ಫೈಲುಗಳು ಕಾಣೆಯಾಗಿದ್ದಕ್ಕೆ ಪ್ರಧಾನಿಗಳ ಪ್ರತಿಕ್ರಿಯೆಯೇನು?
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ನಿಗದಿ ಮಾಡಿಕೊಂಡಿರುವ ಭ್ರಷ್ಟಾಚಾರದ ಗುಣಮಟ್ಟಕ್ಕೆ ಹೋಲಿಸಿದರೂ ಕಲ್ಲಿದ್ದಲು ಘಟಕಗಳ ಹಂಚಿಕೆ ನಿಜಕ್ಕೂ ದೊಡ್ಡ ಹಗರಣವೇ ಸರಿ. ಕಲ್ಲಿದ್ದಲು ಗಣಿಗಳಿಂದ ಯಾವ ಅನುಭವವೂ ಇಲ್ಲದ ಜನರಿಗೆ ಆಕಸ್ಮಿಕವಾಗಿ ಧನಲಾಭವಾಯಿತು. ಈ ಮೊತ್ತ ಸುಮಾರು 1,86 ಲಕ್ಷ ಕೋಟಿ ರುಪಾಯಿಗಳಷ್ಟಿದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಉದ್ಯಮದಲ್ಲಿ ಲಾಭ ಮಾಡಿಕೊಂಡ ಕೆಲವರ ಅರ್ಹತೆ ಏನು ಗೊತ್ತೆ? ಗುಟ್ಕಾ ಉತ್ಪಾದನೆ ನಡೆಸಿದ್ದು!
ಅದಾಗ್ಯೂ, ಈ ಐಶ್ವರ್ಯ ಇವರಿಗೆಲ್ಲ ಒಲಿದದ್ದು ಕಲ್ಲಿದ್ದಲು ಮಾರಾಟದಿಂದ ಎಂದುಕೊಂಡಿರಾ? ಖಂಡಿತ ಇಲ್ಲ. ಕಲ್ಲಿದ್ದಲು ಗಣಿಗಾರಿಕೆಗೆ ಸರ್ಕಾರದಿಂದ ಪರವಾನಗಿ ದೊರೆತಿದ್ದೇ ತಡ, ರಾತ್ರೋ ರಾತ್ರಿ ಹಲವಾರು ಕಂಪನಿಗಳು ಕೋಟ್ಯಂತರ ರುಪಾಯಿಗಳನ್ನು ಕೊಳ್ಳೆಹೊಡೆದವು. ಅದಾಗ್ಯು ಗಣಿಗಾರಿಕೆಯ ಬಗ್ಗೆ ಒಂದಿನಿತೂ ಜ್ಞಾನವಿಲ್ಲದ ಆ ಕಂಪನಿಗಳು ಅದ್ಹೇಗೆ ತಾನೆ ಕಲ್ಲಿದ್ದಲನ್ನು ಹೊರತೆಗೆಯಬಲ್ಲವು? ಆದರೆ ಈ ಕಂಪನಿಗಳು ತಮಗೆ ಉಚಿತವಾಗಿ ದೊರೆತ ಘಟಕಗಳನ್ನು ಮತ್ತು ತಮ್ಮ ಪರವಾನಗಿಯನ್ನು ಇನ್ನಿತರ ಕಂಪನಿಗಳಿಗೆ ಮಾರಿಕೊಂಡು ಹಣ ಮಾಡಿಕೊಂಡವು. ರಸಗೊಬ್ಬರ ಮತ್ತು ವಿದ್ಯುತ್ ಕಂಪನಿಗಳು ಆ ಘಟಕಗಳನ್ನು ಕೊಂಡುಕೊಂಡು ಕುಣಿದಾಡಿದವು!
ಜಾಗತಿಕ ಹರಾಜು ಪ್ರಕ್ರಿಯೆಗೆ ಮುಂದಾಗುತ್ತಿದ್ದೇನೆ ಎಂದು ಸರ್ಕಾರ ಹೇಳಿತಾದರೂ, ಅದಕ್ಕೆ ತಕ್ಕಂಥ ಯಾವ ನೀತಿಗಳನ್ನೂ ರೂಪಿಸುವುದಕ್ಕೆ ಅದು ಮುಂದಾಗಲಿಲ್ಲ. 2005ರಲ್ಲಿ ಕಲ್ಲಿದ್ದಲು ನೀತಿಯಲ್ಲಿನ ಬದಲಾವಣೆಯ ಬಗ್ಗೆ ಮನಮೋಹನ್ ಸಿಂಗ್ ಅವರು ಘೋಷಿಸಿದರಾದರೂ ಅವರ ಸರ್ಕಾರ ಹಂಚಿಕೆಗೆ ಬೇಕಾದ ನಿಯಮಗಳನ್ನು ರೂಪಿಸಿದ್ದು 2013ರಲ್ಲಿ! ತಮಗೆ ಬೇಕಾದವರಿಗೆ ಲಾಭವಾಗಲಿ ಎಂದು ಯುಪಿಎ ಇಷ್ಟು ವರ್ಷ ಬೇಕೂಂತಲೇ ತಡಮಾಡಿದಂತಿತ್ತು? ಹೊಸ ಹರಾಜು ಪ್ರಕ್ರಿಯೆಗೆ ನಿಯಮಗಳ ಅಭಾವವಿರುವ ವೇಳೆಯಲ್ಲೇ 140 ಹಂಚಿಕೆಗಳನ್ನು ತರಾತುರಿಯಲ್ಲಿ ನಡೆಸಲಾಯಿತು. ಕೆಲವು ನಿಶ್ಚಿತ ಮಾನದಂಡಗಳ ಆಧಾರದಲ್ಲಿ ಅರ್ಹ ಕಂಪನಿಗಳ ಪಟ್ಟಿಯನ್ನು ತಯಾರಿಸಲು ಪರಿಶೀಲನಾ ಸಮಿತಿಯೊಂದನ್ನು ಸರ್ಕಾರ ರಚಿಸಿತ್ತು. ಆ ಸಮಿತಿ ಕಳುಹಿಸಿದ ಪಟ್ಟಿಯಲ್ಲಿನ ಕೆಲವು ಕಂಪನಿಗಳಿಗೆ ಕಲ್ಲಿದ್ದಲು ಸಚಿವಾಲಯ, ಕಲ್ಲಿದ್ದಲು ಘಟಕಗಳನ್ನು ಮುಫತ್ತಾಗಿ ನೀಡಿತ್ತು. ಈ ಕಾರಣಕ್ಕಾಗಿಯೇ ಈಗ ಆ ಪರಿಶೀಲನಾ ಸಮಿತಿಯನ್ನೂ ಪ್ರಶ್ನಿಸಲಾಗುತ್ತಿದೆ. ಈ ವಿಚಾರದ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ನಡೆಸುತ್ತಿದೆ. ಇನ್ನು ಪರಿಶೀಲನಾ ಸಮಿತಿ ತಯಾರು ಮಾಡಿದ ಪಟ್ಟಿಯಲ್ಲಿನ ಕೆಲವು ಕಂಪನಿಗಳಿಗೆ ಕಲ್ಲಿದ್ದಲು ಘಟಕಗಳನ್ನು ಕೊಡದೆ, ಇನ್ನುಳಿದವಕ್ಕೆ ಹಂಚಲು ಕಾರಣವೇನು ಎಂಬುದರ ತನಿಖೆಯೂ ಆಗುತ್ತಿದೆ. ಯುಪಿಎ ಮುಖ್ಯಸ್ಥೆಗೆ ಒಬ್ಬ ಸಲಹೆಗಾರ ಕೊಟ್ಟ ಸಲಹೆಯ ಮೇರೆಗೆ ತಾವು ಹಂಚಿಕೆಯನ್ನು ಮಾಡಿದ್ದಾಗಿ ಪ್ರಧಾನಿಗಳು ಹೇಳಿದ್ದಾರೆ ಎಂದು ಮುಂಬೈ ಮೂಲದ ದಿನಪತ್ರಿಕೆಯೊಂದು ವರದಿ ಮಾಡಿತ್ತು. ಈ ವರದಿಯನ್ನು ಯುಪಿಎ ಸರ್ಕಾರ ಇದುವರೆಗೂ ಅಲ್ಲಗಳೆದಿಲ್ಲ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಈ ವಿಷಯ ಸುಪ್ರೀಂ ಕೋರ್ಟನ್ನು ತಲುಪಿದ್ದು. ಆ ಸಮಯದಲ್ಲಿ ಸಿಬಿಐಗೆ ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್ ಯಾವುದೇ ಕಾರಣಕ್ಕೂ ಸಿಬಿಐ ತನ್ನ ಬಾಸ್ಗಳ ಜೊತೆಗೆ ತನಿಖೆಯ ಮಾಹಿತಿಯನ್ನು ಹಂಚಿಕೊಳ್ಳುವುದು ಅಥವಾ ಅವರ ಆದೇಶ ಪಾಲಿಸಕೂಡದೆಂದು' ಹೇಳಿತ್ತು. ಇಷ್ಟೆಲ್ಲಾ ಆದರೂ, ಆಗಿನ ಕಾನೂನು ಸಚಿವ ಅಶ್ವನಿ ಕುಮಾರ್ ಸುಪ್ರೀಂ ಕೋರ್ಟ್ಗೆ ಸಿಬಿಐ ಸಲ್ಲಿಸಲಿದ್ದ ತನಿಖೆಯ ಮಾಹಿತಿಯಲ್ಲಿ ಕೈಯಾಡಿಸಿದ್ದು ಬಹಿರಂಗವಾಯಿತು.
ಈ 'ತಿರುಚುವಿಕೆಯ' ಕಾರ್ಯಕ್ರಮದಲ್ಲಿ ಕಲ್ಲಿದ್ದಲು ಸಚಿವಾಲಯದ ಅಧಿಕಾರಿಗಳು, ಪ್ರಧಾನ ಮಂತ್ರಿ ಕಾರ್ಯಾಲಯ ಮತ್ತು ಕಾನೂನು ಸಚಿವಾಲಯ ಪಾಲ್ಗೊಂಡಿದ್ದವು!
ಅಫಿಡವಿಟ್ನಲ್ಲಿನ ಅಂಶಗಳನ್ನು ಬದಲಿಸಲು ನಡೆಸಿದ ಪ್ರಯತ್ನವನ್ನು ನೋಡಿದರೆ, 'ದೊಡ್ಡ' ಕುಳವೊಂದನ್ನು ರಕ್ಷಿಸಲು ಯತ್ನಿಸಲಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಈ ಕುಕೃತ್ಯಕ್ಕೆ ಯಾರು ಮತ್ತು ಯಾಕೆ ಆಜ್ಞೆನೀಡಿದ್ದರು ಎನ್ನುವುದು ಇದುವರೆಗೂ ಸ್ಪಷ್ಟವಾಗಿಲ್ಲ. ಕೆಲವು ತಿಂಗಳ ಹಿಂದಷ್ಟೆ ಪತ್ರಿಕೆಗಳಲ್ಲಿ ಸುದ್ದಿಯೊಂದು ಸದ್ದು ಮಾಡಿತ್ತು. 'ಸರ್ಕಾರ ತನ್ನ ತನಿಖೆಗೆ ಸಹಾಯಕವಾಗಬಲ್ಲ ದಾಖಲೆಗಳನ್ನು ನೀಡಲು ಮುಂದಾಗುತ್ತಿಲ್ಲ ಎಂದು ಸಿಬಿಐ ಗೋಳಾಡುತ್ತಿದೆ' ಎನ್ನುವುದು ಆ ಸುದ್ದಿಯ ಸಾರಾಂಶವಾಗಿತ್ತು. ಅದಾದ ನಂತರ ಕೋರ್ಟ್ನ ಆದೇಶ ಪಡೆದ ಅದು, ಸರ್ಕಾರಕ್ಕೆ ಈ ಕುರಿತು ಸಣ್ಣ ಎಚ್ಚರಿಕೆಯನ್ನೂ ಕೊಟ್ಟಿತು. ಆದರೀಗ ಪ್ರಸಕ್ತ ಸಚಿವರಿಂದ ನಾವು ಕೇಳುತ್ತಿರುವುದೇನು? ಒಂದಲ್ಲ, ಎರಡಲ್ಲ, ಸುಮಾರು 150 ಸಂಬಂಧಪಟ್ಟ ಫೈಲುಗಳು ಕಾಣೆಯಾಗಿವೆ ಎಂದು! ಫೈಲುಗಳು ಕಾಣೆಯಾಗಿವೆ ಎನ್ನುವುದನ್ನು ಅವರು ಹೇಳಿ ಹಲವಾರು ದಿನಗಳು ಕಳೆದಿವೆ. ಅವುಗಳನ್ನು ಪತ್ತೆ ಹಚ್ಚುವುದಕ್ಕಾಗಿ ಇರುವ ತೊಂದರೆಯ ಬಗ್ಗೆಯೂ ಅವರು ವಿಚಿತ್ರ ಕಾರಣಗಳನ್ನು ಕೊಟ್ಟಿದ್ದರು- ಫೈಲುಗಳನ್ನು ಉದ್ದಕ್ಕೆ ಇಡುವ ಬದಲಾಗಿ ಅಡ್ಡಡ್ಡ ಇಟ್ಟಿರುವುದರಿಂದ ಅವು ಸಿಗುತ್ತಿಲ್ಲ ಎಂದು. ಫೈಲುಗಳು ಅಲ್ಲೇ ಇರಬಹುದು ಎಂದು ಹಲವಾರು ದಿನಗಳು ಹುಡುಕಿದ ನಂತರ, ಈಗ ಅವು ನಾಪತ್ತೆಯಾಗಿವೆ ಎನ್ನುವ ಸುದ್ದಿ ಹೊರಬಿದ್ದಿದೆ.
ನಾಪತ್ತೆಯಾದ ಫೈಲುಗಳಲ್ಲಿ, ಪ್ರಕರಣಕ್ಕೆ ಹೊಸ ತಿರುವು ನೀಡಬಲ್ಲ ಸಂಗತಿಗಳಿರಬಹುದು. ಮತ್ತು ಅವುಗಳಲ್ಲಿನ ಮುಖ್ಯ ಸಂಗತಿಗಳನ್ನು ಅಳಿಸಿಹಾಕುವ ಸಾಧ್ಯತೆಗಳೂ ಇವೆ. ಇದು ಸಾಮಾನ್ಯ ಅಪರಾಧವೇನಲ್ಲ. ಇಷ್ಟಾದರೂ ಕೂಡ ಸರ್ಕಾರ ಪೊಲೀಸ್ ಕಂಪ್ಲೆಂಟ್ ಕೊಟ್ಟಿಲ್ಲ! ಆಗಸ್ಟ್ 27, 2012ರಂದು ಕಲ್ಲಿದ್ದಲು ಘಟಕಗಳ ಹಂಚಿಕೆಯ ಕುರಿತು ಮಾತನಾಡಿದ ಪ್ರಧಾನಿಗಳು, ಹಂಚಿಕೆಯ ಸಮಯದಲ್ಲಿ ತಾವೇ ಕಲ್ಲಿದ್ದಲು ಸಚಿವಾಲಯದ ಮುಖ್ಯಸ್ಥರಾಗಿದ್ದರಿಂದ ಆಗಿನ ಎಲ್ಲಾ ನಿರ್ಧಾರಗಳಿಗೂ ತಾವೇ ಜವಾಬ್ದಾರ ಎಂದೆಲ್ಲಾ ಹೇಳಿದ್ದರು. ಹಾಗಿದ್ದರೆ ಪ್ರಧಾನಿಗಳು, ನಾಪತ್ತೆಯಾಗಿರುವ ದಾಖಲೆಗಳ ಬಗ್ಗೆ ಈಗೇಕೆ ಮಾತನಾಡುತ್ತಿಲ್ಲ? 'ಸಚಿವಾಲಯದ ನಿರ್ಧಾರಗಳಿಗೆಲ್ಲ ನಾನೇ ಜವಾಬ್ದಾರ' ಎಂದು ನೀವು ಹೇಳಿದ್ದನ್ನು ಮತ್ತೊಮ್ಮೆ ನಿಮಗೆ ನೆನಪಿಸಿಕೊಡಬೇಕೇ?
- ನಿರ್ಮಲಾ ಸೀತಾರಾಮನ್
ಬಿಜೆಪಿ ವಕ್ತಾರೆ