ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕಳೆದ ವಾರ ಅರುಣಾಚಲ ಪ್ರದೇಶಕ್ಕೆ ಎರಡು ದಿನಗಳ ಕಾಲ ಭೇಟಿ ನೀಡಿದ್ದರು. ಅದು ದೊಡ್ಡ ಸುದ್ದಿ ಏನಲ್ಲ. ಆದರೆ, ನಮ್ಮದೇ ಭೂ ಭಾಗದ ಒಂದು ಅವಿಭಾಜ್ಯ ಅಂಗವಾಗಿರುವ, ನಮ್ಮದೇ ಒಂದು ರಾಜ್ಯಕ್ಕೆ, ನಮ್ಮ ರಾಷ್ಟ್ರಪತಿ ಭೇಟಿ ನೀಡಿದ್ದಕ್ಕೆ ನೆರೆಯ ಚೀನಾ ತಗಾದೆ ಎತ್ತಿದೆ. 'ಅರುಣಾಚಲ ಪ್ರದೇಶ ಸದ್ಯ ಭಾರತದ ವಶದಲ್ಲಿದ್ದರೂ ಅದು ವಿವಾದಿತ ಪ್ರದೇಶ. ಉಭಯ ದೇಶಗಳ ನಡುವೆ ಗಡಿಯಲ್ಲಿ ಶಾಶ್ವತ ಶಾಂತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಆದರೆ, ಇಂತಹ ಕ್ರಮಗಳು (ರಾಷ್ಟ್ರಪತಿ, ಪ್ರಧಾನಿ ಭೇಟಿ) ಶಾಂತಿ ಪ್ರಕ್ರಿಯೆಯ ಉದ್ದೇಶವನ್ನು ನಕಾರಗೊಳಿಸುತ್ತವೆ. ಗಡಿ ತಗಾದೆ ಇತ್ಯರ್ಥವಾಗುವವರೆಗೆ ಚೀನಾ ಇಂತಹ ಬೆಳವಣಿಗೆಗಳನ್ನು ಸಹಿಸುವುದಿಲ್ಲ. ದ್ವಿಪಕ್ಷೀಯ ಸಂಬಂಧ ವೃದ್ಧಿಯನ್ನು ಗಮನಲ್ಲಿಟ್ಟುಕೊಂಡು ಭಾರತ ಎಚ್ಚರಿಕೆಯಿಂದ ವರ್ತಿಸಬೇಕು' ಎಂದು ತುಸು ಅತಿಯಾಗಿಯೇ ಚೀನಾ ತನ್ನ ನಾಲಗೆಯನ್ನು ಹರಿಯಬಿಟ್ಟಿದೆ. ರಾಷ್ಟ್ರಪತಿಯಂತೂ ಈ ವಿಚಾರದಲ್ಲಿ ತುಟಿ ಎರಡು ಮಾಡಿಲ್ಲ. ಅವರ ಸ್ಥಾನ ಸಮ್ಮಾನ ಅದಕ್ಕೆ ಆಸ್ಪದ ನೀಡುವುದೂ ಇಲ್ಲ. ಇನ್ನು ಸರ್ಕಾರ? ನಿರೀಕ್ಷೆ ಮಾಡುವುದೂ ಮಹಾಪರಾಧವೇ ಸರಿ. ವಿದೇಶಾಂಗ ಸಚಿವರಾಗಲಿ, ಇಲಾಖೆಯಾಗಲಿ ಚೀನಾದ ಈ ಉದ್ಧಟತನವನ್ನು ಗಮನಿಸಿಯೇ ಇಲ್ಲ ಎಂಬಂತೆ ಮುಗುಮ್ಮಾಗಿ ಕುಳಿತುಬಿಟ್ಟಿದೆ. ಯಾರ ದೂರವಾಣಿಗೆ ಕಳ್ಳಗಿವಿ ಹಾಕಬೇಕು, ಯಾರ ಮೇಲೆ ಯಾವ ತನಿಖೆ ಮಾಡಬೇಕು, ಯಾವ ವಿರೋಧಿ ನಾಯಕನ ಮುಖಕ್ಕೆ ಮಸಿ ಬಳಿಯಬೇಕು ಎಂಬ ಲೆಕ್ಕಾಚಾರದಲ್ಲಿಯೇ ಕಳೆದು ಹೋಗಿರುವ ಸರ್ಕಾರದ ಬಳಿ ದೇಶದ ಸಮಗ್ರತೆಯನ್ನು ಪ್ರಶ್ನಿಸುವ ನಾಲಗೆಯನ್ನು ತುಂಡರಿಸುವಷ್ಟು ವ್ಯವಧಾನವಾದರೂ ಎಲ್ಲಿದೆ? ಲಡಾಖ್ನಲ್ಲಿ ನಮ್ಮ ಗಡಿಯೊಳಗೆ ಬಂದು ವಾಪಸಾಗಲು ತನಗೆ ಅನುಕೂಲಕರವಾಗುವಂಥ ಷರತ್ತುಗಳನ್ನು ವಿಧಿಸಿ ಅದಕ್ಕೆ ಭಾರತದಿಂದ ಒಪ್ಪಿಗೆಯನ್ನು ಪಡೆದುಕೊಂಡ ಚೀನಾ ನಮ್ಮ ಸರ್ಕಾರದ ದೌರ್ಬಲ್ಯಗಳನ್ನು ಅರಿತೇ ಪದೇ ಪದೆ ಈ ರೀತಿಯ ಎಚ್ಚರಿಕೆ, ಬ್ಲ್ಯಾಕ್ಮೇಲ್ ಮಾಡುತ್ತ ಬಂದಿದೆ. ಅದು ಗೊತ್ತಿದ್ದೂ ಸರ್ಕಾರ ನಿಸ್ಸತ್ವವಾಗಿ ಕುಳಿತಿದೆ. ಚೀನಾದ ಉಪದ್ವ್ಯಾಪ ಇಲ್ಲಿಗೆ ನಿಂತಿಲ್ಲ. ಶಾಶ್ವತ ಗಡಿ ಸೂತ್ರಕ್ಕೆ ಚೀನಾ ಮತ್ತೊಂದು ಪ್ರಸ್ತಾವ ಭಾರತದ ಮುಂದಿಟ್ಟಿದೆ. ಅದೆಂದರೆ ಅರುಣಾಚಲ ಪ್ರದೇಶವನ್ನು ಅವರಿಗೆ ಬಿಟ್ಟುಕೊಟ್ಟರೆ ಒಣ ಹುಲ್ಲೂ ಬೆಳೆಯದಂತಹ (ಇದು ನೆಹರು ದಶಕಗಳ ಹಿಂದೆ ಮಾಡಿದ ಬಣ್ಣನೆ) ಅಕ್ಸಾಯ್ ಚಿನ್ ಪ್ರದೇಶವನ್ನು ಭಾರತಕ್ಕೆ ಕೊಡುತ್ತದಂತೆ. ಇಷ್ಟಕ್ಕೂ ಭಾರತಕ್ಕೆ ಬಿಟ್ಟುಕೊಡಲು ಅಕ್ಸಾಯ್ ಚಿನ್ ಪ್ರದೇಶ ಚೀನಾದ ಆಸ್ತಿಯೇ? ನಮ್ಮದೇ ಭೂ ಭಾಗವನ್ನು ಪಾಕಿಸ್ತಾನ ಆಕ್ರಮಿಸಿಕೊಂಡು ಅದನ್ನು ಚೀನಾಕ್ಕೆ ಲೀಸ್ ನೀಡಿರುವ ಪ್ರದೇಶ. ಚೀನಾದ ಧೂಳು ಸಹ ಅಲ್ಲಿ ಬಿದ್ದರೆ ಅದೂ ಅಕ್ರಮ. ಅಕ್ಸಾಯ್ ಚಿನ್ ಹೆಸರೆತ್ತುವುದೇ ಅನೀತಿ. ಅಂತಹುದರಲ್ಲಿ ಅದನ್ನು ಬಿಟ್ಟುಕೊಡುತ್ತೇವೆ ಎಂಬ ಧೋರಣೆಯೇ ಅಪ್ರಸ್ತುತ. ಇನ್ನು ಅರುಣಾಚಲ ಪ್ರದೇಶ. ಅದನ್ನು ತನ್ನದೆನ್ನೆಲು ಚೀನಾದ ಬಳಿ ಏನು ಪುರಾವೆ ಇದೆ ? ಅದೇ ಈ ಪ್ರದೇಶ ಭಾರತದ್ದು ಎನ್ನಲು ಸಾಕಷ್ಟು ಪುರಾವೆಗಳಿವೆ. ಇತಿಹಾಸದ ಜೊತೆ ಪುರಾಣಗಳಲ್ಲೂ ಇದರ ಉಲ್ಲೇಖವಿದೆ. ಅರುಣಾಚಲ ಪ್ರದೇಶಕ್ಕೆ ಭೇಟಿ ಇತ್ತ ವೇಳೆ ಅಲ್ಲಿನ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಪ್ರಣಬ್ 'ಇದು ಪರುಶುರಾಮ ತನ್ನ ಪಾಪಗಳನ್ನು ತೊಳೆದುಕೊಂಡ ಸ್ಥಳ, ವ್ಯಾಸ ಮಹರ್ಷಿಯ ತಪೋಭೂಮಿ, ಭೀಷ್ಮಕ ರಾಜನ ರಾಜ್ಯ, ಮಹಾಭಾರತದ ಶ್ರೀಕೃಷ್ಣನು ರುಕ್ಮಿಣಿಯನ್ನು ವರಿಸಿದ ಸ್ಥಳ. ಅಲ್ಲದೇ ಆರನೇ ದಲಾಯಿ ಲಾಮಾರ ಜನ್ಮಸ್ಥಳ. ಎಲ್ಲಕ್ಕಿಂತ ಮಿಗಿಲಾಗಿ ದೇಶದ ಮುಕುಟ' ಎಂದು ಅರುಣಾಚಲದ ಐತಿಹ್ಯ, ಪುರಾಣಗಳನ್ನು ಒತ್ತಿ ಹೇಳಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಪ್ರಣಬ್ ಇದನ್ನು ಹೇಳಿದ್ದು ಚೀನಾವನ್ನೇ ಗಮನದಲ್ಲಿಟ್ಟುಕೊಂಡು ಎಂಬುದನ್ನು ಮರೆಯುವಂತಿಲ್ಲ. ಇಂತಹ ಭೂ ಪ್ರದೇಶವನ್ನು ಚೀನಾಕ್ಕೆ ದಾನ ನೀಡಲು ಯಾವ ಶತಮೂರ್ಖ ತಾನೇ ಒಪ್ಪಿಯಾನು? ಭಾರತದ ಭೂಪ್ರದೇಶದ ಮೇಲೆ ಕಣ್ಣು ಹಾಕಿರುವ ಚೀನಾದ ಧೂರ್ತತನ ಅಲ್ಲಿಗೇ ನಿಲ್ಲುವಂತಹುದ್ದಲ್ಲ. ಈಗ ಅದರ ಕಣ್ಣು ಭಾರತದ ಜಲಗಡಿಯ ಮೇಲೆಯೂ ಬಿದ್ದಿದೆ.
ಹಿಂದೂ ಮಹಾಸಾಗರ!
ಜಗತ್ತಿನ ಮೂರನೇ ಅತಿ ದೊಡ್ಡ ಜಲಪ್ರದೇಶ. ಭೂಮಿಯ ಮೇಲಿನ ಒಟ್ಟು ಜಲಪ್ರದೇಶದ ಶೇ.20 ಭಾಗವನ್ನು ಈ ಮಹಾಸಾಗರ ಒಳಗೊಂಡಿದೆ. ಜಾಗತಿಕ ವ್ಯಾಪಾರ-ವಹಿವಾಟಿನಲ್ಲಿಯೂ ಈ ಪ್ರದೇಶಕ್ಕೆ ಹೆಚ್ಚು ಮಹತ್ವವಿದೆ. ಜಗತ್ತಿನ ಶೇ.80ರಷ್ಟು ತೈಲ ವಹಿವಾಟು ಈ ನೀರಿನ ಮೇಲೆಯೇ ನಡೆಯುತ್ತದೆ. 35 ದೇಶಗಳು, ಆರು ದ್ವೀಪಗಳನ್ನು ಇದು ಒಳಗೊಂಡಿದ್ದರೂ ಭಾರತವೇ ಇವುಗಳ ಪೈಕಿ ದೊಡ್ಡ ದೇಶ, ಆರು ದಶಕಗಳ ಹಿಂದಿನವರೆಗೂ ಭಾರತ ನಿಜವಾಗಲೂ ಈ ಜಲಪ್ರದೇಶದ ಒಡೆಯನೇ ಆಗಿತ್ತು. ಹಿಂದೂ ಮಹಾಸಾಗರದ ಬಗ್ಗೆ ಕೆ.ಎಂ. ಪಣಿಕ್ಕರ್ 1940ರಷ್ಟು ಹಿಂದೆಯೇ ಹೇಳಿದ್ದು 'ಜಗತ್ತಿನ ಇತರ ದೇಶಗಳಿಗೆ ಇದು ಪ್ರಮುಖ ಜಲ ಹೆದ್ದಾರಿ ಇರಬಹುದು. ಆದರೆ, ಭಾರತದ ಪಾಲಿಗೆ ಅತ್ಯಂತ ಪ್ರಮುಖ ಜಲ ಪ್ರದೇಶ. ಭಾರತದ ಜೀವ ಸೆಲೆ, ಅದರ ಸ್ವಾತಂತ್ರ್ಯದಲ್ಲಿ ಭಾರತದ ಸ್ವಾತಂತ್ರ್ಯ ಅವಲಂಬಿತವಾಗಿದೆ. ಈ ಬೃಹತ್ ತಟವನ್ನು ರಕ್ಷಿಸಿಕೊಳ್ಳದಿದ್ದರೆ ಎಷ್ಟೇ ದೊಡ್ಡ ಪ್ರಮಾಣದ ಆರ್ಥಿಕ, ಕೈಗಾರಿಕಾ ಪ್ರಗತಿ ಅಥವಾ ಸ್ಥಿರ ಪ್ರಜಾಪ್ರಭುತ್ವ ಸಾಧ್ಯವಿಲ್ಲ' ಎಂದು. ಆದರೆ ಇಂದೇನಾಗಿದೆ? ಚೀನಾ ಇಲ್ಲಿಯೂ ತನ್ನ ಕಾಕ ದೃಷ್ಟಿ ಬೀರಿದೆ. ಭಾರತದ ಭೂ ಭಾಗದ ರಕ್ಷಣೆಗೆ ಹಿಮಾಚಲ ಇದ್ದರೆ ಅದರ ಜಲಭಾಗದ ರಕ್ಷಣೆಗೆಂದೇ ನಿರ್ಮಾಣವಾದಂತಿರುವುದು ಅಂಡಮಾನ್ ದ್ವೀಪ ಸಮೂಹ. ಇಲ್ಲಿನ ಸುಮಾರು 572 ಸಣ್ಣಪುಟ್ಟ ದ್ವೀಪಗಳು ಭಾರತದ ಪಾಲಿಗೆ ಕೋಟೆಯಿದ್ದಂತೆ. ಈ ದ್ವೀಪಕೂಟದ ಕೂಗಳತೆ ದೂರದಲ್ಲಿ ಮ್ಯಾನ್ಮಾರ್ ಜಲ ಪ್ರದೇಶದಲ್ಲಿರುವ ಕೋಕೊ ದ್ವೀಪಗಳಲ್ಲಿ ಚೀನಾ ಈಗಾಗಲೇ ತನ್ನ ನೌಕಾ ನೆಲೆ ಸ್ಥಾಪಿಸಿ ಹಿಂದೂ ಮಹಾಸಾಗರದಲ್ಲಿ ದುಸ್ಸಾಹಸಕ್ಕೆ ಕೈಹಾಕುವ ಸ್ಪಷ್ಟ ಸೂಚನೆ ನೀಡಿದೆ. ಲಡಾಖ್, ಅರುಣಾಚಲ ಪ್ರದೇಶದ ವಿಚಾರವಾಗಿ ಚೀನಾದ ಕ್ಯಾತೆ ಬಹಿರಂಗವಾಗಿ ಕಣ್ಣಿಗೆ ಕಾಣುತ್ತದೆ. ಆದರೆ, ಹಿಂದೂ ಮಹಾಸಾಗರದ ಅಲೆಗಳ ಹಿಂದೆ ಮುಚ್ಚಿಟ್ಟುಕೊಂಡು, ಅದರ ಜೊತೆಗೇ ಮುನ್ನುಗ್ಗಿ ಬರುವ ಅದರ ಹವಣಿಕೆ ಮೈಯೆಲ್ಲ ಕಣ್ಣಾಗಿದ್ದರೂ ಗಮನಿಸುವುದು ಕಷ್ಟ. ಇತ್ತೀಚಿನ ದಿನಗಳಲ್ಲಂತೂ ಮೀನುಗಾರಿಕಾ ಟ್ರಾಲರ್ಗಳಂತೆ ಮಾರ್ಪಾಡು ಹೊಂದಿದ ಚೀನಾ ನೌಕಾ ಬೋಟ್ಗಳ ಓಡಾಟ ಈ ಪ್ರದೇಶದಲ್ಲಿ ಎಗ್ಗಿಲ್ಲದಂತೆ ಸಾಗಿದೆ. ಇದು ಭಾರತಕ್ಕೆ ನಿತ್ಯ ಎಚ್ಚರಿಕೆ. ಭಾರದ ಸಮಗ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿರುವ ಹಿಂದೂ ಮಹಾಸಾಗರದ ಮೇಲಿನ ಹಿಡಿತವನ್ನು ಕಾಯುವ ದೊಡ್ಡ ಹೊಣೆಗಾರಿಕೆ ಭಾರತೀಯ ನೌಕಾ ಪಡೆಯ ಮೇಲಿದೆ. ದೇಶದ ಅಷ್ಟೂ ಕರಾವಳಿ ಪ್ರದೇಶದ ಸುರಕ್ಷತೆಯ ಭಾರತದ ಜೊತೆಗೆ ಹಿಂದೂ ಮಹಾಸಾಗರದ ಇಂಚಿಂಚಿನ ಮೇಲೂ ನಿಗಾ ಇಡಬೇಕಾದ ಅತ್ಯಂತ ಗುರುತರ ಹೊಣೆಗಾರಿಕೆ ನೌಕಾ ಪಡೆಯ ಹೆಗಲಿಗಿದೆ. ಹಿಂದೂ ಮಹಾಸಾಗರದಲ್ಲಿ ಭಾರತದ ಪ್ರಭುತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನೌಕಾಪಡೆ ಎಂದೂ ಎದೆಗುಂದಿಲ್ಲ. ಬಾಂಗ್ಲಾ ವಿಮೋಚನೆಗಾಗಿ 1971ರಲ್ಲಿ ಪಾಕಿಸ್ತಾನದ ಜೊತೆ ನಡೆದ ಯುದ್ಧದಲ್ಲಿ ನೌಕಾಪಡೆಯ ಕೊಡುಗೆ ಕಡಿಮೆ ಏನಲ್ಲ. ಮಹಾಸಾಗರದಲ್ಲಿ ಪಾಕ್ ನೌಕಾಪಡೆ ಜೊತೆ ನೇರ ಕಾಳಗದಲ್ಲಿ ಭಾರತೀಯ ನೌಕಾ ಯೋಧರು ತೋರಿದ ಪರಾಕ್ರಮ ಅಪ್ರತಿಮ. ಐಎನ್ಎಸ್ ವಿಕ್ರಾಂತ್ ಬಳಸಿಕೊಂಡು ಪೂರ್ವದಲ್ಲಿ ಚಿತ್ತಗಾಂಗ್ ಮತ್ತು ಕಾಕ್ಸ್ ಬಜಾರ್ ಬಂದರುಗಳ ಮೇಲೆ ಹಾಗೂ ಪಶ್ಚಿಮದಲ್ಲಿ ಕರಾಚಿ ಬಂದರಿನ ಮೇಲೆ ಘಾತಕ ಮತ್ತು ಯಶಸ್ವಿ ದಾಳಿ ನಡೆಸಿದ ನೌಕಾದಳ ಆ ಸಂದರ್ಭದಲ್ಲಿ ಮೇಲ್ನೋಟಕ್ಕೆ ತನ್ನ ನಾಗರಿಕರ ಸುರಕ್ಷೆಗೆಂದು ಹೇಳಿ ಪರೋಕ್ಷವಾಗಿ ಪಾಕಿಸ್ತಾನಕ್ಕೆ ನೆರವು ನೀಡಲೆಂದು ಬಂದಿದ್ದ ಅಮೆರಿಕದ ಯುದ್ಧ ನೌಕೆಗಳ ಬೆದರಿಕೆಗೂ ಬಗ್ಗಲಿಲ್ಲ. ಈ ಜಲ ಸಮರದಲ್ಲಿ ಐಎನ್ಎಸ್ ಖುಕ್ರಿ ಅಂಡಮಾನ್ ಜಲ ಪ್ರದೇಶದಲ್ಲಿ ಮುಳುಗಿ ಕ್ಯಾಪ್ಟನ್ ಮಹೇಂದ್ರನಾಥ್ ಮುಲ್ಲಾ ಸೇರಿದಂತೆ 193 ಯೋಧರು ವೀರಮರಣ ಹೊಂದಿದರು. ಇಷ್ಟಾದರೂ ಬಾಂಗ್ಲಾ ವಿಮೋಚನೆಯಾಗಿ, ಪಾಕ್ ಸೇನೆ ಮಣ್ಣುಮುಕ್ಕಿದಾಗ ಆ ಯಶಸ್ಸಿನ ಮುಖ್ಯ ಪಾಲು ನೌಕಾ ದಳದ್ದೂ ಆಗಿತ್ತು. ಅದು 1971ರ ಮಾತು. ಆಗ ಹಿಂದೂ ಮಹಾಸಾಗರದಲ್ಲಿ ಭಾರತದ ಪ್ರಭುತ್ವ ನಿಚ್ಚಳವಾಗಿತ್ತು. ಆದರೆ, ಈ 42 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಚೀನಾ ತನ್ನ ಭೂಸೇನೆ ಮತ್ತು ಅದರ ಸಾಮರ್ಥ್ಯ ವೃದ್ಧಿಗೆ ನೀಡಿದಷ್ಟೇ ಮಹತ್ವವನ್ನು ನೌಕಾಪಡೆಯ ಆಧುನೀಕರಣಕ್ಕೂ ನೀಡುವ ಮೂಲಕ ಅತ್ಯಂತ ಸಮರ್ಥ ಸಧೃಡ ಜಲಸೇನೆಯನ್ನು ಕಟ್ಟಿಕೊಂಡಿದೆ.
ಆದರೆ, ಈ ಅವಧಿಯಲ್ಲಿ ಭಾರತ ತನ್ನ ಜಲಸೇನೆಗೆ ಅದೇ ಮಟ್ಟದ ಆದ್ಯತೆ ನೀಡುವಲ್ಲಿ ವಿಫಲವಾಗಿದೆ. ಇಂದು ಚೀನಾದ ಬಳಿ 25 ಹಡಗು ನಾಶಕಗಳು, 50 ಫ್ರಿಗೇಟ್ಗಳು, 80ಕ್ಕೂ ಹೆಚ್ಚು ಕ್ಷಿಪಣಿ ಬೋಟ್ಗಳು ಹಾಗೂ 50ಕ್ಕೂ ಹೆಚ್ಚು ಸಬ್ಮೆರಿನ್ಗಳಿದ್ದರೆ ಭಾರತದ ಬಳಿ 10ಕ್ಕೂ ಕಡಿಮೆ ನಾಶಕಗಳು, ಬೆರಳೆಣಿಕೆಯ ಫ್ರಿಗೇಟ್ ಹಾಗೂ ಕ್ಷಿಪಣಿ ಬೋಟುಗಳಲ್ಲದೆ ಕೇವಲ 2 ಸಬ್ಮೆರಿನ್ಗಳಿವೆ. ಯುದ್ಧ ವಿಮಾನಗಳನ್ನು ಹೊತ್ತೊಯ್ಯಬಹುದಾದ ಯುದ್ಧ ನೌಕೆಗಳ ವಿಷಯದಲ್ಲಷ್ಟೇ ಭಾರತ (2 ಯುದ್ಧನೌಕೆ) ಚೀನಾಗಿಂತ (ಒಂದು ಯುದ್ಧ ನೌಕೆ) ಮುಂದಿದೆ. ಚೀನಾದ ಪ್ರಭುತ್ವ ಹಪಾಹಪಿಯನ್ನು ಗಮನಿಸಿದರೆ ಭಾರತದ ಜಲ ಪ್ರದೇಶ ಯಾವ ಮಟ್ಟದ ಅಪಾಯದಲ್ಲಿದೆ ಎಂಬುದು ವೇದ್ಯವಾಗುತ್ತದೆ. ಚೀನಾವಂತೂ ಪಾಕಿಸ್ತಾನಕ್ಕೆ ಫ್ರಿಗೇಟ್ಗಳು ಹಾಗೂ ಕ್ಷಿಪಣಿ ಬೋಟುಗಳನ್ನು ಒದಗಿಸುವ ಮೂಲಕ ಭಾರತವನ್ನು ಸುತ್ತುವರಿಯುವ ಹುನ್ನಾರದಲ್ಲಿಯೇ ಇದೆ. 1971ರ ಮಹಾಸಾಹಸದ ನೆನಪಾಗಿ ಪ್ರತಿವರ್ಷ ಡಿಸೆಂಬರ್ 4 ಅನ್ನು ನೌಕಾದಿನವನ್ನಾಗಿ ಆಚರಿಸಲಾಗುತ್ತಿದೆ. ಒಂದು ಕಡೆ ಚಿನಾದ ಕುಚೇಷ್ಟೆ, ಅದಕ್ಕೆ ಪಾಕಿಸ್ತಾನದ ಕುಮ್ಮಕ್ಕು, ಮತ್ತೊಂದು ಕಡೆ ಅಮೆರಿಕದ ಬಂಡವಾಳಶಾಹಿ ಇರಾದೆ ಮತ್ತು ಹುನ್ನಾರಗಳ ನಡುವೆ ಭಾರತದ ಜಲಗಡಿಯ ಭದ್ರತೆ ಸಂರಕ್ಷಿಸಲು ನಿರಂತರ ಶ್ರಮ ವಹಿಸುತ್ತಿರುವ ಭಾರತೀಯ ನೌಕಾ ಪಡೆಗೆ ಶಹಬ್ಬಾಸ್ಗಿರಿ ನೀಡಲಷ್ಟೇ ಈ ದಿನವನ್ನು ಆಚರಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಕೇಂದ್ರ ಸರ್ಕಾರ ಜನಕಲ್ಯಾಣದ ಹೆಸರಲ್ಲಿ ಜಾರಿಗೆ ತಂದಿರುವ ನರೇಗಾ, ಪುಕ್ಕಟೆ ಅಕ್ಕಿ, ಕಾಳು, ಸಾಲ ಮನ್ನಾ, ವಸತಿ ಭಾಗ್ಯ (ಉದ್ದೇಶಿತ) ಮುಂತಾದ ಯೋಜನೆಗಳಿಗೆ ವೆಚ್ಚ ಮಾಡುವ ಹಣದ ಕಾಲು ಭಾಗವನ್ನಾದರೂ ನೌಕಾಪಡೆಯ ಆಧುನೀಕರಣಕ್ಕೆ, ಅವರ ಕಲ್ಯಾಣಕ್ಕೆ ವ್ಯಯಿಸಿದರೆ ಅದರಿಂದ ನಮ್ಮ ಸುರಕ್ಷಿತ ನಾಳೆಗಳಿಗಾಗಿ ತಮ್ಮ ನೆಮ್ಮದಿ ಕೆಡಿಸಿಕೊಂಡು ಅನವರತ ಶ್ರಮಿಸುತ್ತಿರುವ, ದೇಶದ ಜಲಗಡಿಯನ್ನು ಎವೆಯಿಕ್ಕದಂತೆ ಕಾಪಾಡುತ್ತಿರುವ ಈ ವೀರ ಯೋಧರಿಗೆ ನ್ಯಾಯ ಸಲ್ಲಿಸಿದಂತಾಗುತ್ತದೆ. ಮೈಯೆಲ್ಲಾ ಕಣ್ಣಾಗಿ ಕಾಯುವ ಈ ಯೋಧರ ಅಳಲು ಕುರುಡು ಸರ್ಕಾರಕ್ಕೆ ಕಾಣಿಸುವುದೆಂತು? ಅದೇ ದುರಂತ.
- ಕೆ.ಎಸ್. ಜಗನ್ನಾಥ್
jagannath.kudinoor@gmail.com