ಎರಡು ವಾರಗಳ ಹಿಂದಷ್ಟೇ ನಾವು 67ನೇ ಸ್ವಾತಂತ್ರೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡೆವು. ಬೆಳ್ಳಂಬೆಳಿಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಕೆಂಪು ಕೋಟೆಯ ಮೇಲೆ ಧ್ವಜ ಹಾರಿಸಿ ಜನರ ಆಕಳಿಕೆ ಮತ್ತು ನಿದ್ದೆ, ಎರಡಕ್ಕೂ ಅನುವು ಮಾಡಿಕೊಡುವಂತಹ ಭಾಷಣ ಬಿಗಿದರು. ತಮ್ಮ ನೆಚ್ಚಿನ ಅರ್ಥಶಾಸ್ತ್ರದ ಪಾಠವನ್ನು ಒಪ್ಪಿಸಿದರು. ಕಳವಳ, ಆತಂಕಕ್ಕೆ ಆಸ್ಪದ ಬೇಡ ಎಂದರು. ಯಾರೂ ನಂಬುವ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿದಿದ್ದರೂ ನಮ್ಮನ್ನು (ಸರ್ಕಾರವನ್ನು) ನಂಬಿ ಪ್ಲೀಸ್ ಎಂದು ಮೊರೆಯಿಟ್ಟರು. ಇರಲಿ; 66 ವರ್ಷಗಳ ಹಿಂದೆ ಬ್ರಿಟಿಷರ ದಾಸ್ಯದಿಂದ ದೇಶ ಮುಕ್ತವಾದಾಗಲೂ ರೂಪಾಯಿ ಇತ್ತು. ಹಾಗೆಯೇ ಅಮೆರಿಕದ ಡಾಲರ್ ಸಹ ಇತ್ತು. ಅಂದು ಒಂದು ರೂಪಾಯಿಗೆ ಸರಿ ಸುಮಾರು ಅದೇ ಮೌಲ್ಯ ಡಾಲರ್‌ಗೂ ಇತ್ತು. ಆಗ ಭಾರತದ ಆಮದು ವಹಿವಾಟು ಪೌಂಡ್ ಆಧಾರದ ಮೇಲೆ ನಡೆಯುತ್ತಿತ್ತು. ಆದರೆ, ಭಾರತದ ಹೆಜ್ಜೆಯೊಂದಿಗೆ ಹೆಜ್ಜೆ ಇಟ್ಟ ಡಾಲರಿಗೆ ಭಾರತದಷ್ಟೇ ವಯಸ್ಸಾಗಿದೆ! ಅಂದರೆ ಸ್ವತಂತ್ರ ಭಾರತಕ್ಕೆ 66 ತುಂಬಿದ ಬೆನ್ನಲ್ಲೇ ರೂಪಾಯಿ ವಿರುದ್ಧ ಡಾಲರ್ ಅಷ್ಟೇ ಮೌಲ್ಯ ಹೆಚ್ಚಿಸಿಕೊಂಡಿದೆ. ಅದರಲ್ಲೂ ಕಳೆದ ಒಂದು ವರ್ಷದ ಅವಧಿಯಲ್ಲಿ ನಿರಂತರವಾಗಿ ಕುಸಿಯುತ್ತಿರುವ ರೂಪಾಯಿಯ ಕುಸಿತದ ವೇಗ ಗಮನಿಸಿದರೆ ಸ್ವತಂತ್ರ ಭಾರತಕ್ಕಿಂತ ಡಾಲರ್ ಹಿರಿತನ ಹೆಚ್ಚುವ ಲಕ್ಷಣಗಳಿವೆ! ಈರುಳ್ಳಿ, ಪೆಟ್ರೋಲ್ ಮತ್ತು ರೂಪಾಯಿ ಈ ಮೂರರಲ್ಲಿ ಯಾವುದು ಮೊದಲು ಶತಕದ ಗಡಿ ದಾಟಬಹುದು ಎಂಬ ಜೋಕುಗಳು ಜಾಲ ತಾಣಗಳಲ್ಲಿ ಹರಿದಾಡುವಷ್ಟರ ಮಟ್ಟಿಗೆ ರೂಪಾಯಿ ತನ್ನ ಬಲ ಕಳೆದುಕೊಂಡಿದೆ, ಅಪಹಾಸ್ಯಕ್ಕೀಡಾಗಿದೆ. ರಿಸರ್ವ್ ಬ್ಯಾಂಕು ಮತ್ತು ಸರ್ಕಾರ ಏನೇ ತಿಪ್ಪರಲಾಗ ಹಾಕಿದರೂ ಕುಸಿತದ ವೇಗ ತಗ್ಗಿಸಿಕೊಳ್ಳಲು ರೂಪಾಯಿ ತಯಾರಿದ್ದಂತಿಲ್ಲ. 1991ರ ಆರ್ಥಿಕ ಸಂಕಷ್ಟದ ದಿನಗಳು ಮತ್ತೆ ಬರದು, ದೇಶ ದಿವಾಳಿಯಾಗದು ಎಂದು ಪ್ರಧಾನಿಯು ಹೇಳಿಕೆ ನೀಡುವ ಮಟ್ಟಕ್ಕೆ ರೂಪಾಯಿ ಕುಸಿತ ಸರ್ಕಾರವನ್ನು ಕಂಗೆಡಿಸಿದೆ. ನಿಜ, ಪ್ರಧಾನಿ ಹೇಳಿದಂತೆ ಭಾರತ 1991ರ ಆರ್ಥಿಕ ಸಂಕಷ್ಟದ ದಿನಗಳನ್ನು ನೋಡುತ್ತಿಲ್ಲ. 1991ನ್ನು ಕುಸಿತದ ಪಾತಾಳ ಎನ್ನುವುದಾದರೆ ಅದಕ್ಕಿಂತ ಕೆಳ ಮಟ್ಟಕ್ಕೆ ಕುಸಿಯುವುದು ಕಷ್ಟ ಸಾಧ್ಯ. ಹಾಗಾದರೆ ತಳಕಾಣದಷ್ಟು ಮೇಲೇರಿದ್ದೇವೆಯೇ? ಸಂಕಷ್ಟದ ದಿನಗಳು ಮತ್ತೆ ಬರದಂತೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಿದ್ದೇವೆಯೇ? ಈ ಪ್ರಶ್ನೆಗಳಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರಾಗಲಿ, ವಿತ್ತ ಸಚಿವ ಪಿ. ಚಿದಂಬರಂ ಅವರಾಗಲಿ ಸಮರ್ಪಕ ಉತ್ತರ ನೀಡುವ ಸ್ಥಿತಿಯಲ್ಲಿ ಇಲ್ಲ. 2008ರ ಜಾಗತಿಕ ಕುಸಿತ ಎಲ್ಲ ದೇಶಗಳ ಪ್ರಗತಿಯ ಚಕ್ರಕ್ಕೆ ಬ್ರೇಕ್ ಹಾಕಿದ್ದು ನಿಜ. ಅದರಿಂದ ಚೇತರಿಸಿಕೊಳ್ಳಲಾಗದೆ ಎಷ್ಟೋ ದೇಶಗಳು ದಿವಾಳಿಯಾಗಿವೆ. ಐರೋಪ್ಯ ಒಕ್ಕೂಟದ ಕೆಲ ದೇಶಗಳಂತೂ ಇಂದಿಗೂ ಆ ಕುಸಿತದ ಪಶ್ಚಾತ್ ಕಂಪನಗಳಿಂದ ಒದ್ದಾಡುತ್ತಿವೆ. ಆದರೆ ಜಾಗತಿಕ ಕುಸಿತದ ಕರಿನೆರಳು ನಮ್ಮ ಮೇಲೆ ಅಷ್ಟಾಗಿ ಬೀಳದಂತೆ ತಡೆದೆವು ಎಂದು ಬೆನ್ನು ತಟ್ಟಿಕೊಳ್ಳುವ ಯುಪಿಎ ಸರ್ಕಾರ ಈಗ ಪ್ರಗತಿಯ ವೇಗ ತಲ್ಲಣವಾಗಿರುವಾಗ ಅದಕ್ಕೆ ಅಮೆರಿಕದ ಕೆಲ ನೀತಿಗಳನ್ನೋ, ಐರೋಪ್ಯ ಒಕ್ಕೂಟದ ಆರ್ಥಿಕ ಕ್ರಮಗಳನ್ನೋ ದೂರುವುದರಲ್ಲಿ ಅರ್ಥವಿಲ್ಲ. ಹಾಗೊಂದು ವೇಳೆ ಇಂದಿನ ರೂಪಾಯಿ ಮೌಲ್ಯ ಕುಸಿತ, ಪೇಟೆಯಲ್ಲಿ ಉಂಟಾಗುತ್ತಿರುವ ಕಳವಳಕಾರಿ ಇಳಿತ ಇವುಗಳಿಗೆ ಸಿಂಗ್ ಮತ್ತು ಚಿದಂಬರಂ ಯಾರನ್ನಾದರೂ ದೂರಬೇಕಿದ್ದರೆ ಅದು ಸ್ವತಃ ತಾವೇ ನಡೆಸುತ್ತಿರುವ ಸರ್ಕಾರವನ್ನಷ್ಟೇ, ಕಳೆದ ವರ್ಷ ಡಾಲರ್ ವಿರುದ್ಧ ರೂಪಾಯಿ ಕುಸಿಯುವ ಸೂಚನೆಗಳು ಗೋಚರಿಸಿದಾಗಲೇ ಎಚ್ಚೆತ್ತುಕೊಂಡು ಚಿನ್ನದ ಆಮದಿನ ಮೇಲೆ ಹಿಡಿತ ಸಾಧಿಸಿದ್ದರೆ ಇಂದು ಆಯಾತ-ನಿರ್ಯಾತದ ಅನುಪಾತ ಈ ಮಟ್ಟಕ್ಕೆ ಬರುತ್ತಿರಲಿಲ್ಲ. ಖಾಯಿಲೆಯ ಗುಣಲಕ್ಷಣಗಳು ಕಂಡ ಕೂಡಲೇ ಡಾಕ್ಟರ್ ಆದವನು ಚಿಕಿತ್ಸೆ ಶುರು ಹಚ್ಚಿಕೊಳ್ಳುತ್ತಾನೆ. ಅದು ಬಿಟ್ಟು ಖಾಯಿಲೆ ಉಲ್ಬಣವಾದ ಮೇಲೆ ಚಿಕಿತ್ಸೆಗೆ ಮುಂದಾಗುವ ವೈದ್ಯನನ್ನು ಏನನ್ನಬೇಕು? ನಂತರ ನನ್ನ ಕೈಲಾದ ಚಿಕಿತ್ಸೆ ನೀಡಿದೆ. ಆದರೆ ರೋಗಿ ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ಕೈಚೆಲ್ಲಿ ಕೂರುವ ವ್ಯಕ್ತಿಯನ್ನು ವೈದ್ಯ ಎಂದು ಕರೆಯಲು ಸಾಧ್ಯವೇ? ಇಷ್ಟು ಸಣ್ಣ ಮರ್ಮವೂ ಈ ದೇಶದ ಚುಕ್ಕಾಣಿ ಹಿಡಿದಿರುವ 'ಡಾಕ್ಟರ್'ಗೆ (ಮನಮೋಹನ್ ಸಿಂಗ್) ತಿಳಿಯದೇ ಹೋಗಿದ್ದು ವಿಪರ್ಯಾಸವೇ ಸರಿ.
ಇಷ್ಟಕ್ಕೂ 1991ರಲ್ಲಿ ಏನಾಗಿತ್ತು ಲೈಸೆನ್ಸ್-ಪರ್ಮಿಟ್‌ರಾಜ್ ಹಾವಳಿಯಿಂದಾಗಿ ಕೈಗಾರಿಕೆಗಳ ಸ್ಥಾಪನೆ, ಬಂಡವಾಳ ಹೂಡಿಕೆ ಅತ್ಯಂತ ಕೆಳಮಟ್ಟದಲ್ಲಿತ್ತು. ವಿಶ್ವಬ್ಯಾಂಕ್, ಮತ್ತಿತರ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಪಡೆದ ಸಾಲ ಮರುಪಾವತಿಗೆ ಗತಿ ಇಲ್ಲದಂತಾಗಿತ್ತು. ಅಷ್ಟೇ ಅಲ್ಲ ಯಾವ ದೇಶವೂ ಭಾರತಕ್ಕೆ ಆರ್ಥಿಕ ನೆರವು ನೀಡುವ ಸ್ಥಿತಿಯಲ್ಲಿರಲಿಲ್ಲ. ವಿದೇಶಿ ವಿನಿಮಯ ಮೀಸಲಂತೂ ಅದೃಶ್ಯವಾಗಿತ್ತು. ಆಗ ಕೈಗೊಂಡ ಸುಧಾರಣಾ ಕ್ರಮಗಳಿಂದಾಗಿ ಮತ್ತು ನಂತರದಲ್ಲಿ ಬಂದ ಸರ್ಕಾರಗಳು ಅದೇ ಮಾರ್ಗ ಅನುಸರಿಸಿದ ಪರಿಣಾಮವಾಗಿ ದೇಶ ದಿವಾಳಿ ಸ್ಥಿತಿಯಿಂದ ಮೇಲೆ ಬಂತು. ಬಂಡವಾಳದ ಜೊತೆಗೆ ಉತ್ಪಾದನೆಯೂ ಕಳೆಗಟ್ಟಿತು. ಹೂಡಿಕೆದಾರರಲ್ಲಿ ಇಲ್ಲಿ ವ್ಯಾಪಾರ ಮಾಡಿ ಲಾಭ ಪಡೆಯಬಹುದು ಎಂಬ ನಂಬಿಕೆ ಬಂತು. ಆಮದು-ರಫ್ತು ಅನುಪಾತ ಸ್ಥಿರವಾಯಿತು. ದೇಶಿ ಮತ್ತು ವಿದೇಶಿ ಉತ್ಪನ್ನಗಳು ಗ್ರಾಹಕರ ಕೈಗೆಟುಕುವಂತಾಯಿತು. ಆದರೆ ಈಗ ನೋಡಿ. ನೀವು ಸಿಂಗಾಪುರದಲ್ಲೋ, ಅಮೆರಿಕದಲ್ಲೋ ಅಥವಾ ಇನ್ನಾವುದೋ ದೇಶದಲ್ಲೋ ಇರುವ ನಿಮ್ಮ ಪರಿಚಯಸ್ಥರಿಂದ ಅವರು ಇಲ್ಲಿಗೆ ಬರುವಾಗ ನಿಮಗಾಗಿ ಒಂದು ಎಲ್‌ಇಡಿ ಟಿವಿ ತರಿಸಿಕೊಳ್ಳಲು ಸರ್ಕಾರ ನಿರ್ಬಂಧ ಹೇರಿದೆ. ದೇಶೀಯ ಉದ್ಯಮಿಗಳು ವಿದೇಶಗಳಲ್ಲಿ ಬಂಡವಾಳ ಹೂಡಲು ಇದ್ದ ವಿಫುಲ ಅವಕಾಶಕ್ಕೂ ಕಡಿವಾಣ ಹಾಕಿದೆ. ( ಈ ಮಿತಿಯನ್ನು ಶೇ.400ರಿಂದ ಶೇ100ಕ್ಕೆ ಇಳಿಸಲಾಗಿದೆ) ಚಿನ್ನದ ಆಮದಿಗೂ ಕತ್ತರಿ ಬಿದ್ದಿದೆ. ಇನ್ನು ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಮೊದಲು ಪ್ರಣಬ್ ಮುಖರ್ಜಿ ಜಾರಿಗೆ ತಂದ ಎಆಆಖ, (ತೆರಿಗೆ ವಂಚನೆ ತಡೆ ನಿಯಮಗಳು) ಬಂಡವಾಳ ಹೂಡಿಕೆದಾರರ ವಿಶ್ವಾಸಕ್ಕೆ ನೀಡಿರುವ ಆಘಾತದಿಂದ ಇನ್ನೂ ಬಂಡವಾಳ ಪೇಟೆ ಚೇತರಿಸಿಕೊಂಡಿಲ್ಲ. ಇಂದು ಭಾರತದ ಬಳಿ ವಿದೇಶಿ ವಿನಿಮಯ ಮೀಸಲು ಅಗತ್ಯಕ್ಕಿಂತ ಹೆಚ್ಚಿದ್ದರೂ ಅದು ಕರಗುವುದಿಲ್ಲ ಎಂಬುದಕ್ಕೆ ಖಾತ್ರಿ ಇಲ್ಲ. ಇನ್ನು ಬಂಡವಾಳ ತರಲು ಚಿದಂಬರಂ ನಾನಾ ದೇಶಗಳನ್ನು ಸುತ್ತಾಡಿ ಬಂದರೂ ಪ್ರಯೋಜನವಾಗಿಲ್ಲ. ಇದನ್ನೆಲ್ಲ ಗಮನಿಸಿದರೆ ಭಾರತದಲ್ಲಿ ಪ್ರಗತಿಯ ಸೈಕಲ್ ರಿವರ್ಸ್ ಗೇರ್‌ನಲ್ಲಿ ಹೋಗುತ್ತಿದೆ ಎನಿಸುವುದಿಲ್ಲವೇ? ಇದು ಆತಂಕಕಾರಿ ಬೆಳವಣಿಗೆ ಅಲ್ಲವೇ? ಹೀಗಿರುವಾಗ 1991ರ ದಿನಗಳು ಬರುವುದಿಲ್ಲ, ಹೆದರಬೇಡಿ ಎಂದು ಪ್ರಧಾನಿ ಬಾಯಿ ಮಾತಿನಲ್ಲಿ ಹೇಳಿದರೆ ಅದನ್ನು ನಂಬಲು ಸಾಧ್ಯವೇ? 2009ರಿಂದ ಈವರೆಗಿನ ಇವರ ಆಡಳಿತದ ವೈಖರಿ ಗಮನಿಸಿದರೆ ಖಂಡಿತ ಇವರ ಮಾತನ್ನು ನಂಬಲು, ಭರವಸೆಗಳನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಅಮೆರಿಕದಲ್ಲಾದರೆ ನಿರುದ್ಯೋಗ ಸೂಚ್ಯಂಕ ಇದೆ. ಇದು ಅಲ್ಲಿನ ನಿರುದ್ಯೋಗ ಅಥವಾ ಉದ್ಯೋಗ ಸೃಷ್ಟಿಯ ಪ್ರಗತಿಯನ್ನು ಸೂಚಿಸುತ್ತದೆ. ಸೂಚ್ಯಂಕ ಒಂದು ಅಂಶ ಇಳಿದರೂ ಜಗತ್ತಿನ ಎಲ್ಲ ಪೇಟೆಗಳೂ ನಡುಗುತ್ತವೆ. ಭಾರತದಲ್ಲಿ ಸದ್ಯ ಅಂತಹ ವ್ಯವಸ್ಥೆ ಇಲ್ಲ. ಇದ್ದಿದ್ದರೆ ನಮ್ಮ ಬಂಡವಾಳ ಪೇಟೆ ಮಕಾಡೆ ಮಲಗಿಬಿಡುತ್ತಿತ್ತು! ಆದರೆ ಇಲ್ಲಿ ಜಾರಿಯಲ್ಲಿರುವ ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಬಹುತೇಕ ಉದ್ಯೋಗ ಸೃಷ್ಟಿಯ ಚಿತ್ರಣ ನೀಡುತ್ತದೆ. ಯುಪಿಎ-2 ಸರ್ಕಾರದ ಈ ನಾಲ್ಕು ವರ್ಷಗಳಲ್ಲಿ ಈ ಸೂಚ್ಯಂಕ ಸತತ ಬೀಳುಗಳನ್ನೇ ಕಂಡಿದೆ. ಒಂದು ಅವಧಿಯಲ್ಲಂತೂ ಅದು ಶೂನ್ಯಕ್ಕಿಂತಲೂ ಕೆಳಗಿಳಿದಿದ್ದನ್ನು ನೋಡಿದ್ದೇವೆ. ಇದು ಭಾರತದಲ್ಲಿ ಇಂದು ಉತ್ಪಾದನೆ ಕುಸಿಯುತ್ತಿರುವುದನ್ನಷ್ಟೇ ಅಲ್ಲ ಬಹುಪಾಲು ಜನ ನಿರುದ್ಯೋಗಿಗಳಾಗಿರುವುದನ್ನೂ ಸೂಚಿಸುತ್ತದೆ. ಈ ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರ ಉತ್ಪಾದನಾ ರಂಗಕ್ಕೆ ಚೈತನ್ಯ ತುಂಬಬಲ್ಲ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. 2008ರ ಜಾಗತಿಕ ಕುಸಿತದಿಂದ ಹೊರಬರಲು ನೀಡಿದ ಉತ್ತೇಜನಾ ಪ್ಯಾಕೇಜ್ ಅನ್ನು ಹಿಂಪಡೆಯಲು ಸಕಾಲದಲ್ಲಿ ಕ್ರಮ ಕೈಗೊಳ್ಳದ ಪರಿಣಾಮ ಹಣದುಬ್ಬರವೂ ಹೆಚ್ಚಿ ಈಗ ಉತ್ಪಾದನೆಯೂ ಕುಸಿದಿದೆ. ಈಗ ರೂಪಾಯಿಯ ಮೌಲ್ಯಕುಸಿತ, ಬಂಡವಾಳ ಹಿಂತೆಗೆತ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಗಳು ದಟ್ಟವಾಗಿವೆ. ಇಷ್ಟಾಗಿಯೂ ಪ್ರಧಾನಿಯವರ ಅಭಯವನ್ನು ನಂಬಲು ಸಾಧ್ಯವೇ? ತೆರಿಗೆಗಳು ತರುವ ಆದಾಯದಿಂದಲೇ ದೇಶವನ್ನು ಮುನ್ನಡೆಸುತ್ತಿರುವ ಸರ್ಕಾರ ತೆರಿಗೆ ಸುಧಾರಣಾ ಕಾಯಿದೆ ತುರ್ತಾಗಿ ಜಾರಿಗೆ ತರಲು ಪ್ರಯತ್ನವನ್ನೇ ಮಾಡುತ್ತಿಲ್ಲ. ಜನರಿಂದ ಸಂಗ್ರಹವಾಗುವ ನೇರ ಹಾಗೂ ಪರೋಕ್ಷ ತೆರಿಗೆ ಹಣವನ್ನು ತನ್ನ ಜನಪರ ಕಾರ್ಯಕ್ರಮಗಳಿಗೆ ಹಂಚಿ ಕೃತಾರ್ಥರಾಗುವ ಬದಲು ದೇಶದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿ, ಅದು ತರುವ ಆದಾಯವನ್ನು ವೆಚ್ಚ ಮಾಡುವ ಆರೋಗ್ಯಕರ ಆರ್ಥಿಕ ನೀತಿಯನ್ನು ಅನುಸರಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ.
ಇದೆಲ್ಲದರ ನಡುವೆ ಲೋಕಸಭೆಯಲ್ಲಿ ಆಹಾರ ಭದ್ರತಾ ಕಾಯಿದೆ ಮಂಡನೆಯಾಗಿ ಚರ್ಚೆ ನಡೆಯುತ್ತಿದೆ. ಈ ದೇಶದ ಜನರಿಗೆ ಆರೋಗ್ಯದ ಹಕ್ಕನ್ನು ನೀಡುವ ತರಾತುರಿಯಲ್ಲಿ ಸರ್ಕಾರ ಅಲ್ಪಾವಧಿಯಲ್ಲಿ ಬೊಕ್ಕಸದ ಮೇಲೆ ಅದು ಉಂಟು ಮಾಡಬಹುದಾದ ಪರಿಣಾಮವನ್ನು ಕಡೆಗಣಿಸಿದಂತಿದೆ. ಮತದಾರರ ಓಲೈಕೆಯ ಶಾಸನ ಅದಕ್ಕೆ ಕುಸಿಯುತ್ತಿರುವ ಆರ್ಥಿಕ ಪರಿಸರಕ್ಕಿಂತಲೂ ಮುಖ್ಯವಾಗಿ ಹೋಗಿದೆ. ಈ ಕಾಯಿದೆಯನ್ನು ಈಗಾಗಲೇ ದಿಲ್ಲಿಯಲ್ಲಿ ಜಾರಿಗೂ ತರಲಾಗಿದೆ. ಅದರ ಮೂಲಕ ವರ್ಷಾಂತ್ಯಕ್ಕೆ ಅಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳುವುದು ಹೇಗೆ ಎಂಬ ಲೆಕ್ಕಾಚಾರವನ್ನೂ ಕಾಂಗ್ರೆಸ್ ಮಾಡುತ್ತಿದೆ.
ಇನ್ನು ಹೇಗಾದರೂ ಮಾಡಿ ಲೋಕಸಭೆಯಲ್ಲಿ ಈ ಕಾಯ್ದೆಯನ್ನು ಶಾಸನವಾಗಿಸಿ ಅದೇ ಹುಮ್ಮಸ್ಸಿನಲ್ಲಿ 2014ರ ಲೋಕಸಭಾ ಚುನಾವಣೆ ಎದುರಿಸಲೂ ಸಜ್ಜಾಗಿದೆ. ಆದರೆ ಹಾಗೆ ಮಾಡುವುದರಿಂದ ವಿತ್ತೀಯ ಕೊರತೆ 50 ಸಾವಿರ ಕೋಟಿ ರೂಗಳಷ್ಟು ಹೆಚ್ಚಾಗಲಿದೆ. ಈಗಿರುವ ಆರ್ಥಿಕ ಪರಿಸ್ಥಿತಿಯಲ್ಲಿ ಆರ್ಥಿಕತೆಗೆ ಇದರಿಂದಾಗುವ ನಷ್ಟ ಅಪಾರ ಎಂಬುದನ್ನು ಸರ್ಕಾರ ಮರೆತಿದೆ. ಸರ್ಕಾರದ ಈ ಹಠಮಾರಿತನ ಒಟ್ಟಾರೆಯಾಗಿ ಬಂಡವಾಳದಾರರ ವಿಶ್ವಾಸವನ್ನೇ ಹಾಳು ಮಾಡಿದೆ. ಪೇಟೆಯಲ್ಲಿ ಉಂಟಾಗುವ ಬದಲಾವಣೆಗಳಿಗೆ ಸ್ಪಂದಿಸುವುದನ್ನು ಬಿಟ್ಟು ಕ್ರಿಯಾತ್ಮಕ ಕ್ರಮಗಳಿಂದ ಪೇಟೆಯ ತಲ್ಲಣಗಳನ್ನು ತಡೆಯುವ ನಿಟ್ಟಿನಲ್ಲಿ ಯೋಚಿಸುವುದನ್ನೇ ಸರ್ಕಾರ ಮರೆತಂತಿದೆ. ಡಾಲರ್ ಎದುರು ರೂಪಾಯಿ 65ರ ಮಟ್ಟಕ್ಕೆ ಕುಸಿದಾಗ ಹೇಳಿದ ಮಾತುಗಳು, ನೀಡಿದ ಭರವಸೆಗಳನ್ನೇ ಅದು ಇನ್ನಷ್ಟು ಕುಸಿದ ನಂತರ ಪ್ರಧಾನಿ ಪುನರಾವರ್ತಿಸುವುದಿಲ್ಲ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ರೋಗಿಗೆ ವೈದ್ಯನ ಮೇಲೆ ನಂಬಿಕೆ ಹೊರಟು ಹೋದರೆ ಆತ ನೀಡುವ ಯಾವುದೇ ಚಿಕಿತ್ಸೆ ಪರಿಣಾಮ ಬೀರುವುದಿಲ್ಲ. ಇದು ಡಾಕ್ಟರ್ ಮನಮೋಹನ್‌ಸಿಂಗ್ ಅವರಿಗೆ ಅರ್ಥವಾಗುತ್ತಲೇ ಇಲ್ಲ!
- ಕೆ.ಎಸ್.ಜಗನ್ನಾಥ್
jagannath.kudinoor@gmail.com