-ಏನ್ ಸಾರ್, ಎಷ್ಟ್ ವರ್ಷದಿಂದ ಟ್ರಾಫಿಕ್ಕಲ್ಲಿ ಸಿಕ್ಕಾಕ್ಕೊಂಡಿದೀರ?
ಅಯ್ಯೋ ಸಾಕಾಗಿ ಹೋಗಿದೆ ಬಿಡ್ರೀ. ಪ್ರಮೋಷನ್ ತಗೊಂಡು ಮುಂದಕ್ಕೋಗೋಣ ಅಂದ್ರೆ ಏನ್ ಮಾಡಿದ್ರೂ ಗ್ರೀನ್ ಸಿಗ್ನಲ್ಲೇ ಬೀಳ್ತಿಲ್ಲ.
-ಎಲ್ಲೋ ಹೋಗಿ ಒದ್ದಾಡೋಕಿಂತ ಸದ್ಯಕ್ಕೆ 'ಎಲ್ಲೋ' ಲೈಟ್ ಇದೆ ಅಂದ್ಕೊಂಡ್ ವೆಯ್ಟ್ ಮಾಡಿ. ಅದ್ ಬಿಡಿ ನೀವು ಯಾವಾಗ್ಲೂ ಇನ್ನೊಬ್ರ ಕಡೆ ಕೈ ತೋರಿಸೋ ಕೆಲ್ಸ ಮಾಡ್ತೀರಲ್ಲ, ಇದು ಸರೀನಾ?
ಇಲ್ಲ ರೀ, ನಮ್ಮ ಕೆಲಸ ಬರೀ ದಾರಿ ತೋರಿಸೋದು. ನಾನು ಕೈ ತೋರಿಸೋ ಕೆಲ್ಸ ಮಾಡೋವ್ನಲ್ಲ. ಹೇಳಿ ಕೇಳಿ ಮಂಡ್ಯದೋನು. ನೋಡಿ, ರಮ್ಯಾಗೆ ಮೊನ್ನೆ ತಾನೇ ಓಟ್ ಹಾಕಿ ಬಂದಿದೀನಿ, ಬೆರಳು ನೋಡಿ.
-ಓ ನೀವು ಕೈಯಷ್ಟೇ ಅಲ್ಲ ಬೆರಳೂ ತೋರಿಸ್ತೀರಾ ಓಕೆ ಓಕೆ. ಸರಿ, ಅಂತೂ ರಮ್ಯಂಗೂ ಒಂದ್ ದಾರಿ ತೋರಿಸಿಬಿಟ್ರಿ..
ಅಯ್ಯೋ ಆ ವಿಷ್ಯದಲ್ಲಿ ನಮ್ ಕೈಲೇನೂ ಇಲ್ಲ. ಅವರಿಗೆ 'ಕೈ'ಯೇ ದಾರಿ ತೋರಿ'ಸಿದ್ದು'. ಆದ್ರೆ 'ರಮ್ಯಾ ವಸ್ತಾವಯ್ಯ' ಅಂತ ನಮಗೆಲ್ಲ ನಂಬಿಕೆ ಇತ್ತು.
-ಸರಿ, ಸರಿ, ಆದ್ರೆ, ಹುಷಾರು, ಎಲ್ಲಾ ಕಥೆಗಳೂ 'ಒಂದಾನೊಂದು ಕಾಲದಲ್ಲಿ' ಅಂತನೇ ಶುರುವಾಗಲ್ಲ, ಕೆಲವು ಕತೆಗಳು 'ಒಂದ್ ವೇಳೆ ನಾನ್ ಎಲೆಕ್ಷನ್ನಲ್ಲಿ ಗೆದ್ರೆ' ಅಂತನೂ ಶುರುವಾಗಿರ್ತವೆ...
ಇಲ್ಲ ರೀ, ನಮಗೆ ನಂಬಿಕೆ ಇದೆ. ಸ್ಯಾಂಡಲ್‌ವುಡ್ ಕ್ವೀನ್‌ಗೆ ಮಂಡ್ಯದ್ ಶುಗರ್‌ಕೇನ್ ಸೇರಿದ್ ಮೇಲೆ ಬ್ಲಡ್ ಪ್ಯೂರಿಫೈ ಆಗಿರುತ್ತೆ.
-ಅದ್ಸರಿ, ಆದ್ರೆ, ನಮ್ಮ ಅಂಬರೀಶ್ ಏನೋ ರೆಬೆಲ್‌ಸ್ಟಾರ್. ರಮ್ಯಾ ಸಿನಿಮಾರಂಗದಲ್ಲಂತೂ ಟ್ರಬಲ್ ಸ್ಟಾರ್ ಅಂತ್ಲೇ ಹೆಸರು ಮಾಡಿದವರು. ಮುಂದೆ ನಿಮಗೆ ಏನೂ ತೊಂದ್ರೆ ಆಗಲ್ಲ ಅಂತ ಗ್ಯಾರಂಟಿ ಇದೆಯಾ?
ಹಂಗೆಲ್ಲ ಏನಿಲ್ಲ. ಅವರಿಗೆ ಆಗದೋರು ಎಲ್ಲ ಊರಿಗೊಬ್ಳೇ ಪದ್ಮಾವತಿ ಅಂತ ಆಡಿಕೊಳ್ಳಬಹುದು. ಆದ್ರೆ ರಮ್ಯಾ ಮಾತ್ರ ಈಗಾಗ್ಲೇ ತಲ್ಲಣಿಸದಿರು ಮಂಡ್ಯ ಅಂತ ನಮಗೆಲ್ಲ ಗ್ಯಾರಂಟಿ ಕೊಟ್ಟವ್ರೆ.
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಇನ್ನೊಬ್ಬರೊಂದಿಗೆ ವಾದ ಮಾಡುವ ವೇಳೆ ಕೆಲವರಿಗೆ ಎಷ್ಟೇ ಜ್ಞಾನವಿದ್ದರೂ ಅದರ ಸರಿಯಾದ ಬಳಕೆ ಆಗುವುದಿಲ್ಲ. ಅದಕ್ಕೆ ಕಾರಣ ವಾಕ್‌ಚಾತುರ್ಯದಲ್ಲಿನ ಸಮಸ್ಯೆ. ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ, ನಮ್ಮ ವಾದವನ್ನು ಮಂಡಿಸುವುದು ಒಂದು ಕಲೆ. ನಮ್ಮೆದುರಿಗೆ ಮಾತನಾಡುತ್ತಿರುವವರ ಮುಂದೆ ಮಂಡಿಯೂರದೆ ನಮ್ಮನ್ನು ಹೇಗೆ ಸಮರ್ಥಿಸಿಕೊಳ್ಳಬೇಕು ಎಂಬುದರ ಬಗ್ಗೆ ಇಲ್ಲಿನ ವೆಬ್‌ಸೈಟ್‌ಗಳು ಮಾಹಿತಿ ನೀಡುತ್ತವೆ.
l bit.ly/4s5uMD l bit.ly/17bBWvZ
l bit.ly/aUZwXe l bit.ly/1dCz2VT
l bit.ly/19QXIec
ಹರಿ-ಕಥೆ
ಗಂಡ ಹೆಂಡ್ತಿ ಎರಡೂವರೆ ವರ್ಷದ ಮಗಳು ಮಾತ್ರ ಇದ್ದ ಮನೆ ಅದು. ಒಮ್ಮೆ ಹೆಂಡತಿ ಶಾಪಿಂಗ್‌ಗೆ ಅಂತ ಹೊರಗೆ ಹೋದ್ಳು. ಗಂಡ ತನ್ನ ಡ್ರಾಯಿಂಗ್ ರೂಮ್‌ನಲ್ಲಿ ಕಂಪ್ಯೂಟರ್ ಮುಂದೆ ಕೆಲಸ ಮಾಡುತ್ತಾ ಕೂತಿದ್ದ. ಅಷ್ಟರಲ್ಲಿ ಪುಟ್ಟ ಮಗಳು ಅಪ್ಪನ ಬಳಿ ಬಂದಳು. ಅವಳ ಕೈಯಲ್ಲಿ ಅವಳ ಹುಟ್ಟುಹಬ್ಬಕ್ಕೆಂದು ಯಾರೋ ಕೊಡಿಸಿದ ಟೀ ಸೆಟ್ ಇತ್ತು. ಅದು ಅವಳ ಅಚ್ಚುಮೆಚ್ಚಿನ ಆಟಿಕೆ. ಅಪ್ಪನ ಬಳಿ ಬಂದವಳೇ ಮುದ್ದು ಮುದ್ದಾಗಿ 'ಪಪ್ಪಾ, ಪಪ್ಪಾ ನಿಂಗೆ ಟೀ ಬೇಕಾ?' ಅಂದ್ಳು. ಅಪ್ಪ ಮಗಳು ಕೇಳಿದ್ದು ನೋಡಿ ಖುಷಿಯಾಗಿ 'ಹ್ಞೂ' ಅಂದ. ಮಗಳು ಒಳಗೆ ಓಡಿ ಹೋಗಿ, ಒಂದು ನಿಮಿಷದ ನಂತರ ಬಂದು 'ಪಪ್ಪ ಟೀ' ಅಂತ ಕಪ್ ಕೊಟ್ಟಳು. ಅದರಲ್ಲಿ ಬರೀ ನೀರಿತ್ತು. ಆದ್ರೂ , ಮಗಳು ಖುಷಿಯಾಗಲಿ ಅಂತ ಅಪ್ಪ ಅದನ್ನು ಕುಡಿದು 'ಟೀ ಸೂಪರ್ ಪುಟ್ಟಿ' ಅಂದ. ಮಗು ಫುಲ್ ಖುಷ್. ಮತ್ತೆ 5 ನಿಮಿಷದ ನಂತರ ಅಪ್ಪನ ಬಳಿ ಬಂದ ಮಗಳು ಮತ್ತೆ 'ಪಪ್ಪ ಟೀ ಬೇಕಾ?' ಅಂದ್ಳು. ಇವನು 'ಹ್ಞೂ' ಅಂದ. ಮತ್ತೆ ನೀರು ತಂದುಕೊಟ್ಟಳು. ಇವನು ಕುಡಿದ. ಇದು ಮತ್ತೆ ಮತ್ತೆ ಹೆಂಡತಿ ಮನೆಗೆ ಬರೋವರೆಗೂ ನಡೆದೇ ಇತ್ತು. ಹೆಂಡತಿ ಬಂದ ಕೂಡಲೇ ಗಂಡ ಉತ್ಸಾಹದಿಂದ ಹೇಳಿದ 'ಈಗ ನೋಡು ನನ್ನ ಮಗಳು ಏನ್ ಮಾಡ್ತಾಳೆ' ಅಂತ ಹೆಂಡತಿಗೆ ಹೇಳುತ್ತಿದ್ದಂತೆ ಮಗು ಮತ್ತೆ ಡ್ರಾಯಿಂಗ್ ರೂಮ್‌ಗೆ ಬಂತು. 'ಪಪ್ಪಾ ಪಪ್ಪಾ ಟೀ ಬೇಕಾ?' ಅಂತ ಕೇಳ್ತು. ಇವನು 'ಹ್ಞೂ' ಅಂದ. ಮಗಳು ಒಳಗೆ ಹೋಗಿ ನೀರು ತಂದುಕೊಟ್ಟಳು. ಇವನು ಅದನ್ನು ಕುಡಿದು 'ಟೀ ಸೂಪರ್ ಆಗಿದೆ ಪುಟ್ಟಿ' ಅಂದ. ಇದನ್ನೆಲ್ಲಾ ನೋಡುತ್ತಿದ್ದ ಹೆಂಡತಿ ಮೆತ್ತಗೆ ಹೇಳಿದಳು 'ಸರಿ, ಮುದ್ದಿನ ಮಗಳು ತಂದ್ಕೊಡ್ತಿದಾಳೆ ಅಂತ ಖುಷಿಲೀ ಕುಡೀತಿದೀರಿ. ಎಂಜಾಯ್ ಮಾಡಿ. ಆದ್ರೆ ನಿಮಗೆ ಒಂದ್ ವಿಷ್ಯ ಗೊತ್ತಿರ್‌ಲಿ, ನಮ್ ಮಗಳು ಇರೋ ಹೈಟ್‌ಗೆ ಇಡೀ ಮನೇಲಿ ಅವನಿಗೆ ಎಟುಕೋದು ಅಂದ್ರೆ ಟಾಯ್ಲೆಟ್ ಕಮೋಡ್‌ನಲ್ಲಿರೋ ನೀರು ಮಾತ್ರ.
ಸ್ಕ್ಯಾಂಡಲ್‌ವುಡ್
ನಿಮಗೆ ಏನೇ ಮಾಹಿತಿ ಬೇಕಿರಲಿ ಇಂಟರ್‌ನೆಟ್‌ಗೆ ಹೋಗಿಬಿಡಿ, ಅಲ್ಲಿ ಎಲ್ಲವೂ ಸಿಗುತ್ತದೆ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ಇದು ಕನ್ನಡ ಸಿನಿಮಾ ವೆಬ್‌ಸೈಟ್‌ಗಳಿಗಂತೂ ಅನ್ವಯ ಆಗಲಾರದು. ಏಕೆಂದರೆ ಅದೇನು ಬೇಜವಾಬ್ದಾರಿತನವೋ, ಕನ್ನಡ ಚಿತ್ರಗಳ ಬಗೆಗಿನ ನಿರ್ಲಕ್ಷ್ಯವೋ ಅಥವಾ ಅವರವರ ಅಜ್ಞಾನವೋ ಗೊತ್ತಿಲ್ಲ. ಆದರೆ, ದೊಡ್ಡ ಹೆಸರು ಮಾಡಿದ ವೆಬ್‌ಸೈಟ್‌ಗಳಲ್ಲೂ ಈ ಅದ್ವಾನ ಆಗುತ್ತಿದೆ. ಕೆಲವು ವೆಬ್‌ಸೈಟ್‌ಗಳು ಫಣಿ ರಾಮಚಂದ್ರ ನಿರ್ದೇಶನದ 'ಗಣೇಶನ ಗಲಾಟೆ' ಚಿತ್ರದಲ್ಲಿ ಸಿಲ್ಕ್‌ಸ್ಮಿತಾ ಅಭಿನಯಿಸಿದ್ದ ಲೇಡಿ ಕಿಲ್ಲರ್ ಪಾತ್ರ ಮಾಡಿದ್ದು ಡಿಸ್ಕೋ ಶಾಂತಿ ಎಂದು ಬರೆದಿವೆ. ಇನ್ನು ಕೆಲವು 'ಗಣೇಶನ ಗಲಾಟೆ' ಚಿತ್ರಕ್ಕೆ 'ಗಣೇಶ ಸುಬ್ರಮಣ್ಯ' ಚಿತ್ರದ ತಾರಾಗಣವನ್ನು ನೀಡಿದೆ. ಇಂಥ ವೆಬ್‌ಸೈಟ್‌ಗಳಲ್ಲಿ 'ರಾಜ ಯುವರಾಜ' ಎಂಬ ಚಿತ್ರ 'ರಾಜ ಮಹಾರಾಜ' ಎಂದು ಬದಲಾಗುತ್ತದೆ. ಎಲ್ಲ ಸಿನಿಮಾ ಸಂಬಂಧಿತ ವೆಬ್‌ಸೈಟ್‌ಗಳಲ್ಲಿ ಸಿಗುವುದು ಅಪೂರ್ಣ ಮಾಹಿತಿಯೇ ಆದರೂ ಇಂಥ ತಪ್ಪುಗಳು ಮಾತ್ರ ಈ ಬಗ್ಗೆ ಅರಿವಿಲ್ಲದವರ ದಾರಿ ತಪ್ಪಿಸುತ್ತವೆ. ಇಂಥ ತಪ್ಪು ಮಾಹಿತಿ ನೀಡುವುದಕ್ಕಿಂತ ಏನೂ ಮಾಹಿತಿ ನೀಡದಿರುವುದೇ ಲೇಸು ಎಂದು ಇಂಥ ವೆಬ್‌ಸೈಟ್‌ಗಳಿಗೆ ಅನ್ನಿಸಿಲ್ಲ. ಇದನ್ನೆಲ್ಲ ತಪ್ಪಿಸಲು ನಮ್ಮ ರಾಜ್ಯ ಚಲನಚಿತ್ರ ಅಕಾಡೆಮಿ ಚಿತ್ರರಂಗದ ಇತಿಹಾಸದ ವಿವರಗಳನ್ನು ಇಂಟರ್‌ನೆಟ್‌ನಲ್ಲಿ ಸಿಗುವಂತೆ ಮಾಡುತ್ತೇವೆ ಎಂದು ಹೇಳಿ ಬಹಳ ದಿನಗಳೇ ಆದವು. ಅದು ಆದಷ್ಟು ಬೇಗನೆ ಕಾರ್ಯಗತವಾದರೆ ಇಂಥ ಅನಾಹುತಗಳಿಗೆ ಕಡಿವಾಣ ಬೀಳಬಹುದು.
ಡಬ್ಕುಡಬಲ್ ತುದಾಂಡಲ್...
ರಾಜಕೀಯದಲ್ಲಿ ರಮ್ಯಾ ಏನೇನ್ ಕಿರಿಕ್ ಮಾಡಬಹುದು?
ಮುಂದೆ ಏನ್ ಮಾಡ್ತಾರೋ ಬಿಡ್ತಾರೋ ಗೊತ್ತಿಲ್ಲ. ಆದ್ರೆ, ಸದ್ಯ ಎಲೆಕ್ಷನ್ ಟೈಮಲ್ಲಿ ಪುಟ್ಟರಾಜು ಅವರಿಗೆ ವಯಸ್ಸಾಗಿದೆ, ಅವರ ಎದುರಿಗೆ ನಾನ್‌ಎಲೆಕ್ಷನ್‌ಗೆ ನಿಂತ್ಕೊಳಲ್ಲ ಅಂತ ತಗಾದೆ ಮಾಡ್ಲಿಲ್ಲ.
---
ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡಿ ಎಲ್ಲರಿಂದಲೂ ಹೊಗಳಿಸಿಕೊಳ್ಳುವವ - ತಲೈವ
ಎಲ್ಲರಿಗೂ ಕೆಟ್ಟದ್ದು ಮಾಡಿ, ಎಲ್ಲರಿಂದ 'ಉಗಿಸಿಕೊಳ್ಳುವವ' - 'ಸಲೈವ'
---
ನೀವು ಆಲ್ಕೊಹಾಲಿಕ್ ಆಗಿದ್ದರೆ ತಕ್ಷಣ ಕರೆ ಮಾಡಿ, ನಾವು ನಿಮಗೆ ಸಹಾಯ ಮಾಡುತ್ತೇವೆ ಅನ್ನೋ ಆ್ಯಡ್ ನೋಡಿ ಕಾಲ್ ಮಾಡಿದಾಗ ಆ ಕಡೆಯಿಂದ ಬಂದ ಉತ್ತರ 'ಎರಡು ಪುಲ್ ಬಾಟಲ್ ತಗೊಂಡ್ರೆ ಒಂದ್ ಕ್ವಾರ್ಟರ್ ಫ್ರೀ'
---
ಹೆಂಡ್ತಿ ಮಾತು ಅಂದ್ರೆ ವೆಬ್‌ಸೈಟ್‌ಗಳಲ್ಲಿರೋ 'ಟರ್ಮ್ಸ್ ಅಂಡ್ ಕಂಡೀಷನ್ಸ್' ಓದಿದ ಹಾಗೆ
ಏನೂ ಅರ್ಥ ಆಗದಿದ್ರೂ ಸುಮ್ನೆ 'ಐ ಅಗ್ರೀ' ಅಂತೀವಿ.
---
ಬಾಸ್ ಹೊಸಾ ಕಾರಿಂದ ಇಳಿದ. ಅವನ ಆಫೀಸ್ ಉದ್ಯೋಗಿ ಅದನ್ನು ನೋಡಿ 'ಸೂಪರ್ ಕಾರ್ ಸರ್' ಎಂದ. ಅದಕ್ಕೆ ಬಾಸ್ ಹೇಳಲಾರಂಭಿಸಿದ 'ನೋಡು ಇಂಥ ಕಾರ್ ತಗೊಳ್ಳೋದು ಏನೂ ಕಷ್ಟ ಅಲ್ಲ. ನಾಳೆಯಿಂದಲೇ ನೀನು ಶ್ರದ್ಧೆಯಿಂದ ಕೆಲಸ ಮಾಡು, ಸಮಯಕ್ಕೆ ಸರಿಯಾಗಿ ಆಫೀಸ್‌ಗೆ ಬಾ. ನಿಗದಿತ ಸಮಯದಲ್ಲಿ ನಿನ್ನ ಟಾರ್ಗೆಟ್ ಕಂಪ್ಲೀಟ್ ಮಾಡು. ಜಾಸ್ತಿ ರಜಾ ತಗೊಳ್‌ಬೇಡ. ಆಮೇಲ್ ನೋಡ್ತಾ ಇರು. ಮುಂದಿನ ವರ್ಷ ಇಷ್ಟೊತ್ತಿಗೆ.....ನಾನು ಇದಕ್ಕಿಂತ ಒಳ್ಳೆ ಕಾರ್ ತಗೊತೀನಿ.
-ಹರಿ
harikannadaprabha@gmail.com