ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಭಾರತ ಪ್ರಜ್ವಲಿಸಬೇಕೆಂದರೆ 50 ರಾಜ್ಯಗಳು ಸೃಷ್ಟಿಯಾಗಬೇಕು

Srinivasa Murthy VN
Updated On : 15 Dec 2013, 1:02 am

ವಿದರ್ಭ ಸೃಷ್ಟಿಯಾದರೆ, ಅಲ್ಲಿ ತಮ್ಮ ಪ್ರಭಾವ ಬೀರಲು ಸಾಧ್ಯವಾಗುವುದಿಲ್ಲವೆಂಬ ಭಯ ಮುಂಬೈನ ಬುದ್ಧಿಜೀವಿಗಳ ವಲಯಕ್ಕಿದೆ. ಇನ್ನು, ಉತ್ತರಪ್ರದೇಶದ ವಿಷಯಕ್ಕೆ ಬಂದರೆ, ಪಶ್ಚಿಮ ಮತ್ತು ಪೂರ್ವ ಉತ್ತರಪ್ರದೇಶದಲ್ಲಿ ಯಾದವರ ಪ್ರಾಬಲ್ಯ ಕಡಿಮೆ ಇರುವುದರಿಂದ, ಅವರೆಲ್ಲ ಹೊಸ ರಾಜ್ಯ ರಚನೆಯನ್ನು ವಿರೋಧಿಸುತ್ತಾರೆ.

'ಅನುಕೂಲಸಿಂಧು' ಎನ್ನುವ ಪದ ಕಾಂಗ್ರೆಸ್‌ಗೆ ಸೂಕ್ತವಾಗಿ ಹೊಂದುತ್ತದೆ. ಸರಿಯಾಗಿ 129 ವರ್ಷಗಳ ಹಿಂದೆ ಅಲನ್ ಆಕ್ಟೇವಿಯನ್ ಹ್ಯುಮೆ ಹುಟ್ಟುಹಾಕಿದ ಈ ಪಕ್ಷ, ಬ್ರಿಟೀಷರ ಒಡೆದು ಆಳುವ ನೀತಿಯನ್ನು ಪಾಲಿಸುತ್ತಲೇ ಬಂದಿದೆ. ಎಲ್ಲರನ್ನೂ ಒಳಗೊಂಡ ಆರ್ಥಿಕತೆ ಮತ್ತು ರಾಜಕೀಯದ ಬಗ್ಗೆ ಮಾತನಾಡುವ ಈ ಪಕ್ಷದ ನೀತಿ ಮತ್ತು ನಡೆಗಳೆಲ್ಲವೂ ದೇಶವನ್ನು ಜಾತಿ, ಪ್ರದೇಶ ಮತ್ತು ಧಾರ್ಮಿಕ ಎಳೆಯಲ್ಲಿ ಬೇರ್ಪಡಿಸುವುದಕ್ಕೇ ಸೀಮಿತವಾಗಿವೆ. ಒತ್ತಡ, ಓಲೈಕೆ ಮತ್ತು ಅಧಿಕಾರ ತಂತ್ರದಿಂದ ಸಂಘಟಿಸಲು ವಿಫಲವಾದಾಗಲೆಲ್ಲ, ಒಡೆದು ಬೇರ್ಪಡಿಸುವ ತಂತ್ರವನ್ನು ಅದು ಅನುಸರಿಸುತ್ತಾ ಬಂದಿದೆ. ಉದಾಹರಣೆಗೆ, ತೆಲಂಗಾಣ ರಾಜ್ಯ ರಚನೆ. 5 ದಶಕದಿಂದಲೂ ತೆಲಂಗಾಣ ರಾಜ್ಯ ರಚನೆಯ ಕೂಗಿನತ್ತ ಕಿವಿಗೊಡದ ಕಾಂಗ್ರೆಸ್, ಈಗ ಉರಿಯುತ್ತಿರುವ ಆಂಧ್ರಪ್ರದೇಶದಿಂದ ತನ್ನ ಮನೆಯನ್ನು ಬೆಳಗಿಸಿಕೊಳ್ಳಬೇಕೆಂದರೆ ತೆಲಂಗಾಣ ಎನ್ನುವ ಕಿಡಿಯನ್ನು ಬೇರ್ಪಡಿಸಬೇಕು ಎನ್ನುವುದನ್ನು ಮನಗಂಡು, ಕೂಡಲೇ ಪ್ರತ್ಯೇಕ ರಾಜ್ಯ ರಚನೆಗೆ ಅಸ್ತು ಅಂದುಬಿಟ್ಟಿದೆ. ಆರ್ಥಿಕ ಮತ್ತು ಆಡಳಿತಾತ್ಮಕ ಕಾರಣಗಳಿಗಲ್ಲದೇ, ಕೇವಲ ರಾಜಕೀಯ ಪಕ್ಷವೊಂದರ ಹಿತಾಸಕ್ತಿಗಾಗಿ ರಾಜ್ಯವೊಂದು ರಚನೆಯಾಗಲಿರುವುದು ಇದೇ ಮೊದಲ ಬಾರಿಗೆ ಅನ್ನಬೇಕು. ಆರ್ಥಿಕ ಕಾರಣಗಳಿಗಾಗಿ ಆಂಧ್ರಪ್ರದೇಶವನ್ನು ವಿಭಜಿಸುವ ಅಗತ್ಯ ಈಗೆಷ್ಟಿದೆಯೋ, ಅಷ್ಟೇ ಅಗತ್ಯ 50 ವರ್ಷಗಳ ಹಿಂದೆಯೂ ಇತ್ತು. ಆದರೆ ಮೇಲ್ಮಟ್ಟದಲ್ಲಿರುವ ಸ್ವಹಿತಾಸಕ್ತರ ಕೂಟ, ಇದುವರೆಗೂ ತೆಲಂಗಾಣಾದ ಹೆರಿಗೆಗೆ ಸಹಾಯ ಮಾಡುವ ಮನಸ್ಸು ಮಾಡಿರಲಿಲ್ಲ.     
ವೈ.ಎಸ್. ರಾಜಶೇಖರ ರೆಡ್ಡಿ ಅವರ ಮರಣಾನಂತರ ಕಾಂಗ್ರೆಸ್ ಆಂಧ್ರದಲ್ಲಿ ಅನಾಥವಾಗಿದೆ. ಕಾನೂನುಬದ್ಧ ವಾದಗಳನ್ನು ಬೆದರಿಕೆ, ಶಕ್ತಿ ಪ್ರದರ್ಶನ ಅಥವಾ ದಬ್ಬಾಳಿಕೆಯ ಮೂಲಕ ಸುಮ್ಮನಾಗಿಸಿ, ವಿಭಜನೆಯ ವಿಷಯವನ್ನು ಮುಂದೂಡುತ್ತಿದ್ದ ವೈಎಸ್‌ಆರ್ ಅವರ ಚಂಚಲ ಪ್ರವೃತ್ತಿಯಿಂದ ಹೈಕಮಾಂಡ್‌ಗಂತೂ ಲಾಭವಾಗುತ್ತಿತ್ತು. ಆದರೆ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ನಂತರ ಆಂಧ್ರ ಕಾಂಗ್ರೆಸ್ ಇಬ್ಭಾಗವಾಯಿತು. ಜಗನ್ಮೋಹನ್ ರೆಡ್ಡಿ ಹೊರಗೆದ್ದು ಬಂದು ಹೊಸ ಪಕ್ಷ ಸ್ಥಾಪಿಸಿದ ನಂತರವಂತೂ ಕಾಂಗ್ರೆಸ್‌ಗೆ ಜಾತಿ ಮತ್ತು ಪ್ರದೇಶಗಳ ಮೇಲಿನ ಹಿಡಿತ ತಪ್ಪಿ, ಅದು ಒಡೆದ ಮನೆಯಾಯಿತು.
2014ರ ಚುನಾವಣೆಗಳಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದರೆ ಕರಾವಳಿ ಆಂಧ್ರಪ್ರದೇಶವನ್ನು ಜಗನ್‌ಗೆ ಬಿಟ್ಟುಕೊಟ್ಟು, ತೆಲಂಗಾಣವನ್ನು ತನ್ನ ಕೈವಶ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಯೋಚಿಸುತ್ತಿದೆ. ತೆಲಂಗಾಣ ರಾಜ್ಯ ರಚನೆಗಾಗಿನ ಎಲ್ಲಾ ಆಡಳಿತಾತ್ಮಕ ಮತ್ತು ಕಾನೂನುಬದ್ಧ ವಿಧಿವಿಧಾನಗಳಿಗೆಲ್ಲ ಯುಪಿಎ ಸರ್ಕಾರ ತರಾತುರಿಯಿಂದ ಸಹಿ ಹಾಕಿತು. ಆದರೆ ಇದರಿಂದಾಗಿ, ಯುಪಿಎದ ಸ್ವಹಿತಾಸಕ್ತಿಯೂ ಬೆತ್ತಲಾಯಿತು. ಇದುವರೆಗೂ ಯಾವ ಕೇಂದ್ರ ಸರ್ಕಾರವೂ ಕೂಡ ಒಂದು ರಾಜ್ಯದ ಬಹುಸಂಖ್ಯಾತರ ವಿರೋಧದ ನಡುವೆಯೂ ರಾಜ್ಯ ವಿಭಜನೆಗೆ ಮುಂದಾದ ಉದಾಹರಣೆಗಳಿರಲಿಲ್ಲ. ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರವನ್ನು ವಿಭಜಿಸಿದಾಗ ಎನ್‌ಡಿಎ ಸರ್ಕಾರಕ್ಕೆ ಆಯಾ ರಾಜ್ಯಗಳ ನಾಯಕತ್ವದ ಬೆಂಬಲವಿತ್ತು. ಮತ್ತು ಆ ನಡೆ ರಾಜಕೀಯವಾಗಿ ಸರಿಯಾಗಿಯೂ ಇತ್ತು. ಆದರೆ ಆಂಧ್ರದಲ್ಲಿ, ಎರಡು ವರ್ಷಗಳವರೆಗೆ ಕಾಂಗ್ರೆಸ್ ಸ್ಥಳೀಯ ಒತ್ತಡಕ್ಕೆ ಸಿಲುಕಿ ಸ್ಪಷ್ಟ ನಿರ್ಣಯಕ್ಕೆ ಬರಲಾರದೇ ಒದ್ದಾಡಿತು. ಸಮಯಸಾಧಕತನದ ಸುಳಿಯಲ್ಲಿ ಸಿಲುಕಿ ಯು-ಟರ್ನ್ ಹೊಡೆಯತೊಡಗಿತು. ಕೊನೆಯಲ್ಲಿ, ಅಳಿದುಳಿದ ಬೆಂಬಲವನ್ನಾದರೂ ಪಡೆದು ಪಾರಾಗೋಣ ಎಂದದು ಯೋಚಿಸಿತು. ಯುಪಿಎದ ವೈದ್ಯರು 8 ವಾರಗಳಲ್ಲಿ ಶಸ್ತ್ರಚಿಕಿತ್ಸೆಯ ಸಿದ್ಧತೆಯನ್ನು ನಡೆಸಿದರು. ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ನೇತೃತ್ವದ ಸಚಿವರುಗಳ ತಂಡ ಮತ್ತು ಆಂಧ್ರಪ್ರದೇಶದ ಮಾಜಿ ರಾಜ್ಯಪಾಲರು ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಕುಳಿತು ಮಾತನಾಡಿದರು. ಅಲ್ಲದೆ, ಕೇಂದ್ರ ಮತ್ತು ರಾಜ್ಯದ ಹಲವಾರು ಸಚಿವಾಲಯಗಳ ಅಧಿಕಾರಿಗಳನ್ನೂ ತಮ್ಮ ತಂಡದಲ್ಲಿ ಸೇರಿಸಿಕೊಂಡರು. ಕೊನೆಗೆ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ 'ಕರಡು ಮಸೂದೆ'ಯೊಂದನ್ನು ಸಂಸತ್ತಿನ ಮುಂದೆ ಅನುಮೋದನೆಗಾಗಿ ಇಟ್ಟಿತು.
ಚಿಕ್ಕರಾಜ್ಯಗಳ ರಚನೆಗಾಗಿ ಅನ್ಯ ರಾಜ್ಯಗಳಲ್ಲೂ ಕೂಗು ಹೆಚ್ಚಾಗಿದೆ. ಆದರೆ ಕಾರ್ಪೊರೇಟ್, ರಾಜಕೀಯ ವಲಯಗಳ ಬಲಿಷ್ಠ ಕೂಟ ಭಾರತವನ್ನು ಚಿಕ್ಕ ಚಿಕ್ಕ ರಾಜ್ಯಗಳ ಒಕ್ಕೂಟವನ್ನಾಗಿಸುವುದನ್ನು ತಡೆಯುತ್ತಿದೆ. ತೆಲಂಗಾಣ ರಾಜ್ಯ ರಚನೆಗಾಗಿ ಎಲ್ಲಿಲ್ಲದ ಆತುರ ತೋರುತ್ತಿರುವ ಕಾಂಗ್ರೆಸ್, ಇತರ ರಾಜ್ಯಗಳಿಂದ ಬರುತ್ತಿರುವ ಇದೇ ರೀತಿಯ ಒತ್ತಡಕ್ಕೆ ಮಣಿಯುತ್ತಿಲ್ಲ. ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿಯವರು, ಮೂರು ವರ್ಷದ ಹಿಂದೆಯೇ ತಮ್ಮ ರಾಜ್ಯವನ್ನು ನಾಲ್ಕು ಭಾಗಗಳಾಗಿ ಮಾಡಬೇಕು ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದರು. ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್, ಪ್ರತ್ಯೇಕ ಹರಿತ್ ಪ್ರದೇಶಕ್ಕಾಗಿ ಬೇಡಿಕೆಯಿಡುತ್ತಿದ್ದಾರಾದರೂ ಅವರ ಬೇಡಿಕೆಯಲ್ಲಿ ಹೆಚ್ಚು ಒತ್ತಡವಿದ್ದಂತೆ ಕಂಡುಬರುತ್ತಿಲ್ಲ. ಪಶ್ಚಿಮ ಬಂಗಾಳ, ಡಾರ್ಜಲಿಂಗ್‌ನ ಗುಡ್ಡಗಾಡು ಪ್ರದೇಶದ ಜನರು ಗೋರ್ಖಾಲ್ಯಾಂಡ್ ಸ್ಥಾಪನೆಗಾಗಿ ಅನೇಕ ವರ್ಷಗಳಿಂದ ಹೋರಾಟಮಾಡುತ್ತಿದ್ದಾರೆ. ವ್ಯಂಗ್ಯವೆಂದರೆ, ಕಡು ವೈರಿಗಳಾದ ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಐ(ಎಮ್) ಪಕ್ಷಗಳು ರಾಜ್ಯ ವಿಭಜನೆಯ ವಿರುದ್ಧ ಜೊತೆಯಾಗಿ ದನಿಯೆತ್ತುತ್ತಿವೆ. ಮಹಾರಾಷ್ಟ್ರದ ಯಾವೊಂದು ಪ್ರಬಲ ರಾಜಕೀಯ ಪಕ್ಷವೂ ಕೂಡ ವಿದರ್ಭ ರಚನೆಯ ಆಗ್ರಹದತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ.
ಹೊಸ ರಾಜ್ಯ ರಚನೆಗಾಗಿ ಕೂಗು ಹೆಚ್ಚುವುದಕ್ಕೆ ಕಾರಣ, ಆ ರಾಜ್ಯಗಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿವೆ ಎನ್ನುವ ಕಾರಣಕ್ಕೆ. ವಿದರ್ಭ ಮತ್ತು ತೆಲಂಗಾಣ ಪ್ರಾಂತಗಳು ದಶಕಗಳಿಂದ ಎಲ್ಲಾ ರೀತಿಯಲ್ಲೂ ಹಿಂದುಳಿದಿವೆ. ಆದರೆ ರಾಜಕೀಯ ನಾಯಕತ್ವಕ್ಕೆ ತನ್ನ ಹಿಡಿತದಲ್ಲಿರುವ ಪ್ರದೇಶಗಳನ್ನು ಕಳೆದುಕೊಳ್ಳುವ ಮನಸ್ಸಿಲ್ಲ. ಹಾಗಾಗೇ ಅವುಗಳು ಅಭಿಪ್ರಾಯ ನಿರೂಪಕರು, ದಪ್ಪ ಮಂಡೆಯ ಕಾರ್ಪೊರೇಟರ್‌ಗಳು ಮತ್ತು ಸಾಮಾಜಿಕ ಸಂಘಟನೆಗಳ ಬೆಂಬಲ ಪಡೆದು ರಾಜ್ಯ ವಿಭಜನೆಯನ್ನು ತಡೆಹಿಡಿಯುವ ಪ್ರಯತ್ನ ಮಾಡುತ್ತಿವೆ. ಉದಾಹರಣೆಗೆ, ತೆಲಂಗಾಣ ರಾಜ್ಯ ರಚನೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿರುವುದು ಹೈದ್ರಾಬಾದ್ ಮೂಲದ ಇಂಡಿಯಾ ಇಂಕ್ ಎನ್ನುವ ವಲಯದಿಂದ. ಅದರಲ್ಲಿ ಒಂದು ಡಜನ್‌ಗೂ ಹೆಚ್ಚಿನ 'ಪ್ರಭಾವಿ' ಕುಟುಂಬಗಳು 70 ಪ್ರತಿಶತದಷ್ಟು ಸ್ವತ್ತು ಹೊಂದಿವೆ. ಆ ಕುಟುಂಬಗಳು ಹೇಳಿದಂತೆ ಕೇಳುವವರೇ ಇಂದು ರಾಜಕೀಯ ಮತ್ತು ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ವಿದರ್ಭ ಸೃಷ್ಟಿಯಾದರೆ, ಅಲ್ಲಿ ತಮ್ಮ ಪ್ರಭಾವ ಬೀರಲು ಸಾಧ್ಯವಾಗುವುದಿಲ್ಲವೆಂಬ ಭಯ ಮುಂಬೈನ ಬುದ್ಧಿಜೀವಿಗಳ ವಲಯಕ್ಕಿದೆ. ಇನ್ನು, ಉತ್ತರಪ್ರದೇಶದ ವಿಷಯಕ್ಕೆ ಬಂದರೆ, ಪಶ್ಚಿಮ ಮತ್ತು ಪೂರ್ವ ಉತ್ತರಪ್ರದೇಶದಲ್ಲಿ ಯಾದವರ ಪ್ರಾಬಲ್ಯ ಕಡಿಮೆ ಇರುವುದರಿಂದ, ಅವರೆಲ್ಲ ಹೊಸ ರಾಜ್ಯ ರಚನೆಯನ್ನು ವಿರೋಧಿಸುತ್ತಾರೆ. ಮೇಲ್ವರ್ಗದ ಬೆಂಬಲವಿರುವ ಬಿಜೆಪಿಯೂ ಕೂಡ ಉತ್ತರ ಪ್ರದೇಶ ನಾಲ್ಕು ಭಾಗವಾದರೆ ತನ್ನ ಶಕ್ತಿ ಕುಗ್ಗುತ್ತದೆ ಎಂದು ಭಾವಿಸುತ್ತದೆ. ಮಾರುಕಟ್ಟೆ ಅರ್ಥವ್ಯವಸ್ಥೆಯನ್ನು ಅನುಸರಿಸುವ ಯುಪಿಎ ಸರ್ಕಾರ, ಅಮೆರಿಕದಂತೆ ಚಿಕ್ಕ ಚಿಕ್ಕ ರಾಜ್ಯಗಳನ್ನು ರಚಿಸಲು ಮುಂದಾಗದಿರುವುದು ಆಶ್ಚರ್ಯದ ಸಂಗತಿಯೇ. ರಾಜ್ಯ ಪುನರ್ವಿಂಗಡಣಾ ಆಯೋಗದ ರಚನೆಯನ್ನು ನೇಮಕ ಮಾಡಲು ಯುಪಿಎ ಸರ್ಕಾರ ಹಿಂದೇಟು ಹಾಕುತ್ತಿರುವುದರ ಹಿಂದೆಯೂ 'ಸ್ವಹಿತಾಸಕ್ತಿ'ಯದ್ದೇ ಆಟವಿದೆ. ಅಭಿವೃದ್ಧಿ ಸೂಚಕದ ಅಡಿಯಲ್ಲಿ ರಾಜ್ಯಗಳನ್ನು ವಿಭಜಿಸುವುದು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಉತ್ತಮ ನಡೆ ಎಂದೆನಿಸಿಕೊಳ್ಳುತ್ತದೆ. ಒಂದು ವೇಳೆ ಕಾಂಗ್ರೆಸ್ ತನ್ನ ಮೂಲ ಸಿದ್ಧಾಂತವಾದ 'ಒಡೆದು ಆಳುವ' ನೀತಿಯನ್ನು ಅನುಸರಿಸಿಯೇ ತೀರುತ್ತದೆಂದರೆ, ಅದು ಯಾವುದೇ ಪಕ್ಷಪಾತವಿಲ್ಲದೆ ಈ ಕೆಲಸವನ್ನು ಮಾಡಬೇಕು. ಜಾತಿ ಅಥವಾ ಭಾಷೆಯ ಆಧಾರದ ಮೇಲಲ್ಲದೆ, ಕೇವಲ ಆರ್ಥಿಕ ಕಾರಣಗಳಿಗಾಗಿ ಭಾರತವನ್ನು 50 ರಾಜ್ಯಗಳ ರಾಷ್ಟ್ರವನ್ನಾಗಿ ಮಾಡಿದರೆ, ನಿಸ್ಸಂಶಯವಾಗಿಯೂ ಮುಂದಿನ ದಿನಗಳಲ್ಲಿ ಭಾರತ ಪ್ರಜ್ವಲಿಸುತ್ತದೆ.

- ಪ್ರಭು ಚಾವ್ಲಾ
ಸಂಪಾದಕೀಯ ನಿರ್ದೇಶಕರು,
ನ್ಯೂ ಇಂಡಿಯನ್ ಎಕ್ಸಪ್ರೆಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement