರೂಂನಲ್ಲಿ ಆರಂಭವಾದ ಕಂಪನಿ ಈಗ ಸ್ವಂತ ಬಿಲ್ಡಿಂಗ್ ಹೊಂದಿದೆ. 25 ಹೆಣ್ಣು ಮಕ್ಕಳ ಕುಟುಂಬಕ್ಕೆ ಆಶ್ರಯ ನೀಡಿದೆ. ಹೇಳಲೇಬೇಕಾದ ಮಾತೆಂದರೆ, ನಮ್ಮಲ್ಲಿ ಕೆಲಸ ಮಾಡುತ್ತಿರುವವರೆಲ್ಲ ಹೆಂಗಸರೇ. ಎಲ್ಲರೂ ಬದುಕಿನಲ್ಲಿ ಬಹಳ ನೊಂದವರು. ಬಗೆಬಗೆಯ ತೊಂದರೆಗಳಿಗೆ ತುತ್ತಾದವರು. ಅವರೆಲ್ಲ ಈಗ ಸ್ವತಂತ್ರವಾಗಿ ಬದುಕುವ ದಾರಿ ಕಂಡುಕೊಂಡಿದ್ದಾರೆ. ಎಲ್ಲರೂ ನಮ್ಮ ಕುಟುಂಬದ ಸದಸ್ಯರಂತೆಯೇ ಬದುಕುತ್ತಿದ್ದಾರೆ. ನಾವೆಲ್ಲಾ ಒಂದೇ ಮನೆಯವರು ಎಂಬ ಭಾವನೆ ಎಲ್ಲರಿಗೂ ಇರುವುದರಿಂದ ಮಾಡುತ್ತಿರುವ ಕೆಲಸ ಕಷ್ಟದ್ದೆಂದು ಯಾರಿಗೂ ಅನಿಸುತ್ತಿಲ್ಲ. ಬಿಜಿನೆಸ್‌ನ ನೆಪದಲ್ಲಿ ತಿಂಗಳಿಗೆ ಮೂರು ಬಾರಿ ವಿದೇಶ ಪ್ರವಾಸ ಮಾಡುವ ನನ್ನ ಮಗಳು ಡೆನ್ನಿಸ್, ಈವರೆಗಿನ ಸಾಧನೆಯ ಕುರಿತು ಹೆಮ್ಮೆಪಡುತ್ತಾಳೆ. ಡ್ರೀಂ ವೀವರ್ಸ್ ಕಂಪನಿಯಿಂದ ನಮ್ಮ ಜೀವನಕ್ಕೊಂದು ದಾರಿಯಾಯ್ತು ಎನ್ನುವ ನೌಕರರ ಮಾತು ಕೇಳಿದಾಗ, ಮಗಳಲ್ಲಿ ಮೂಡಿದ ಧನ್ಯತಾ ಭಾವವೇ ನನ್ನದೂ ಆಗುತ್ತದೆ...' ಎನ್ನುತ್ತಾ ಮಾತು ಮುಗಿಸುತ್ತಾರೆ ಸಿರಿಲ್.
500 ರುಪಾಯಿಗಳ ಅಲ್ಪ ಬಂಡವಾಳದಿಂದ ಕಂಪನಿ ಆರಂಭಿಸಿ, ಈಗ 25 ಕುಟುಂಬಗಳಿಗೆ ಆಶ್ರಯ ನೀಡಿರುವ ಸಿರಿಲ್ -ಡೆನ್ನಿಸ್‌ಗೆ ಅಭಿನಂದನೆ ಹೇಳಬೇಕು ಅನ್ನಿಸಿದರೆ: dream.weaver71@yahoo.com

- ಎ.ಆರ್. ಮಣಿಕಾಂತ್
armanikanth@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ