ಯಾರ್ರೀ ಅದು ಧಾರಾವಾಹಿ ಕೇಳಿದ್ದು?
ಬಸ್ಸಿನಲ್ಲಿ ಕೂತು, ಪೇಪರ್ ಬಿಡಿಸಿ ಓದುವಷ್ಟರಲ್ಲೇ "ಸ್ವಲ್ಪ ಒಳಗಿನ ಪೇಜು ಕೊಡ್ತೀರಾ?" ಎಂಬ ಬಿಟ್ಟಿ ಕನ್ನಡಿಗನ ಅಶರೀರವಾಣಿ ಕಿವಿಗೆ ಅಪ್ಪಳಿಸುತ್ತದೆ. ಒಲ್ಲದ ಮನಸ್ಸಿನಿಂದಲೇ ಪೇಪರ್ ದಾಟಿಸಬೇಕಾಗ್ತದೆ. ಸ್ವಲ್ಪ ಹೊತ್ತಾದ ನಂತರ, ಕೆದರಿದ ತಲೆಕೂದಲು, ಅರ್ಧಂಬರ್ಧ ಹರಿದ ಶರ್ಟು, ಮಸಿ ಬಳಿದಂತಿರುವ ಹುಚ್ಚು ಕಳೆಯ ಮುಖ, ಹೆಚ್ಚು ಕಡಿಮೆ ಈಗಿನ ನಮ್ಮ ಕನ್ನಡದ ಸಿನಿಮಾ ಹೀರೋಗಳಂತೆ, ಲೂಸು ಲೂಸಾಗಿ ನಾಟ್ಯವಾಡುತ್ತಾ ನನ್ನ ಪೇಪರ್ ನನ್ನ ಬಳಿ ಬರ್ತದೆ. ಅದರ ಆಕಾರ ನೋಡಿದಾಗ ಎದೆಯೊಡೆಯುವುದೊಂದೇ ಬಾಕಿ. ಸುಮ್ಮನೇ ಕೂರುವಂತಿಲ್ಲ. ಪಕ್ಕದಲ್ಲೇ ಕೂತ ಬಸ್ಸು ಬಾಂಧವರು, ತಮ್ಮ ವಿಪರೀತ ಕೊರೆತದಿಂದಾಗಿ ನಮ್ಮ ತಲೆಯೊಳಗೇ ಕೈ ಹಾಕಿ, ನಮ್ಮ ಮೆದುಳನ್ನೇ ಪೂರ್ತಿ ಹೊರತೆಗೆದ ಸಾಮರ್ಥ್ಯವಿರುವ ಗಟ್ಟಿಗರು. ಸದ್ಯ, ಈಗ 'ಖುಷಿ'ಯನ್ನು ಮುಖಕ್ಕೆ ಅಡ್ಡವಿಟ್ಟು ಖುಷಿಯಿಂದಲೇ ಓದಲಾರಂಭಿಸಿದರೆ ನಾವೂ ನಮ್ಮ ಮೆದುಳು, ನಮ್ಮ ಪೇಪರೂ ಎಲ್ಲವೂ ಸೇಫ್. ಓದುಗರಿಗೆ ಖುಷಿಯಾಯ್ತೆಂದು ತಿಳಿದು, ಖುಷಿಯಿಂದಲೇ 5 ರೂ. ಮಾಡಿಬಿಡ್ಬೇಡಿ. ಸದ್ಯಕ್ಕೆ 4 ರೂ. ಇರಲಿ. ಹೊಸ ಪ್ರಯೋಗ ಖುಷಿ ಕೊಟ್ಟರೆ, ಖಂಡಿತವಾಗಿಯೂ 5 ರೂ. ಕೊಡ್ತೇವೆ. ಹೊಸ ಪ್ರಯೋಗಕ್ಕೆ ಹಾರ್ದಿಕ ಶುಭ ಹಾರೈಕೆಗಳು.
-ಜಯಶ್ರೀ ಕೆ. ಮೈಸೂರು
ಭಾನುವಾರದ 'ಖುಷಿ' ಕಂಡೊಡನೆ ಖುಷಿಯಾಯಿತು. ಕೆಲ ಓದುಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಆದರೆ ಕೆಲವರು ಖುಷಿಯಲ್ಲೂ ಧಾರಾವಾಹಿಗಳನ್ನು ಪ್ರಕಟಿಸಿ ಎಂಬ ಸಲಹೆ ಕೊಟ್ಟಿದ್ದಾರೆ. ದಯವಿಟ್ಟು ಅಂಥ ತಪ್ಪನ್ನು ಮಾಡಬೇಡಿ. ವಾರವಿಡೀ ಮನೆಯಲ್ಲಿ ಟಿವಿಯಲ್ಲಿ ಬರುವ ಧಾರಾವಾಹಿಗಳದ್ದೇ ಅಬ್ಬರ. ಅದರಲ್ಲೂ ಈ ಖುಷಿಯಲ್ಲೂ ನೀವು ಧಾರಾವಾಹಿ ಪ್ರಕಟಿಸಿದರೆ, ನಮ್ಮ ಪರಿಸ್ಥಿತಿ ಹೇಳತೀರದು. ಆದರೆ ಸಂಕಟ ಏನು ಎಂದು ನೀವು ಅನುಭವಿಸಿದರೆ ಗೊತ್ತಾಗುತ್ತೆ. 'ಖುಷಿ'ಯಲ್ಲಿ ಜೋಕ್ಸ್, ಉತ್ತಮವಾದ ಲೇಖನ, ಕವನ, ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಣ್ಣ ಲೇಖನ ಹಾಗೆ ಹೆಸರಾಂತ ವ್ಯಕ್ತಿಗಳ ಪರಿಚಯ, ಮುಖ್ಯವಾಗಿ ಹಾಸ್ಯ ವಿಡಂಬನೆ, ಹೆಚ್ಚಾಗಿರಲಿ.
-ಓಂ. ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ. ಮೊ. 990073 9725
ಡಿಸೆಂಬರ್ 8ರ ಸಂಚಿಕೆಯಲ್ಲಿ ಪ್ರಣತಿಯವರು ಬರೆದ 'ಪ್ರೀತಿ ಪ್ರೇಮ ಪ್ರಣತಿ' ನಿಜಕ್ಕೂ ತುಂಬಾ ಚೆನ್ನಾಗಿ ನಮ್ಮ ಹಳೆಯ ನೆನಪುಗಳನ್ನು ನೆನಪಿಸಿದೆ. ಡಿಸೆಂಬರ್ ಚಳಿಯಲ್ಲಿ ಹಳ್ಳಿಗಳಲ್ಲಿ ನೀರೊಲೆಯ ಮುಂದೆ ಕೈ ಕಾಯಿಸಿಕೊಳ್ಳುವುದನ್ನು ತುಂಬಾ ನೈಜವಾಗಿ ಚಿತ್ರಿಸಿದ್ದಾರೆ. ಖಂಡಿತ ಅವರು ಹಳ್ಳಿಗಳಲ್ಲಿಯವರ ಬಾಲ್ಯವನ್ನು ನಮ್ಮ ಕಣ್ಣ ಮುಂದೆ ಎಳೆಎಳೆಯಾಗಿ ಬಿಚ್ಚುತ್ತಾ ಹಳೆಯ ನೆನಪುಗಳು ಮರುಕಳಿಸುವಂತೆ ಮಾಡಿದ್ದಾರೆ. ಅವರು ಹೇಳಿದ ಹಲಸಿನ ಬೀಜದ ಘಟನೆಯು ನನ್ನಿಂದಲೇ ನಡೆದು ಮನೆಯವರೆಲ್ಲರಿಂದ ಬೈಸಿಕೊಂಡದ್ದು ಇದನ್ನು ಓದುತ್ತಿದ್ದಂತೆ ನೆನಪಾಗಿ ನಗು ಬಂತು. ಇಷ್ಟು ಸುಂದರವಾಗಿ ಬರೆದ ಪ್ರಣತಿಯವರಿಗೆ ವಂದನೆಗಳು.
-ಡಿ. ಗುರುಮಲ್ಲಪ್ಪ, ದೊಡ್ಡಪುರ, ತಾಳವಾಡಿಪಿರ್ಕ
ಡಿಸೆಂಬರ್ 9ರ ಕ.ಪ್ರ.ದ ಮುಖಪುಟ ನಿಜಕ್ಕೂ ಅತ್ಯುತ್ತಮ ವಿನ್ಯಾಸ, ಶೀರ್ಷಿಕೆ, ಸುದ್ದಿ ನಿರ್ವಹಣೆಯಿಂದ ಕೂಡಿದ್ದು ಮನಸೆಳೆಯಿತು. ಹಿಂದಿನಿಂದಲೂ ಏನೇನು ಮಾಡ್ತೀವಿ ನೋಡ್ತಾ ಇರಿ ಎಂದು ಬೀಗುತ್ತಿದ್ದ ನೀವು ನಿಜವಾಗಲೂ ದಿನಪತ್ರಿಕೆಯೊಂದು ಏನೆಲ್ಲಾ ಮಾಡಬಹುದು ಎಂದು ತೋರಿಸಿದ್ದೀರಿ. ನೋಡಲು ಅಂದ ಓದಲು ಮುದ ಮುಂದೆಯೂ ಹೀಗೇ ಬರುತ್ತಿರಲಿ ಕನ್ನಡಪ್ರಭದ ಚೆಂದ. ಭಾನುವಾರ ಬಂದ 'ಖುಷಿ' ನಿಜಕ್ಕೂ ಖುಷಿ ತಂದಿತು. ಆಡಿದ್ದನ್ನು ಮಾಡಿ ತೋರಿಸಿದ್ದೀರಿ.
-ಸಿ. ದಿನಮಣಿರಾವ್, ನಂ. 17, ಕುವೆಂಪುನಗರ, ಮೈಸೂರು.
ಇತ್ತೀಚೆಗೆ ಕನ್ನಡಪ್ರಭ ತುಂಬಾ ಚೆನ್ನಾಗಿ ಬರುತ್ತಿರುವುದಕ್ಕೆ ಅಭಿನಂದನೆಗಳು. ಮುಖಪುಟ ವಿನ್ಯಾಸ, ಹೆಡ್ಡಿಂಗ್, ಒಳಪುಟಗಳ ವರದಿಗಳೆಲ್ಲ ಚೆನ್ನಾಗಿ ಬರುತಿವೆ. ಸಂಪಾದಕೀಯವಂತೂ ಚಿನ್ನ. ತಾವು ಇತ್ತೀಚೆಗೆ ದನಿಯೆತ್ತಿದ 'ಶಾದಿಭಾಗ್ಯ' ಹಾಗೂ 'ಅಹಿಂದ ಮಕ್ಕಳ ಪ್ರವಾಸ'ದ ವಿಷಯಗಳು ತುಂಬ ಸಾಂದರ್ಭಿಕ ಹಾಗೂ ಸಮಯೋಚಿತವಾದವು. ತಮ್ಮ ವರದಿಗಳು ಹಾಗೂ ಓದುಗರ ಅನಿಸಿಕೆಗಳಿಗೆ ಸರ್ಕಾರ ಮಣಿಯಲೇಬೇಕಾಗಿದ್ದು ತುಂಬ ಒಳ್ಳೆಯದಾಯಿತು.
-ಅರುಣ್ ಆರ್., ಹಲಗೂರು. ಮಳವಳ್ಳಿ ತಾ.,ಮಂಡ್ಯ ಜಿಲ್ಲೆ.
ಕನ್ನಡಪ್ರಭದ ಜನಪ್ರಿಯ ಅಂಕಣ 'ಭಾವತೀರಯಾನ' ದ ನನ್ನ ಮೆಚ್ಚಿನ ಅಂಕಣಕಾರರಾದ ಎ.ಆರ್. ಮಣಿಕಾಂತ್ ರವರಿಗೆ "ಅವ್ವ" ಪ್ರಶಸ್ತಿಯ ಗೌರವ ಸಂದಿರುವುದು ಅವರ ಅಭಿಮಾನಿಯಾದ ನನಗೆ ತುಂಬಾ ಸಂತಸ ತಂದಿದೆ. ಕನ್ನಡಪ್ರಭ ಓದುಗರಿಗೆ ಸ್ಫೂರ್ತಿ ಆಗಬಲ್ಲ ಬಹಳ ಅಪರೂಪದ ಸತ್ಯ ಘಟನೆಗಳನ್ನು, ತಮ್ಮ ಅಂಕಣದಲ್ಲಿ ಪ್ರಸ್ತುತ ಪಡಿಸುವ ಎ.ಆರ್. ಮಣಿಕಾಂತ್‌ರವರಿಗೆ ಎಲ್ಲಾ ಕನ್ನಡಪ್ರಭ ಓದುಗರ ಪರವಾಗಿ ಅಭಿನಂದನೆಗಳು.
-ಶ್ರೀಮತಿ ಗೌರಿ ಅಶೋಕ,
ಬಾಗಲಕೋಟ, ಮೊ. 9945 209605
ನೀವು ಏನ್‌ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!
ನಿಮ್ಮ ಅನಿಸಿಕೆಗಳನ್ನು ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.