ಅಂಕಣಗಳು

ಸಿದ್ದರಾಮಯ್ಯ ನಿದ್ದೆ ನುಂಗಲಿರುವ ಮೋದಿ ಅಲೆ

ಗುಜರಾತ್ ಮುಖ್ಯಮಂತ್ರಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅಲೆ ಎಂಬುದು ಕೇವಲ...

ನರೇಂದ್ರ ಮೋದಿ ಅಲೆ ಕೆಲಸ ಮಾಡಲು ಆರಂಭಿಸಿದೆ.
ಗುಜರಾತ್ ಮುಖ್ಯಮಂತ್ರಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅಲೆ ಎಂಬುದು ಕೇವಲ ಭ್ರಮೆ ಎಂದು ಸ್ವಾಟೆ ತಿರುವಿದರಿಗೆ ಇದೀಗ ಬಂದಿರುವ ಚತುರ್ ರಾಜ್ಯಗಳ ಚುನಾವಣೆ ಫಲಿತಾಂಶ ಮೈಗಿಂಡಿಕೊಂಡು ನೋಡಿಕೊಳ್ಳುವಂತೆ ಮಾಡಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ ಹಾಗೂ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಹಿಂದೆ ನಿಜವಾಗಿಯೂ ಮೋದಿ ಅಲೆ ಅಡಗಿದೆ. ಈ ಅಲೆ ರಾಷ್ಟ್ರ ರಾಜಕೀಯದಲ್ಲಿ ಮುಂದಾಗುವ ಬೆಳವಣಿಗೆಗಳ ಬಗ್ಗೆ ಕನ್ನಡಿ ಹಿಡಿದಿದೆ. ಈ ಕನ್ನಡಿಯಲ್ಲಿ ಪ್ರತಿಫಲಿತ ಬೆಳಕು ಕರ್ನಾಟಕ ರಾಜಕೀಯದ ಮೇಲೂ ಬೀಳುವ ಲಕ್ಷಣಗಳು ದಟ್ಟವಾಗಿವೆ.
ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಆಗುವ ಮೊದಲು ರಾಷ್ಟ್ರ ಬಿಜೆಪಿಯಲ್ಲಿ ಎದ್ದ ಗುಡುಗು-ಸಿಡಿಲುಗಳಿಗೆ ಈಗ ಉತ್ತರ ಸಿಕ್ಕಿದೆ. ಜ್ವಾಲಾಮುಖಿ ಜಾಗದಲ್ಲಿ ಈಗ ತಂಗಾಳಿ ಬೀಸುತ್ತಿದೆ. ಆದರೆ ಅನ್ಯಪಕ್ಷಗಳ ಪಾಲಿಗೆ ಇದು ಬಿರುಗಾಳಿ. ಮೋದಿ ಅಲೆಯ ಬಗ್ಗೆ ಬಹಿರಂಗದಲ್ಲಿ ಲಘುವಾಗಿ ಮಾತಾಡಿದವರು, ಟೀಕೆ-ಟಿಪ್ಪಣಿ ಮಾಡಿದವರು ಅಂತರಂಗದಲ್ಲಿ ಒಂದು ಅವ್ಯಕ್ತ ಭೀತಿಯನ್ನು ಇಟ್ಟುಕೊಂಡೇ ಇದ್ದರು. ಬಹಿರಂಗದ ಮಾತನ್ನು ಅಂತರಂಗದ ಭಾವ ಬಡಿದು ಮಲಗಿಸುತ್ತಿತ್ತು. ಅವರಿಗೆಲ್ಲ ಚೆನ್ನಾಗಿ ಗೊತ್ತಿತ್ತು. ತಾವು ಆಡುತ್ತಿರುವುದು ಸುಳ್ಳು ಎಂಬುದು. ಆದರೂ ರಾಜಕೀಯ ಕಾರಣಗಳಿಗೆ ಬಹಿರಂಗದಲ್ಲಿ ಅದನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಈಗಿನ ಚುನಾವಣೆ ಫಲಿತಾಂಶ ಬಲವಂತವಾಗಿ ಒಪ್ಪಿಕೊಳ್ಳುವಂತೆ ಮಾಡಿದೆ. ಏಕೆಂದರೆ ಸುಳ್ಳಿಗೆ ನೂರು ಕಾರಣ, ಆದರೆ ಸತ್ಯಕ್ಕೆ ಒಂದೇ ಒಂದು.
ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ, ಅದರ ಹಿಂದಿನ ಪ್ರೇರಕ ಶಕ್ತಿ ಮೋದಿ ಎಂಬುದು ಕರ್ನಾಟಕ ರಾಜಕೀಯ ಚಟುವಟಿಕೆಗಳ ಮೇಲೂ ಪ್ರಭಾವ ಬೀರಲಿದೆ. ಅದು ಬಿಜೆಪಿ ಇರಬಹುದು, ಆಡಳಿತಾರೂಢ ಕಾಂಗ್ರೆಸ್ ಇರಬಹುದು, ಪ್ರತಿಪಕ್ಷ ಜೆಡಿಎಸ್ ಇರಬಹುದು. ಮೋದಿ ಕಾರಣಕ್ಕೆ ಒಂದಷ್ಟು ತಲೆ ಕೆಡಿಸಿಕೊಳ್ಳುವ ಅನಿವಾರ್ಯತೆಗೆ ಸಿಕ್ಕಿವೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭ ಬೇರೆ. ವಿಜಯ ಪತಾಕೆ ಮುಂದಕ್ಕೆ ಹೊತ್ತೊಯ್ಯುವ ಜವಾಬ್ದಾರಿ ಬಿಜೆಪಿಯದು. ಆ ಕನಸಿಗೆ ತಣ್ಣೀರೆರಚುವ ಹವಣಿಕೆ ಅನ್ಯಪಕ್ಷಗಳದು. ನಾಯಕರ ಆಂತರಿಕ ಜಗಳದಿಂದ ಸಿಡಿದು ಚೂರಾಗಿದ್ದ ರಾಜ್ಯ ಬಿಜೆಪಿ ಮತ್ತೆ ಒಗ್ಗೂಡುವ ಹಾದಿಯಲ್ಲಿದೆ. ಒಬ್ಬರನ್ನು ಕಂಡರೆ ಮತ್ತೊಬ್ಬರು ಹಲ್ಲು ಮಸೆಯುತ್ತಿದ್ದ ಮನಸ್ಥಿತಿ ದೂರಾಗಿ ಪರಸ್ಪರ ಹೆಗಲ ಮೇಲೆ ಕೈ ಹಾಕಲು ಶುರು ಮಾಡಿದ್ದಾರೆ. ಇದಕ್ಕೆಲ್ಲ ಮೋದಿ ಅವರೇ ನೆಪ.
ಇನ್ನು ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ಗೆ ಡಬಲ್ ಜವಾಬ್ದಾರಿ. ಒಂದೆಡೆ ವಿಧಾನಸಭೆ ಹಾಗೂ ಲೋಕಸಭೆ ಮರುಚುನಾವಣೆ ಗೆಲುವಿನ ನಾಗಾಲೋಟ ಮುಂದುವರಿಸಬೇಕು. ಇನ್ನೊಂದೆಡೆ ಮೋದಿ ಅಲೆಯನ್ನೂ ನಿವಾರಿಸಿಕೊಳ್ಳಬೇಕು. ಇದಕ್ಕಾಗಿ ಕಾಂಗ್ರೆಸ್ ವಿಶೇಷ ಅಸ್ಥೆಯನ್ನೂ ವಹಿಸಿದೆ. ನಾಲ್ಕು ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಚೇತನ ನವೀಕರಣ ಪ್ರಕ್ರಿಯೆಯನ್ನು ಅದು ಕೈಗೆತ್ತಿಕೊಂಡಿದೆ. ಇನ್ನು ಜೆಡಿಎಸ್ ಕೂಡ ಹೊಸ ರಾಜಕೀಯ ಸಾಧ್ಯತೆಗಳ ಹುಡುಕಾಟದಲ್ಲಿದೆ. ಚಿಂತನೆಯ ಮಂಥನದಲ್ಲಿದೆ.
ಹೌದು, ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ರಾಜ್ಯ ಬಿಜೆಪಿಗೆ ಮದುವೆ ಮನೆಯ ಸಂಭ್ರಮ ತಂದಿದೆ. ಹಳೆಯ ಕಹಿ ನೆನಪುಗಳನ್ನು ಕೊಡವಿ, ಕೆಡವಿ ಹಾಕಿ ಹೊಸ ಹುಮ್ಮಸ್ಸಿನಿಂದ ಪುಟಿದೇಳುತ್ತಿದೆ. ಮೋದಿ ಅಲೆಗೆ ರಾಷ್ಟ್ರ ರಾಜಕೀಯ ಅಂಶಗಳೇ ಮೂಲ. ದೇಶದ ಪ್ರಜೆಗಳನ್ನು ಬೇಸತ್ತಿಸಿರುವ ಕೇಂದ್ರ ಸರಕಾರದ ನಾನಾ ಭ್ರಷ್ಟಾಚಾರ ಪ್ರಕರಣಗಳು, ದುರಾಡಳಿತ ಬದಲಾವಣೆ ಗಾಳಿಗೆ ಆಸ್ಪದ ಕೊಟ್ಟಿದೆ. ಈ ಗಾಳಿಯನ್ನೇ ತಮ್ಮ ಹಾಗೂ ತಮ್ಮ ಪಕ್ಷದ ಪರ ಅಲೆಯಾಗಿ ಪರಿವರ್ತಿಸಿರುವ, ಪರಿವರ್ತಿಸುತ್ತಿರುವ ನರೇಂದ್ರ ಮೋದಿ ಕರ್ನಾಟಕ ಬಿಜೆಪಿಗೆ ಟಾನಿಕ್ ಆಗಿದ್ದಾರೆ. ಏಕೆಂದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡದ್ದು ಕೂಡ ಇಂಥಹುದೇ ಕಾರಣಗಳಿಂದ, ನಾನಾ ಹಗರಣಗಳಿಂದ. ಆದರೆ ಮೋದಿ ಅಲೆಯಲ್ಲಿ ರಾಷ್ಟ್ರ ರಾಜಕೀಯ ಕಾರಣಗಳು ಪ್ರಧಾನವಾಗಿ ಬೆಸೆದುಕೊಂಡಿವೆ. ಇದು ಕರ್ನಾಟಕದಲ್ಲಿ ಬಿಜೆಪಿ ಪಾಲಿಗೆ ಕೋಲ್ಮಿಂಚು. ಮೋದಿ ಅಲೆ ಬಳುವಳಿಯಾಗಿ ಕೊಟ್ಟಿರುವ ಈ ಕೋಲ್ಮಿಂಚಿನಲ್ಲಿ ರಾಜ್ಯ ಬಿಜೆಪಿ ತನ್ನ ಕೊಳೆ ಕಳೆದುಕೊಂಡು, ಮತ್ತೆ ಹೊಳಪು ಕಾಣಲು ಮುಂದಾಗಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ವಾಪಸು ಕರೆತರಲು ನಿರ್ಧರಿಸಿರುವುದು ಬಿಜೆಪಿ ಪಾಲಿನ ಮೊದಲ ಸಕಾರಾತ್ಮಕ ಬೆಳವಣಿಗೆ. ಬಹು ಹಿಂದೆಯೇ ಯಡಿಯೂರಪ್ಪ ಬಿಜೆಪಿ ಸೇರಬೇಕಿತ್ತು. ಆದರೆ ಮೋದಿ ಅಲೆ ಪರೀಕ್ಷಾತ್ಮಕವೆಂದೇ ಬಿಂಬಿತ ಪಂಚರಾಜ್ಯಗಳ ಚುನಾವಣೆ ನಂತರವೇ ಅವರನ್ನು ಪಕ್ಷಕ್ಕೆ ಕರೆತರಲು ಉದ್ದೇಶಪೂರ್ವಕವಾಗಿ ನಿರ್ಧರಿಸಲಾಯಿತು. ಈ ವಿಳಂಬ ನೀತಿಯ ಹಿಂದಿರುವ ತಂತ್ರಗಾರಿಕೆಯೇ ಬೇರೆ. ಒಂದು ಪಕ್ಷಕ್ಕೆ ಒಬ್ಬ ವ್ಯಕ್ತಿ ಹೇಗೆ ಅನಿವಾರ್ಯ ಹಾಗೂ ಅದೇ ಕಾಲಕ್ಕೆ ಒಂದು ಪಕ್ಷದ ಏಳ್ಗೆಯಲ್ಲಿ ಮೋದಿ ಅಲೆ ಎಂಬ ಇತರ ಅಂಶಗಳೂ ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಒಟ್ಟೊಟ್ಟಿಗೆ ಸಾರುವ ಜಾಣ್ಮೆಯ ನಡೆ ಇದರ ಹಿಂದಿದೆ. ಎರಡು ಶಕ್ತಿಗಳ ಸಮೀಕರಣ ಹಾಗೂ ಅದೇ ಕಾಲಕ್ಕೆ ಒಂದು ಶಕ್ತಿಯ ಮೇಲೆ ಮತ್ತೊಂದು ಸವಾರಿ ಮಾಡಬಾರದು ಎಂಬ ಚಾಣಾಕ್ಷತೆ.
ಆ ವಿಷಯ ಪಕ್ಕಕ್ಕಿರಲಿ. ಹಿಂದೆ ಹಾವು-ಮುಂಗುಸಿಯಂತಿದ್ದ ಯಡಿಯೂರಪ್ಪ, ಅನಂತಕುಮಾರ್, ಈಶ್ವರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಎಲ್ಲ ಒಂದಾಗಿದ್ದಾರೆ. ಯಡಿಯೂರಪ್ಪ ಬಿಜೆಪಿ ಸೇರ್ಪಡೆಗೆ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ತೊಡಕಾಗಿದ್ದರು. ಅವರಿಗಿರುವ ಸ್ಧಾನಮಾನ ಭದ್ರತೆ ಭಯ ನಿವಾರಣೆಯ ಯತ್ನಗಳೂ ಸಾಗಿವೆ. ಗಣಿ ರೆಡ್ಡಿಗಳ ಸಾಮ್ರಾಜ್ಯದ ಪಳೆಯುಳಿಕೆಯಾಗಿ ಉಳಿದಿರುವ ಬಿಎಸ್‌ಆರ್ ಕಾಂಗ್ರೆಸ್‌ನ ಶ್ರೀರಾಮುಲು ಅವರನ್ನೂ ಮತ್ತೆ ಬಿಜೆಪಿಗೆ ಕರೆತರುವ ಯತ್ನಗಳೂ ನಡೆದಿವೆ. ಡಿಸೆಂಬರ್ 20 ರ ನಂತರ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಶುರುವಾಗಲಿದೆ. ಯಡಿಯೂರಪ್ಪ ಹೆಗಲ ಮೇಲೆ ಕೈಹಾಕಿಯೇ ಅನಂತಕುಮಾರ್ ಕೇಂದ್ರ ಸಂಪುಟದ ಕನಸು ಕಾಣುತ್ತಿದ್ದಾರೆ. ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಯಡಿಯೂರಪ್ಪ ಅವರನ್ನು ಕೂರಿಸಲು ಚಿಂತನೆ ನಡೆಸಲಾಗುತ್ತಿದೆ. ಯಡಿಯೂರಪ್ಪ ಕರ್ನಾಟಕದಲ್ಲಿ ಮತ್ತು ಅನಂತುಕಮಾರ್ ದಿಲ್ಲಿಯಲ್ಲಿದ್ದರೆ ರಾಜ್ಯ ಬಿಜೆಪಿ ಸೇಫು ಎಂಬ ನಂಬಿಕೆಯೊಂದಿಗೆ. ಇನ್ನೊಂದೆಡೆ ಸದಾನಂದಗೌಡ ಕೂಡ ದಿಲ್ಲಿ ಅಧಿಕಾರದ ಕನಸಿನೊಂದಿಗೆ ಸುರಕ್ಷಿತ ಲೋಕಸಭೆ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಇದೇ ರೀತಿಯ ತರೇಹವಾರಿ ಕನಸು ರಾಜ್ಯ ಬಿಜೆಪಿಯ ನಾನಾ ನಾಯಕರಿಗೆ. ಹಗಲು-ರಾತ್ರಿ ಎಂಬ ಪರಿವೆ ಇಲ್ಲದೇ. ಈ ಕನಸಿನ ವ್ಯಾಪಾರಿ-ರೂವಾರಿ ಮತ್ತದೇ ನರೇಂದ್ರ ಮೋದಿ. ಅವರ ಕಾರಣಕ್ಕಾಗಿಯೇ ರಾಜ್ಯ ಬಿಜೆಪಿಗೆ ಹಿಡಿದಿದ್ದ ಗ್ರಹಣ ನಿವಾರಣೆ ಆಗುವ ಲಕ್ಷಣಗಳು ಗೋಚರಿಸಿವೆ. ಅವರ ಹೆಸರಿನ ಅಲೆಯ ಮೇಲೆ ತೇಲಿ, ಯಶಸ್ಸಿನ ದಡ ಸೇರಲು ಪಕ್ಷದ ನಾಯಕರು ಸಜ್ಜಾಗುತ್ತಿದ್ದಾರೆ.
ಈ ಫಲಿತಾಂಶ ನಿಜಕ್ಕೂ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಮೇಲೆ ಒತ್ತಡ ತರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಹೆಚ್ಚು ಲೋಕಸಭೆ ಸ್ಥಾನಗಳನ್ನು ಗಳಿಸಲು ಹೈಕಮಾಂಡ್ ಅತೀವ ನಿರೀಕ್ಷೆ ಇಟ್ಟುಕೊಂಡಿರುವುದೇ ಇದಕ್ಕೆ ಕಾರಣ. ಹಾಗೆ ನೋಡಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಈಗಾಗಲೇ ಲೋಕಸಭೆ ಚುನಾವಣೆ ತಯಾರಿ ಆರಂಭಿಸಿದೆ. ಪಂಚರಾಜ್ಯಗಳ ಚುನಾವಣೆ ಮುಗಿದು, ಫಲಿತಾಂಶ ಬರುವ ಮೊದಲೇ ಯೋಜನೆಗಳನ್ನು ಪ್ರಕಟಿಸಿದೆ. ಆ ಮೂಲಕ ಲೋಕಸಭೆ ಚುನಾವಣೆ ಬಗ್ಗೆ ಮೊದಲು ಪ್ರತಿಕ್ರಿಯಿಸಿದ ಹೆಗ್ಗಳಿಕೆ ಕರ್ನಾಟಕ ಕಾಂಗ್ರೆಸ್‌ದ್ದಾಗಿದೆ. 14 ರಂದ ಸಮನ್ವಯ ಸಮಿತಿ ಸಭೆ ನಿಗದಿಯಾಗಿದೆ. ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ವಹಿಸಿರುವ ದಿಗ್ವಿಜಯ್‌ಸಿಂಗ್ 13 ರಂದು ಬೆಂಗಳೂರಿಗೆ ಬರುತ್ತಿದ್ದಾರೆ. ಇಷ್ಟು ದಿನ ಮಧ್ಯಪ್ರದೇಶ ಮತ್ತಿತರ ರಾಜ್ಯಗಳ ಚುನಾವಣೆ ಬಗ್ಗೆ ಅವರು ತಲೆ ಕೆಡಿಸಿಕೊಂಡಿದ್ದರು. ಹೀಗಾಗಿ ಸಿದ್ದರಾಮಯ್ಯ ಮತ್ತು ಅವರ ಸರಕಾರದ ವಿರುದ್ಧ ಯಾವುದೇ ದೂರುಗಳು ಬಂದರೂ ಸ್ಥಳೀಯ ಮಟ್ಟದಲ್ಲೇ ಸರಿಮಾಡಿಕೊಳ್ಳಿ ಎಂದು ಹೇಳುತ್ತಿದ್ದರು. ಆದರೆ ಈಗ ಚುನಾವಣೆ ಒತ್ತಡ ಮುಕ್ತರಾಗಿದ್ದಾರೆ. ಇನ್ನು ಮುಂದೆ ಕರ್ನಾಟಕದಲ್ಲಿ ಪಕ್ಷ ಹಾಗೂ ಸರಕಾರದ ಕಾರ್ಯವೈಖರಿ ಬಗ್ಗೆ ಹೆಚ್ಚು ನಿಗಾ ಇಡಬಹುದು. ಪ್ರತಿಯೊಂದನ್ನೂ ಪ್ರಶ್ನೆ ಮಾಡಬಹುದು. ದೂರುಗಳಿಗೆ ಕಿವಿಯಾಗಬಹುದು. ಸಿದ್ದರಾಮಯ್ಯ ಸರಕಾರದ ಈವರೆಗಿನ ಸಾಫಲ್ಯ ಹಾಗೂ ವೈಫಲ್ಯ ಎರಡನ್ನೂ ಮುಂಬರುವ ಲೋಕಸಭೆ ಚುನಾವಣೆ ಫಲಿತಾಂಶದ ಜತೆ ಸಮೀಕರಿಸಬಹುದು. ಇದೆಲ್ಲವೂ ಸಹಜವಾಗಿಯೇ ಸಿದ್ದರಾಮಯ್ಯ ಅವರ ಮೇಲೆ ಒಂದಷ್ಟು ಒತ್ತಡಗಳನ್ನು ನಿರ್ಮಿಸುವುದರಲ್ಲಿ ಎರಡು ಮಾತಿಲ್ಲ.
ಇನ್ನೊಂದೆಡೆ ಪರಮೇಶ್ವರ್ ಹಾಗೂ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಸಿದ್ದರಾಮಯ್ಯ ಸರಕಾರದ ಒಳಸುಂಟಿ ಹಿಂಡುತ್ತಿದ್ದಾರೆ. ಸರಕಾರಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಇವರಿಬ್ಬರನ್ನೂ ಬದಲಿಸಬೇಕೆಂದು ಸಿದ್ದರಾಮಯ್ಯ ಮತ್ತು ತಂಡ ಹೈಕಮಾಂಡ್ ಮೇಲೆ ಒತ್ತಡ ತಂದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಅವಧಿ ಮುಗಿಸಿಯೇ ತೀರುವುದಾಗಿ ಇಬ್ಬರೂ ಪ್ರತ್ಯೇಕ ಸಂದರ್ಭಗಳಲ್ಲಿ ಸ್ಪಷ್ಟಪಡಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರತ್ತ ಎರಡಂಚಿನ ಕತ್ತಿಯನ್ನು ಝಳಪಿಸುತ್ತಾ. ಕಳಂಕದ ಆರೋಪದ ಮೇರೆಗೆ ರಾಜ್ಯ ಸಂಪುಟದಿಂದ ಹೊರಗಿಡಲ್ಪಟ್ಟು, ರಾಜಸ್ಥಾನ ಚುನಾವಣೆ ಪ್ರಚಾರ ಸಮಿತಿ ಉಸ್ತುವಾರಿಗೆ ನಿಯೋಜಿತರಾಗಿದ್ದ ಡಿ.ಕೆ. ಶಿವಕುಮಾರ್ ಇದೇ ಸಂದರ್ಭ ಸಾಧಿಸಿ ಹೈಕಮಾಂಡ್‌ಗೆ ಮತ್ತಷ್ಟು ಹತ್ತಿರಾಗುತ್ತಿದ್ದಾರೆ. ಈ ಸಾಮಿಪ್ಯ ರಾಜ್ಯ ಕಾಂಗ್ರೆಸ್‌ನಲ್ಲಿ ಪ್ರತಿಕೂಲ ಪರಿಸ್ಥಿತಿ ನಿರ್ಮಾಣ ಮಾಡುವ ಸಾಧ್ಯತೆಗಳಿವೆ. ಮಂತ್ರಿ ಸ್ಥಾನ ತಪ್ಪಿಸಿದ್ದಕ್ಕೆ ಅವರಂತೆಯೇ ಇನ್ನಷ್ಟು ನಾಯಕರು ಸಿದ್ದರಾಮಯ್ಯ ಮೇಲೆ ಹಲ್ಲು ಮಸೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಪಾಠ ಕಲಿಸಲು ಇವರೆಲ್ಲರಿಗೂ ಇರುವ ಅಸ್ತ್ರ ಒಂದೇ. ಅದುವೇ ಲೋಕಸಭೆ ಚುನಾವಣೆ.
ಇನ್ನೂ ಒಂದು ವಿಷಯ. ಈಗಿನ ಚತುರ್ ರಾಜ್ಯಗಳ ಚುನಾವಣೆ ಫಲಿತಾಂಶ ಲೋಕಸಭೆ ಚುನಾವಣೆಯಲ್ಲೂ ಪ್ರತಿಫಲನವಾದರೆ, ರಾಜ್ಯದಲ್ಲಿ ಕಾಂಗ್ರೆಸ್ ಅರ್ಧಕ್ಕಿಂತ ಕಡಿಮೆ ಸ್ಥಾನಗಳನ್ನು ಗಳಿಸಿದರೆ ಆಗ ನಿಜವಾದ ರಾಜಕೀಯ ಶುರುವಾಗುತ್ತದೆ. ಕೇಂದ್ರದ ಯುಪಿಎ ಸರಕಾರದ ಸ್ಥಾನ ಪಲ್ಲಟವಾದರಂತೂ ಮುಗಿದೇ ಹೋಯಿತು. ಸಿದ್ದರಾಮಯ್ಯನವರು ನಿದ್ದೆ ಮಾಡುವಂತೆಯೇ ಇಲ್ಲ. ಕೇಂದ್ರದಲ್ಲಿ ಸಚಿವರಾಗಿರುವ ರಾಜ್ಯದ ನಾಯಕರೆಲ್ಲ ನಿರುದ್ಯೋಗಿಗಳಾಗಿ ಇಲ್ಲಿಗೆ ಮರಳುತ್ತಾರೆ. ಆಗ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಡಿಸ್, ಕೆ.ಎಚ್. ಮುನಿಯಪ್ಪ ರಾಜ್ಯ ರಾಜಕೀಯದಲ್ಲಿ ಉದ್ಯೋಗ ಅರಸುತ್ತಾರೆ. ಖರ್ಗೆ ಅವರಂತೂ ಮುಖ್ಯಮಂತ್ರಿ ಸ್ಧಾನದ ಮೇಲೆ ಒಂದು ಕಣ್ಣು ಕಾವಲಿಟ್ಟೇ ಕೇಂದ್ರ ಸಚಿವರಾಗಿ ಮುಂದುವರಿದಿದ್ದಾರೆ. ವೀರಪ್ಪ ಮೊಯ್ಲಿ ಅವರ ಎರಡನೇ ಅವಧಿ ಬಯಕೆ ಇನ್ನೂ ಇಂಗಿಲ್ಲ. ಹೀಗೆ ಕಾಂಗ್ರೆಸ್ ನಾಯಕರ ನಾನಾ ಬಯಕೆಗಳು, ಮುಂದೊದಗಬಹುದಾದ ಸವಾಲುಗಳು ಸಿದ್ದರಾಮಯ್ಯ ಅವರ ಲೋಕಸಭೆ ಚುನಾವಣೆ ಜವಾಬ್ದಾರಿಯನ್ನು ಮುಮ್ಮಡಿಗೊಳಿಸಿವೆ. ತಮ್ಮ ಸ್ಥಾನಮಾನಗಳನ್ನು ಉಳಿಸಿಕೊಳ್ಳಬೇಕಾದರೆ ಅರ್ಧಕ್ಕಿಂತ ಹೆಚ್ಚು ಸ್ಧಾನಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಅವರಿಗಿದೆ. ಹೊರಗೆ ಬೀಸುತ್ತಿರುವ ನರೇಂದ್ರ ಮೋದಿ ಅಲೆ ಹಾಗೂ ಅದೇ ಕಾಲಕ್ಕೆ ಪಕ್ಷದೊಳಗೆ ವಿರೋಧಿಗಳು ಹೆಣೆಯುತ್ತಿರುವ ಬಲೆ ಈ ಎರಡನ್ನೂ ನಿಭಾಯಿಸಿಕೊಳ್ಳಲು ಅವರು ಹೇಗೆ ರಣತಂತ್ರಗಳನ್ನು ರೂಪಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಇನ್ನು ಜೆಡಿಎಸ್ ಕತೆ. ಆಂತರಿಕ ಕಲಹದಲ್ಲಿ ಈ ಪಕ್ಷ ಕೂಡ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಕಡಿಮೆಯೇನಿಲ್ಲ. ಒಬ್ಬರನ್ನು ಮತ್ತೊಬ್ಬರು ನಂಬುತ್ತಿಲ್ಲ. ಯಡಿಯೂರಪ್ಪ ಬಿಜೆಪಿಗೆ ಬರುತ್ತಿದ್ದಂತೆ ಜೆಡಿಎಸ್ ಸಂಖ್ಯಾಬಲ ಇಳಿದು, ವಿಧಾನಸಭೆಯಲ್ಲಿ ಪ್ರತಿಪಕ್ಷ ಸ್ಥಾನ ಕಳೆದುಕೊಳ್ಳಲಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಶಾಸಕರಾಗಿ ಮುಂದುವರಿಯುವರೋ, ಮತ್ತೆ ಲೋಕಸಭೆ ಚುನಾವಣೆ ಕಣಕ್ಕೆ ಇಳಿಯುವರೋ ಗೊತ್ತಿಲ್ಲ. ಬಿಜೆಪಿ ಬೆನ್ನಿಗೆ ನಿಂತಿರುವ ಮೋದಿ ಅಲೆ ಹಾಗೂ ಆಡಳಿತಾರೂಢ ಕಾಂಗ್ರೆಸ್ ಸೆಣಸಾಟದ ನಡುವೆ ಜೆಡಿಎಸ್ ಸ್ಥಿತಿ ಎಲ್ಲಿಗೆ ಬಂದು ನಿಲ್ಲುತ್ತದೋ ನೋಡಬೇಕು.
ಲಗೋರಿ: ಪರಿಸ್ಥಿತಿಯ ಪಿತೂರಿ ಮುಂದೆ ಮನುಷ್ಯ ಪಿತೂರಿ ಗೌಣ.

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!