ಡಿಸೆಂಬರಿನ ಚಳಿ ಶುರುವಾಗಿದೆ. ಪರಿಣಾಮ, ಈವರೆಗೂ ಅಲ್ಮೇರಾದ ಮೂಲೆಯಲ್ಲಿ ಅನಾಥವಾಗಿ ಬಿದ್ದಿದ್ದ ಸ್ವೆಟರ್‌ಗಳು, ಸ್ಕಾರ್ಪ್‌ಗಳು, ಮಫ್ಲರ್‌ಗಳು ಎಲ್ಲರಿಗೂ ನೆನಪಾಗಿವೆ. ಚಳಿ ಆರಂಭವಾಗಿದೆ ಎಂಬ ಕಾರಣದಿಂದ ಕೆಲವರು ಜಾಗಿಂಗ್‌ಗೆ ಹೋಗುವುದನ್ನೇ ನಿಲ್ಲಿಸಿದ್ದಾರೆ. ತಡವಾಗಿ ಏಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಈವರೆಗೂ, ಸಮಯ, ಸಂದರ್ಭ ನೋಡಿಕೊಂಡು ಬೇರೆಯವರಿಗೆ ಟೋಪಿ ಹಾಕುತ್ತಿದ್ದ ಜನ, ಈಗ ತಮಗೆ ತಾವೇ ಟೋಪಿ ಹಾಕಿಕೊಳ್ಳುತ್ತಿದ್ದಾರೆ! ಮೆಡಿಕಲ್ ಸ್ಟೋರ್‌ಗಳಲ್ಲಿ ವ್ಯಾಸಲಿನ್‌ಗೆ, ಮನೆಗಳಲ್ಲಿ ಕಾಫಿ, ಟೀಗೆ ಡಿಮ್ಯಾಂಡ್ ಹೆಚ್ಚಾಗಿದೆ. ಇದಿಷ್ಟನ್ನು ಹೊರತುಪಡಿಸಿದರೆ, ಬೇರ್ಯಾವ ಮಾರ್ದವ ಗಳಿಗೆಯೂ ಈ ದಿನಗಳಲ್ಲಿ ಸೃಷ್ಟಿಯಾಗುತ್ತಿಲ್ಲ. ಚಳಿಯ ನೆಪದಲ್ಲಾದರೂ ಮಕ್ಕಳೊಂದಿಗೆ/ ಕುಟುಂಬದೊಂದಿಗೆ ಹೆಚ್ಚು ಹೊತ್ತು ಕಳೆಯುವ ಮನಸ್ಸು ಪೋಷಕರಿಗೆ ಬರುತ್ತಿಲ್ಲ. ಎಲ್ಲರಿಗೂ ವಿಪರೀತ ಎನ್ನುವಂಥ ಅವಸರ. ಹಿಡಿದ ಕೆಲಸವನ್ನು ಬೇಗ ಮುಗಿಸಬೇಕು. ಆ ಮೂಲಕ ಒಂದಷ್ಟು ಹಣ ಉಳಿಸಬೇಕು ಅಥವಾ ಗಳಿಸಬೇಕು ಎಂಬುದೇ ಎಲ್ಲರ ಉದ್ದೇಶ ಆಗಿರುವುದರಿಂದ, ಚಳಿಗಾಲವೆಂಬುದು ಕುಟುಂಬದವರೊಂದಿಗೆ ಹೆಚ್ಚಿನ ಸಮಯ ಕಳೆಯಲು ಪ್ರಕೃತಿಯೇ ರೂಪಿಸಿದ ಒಂದು ಅಪರೂಪದ, ಆಪ್ತ ಸಂದರ್ಭ ಎಂಬುದು ಯಾರಿಗೂ ಅನಿಸುತ್ತಿಲ್ಲ.
ಪ್ರಾಮಿಸ್. ಇಪ್ಪತ್ತು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಹಳ್ಳಿಗಳಲ್ಲಿಯೇ ಬಾಲ್ಯ ಕಳೆದ ಹುಡುಗ-ಹುಡುಗಿಯರ ಬಾಲ್ಯವಂತೂ ಆಹ್! ಮಧುರ ಎಂದು ಉದ್ಗರಿಸುವಂತಿತ್ತು. ಅದರಲ್ಲೂ ಹತ್ತು-ಹನ್ನೆರಡು ವರ್ಷ ವಯೋವಾನದ ಮಕ್ಕಳ ಪಾಲಿಗಂತೂ ಚಳಿಗಾಲವೆಂಬುದು ದಿನಕ್ಕೊಂದು ಹೊಸ ಅನುಭವ ನೀಡುವ ಕ್ಷಣವಾಗಿತ್ತು. ಆ ಮಧುರ ಕ್ಷಣಗಳು ಬಹುಪಾಲು ಹೀಗಿದ್ದವು :
20 ವರ್ಷಗಳ ಹಿಂದೆ ಗ್ರಾಮೀಣ ಭಾಗದ ಎಲ್ಲಾ ಮನೆಗಳಲ್ಲೂ ಇದ್ದುದು ಸೌದೆಗಳ ಬಳಕೆಯಿಂದ ಉರಿಯುತ್ತಿದ್ದ ಒಲೆಯೇ. ಅಮ್ಮಂದಿರು ನಸುಕಿನಲ್ಲೇ ಎದ್ದು ಮೊದಲು ಸ್ನಾನದ ಒಲೆಯನ್ನು ಆನಂತರ ಅಡುಗೆ ಮನೆಯ ಒಲೆಯನ್ನು ಹಚ್ಚುತ್ತಿದ್ದರು. ನಂತರದ ಕೆಲವೇ ನಿಮಿಷಗಳಲ್ಲಿ ಒಲೆಯ ಸುತ್ತ ಮನೆಯಲ್ಲಿದ್ದ ಮಕ್ಕಳೆಲ್ಲ ಕುಕ್ಕರುಗಾಲಿನಲ್ಲಿ ಕೂತು ಬಿಡುತ್ತಿದ್ದರು. ಎಲ್ಲರಿಗೂ ಬೆಂಕಿ ಕಾಯಿಸಿಕೊಳ್ಳುವ ಉಮೇದು. ಒಲೆಗೆ ತೆಂಗಿನ ಕಾಯಿನ ಗರಟವೊಂದು ಸೇರಿಕೊಂಡರಂತೂ, ಅದು ಗರ್ರ್ ರ್ರ್ ರ್ರ್ ಎಂದು ಧಗಧಗ ಉರಿದು ಹೋಗುವುದನ್ನೇ ಎಲ್ಲರೂ ಬೆರಗಿನಿಂದ ನೋಡುತ್ತ ಕೂತು ಬಿಡುತ್ತಿದ್ದರು. ಒಲೆ, ಧಗಧಗ ಎಂದು ಉರಿಯುತ್ತಿಲ್ಲ ಎಂದಾದರೆ, ಒಲೆ ಊದುವ ಕೊಳವೆಯಿಂದ ಅಥವಾ ಕಡ್ಡಿಯೊಂದರಿಂದ ಬೆಂಕಿಯನ್ನು ಕೆದಕುತ್ತಿದ್ದರು. ಈ ವೇಳೆಗೆ -'ಏಯ್, ಹುಷಾರು ಕಣ್ರೋ' ಎನ್ನುತ್ತಲೇ ಆ ಮಕ್ಕಳ ಹಿಂಡಿಗೆ ಮನೆಯ ಅಜ್ಜನೋ, ಅಜ್ಜಿಯೋ ಸೇರಿಕೊಳ್ಳುತ್ತಿದ್ದರು. ಆಗ ಎಲ್ಲ ಮಕ್ಕಳೂ ಇಷ್ಟಿಷ್ಟೇ ಜರುಗಿಕೊಂಡು ಆ ಹಿರಿಯರಿಗೆ ಜಾಗ ಮಾಡಿಕೊಡುತ್ತಿದ್ದರು. ಅಮ್ಮನೋ, ಅಪ್ಪನೋ ಬಂದು-ಏಳಿ ಮೇಲೆ, ಎಂದು ಗದರುವವರೆಗೂ ಈ ಬೆಂಕಿ ಕಾಯಿಸಿಕೊಳ್ಳುವ 'ಆಟ' ಮುಂದುವರಿಯುತ್ತಿತ್ತು.
ಸಂಜೆಯ ಹೊತ್ತಿನಲ್ಲಂತೂ ಈ ಬೆಂಕಿ ಕಾಯಿಸಿಕೊಳ್ಳುವ ಸಂಭ್ರಮಕ್ಕೆ ಮತ್ತಷ್ಟು ಉತ್ಸಾಹ ಸೇರಿಕೊಳ್ಳುತ್ತಿತ್ತು. ಏಕೆಂದರೆ, ಹೊಲ, ಗದ್ದೆಗಳ ಅಥವಾ ಇನ್ಯಾವುದೋ ನೌಕರಿಗೆಂದು ಹೊರಗೆ ಹೋಗಿರುತ್ತಿದ್ದ ಅಪ್ಪಂದಿರೆಲ್ಲ ಆ ವೇಳೆಗೆ ಮನೆಗೆ ಬಂದಿರುತ್ತಿದ್ದರು. ಸುಸ್ತಾಗಿ ಬಂದ ಅಪ್ಪಂದಿರು, ನಡುಮನೆಯಲ್ಲಿ ದಣಿವಾರಿಸಿಕೊಳ್ಳುತ್ತ ಕೂತಿದ್ದರೆ, ಅಡುಗೆ ಮನೆಯಲ್ಲಿ ಒಲೆಯ ಮುಂದೆ ಕೂತು ಎರಡೂ ಅಂಗೈಗಳನ್ನು ಬೆಂಕಿಯ ಮುಂದೆ ಹಿಡಿದು, ಶಾಖಕ್ಕೆ ಅಂಗೈ ಚುರುಗುಟ್ಟಿದ ತಕ್ಷಣ ಅಪ್ಪಂದಿರ ಬಳಿಗೆ ಓಡಿ ಹೋಗುತ್ತಿದ್ದ ಮಕ್ಕಳು, ಬಿಸಿಬಿಸಿ ಎಂಬಂತಿದ್ದ ಎರಡೂ ಕೈಗಳನ್ನು ಅಪ್ಪಂದಿರ ಕೆನ್ನೆ-ಕಿವಿಗಳ ಮೇಲೆ ಇಡುತ್ತಿದ್ದರು. ಈ ಹಿತವಾದ ಸ್ಪರ್ಶದಿಂದ ಖುಷಿಯಾದ ಅಪ್ಪಂದಿರು, -ಆಹಾ, ನನ್ ಮಗ(ಳು) ಜಾಣ (ಣೆ) ಅಂದು ಬಿಟ್ಟರಂತೂ, ಅಪ್ಪಂದಿರ ಕೆನ್ನೆಯನ್ನು ಮತ್ತೆ ಮತ್ತೆ ಬಿಸಿ ಮಾಡಲು ಮಕ್ಕಳಲ್ಲಿ ಸ್ಪರ್ಧೆಯೇ ಉಂಟಾಗುತ್ತಿತ್ತು. ಆನಂತರದಲ್ಲಿ ಅವರು ಎದ್ದು ಹೊರಗೆ ಹೋದರೆ ಸಾಕು; ಮತ್ತೊಂದು ಬಗೆಯ ಆಟ ಶುರುವಾಗುತ್ತಿತ್ತು. ಅದುವರೆಗೂ ಯಾರಿಗೂ ಕಾಣದಂತೆ ಅಡಗಿಸಿರುತ್ತಿದ್ದ ಗೇರು ಬೀಜ-ಹಲಸಿನ ಬೀಜಗಳು ಕೆಂಡದ ಮಧ್ಯೆ ಜಾಗ ಪಡೆದುಕೊಳ್ಳುತ್ತಿದ್ದವು. ಅವುಗಳನ್ನು ಸ್ವಲ್ಪ ಜಜ್ಜದೆ ಹಾಗೇ ಬೆಂಕಿಗೆ ಹಾಕಿಬಿಟ್ಟರೆ, ಎರಡೇ ನಿಮಿಷದ ನಂತರ ಢಬ್ ಎಂದು ಸಿಡಿಯುತ್ತವೆ ಎಂಬ ನಂಬಿಕೆ ಎಲ್ಲ ಮಕ್ಕಳಿಗೂ ಇರುತ್ತಿತ್ತು. ಹಾಗಾಗಿ, ಹಲಸಿನ ಬೀಜಕ್ಕೆ ಸರಿಯಾಗಿ ಒಂದೇಟು ಹಾಕಿ ಆನಂತರವೇ ಬೆಂಕಿಗೆ ಎಸೆಯುತ್ತಿದ್ದರು. ಫಜೀತಿಯೆಂದರೆ, ಆನಂತರದಲ್ಲೂ ಕೆಲವು ಬೀಜಗಳು ಢಮ್ ಎಂದು ಸದ್ದು ಮಾಡುತ್ತಿದ್ದವು! ಎಷ್ಟೋ ಬಾರಿ ಒಲೆಯ ಮುಂದೆ ಕೂತವರಿಗೆ ಬೆಂಕಿಯ ಕಿಡಿ ಹಾರುತ್ತಿತ್ತು. ಢಮ್ ಎಂಬ ಸದ್ದು ಕೇಳಿ, ಅಮ್ಮಂದಿರು ಓಡಿ ಬಂದು ಏನಾಯ್ತು, ಅದೇನು ದೊಡ್ಡ ಶಬ್ದ ಎಂದು ಕೇಳಿದರೆ, ಏನೂ ಆಗಿಲ್ಲ ಎಂದು ಒಲೆಯ ಮುಂದೆ ಕೂತಿದ್ದ ಮಕ್ಕಳೆಲ್ಲಾ ಕೋರಸ್ ಹಾಡಿ ಮೆಲ್ಲಗೆ ಎದ್ದು ಹೋಗುತ್ತಿದ್ದರು. ಕಿಡಿ ಹಾರಿದ್ದರಿಂದ ಆದ ಗಾಯದ ಗುರುತು ಅಮ್ಮನಿಗೆ ಕಾಣಿಸಬಾರದು ಎಂಬ ಸದುದ್ದೇಶದಿಂದ!!
ಕೆಲವೊಮ್ಮೆಯಂತೂ ಮಕ್ಕಳೊಂದಿಗೆ ಅಪ್ಪಂದಿರೂ ಒಲೆಯ ಮುಂದೆ ಕೂತು ಬಿಡುತ್ತಿದ್ದರು. ಆಗೆಲ್ಲ, ತಾವು ಎಲ್ಲೋ ಓದಿದ, ಕೇಳಿದ, ಕಥೆಗಳನ್ನು ಹೇಳುತ್ತಿದ್ದರು. ಅಂಥದೇ ಒಂದು ಮಧುರ ಸಂದರ್ಭದಲ್ಲಿ ಅಪ್ಪ ನಮಗೆಲ್ಲ ಹೇಳಿದ್ದ ಕಥೆ ಇದು: ಮೂಲತಃ ದರ್ಜಿಯಾಗಿದ್ದು, ನಂತರ ಸನ್ಯಾಸಿಯಾದ ವ್ಯಕ್ತಿಯೊಬ್ಬರನ್ನು ಅರಸನೊಬ್ಬ ಭೇಟಿಯಾದ. ಸನ್ಯಾಸಿಯನ್ನು ಗೌರವಿಸಬೇಕು ಅನ್ನಿಸಿದಾಗ, ವಜ್ರವೈಢೂರ್ಯ ಬಳಸಿ ತಯಾರಿಸಿದ ಕತ್ತರಿಯೊಂದನ್ನು ಅವರಿಗೆ ಅರ್ಪಿಸಿದ. ತಕ್ಷಣ ಅದನ್ನು ನಿರಾಕರಿಸಿದ ಸನ್ಯಾಸಿ- 'ರಾಜಾ, ನನ್ನನ್ನು ಗೌರವಿಸಬೇಕೆಂಬ ಆಸೆಯಿದ್ದರೆ ಒಂದು ಸೂಜಿ ಕೊಡು ಸಾಕು' ಎಂದರು. ರಾಜ ಹಾಗೆಯೇ ಮಾಡಿದ. ಆಗ ಸನ್ಯಾಸಿ ಹೇಳಿದರು: 'ರಾಜಾ, ಕತ್ತರಿ ಎಂದೆಂದಿಗೂ ಬೇರ್ಪಡಿಸಲು ಮಾತ್ರ ಬಳಕೆಯಾಗುತ್ತದೆ. ಅದಕ್ಕೇ ಅದನ್ನು ನಿರಾಕರಿಸಿದೆ. ಸೂಜಿಯಾದರೋ, ಬೇರೆಯಾಗಿರುವ ಎರಡು ವಸ್ತುಗಳನ್ನು ಕೂಡಿಸುತ್ತದೆ. ಈಗ ಮನುಕುಲಕ್ಕೆ ಅಗತ್ಯವಿರುವುದು ಸೂಜಿಯೇ ವಿನಃ ಕತ್ತರಿಯಲ್ಲ..'
ಇದೆಲ್ಲಾ ಅಂದಿನ ಮಾತು. ಈಗ ಕಾಲ ಬದಲಾಗಿದೆ. ಹಳ್ಳಿಗಳಲ್ಲಿ ಈಗ ಒಲೆಯ ಬದಲಿಗೆ ಗ್ಯಾಸ್ ಬಂದಿದೆ. ಹಳ್ಳಿಯ ಮಕ್ಕಳೆಲ್ಲಾ ಪಟ್ಟಣ ಸೇರಿಕೊಂಡು ಬ್ಯುಸಿಯಾಗಿದ್ದಾರೆ. ಚಳಿಗಾಲವನ್ನು ನೆನಪಿಸಿಕೊಂಡು ಖುಷಿಪಡಲು ಈಗ ಯಾರಿಗೂ ಉತ್ಸಾಹವಿಲ್ಲ, ಸಮಯವೂ ಇಲ್ಲ. ಆದರೆ ಹಳೆಯದನ್ನೆಲ್ಲ ನೆನಪಿಸಿಕೊಂಡಾಗ ನನಗಂತೂ 'ಹಳೆಯ ಬಾಲ್ಯವು ಬೇಕು, ಮರಳಿ ಕೊಡು ದೇವರೇ' ಎಂದು ಪ್ರಾರ್ಥಿಸುವ ಆಸೆಯಾಗುತ್ತದೆ. ನಿಮಗೂ ಹಾಗೆ ಅನಿಸಲ್ವಾ?
- ನಾನು ಪ್ರಣತಿ