ಅಂಕಣಗಳು

ಅಡವಿ ಗೊಲ್ಲರಿರುವ ಹಟ್ಟಿಗೆ ಕೋಳಿಗಳು ಕಾಲಿಡುವಂತಿಲ್ಲ

ಇವರ ಮನೆಯ ಅವರಣಕ್ಕೆ ಕೋಳಿ ಬರುವಂತಿಲ್ಲ ಹಾಗಂತ ಇವರೇನೂ...

ಇವರ ಮನೆಯ ಅವರಣಕ್ಕೆ ಕೋಳಿ ಬರುವಂತಿಲ್ಲ. ಹಾಗಂತ ಇವರೇನೂ ಸಸ್ಯಹಾರಿಗಳಲ್ಲ. ಮಾಂಸಪ್ರಿಯರೇ. ಏಕೋ ಏನೋ ಕೋಳಿಗೂ ಈ ಸಮುದಾಯದ ಜನರಿಗೂ ಆಗದು.
ಏಕೆ ಹೀಗೆ ? ಎಂದು ಕೇಳಿದರೆ ಸಮುದಾಯ ಹಿರಿಯರು ಹೇಳುವುದು ಹೀಗೆ. 'ಕೋಳಿ ಮಾಂಸದ ಸಾರಿನ  ಊಟ ಮಾಡಂಗಿಲ್ಲ. ಹಿಂಗಂತ ಆ ಕೃಷ್ಣ ಪರಮಾತ್ಮನೇ ಹೇಳ್ಯಾನಂತ. ಹಂಗೇನರ ಕೋಳಿ ಮಾಂಸ ತಿಂದ್ರ ಊರಿಗೆ, ಜನರಿಗೆ ಒಳ್ಳೇದು ಆಗಂಗಿಲ್ಲ. ಉದ್ಧಾರವಾಗಂಗಿಲ್ಲ ಅಂತಾನೂ ಆ ದೇವ್ರು ಹೇಳ್ಯಾನಂತ. ಅದಕ ನಮ್ ಹಟ್ಟಿಗ ಕೋಳಿ ಬರಂಗಿಲ್ಲ'.
ಕೋಳಿ ಬಗ್ಗೆ ಇರುವ ನಂಬಿಕೆಯನ್ನು ಹೀಗೆಂದು ವಿವರಿಸಿದವರು ಆಡವಿ ಗೊಲ್ಲ ಸಮುದಾಯದ ಹಿರಿಯರಾದ ಗ್ರಾಮ ಪಂಚಾಯಿತಿ ಸದಸ್ಯ ಯರ್ರಪ್ಪ. ಇವರು ವಾಸ ಮಾಡುವ ಸ್ಥಳ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮದ ಗೊಲ್ಲರ ಹಟ್ಟಿಯಲ್ಲಿ.

ಕಾಡುಮೇಡುಗಳಲ್ಲಿದ್ದವರು: ಅಡವಿ ಗೊಲ್ಲರು ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಹೆಸರೇ ಹೇಳುವಂತೆ ಇವರು ಕಾಡುಮೇಡುಗಳಲ್ಲಿ ನೆಲೆಸಿದ್ದ ಜನ. ಕುರಿ, ದನಗಳ ಸಾಕಣೆ  ಇವರ ಕುಲ ಕಸುಬು. ಜೀವನೋಪಾಯಕ್ಕೆ ಇಂದಿಗೂ ಅದನ್ನೇ ನಂಬಿಕೊಂಡಿರುವ ಸಾವಿರಾರು ಕುಟುಂಬಗಳಿವೆ. ಆದರೆ, ಅವರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ ಚಿಂತಾಜನಕವಾಗಿದೆ.
ರಾಜ್ಯದ ನಾನಾ ಭಾಗಗಳಲ್ಲಿ ಅಡವಿ ಗೊಲ್ಲರು ನೆಲೆಸಿದ್ದಾರೆ. ಇವರು ಗುಂಪು ಗುಂಪಾಗಿ ವಾಸಿಸುವ ಜನ. ತಮ್ಮದೇ ಆದ ಹಟ್ಟಿಗಳನ್ನು ಕಟ್ಟಿಕೊಂಡು ಬದುಕು ಕಂಡುಕೊಂಡವರು ಇವರು. ಸರ್ಕಾರ ಈ ಜಾತಿಯನ್ನು ಹಿಂದುಳಿದ ಪ್ರವರ್ಗ 1ಕ್ಕೆ ಸೇರಿಸಿದೆ. ಆದರೂ ಸರ್ಕಾರದಿಂದ ಸಿಗಬೇಕಾಗಿರುವ ಸವಲತ್ತುಗಳು ಇಂದಿಗೂ ಗೊಲ್ಲರ ಹಟ್ಟಿಗಳನ್ನು ತಲುಪಿಯೇ ಇಲ್ಲ. ತಲೆ ಎತ್ತಿ ಕೇಳುವಂತಹ ಸ್ಥಿತಿಯಲ್ಲಿ ಅವರೂ ಇಲ್ಲ. ಏಕೆಂದರೆ, ಈ ಸಮುದಾಯದ ಜನ ಮುಗ್ಧರು.
ಅಡವಿ ಗೊಲ್ಲರ ಮಾತೃಭಾಷೆ ಕನ್ನಡ. ಈರಣ್ಣ, ಜುಂಜಪ್ಪ ಇವರು ಆರಾಧಿಸುವ ದೇವರುಗಳು. ಬಹುತೇಕ ಹಿಂದೂ ಸಂಪ್ರದಾಯವನ್ನೇ ಅನುಸರಿಸುವ ಇವರು, ಎಲ್ಲ ಹಬ್ಬ ಹರಿದಿನಗಳನ್ನು ಆಚರಿಸುತ್ತಾರೆ. ಈ ಹಿಂದೆ ಒಂದೊಂದು ಕುಟುಂಬದ ಬಳಿಯೂ 50ರಿಂದ 100 ಕುರಿಗಳಿರುತ್ತಿದ್ದವು. ಈಗ ಅವುಗಳ ಸಂಖ್ಯೆಯೂ ಕಡಿಮೆ ಆಗುತ್ತಾ ಬಂದಿದೆ. ಏಕೆಂದರೆ, ಕುರಿ ಸಾಕಾಣೆ ಮಾಡುತ್ತಿದ್ದವರ ಪೈಕಿ ಅನೇಕ ಮಂದಿ ಆ ಕಸುಬು ಬಿಟ್ಟು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕಟ್ಟಡ ನಿರ್ಮಾಣ ಕಾಮಗಾರಿ, ಹೊಲ ಗದ್ದೆ ಮತ್ತು ಚಿಕ್ಕಮಗಳೂರಿನ ಕಾಫಿ ತೋಟಗಳಲ್ಲಿ ದುಡಿಯುತ್ತಿದ್ದಾರೆ.

ಕೋಳಿ ತಿಂದರೆ ಸಾವು: ಮಾಂಸಹಾರಿಗಳಾದ ನಿಮಗೆ ಕೋಳಿಗಳ ಮೇಲೇಕೆ ದುಷ್ಮನಿ ಎಂದು ಯರ್ರೆಪ್ಪ ಅವರನ್ನು ಕೇಳಿದರೆ, ಆದರ ಮಾಂಸ ತಿನ್ನಬಾರದು ಎಂದು ಶ್ರೀಕೃಷ್ಣ ಪರಮಾತ್ಮ ಹೇಳಿದ್ದಾನಂತೆ. ಅದನ್ನು ಹಿರಿಯರು ನಮಗೆ ಆಗಾಗ ಹೇಳುತ್ತಿದ್ದರು. ಅವರ ಮಾತಿನಂತೆ ನಾವು ನಡೆದುಕೊಳ್ಳುತ್ತೇವೆ. ಕೋಳಿ ತಿಂದರೆ ಜ್ವರ ಬಂದು ಸತ್ತೇ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ. ಆದರೆ, ಪಟ್ಟಣ ಸೇರಿರುವ ನಮ್ಮ ಹುಡುಗರು ಕೋಳಿ ಮಾಂಸ ತಿನ್ನವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಅವರು.
ಗೊಲ್ಲರ ಹಟ್ಟಿಯ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ಸರ್ಕಾರ ನಮಗೆ ಮನೆಗಳನ್ನು ಕೊಟ್ಲಿಲ್ಲ. ಹೀಗಾಗಿ ಹುಲ್ಲಿನಿಂದ ಕಟ್ಟಿದ ಗುಡಿಸಲುಗಳಲ್ಲಿಯೇ ನಮ್ಮ ವಾಸ. ಈ ಹುಲ್ಲಿನಲ್ಲಿ ಆಗಾಗ ಹಾವು, ಚೇಳು ಸೇರಿಕೊಂಡು ಕಾಟ ಕೊಡುತ್ತವೆ. ಏನು ಮಾಡೋದು ಹೇಳಿ ? ಎನ್ನುತ್ತಾರೆ ಯರ್ರಪ್ಪ.
ಅಡವಿ ಗೊಲ್ಲರಲ್ಲಿ 70ಕ್ಕೂ ಹೆಚ್ಚು ಉಪ ಪಂಗಡಗಳಿವೆ. ಹಲವಾರು ಮೂಡನಂಬಿಕೆಗಳೂ ಇವರಲ್ಲಿ ಇತ್ತು. ಈ ಸಮುದಾಯದಲ್ಲಿ ಹೆಣ್ಣು ಮಕ್ಕಳು ಋತುಮತಿಯರಾದರೆ ಅಥವಾ ಹೆರಿಗೆಯಾದರೆ ಮನೆಯೊಳಗೆ, ಅಷ್ಟೇ ಏಕೆ ಊರಿನೊಳಕ್ಕೇ ಕಾಲಿಡುವಂತಿರಲಿಲ್ಲ. ಊರಿನಿಂದ ಹೊರಗೆ ಗುಡಿಸಲಲ್ಲಿ ಆ ಹೆಣ್ಣು ಮಕ್ಕಳು ಇರಬೇಕಾಗಿತ್ತು. ಶಾಸ್ತ್ರ, ಸಂಪ್ರದಾಯ ಮುಗಿದ ಬಳಿಕವಷ್ಟೇ ಅವರಿಗೆ ಪ್ರವೇಶ. ಋತುಮತಿಯರಾದರೆ ಐದು ದಿನ, ಹೆರಿಗೆಯಾದರೆ ಒಂದು ತಿಂಗಳು ಊರಿನಿಂದ ಹೊರಗೆ ಇರಬೇಕಿತ್ತು. ಈ ಸಂದರ್ಭದಲ್ಲಿ ಹಟ್ಟಿಯ ಯಾವುದೇ ಜನ ಆಕೆಯನ್ನು ಮುಟ್ಟುವಂತಿರಲಿಲ್ಲ. ಊರಿನಿಂದ ಹೊರಗೆ ಪ್ರತ್ಯೇಕವಾದ ಗುಡಿಸಲಲ್ಲಿ ತಿಂಗಳು ಕಾಲ ವಾಸ ಮಾಡುವ ಮಹಿಳೆ ಸ್ಥಿತಿ ಯಾರಿಗೂ ಬೇಡ. ಇದು ಒಂದು ರೀತಿಯ ಸಾಮಾಜಿಕ ಅಸ್ಪೃಶ್ಯತೆ. ಹೀಗೆ ವಾಸ ಮಾಡುತ್ತಿದ್ದ ಹೆಣ್ಣು ಮಕ್ಕಳು ಹಾವು, ಚೇಳುಗಳ ಕಡಿತಕ್ಕೆ ಒಳಗಾಗಿ ಸತ್ತಿರುವ ಊದಾಹರಣೆಗಳೂ ಇವೆ ಎನ್ನುತ್ತಾರೆ ಗೊಲ್ಲರ ಹಟ್ಟಿಯ ಜನ.
ಹೆಣ್ಣುಮಕ್ಕಳಿಗೆ ಶಾಪವಾದ ಸಂಪ್ರದಾಯ: ಹೆರಿಗೆಯಾದ ಬಳಿಕ ಶಾಸ್ತ್ರ ಮುಗಿಯುವ ವರೆಗೆ ಬಾಣಂತಿ ಅಥವಾ ಮಗುವನ್ನು ಯಾರೂ ನೋಡುವಂತೆ ಇರಲಿಲ್ಲ. ಒಂದು ವೇಳೆ ಋತುಮತಿಯಾದ ಯುವತಿ ಅಥವಾ ಬಾಣಂತಿ ಸತ್ತರೆ ಆಕೆಯ ಶವವನ್ನು ಸಂಬಂಧಿಕರು ಅಥವಾ ಜಾತಿಯ ಜನ ಮುಟ್ಟುವಂತಿರಲಿಲ್ಲ. ಬೇರೆ ಜಾತಿಯವರಿಂದ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸುವ ಸಂಪ್ರದಾಯ ಇತ್ತು. ಇದು ಪಂಚಾಯಿತಿ ಕಟ್ಟೆಯಲ್ಲಿ ಹಿರಿಯರು ವಿಧಿಸುವ ನಿರ್ಣಯ. ಈಗಲೂ ಪಂಚಾಯಿತಿ ಕಟ್ಟೆಯಲ್ಲಿ ವಿಚಾರಣೆ ನಡೆಯುತ್ತದೆ. ತಂಟೆ ತಕರಾರು ಉಂಟಾದಾಗ ಹಿರಿಯರು ಅದನ್ನು ಬಗೆಹರಿಸುತ್ತಾರೆ. ಇಂತಹ ಹಲವಾರು ಕಂದಾಚಾರಗಳು ಅಲ್ಲಲ್ಲಿ ಇಂದಿಗೂ ಚಾಲ್ತಿಯಲ್ಲಿವೆ. ಇದಕ್ಕೆ ಜನರಲ್ಲಿನ ಅಂಧಶ್ರದ್ಧೆಯೇ ಕಾರಣ.
ಗೌರಿ-ಗಣೇಶ, ದೀಪಾವಳಿ, ಯುಗಾದಿ ಮತ್ತು ನಾಗರ ಪಂಚಮಿ ಅಡವಿ ಗೊಲ್ಲರಿಗೆ ಪ್ರಿಯವಾದ ಹಬ್ಬಗಳು. ಹಟ್ಟಿ ಜನರೆಲ್ಲ ಒಂದಾಗಿ ಸೇರಿ ಹಬ್ಬಗಳನ್ನು ಆಚರಣೆ ಮಾಡುತ್ತಾರೆ. ಕುರಿಗಳನ್ನು ಕಾಡಿನಲ್ಲಿ ಮೇಯಿಸಿಕೊಂಡು ಬರುವ ಈ ಜನ ಮೊದಲು ವಾಸ ಮಾಡುತ್ತಿದ್ದುದೂ ಕಾಡಿನಲ್ಲೇ. ಕ್ರಮೇಣ ಅಲ್ಲಿಂದ ಎತ್ತಂಗಡಿಯಾದ ಇವರು ಅರಣ್ಯದ ಅಂಚಿನಲ್ಲೇ ಹಟ್ಟಿಗಳನ್ನು ಕಟ್ಟಿಕೊಂಡಿದ್ದಾರೆ. ಸಾಂಸ್ಕೃತಿಕವಾಗಿಯೂ ಅಡವಿ ಗೊಲ್ಲರು ಶ್ರೀಮಂತರು. ಹಾಡುಪಾಡುಗಳೇ ಇವರ ಪಾಲಿಗೆ ಮನರಂಜನೆ.
ಹಿಂದುಳಿದ ವರ್ಗಕ್ಕೆ ಸೇರಿದ ಗೊಲ್ಲ ಎಂಬ ಜಾತಿಯಡಿ ಯಾದವರು, ಅಡವಿ ಗೊಲ್ಲರು, ಗೊಲ್ಲರು, ಗೋಪಾಲ ಮತ್ತಿತರ ಪರ್ಯಾಯ ಪದಗಳನ್ನು ಸೇರಿಸಲಾಗಿದೆ. ಆದರೆ, ಊರು ಗೊಲ್ಲರಿಗೂ ಈ ಅಡವಿ ಗೊಲ್ಲರಿಗೂ ಸಂಬಂಧವೇ ಇಲ್ಲ ಎಂಬುದು ಅನೇಕರ ವಾದ. ಅಡವಿ ಗೊಲ್ಲರು ಎಂಬುದಕ್ಕೆ ಪರ್ಯಾಯವಾಗಿ ಕಾಡು ಗೊಲ್ಲರು ಎಂಬುದನ್ನು ಸೇರಿಸಬೇಕು ಎಂದು ಅವರ ಅಭಿಪ್ರಾಯ. ಅಡವಿ ಗೊಲ್ಲರೂ ಎಲ್ಲಿಂದಲೂ ವಲಸೆ ಬಂದಿಲ್ಲ. ಅವರು ಕರ್ನಾಟಕದ ಮೂಲ ನಿವಾಸಿಗಳು. ಬುಡಕಟ್ಟು ವರ್ಗಕ್ಕೆ ಸೇರಿದವರು ಎಂಬುದು ಅನೇಕರ ಅನಿಸಿಕೆ. ಅಡವಿ ಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಡಾ. ಸಿ.ಎಸ್. ದ್ವಾರಕಾನಾಥ್ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾಗ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಈ ಸಂಬಂಧ ಕೇಂದ್ರಕ್ಕೆ ವರದಿ ಸಲ್ಲಿಸಬೇಕು ಎಂದಿದ್ದರು.

ಮೂಲಭೂತ ಸೌಕರ್ಯಗಳೇ ಇಲ್ಲ: ಏಕೆಂದರೆ, ಪಶು ಪಾಲನೆ, ಕುರಿ ಸಾಕಣೆ ಮತ್ತು ಕೂಲಿ ಕೆಲಸಗಳನ್ನು ನಂಬಿಕೊಂಡಿರುವ ಈ ಸಮುದಾಯದ ಜನರ ಜೀವನ ಶೋಚನೀಯವಾಗಿದೆ. ನಾಗರಿಕತೆ ಬದುಕು ಇವರ ಪಾಲಿಗೆ ಬಹು ದೂರದಲ್ಲಿದೆ. ಅವರಿಗೆ ಚಂದದ ಬದುಕನ್ನು ಕಟ್ಟಿಕೊಡುವ ಕೆಲಸ ಸರ್ಕಾರದಿಂದ ಆಕಬೇಕಿದೆ. ಅಡವಿ ಗೊಲ್ಲರು ಎಂತಹ ಸ್ಥಿತಿಯಲ್ಲಿ ಇದ್ದಾರೆ ಎಂಬುದು ಅವರ ವಾಸ ಮಾಡುತ್ತಿರುವ ಹಟ್ಟಿಗಳನ್ನು ನೋಡಿದರೆ ಅರ್ಥವಾಗುತ್ತದೆ. ಅಡವಿಗೊಲ್ಲರ ಬಹುತೇಕ ಹಟ್ಟಿಗಳಿಗೆ ಇಂದಿಗೂ ವಿದ್ಯುತ್ ಸಂಪರ್ಕವಿಲ್ಲ. ಅಸ್ಪತ್ರೆ, ಶಾಲೆ, ಕುಡಿಯುವ ನೀರು, ರಸ್ತೆ ಮತ್ತಿತರ ಮೂಲಭೂತ ಸೌಕರ್ಯಗಳೇ ಕಾಣುತ್ತಿಲ್ಲ. ಬಹು ಮುಖ್ಯವಾಗಿ ಈ ಸಮುದಾಯದ ಸಂಸ್ಕೃತಿಯೇ ಅಪಾಯದ ಅಂಚಿಗೆ ಸಿಲುಕಿದೆ. ಅದನ್ನು ರಕ್ಷಣೆ ಮಾಡುವ ಕೆಲಸವನ್ನು ಸರ್ಕಾರ ಮೊದಲು ಮಾಡಬೇಕಿದೆ. ಅದಕ್ಕಾಗಿ ಅಧ್ಯಯನ ಮತ್ತು ಸಂಶೋಧನೆ ನಡೆಯಬೇಕಿದೆ.

- ಕೆ.ವಿ.ಪ್ರಭಾಕರ
prabhukolar@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!