ಪ್ರತಿದಿನವೂ ನಾನು ಆಲೂಗಡ್ಡೆ ಹೊಲದಲ್ಲಿ, ನೆಟ್ಟ ಬೀಜ ಮೊಳಕೆಯೊಡೆಯಿತಾ, ಸಸಿ ಎಷ್ಟು ದೊಡ್ಡದಾಯಿತು ಎಂದು ನೋಡುತ್ತಿದ್ದೆ. ಅದು ದಿನದಿಂದ ದಿನ ಬೆಳೆದಂತೆಲ್ಲ ಖುಷಿಯಾಗುತ್ತಿತ್ತು. ಭೂಮಿಯೊಳಗೆ ಆಲೂಗಡ್ಡೆ ಎಷ್ಟು ದೊಡ್ಡ ಬೆಳೆದಿರಬಹುದು ಎಂಬ ಕಲ್ಪನೆಯೇ ನನ್ನಲ್ಲಿ ಒಂದು ರೀತಿಯ ಪುಳಕವನ್ನುಂಟು ಮಾಡುತ್ತಿತ್ತು.
ಮೊನ್ನೆ ಶಿರಸಿಯಿಂದ ಬೆಂಗಳೂರಿಗೆ ಬರುವಾಗ ಅಕ್ಕಿಆಲೂರ ಸಮೀಪದ ಘಾಳಪುಜಿ ಎಂಬ ಸಣ್ಣ ಊರಿನಲ್ಲಿ ಕಾರು ನಿಲ್ಲಿಸಿ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ ಎಂಬ ರೈತನೊಂದಿಗೆ ಲೋಕಾಭಿರಾಮ ಮಾತಾಡುತ್ತಿದ್ದೆ. ಮಳೆ, ಚಳಿ, ಕೂಲಿ ಸಮಸ್ಯೆ, ಬೆಲೆ, ರಸ್ತೆ, ರಾಜಕೀಯ, ಗೊಬ್ಬರ, ಬೀಜ...ಹೀಗೆ ಹಲವಾರು ವಿಷಯಗಳು ನಮ್ಮಿಬ್ಬರ ನಡುವೆ ವಿನಿಮಯವಾದವು. ಬಸಪ್ಪ ಸೂಕ್ಷ್ಮ ಸ್ವಭಾವದ ರೈತ ಎಂಬುದು ಆತನ ಮಾತಿನಿಂದ ಗೊತ್ತಾಯಿತು. ಮಾತುಮಾತಿಗೆ ಗಾದೆಗಳು, ನಾಣ್ಣುಡಿಗಳು ಉದುರುತ್ತಿದ್ದವು. ಕೃಷಿ ಸಂಬಂಧಿ ಹೋಲಿಕೆಗಳೇ ಇಣುಕುತ್ತಿದ್ದವು. ದೂರದಲ್ಲಿ ಅವನ ಎರಡು ಜೊತೆ ಎತ್ತುಗಳು ದಣಿವಾರಿಸಿಕೊಳ್ಳುತ್ತಿದ್ದವು. ಹೆಂಡತಿ ಕಂಬಳಿ ಹಾಸಿ ಗಂಡನಿಗೆ ಮನೆಯಿಂದ ತಂದ ಬುತ್ತಿಯನ್ನು ಬಿಚ್ಚುತ್ತಿದ್ದಳು. ಹದಿನೈದು ನಿಮಿಷಗಳ ಮಾತುಕತೆ ನಮ್ಮಿಬ್ಬರ ನಡುವೆ ಅಪರಿಚಿತ ಭಾವವನ್ನು ಸರಿಸಿ ಆತ್ಮೀಯತೆಯ ಚಾದರ ಹಾಸಿತ್ತು. 'ಭೇಟಿಯಾಗಿ ಮಾತಾಡುವ ಮೊದಲು ಎಲ್ಲರೂ ಅಪರಿಚಿತರೇ ಅಂತಾರಲ್ಲ ಸ್ವಾಮೀ, ಭಾಳ ಕರೆಕ್ಟ್ ಮಾತು' ಅಂದ ಬಸಪ್ಪ.
ಒಂದು ಕಾಲಕ್ಕೆ ಆಲೂಗಡ್ಡೆ ಬೆಳೆಯುತ್ತಿದ್ದ ಬಸಪ್ಪ, ಈಗ ಜೋಳ, ಕಬ್ಬು, ಭತ್ತ, ಬಾಳೆ ಬೆಳೆಯುತ್ತಿದ್ದಾನೆ. ಕೃಷಿ ಬದುಕು ಅವನನ್ನು ಮನುಷ್ಯನನ್ನಾಗಿ ಮಾಡಿದೆ. ಬದುಕಿನ ಪಾಠಗಳನ್ನು ಹೇಳಿಕೊಟ್ಟಿದೆ. 'ಭೂಮ್ತಾಯಿ ಜತೆಗೆ ನಿತ್ಯ ಬದುಕುವ ನಾವೇ ಪುಣ್ಯವಂತರು ಸ್ವಾಮಿ. ಈ ಭಾಗ್ಯ ನಮಗೆ ಇರಲಿ.' ಎಂದ ಬಸಪ್ಪ. ಅವನ ಪ್ರಾಮಾಣಿಕತೆ, ಸಹಜಭಾವ ಇಷ್ಟವಾಯಿತು.
ಮಾತಿನ ಮಧ್ಯೆ ಬಸಪ್ಪ ಒಂದು ಪ್ರಸಂಗವನ್ನು ಪ್ರಸ್ತಾಪಿಸಿದ. ಅದನ್ನು ಅವನ ಮಾತುಗಳಲ್ಲೇ ಕೇಳೋಣ.
ನಾನು ಚಿಕ್ಕವನಿದ್ದಾಗ ನಮ್ಮ ಹೊಲದಲ್ಲಿ ಆಲೂಗಡ್ಡೆ ಬೆಳೆಯುತ್ತಿದ್ದೆವು. ನಮ್ಮ ಇಡೀ ಕುಟುಂಬವೇ ಆಲೂಗಡ್ಡೆ ಬೆಳೆಯುವ ಕೈಂಕರ್ಯದಲ್ಲಿ ತೊಡಗಿರುತ್ತಿದ್ದೆವು. ನಮ್ಮಪ್ಪ ಭೂಮಿಯನ್ನು ಹದಗೊಳಿಸುತ್ತಿದ್ದ. ನಮ್ಮ ತಾಯಿ ನೀಟಾಗಿ ಪಾತಿಯನ್ನು ಮಾಡುತ್ತಿದ್ದಳು. ನನ್ನ ಅಣ್ಣ ಸಗಣಿ ಗೊಬ್ಬರ ಹಾಕುತ್ತಿದ್ದ. ನಾನು ಬೀಜವನ್ನು ನೆಡುತ್ತಿದ್ದೆ. ನನ್ನ ಮತ್ತೊಬ್ಬ ಅಣ್ಣ ನೀರನ್ನು ಸಿಂಪಡಿಸುತ್ತಾ ಬರುತ್ತಿದ್ದ. ಅದಾದ ಬಳಿಕ ವಾರವಿಡೀ ಹೊಲಕ್ಕೆ ಬೇಲಿ ಹಾಕುವ ಕೆಲಸ. ನಂತರ ಪ್ರತಿದಿನ ಹೊಲಕ್ಕೆ ನೀರುಣಿಸುವ ಕೆಲಸ. ಅಣ್ಣಂದಿರೊಂದಿಗೆ ಉತ್ಸಾಹದಿಂದ ನಾನು ನೀರುಣಿಸಲು ಹೋಗುತ್ತಿದ್ದೆ. ನನ್ನಲ್ಲಿ ಕುಟುಂಬದ ಮಹತ್ವ, ಕಾಯಕದ ಕಲ್ಪನೆ ಮೂಡಿದ್ದೇ ಆಗ. ನಾವು ಹೊಲದ ಕೆಲಸ ಮಾಡಿ ದಣಿದು ಕುಳಿತಾಗ, ಅವ್ವ ಮನೆಯಿಂದ ಅಡುಗೆ ಮಾಡಿಕೊಂಡು ಬುತ್ತಿಕಟ್ಟಿಕೊಂಡು ಬರುತ್ತಿದ್ದಳು. ಮರದ ನೆರಳಿನಲ್ಲಿ ಕುಳಿತು ಒಟ್ಟಿಗೆ ಕಲೆತು ಊಟ ಮಾಡುತ್ತಿದ್ದೆವು. ಒಂದು ಗಂಟೆ ವಿಶ್ರಾಂತಿ ನಂತರ ಪುನಃ ಕೆಲಸ. ಸಾಯಂಕಾಲ ಆರು ಗಂಟೆಯವರೆಗೆ ದುಡಿದರೂ ದಣಿವಾಗಿದ್ದು ಗೊತ್ತಾಗುತ್ತಿರಲಿಲ್ಲ.
ಪ್ರತಿದಿನವೂ ನಾನು ಆಲೂಗಡ್ಡೆ ಹೊಲದಲ್ಲಿ, ನೆಟ್ಟ ಬೀಜ ಮೊಳಕೆಯೊಡೆಯಿತಾ, ಸಸಿ ಎಷ್ಟು ದೊಡ್ಡದಾಯಿತು ಎಂದು ನೋಡುತ್ತಿದ್ದೆ. ಅದು ದಿನದಿಂದ ದಿನ ಬೆಳೆದಂತೆಲ್ಲ ಖುಷಿಯಾಗುತ್ತಿತ್ತು. ಭೂಮಿಯೊಳಗೆ ಆಲೂಗಡ್ಡೆ ಎಷ್ಟು ದೊಡ್ಡ ಬೆಳೆದಿರಬಹುದು ಎಂಬ ಕಲ್ಪನೆಯೇ ನನ್ನಲ್ಲಿ ಒಂದು ರೀತಿಯ ಪುಳಕವನ್ನುಂಟು ಮಾಡುತ್ತಿತ್ತು.
ಆ ದಿನ ಹತ್ತಿರ ಸಮೀಪಿಸಿತು. ನಾನು, ನನ್ನ ಅಣ್ಣಂದಿರೊಂದಿಗೆ ಆಲೂಗಡ್ಡೆ ಸಸಿಯನ್ನು ಕೀಳುತ್ತಿದ್ದರೆ, ಭೂಮಿಯಿಂದ ಗಡ್ಡೆ ಮೇಲಕ್ಕೆ ಬಂದಾಗ ಮಹಾದಾನಂದ. ಅಷ್ಟು ದಿನಗಳ ಕಾಲ ಭೂಮಿಯಲ್ಲಿ ಹೂತಿಟ್ಟ ಕೌತುಕ, ನಿರೀಕ್ಷೆ, ಕನಸುಗಳನ್ನು ಹೊರತೆಗೆದಾಗ ಆಗುವ ಸಂತಸವೇನೆಂಬುದು ಮತ್ತೊಬ್ಬ ರೈತನಿಗೆ ಅರ್ಥವಾದೀತು. ತಾಯಿ ಮನಸ್ಸು ಅಂದ್ರೆ ಏನೆಂಬುದನ್ನು ಕಲ್ಪಿಸಿಕೊಳ್ಳುವವನಿಗೆ, ಅರ್ಥಮಾಡಿಕೊಳ್ಳುವವನಿಗೆ ಅದು ತಿಳಿದೀತು. ನಾವು ಬೆಳೆದ ಆಲೂಗಡ್ಡೆಯನ್ನು ಪೇಟೆಗೆ ತೆಗೆದುಕೊಂಡು ಹೋಗಿ ಮಾರುವಾಗ ನನಗೆ ಒಳಗೊಳಗೆ ಸಂಕಟವಾಗುತ್ತಿತ್ತು. ಆದರೆ ಅದನ್ನು ಖರೀದಿಸಿದವರು ತಮಗೆ ಬೇಕಾದ ವಿವಿಧ ತಿಂಡಿ, ಖಾದ್ಯ ಮಾಡಿ ಸೇವಿಸುವುದನ್ನು ನೆನೆದು ಸಾರ್ಥಕ ಭಾವ ಮೂಡುತ್ತಿತ್ತು. ಜೀವನ ಧನ್ಯತೆ ನನ್ನೊಳಗೆ ಆವರಿಸಿಕೊಳ್ಳುತ್ತಿತ್ತು. ಅಂದಿನಿಂದ ಇಲ್ಲಿಯತನಕ ನಾನು ಕೃಷಿಯಲ್ಲಿ ತೊಡಗಿರುವುದಕ್ಕೆ ಈ 'ಜೀವನಸ್ಫೂರ್ತಿ'ಯೇ ಪ್ರೇರಣೆ. ನಾನು ನೆಡುವ ಒಂದು ಬೀಜ ಮೂಡಿಸುವ ಅಚ್ಚರಿಯನ್ನು ಹೇಳಲಾಗದು. ನೀವು ಪ್ರತಿಸಲ ಆಲೂಗಡ್ಡೆಯನ್ನು ಸೇವಿಸುವಾಗ ನಾನು ಹೇಳಿದ್ದನ್ನು ನೆನಪಿಸಿಕೊಂಡರೆ, ಅದರ ರುಚಿಯನ್ನು ಇನ್ನಷ್ಟು ಗಾಢವಾಗಿ ಆಸ್ವಾದಿಸಬಹುದು.
ಬಸಪ್ಪನ ಮಾತುಗಳನ್ನೇ ಕೇಳುತ್ತಿದ್ದೆ.
'ಗರ್ಭಧರಿಸಿದ ಅವಧಿಯಲ್ಲಿ ತಾಯಿಯಾಗುವವಳು ಏನು ಯೋಚಿಸುತ್ತಾಳೋ, ಅದು ಹುಟ್ಟಲಿರುವ, ಮಗುವಿನ ಮೇಲೆ ಪ್ರಭಾವ ಬೀರುತ್ತದೆ ಅಂತಾರಲ್ಲ, ಈ ಮಾತು ನಾವು ನೆಡುವ ಬೀಜಕ್ಕೂ ಅನ್ವಯಿಸುತ್ತದಾ?' ಎಂದು ಕೇಳಿದ ಬಸಪ್ಪ.
ಬೆಂಗಳೂರು ತಲುಪುವ ತನಕವೂ ಬಸಪ್ಪನ ಮಾತುಗಳು ಪದೇ ಪದೆ ನೆನಪಾದವು.
ಅತಿ ಉದ್ದದ ಹೆಸರಿನ ಊರು
ಈ ಅಂಕಣದಲ್ಲಿ ಅತಿ ಉದ್ದ ಹೆಸರಿರುವ ವ್ಯಕ್ತಿಗಳ ಬಗ್ಗೆ ಬರೆದಿದ್ದು ನಿಮಗೆ ನೆನಪಿರಬಹುದು. ಅತಿ ಉದ್ದನೆಯ ಹೆಸರಿನ ಊರು ಯಾವುದಿಬಹುದೆಂಬ ಜಿಜ್ಞಾಸೆ ಬಹಳ ದಿನಗಳಿಂದ ಇತ್ತು. ಔ್ಟಟಿಜಟಣ ಕಿಟಛಟಿಜಡಿ ಪತ್ರಿಕೆಯನ್ನು ಓದುವಾಗ ಆ ಊರು ಸಿಕ್ಕಿತು. ತಮಾಷೆಯ ಸಂಗತಿಯೇನೆಂದರೆ ಆ ಊರಿನ ಹೆಸರನ್ನ ಉಚ್ಚರಿಸುವುದು ತೀರಾ ಕಷ್ಟ. ಆ ಊರಿನ ಜನ ಹೇಗೆ ಉಚ್ಚರಿಸುತ್ತಾರೋ ಗೊತ್ತಿಲ್ಲ. ಏಕೆಂದರೆ ಈ ಊರಿನ ಹೆಸರಿನಲ್ಲಿ 85 ಅಕ್ಷರಗಳಿವೆ.Taumatawhakatangihangakoauauotamateaturipukakapikimaungahoronukupokaiwhenuakitanatahu ಆ ಹೆಸರನ್ನು ನೆನಪಿಟ್ಟುಕೊಳ್ಳುವುದು, ಸ್ಪೆಲಿಂಗ್ ದೋಷವಿಲ್ಲದೆ ಬರೆಯುವುದು ಸವಾಲೇ ಸರಿ. ಈ ಊರಿಗೆ ಶಾರ್ಟ್ ಫಾರ್ಮ್ (ಸಂಕ್ಷಿಪ್ತರೂಪ) ಬೇರೆ ಇದೆ. ಅದನ್ನು ಬರೆದರೆ 57 ಅಕ್ಷರಗಳಷ್ಟು ಉದ್ದವಾಗುತ್ತದೆ. ಅಂದ ಹಾಗೆ ಈ ಊರು ನ್ಯೂಜಿಲ್ಯಾಂಡ್‌ನ ನಾರ್ತ್ ಐಲ್ಯಾಂಡ್‌ನಲ್ಲಿದೆ. ಮಾವೋರಿ ಭಾಷೆಯಲ್ಲಿರುವ ಈ ಊರನ್ನು ಅತ್ಯಂತ ಚುಟುಕಾಗಿ ಟೌಮಟ (Taumata) ಎಂದು ಕರೆಯುತ್ತಾರೆ. ಆದರೆ ಈ ಊರಿನ ಮೂಲ ನಿವಾಸಿಗಳು ಈ ಸಂಕ್ಷಿಪ್ತ ರೂಪವನ್ನು ಒಪ್ಪುವುದಿಲ್ಲ. "ನಮಗೆ 85 ಅಕ್ಷರಗಳುಳ್ಳ ಮೂಲ ಹೆಸರೇ ಬೇಕು. ನಮ್ಮ ಊರಿನ ಹೆಸರನ್ನು ಬದಲಿಸಿದರೆ ಸ್ವಂತಿಕೆ ನಾಶವಾಗುತ್ತದೆ. ಮೂಲಗುಣ ಹೊರಟು ಹೋಗುತ್ತದೆ." ಎಂದು ಗಲಾಟೆ ಮಾಡುತ್ತಿದ್ದಾರೆ. ಆದರೆ ಈ ಹೆಸರು ಸೃಷ್ಟಿಸುತ್ತಿರುವ ಆವಾಂತರ ಒಂದೆರಡಲ್ಲ. ಆದರೂ ಈ ಊರಿನ ಜನ ಕೇಳುತ್ತಿಲ್ಲ.
ಆ ಊರಿನ ಹೆಸರನ್ನು ಬರೆಯುವಷ್ಟರಲ್ಲಿ ಅಲ್ಲಿಗೆ ಹೋಗಬಹುದು ಎಂಬುದು ಆ ಊರಿನ ಬಗೆಗಿರುವ ಹಳೆಯ ಜೋಕು. ಅಲ್ಲಿಗೆ ಹೋಗುವುದು ಕಷ್ಟವಲ್ಲ. ಆದರೆ ಎಲ್ಲಿಗೆ ಹೋಗಿ ಬಂದೆ ಎಂದು ಕೇಳಿದರೆ ಏನೆಂದು ಹೇಳುವುದು?
ಯಾರನ್ನು ಮರೆತು ಬರಬಹುದು?
ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನ ಗ್ರ್ಯಾಂಡ್ ಡ್ಯಾಡಿ ಹೋಟೆಲ್‌ನಲ್ಲಿ ಪರ್ಸು, ಹಣ ಹಾಗೂ ಪಾಸ್‌ಪೋರ್ಟನ್ನು ಮರೆತು ಅಲ್ಲಿಯೇ ಬಿಟ್ಟು ಬಂದ ಪ್ರಸಂಗವನ್ನು ಈ ಅಂಕಣದಲ್ಲಿ ಪ್ರಸ್ತಾಪಿಸಿದ್ದನ್ನು ನೀವು ಓದಿರಬಹುದು. ವಿದೇಶ ಪ್ರಯಾಣ ಮಾಡುವಾಗ ಹಣ ಹಾಗೂ ಪಾಸ್‌ಪೋರ್ಟ್ ಕಳೆದುಹೋದರೆ ಏನಾಗಬಹುದೆಂಬುದನ್ನು ವಿವರಿಸಬೇಕಿಲ್ಲವಷ್ಟೆ.
ಎರಡು ವಾರಗಳ ಹಿಂದೆ ನನಗೊಂದು ಪುಟ್ಟ ಅಚ್ಚರಿ ಕಾದಿತ್ತು. ಅದೇ ಗ್ರ್ಯಾಂಡ್ ಡ್ಯಾಡಿ ಹೋಟೆಲ್‌ನ ಮಾಲೀಕನಿಂದ ನನಗೊಂದು ಇಮೇಲ್ ಬಂದಿದೆ. ಅದರಲ್ಲಿ ಅವರು ಬರೆದಿದ್ದರು- 'ನೀವು ನಮ್ಮ ಹೋಟೆಲ್‌ನಲ್ಲಿ ಉಳಿದುಕೊಂಡು ವಾಪಸ್ ಹೋಗುವಾಗ ಪರ್ಸು, ಹಣ ಹಾಗೂ ಪಾಸ್‌ಪೋರ್ಟನ್ನು ಮರೆತು ಇಲ್ಲಿಯೇ ಬಿಟ್ಟು ಹೋದ ಸಂಗತಿ ತಿಳಿಯಿತು. ತಕ್ಷಣವೇ ನಮ್ಮ ಸಿಬ್ಬಂದಿ ಅದನ್ನು ಜೋಪಾನವಾಗಿ ಎತ್ತಿಟ್ಟು, ನೀವು ಸೂಚಿಸಿದವರಿಗೆ ತಲುಪಿಸಲಾಗಿದೆ. ಅದು ಸುರಕ್ಷಿತವಾಗಿ ನಿಮ್ಮ ಕೈ ಸೇರಿದೆ ಎಂದು ಭಾವಿಸುತ್ತೇನೆ. ತಮಾಷೆಗಾಗಿ ಒಂದು ಪ್ರಸಂಗ ಹೇಳುವುದಾದರೆ, ನಮ್ಮ ಹೋಟೆಲ್‌ನಲ್ಲಿ ಉಳಿದುಕೊಂಡ ಗ್ರಾಹಕರೊಬ್ಬರು ಒಮ್ಮೆ ತಮ್ಮ ಹೆಂಡತಿಯನ್ನೇ ಬಿಟ್ಟು ಹೋಗಿದ್ದರು. ವಿಮಾನ ನಿಲ್ದಾಣಕ್ಕೆ ಹೋದ ಬಳಿಕ ಅವರಿಗೆ ನೆನಪಾಗಿ ವಾಪಸ್ ಬಂದಿದ್ದರು. ಮುಂದೆ ಅವರ ಪರಿಸ್ಥಿತಿ ಏನಾಯಿತೋ ಗೊತ್ತಿಲ್ಲ. ಅನೇಕ ಅತಿಥಿಗಳು ರೂಮಿನಲ್ಲಿ ಛಾರ್ಜರ್, ಮೊಬೈಲುಗಳನ್ನು ಮರೆತು ಹೋಗುತ್ತಾರೆ. ವಿದೇಶಿ ಪ್ರಯಾಣದಲ್ಲಿ ಹೆಂಡತಿ ಅಥವಾ ಮೊಬೈಲ್‌ನ್ನು ಮರೆತು ಹೋಗುವುದಕ್ಕಿಂತ ಪಾಸ್‌ಪೋರ್ಟ್ ಮರೆತು ಹೋಗುವುದು ಅಪಾಯ. ಯಾಕೆಂದರೆ ಹೆಂಡತಿಯನ್ನು ಎಲ್ಲಿಯೇ ಮರೆತು ಹೋದರೂ ವಾಪಸ್ ಬಂದೇ ಬರುತ್ತಾಳೆ. ಅವಳು ಕಾಣೆಯಾಗುವುದಿಲ್ಲ. ಆದರೆ ಪಾಸ್‌ಪೋರ್ಟ್ ಹಾಗಲ್ಲ. ಇನ್ನು ಮುಂದೆ ಎಲ್ಲಿಯೇ ಯಾವ ದೇಶಕ್ಕೆ ಹೋದರೂ ಪಾಸ್‌ಪೋರ್ಟ್ ಬಗ್ಗೆ ಎಚ್ಚರವಿರಲಿ.'
ಅಂದರೆ ಹೆಂಡತಿಯನ್ನು ಬಿಟ್ಟು ಹೋದರೂ ಪರವಾಗಿಲ್ಲ ಎಂಬ ಸೂಚನೆಯನ್ನು ಕೊಟ್ಟಿರಬಹುದಾ ಎಂದು ಅಂದುಕೊಳ್ಳುತ್ತಿರುವಾಗ ಮುಂದಿನ ಸಾಲಿನಲ್ಲಿ ಬರೆದಿದ್ದರು- 'ಹೆಂಡತಿಯನ್ನು ಬಿಟ್ಟು ಹೋಗುವುದು ಸುಲಭ ಅಲ್ಲ. ನೀವು ಬಿಟ್ಟರೂ ಆಕೆ ಬಂದೇ ಬರುತ್ತಾಳೆ.'
ಹಿಂದಿನ ವಾರ ಮತ್ತೊಂದು ಅಚ್ಚರಿ, ಗ್ರ್ಯಾಂಡ್‌ಡ್ಯಾಡಿ ಹೋಟೆಲ್‌ನ ಸೀಲ್ ಇರುವ ಪುಟ್ಟ ಪೊಟ್ಟಣ ಕೊರಿಯರ್‌ನಲ್ಲಿ ಬಂತು. ತೆಗೆದು ನೋಡಿದರೆ ಪುಸ್ತಕ!
How not to leave & stay with your wife ಎಂಬ ಪುಸ್ತಕವಿತ್ತು. ಅದರೊಳಗೆ ಆ ಮಾಲೀಕನ ಪತ್ರ: 'ಮುಂದಿನ ಸಲ ನಿಮ್ಮ ಹೆಂಡತಿಯೊಂದಿಗೆ ಬನ್ನಿ. ನಮ್ಮ ಹೋಟೆಲ್‌ನಲ್ಲಿಯೇ ಉಳಿದುಕೊಳ್ಳಿ.'
- ವಿಶ್ವೇಶ್ವರ ಭಟ್