ಇಸವಿ 2011ರ ಮಾರ್ಚ್ 11ನೇ ತಾರೀಖು, ಜಪಾನ್‌ನ ಇತಿಹಾಸದಲ್ಲಿ ಒಂದು ಕರಾಳ ದಿನ. ಅವತ್ತು ಜಪಾನ್‌ನ ಇಶಿನೊಮಾಕಿ ಎಂಬ ನಗರದ ಒಂದು ಭೂ ಪ್ರದೇಶ, ಸುನಾಮಿ ಹಾಗೂ ಭೂ ಕಂಪದಿಂದ ತತ್ತರಿಸಿ ಹೋಯಿತು. ಈ ದುರಂತದಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ ಸತ್ತು ಹೋದರು. ಈ ದುರ್ಘಟನೆಯಲ್ಲಿ ಕಣ್ಮರೆಯಾದ ಕೊಹೇರು ಎಂಬ ಹನ್ನೆರಡು ವರ್ಷದ ಮಗಳನ್ನು ಹುಡುಕುತ್ತ ಹೊರಟ ತಾಯಿಯೊಬ್ಬಳ ಬದುಕಿನ ಆರ್ದ್ರ ಚಿತ್ರಣ ಇಲ್ಲಿದೆ.
---
'ಮಗಳಿಗೆ, ಮುಂದಿನ ತಿಂಗಳಿಂದ ವಾರ್ಷಿಕ ಪರೀಕ್ಷೆ. ಫಲಿತಾಂಶ ಕುರಿತಂತೆ ಯಾವುದೇ ಯೋಚನೆಯಿಲ್ಲ. ಮುಂದಿನ ವರ್ಷದಿಂದ ಆಕೆ ಹೈಸ್ಕೂಲ್ ವಿದ್ಯಾರ್ಥಿನಿ. ಅವಳನ್ನು ಚೆನ್ನಾಗಿ ಓದಿಸಬೇಕು. ಮುಂದಿನ ಕೆಲವೇ ದಿನಗಳಲ್ಲಿ ಈ ಮನೆ ಬದಲಿಸಬೇಕು...' ಒಳ ಮನೆಯಲ್ಲಿ ನಿಂತು ಹೀಗೆಲ್ಲ ಅಂದುಕೊಳ್ಳುತ್ತಿದ್ದಳು ನವೋಮಿ ಹಿರಾತ್ಸುಕಾ. ಆಗಲೇ,12 ವರ್ಷದ ಮಗಳು ಕೊಹೇರು, ಹೊರಬಾಗಿಲಲ್ಲಿ ನಿಂತು ಗಟ್ಟಿಯಾಗಿ ಹೇಳಿದಳು: 'ಮಾ ಹೋಗ್ ಬರ್ತೀನಿ. ಬೈ....'
ವಿಪರೀತ ಚಳಿಯಿದೆ ಮಗಳೇ. ಸ್ಕೂಲ್ ಬಸ್ ಬರಲಿಕ್ಕೆ ಇನ್ನೂ ಟೈಂ ಇದೆ. ಲಂಚ್ ಬಾಕ್ಸ್ ತಗೊಂಡಿದೀಯ? ಸ್ಪೆಟರ್ ಹಾಕ್ಕೊಂಡಿದೀಯ? ಎಲ್ಲಾ ನೋಟ್ಸ್ ಇಟ್ಕೊಂಡಿದೀಯ ತಾನೆ? ಸ್ನ್ಯಾಕ್ಸ್ ತಗೊಂಡ್ಯಾ? ಊಟ ಆದ್ಮೇಲೆ ನೀರು ಕುಡಿಯಲು ಮರೀಬೇಡ. ಹುಶಾರಾಗಿ ಹೋಗು. ಹುಶಾರಾಗಿ ವಾಪಸ್ ಬಾ... ಹೀಗೆ, ಒಂದೊಂದೇ ಎಚ್ಚರಿಕೆಯ ಮಾತು ಹೇಳಿಕೊಂಡೇ, ಮಗಳನ್ನು ಒಮ್ಮೆ ನೋಡಿ ಟಾಟಾ ಮಾಡುವ ಉದ್ದೇಶದಿಂದ ಹೊರಬಂದಳು ನವೋಮಿ. ಆ ವೇಳೆಗಾಗಲೇ ಕೊಹೇರು, ಮನೆಯಿಂದ ತುಂಬ ದೂರ ಹೋಗಿಬಿಟ್ಟಿದ್ದಳು. ಕುಹೇರು ಹೀಗೆ ತುಂಬಾ ಬೇಗನೆ ಮನೆ ಬಿಟ್ಟಿದ್ದಕ್ಕೂ ಕಾರಣವಿತ್ತು. ಜಪಾನ್‌ನ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಅಂತರ ಶಾಲಾ ಮಟ್ಟದ ಪ್ರಬಂಧ ರಚನಾ ಸ್ಪರ್ಧೆಯಲ್ಲಿ ಕೊಹೇರುವಿಗೆ ಮೊದಲ ಬಹುಮಾನ ಬಂದಿತ್ತು. ಶಾಲೆಯ ಪ್ರಿನ್ಸಿಪಾಲ್, ಹಿಂದಿನ ರಾತ್ರಿಯಷ್ಟೇ ಫೋನ್ ಮಾಡಿ ವಿಷಯ ತಿಳಿಸಿದ್ದರು. ಬಹುಮಾನ ಗೆದ್ದ ಖುಷಿಗೆ, ಎಲ್ಲರಿಗೂ ಸ್ವೀಟ್ ಕೊಡಿಸಬೇಕೆಂದು ಒಂದು ಗಂಟೆ ಮೊದಲೇ ಶಾಲೆಗೆ ಹೊರಟಿದ್ದಳು ಕೊಹೇರು.
ನವೋಮಿ ಹಿರಾತ್ಸುಕಾ, ವೃತ್ತಿಯಿಂದ ಶಾಲಾ ಶಿಕ್ಷಕಿ. ಈಕೆಯ ಗಂಡನೂ ಶಿಕ್ಷಕನಾಗಿದ್ದ. ಇವರ ಕುಟುಂಬ, ಜಪಾನ್‌ನ ಇಶಿನೊಮಾಕಿ ನಗರದ ಯೊಕೋಕಾವಾ ಎಂಬ ಹಳ್ಳಿಯಲ್ಲಿತ್ತು. ಗಂಡ, ಮೂವರು ಮಕ್ಕಳಲ್ಲದೆ ಅತ್ತೆ-ಮಾವಂದಿರ ಯೋಗಕ್ಷೇವುದ ಹೊಣೆಯೂ ನವೋಮಿಯ ಮೇಲಿತ್ತು. ಕೊನೆಯ ಮಗುವಿಗೆ ಅನಾರೋಗ್ಯವಿದ್ದ ಕಾರಣ, ಒಂದು ತಿಂಗಳ ರಜೆ ಪಡೆದು ಆಕೆ ಮನೆಯಲ್ಲಿಯೇ ಉಳಿದಿದ್ದಳು. ಒಂದೊಂದೇ ಕೆಲಸ ಮುಗಿಸುತ್ತ ಮಧ್ಯಾಹ್ನದ ಊಟ ಮುಗಿಸುವುದರೊಳಗೆ ಮೂರು ಗಂಟೆ ದಾಟಿತು. ಈ ತಿಂಗಳ ಕೊನೆಯಲ್ಲಿ ಗ್ರಾಜುಯೇಷನ್ ಡೇ. ಅವತ್ತಿನ ಕಾರ್ಯಕ್ರಮಕ್ಕೆ ಕೊಹೇರುಗೆ ಹೊಸ ಡ್ರೆಸ್ ತರಬೇಕು ಎಂದುಕೊಂಡೇ ಅಂಗಡಿಗೆ ಹೋಗಿಬರಲು ಯೋಚಿಸಿದಳು ನವೋಮಿ. ಆಗ ಇದ್ದಕ್ಕಿದ್ದಂತೆ, ನೆಲ ನಡುಗಿದಂತೆ, ಮನೆ ಅಲುಗಾಡಿದಂತೆ ಭಾಸವಾಯಿತು. 'ಮೈಗಾಡ್' ಇದೇನಾಗಿಹೋಯ್ತು ಎಂದು ಉದ್ಗರಿಸುತ್ತಾ ಮನೆಯಿಂದ ಹೊರಗೆ ಓಡಿಬಂದಳು ನವೋಮಿ. ಎರಡೇ ಕ್ಷಣದಲ್ಲಿ ಎಲ್ಲವೂ ಮೊದಲಿನಂತಾಗಿತ್ತು. ಈ ವಾರದಲ್ಲಿ ಯಾವಾಗ ಬೇಕಾದರೂ ಭೂಕಂಪದಂಥ ದುರ್ಘಟನೆಗಳು ಸಂಭವಿಸಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿತ್ತು. ಅಂಥದೊಂದು ವಿಪತ್ತು ಎದುರಾಗದಿರಲಿ ಎಂದು ಮತ್ತೆ ಮತ್ತೆ ಪ್ರಾರ್ಥಿಸುತ್ತಿದ್ದ ಕಾರಣದಿಂದ, ಭೂಕಂಪ ಆಯಿತೆಂಬ ಭ್ರಮೆಯಿಂದ, ಹೀಗೊಂದು ಅನುಭವ ಆಗಿರಬೇಕು ಎಂದುಕೊಂಡೇ ಮನೆಯೊಳಗೆ ಬಂದಳು ನವೋಮಿ. ಅರ್ಧ ಗಂಟೆ ಕಳೆವ ಮೊದಲೇ ಮತ್ತೆ ನಡುಗಿತು ಭೂಮಿ. ಹಿಂದೆಯೇ ಮನೆ ಅಲುಗಾಡಿತು. ಗೋಡೆ ಗಡಿಯಾರ ಠಪ್ಪನೆ ಬಿತ್ತು. ಅಡುಗೆ ಮನೆಯಲ್ಲಿದ್ದ ಪಾತ್ರೆಗಳು ಚೆಲ್ಲಾಪಿಲ್ಲಿಯಾದವು.
ಇದೆಲ್ಲಾ ಭೂಕಂಪದ ಎಫೆಕ್ಟ್ ಎಂದು ನವೋಮಿಗೆ ತಕ್ಷಣವೇ ಅರ್ಥವಾಯಿತು. ಆಕೆ, ಎರಡೂ ಮಕ್ಕಳನ್ನು ಎದೆಗೆ ಅವಚಿಕೊಂಡು, ಅತ್ತೆ- ಮಾವನನ್ನು ಕರೆದುಕೊಂಡು ಓಡುತ್ತಲೇ ಹೊರಗೆ ಬಂದಳು. ಪ್ರಾಕೃತಿಕ ವಿಕೋಪದ ಬಗ್ಗೆ ಹವಾಮಾನ ಇಲಾಖೆ ನೀಡುವ ಮುನ್ಸೂಚನೆ ತಿಳಿಯಲು ಎಲ್ಲ ಮನೆಯವರೂ ವಿದ್ಯುತ್ ಚಾಲಿತ ರೇಡಿಯೋಗಳನ್ನು ಹಾಕಿಸಿಕೊಂಡಿದ್ದರಾದರೂ, ಮೊದಲ ಬಾರಿ ಭೂಮಿ ನಡುಗಿದಾಗಲೇ ಕಂಬಗಳು ತುಂಡಾಗಿ ಬಿದ್ದು ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಹಾಗಾಗಿ, ಹವಾಮಾನ ಇಲಾಖೆಯವರ ಮುನ್ಸೂಚನೆ, ಯೊಕೋಕಾವಾದ ಯಾರನ್ನೂ ತಲುಪಿರಲಿಲ್ಲ. ಈ ಹಳ್ಳಿಯಿಂದ ಎಂಟು ಕಿಲೋಮೀಟರ್ ದೂರದಲ್ಲಿ ಕಿಟಕಮಿ ಎಂಬ ಮಹಾನದಿ ಹರಿಯುತ್ತಿತ್ತು. ಅಲ್ಲಿಂದ ಅರ್ಧ ಕಿ.ಮೀ. ದೂರದಲ್ಲಿ ಕೊಹೇರು ಮತ್ತು ಅವಳಂಥ 108 ಮಕ್ಕಳು ಓದುತ್ತಿದ್ದ ಒಕಾವಾ ಹೆಸರಿನ ಶಾಲೆಯಿತ್ತು. ಮೂರು ಕಿಮೀ. ಆಚೆಗೆ ಒಂದು ಗುಡ್ಡದ ಮೇಲಿದ್ದ ಮತ್ತೊಂದು ಶಾಲೆಯಲ್ಲಿ ನವೋಮಿಯ ಗಂಡ ಕೆಲಸ ಮಾಡುತ್ತಿದ್ದ.
ಭೂಕಂಪದ ಮುನ್ಸೂಚನೆಯಂತೂ ಸಿಕ್ಕಿದೆ. ಅದರ ತೀವ್ರತೆ ಹೇಗೆಲ್ಲ ಇರಬಹುದೋ ಎಂಬ ಗಾಬರಿಯಲ್ಲಿ ನವೋಮಿ ಮತ್ತು ನೆರೆಹೊರೆಯವರು ಮುಳುಗಿದ್ದಾಗಲೇ, ಕೊಹೇರುವಿನ ಶಾಲೆಗೆ ಹೋಗುವ ರಸ್ತೆಯಲ್ಲಿ ಒಂದರ ಹಿಂದೊಂದು ಕಾರುಗಳು ಕಾಣಿಸಿಕೊಂಡವು. ಅಯ್ಯಯ್ಯೋ, ಇದೇನಾಗಿಹೋಯ್ತು ಎಂಬ ಆತಂಕದಿಂದಲೇ ರಸ್ತೆಗೆ ಓಡಿಹೋದ ನವೋಮಿ, ಒಂದಿಬ್ಬರನ್ನು ವಿಚಾರಿಸಿದಳು. 'ಸ್ಕೂಲ್ ಇರುವ ಜಾಗಕ್ಕೆ ಸುನಾಮಿ ಬಂದಿದೆಯಂತೆ...' ಎಂದ ಅವರು ಶರವೇಗದಲ್ಲಿ ಕಾರು ನುಗ್ಗಿಸಿದರು. 'ಸುನಾಮಿ' ಎಂಬ ಹೆಸರು ಕೇಳಿದಾಕ್ಷಣ, ಮಗಳಿಗೇನಾದರೂ ತೊಂದರೆಯಾದರೆ... ಅನ್ನಿಸಿತು. ಓಡೋಡಿ ಬಂದು ಮಾವನಿಗೆ ವಿಷಯ ತಿಳಿಸಿ- 'ಯಾಕೋ ಸಂಕಟವಾಗುತ್ತಿದೆ. ಮನಸ್ಸು ತಡೆಯುತ್ತಿಲ್ಲ. ಸ್ಕೂಲ್ ಹತ್ತಿರ ಹೋಗಿ ಬರ್ತೀನಿ' ಅಂದಳು. ಅವಳ ಮಾವ- 'ಆಗಲೇ ಕತ್ತಲೆ ಆಗ್ತಿದೆ. ರಸ್ತೆಯೇ ಕುಸಿದು ಹೋಗಿದೆ ಅಂತಲೂ ಜನ ಮಾತಾಡ್ತಾ ಇದ್ದಾರೆ. ಇಂಥ ಸಂದರ್ಭದಲ್ಲಿ ನೀನು ಹೋಗಿ ಏನು ಮಾಡಲು ಸಾಧ್ಯ? ಅದಕ್ಕಿಂತ ಹೆಚ್ಚಾಗಿ, ನೀನು ಜೊತೆಗಿದ್ರೆ ನಮಗೆಲ್ಲಾ ಧೈರ್ಯ. ಸ್ಕೂಲ್‌ನಲ್ಲಿ ಟೀಚರ್ಸ್ ಇರ್ತಾರೆ ಅಲ್ವಾ? ಅವರೆಲ್ಲ ಮಕ್ಕಳನ್ನು ಖಂಡಿತ ಸುರಕ್ಷಿತ ಜಾಗಕ್ಕೆ ಶಿಫ್ಟ್ ಮಾಡಿರ್ತಾರೆ. ಕೊಹೇರುಗೆ ಖಂಡಿತ ತೊಂದರೆ ಆಗಿರೋದಿಲ್ಲ. ಎಲ್ರೂ ಬೆಳಿಗ್ಗೆ ಸ್ಕೂಲ್ ಹತ್ರ ಹೋಗೋಣ ಎಂದ.
ಅವತ್ತು ಇಡೀ ರಾತ್ರಿ ನವೋಮಿ ನಿದ್ರೆ ಮಾಡಲಿಲ್ಲ. ಸುನಾಮಿಯ ಕಾರಣದಿಂದ ಸಾರಿಗೆ ಸಂಪರ್ಕವೂ ನಿಂತುಹೋಗಿತ್ತು. ಹಾಗಾಗಿ, ನವೋಮಿಯ ಗಂಡ ಶಾಲೆಯಲ್ಲೇ ಉಳಿದುಕೊಂಡಿದ್ದ. ಮರುದಿನ ಬೆಳಗಾಗಿದ್ದೇ ತಡ, ಶಾಲೆಯ ಬಳಿಗೆ ಹೋಗಲು ನವೋಮಿ ಸಿದ್ಧಳಾಗುತ್ತಿದ್ದಳು. ಅದೇ ಸಂದರ್ಭಕ್ಕೆ, ಬಿಕ್ಕಳಿಸುತ್ತಾ ಬಂದ ನೆರೆಮನೆಯ ಹೆಂಗಸು ಹೇಳಿಬಿಟ್ಟಳು: 'ಶಾಲೆಗೆ ಹೋಗಿದ್ದ ಮಕ್ಕಳೆಲ್ಲಾ ಕಾಣೆಯಾಗಿದ್ದಾರಂತೆ. ಸುನಾಮಿ ಎಲ್ಲರನ್ನೂ ಕೊಚ್ಚಿಕೊಂಡು ಹೋಗಿದೆಯಂತೆ. ನನ್ನ ಆರು ವರ್ಷದ ಮಗ ಬದುಕಿದ್ದಾನೆ ಎಂದು ಹೇಳಲು ನನಗೆ ಮನಸ್ಸೇ ಬರುತ್ತಿಲ್ಲ...' ಮುಂದಿನ ಮಾತುಗಳನ್ನು ಕೇಳಿಸಿಕೊಳ್ಳುವ ತಾಳ್ಮೆ ನವೋಮಿಗೆ ಇರಲಿಲ್ಲ. ನನ್ನ ಮಗಳಿಗೆ ಯಾವುದೇ ತೊಂದರೆಯೂ ಆಗದಿರಲಿ ದೇವರೇ ಎಂದು ಪ್ರಾರ್ಥಿಸುತ್ತಲೇ ಆಕೆ, ಶಾಲೆಯ ಕಡೆಗೆ ಕಾರ್ ಓಡಿಸಿದಳು. ಅರ್ಧ ದಾರಿ ತಲುಪುತ್ತಿದ್ದಂತೆಯೇ ವಿಪರೀತ ಗದ್ದಲ ಮತ್ತು ಟ್ರಾಫಿಕ್ ಜಾಮ್‌ನಿಂದ ಕಾರು ನಿಲ್ಲಿಸಬೇಕಾಯಿತು. ಇಲ್ಲಿ ಏನಾಗಿದೆ ಎಂದು ಉದ್ಗರಿಸುತ್ತಾ ಬಂದವಳಿಗೆ ಕಂಡದ್ದಾದರೂ ಏನು ಗೊತ್ತೆ? ಅಲ್ಲಿ ರಸ್ತೆಯೇ ಕುಸಿದು ಹೋಗಿತ್ತು. ಅದುವರೆಗೂ ಸಮತಟ್ಟಾಗಿ ಇದ್ದ ಪ್ರದೇಶದಲ್ಲಿ ದೊಡ್ಡದೊಂದು ಕೆರೆ ಸೃಷ್ಟಿಯಾಗಿತ್ತು. ದೂರದಲ್ಲಿ ಒಂದು ಶಾಲೆಯಿತ್ತು ಎಂಬುದಕ್ಕೆ ಯಾವುದೇ ಸಾಕ್ಷಿಯೂ ಇರಲಿಲ್ಲ. ನೀರು ರಭಸದಿಂದ ಹರಿಯುತ್ತಿದ್ದ ಕಾರಣದಿಂದ ತಮ್ಮ ಬಂಧುಗಳು ಅಥವಾ ಮಕ್ಕಳನ್ನು ಹುಡುಕುವ ಸಾಹಸಕ್ಕೆ ಯಾರೂ ಮುಂದಾಗಲಿಲ್ಲ. ಮುಂದೇನು ಮಾಡಬೇಕೆಂದು ತೋಚದೆ ಬಿಕ್ಕಳಿಸುತ್ತಲೇ ಮನೆಗೆ ಮರಳಿದಳು ನವೋಮಿ. ಆಗಲೇ ತಗ್ಗಿದ ದನಿಯಲ್ಲಿ ಅತ್ತೆ- ಮಾವ ಮಾತಾಡುತ್ತಿದ್ದುದು ಕೇಳಿಸಿತು. 'ಸ್ಕೂಲಿಗೆ ಹೋಗಿದ್ದ ಎಲ್ಲ ಮಕ್ಕಳೂ ಕೊಚ್ಚಿ ಹೋಗಿವೆಯಂತೆ. ನಮ್ಮ ಮಗುವೂ ದೇವರ ಪಾದ ಸೇರಿಕೊಂಡಿದೆ. ಈ ವಿಷಯವನ್ನು ನವೋಮಿಗೆ ಹೇಳುವುದು ಹೇಗೆ?'
ಅನಂತರದಲ್ಲಿ ಮತ್ತೆ ಮೂರು ದಿನಗಳು ಕಳೆದವು. ನವೋಮಿಯ ಗಂಡ ಆಗಲೂ ಮನೆ ತಲುಪಲು ಸಾಧ್ಯವಾಗಿರಲಿಲ್ಲ. ಈ ವೇಳೆಗೆ 'ಕಣ್ಮರೆಯಾಗಿರುವ' ಎಲ್ಲರೂ ಸುನಾಮಿಯ ಹೊಡೆತಕ್ಕೆ ಸಿಕ್ಕಿ ಸತ್ತುಹೋಗಿದ್ದಾರೆ ಎಂಬುದು ಎಲ್ಲರಿಗೂ ಖಚಿತವಾಗಿತ್ತು. ನುರಿತ ಮೀನುಗಾರರ ನೆರವಿನಿಂದ ಶವಗಳನ್ನು ಹುಡುಕುವ, ಡಿಎನ್‌ಎ ಪರೀಕ್ಷೆ ಸಹಾಯದಿಂದ ಅವುಗಳನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸುವ, ಶವಸಂಸ್ಕಾರಕ್ಕೆ ನೆರವಾಗುವ ಕೆಲಸವನ್ನು ಸರ್ಕಾರದ ಅಧಿಕಾರಿಗಳು ಆರಂಭಿಸಿದ್ದರು. ದಿನಗಳು ಕಳೆದಂತೆಲ್ಲಾ ಒಂದೊಂದೇ ಸುದ್ದಿ ಬಹಿರಂಗವಾಗತೊಡಗಿತು. ಸುನಾಮಿಯ ಅಬ್ಬರ ಶುರುವಾದ ಸಂದರ್ಭದಲ್ಲಿ, ಮಕ್ಕಳನ್ನು ಶಾಲೆಯಿಂದ ಹೊರಗೆ ಕಳಿಸಿ, ಸಾಧ್ಯವಾದಷ್ಟು ದೂರಕ್ಕೆ ಓಡಿಹೋಗಿ ತಪ್ಪಿಸಿಕೊಳ್ಳುವಂತೆ ಹೇಳುವುದೋ ಬೇಡವೋ ಎಂಬ ವಿಷಯವಾಗಿ ಶಿಕ್ಷಕರ ಮಧ್ಯೆ ವಾಗ್ವಾದ ಶುರವಾಯಿತಂತೆ. ಆಗ ಒಂದು ಗುಂಪು ಶಾಲೆಯೊಳಗೇ ಉಳಿದರೆ, 18 ವಿದ್ಯಾರ್ಥಿಗಳು ಹಾಗೂ ಮೂವರು ಶಿಕ್ಷಕರು ಓಡಿಹೋಗಲು ಸಿದ್ಧರಾದರಂತೆ. ಹೀಗೆ ಓಡಿಬಂದವರ ಜೀವ ಉಳಿಯಿತು. ಆದರೆ ನಂತರದ ದಿನಗಳಲ್ಲಿ, ಡಿಪ್ರೆಶನ್‌ಗೆ ತುತ್ತಾದ ಶಿಕ್ಷಕರು ಆತ್ಮಹತ್ಯೆ ಮಾಡಿಕೊಂಡರು.
ಅನಂತರದಲ್ಲಿ ವಾರ ಉರುಳಿತು. ತಿಂಗಳೂ ಕಳೆಯಿತು. ಸಾವಿರಾರು ಶವಗಳು ಪತ್ತೆಯಾದವು. ಸಾಮೂಹಿಕ ಅಂತ್ಯಕ್ರಿಯೆಯೂ ನಡೆಯಿತು. ಆದರೆ, ಕೊಹೇರುವಿನ ಪತ್ತೆಯೇ ಆಗಲಿಲ್ಲ. ಈ ಮೊದಲು ಶಾಲೆಯಿದ್ದ ಪ್ರದೇಶದ ಆಸುಪಾಸಿನಲ್ಲಿ ಯಾವುದೇ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದರೆ ಸಾಕು. ಓಹ್, ಅದು ನನ್ನ ಮಗಳ ದೇಹವಿರಬಹುದು ಎಂಬ ಆಸೆಯಿಂದಲೇ ಓಡಿಹೋಗುತ್ತಿದ್ದ ನವೋಮಿ, ಪ್ರತಿ ಬಾರಿಯೂ ನಿರಾಸೆಯಿಂದಲೇ ವಾಪಸಾಗುತ್ತಿದ್ದಳು. ಹೀಗೇ ಐದು ತಿಂಗಳು ಕಳೆದವು. ಅಧಿಕಾರಿಗಳನ್ನೇ ನಂಬಿಕೊಂಡರೆ ಮಗಳ ದೇಹ ಸಿಗುವುದೇ ಇಲ್ಲವೇನೋ ಅನ್ನಿಸಿದಾಗ, ಶವಗಳನ್ನು ಹುಡುಕಲು ಬಳಸುತ್ತಿದ್ದ ಜೆಸಿಬಿ ಯಂತ್ರಗಳ ಡ್ರೈವಿಂಗ್ ಲೈಸನ್ಸ್‌ಗೆ ಅರ್ಜಿ ಹಾಕಿದಳು. ಮಗಳು ಸತ್ತುಹೋಗಿದ್ದಾಳೆ ಎಂಬುದು ಗ್ಯಾರಂಟಿಯಾಗಿದೆ. ಆಕೆಗೆ ಗೌರವಪೂರ್ವಕ ವಿದಾಯ ಹೇಳಬೇಕಿರುವುದರಿಂದ, ಜೆಸಿಬಿ ಯಂತ್ರವನ್ನು ಚಾಲನೆ ಮಾಡಿ ಶವಗಳನ್ನು ಹುಡುಕಲು ಅನುಮತಿ ನೀಡಬೇಕೆಂದು ಮನವಿ ಮಾಡಿಕೊಂಡಳು. ತಾಯಿಯೊಬ್ಬಳ ಆರ್ದ್ರ ಪ್ರಾರ್ಥನೆಗೆ ನಿರಾಕರಣೆಯ ಮಾತಾಡಲು ಯಾರಿಗಾದರೂ ಸಾಧ್ಯವೇ?
ಜೆಸಿಬಿ ಯಂತ್ರದ ಡ್ರೈವಿಂಗ್ ಸೀಟ್‌ನಲ್ಲಿ ಕೂತಾಗ ನವೋಮಿ ಮಾಡಿದ ಮೊದಲ ಕೆಲಸವೆಂದರೆ, ಮಣ್ಣು ಬಗೆಯುವ ಮೊರದಗಲದ ಪ್ಲೇಟ್‌ಗೆ ಮೃದುವಾದ ಬಟ್ಟೆಯನ್ನು ಸುತ್ತಿದ್ದು. ಅದನ್ನು ಕಂಡ ಅಧಿಕಾರಿಗಳು, ಯಾಕೆ ಹೀಗೆ ಎಂದು ಕೇಳಿದಾಗ ನವೋಮಿ ಹೇಳಿದಳಂತೆ: 'ಈ ಪ್ಲೇಟ್‌ಗಳು ಬಹಳ ಚೂಪಾಗಿವೆ. ಮಣ್ಣು ಬಗೆಯುವಾಗ ಅಕಸ್ಮಾತ್ ಮಕ್ಕಳ ದೇಹ ಸಿಕ್ಕಿಬಿಟ್ರೆ ಅದಕ್ಕೆ ತುಂಬಾ ನೋವಾಗುತ್ತೆ. ಹಾಗೆ ಆಗದಿರಲಿ ಅಂತ ಈ ವ್ಯವಸ್ಥೆ...' ಮುಂದೆ ಸತತ ಎರಡು ತಿಂಗಳ ಕಾಲ ಕಿಟಕಮಿ ನದೀ ತೀರದಲ್ಲಿ ಜೆಸಿಬಿ ಯಂತ್ರ ಓಡಿಸಿ ಹಲವು ಶವಗಳನ್ನು ಪತ್ತೆ ಹಚ್ಚಿದಳು ನವೋಮಿ. ಆದರೆ, ಕೊಹೇರುವಿನ ದೇಹ ಪತ್ತೆಯಾಗಲೇ ಇಲ್ಲ'.
ಹೀಗೇ ಮತ್ತೂ ಒಂದು ತಿಂಗಳು ಕಳೆಯಿತು. ಅಲ್ಲಿಗೆ, ದುರಂತ ನಡೆದು ಐದು ತಿಂಗಳು ಕಳೆದುಹೋಗಿದ್ದವು. ಓಹ್, ನಮಗಿನ್ನು ಮಗಳ ದೇಹ ನೋಡುವ ಭಾಗ್ಯವಿಲ್ಲ ಎಂದು ನವೋಮಿ ಮತ್ತು ಕುಟುಂಬದವರು ನಿರ್ಧರಿಸಿದ್ದಾಗಲೇ 'ಶವವೊಂದು ಪತ್ತೆಯಾಗಿದೆ ಬಂದು ನೋಡಿ' ಎಂಬ ಸಂದೇಶ ಪೋಲೀಸರಿಂದಬಂತು. ಅಲ್ಲಿಗೆ ಹೋದಾಗ ನವೋಮಿಯ ಕುಟುಂಬಕ್ಕೆ ಕಂಡದ್ದು- ರುಂಡವಿಲ್ಲದ ಒಂದು ದೇಹ. ಅದರ ಕಾಲಿನ ಭಾಗವನ್ನು ಮೀನುಗಳು ತಿಂದುಹಾಕಿದ್ದವು. ಐದು ನಿಮಿಷದವರೆಗೆ ಅದನ್ನೇ ದಿಟ್ಟಿಸಿದ ನವೋಮಿ ಉದ್ಗರಿಸಿದಳು. 'ಇವಳೇ, ಇವಳೇ ನನ್ನ ಮಗಳು. ಅನುಮಾನವೇ ಇಲ್ಲ...'
ಮಂಡವಿಲ್ಲದ, ಅಂಗಾಲೂ ಇಲ್ಲದ ಶವವನ್ನು ಕಂಡು ಇವಳೇ ನನ್ನ ಮಗಳು ಎಂದು ಉದ್ಗರಿಸಿದ ಈ ಹೆಂಗಸಿಗೆ ಹುಚ್ಚು ಹಿಡಿಯಿತೋ ಹೇಗೆ ಎಂದು ಪೊಲೀಸರು ಯೋಚಿಸುತ್ತಿದ್ದಾಗಲೇ ನವೋಮಿ ಹೇಳಿದಳು: 'ದುರಂತ ಸಂಭವಿಸಿದ ದಿನ ವಿಪರೀತ ಚಳಿಯಿತ್ತು. ಆ ಕಾರಣದಿಂದಲೇ ಎರಡೆರಡು ಒಳ ಉಡುಪುಗಳನ್ನು ಅದರ ಮೇಲೊಂದು ಜೀನ್ಸ್ ನಿಕ್ಕರನ್ನು ಧರಿಸುವಂತೆ ನಾನೇ ಹೇಳಿದ್ದೆ. ಸ್ನಾನಕ್ಕೆ ಹೋದ ಮಗಳಿಗೆ ನಾನೇ ಬಟ್ಟೆ ಕೊಟ್ಟಿದ್ದೆ. ಎರಡೆರಡು ಬಟ್ಟೆಗಳಿದ್ದ ಕಾರಣದಿಂದ ಅವು ಈಗಲೂ ಅಂಟಿಕೊಂಡಂತೆಯೇ ಉಳಿದಿವೆ. ಅವುಗಳ ಬಣ್ಣವೂ ನನಗೆ ಚೆನ್ನಾಗಿ ನೆನಪಿದೆ. ಅವುಗಳನ್ನು ನೋಡಿದಾಕ್ಷಣ ಇವಳೇ ನನ್ನ ಮಗಳು ಎಂಬುದು ಗ್ಯಾರಂಟಿಯಾಯಿತು...'
---
ದುರಂತ ನಡೆದು ಈಗ ಎರಡು ವರ್ಷಗಳು ಕಳೆದುಹೋಗಿವೆ. ಹಳೆಯದೇನೂ ನೆನಪಿಲ್ಲ ಎನ್ನುವಷ್ಟರ ಮಟ್ಟಿಗೆ ಯೊಕೋಕಾವಾ ಪ್ರದೇಶ ಬದಲಾಗಿದೆ. ಸುನಾಮಿಯ ರುದ್ರ ತಾಂಡವ ನಡೆದ ಜಾಗದಲ್ಲಿ ಕೊಹೇರು ಮತ್ತು ಹಲವು ಮಕ್ಕಳ ಸ್ಮರಣಾರ್ಥ ನೆಟ್ಟಿರುವ ಶಿಲಾಫಲಕಗಳಿವೆ. ವಾರಕ್ಕೆ ನಾಲ್ಕು ಬಾರಿ ಅಲ್ಲಿಗೆ ತಪ್ಪದೇ ಬರುತ್ತಾರೆ 38 ವರ್ಷದ ತಾಯಿ ನವೋಮಿ. ಹಾಗೆ ಬಂದವರು, ಮಗಳಿಗೆ ಇಷ್ಟವಾದ ತಿಂಡಿಗಳನ್ನೆಲ್ಲ ಅಲ್ಲಿಡುತ್ತಾರೆ. ನಂತರ 'ಹೇಗಿದ್ದೀ ಮಗಳೇ, ದಿನವೂ ಊಟ ಮಾಡ್ತಾ ಇದೀಯಾ? ಚೆನ್ನಾಗಿ ನಿದ್ರೆ ಮಾಡ್ತಾ ಇದಿಯಾ? ಸರಿರಾತ್ರಿಯಲ್ಲಿ ದಭಾರನೆ ಹೊಟ್ಟೆಯ ಮೇಲೆ ಕಾಲು ಹಾಕಿ, ತೋಳಿನ ಮೇಲೆ ತಲೆಯಿಟ್ಟು ಮಲಗುತ್ತಿದ್ದವಳು ನೀನು. ಈಗ ಹೇಗೆ ನಿದ್ರೆ ಮಾಡ್ತಿದೀಯಾ ಕಂದಾ ? ಸುನಾಮಿಯ ಅಲೆ ಎಳೆದೊಯ್ದಾಗ, ಅಮ್ಮಾ ಹೆಲ್ಪ್ ಎಂದು ನೀನು ಕೂಗಿರ್ತೀಯ. ಪಾಪಿ ಕಣೇ ನಾನು. ನಿನ್ನನ್ನು ಉಳಿಸಿಕೊಳ್ಳಲು ಬರಲಿಲ್ಲ. ವೆರಿ ಸಾರಿ. ಒಂದ್ಮಾತು ಕೇಳು, ತುಂಬಾ ಚಳಿ ಇರುವಾಗ ತುಂಬ ಎಚ್ಚರಿಕೆಯಿಂದ ಇರಬೇಕು ಗೊತ್ತಾಯ್ತಾ...' ಎಂದು ಹೇಳಿಯೇ ಮನೆಗೆ ಹಿಂದಿರುಗುತ್ತಾರೆ.
ಮಗಳನ್ನು ಕಳೆದುಕೊಂಡ ನಂತರ ಎಲ್ಲರೂ ಆತ್ಮಹತ್ಯೆ ಮಾಡ್ಕೋಬೇಕು ಎಂದು ನಿರ್ಧರಿಸಿದ್ವಿ. 'ಅಮ್ಮಾ, ನೀನು ಟೀಚರ್ ಆಗಿ ನನ್ನಂಥ ನೂರಾರು ಮಕ್ಕಳಿಗೆ ಪಾಠ ಹೇಳಬೇಕು. ಆ ಮಕ್ಕಳ ರೂಪದಲ್ಲಿ ನಾನು ಸಿಕ್ತಾ ಇರ್ತೇನಲ್ಲ' ಎಂದು ಅದೊಮ್ಮೆ ಮಗಳು ಹೇಳಿದಂತಾಯಿತು. ಅವತ್ತಿಂದ ಹೊಸ ಉತ್ಸಾಹದಿಂದ ಬದುಕ್ತಾ ಇದೀನಿ. ಸುನಾಮಿ ಸಂಭವಿಸಿದ ದಿನ, ಶಾಲೆಗೆ ಹೋಗುವ ಮೊದಲು ಮಗಳ ಮುಖ ನೋಡಿದ್ದರೆ, ಅವಳ ನಗುಮುಖ ಹೀಗೇ ಇತ್ತು ಎಂದೆಲ್ಲಾ ಈಗ ನೆನಪಿಸಿಕೊಳ್ಳಬಹುದಿತ್ತು. ಆದರೆ ಅಂಥದೊಂದು ಅದೃಷ್ಟ ನನ್ನ ಪಾಲಿಗೆ ಇರಲಿಲ್ಲ ಎನ್ನುತ್ತಾ ನಿಟ್ಟುಸಿರಾಗುತ್ತಾರೆ ನವೋಮಿ.
ಬೆಳೆದ ನಂತರ ಮಕ್ಕಳು ಏನೇನೋ ಆಗಬಹುದು. ಆದರೆ, ತಾಯಿ ಎಂದೆಂದಿಗೂ ತಾಯಿಯಾಗಿಯೇ ಉಳಿಯುತ್ತಾಳೆ ಎಂಬುದನ್ನು ವಿವರಿಸುವ ಈ ಬರಹ ರೀಡರ್ಸ್ ಡೈಜೆಸ್ಟ್‌ನಿಂದ ಆಯ್ದುಕೊಂಡದ್ದು...
- ಎ.ಆರ್. ಮಣಿಕಾಂತ್
armanikanth@gmail.com