ಅರ್ಚಕರಿಗೆ ಪ್ರತಿಭಟನೆಗಳು ಅವಶ್ಯಕವೆ ಅಥವಾ ಅನಿವಾರ್ಯವೆ?
ರಾಜ್ಯದಲ್ಲಿ ಧಾರ್ಮಿಕ ಕ್ಷೇತ್ರಗಳ ಸುಮಾರು 36 ಸಾವಿರಕ್ಕೂ ಹೆಚ್ಚು ದೇವಾಲಯಗಳ ಆದಾಯ ಮೂಲವಾಗಿದ್ದ ಇನಾಂ ಜಮೀನುಗಳು ಊಳುವವನದೇ ಭೂಮಿ ಎಂಬ ಕಾನೂನಿನಡಿಯಲ್ಲಿ ರೈತರ ಪಾಲಾದವು. ಆಗ ಯಾವುದೇ ವಿಪ್ರ ಸಂಘಟನೆಗಳು ಪ್ರತಿಭಟನೆಗೆ ಇಳಿಯಲಿಲ್ಲ.
ಕರ್ನಾಟಕದಲ್ಲಿ ನೂರಾರು ಬ್ರಾಹ್ಮಣ ಸಂಘಗಳು, ತ್ರಿಮತಸ್ಥ ವಿಪ್ರಸಂಘಗಳು ಅಸ್ತಿತ್ವದಲ್ಲಿವೆ. ಕಳೆದ 13 ವರ್ಷಗಳಿಂದ ವಿಪ್ರ ಸಂಘಟನೆಗಳು ಮುಜರಾಯಿ ದೇವಾಲಯಗಳ ಅರ್ಚಕರುಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಂಘಟಿತರಾಗಿ, ಅಧಿಕಾರಿಗಳು ಮತ್ತು ಮುಜರಾಯಿ ಸಚಿವರಿಗೆ ಮನವಿ ಸಲ್ಲಿಸಿ ತಮ್ಮ ಕೆಲಸ-ಕಾರ್ಯಗಳನ್ನು ಯಶಸ್ವಿಗೊಳಿಸಿಕೊಂಡಿದ್ದಾರೆ. ರಾಜ್ಯದಲ್ಲಿನ ಬ್ರಾಹ್ಮಣ ಜನಾಂಗವನ್ನೂ ಸಹ ಮುಂದುವರಿದ ಜನಾಂಗವೆಂದು ಬ್ರಾಹ್ಮಣೇತರ ಬುದ್ಧಿಜೀವಿಗಳು ಕರೆಯುತ್ತಾರೆ. ಆದರೆ ಮುಂದುವರಿದ ಜನಾಂಗ ಎಂಬ ಹಣೆ ಪಟ್ಟಿಯನ್ನು ಹೊತ್ತು ಅನ್ನ-ನೀರು, ಮೂಲಭೂತ ಸೌಲಭ್ಯಗಳಿಂದ ವಂಚಿತರಾದವರ ಕಥೆ? ಮುಜರಾಯಿ ದೇವಾಲಯಗಳ ಅರ್ಚಕರು ಮತ್ತು ನೌಕರರು, ಹಲವಾರು ಸಂಘಟನೆಗಳಾದ 1) ಆಗಮತ್ರಯ ಮಹಾ ಮಂಡಳಿ 2) ಶೈವಾಗಮಮಂಡಳಿ 3) ವೈಖಾಸನ ಮಂಡಳಿ 4) ಪಂಚಾರಾತ್ರಾಗಮ ಅಭಿವರ್ಧನಾಸಭಾ 5) ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘ 6) ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘ (ರಿ.) ಬೆಂಗಳೂರು ಈ ಎಲ್ಲಾ ಸಂಘಟನೆಗಳ ಜೊತೆ ಸೇರಿ ತಮ್ಮ ಹಕ್ಕುಗಳಿಗಾಗಿ ಬೆಂಗಳೂರಿನಲ್ಲಿ ಬಹಳ ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಎಲ್ಲಾ ಸಂಘಟನೆಗಳಲ್ಲಿ ಬುದ್ಧಿ ಜೀವಿಗಳೂ, ಹೋರಾಟಗಾರರು ಇರುವುದು ವಿಶೇಷವೇ ಸರಿ.
ವಿಪ್ರ ಸಮುದಾಯಗಳು ತಮಗೆ ಮಾರಕವಾದ ಯಾವುದೇ ಆದೇಶಗಳು ಹೊರಬಿದ್ದದ್ದೇ ಆದರೆ ಕಾನೂನು ಹೋರಾಟ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಧಾರ್ಮಿಕ ಕ್ಷೇತ್ರಗಳ ಸುಮಾರು 36 ಸಾವಿರಕ್ಕೂ ಹೆಚ್ಚು ದೇವಾಲಯಗಳ ಆದಾಯ ಮೂಲವಾಗಿದ್ದ ಇನಾಂ ಜಮೀನುಗಳು ಊಳುವವನದೇ ಭೂಮಿ ಎಂಬ ಕಾನೂನಿನಡಿಯಲ್ಲಿ ರೈತರ ಪಾಲಾದವು. ಆಗ ಯಾವುದೇ ವಿಪ್ರ ಸಂಘಟನೆಗಳು ಪ್ರತಿಭಟನೆಗೆ ಇಳಿಯಲಿಲ್ಲ. ಸುಮಾರು ನಾಲ್ಕು ದಶಕಗಳಿಂದ ದೇವಾಲಯದ ಅರ್ಚಕರಿಗೆ ಯಾವುದೆ ಸರ್ಕಾರಿ ವೇತನವಾಗಲಿ, ಗೌರವ ಧನವಾಗಲಿ ಸಿಗುತ್ತಿಲ್ಲ. ಈ ವಿಚಾರವಾಗಿ ಯಾವುದೇ ವಿಪ್ರ ಸಂಘಟನೆಗಳು ಪ್ರತಿಭಟನೆ ನಡೆಸಲಿಲ್ಲ. ನ್ಯಾಯಾಂಗ ಹೋರಾಟವೂ ಸಹ ಮಾಡಲಿಲ್ಲ. ಇಂತಹ ಸಂಘಟನೆಗಳು ಇದೆಲ್ಲ 'ಕರ್ಮ'ಫಲಗಳೆಂದು ನೊಂದು ದೇವರ ಮೇಲೆ ಭಾರ ಹಾಕಿ ತಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನರಾದರು. ಯಾವುದೇ ಸರ್ಕಾರಗಳೂ ವಿಪ್ರರ ನೋವಿನ ಶಾಪ ನಮಗೆ ತಾಗುತ್ತದೆ ಎಂದು ಭಾವಿಸಲೇ ಇಲ್ಲ. ಯಾಕೆಂದರೆ, ಯಾವುದೇ ಸರ್ಕಾರಿ ಆದೇಶಗಳನ್ನು ಹೊರಡಿಸಿದರೆ ಅದನ್ನು ರದ್ದುಪಡಿಸಲು ಮೂರು ತಿಂಗಳ ಕಾಲಾವಕಾಶ ಇರುತ್ತದೆ. ಸರ್ಕಾರಿ ಆದೇಶದ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬಹುದು. ಸರ್ಕಾರದಿಂದ ಆಗುವ ಅನ್ಯಾಯವನ್ನು ನ್ಯಾಯಾಲಯದ ಗಮನಕ್ಕೆ ತಂದು ನ್ಯಾಯ ದೊರಕಿಸಿಕೊಳ್ಳಬಹುದು. ಬಿಜೆಪಿ ಸರ್ಕಾರ ರಾಜ್ಯದ ಮುಜರಾಯಿ ದೇವಾಲಯಗಳನ್ನು ಸಂರಕ್ಷಿಸಲು ಧಾರ್ಮಿಕ ದತ್ತಿ ವಿಧೇಯಕ ತಿದ್ದುಪಡಿ ತಂದು ರಾಜ್ಯಧಾರ್ಮಿಕ ಪರಿಷತ್ತು ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ ಜಾರಿಗೆ ತಂದುಬಿಟ್ಟಿತು. ಬುದ್ಧಿಜೀವಿ ವಿಪ್ರ ಸಂಘಟನೆಗಳು ತೆಪ್ಪಗೆ ಕುಳಿತಿದ್ದವು. ಮೂರು ತಿಂಗಳು ಕಳೆದರೂ ಯಾವ ಅರ್ಚಕ ಸಂಘಟನೆಗಳೂ 'ರಾಜ್ಯ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ನಮಗೆ ಮಾರಕ' ಎಂದು ನ್ಯಾಯಾಲಯದ ಮೊರೆ ಹೋಗಲಿಲ್ಲ. ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ಬಿದ್ದಮೇಲೆ ಪ್ರತಿಭಟನೆ ನಡೆಸಿದವು. ಆಗಿನ ಬಿಜೆಪಿ ಸರ್ಕಾರ ಅವರ ಪ್ರತಿಭಟನೆಗೆ ಕವಡೆಕಾಸಿನ ಕಿಮ್ಮತ್ತೂ ಕೊಡಲಿಲ್ಲ.
ಇತ್ತೀಚೆಗೆ ಪ್ರತಿಭಟನೆಯೊಂದು ನಡೆಯಿತು. ಮೈಸೂರು ಬ್ಯಾಂಕ್ ವೃತ್ತದಿಂದ ಫ್ರೀಡಂ ಪಾರ್ಕ್ವರೆಗೆ ಸಾಗಿದ ಈ ಪ್ರತಿಭಟನೆಯಲ್ಲಿ ಬಂದ ಜನಕ್ಕೆ ತಾವು ಪ್ರತಿಭಟನೆ ಯಾಕೆ ಮಾಡುತ್ತಿದ್ದೇವೆ ಎಂಬುದೂ ಗೊತ್ತಿರಲಿಲ್ಲ. ಜನ ಮರಳೋ ಜಾತ್ರೆ ಮರಳೋ ಎಂಬ ಗಾದೆಯಂತಿತ್ತು ಪ್ರತಿಭಟನೆ. ನಾವು ಹಿಂದುಳಿದ ಜನಾಂಗ ಅಂತಲೋ, ಅಥವಾ ನಾವು ದಲಿತರು ನಮಗೆ ಸರಿಯಾದ ಸರ್ಕಾರಿ ಸವಲತ್ತುಗಳು ಸಿಗುತ್ತಿಲ್ಲ ಎಂತಲೂ ಪ್ರತಿಭಟನೆಗಳು ನಡೆಯುತ್ತವೆ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳ ವಿರುದ್ಧ ಪ್ರತಿಭಟನೆ ಮಾಡುತ್ತಾರೆ.
ಕಾರ್ಮಿಕ ವರ್ಗ, ಕೂಲಿ-ಕಾರ್ಮಿಕ ವರ್ಗ, ನೇಕಾರರು, ಲಾರಿ ಮಾಲಿಕ ಮತ್ತು ನೌಕರರು, ವಾಹನ ಚಾಲಕ, ನಿರ್ವಾಹಕ ವರ್ಗದವರೂ ಮುಷ್ಕರ ಪ್ರತಿಭಟನೆಗಳನ್ನು ನಡೆಸುತ್ತಾರೆ. ಆದರೆ ಅರ್ಚಕ ವರ್ಗ ಪ್ರತಿಭಟನೆ ನಡೆಸುವುದರಲ್ಲಿ ಅರ್ಥವಿದೆಯೇ? ಏಕೆಂದರೆ, ಮುಜರಾಯಿ ದೇವಾಲಯಗಳ ಅರ್ಚಕರು ಮತ್ತು ನೌಕರರು ಪ್ರತಿಭಟನೆ ನಡೆಸುವಷ್ಟು ಸಮರ್ಥರಿದ್ದಾರೆಯೇ? ಪ್ರತಿಭಟನೆ, ಮುಷ್ಕರಗಳಿಂದ ಏನನ್ನಾದರೂ ಸಾಧಿಸಲು ಸಾದ್ಯವಿದೆಯೇ? ದೇವಾಲಯದಲ್ಲಿ ದೇವರಿಗೆ ಪೂಜೆ ಸಲ್ಲಿಸುವ ಅರ್ಚಕರು ಆತ್ಮಸಾಕ್ಷಿಯಾಗಿ ಪ್ರತಿಭಟನೆ ಮುಷ್ಕರಗಳನ್ನು ನಡೆಸಲು ತಮಗೆ ಸಾಧ್ಯವಿದೆಯೇ ಎನ್ನುವುದನ್ನುಸ್ವಲ್ಪ ಯೋಚಿಸಲೇಬೇಕು.
ದೇವಾಲಯದ ಅರ್ಚಕರು ಪ್ರತಿಭಟನೆ-ಮುಷ್ಕರ ನಡೆಸಲು ಬೆಂಗಳೂರಿನ ಫ್ರೀಡಂ ಪಾರ್ಕ್ಗೆ ಬರಬೇಕಿಲ್ಲ. ಅರ್ಚಕರಿಗೆ ಆತ್ಮಸಾಕ್ಷಿಯಾಗಿ ಮುಷ್ಕರ ನಡೆಸಬೇಕು ಎಂದಿದ್ದರೆ, ಅವರು ಪೂಜೆ ಸಲ್ಲಿಸುವ ದೇವಾಲಯದ ಮುಂದೆ ಅಥವಾ ದೇವರ ಮುಂದೆ ಕುಳಿತು ಮುಷ್ಕರ ಮಾಡಬೇಕು. ಅದು ದೇವರಿಗೆ ಮುಟ್ಟುತ್ತದೆ. ಅದು ಬಿಟ್ಟು ದೇವರಿಲ್ಲದ, ಖೈದಿಗಳೂ ಇಲ್ಲದ ಹಳೆಯ ಕೇಂದ್ರ ಕಾರಾಗೃಹದ ಮುಂದೆ ಪ್ರತಿಭಟನೆ ಮುಷ್ಕರಗಳನ್ನು ನಡೆಸಿದರೆ ಸಮಸ್ಯೆಗಳು ಬಗೆಹರಿಯುತ್ತವೆಯೇ?
-ರಾಜ್ಗೋಪಾಲಾಚಾರ್, ಮುಜರಾಯಿ ಪತ್ರಿಕೆ