ಅಂಕಣಗಳು

ಶೀಲಾ ದೀಕ್ಷಿತರನ್ನು ಸೋಲಿಸಿದ್ದು 'ಆಪ್‌' ಅಲ್ಲ, ಪಿಎಂ!

ಈ ವ್ಯವಸ್ಥೆ ಬದಲಾಗೊಲ್ಲ, ಈ ರಾಜಕೀಯ ಸುಧಾರಿಸದಷ್ಟು ಹಾಳಾಗಿ ಹೋಗಿದೆ.

ನಮ್ಮಲ್ಲೊಂದು ಮಿಥ್ಯೆಯಿತ್ತು. ಅದು ಒಡೆದು ಚೂರಾಗಿದೆ.
ಅದೇನೆಂದರೆ ನಾವು ಮಾತು ಮಾತಿಗೆ ಹೇಳುತ್ತಿದ್ದೆವು. ಈ ವ್ಯವಸ್ಥೆ ಬದಲಾಗೊಲ್ಲ, ಈ ರಾಜಕೀಯ ಸುಧಾರಿಸದಷ್ಟು ಹಾಳಾಗಿ ಹೋಗಿದೆ. ಭರವಸೆಯಿಡುವ ನಾಯಕರೇ ಇಲ್ಲ. ನಮ್ಮ ಮಧ್ಯೆ ಭ್ರಷ್ಟರು, ಲಫಂಗರು, ಕೊಲೆಗಡುಕರು ತುಂಬಿಹೋಗಿದ್ದಾರೆ. ಇವರಿಗೆ ನಮ್ಮನ್ನು ಆಳುವ ಜವಾಬ್ದಾರಿ ಕೊಟ್ಟುಬಿಟ್ಟಿದ್ದೇವೆ.  ರಾಜಕಾರಣದಲ್ಲಿ ಪ್ರಾಮಾಣಿಕರಿಗೆ ಆಸ್ಪದವೇ ಇಲ್ಲವಾ, ಹಣಬಲ, ತೋಳ್ಬಲವುಳ್ಳವರ ಮಧ್ಯೆ ಸಂಭಾವಿತರು ಆರಿಸಿಬರುವುದಾದರೂ ಹೇಗೆ. ಈ ಕೆಟ್ಟು ಕಿಲುಬಾಗೆದ್ದುಹೋದ ರಾಜಕೀಯ ರಂಗವನ್ನು ಸ್ವಚ್ಛಗೊಳಿಸುವುದು ಸಾಧ್ಯವೇ ಇಲ್ಲವಾ... ಎಂದೆಲ್ಲ ಮಾತಾಡಿಕೊಳ್ಳುತ್ತಿದ್ದೆವು. ಇದು ಎಂಥ ಕಾಡು ಹರಟೆಯಾಗುತ್ತಿತ್ತೆಂದರೆ ಈ ಮಾತುಗಳನ್ನು ಗೊಣಗಿ ಅಸಹಾಯಕರಾಗಿ ಕೈ ಚೆಲ್ಲಿ ನಮ್ಮ ಪಾಡಿಗೆ ನಾವು ಎದ್ದು ಹೋಗುತ್ತಿದ್ದೆವು. 'ಆ ಬ್ರಹ್ಮ ಬಂದರೂ ಪರಿಸ್ಥಿತಿ ಸುಧಾರಿಸಲು ಆಗೊಲ್ಲ ಬಿಡ್ರಿ, ಅಷ್ಟು ಕೆಟ್ಟು ಹೋಗಿದೆ. ಇನ್ನು ನಾವಾಗಲಿ, ನೀವಾಗಲಿ ಏನು ಮಾಡಲು ಸಾಧ್ಯ?' ಎಂದು ಪುನಃ ಪುನಃ ಹೆಣಗಿ ತೆಪ್ಪಗಾಗುತ್ತಿದ್ದೆವು. ಈ ಹರುಚಾಟ ಒಂದು ರೀತಿಯ ಸಾಂಕ್ರಾಮಿಕ ರೋಗದಂತೆ, ಅಂಟು ಜಾಡ್ಯದಂತೆ ನಮ್ಮನ್ನು ಬಾಧಿಸುತ್ತಿತ್ತು. ನಾಲ್ಕು ಜನ ಸೇರಿದಾಗ ಪುನಃ ಇದೇ ಮಾತು. 'ನಮ್ಮ ಹಣೆಬರಹ, ಅನುಭವಿಸಬೇಕು ಬಿಡಿ. ಯಾರು ಬಂದರೂ ಅಷ್ಟೆ' ಎಂಬ ಹತಾಶೆಯ ಮಾತುಗಳು.
 ಇದು ನಮ್ಮNational Passtime ಆಗಿಹೋಗಿತ್ತು. 'ಯಾರೇ ಬರಲಿ ಉದ್ಧಾರ ಮಾಡಲು ಸಾಧ್ಯವಿಲ್ಲ' ಎಂಬುದೂ ನಮ್ಮ ಅರಿವಿನ ಪದರದ ಮೇಲೆಯೇ ಕಟ್ಟಿಕೊಂಡ ಪಾಚಿಯಂತಾಗಿತ್ತು. ಕಾರಣ ನಾವು ಪದೇ ಪದೆ ಮೋಸ ಹೋದದ್ದು. ನಿಮ್ಮ ಉದ್ದಾರ ಮಾಡ್ತೀವಿ ಅಂತ ಬೇಕಾದವರೆಲ್ಲ ತಾವು ಉದ್ಧಾರವಾದರೆ ಶಿವಾಯ್, ಸಾಮಾನ್ಯ ಪ್ರಜೆಗಳಿಗೆ ಕಿಂಚಿತ್ತೂ ಪ್ರಯೋಜನವಾಗಲಿಲ್ಲ. ಎಲ್ಲ ರಾಜಕಾರಣಿಗಳೂ ಪಕ್ಷ ಭೇದ ಮರೆತು ಜನರನ್ನು ರಾಜಾ ರೋಷವಾಗಿ ಸುಲಿಯುವುದನ್ನೇ ಕಾಯಕ ಮಾಡಿಕೊಂಡರು. ಯಾರನ್ನೇ ಆರಿಸಿದರೂ ಅವರಿಗಿಂತ ಹಿಂದಿದ್ದವರೇ ವಾಸಿ ಎನ್ನುವಷ್ಟರ ಮಟ್ಟಿಗೆ ಲೂಟಿ ಮಾಡಿದರು. ಜನರಿಗೆ ರಾಜಕಾರಣದ ಮೇಲೆ ಈ ವ್ಯವಸ್ಥೆ ಮೇಲೆ ವಿಶ್ವಾಸವೇ ಹೊರಟುಹೋಯಿತು. ಯಾರೇ ಬಂದರೂ ಅಷ್ಟೆ, ಎಲ್ಲರೂ ಲೂಟಿಕೋರರೇ ಎಂಬ ತೀರ್ಮಾನಕ್ಕೆ ಬಂದು ಅದೆಷ್ಟೋ ವರ್ಷಗಳೇ ಆಗಿದ್ದವು. ಈ ಕಾರಣದಿಂದ ನಾವು ಚುನಾವಣೆಯಲ್ಲಿ ವೋಟು ಹಾಕುತ್ತಿರಲಿಲ್ಲ. 'ಎಲ್ಲರೂ ಖದೀಮರೇ, ಮರ್ಯಾದಸ್ಥರಿಗೆ ಇದು ಹೇಳಿ ಮಾಡಿಸಿದ್ದಲ್ಲ', ಎಂದು ಬಹುತೇಕ ಮಂದಿ ನಿರ್ಧಾರಕ್ಕೆ ಬಂದಿದ್ದರು. ಸಿನಿಕತನ, ಹತಾಶೆ, ವಿಷಾದ, ಬಂಜಬೀರಿತನ, ಅಸಹಾಯಕತೆ, ವಿಷಣ್ಣಭಾವ, ಬೇಗುದಿ, ಮೈ ಪರಚಿಕೊಳ್ಳುವಿಕೆ ನಮ್ಮನ್ನು ಬಕ್ಕಬೋಕಣವಾಗಿಸಿತ್ತು. ಈ ವ್ಯವಸ್ಥೆ ಬದಲಾಗೊಲ್ಲ. ದೇವರೇ ಬಂದರೂ ಅವನಿಂದಲೂ ಸಹ ಅಸಾಧ್ಯ, ಎಂಬ ಮಾತಿನ ನಾಲಿಗೆಯ ಕೆಳಗಡೆ ನಾವು ಆಶ್ರಯ ಕೇಳಲಾರಂಭಿಸಿದ್ದೆವು.
 ಕೈ ಚೆಲ್ಲಿ ಸಹಾಯಕರಾಗಿ ಕುಳಿತಾಗ ಭರವಸೆಯ ಕೊಲ್ಮಿಂಚು ನಮ್ಮ ಮುಂದೆ ಕವಿದಿದೆ. ಆಮ್ ಆದ್ಮಿ ಪಾರ್ಟಿ ದಿಲ್ಲಿಯಲ್ಲಿ ಎಲ್ಲರ ನಿರೀಕ್ಷೆಗಳನ್ನು ಬುಡಮೇಲು ಮಾಡಿ 70 ಸ್ಥಾನಗಳ ವಿಧಾನ ಸಭೆಯಲ್ಲಿ 28 ಸ್ಥಾನಗಳನ್ನು ಗೆದ್ದು ಎರಡನೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 11 ತಿಂಗಳ ಹುಟ್ಟಿದ ಅಂಬೆಗಾಲು ಇಡುತ್ತಿರುವ ಪಕ್ಷ ಶತಮಾನ ಇತಿಹಾಸವಿರುವ ಕಾಂಗ್ರೆಸ್ ಪಕ್ಷವನ್ನು ಮಣ್ಣು ಮುಕ್ಕಿಸಲು ಕಾರಣವಾಗಿರುವುದು ಸಾಮಾನ್ಯ ಸಾಧನೆಯಲ್ಲ. ಕಾಂಗ್ರೆಸ್ ಪಕ್ಷವನ್ನು 15 ವರ್ಷ ತಮ್ಮ ತಲೆ ಮೇಲೆ ಇಟ್ಟುಕೊಂಡ ದಿಲ್ಲಿಯ ಮತದಾರ ಪ್ರಭು ಅದೆಷ್ಟ್ಟು ರೋಸಿಹೋಗಿದ್ದಿರಬಹುದು ಎಂದು ಯೋಚಿಸಿ. ಆಮ್ ಆದ್ಮಿ ಪಾರ್ಟಿಯಲ್ಲಿರುವ ಯಾರಿಗೂ ರಾಜಕೀಯ ಹಿನ್ನೆಲೆ ಇಲ್ಲ. ಅವರ್ಯಾರೂ ರಾಜಕಾರಣಿಗಳ ಕುಟುಂಬದಿಂದ ಬಂದವರಲ್ಲ. ಆರಿಸಿ ಬಂದ ಕೆಲವರಿಗೆ ಸರಿಯಾಗಿ ಮೀಸೆ ಬಂದಿರುವ ಬಗ್ಗೆ ಡೌಟು. ಪಕ್ಷದ ನೇತಾರ ಅರವಿಂದ ಕೇಜ್ರಿವಾಲ ಅವರ ಹೆಸರನ್ನು ಎರಡು ವರ್ಷಗಳ ಹಿಂದೆ ಯಾರೂ ಕೇಳಿರಲಿಲ್ಲ. ಮಾಹಿತಿ ಹಕ್ಕು ಕಾಯಿದೆ ಜಾರಿಗೊಳ್ಳಲು ಕಾರಣಕರ್ತರಾದರೂ ಹತ್ತು ಸಮಸ್ತರಿಗೆ ಅವರ ಹೆಸರು ನಾಲಿಗೆ ಮೇಲೆ ಉಳಿಯುವಷ್ಟು ಪರಿಚಿತವಾಗಿರಲಿಲ್ಲ. ಖರಗಪುರ ಐಐಟಿಯಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದು ಕೆಲ ಕಾಲ ಟಾಟಾ ಸ್ಟೀಲ್ ಕಂಪನಿಯಲ್ಲಿ ಕೆಲಸ ಮಾಡಿ ಭಾರತೀಯ ನಾಗರಿಕ ಸೇವಾ ಪರೀಕ್ಷೆ ಬರೆದು ಕಂದಾಯ ಸೇವೆ (ರೆವಿನ್ಯೂ ಸರ್ವೀಸ್) ಸೇರಿದ ಅರವಿಂದ ಕೇಜ್ರಿವಾಲ 2006ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಡುವಾಗ ಆದಾಯ ತೆರಿಗೆ ಇಲಾಖೆಯಲ್ಲಿ ಜಂಟಿ ಆಯುಕ್ತರಾಗಿದ್ದರು. ಕೈ ತುಂಬಾ ಸಂಬಳವಿರುವ ಪ್ರತಿಷ್ಠಿತ ನೌಕರಿಯನ್ನು ಬಿಟ್ಟು 'ಪರಿವರ್ತನ್‌' ಎಂಬ ಸಮಾಜ ಸೇವಾ ಸಂಸ್ಥೆ ಕಟ್ಟಿ ಸಾಮಾಜಿಕ ಕೆಲಸಕ್ಕೆ ತಮ್ಮನ್ನು ತೊಡಗಿಸಿಕೊಳ್ಳುವ ನಿರ್ಧಾರ ಮಾಡಿದಾಗ ಅನೇಕ ಅವರ ಮಿತ್ರರು, ಸಂಬಂಧಿಕರು ವಿರೋಧಿಸಿದ್ದರು. ಇಂಥ ನಿರ್ಧಾರ ತೆಗೆದುಕೊಳ್ಳದಂತೆ ಬುದ್ಧಿ ಹೇಳಿದರೂ ಕೇಳಲಿಲ್ಲ. ತಾವು ತೆಗೆದುಕೊಂಡ ನಿಲುವಿನ ಬಗ್ಗೆ ಬಲವಾದ ನಂಬಿಕೆ ಇತ್ತು.
 ಮೂರು ವರ್ಷಗಳ ಹಿಂದೆ 2011ರ ಡಿಸೆಂಬರ್‌ನಲ್ಲಿ ಅಣ್ಣಾ ಹಜಾರೆ ಅವರೊಂದಿಗೆ ಜನ ಲೋಕಪಾಲ ಮಸೂದೆಗೆ ಆಗ್ರಹಿಸಿ ದೇಶವ್ಯಾಪಿ ಆಂದೋಲನಕ್ಕೆ ಕರೆ ಇತ್ತಾಗ, ಕೇಜ್ರಿವಾಲ ಅದರ ಮುಂಚೂಣಿಯಲ್ಲಿದ್ದರು. ಆದರೆ ಈ ಆಂದೋಲನದಲ್ಲಿ ಸಂಪೂರ್ಣ ಮಿಂಚಿದವರು ಅಣ್ಣಾ ಹಜಾರೆ. ಕೇಜ್ರಿವಾಲ ಹೆಸರು ಆಂಗ್ಲ ಮಾಧ್ಯಮಗಳಲ್ಲಿ ಪ್ರಸ್ತಾಪವಾಯಿತಾದರೂ ಜನಸಾಮಾನ್ಯರಿಗೆ ಪರಿಚಿತವಾಗುವಷ್ಟು ಹರಿದಾಡಲಿಲ್ಲ. ಈ ಮಧ್ಯೆ ಅಣ್ಣಾ ಹಜಾರೆಯರೊಂದಿಗೆ ಭಿನ್ನಾಭಿಪ್ರಾಯ ತಲೆದೋರಿತು. ಜನಲೋಕಪಾಲ ಆಂದೋಲನವನ್ನು ರಾಜಕೀಯ ಚಳವಳಿಯಾಗಿ ಪರಿವರ್ತಿಸಬೇಕೆಂಬ ಕೇಜ್ರಿವಾಲ ಸಲಹೆಗೆ ಅಣ್ಣಾ ಸೊಪ್ಪು ಹಾಕಲಿಲ್ಲ. ಆದರೆ ಗಟ್ಟಿ ಪಿಂಡ ಕೇಳಬೇಕಲ್ಲ. ಅಣ್ಣಾ ಕೊಂಡಿ ಕಳಚಿಕೊಂಡು ಕೆಲವೇ ಕೆಲವು ಸ್ನೇಹಿತರನ್ನು ಕಟ್ಟಿಕೊಂಡು ರಾಜಕೀಯ ಪಕ್ಷವನ್ನು ಕಟ್ಟಲು ಮುಂದಾದರು.
 ಅರವಿಂದ ಕೇಜ್ರಿವಾಲರ ರಾಜಕೀಯ ಯಶಸ್ಸು ಎಂಥವರಿಗಾದರೂ ಅಚ್ಚರಿ ಹುಟ್ಟಿಸುವಂಥದ್ದು. ಜನರ ಮೂಡನ್ನು ಅರಿಯುವವರಿಗೆ ಮಾರ್ಕೆಟಿಂಗ್ ಕ್ಷೇತ್ರದಲ್ಲಿರುವವರಿಗೆ ಮ್ಯಾನೇಜ್‌ಮೆಂಟ್ ಪರಿಣತರಿಗೆ ಇನ್ನೂ ಕೆಲ ಕಾಲ ತಲೆ ಕೆರೆದುಕೊಳ್ಳುವ ವಿಷಯವೇ. ಕಾರಣ, ಕೇಜ್ರಿವಾಲ ಆಮ್ ಆದ್ಮಿ ಪಾರ್ಟಿಯನ್ನು ಚುನಾವಣಾ ಆಯೋಗದಲ್ಲಿ ಅಧಿಕೃತವಾಗಿ ನೋಂದಾಯಿಸಿದ್ದು ಈ ವರ್ಷದ ಮಾರ್ಚ್‌ನಲ್ಲಿ ಅಂದರೆ ಒಂಭತ್ತು ತಿಂಗಳ ಹಿಂದೆ ರಾಜಕೀಯ ಪಕ್ಷ ಸ್ಥಾಪಿಸಲು ಬೇಕಾದ ಹಣ ಬಲವಾಗಲಿ, ತೋಳ್ಬಲವಾಗಿಲಿ, ಜನಬಲವಾಗಲಿ ಇರಲಿಲ್ಲ. ಇದ್ದಿದ್ದೊಂದೇ ಅಂದ್ರೆ ಆತ್ಮವಿಶ್ವಾಸ. ಅದೊಂದೇ ಸಾಕಾಯಿತು.
 ಕೇಜ್ರಿವಾಲ ದಿಲ್ಲಿಯಲ್ಲಿ 'ಆಮ್ ಆದ್ಮಿ ಪಾರ್ಟಿ' ಹೆಸರಿನಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿದಾಗ ಯಾರೂ ಅವರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆಮ್ ಆದ್ಮಿ ಪಕ್ಷ ಸ್ಥಾಪಿಸಿದಂದಿನಿಂದ ಪ್ರತಿ ದಿನ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರಲು ಪ್ರಯತ್ನಿಸಿದರು. ಪ್ರತಿ ವಾರ ಪ್ರತಿಷ್ಠಿತರ ಭ್ರಷ್ಟಾಚಾರ ಪ್ರಕರಣವನ್ನು ಬಯಲು ಮಾಡಲು ಆರಂಭಿಸಿದರು. ವಾರ ವಾರ ಒಬ್ಬೊಬ್ಬರ ಮೇಲೆ ಕಣ್ಣಿಟ್ಟು ಭ್ರಷ್ಟಾಚಾರಗಳನ್ನು ದಾಖಲೆ ಸಮೇತ ಬಹಿರಂಗಪಡಿಸುವ ಮೂಲಕ ರಾಷ್ಟ್ರ ವ್ಯಾಪ್ತಿ ಸುದ್ದಿ ಮಾಧ್ಯಮಗಳಲ್ಲಿ ಬಹು ಪಾಲನ್ನು ಆಕ್ರಮಿಸಿಕೊಂಡರು.
'ಅಯ್ಯೋ ಬಿಡ್ರಿ, ಆಮ್ ಆದ್ಮಿ ಅಚಾನಕ್ಕಾಗಿ ಗೆಲವು ಸಾಧಿಸಿಬಿಟ್ಟಿದೆ. ಅದನ್ನೇನು ಕೊಂಡಾಡುವ ಅಗತ್ಯವಿಲ್ಲ' ಅಂತ ಈಗಲೂ ಮೂಗು ಮುರಿಯುವವರು ಬಹಳಷ್ಟು ಮಂದಿ ಇದ್ದಾರೆ. ಗುಣಕ್ಕೇಕೆ ಮತ್ಸರ? ಮುಂದಿನ ದಿನಗಳಲ್ಲಿ ಆಮ್‌ಆದ್ಮಿ ಯಾವ ಜಾಡಿನಲ್ಲಿ ಹೊರಳಿಕೊಳ್ಳುತ್ತದೋ, ಅಧಿಕಾರ ಬಂದಾಗ ಹೇಗಿರುತ್ತದೋ ಎಂಬೆಲ್ಲ ಪ್ರಶ್ನೆಗಳು ಸಹಜವೇ ಆದರೂ ಅದರ ಈಗಿನ ಗೆಲುವಿಗೆ ಶ್ರೇಯಸ್ಸು ನೀಡುವುದಕ್ಕೆ ಹಿಂಜರಿದರೆ ಐಬು ನಮ್ಮಲ್ಲೇ ಇದೆ ಎಂದರ್ಥ. ಭ್ರಷ್ಟಾಚಾರದ ಬಗ್ಗೆ ಜನ ರೋಸಿ ಹೋಗಿದ್ದು, ಕಾಂಗ್ರೆಸ್ ಆಡಳಿತದ ಕುರಿತ ಭ್ರಮನಿರಸನ, ಟಿವಿ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಅರವಿಂದ ಕೇಜ್ರಿವಾಲ್ ಅವರಿಗೆ ದಕ್ಕಿದ ಭಾರಿ ಪ್ರಚಾರ ಇವೆಲ್ಲದರಿಂದ ಆಮ್‌ಆದ್ಮಿ ಲಾಭ ಪಡೆಯಿತು ಅಂತ ಹೇಳಿಬಿಟ್ಟರೆ ಏನನ್ನೂ ಹೇಳಿದಂತಾಗುವುದಿಲ್ಲ. ಆ ಎಲ್ಲ ಅಂಶಗಳು ಆಮ್‌ಆದ್ಮಿ ಜಯಕ್ಕೆ ನಿರ್ಣಾಯಕ ಪಾತ್ರ ವಹಿಸಿದ್ದು ಹೌದಾದರೂ ಅದರ ಭರ್ಜರಿ ಸಾಧನೆ ಆಕಸ್ಮಿಕ ಎಂಬಂತೆ ಆಗಿದ್ದಲ್ಲ. ಅದರ ಹಿಂದೊಂದು ಮಾರ್ಕೆಟಿಂಗ್ ತಂತ್ರ, ಸಂಘಟನೆಯ ಕೌಶಲ, ನಿರಂತರ ಪರಿಶ್ರಮಗಳೆಲ್ಲ ಕೆಲಸ ಮಾಡಿವೆ. ಇಲ್ಲದಿದ್ದರೆ ಮುಖ್ಯವಾಹಿನಿ ಪಕ್ಷಗಳಿಗೆ ಪರ್ಯಾಯವಾಗಿ ನಾವಿದ್ದೇವೆ ಎಂದು ಹಲವು ನಾಗರಿಕ ವೇದಿಕೆಗಳು ಈ ಹಿಂದೆಯೂ ಚುನಾವಣಾ ರಾಜಕೀಯದಲ್ಲಿ ತಮ್ಮ ಪ್ರಾಮಾಣಿಕ ಪ್ರಯತ್ನ ತೋರಿಸಿದ ಉದಾಹರಣೆಗಳು ಇವೆ. ಅವರ್ಯಾರಿಗೂ ಈ ಮಟ್ಟದ ಯಶಸ್ಸಿನ ಹತ್ತಿರಕ್ಕೂ ಬರಲಾಗಲಿಲ್ಲ.
ಕಾಂಗ್ರೆಸ್ ನಿರ್ಮಿಸಿದ ಅತ್ಯಂತ ನಿರಾಶಾದಾಯಕ ವಾತಾವರಣವನ್ನೇ ಆಮ್‌ಆದ್ಮಿ ತನಗೆ ಅನುಕೂಲವಾಗುವಂತೆ ಮಾಡಿಕೊಂಡಿತು ಖರೆ. ಹಾಗೆ ನೋಡುವುದಾದರೆ ಶೀಲಾ ದೀಕ್ಷಿತ್ ಅವರನ್ನು ಸೋಲಿಸಿದ್ದು ಆಮ್‌ಆದ್ಮಿ ಅಲ್ಲ, ಮನಮೋಹನ್ ಸಿಂಗ್! ಆದರೆ ಕಾಂಗ್ರೆಸ್ ದೌರ್ಬಲ್ಯದ ಈ ಲಾಭವನ್ನು ಆಮ್‌ಆದ್ಮಿಯೇ ಪಡೆದುಕೊಂಡಿರುವುದಕ್ಕೆ ಅದರದ್ದೇ ಆದ ಕೌಶಲ, ಪರಿಶ್ರಮಗಳಿರಲೇಬೇಕಲ್ಲ. ಈ ನಿಟ್ಟಿನಲ್ಲಿ ಆಮ್‌ಆದ್ಮಿಯ ಯಶಸ್ಸನ್ನು ಮಾರ್ಕೆಟಿಂಗ್‌ನ ಚೌಕಟ್ಟಿನಲ್ಲಿಟ್ಟು ನೋಡುವುದು ಅವಶ್ಯವಾಗುತ್ತದೆ.
ನಾವು ಬದುಕುತ್ತಿರುವ ಕಾಲಘಟ್ಟ ಅನನ್ಯವಾದದ್ದು. ಇಲ್ಲಿ ಪ್ರತಿಯೊಬ್ಬನಿಗೂ ನಾಯಕನಾಗುವ ಅಥವಾ ನಾಯಕನ ಸ್ಥಾನದಲ್ಲಿ ನಿಂತು ತನ್ನ ವಿಚಾರಧಾರೆಯನ್ನು ಹಂಚಿಕೊಳ್ಳುವ ಅವಕಾಶವಿದೆ. ಹಾಗೆ ಮಾತನಾಡುವವನನ್ನು ಕೇಳಿಸಿಕೊಳ್ಳುವ ಹಾಗೂ ಅವನ ಬೆಂಬಲಕ್ಕೆ ನಿಲ್ಲುವ ಪಡೆಯೂ ದೊಡ್ಡದೇ. ಸ್ಥಾಪಿತ ವ್ಯವಸ್ಥೆಯಲ್ಲೇ ಹೊಸ ನಾಯಕ ರೂಪುಗೊಳ್ಳುವವರೆಗೆ ಕಾಯಬೇಕು ಎಂಬ ಅನಿವಾರ್ಯ ಈಗ ಯಾರ ಮುಂದೂ ಇಲ್ಲ. ನಮ್ಮ ನಡುವಿನಿಂದ ಈಗಷ್ಟೇ ಎದ್ದುಹೋದವನೂ ನಾಯಕನಾಗಬಹುದು ಹಾಗೂ ಆತನಲ್ಲಿ ಅಂಥದೊಂದು ಅಭೀಪ್ಸೆ ಅದಕ್ಕೆ ತಕ್ಕ ಆಕ್ರಮಣಶೀಲತೆ ಇದ್ದರೆ ಮುಲಾಜಿಲ್ಲದೇ ನಮ್ಮ ಬೆಂಬಲ ನೀಡಬಹುದು ಎಂಬ ಮನೋಭೂಮಿಕೆಯೊಂದು ಸಾಮಾನ್ಯರಲ್ಲಿ ಸಿದ್ಧವಾಗಿದೆ. ಹೀಗಾಗಿ ಕೇಜ್ರಿವಾಲ್ ಅಂಥದೊಂದು ಭರವಸೆ ನೀಡಿದಾಗ ಜನ ದೊಡ್ಡ ಯಶಸ್ಸನ್ನೇ ದಯಪಾಲಿಸಿದರು.
ಇದು ಫೇಸ್‌ಬುಕ್, ಟ್ವಿಟ್ಟರ್‌ನಂಥ ಸಾಮಾಜಿಕ ತಾಣಗಳ ಪ್ರಭಾವದಿಂದ ಆದ ನಗರ ಕೇಂದ್ರಿತ ಕ್ರಾಂತಿ ಅಷ್ಟೆ ಎಂಬ ತೀರ್ಮಾನವೂ ಬೇಕಿಲ್ಲ. ಅದು ನಿಜವಾಗಿದ್ದರೆ ದೆಹಲಿಯ ಹೃದಯಭಾಗದ ಐದೋ ಹತ್ತೋ ಸ್ಥಾನಗಳನ್ನು ಗೆಲ್ಲಲಷ್ಟೇ ಆಮ್ ಆದ್ಮಿ ಯಶಸ್ಸಾಗಬೇಕಿತ್ತು. ನಿಮಗೆ ಗೊತ್ತಿರಲಿ, 12 ಮೀಸಲು ಕ್ಷೇತ್ರಗಳಲ್ಲಿ ಒಂಬತ್ತನ್ನು ಆಮ್‌ಆದ್ಮಿ ಗೆದ್ದಿದೆ! ಈ ಸಂಘಟನೆ ಸಾಧ್ಯವಾಗಿದ್ದು ಹೇಗೆ?
ನಾನಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ತಿಳಿವಳಿಕಸ್ಥರೇ ಆಮ್ ಆದ್ಮಿಯ ಅಭ್ಯರ್ಥಿಗಳಾಗಿರುವವರಲ್ಲಿ ಪ್ರಮುಖರು. ಇವರೆಲ್ಲ ಕೇಂದ್ರ ಕಚೇರಿಯಲ್ಲಿ ಜಂಡಾ ಹೊಡೆದು ಕೂರದೇ ಮನೆ- ಮನೆಗೆ ತೆರಳಿದರು. ಅಲ್ಲಿಗೆ ಹೋದವರು ಪಕ್ಷದ ಪ್ರಚಾರದೊಂದಿಗೆ ಎಲ್ಲ ಮನೆಗಳಿಂದ ಒಂದೊಂದು ಪೊರಕೆಯನ್ನು ಕೇಳಿ ಪಡೆದರು. ರಾಜಕೀಯವನ್ನು ಶುದ್ಧೀಕರಿಸುವ ತಮ್ಮ ಒತ್ತಾಸೆಗೆ ಅದನ್ನು ಅದ್ಭುತ ರೂಪಕವಾಗಿ ಬಳಸಿಕೊಳ್ಳುತ್ತಾ, ಪ್ರಮುಖ ಬೀದಿಗಳಲ್ಲಿ ಆ ಪೊರಕೆಗಳನ್ನೇ ಹರಾಜಿಗಿಟ್ಟರು. ಈ ಬಗೆಯ ನವೀನ ಸಂದೇಶ ವಿಧಾನ ಜನರನ್ನು ಆಕರ್ಷಿಸಿತು. ಪೊರಕೆಗಳ ಹರಾಜಿನಿಂದಲೇ ಪಾರ್ಟಿ ಫಂಡ್‌ಗೆ ಲಕ್ಷಾಂತರ ರುಪಾಯಿಗಳ ಸಂಗ್ರಹವಾಯಿತು.
ಮಾರುಕಟ್ಟೆಯಲ್ಲಿ ದೊರೆಯುವ ಪ್ರತಿ ಸಾಬೂನೂ ನಿಮಗೆ ಐಶ್ವರ್ಯ ರೈ ತ್ವಚೆ ನೀಡುವ ಮಾತುಗಳನ್ನಾಡುವಂತೆ, ಇವತ್ತಿನ ಎಲ್ಲ ರಾಜಕೀಯ ಪಕ್ಷಗಳೂ ತಾವು ಬಡವರ ಪರ, ಶ್ರೀಸಾಮಾನ್ಯನ ಪರ ಎನ್ನುತ್ತವೆ. ಇದೊಂಥರ ಕ್ಲೀಷೆಯಾಗಿಬಿಟ್ಟಿದೆ. ಆದರೆ ಆಮ್ ಆದ್ಮಿ ಪಕ್ಷ ಅದೇ ಘೋಷವನ್ನೇ ಹೊಸತಾಗಿ ಹೇಳಿತಲ್ಲದೆ, ತನ್ನ ಬ್ರಾಂಡ್‌ಗೆ ಅನುಕೂಲವಾಗುವಂತೆಯೇ ನಡೆದುಕೊಂಡಿತು. ಪ್ರತಿ ಹೆಜ್ಜೆಯಲ್ಲೂ ಅದು 'ಆಮ್ ಆದ್ಮಿ' ಎಂಬ ತನ್ನ ಬ್ರಾಂಡ್‌ಗೆ ಪೂರಕವಾಗುವುದನ್ನೇ ಬಿಂಬಿಸಿತು. ಅದರ ಚಿಹ್ನೆಯಾದ ಪೊರಕೆಯನ್ನೇ ಗಮನಿಸಿ. ಅದು ಬಡವ- ಬಲ್ಲಿದ ಎನ್ನದೇ ಎಲ್ಲರ ಮನೆಯಲ್ಲೂ ಇರುವಂಥ ವಸ್ತು. ಸಾಮಾನ್ಯ ಜೀವನದ ಜರೂರತ್ತು ಅದು. ಈ ಪಕ್ಷದ ಸ್ವಯಂಸೇವಕರೂ ಸಾಮಾನ್ಯ ವ್ಯಕ್ತಿಗಳಾಗಿಯೇ ಉಳಿದರು. ಅದರರ್ಥ ಬಡವರು- ನಿರ್ಗತಿಕರಿಗಷ್ಟೇ ಟಿಕೆಟ್ ಕೊಟ್ಟು ಗೆಲ್ಲಿಸಿ ತರುತ್ತೇವೆ ಎಂಬ ಅಪ್ರಾಯೋಗಿಕ ಆದರ್ಶವಲ್ಲ. ಆಮ್ ಆದ್ಮಿ ಪಾರ್ಟಿಗಾಗಿ ಕೆಲಸ ಮಾಡುವುದಕ್ಕೆ, ಪಕ್ಷದ ಟಿಕೆಟ್ ಪಡೆದು ಸ್ಪರ್ಧಿಸುವುದಕ್ಕೆ ಭಾರಿ ಮೊತ್ತದ ಸಂಬಳ ಪಡೆಯುತ್ತಿದ್ದವರೂ ತತ್ಕಾಲದ ರಜೆ ಪಡೆದು ಬಂದಿದ್ದರು. ಆದರೆ ಅವರೆಲ್ಲ ಸಾಮಾನ್ಯನ ಧಿರಿಸು ಹಾಗೂ ನಡವಳಿಕೆಗಳನ್ನು ಬಿಡಲಿಲ್ಲ. ಐಷಾರಾಮ ಬಯಸದೇ ಸಾಮಾನ್ಯರ ಜೀವ ಸಂಚಲನದ ನೆಲೆಗಳಾದ ಮೆಟ್ರೋ ಸ್ಟೇಷನ್‌ಗಳು, ಕಾಲೇಜುಗಳು, ಗರಾಜುಗಳು, ಕಿಷ್ಕಿಂದೆಯಂಥ ಪ್ರದೇಶಗಳಲ್ಲಿದ್ದ ಶ್ರಮಿಕರ ಮನೆಗಳು ಇವೆಲ್ಲವಕ್ಕೂ ನಡೆದುಹೋಗಿ ಪ್ರಚಾರ ಮಾಡಿದರು.
ಆಮ್ ಆದ್ಮಿ ಎಂಬ ಬ್ರಾಂಡ್‌ಗೆ ಪೂರಕವಾಗುವಂತೆ ಅವರು ತಮ್ಮ ಕಾರ್ಯಸೂಚಿಯಲ್ಲಿ ಕೈಗೆತ್ತಿಕೊಂಡ ವಿಷಯವೊಂದು ಬ್ರಹ್ಮಾಸ್ತ್ರದಂತಿದೆ. ಅದೆಂದರೆ ನೀರು ಮತ್ತು ವಿದ್ಯುತ್ ದರವನ್ನು ತಗ್ಗಿಸುವ ಭರವಸೆ. ನಮಗೆಲ್ಲ ಇದರ ಅಂದಾಜಿಲ್ಲ. ಏಕೆಂದರೆ ಅಬ್ಬಬ್ಬಾ ಎಂದರೂ ನಾವು ಪ್ರತಿ ತಿಂಗಳು ಪಾವತಿಸುವ ವಿದ್ಯುತ್ ಬಿಲ್ ಸಾವಿರ ರುಪಾಯಿ ಮೀರುವುದಿಲ್ಲ. ಆದರೆ ದೆಹಲಿ ಅತಿ ಸೆಕೆ ಹಾಗೂ ಅತಿ ಚಳಿಗಳ ನಡುವೆ ಜೀಕುತ್ತಿರುವ ಪ್ರದೇಶ. ಅಲ್ಲಿ ಬೇಸಿಗೆಯಲ್ಲಿ ಫ್ಯಾನ್, ಚಳಿಗಾಲದಲ್ಲಿ ಹೀಟರ್ ಇಲ್ಲದಿದ್ದರೆ ಬದುಕಲಿಕ್ಕೇ ಸಾಧ್ಯವಿಲ್ಲ. ಇಂಥ ಪರಿಸ್ಥಿತಿಯಲ್ಲಿ ಈ ಹಿಂದಿನ ಶೀಲಾ ದೀಕ್ಷಿತ್‌ರ ಸರ್ಕಾರ ವಿದ್ಯುತ್ ದರದಲ್ಲಿ ಭಾರಿ ಏರಿಕೆ ಮಾಡಿತು. ಆಗಲೇ ಈ ಬಗ್ಗೆ ದನಿ ಎತ್ತಿ ತಮ್ಮ ಅಜೆಂಡಾ ಆಗಿಸಿಕೊಂಡರು ಕೇಜ್ರಿವಾಲ್. ಬಸ್ ಚಾಲಕ, ಸ್ವಚ್ಛತಾ ಕರ್ಮಿ ಇವರೆಲ್ಲ ತಿಂಗಳಿಗೆ ಮೂರು-ನಾಲ್ಕು- ಐದು ಸಾವಿರ ರುಪಾಯಿಗಳವರೆಗೆ ನೆಗೆಯುವ ವಿದ್ಯುತ್ ಬಿಲ್ ಹೇಗೆ ತಾನೇ ಪಾವತಿಸಿಯಾರು? ಇವರಿಗೆಲ್ಲ ಆಮ್‌ಆದ್ಮಿ ತನ್ನದೇ ಧ್ವನಿಯಾಗಿ ಕಂಡಿದ್ದರಲ್ಲಿ ಅಚ್ಚರಿ ಏನಿಲ್ಲ.
ದೆಹಲಿಯಲ್ಲಿ ಶೀಲಾ ದೀಕ್ಷಿತರ ಸೋಲಿಗೆ ಕಾರಣವಾಗಿದ್ದು ವಾಸ್ತವದಲ್ಲಿ ಆಮ್ ಆದ್ಮಿ ಅಲ್ಲ, ಆದರೆ ಸಾಮಾನ್ಯರ ಮಿಡಿತ ಅರಿಯಲಾಗದ ಮನಮೋಹನ ಸಿಂಗ್! ಆದರೆ, ಆ ದೌರ್ಬಲ್ಯವನ್ನು ಬಂಡವಾಳವಾಗಿಸಿಕೊಂಡು ಆಮ್‌ಆದ್ಮಿ ಬ್ರಾಂಡ್ ಕಟ್ಟಿ ನಿಲ್ಲಿಸಿದ ಶ್ರೇಯಸ್ಸು ಕೇಜ್ರಿವಾಲ್‌ರಿಗೆ ಸಿಗಲೇಬೇಕು.
ಮಾರ್ಕೆಟಿಂಗ್ ಪರಿಭಾಷೆಯಲ್ಲೇ ಆಮ್ ಆದ್ಮಿಯ ದೆಹಲಿ ಯಶಸ್ಸನ್ನು ಹಿಡಿದಿಡುವುದಾದರೆ- ಮಾರುಕಟ್ಟೆ ಅಂಗಳದಲ್ಲಿ ಕೋಟಿ ಕೋಟಿ ಬಂಡವಾಳದ ಮಹಾದೈತ್ಯರೇ ಆಟವಾಡುತ್ತಿರಬಹುದು. ಆದರೆ ಅವರೆಲ್ಲರ ನಡುವೆಯೇ ಬೇರುಮೂಲದಿಂದ ನಿಮ್ಮದೇ ಬ್ರಾಂಡ್ ಒಂದನ್ನು ನಿಲ್ಲಿಸುವುದಕ್ಕೆ ಸಾಧ್ಯ ಎಂಬುದೇ ಆಮ್ ಆದ್ಮಿ ನೀಡಿರುವ ಭರವಸೆ!   

- ವಿಶ್ವೇಶ್ವರ ಭಟ್
vbhat@me.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video