ಮೊನ್ನೆ ಭಾನುವಾರ 'ದಿ ಹಿಂದು' ಪತ್ರಿಕೆಯ ಮ್ಯಾಗಜಿನ್ ಪುರವಣಿಯಲ್ಲಿ ಖ್ಯಾತ ಕಾದಂಬರಿಕಾರ ಫ್ರೆಡೆರಿಕ್ ಫಾರ್ಸಿಥ್ ಅವರ ಸಂದರ್ಶನ ಓದುತ್ತಿದ್ದೆ. ಇಂಗ್ಲಿಷ್ ಕಾದಂಬರಿಗಳನ್ನು ಓದುವವರಿಗೆ ಫಾರ್ಸಿಥ್ ಚಿರಪರಿಚಿತ. ಸುಮಾರು ನಲವತ್ತೆರಡು ವರ್ಷಗಳ ಹಿಂದೆ, ಫಾರ್ಸಿಥ್ ಬರೆದ 'ದಿ ಡೇ ಆಫ್ ದಿ ಜಾಕಲ್' ಥ್ರಿಲ್ಲರ್ ಕಾದಂಬರಿ ಈಗಲೂ ಬೆಸ್ಟ್ ಸೆಲ್ಲರ್. ಫ್ರಾನ್ಸ್ ಅಧ್ಯಕ್ಷರಾಗಿದ್ದ ಚಾರ್ಲ್ಸ್ ಡಿಗಾಲ್ ಅವರ ಹತ್ಯೆಯನ್ನು ಬಣ್ಣಿಸುವ ಈ ಕಾಲ್ಪನಿಕ ಕಾದಂಬರಿ, ನಮ್ಮ ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳಂತೆ, ಬಹಳ ಪ್ರಸಿದ್ಧವಾಗಿತ್ತು. ಈಗಲೂ ಈ ಪುಸ್ತಕ ವಿಶ್ವದಾದ್ಯಂತ ಬಹಳ ಬೇಡಿಕೆಯಲ್ಲಿದೆ. ಈ ಕೃತಿಯನ್ನು ಆಧರಿಸಿ, ಅದೇ ಹೆಸರಿನಲ್ಲಿ ಸಿನಿಮಾ ಕೂಡ ಬಂತು. ಅದೂ ಸಹ ಬಾಕ್ಸ್ ಆಫೀಸಿನಲ್ಲಿ ಯಶಕಂಡಿತು. ಪುಸ್ತಕ ಹಾಗೂ ಸಿನಿಮಾ ಹಲವು ಪ್ರಶಸ್ತಿಗಳನ್ನು ಕೊಳ್ಳೆ ಹೊಡೆಯಿತು. ಫಾರ್ಸಿಥ್‌ಗೆ ಅಂತಾರಾಷ್ಟ್ರೀಯ ಮನ್ನಣೆಯೂ ಸಿಕ್ಕಿತು. ಆನಂತರ ಅವರು The Odessa File, The Fourth Protocol, The Dogs of War, The Devil's Alternative, The Fist of God, Icon, The Veteran, Avenger, The Afghan ಹಾಗೂ The Cobra ಬರೆದರು. ಎಲ್ಲ ಕಾದಂಬರಿಗಳೂ ಸೂಪರ್‌ಸೂಪರ್ ಹಿಟ್. ಇವಲ್ಲದೇ ಅವರು No comebacks, The Negotiator, The Deceiver ಎಂಬ ಸಣ್ಣಕತೆಗಳ ಸಂಕಲನವನ್ನೂ ಬರೆದಿದ್ದಾರೆ. ಈ ಪೈಕಿ ದಿ ಓಡೆಸ್ಸಾ ಫೈಲ್, ದಿ ಡಾಗ್ಸ್ ಆಫ್ ವಾರ್, ದಿ ಫೋರ್ಥ್ ಪ್ರೋಟೋಕಾಲ್ ಸಿನಿಮಾಗಳಾಗಿವೆ.
ಫಾರ್ಸಿಥ್ ವಿಷಯದಲ್ಲಿ ಒಂದು ವಿಚಿತ್ರ ಕ್ರೇಜ್ ಇದೆ. ಅದೇನೆಂದರೆ, 'ನಾನು ಹೊಸ ಪುಸ್ತಕ ಬರೆಯಲಾರಂಭಿಸಿದ್ದೇನೆ' ಅಂತ ಹೇಳಿದರೆ, ಅವರ ಎಲ್ಲ ಪುಸ್ತಕಗಳಿಗೆ ವಿಪರೀತ ಬೇಡಿಕೆ ಹೆಚ್ಚುತ್ತದೆ. ಹಾಲಿವುಡ್ ನಿರ್ಮಾಪಕರು, ನಿರ್ದೇಶಕರು ಹೊಸ ಕೃತಿಗೆ ಚಾತಕಪಕ್ಷಿಯಂತೆ ಕಾಯುತ್ತಾ ಕುಳಿತಿರುತ್ತಾರೆ. ಇಲ್ಲಿ ತನಕ ಅವರು ತಮ್ಮ ಓದುಗರನ್ನು ನಿರಾಸೆಗೊಳಿಸಿದ್ದು ಇಲ್ಲವೇ ಇಲ್ಲ.
ಇತ್ತೀಚೆಗೆ ಅವರು ಚೆನ್ನೈಗೆ ಆಗಮಿಸಿದ್ದರು. ಮುಂದಿನವಾರ ಬಿಡುಗಡೆಯಾಗಲಿರುವ ತಮ್ಮ ನೂತನ ಕಾದಂಬರಿ 'The Kill List' ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ 'ದಿ ಹಿಂದು' ಪ್ರತಿನಿಧಿಯ ಜತೆ ಮಾತಾಡಿದರು. ಕಳೆದ ನಾಲ್ಕೂವರೆ ದಶಕಗಳಿಂದ ನಿರಂತರವಾಗಿ ಬರೆಯುತ್ತಿರುವ ಎಪ್ಪತ್ನಾಲ್ಕು ವರ್ಷ ವಯಸ್ಸಿನ ಫಾರ್ಸಿಥ್ ಏನು ಹೇಳಬಹುದೆಂಬ ಬಗ್ಗೆ ಕುತೂಹಲವಿತ್ತು. ಅನೇಕ ವಿಷಯಗಳ ಬಗ್ಗೆ ಅವರು ಮಾತಾಡಿದರು. ಆದರೆ ನನ್ನ ಗಮನ ಸೆಳೆದ ಮೂರ್ನಾಲ್ಕು ಸಂಗತಿಗಳನ್ನು ಅವರ ಬಾಯಿಂದಲೇ ನಿಮಗೆ ಕೇಳಿಸುತ್ತೇನೆ.
-ನಾನು ಇಂದಿಗೂ ಬರೆಯಲು ಕಾಗದ, ಪೆನ್ನನ್ನೇ ಬಳಸುತ್ತೇನೆ. ನನಗೆ ಕಂಪ್ಯೂಟರ್ ಅಂದ್ರೆ ಅಷ್ಟಕ್ಕಷ್ಟೆ. ನಾನು ಪುಟಗಳನ್ನು ತಿರುಗಿಸಲು ಇಷ್ಟಪಡುತ್ತೇನೆಯೇ ಹೊರತು, ಸ್ಕ್ರಾಲ್ ಅಪ್ ಹಾಗೂ ಸ್ಕ್ರಾಲ್ ಡೌನ್ ಮಾಡಲು ಬಯಸುವುದಿಲ್ಲ. ನಾನು ಟೈಪ್‌ರೈಟರ್ ಮುಂದೆ ಕುಳಿತರೆ, ನನ್ನ ತಲೆಯಲ್ಲಿರುವ ಕತೆ ಸರಾಗವಾಗಿ ಹರಿದು ಬರುತ್ತದೆ, ನಾನು ಸುಮ್ಮನೆ ಟೈಪ್ ಮಾಡತ್ತಾ ಹೋಗುತ್ತೇನೆ. ಕರಡುಪ್ರತಿಯನ್ನು ಪೆನ್ನಿನಿಂದಲೇ ತಿದ್ದುತ್ತೇನೆ. ಪ್ರಕಾಶನ ಸಂಸ್ಥೆಯಲ್ಲಿರುವ ಹುಡುಗಿಯರು ಅದನ್ನು ಅರ್ಥಮಾಡಿಕೊಂಡು ಸರಿಯಾಗಿ ಕಂಪೋಸ್ ಮಾಡುತ್ತಾರೆ. ನಾನು ಟೈಪ್‌ರೈಟರ್‌ನ್ನು ಇಂದಿಗೂ ನೆಚ್ಚಿಕೊಳ್ಳಲು ಕಾರಣ ಯಾರೂ ಸಹ ಅದನ್ನು hack ಮಾಡಲಾರರು.
-ನಾನು ಇಂಟರ್‌ನೆಟ್ ಮೇಲೆ ಹೆಚ್ಚು ಅವಲಂಬಿತನಾಗಿಲ್ಲ. ಇಂಟರ್‌ನೆಟ್‌ನಲ್ಲಿ ಸಿಗುವ ಮಾಹಿತಿಯಲ್ಲೂ ದೋಷಗಳಿರುತ್ತವೆ. ಅಲ್ಲದೇ ನಮಗೆ ಬೇಕಿರುವುದಕ್ಕಿಂತ ಜಾಸ್ತಿ ಮಾಹಿತಿ ಇಂಟರ್‌ನೆಟ್ ಒಳಗೊಂಡಿದೆ. ಅದು ಕೆಲವೊಮ್ಮೆ ಕಿರಿಕಿರಿಯನ್ನುಂಟು ಮಾಡುತ್ತದೆ. ನನಗೆ ಬೇಕಾದ ಮಾಹಿತಿಯನ್ನು ಸಂಬಂಧಪಟ್ಟ ವ್ಯಕ್ತಿಯಿಂದ ಪಡೆಯುವುದನ್ನು ನಾನು ಇಷ್ಟಪಡುತ್ತೇನೆ. ಇದೇ ಸರಿಯಾದ ಮಾರ್ಗ ಎಂದು ನನ್ನ ಅನುಭವದಿಂದ ದೃಢಪಟ್ಟಿದೆ.
-ಕೆಲವರ್ಷಗಳ ಹಿಂದಿನವರೆಗೂ ನಾನು ಮೊಬೈಲ್ ಫೋನನ್ನು ಬಳಸುತ್ತಿರಲಿಲ್ಲ. ಇತ್ತೀಚೆಗೆ ಅದನ್ನು ಬಳಸಲಾರಂಭಿಸಿದ್ದೇನೆ. ಅದೂ ಅತಿ ಸಿಂಪಲ್ ಆದುದು. ಎಷ್ಟೆಂದರೂ ಪಿಂಚಣಿದಾರರು ಬಳಸುವಂಥ ಸಾಮಾನ್ಯ ಫೋನ್. ಮೊಬೈಲ್ ಕರೆ ಬಂದರೆ, ಅದು ರಿಂಗಣಿಸಿದರೆ, ನನಗೆ ಗಾಬರಿಯಾಗುತ್ತದೆ. ರೈಲಿನಲ್ಲಿ ಹೋಗುವಾಗ ನೋಡುತ್ತೇನೆ, ಎಲ್ಲರ ಕೈಯಲ್ಲೂ ಮೊಬೈಲು. ಎಲ್ಲರ ಮೊಬೈಲ್ ಸ್ಕ್ರೀನ್ ಮೇಲೂ ಹತ್ತಾರು ಪೇಜುಗಳು ಏಕಕಾಲದಲ್ಲಿ ತೆರೆದಿರುತ್ತವೆ. ಇದು ನನಗೆ ಅಚ್ಚರಿ ಹುಟ್ಟಿಸುವ ಸಂಗತಿ. ಮೊಬೈಲ್‌ನ ಬಟನ್‌ಗಳು ಚಿಕ್ಕದಾಗಿರುತ್ತವೆ. ಅದರಿಂದ ಹೇಗೆ ಟೈಪ್ ಮಾಡುತ್ತಾರೋ ಎಂದು ಕುತೂಹಲವಾಗುತ್ತದೆ. ಒಂದು ಬಟನ್ ಅದುಮಿದರೆ ಮೂರ್ನಾಲ್ಕು ಅಕ್ಷರಗಳು ಟೈಪ್ ಆಗಿಬಿಡಬಹುದೇನೋ ಎಂದುಕೊಳ್ಳುತ್ತೇನೆ. ಇನ್ನು ನನ್ನ ಫೋನೋ? ಅದರ ಬಟನ್‌ಗಳು ದೊಡ್ಡದಾಗಿವೆ. ನನ್ನ ಹೆಂಡತಿ ಜತೆ ಮಾತಾಡಲು ಮಾತ್ರ ನಾನು ಮೊಬೈಲ್ ಬಳಸುತ್ತೇನೆ. 'ಹಾಯ್ ಸ್ಯಾಂಡಿ, ಟ್ರೇನ್‌ನ್ನು ತಪ್ಪಿಸಿಕೊಂಡೆ. ಮುಂದಿನ ಟ್ರೇನ್ ಹಿಡಿದು ಬರುತ್ತೇನೆ, ಐ ಲವ್‌ಯು' ಎಂದು ಹೇಳುತ್ತೇನೆ.
ಇದು ಒಬ್ಬ ಅಪ್ಪಟ ಸಾಹಿತಿ, ಬರಹಗಾರನ ಮನಸ್ಸು. ಫಾರ್ಸಿಥ್ ಕಾದಂಬರಿಗಳಲ್ಲಿ ತಂತ್ರಜ್ಞಾನ ಹುಟ್ಟಿಸುವ ಭೀತಿ, ಹಿಕಮತ್ತು, ರುಬಾಬು, ವಿಸ್ಮಯಗಳೆಲ್ಲ ಇವೆ. ಆದರೆ ಆ ಎಲ್ಲ ಬೆರಗುಗಳಿಂದ ಕಳಚಿಕೊಂಡು ಸಾಮಾನ್ಯ ಮನುಷ್ಯನಂತೆ ಉಳಿಯುವ ಮುಗ್ಧತೆ, ಸಹಜತೆ ಅವರ ವ್ಯಕ್ತಿತ್ವದಲ್ಲಿದೆ. ತಂತ್ರಜ್ಞಾನವನ್ನು ಸ್ವೀಕರಿಸಿ, ಆವಾಹಿಸಿ, ನಿರ್ಲಿಪ್ತನಾಗಿ ಇರುವುದಿದೆಯೆಲ್ಲ, ಆಟಿಕೆ ಅಂಗಡಿಯಲ್ಲಿರುವ ಮಗು ನಿರಾಸಕ್ತಿಗೆ ತೊಡಗಿದಂತೆ. ಫಾರ್ಸಿಥ್ ಕಾದಂಬರಿ ವರ್ತಮಾನಕ್ಕಿಂತ ಎರಡು ಹೆಜ್ಜೆ ಮುಂದೆ ಕಾಲಿಟ್ಟರೆ, ಫಾರ್ಸಿಥ್ ಮಾತ್ರ ಇನ್ನೂ ಹಳೇ ಜಮಾನದ ಹಳೇ ಪಾತ್ರೆ, ಹಳೇ ಕಬ್ಣ! ತಂತ್ರಜ್ಞಾನದ ಸ್ವಾರಸ್ಯ, ವಿಸ್ಮಯಗಳಿಗೆ ಕಿವಿಯಾಗುತ್ತಾ, ಗ್ರಹಿಸುತ್ತಾ, ಭಾವನೆಗಳನ್ನು ಮಾತ್ರ ಹಾಗೆ ಜತನದಿಂದ ಕಾಪಾಡಿಕೊಳ್ಳುವುದು ಬರಹಗಾರನ ಹೊಣೆಗಾರಿಕೆ ಎಂಬ ರೀತಿಯಲ್ಲಿ ವರ್ತಿಸುವವನಿಗೆ ಫಾರ್ಸಿಥ್ ಅವರ ಮನಸ್ಸು ಅರ್ಥವಾಗಲು ಸಾಧ್ಯ.
ಫಾರ್ಸಿಥ್ ನಮ್ಮ ಡಾ. ಎಸ್.ಎಲ್. ಭೈರಪ್ಪನವರ ಹಾಗೆ. ಒಂದು ಕಾದಂಬರಿಯನ್ನು ಬರೆಯಲು ನಿರ್ಧರಿಸಿದರೆ, ಆರು ತಿಂಗಳು ಅಧ್ಯಯನಕ್ಕೆ ಕುಳಿತುಕೊಳ್ಳುತ್ತಾರೆ. ಎರಡು ತಿಂಗಳು ಪರಿಣತರೊಂದಿಗೆ ಕುಳಿತು ಚರ್ಚಿಸಿ ನೋಟ್ಸ್ ಮಾಡಿಕೊಳ್ಳುತ್ತಾರೆ. ಕಾದಂಬರಿ ವಸ್ತು ಯಾವ ಯಾವ ಊರುಗಳಲ್ಲಿ ಹಾದು ಹೋಗುತ್ತದೋ ಆ ಊರು, ದೇಶಗಳಿಗೆ ಹೋಗಿ ಸುತ್ತಾಡಿ ಬರುತ್ತಾರೆ. ಕಾದಂಬರಿ ಬರೆದು ಎರಡು ತಿಂಗಳು ಸುಮ್ಮನೆ ಕುಳಿತಿರುತ್ತಾರೆ. ಆ ಕೃತಿ ತನ್ನದಲ್ಲ ಎಂದು ಭಾವಿಸಿ, ಓದಲಾರಂಭಿಸುತ್ತಾರೆ. ಪ್ಯಾರಾ, ಪ್ಯಾರಾಗಳು ಎಗರಿಹೋಗುತ್ತವೆ, ಹೊಸ ಹೊಸ ಸಂಗತಿಗಳು ಮಧ್ಯೆ ಸೇರಿಕೊಳ್ಳುತ್ತವೆ, ಪುಟಪುಟಗಳಿಗೆ ಕತ್ತರಿ ಬೀಳುತ್ತವೆ. ಕಥಾ ಹಂದರವೇ ಬದಲಾಗುತ್ತದೆ. ಕಾದಂಬರಿ ಆರಂಭಕ್ಕೂ, ಮುದ್ರಣಗೊಂಡ ಬಳಿಕ, ಅದರ ಅಂತ್ಯಕ್ಕೂ ಅಜಗಜಾಂತರ. 'ಹನುಮಂತನನ್ನು ಮಾಡಲು ಹೋಗಿ ಗಣಪತಿ ಮಾಡಿದರು' ಎಂಬಂತೆ ಇಡೀ ಕಥೆಯೇ ಬದಲಾಗಿದ್ದೂ ಇದೆ. ಆದರೆ ಇದನ್ನು ಒಂದು ತಪಸ್ಸಿನಂತೆ ಫಾರ್ಸಿಥ್ ಮಾಡುತ್ತಾರೆ.
'ದಿ ಅಫ್ಘನ್' ಕಾದಂಬರಿ ಬರೆಯುವ ಮುನ್ನ ಫಾರ್ಸಿಥ್ ಆರು ತಿಂಗಳುಗಳ ಕಾಲ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿದ್ದರು. ಸುಮಾರು ನಾಲ್ಕು ಸಾವಿರ ಪುಟಗಳಷ್ಟು ನೋಟ್ಸ್ ಮಾಡಿಕೊಂಡಿದ್ದರು. ಮೂರು ಕಾದಂಬರಿಗಳಿಗಾಗುವಷ್ಟು ವಸ್ತುವನ್ನು ಸಂಗ್ರಹಿಸಿ, ನಾಲ್ಕು ಸಲ ಒಂದೇ ಪುಸ್ತಕವನ್ನು ಬರೆದು, ಹರಿದು, ಬರೆದು, ಪುನಃ ಬರೆದು ಕೊನೆಗೆ ಮುದ್ರಣಕ್ಕೆ ಕಳಿಸಿದ್ದರು.
ಕಾದಂಬರಿಕಾರನ ಈ ಶಿಸ್ತು, ಪರಿಶ್ರಮ, ಕಾರ್ಯಪ್ರೀತಿ ನಿಜಕ್ಕೂ ಖುಷಿ ಕೊಡುವ ವಿಚಾರವೇ. ಒಬ್ಬ ಬರಹಗಾರನ ಜತೆ ಇಷ್ಟೆಲ್ಲ ಕಾರ್ಯಪ್ರೀತಿ ಇರಲೇಬೇಕು. ಆದರೆ ಎಷ್ಟೋ ಸಲ ಈ ಅಂಶಗಳು ಓದುಗನ ಗಮನಕ್ಕೆ ಬರುವುದಿಲ್ಲ.
ಅದಿರಲಿ, ನಾನು ನಿಮಗೆ ಹೇಳಬೇಕೆಂದಿದ್ದು ಫಾರ್ಸಿಥ್ ಅವರ ಜೀವನದ ಇನ್ನೊಂದು ಮಗ್ಗುಲಿನ ಬಗ್ಗೆ. ಅದೇನೆಂದರೆ ಫಾರ್ಸಿಥ್ ಮೂಲತಃ ಒಬ್ಬ ಪತ್ರಕರ್ತ. ಅವರು ಪತ್ರಕರ್ತನಾಗಿಯೇ ತಮ್ಮ ವೃತ್ತಿಯನ್ನು ಆರಂಭಿಸಿದ್ದು. ಬಿಬಿಸಿ ಸಾಕ್ಷ್ಯಚಿತ್ರಕ್ಕಾಗಿ ಅವರು ಪತ್ರಕರ್ತನಾಗಿ ಪ್ಯಾರಿಸ್‌ನಲ್ಲಿ ಕೆಲಸ ಆರಂಭಿಸಿದರು. ಫ್ರೆಂಚ್ ರಾಜಕೀಯ ವ್ಯವಹಾರಗಳ ಬಗ್ಗೆ ನಿರಂತರವಾಗಿ ಬರೆಯುತ್ತಿದ್ದರು. ಅವರು ಪ್ಯಾರಿಸ್‌ನಲ್ಲಿರುವ ಸಂದರ್ಭದಲ್ಲಿಯೇ ಅಲ್ಲಿನ ಅಧ್ಯಕ್ಷ ಚಾರ್ಲ್ಸ್ ಡಿಗಾಲ್ ಹತ್ಯೆಗೆ ವಿಫಲ ಸಂಚು ನಡೆಯಿತು. ಆ ಘಟನೆಯ ವಿವರಗಳನ್ನು ಒಳಗೊಂಡ ವರದಿ ಕಳಿಸಿದಾಗ, ಲಂಡನ್‌ನಲ್ಲಿದ್ದ ಬಿಬಿಸಿ ಸುದ್ದಿಸಂಪಾದಕ ಫಾರ್ಸಿಥ್ ಕಳಿಸಿದ ಸುದ್ದಿಯನ್ನು ಸಂಪೂರ್ಣವಾಗಿ ತಿದ್ದಿ ಬರೆದಿದ್ದ. ಅಧ್ಯಕ್ಷನ ಹತ್ಯೆಗೆ ಪ್ರಯತ್ನ ನಡೆದ ಮಹತ್ವದ ಸುದ್ದಿಯನ್ನು ಸರಿಯಾಗಿ ಬರೆಯಲಿಲ್ಲ ಎಂದು ಯದ್ವಾತದ್ವಾ ರೇಗಾಡಿದ್ದ. 'ನಿನಗೆ ಬರೆಯಲು ಹೇಳಿಕೊಟ್ಟವರಾರು, ಈ ರೀತಿ ಬರೆದರೆ ವರದಿ ಮಾಡುವುದು ಹೇಗೆ, ನಿನಗೆ ಪತ್ರಕೋದ್ಯಮ ಹೇಳಿಕೊಟ್ಟವರಾರು' ಎಂದೆಲ್ಲ ಕೂಗಾಡಿದ್ದ. ಒಬ್ಬ ಪತ್ರಕರ್ತನಲ್ಲಿರಬೇಕಾದ ಆತ್ಮವಿಶ್ವಾಸವನ್ನೇ ಆ ಸುದ್ದಿ ಸಂಪಾದಕ ಸಾಯಿಸಿಹಾಕಿದ್ದ. ಆನಂತರ ಸಂಸ್ಥೆಯ ಧೋರಣೆಯೂ ಫಾರ್ಸಿಥ್‌ಗೆ ಸರಿಬರಲಿಲ್ಲ. ಬೇರೆ ಪತ್ರಿಕೆಗಳಲ್ಲಿ ನೌಕರಿಗಾಗಿ ಪ್ರಯತ್ನಿಸಬಹುದಿತ್ತೇನೋ? ಆದರೆ ತಾವು ಪತ್ರಕರ್ತನಾಗಿ ಉದ್ಧಾರವಾಗಬಲ್ಲೆ ಎಂಬ ವಿಶ್ವಾಸ ಫಾರ್ಸಿಥ್‌ಗೆ ಹೊರಟುಹೋಯಿತು.
ಆದರೆ ಎಂಥ ವಿಚಿತ್ರ ಅಂದ್ರೆ ಯಾವ ಘಟನೆಯ ವರದಿಯನ್ನು ಸರಿಯಾಗಿ ಬರೆಯಲಾಗದೇ ಸುದ್ದಿ ಸಂಪಾದಕನ ಅವಕೃಪೆ ಹಾಗೂ ಬೈಗುಳಗಳಿಗೆ ಕಾರಣವಾಗಿದ್ದರೋ, ಅದೇ ವಸ್ತುವನ್ನು ಇಟ್ಟುಕೊಂಡು 'ದಿ ಡೇ ಆಫ್ ದಿ ಜಾಕಲ್' ಕಾದಂಬರಿ ಬರೆದರು! ಅದು ಏಕಾಏಕಿ ಹಿಟ್ ಆಯಿತು. ಸಿನಿಮಾವೂ ಆಯಿತು. ಈ ಜೀವಮಾನಕ್ಕೆ ಸಾಕಾಗುವಷ್ಟು ಹಣ, ಪ್ರಸಿದ್ಧಿ, ಜನಪ್ರಿಯತೆಯನ್ನು ತಂದುಕೊಟ್ಟಿತು. ಆ ಒಂದು ಪುಸ್ತಕ ಅವರ ಜೀವನದಲ್ಲಿ ಪವಾಡ ಮಾಡಿಬಿಟ್ಟಿತು.
ಎರಡು ವರ್ಷಗಳ ಹಿಂದೆ, ಫಾರ್ಸಿಥ್ 'ನ್ಯೂಯಾರ್ಕರ್' ಮ್ಯಾಗಜಿನ್‌ಗೆ ನೀಡಿದ ಸಂದರ್ಶನದಲ್ಲಿ, 'ಪ್ರಾಯಶಃ ನಾನೊಬ್ಬ ಕೆಟ್ಟ, ವಿಫಲ ಪತ್ರಕರ್ತ. ನನಗೆ ಪತ್ರಿಕೋದ್ಯಮ ಒಲಿಯಲೇ ಇಲ್ಲ. ಪತ್ರಕರ್ತರಂತೆ ಇಂದಿಗೂ ನನಗೆ ಬರೆಯಲು ಬರುವುದಿಲ್ಲ. ಒಂದು ಘಟನೆಯಲ್ಲಿನ ಹಲವಾರು ಸಂಗತಿಗಳನ್ನು ಬಿಟ್ಟು, ಮಹತ್ವದಾದವುಗಳನ್ನಷ್ಟೇ ಆರಿಸಿಕೊಂಡು ಬರೆಯುವ ಪತ್ರಕರ್ತನ ಮನಸ್ಥಿತಿ ನನಗೆ ಒಗ್ಗಿ ಬರಲಿಲ್ಲ. ನನ್ನ ಮಟ್ಟಿಗೆ ಘಟನೆಯ ಎಲ್ಲ ಅಂಶಗಳನ್ನು ಕೊಡಬೇಕು. ಆದರೆ ಪತ್ರಿಕೋದ್ಯಮದಲ್ಲಿ ಇದಕ್ಕೆ ಅವಕಾಶವೇ ಇಲ್ಲ. ಅಮೆರಿಕ ಅಧ್ಯಕ್ಷನ ಹತ್ಯೆಯಾದರೂ ಸುದ್ದಿಯ ಮೊದಲ ಪ್ಯಾರಾದಲ್ಲಿ ಹದಿನೈದರಿಂದ ಹದಿನೆಂಟು ಪದಗಳಿರಬೇಕು ಅನ್ನುತ್ತದೆ ಪತ್ರಿಕೋದ್ಯಮ. ಅದು ನನ್ನಿಂದ ಆಗದ ಕೆಲಸ' ಎಂದಿದ್ದರು ಫಾರ್ಸಿಥ್.
ನಾನು ಇಂಗ್ಲೆಂಡ್‌ನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡುವಾಗ, ನಮ್ಮ ಮೇಷ್ಟ್ರಾಗಿದ್ದ ಜಾನ್‌ರೈನ್ ಎಂಬುವವರು ನೋಟ್ಸ್ ಕೊಟ್ಟಿದ್ದರು. ಅದು ವರದಿಗಾರಿಕೆಗೆ ಸಂಬಂಧಿಸಿದ್ದು. ಅದರ ಶೀರ್ಷಿಕೆ- How to write a news story or Why Ernest Hemingway Failed as a reporter.
The sun also rises, The old man and the sea, A farewell to Arms ಮುಂತಾದ ಮಹತ್ವದ ಕೃತಿಯನ್ನು ನೀಡಿದ ಪ್ರಸಿದ್ಧ ಬರಹಗಾರ, ಕಾದಂಬರಿಕಾರ ಅರ್ನೆಸ್ಟ್ ಹೆಮಿಂಗ್ವೆ ಒಬ್ಬ ಪತ್ರಕರ್ತನಾಗಿ ಹೇಗೆ ವಿಫಲನಾದ ಎಂಬ ಬಗ್ಗೆ ಸ್ವಾರಸ್ಯ ಪ್ರಸಂಗವನ್ನು ಜಾನ್‌ರೈಟ್ ಬಣ್ಣಿಸಿದ್ದರು.
1941. ಎರಡನೆ ಮಹಾಯುದ್ಧ ಆರಂಭವಾಗಿ ಎರಡು ವರ್ಷಗಳಾಗಿದ್ದವು. ಆದರೆ ಅಮೆರಿಕ ಇದರಲ್ಲಿ ಸಕ್ರಿಯ ಪಾತ್ರವನ್ನು ವಹಿಸಿರಲಿಲ್ಲ. ಅಮೆರಿಕದ ಪತ್ರಿಕೆ ಪೂರ್ವ ಏಷಿಯಾಕ್ಕೆ ತನ್ನ ವರದಿಗಾರರನ್ನು ಕಳಿಸಿತು. ಅಮೆರಿಕ ಯಾವ ರೀತಿಯ ನಿಲುವು ತಳೆಯಬೇಕೆಂಬುದರ ಬಗ್ಗೆ ಒತ್ತು ನೀಡಿ ವರದಿ ಮಾಡುವಂತೆ ಸಂಪಾದಕರು ವರದಿಗಾರರಿಗೆ ಸೂಚಿಸಿದ್ದರು. ಈ ವರದಿಗಾರ ಮತ್ಯಾರೂ ಅಲ್ಲ ಅರ್ನೆಸ್ಟ್ ಹೆಮಿಂಗ್ವೆ. ಆಗಲೇ ಅವರು ಸಾಕಷ್ಟು ಹೆಸರು ಮಾಡಿದ ಕಾದಂಬರಿಕಾರ. ಹೆಮಿಂಗ್ವೆ ಜೀವನದಲ್ಲಿ ಪ್ರಮುಖ ರಾಜಕೀಯ ಧುರೀಣ ಹಾಗೂ ಮಿಲಿಟರಿ ನಾಯಕನಾದ ಚಿಯಾಂಗ್ ಕೈಷೆಕ್ ಭೇಟಿ ಮಾಡಿದರು. ಆ ಸಂದರ್ಭದಲ್ಲಿ ಚೀನಾದ ಆ ನಾಯಕ 'ಅಮೆರಿಕದಿಂದ ನಮಗೆ ಬೋಯಿಂಗ್ ಬಿ 17 ಬಾಂಬರ್ ವಿಮಾನಗಳು ಬೇಕಾಗಿವೆ. ಆ ಮೂಲಕ ನಾವು ಜಪಾನಿನ ಸೊಕ್ಕನ್ನು ಮುರಿಯಬಹುದು. ಅಮೆರಿಕ ಸಹ ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ' ಎಂಬ ಅತ್ಯಂತ ಸ್ಫೋಟಕ ಸುದ್ದಿಯನ್ನು ನೀಡಿದರು. ಅಂದರೆ ಅಮೆರಿಕವು ಜಪಾನ್ ಸದೆ ಬಡಿಯಲು ಯುದ್ಧ ವಿಮಾನಗಳನ್ನು ಪೂರೈಸಲು ಒಪ್ಪಿದೆ ಎಂಬುದು ಅವರ ಮಾತಿನ ತಾತ್ಪರ್ಯ. ಅಷ್ಟೇ ಅಲ್ಲ, ಚಿಯಾಂಗ್ ಕೈಷೆಕ್ ಹಮಿಂಗ್ವೆ ಅವರನ್ನು ಯುದ್ಧ ವಿಮಾನಗಳು ಬಂದಿಳಿಯುವ ನಿಲ್ದಾಣಕ್ಕೂ ಕರೆದುಕೊಂಡು ಹೋದರು. ಇದು ನಿಜಕ್ಕೂ ಗ್ರೇಟ್ ಸ್ಟೋರಿ ತಾನೆ? ಅಮೆರಿಕ ಹಾಗೂ ಜಪಾನ್ ಮಧ್ಯೆ ಯುದ್ಧಕ್ಕೆ ಸರ್ವಸಿದ್ಧತೆ ನಡೆದಿರುವುದನ್ನು ದೇಶದ ಪ್ರಮುಖ ರಾಜಕೀಯ ಹಾಗೂ ಮಿಲಿಟರಿ ನಾಯಕನೇ ಖುದ್ದಾಗಿ ಹೇಳಿ, ಕಣ್ಣಾರೆ ತೋರಿಸಿದ್ದ.
ಆದರೆ ಹೆಮಿಂಗ್ವೆ ಕಳಿಸಿದ ವರದಿಯಲ್ಲಿ ಈ ಸುದ್ದಿ ಕೊನೆ ಪ್ಯಾರಾದಲ್ಲಿ ಇತ್ತು. ಚಿಯಾಂಗ್ ಕೈಷೆಕ್‌ನ ಮಾತಿನ ಮಹತ್ವ ಹೆಮಿಗ್ವಿಗೆ ಆಗಲೇ ಇಲ್ಲ. ಯುದ್ಧ ಕಾರ್ಮೋಡ ದಟ್ಟೈಸಿದ್ದರೂ ಅದನ್ನು ಗಮನಿಸಲೇ ಇಲ್ಲ. ಹೆಮಿಂಗ್ವೆ ಅದ್ಭುತ ಬರಹಗಾರ, ಕಾದಂಬರಿಕಾರನಿರಬಹುದು, ಆದರೆ ಕೆಟ್ಟ ವರದಿಗಾರ. ಹಾಗೆಂದು ಜಾನ್‌ರೈನ್ ಹೇಳುತ್ತಿದ್ದರು.
ಬೆಂಕಿ ಆಕಸ್ಮಿಕ, ಸಿದ್ದರಾಮಯ್ಯ- ಕುಮಾರಸ್ವಾಮಿ ಜಟಾಪಟಿ, ಜೆಡಿಎಸ್ ಶಾಸಕಾಂಗ ಸಭೆ ವರದಿಗೆ ಡಾ. ಎಸ್.ಎಲ್. ಭೈರಪ್ಪ, ಅನಂತಮೂರ್ತಿ, ಕಂಬಾರ, ಕಾರ್ನಾಡ್ ಅವರನ್ನು ಕಳಿಸಿದರೆ, ಅವರು ಹೇಗೆ ಬರೆಯಬಹುದು? ನನಗಂತೂ ವಿಪರೀತ ಕುತೂಹಲವಿದೆ ಅವರ ಕಾಪಿ ಹೇಗಿದ್ದಿರಬಹುದೆಂದು. ಈ ಘಟನೆಗಳನ್ನು ನರಹಳ್ಳಿ ಬಾಲಸುಬ್ರಮಣ್ಯ, ಜಿ.ಎಸ್. ಅಮೂರ, ಚೆನ್ನಿ, ಗಿರಡ್ಡಿಯಂಥವರು ಬರೆದರೆ ಅದನ್ನು ಯಥಾವತ್ತು ಪ್ರಕಟಿಸಲು ಯಾವ ಸಂಪಾದಕನೂ ಧೈರ್ಯ ತೆಗೆದುಕೊಳ್ಳಲಾರ. ಆ ಪ್ರಕಾರಗಳಲ್ಲಿ ಪತ್ರಕರ್ತರು ಕೃಷಿ ಮಾಡಲು ಹೋಗದಿರುವುದಕ್ಕೂ ಅದೇ ಕಾರಣವಿದ್ದಿರಬಹುದು. ನನ್ನಲ್ಲಿ ಕನ್ನಡದ ವಿಮರ್ಶಕರೊಬ್ಬರು ಆಗಾಗ ಕೇಳುವುದುಂಟು- 'ಪತ್ರಕರ್ತರ ಹಾಗೆ, ಎಲ್ಲರಿಗೂ ಅರ್ಥವಾಗುವ ಹಾಗೆ, ಸರಳವಾಗಿ ಬರೆಯಲು ನಮಗೆ ಬರುವುದೇ ಇಲ್ಲ.'
ಬರೆಯುವ ಬದುಕಿನ ಬದುವು ಭಿನ್ನ, ಭಿನ್ನ!
- ವಿಶ್ವೇಶ್ವರ ಭಟ್
vbhat@me.com