ಶಾಲೆಯನ್ನು ದ್ವೇಷಿಸುತ್ತಿದ್ದ ತುಂಟನೊಬ್ಬ, ಗೆಳೆಯರೊಂದಿಗೆ ರೈಲು ಹತ್ತಿದ. ಮುಂದೆ ಗೆಳೆಯರು ಕೈ ಕೊಟ್ಟರು. ಈತ ಭಿಕ್ಷೆಗೆ ಕೂತ. ಉಪವಾಸ ಬಿದ್ದ. ಆ್ಯಕ್ಸಿಡೆಂಟ್‌ಗೆ ತುತ್ತಾಗಿ ನೆನಪಿನ ಶಕ್ತಿ ಕಳೆದುಕೊಂಡ. ನಂತರ ಅನಾಥಾಶ್ರಮದ ಪಾಲಾದ. ಆಟೋಟದಲ್ಲಿ ಚಾಂಪಿಯನ್ ಆಗಿ ಪೊಲೀಸ್ ಆಫಿಸರ್ ಆದ. ಅಷ್ಟೇ ಅಲ್ಲ, ಕಮಾಂಡೋ ಲೀಡರ್ ಕೂಡ ಆದ ಈತ, ಕಡೆಗೂ ತನ್ನ ಹೆತ್ತವರನ್ನು ಪತ್ತೆ ಹಚ್ಚಿದ ರೋಚಕ ಕಥೆ ಇಲ್ಲಿದೆ. ಓದಿಕೊಳ್ಳಿ.
'ಒಂದೇ ಮಾತಲ್ಲಿ ಹೇಳಿಬಿಡ್ತೇನೆ ಸಾರ್. ಶಾಲೆಗೆ ಹೋಗಲು ನನಗೆ ಇಷ್ಟವೇ ಇರಲಿಲ್ಲ. ನಾವು ವಾಸವಿದ್ದುದು, ಮುಂಬಯಿಗೆ ಸಮೀಪದ ಥಾಣೆಗೆ ಅಂಟಿಕೊಂಡಂತೆಯೇ ಇದ್ದ ಒಂದು ಕೊಳೆಗೇರಿಯಲ್ಲಿ. ಅಲ್ಲಿ ಎಲ್ಲ ಧರ್ಮದವರೂ ಇದ್ದರು. ನಾವು ವಾಸವಿದ್ದ ಗುಡಿಸಲಿನ ಮನೆಗೆ ತುಂಬ ಹತ್ತಿರದಲ್ಲೇ ಚರ್ಚ್, ದರ್ಗಾ ಹಾಗೂ ಗಣೇಶನ ದೇವಾಲಯವಿತ್ತು. ಅಪ್ಪನಿಗೆ ಪುರಸಭೆಯಲ್ಲಿ ದಿನಗೂಲಿ ನೌಕರಿಯಿತ್ತು. ಇದೆಲ್ಲಾ 1990ರ ದಶಕದ ಮಾತು. ಆ ದಿನಗಳಲ್ಲಿ, ನಮ್ಮ ಏರಿಯಾದಲ್ಲಿದ್ದ ಹೆಚ್ಚಿನ ಮಕ್ಕಳು ಶಾಲೆಗೆ ಹೋಗುತ್ತಲೇ ಇರಲಿಲ್ಲ. ಗಾಳಿಪಟ ಹಾರಿಸುವುದು, ಗೋಲಿ ಆಡುವುದು, ಬೇರೆಯವರಿಗೆ ಗೊತ್ತಾಗದಂತೆ ನೆರೆಮನೆಯ ಕೋಳಿಗಳು ಮತ್ತು ಕಿಟಕಿಗಳಿಗೆ ಕಲ್ಲು ಹೊಡೆದು ಖುಷಿಪಡುವುದು... ಇಂಥ ತುಂಟಾಟಗಳಲ್ಲೇ ದಿನ ಕಳೆಯುತ್ತಿದ್ದ ಹುಡುಗರು ಸುತ್ತಲೂ ಇದ್ದರು. ಅವರ ಸಹವಾಸದಲ್ಲಿ, ನಾನು ಶಾಲೆಗೆ ಹೋಗುವುದನ್ನೇ ಮರೆತುಬಿಟ್ಟೆ...
ಈ ವಿಷಯ ತಿಳಿದಾಗ ಅಮ್ಮ ಸಿಟ್ಟಿಗೆದ್ದಳು. ಬೈದು ಬುದ್ಧಿ ಹೇಳಿದಳು. ಆನಂತರವೂ ನಾನು ಬದಲಾಗಲಿಲ್ಲ. ತಾನೇ ಖುದ್ದಾಗಿ ಶಾಲೆಗೆ ಕರೆದೊಯ್ಯಲು ಆರಂಭಿಸಿದಳು. ಅಮ್ಮ ಅದೇನೇ ತಿಪ್ಪರಲಾಗ ಹಾಕಿದರೂ ಶಾಲೆ ನನ್ನನ್ನು ಆಕರ್ಷಿಸಲೇ ಇಲ್ಲ. ಆರು ತಿಂಗಳ ಕಾಲ ಒಂದನೇ ತರಗತಿಯಲ್ಲಿ ಕುಳಿತಿದ್ದರಿಂದ ಆದ ಲಾಭವೆಂದರೆ, ಅರೆಬರೆಯಾಗಿ ವರ್ಣಮಾಲೆಯನ್ನೂ, ಸ್ವಲ್ಪವೂ ತಪ್ಪಿಲ್ಲದೆ ಗಣೇಶ ಬಾಂಗಡೆ ಎಂಬ ನನ್ನ ಹೆಸರನ್ನೂ ಬರೆಯಲು ಕಲಿತದ್ದು. ಹೀಗಿದ್ದಾಗಲೇ ಗಣೇಶ ಚತುರ್ಥಿಯ ಕಾರಣಕ್ಕೆ ಶಾಲೆಗೆ ಒಂದು ವಾರ ರಜೆ ಘೋಷಿಸಲಾಯಿತು.
ಹೀಗಿದ್ದಾಗಲೇ ಎರಡು ವರ್ಷ ದೊಡ್ಡವನಿದ್ದ ಸಹಪಾಠಿಯೊಬ್ಬ ಬಂದು- 'ಟ್ರೈನ್‌ನಲ್ಲಿ ಸುಮ್ನೇ ಒಂದು ರೌಂಡ್ ಹೋಗಿ ಬರೋಣ ಬಾರೋ' ಅಂದ. ತಕ್ಷಣವೇ ಹೊರಟುಬಿಟ್ಟೆ. ಇಬ್ಬರೂ ಸಿಕ್ಕಿದ ರೈಲು ಹತ್ತಿಕೊಂಡೆವು. ಆವತ್ತಿಗೆ ನನ್ನ ವಯಸ್ಸು ಕೇವಲ ಆರು ವರ್ಷ. ಅರ್ಧ ಗಂಟೆಯ ಪ್ರಯಾಣದ ನಂತರ ನಮ್ಮನ್ನು ಮತ್ತೊಬ್ಬ ಗೆಳೆಯ ಕೂಡಿಕೊಂಡ. ಅದುವರೆಗೂ, ನಾವಿದ್ದ ಸ್ಲಂ ಬಿಟ್ಟರೆ, ಬೇರೆ ಪ್ರದೇಶವನ್ನೇ ನಾನು ಕಂಡಿರಲಿಲ್ಲ. ಹಾಗಾಗಿ ಎಲ್ಲವನ್ನೂ ಬೆರಗಿನಿಂದ ನೋಡುತ್ತಲೇ ಕುಳಿತಿದ್ದೆ. ಕಡೆಗೊಮ್ಮೆ, ಒಂದು ನಿಲ್ದಾಣದಲ್ಲಿ ಇಳಿದ ಗೆಳೆಯರು, ಅಲ್ಲಿನ ಕಲ್ಲು ಬೆಂಚಿನ ಮೇಲೆ ನನ್ನನ್ನು ಕೂರಿಸಿ-'ಇಲ್ಲೇ ಇರು. ಅರ್ಧಗಂಟೇಲಿ ವಾಪಸ್ ಬರ್ತೇವೆ' ಎಂದು ಎತ್ತಲೋ ಹೋದರು. ನಿಮಿಷಗಳಲ್ಲ, ಗಂಟೆಗಳೂ ಕಳೆದುಹೋದವು. ಅವರು ಬರಲಿಲ್ಲ. ಮುಂದೇನು ಮಾಡುವುದೋ ತೋಚದೇ ಹೋದಾಗ ಜೋರಾಗಿ ಅತ್ತೆ. ಕೆಲವರು ವಿಚಾರಿಸಿದರು. ಮತ್ತೆ ಕೆಲವರು ಛೆ, ಛೆ ಅಂದು ಹೋಗಿಬಿಟ್ಟರು. ಅವತ್ತು ರಾತ್ರಿಯನ್ನು ಆ ಕಲ್ಲು ಬೆಂಚಿನ ಮೇಲೆ ಕಳೆದೆ. ಮರುದಿನದ ಹೊತ್ತಿಗೆ ಭಯ ಶುರುವಾಯಿತು. ಮನೆಗೆ ಹಿಂದಿರುಗುವ ಆಸೆಯಿಂದ, ನಾನು ನಿಂತಿದ್ದೆನಲ್ಲ, ಅದರ ವಿರುದ್ಧ ದಿಕ್ಕಿಗೆ ಹೋಗುವ ರೈಲು ಹತ್ತಿಬಿಟ್ಟೆ. ಅದು ನಮ್ಮ ಮನೆಯಿದ್ದ ಜಾಗಕ್ಕೆ ಹೋಗುತ್ತದೆಂಬ ಎಣಿಕೆ ನನ್ನದಿತ್ತು. ಉಹೂಂ, ಹಾಗಾಗಲಿಲ್ಲ. ಮತ್ತೆ ದಾರಿ ತಪ್ಪಿದ್ದೆ. ಕಡೆಗೊಮ್ಮೆ ರೈಲು ಇಳಿದೆನಲ್ಲ: ಅಲ್ಲಿಗೆ ಸಮೀಪದಲ್ಲಿಯೇ ಗಣೇಶೋತ್ಸವದ ಪೆಂಡಾಲ್ ಕಾಣಿಸಿತು. ಅಲ್ಲಿ, ದಿನದ ಮೂರು ಹೊತ್ತು ಪ್ರಸಾದ ಕೊಡುತ್ತಿದ್ದರು. ಅದನ್ನು ತಿನ್ನುವುದು, ಪೆಂಡಾಲ್‌ನ ಹೊರಗೆ ಮಲಗುವುದು ಅಭ್ಯಾಸವಾಗಿ ಹೋಯಿತು.
ಹೀಗೇ ಒಂದು ವಾರ ಕಳೆಯಿತು. ಅದೊಂದು ಸಂಜೆ ಗಣೇಶ ವಿಸರ್ಜನೆಗೆ ಸಿದ್ಧತೆ ಆರಂಭವಾಗಿ, ಅದುವರೆಗೂ ನನ್ನ ಮನೆಯಂತಿದ್ದ ಪೆಂಡಾಲ್ ಕ್ಷಣಾರ್ಧದಲ್ಲಿಯೇ ಕಣ್ಮರೆಯಾಯಿತು. ಮುಂದೇನು ಮಾಡಬೇಕೆಂದು ತಿಳಿಯಲಿಲ್ಲ. ಮೆರವಣಿಗೆಯ ಹಿಂದೆಯೇ ಹೋದೆ. ಗಣೇಶನನ್ನು ವಿಸರ್ಜಿಸಿ ಎಲ್ಲರೂ ಮನೆಯ ಹಾದಿ ಹಿಡಿದಾಗ ನನಗೆ ದಿಕ್ಕೇ ತೋಚಲಿಲ್ಲ. ಅವತ್ತು, ಬೀಚ್‌ಲ್ಲಿಯೇ ಮಲಗಿ ಬಿಟ್ಟೆ. ಮರುದಿನ ಬೆಳಗಿನ ಜಾವಕ್ಕೇ ದೊಡ್ಡ ದೊಡ್ಡ ದೋಣಿಗಳೊಂದಿಗೆ ನೂರಾರು ಮೀನುಗಾರರು ಬಂದರು. ಕೆಲವೇ ಗಂಟೆಯ ಅವಧಿಯಲ್ಲಿ ಸಾವಿರಾರು ಮೀನುಗಳನ್ನು ಹಿಡಿದು ಅಲ್ಲಲ್ಲಿ ಗುಡ್ಡೆ ಹಾಕಿದರು. ಈ ಸಂದರ್ಭದಲ್ಲಿ ಮೀನುಗಾರರಿಗೆ ಗೊತ್ತಾಗದಂತೆ ಒಂದಷ್ಟು ಮೀನುಗಳನ್ನು 'ಹಾರಿಸಿಕೊಂಡು' ಹೋಗುವ ಕೆಲಸವನ್ನು ನನ್ನ ವಾರಿಗೆಯ ಹುಡುಗರು ಮಾಡುತ್ತಿದ್ದರು. ನಾನೂ ಹಾಗೆಯೇ ಮಾಡಿದೆ. ಅವುಗಳನ್ನು ಮಾರಿ, ಸಿಗುವ ಹಣದಲ್ಲಿ ತಿಂಡಿ ತಿನ್ನಬೇಕೆಂದು ನನ್ನ ಉದ್ದೇಶವಾಗಿತ್ತು. ಆಗಲೇ ನನ್ನೆದುರು ನಿಂತ ಹೆಂಗಸೊಬ್ಬಳು 'ಯಾರೋ ನೀನು?' ಎಂದು ಆಬ್ಬರಿಸಿದಳು. ಹೆದರಿಕೆಯಿಂದ, ಎಲ್ಲವನ್ನೂ ಹೇಳಿಬಿಟ್ಟೆ. ಆಕೆ ತಣ್ಣಗೆ ಹೇಳಿದಳು: ' ನಮ್ಮ ಮನೇಲಿ ನಿನಗೆ ಜಾಗ ಕೊಡ್ತೇವೆ. ನನ್ನ ಹಿಂದೆ ಬಾ...'
ಎರಡನೇ ಆಯ್ಕೆಯೇ ಇರಲಿಲ್ಲ. ಮೌನವಾಗಿ ಹಿಂಬಾಲಿಸಿದೆ. ಆನಂತರ ತಿಳಿದದ್ದು: ಆಕೆಗೆ ಒಬ್ಬ ಮಗನಿದ್ದ. 12 ವರ್ಷದ ಆತ ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದ. ಸಣ್ಣ ಪುಟ್ಟ ಕಳ್ಳತನ ಮಾಡುತ್ತಿದ್ದ. ಭಿಕ್ಷೆ ಬೇಡುವುದು ಹೇಗೆ, ಪ್ರಯಾಣಿಕರ ಅನುಕಂಪ ಗಿಟ್ಟಿಸುವುದು ಹೇಗೆಂದು ನಾಲ್ಕು ದಿನಗಳ ಕಾಲ ಅವನೇ ತರಬೇತಿ ನೀಡಿದ. ನಂತರ ಅವನ ತಾಯಿ ಹೇಳಿದ ಜಾಗಗಳಲ್ಲಿ ಭಿಕ್ಷೆಗೆ ಕೂರುವುದು ನನ್ನ ಕರ್ತವ್ಯವೇ ಆಗಿ ಹೋಯಿತು. ಇಡೀ ದಿನದ ಸಂಪಾದನೆಯನ್ನು ಆಕೆ ಕಿತ್ತುಕೊಳ್ಳುತ್ತಿದ್ದಳು. ಹೀಗಿರುವಾಗಲೇ ಅದೊಂದು ದಿನ ಭಿಕ್ಷಾಟನೆ ಮುಗಿಸಿ ರಸ್ತೆ ದಾಟುತ್ತಿರುವಾಗಲೇ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆಯಿತು. 'ಅಮ್ಮಾ' ಎಂದು ಚೀರಿದ್ದಷ್ಟೇ ಗೊತ್ತು. ಆನಂತರ ಏನಾಯಿತೆಂದು ತಿಳಿಯಲಿಲ್ಲ.
ಪ್ರಜ್ಞೆ ಬಂದಾಗ ಆಸ್ಪತ್ರೆಯಲ್ಲಿದ್ದೆ. ಸುತ್ತಲೂ ವೈದ್ಯರು, ನರ್ಸ್‌ಗಳಿದ್ದರು. 'ಪಾಪ ಮಿದುಳಿಗೆ ಬಲವಾದ ಏಟು ಬಿದ್ದಿದೆ. ನೆನಪಿನ ಶಕ್ತಿ ಅರ್ಧಕ್ಕರ್ಧ ಹೋಗಿ ಬಿಟ್ಟಿದೆ...' ಎಂದೆಲ್ಲಾ ಮಾತಾಡುತ್ತಿದ್ದರು. ಮುಂದಿನ ಆರೇಳು ತಿಂಗಳ ಕಾಲ ಆಸ್ಪತ್ರೆಯಲ್ಲಿಯೇ ಇದ್ದೆ. ಮುಂದೆ, ಆಸ್ಪತ್ರೆಯ ಅಧಿಕಾರಿಗಳು ತಾವೇ ಮಾತಾಡಿಕೊಂಡರು. ಅನಾಥ ಬಾಲಕ ಎಂಬ ಹಣೆಪಟ್ಟಿ ಹಾಕಿ, ಆನಂದನಿಕೇತನ ಎಂಬ ಆನಾಥಾಶ್ರಮಕ್ಕೆ ಸೇರಿಸಿದರು. ಕೆಲವೇ ದಿನಗಳಲ್ಲಿ ಶಾಲೆಗೂ ಸೇರಿಕೊಂಡೆ. ಆನಂತರದಲ್ಲಿ 20 ವರ್ಷಗಳೇ ಕಳೆದುಹೋದವು. ಓದುವುದರಲ್ಲಿ ಜಾಣನಿರಲಿಲ್ಲ ನಿಜ. ಆದರೆ ಆಟೋಟದಲ್ಲಿ ಶಾಲೆಗೇ ಮೊದಲಿಗನಾಗಿದ್ದೆ.
ಗಂಟೆಗಟ್ಟಲೇ ಅಭ್ಯಾಸದಲ್ಲಿ ತೊಡಗಿದ್ದರಿಂದ ಕಟ್ಟುಮಸ್ತಾದ ದೇಹ ನನ್ನದಾಯಿತು. ಈ ಕಾರಣದಿಂದಲೇ ಪಿಯುಸಿ ಮುಗಿಯುತ್ತಿದ್ದಂತೆಯೇ, ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಯೂ ಸಿಕ್ಕಿಬಿಟ್ಟಿತು. ಅಧಿಕಾರಿಗಳ ಮುಂದೆ ನಿಂತಾಗ, ಅವರು ಕೇಳಿದರು: 'ನಿನ್ನದು ಯಾವ ಊರು? ಅಪ್ಪ-ಅಮ್ಮ ಯಾರು? ಅವರು ಏನಾಡ್ತಾರೆ? ಅನಾಥಾಶ್ರಮಕ್ಕೆ ನಿನ್ನನ್ನು ಯಾಕೆ ಸೇರಿಸಿದ್ರು?' ಉಹುಂ, ಯಾವ ಪ್ರಶ್ನೆಗೂ ನನಗೆ ಉತ್ತರ ಗೊತ್ತಿರಲಿಲ್ಲ. ಅಪ್ಪ-ಅಮ್ಮ ಅಂದುಕೊಂಡಾಗ ಯಾವ ಚಿತ್ರವೂ ಕಣ್ಣ ಮುಂದೆ ಸುಳಿಯಲಿಲ್ಲ. ಅಧಿಕಾರಿಗಳ ಮುಂದೆ ಅದನ್ನೇ ಹೇಳಿದೆ. ಎಲ್ಲವನ್ನೂ ಮೌನವಾಗಿ ಕೇಳಿಸಿಕೊಂಡ ಇನ್ಸ್ ಪೆಕ್ಟರ್ ಶ್ರೀಕಾಂತ ಸೋಂದೆಯವರು ಎದ್ದು ಬಂದು, -'ಎಲ್ಲಿ ನಿನ್ನ ಕೈ ಕೊಡು' ಎಂದರು. ಹಾಗೇ ಮಾಡಿದೆ. ಅವರ ಕುತೂಹಲದ ದೃಷ್ಟಿ ನನ್ನ ಮೊಣಕೈನ ಮೇಲಿನ ಹಚ್ಚೆಯ ಮೇಲಿತ್ತು. ಹಚ್ಚೆಯ ರೂಪದಲ್ಲಿದ್ದ -'ಮಂದಾ ದಾಂಗಡೆ' ಎಂಬ ಮರಾಠಿ ಭಾಷೆಯ ಅಕ್ಷರಗಳನ್ನು ನೋಡುತ್ತಾ ಅವರು ಹೇಳಿದರು: 'ಹಚ್ಚೆಯ ರೂಪದಲ್ಲಿರೋದು ಬಹುಷಃ ನಿಮ್ಮ ತಾಯಿಯ ಹೆಸರು ಇರಬೇಕು. ಹೇಗಾದ್ರೂ ಮಾಡಿ ಅವರನ್ನು ಪತ್ತೆ ಹಚ್ಚೋಣ...'
ಹೀಗೆ ಹೇಳುವುದರೊಂದಿಗೆ ಗಣೇಶ್ ದಾಂಗಡೆಯ ಮಾತು ಮುಗಿಯುತ್ತದೆ. ಅಲ್ಲಿಂದಾಚೆಗೆ ಏನಾಯ್ತು ಎಂಬುದನ್ನು ಇನ್ಸ್ ಪೆಕ್ಟರ್ ಶ್ರೀಶಾಂತ್ ಸೋಂದೆ ವಿವರಿಸುಮುದು ಹೀಗೆ: ಮುಂಬೈನ ತಾಜ್ ಹೋಟೆಲಿನ ಮೇಲೆ ದಾಳಿ ನಡೆಯಿತಲ್ಲ; ಆನಂತರದಲ್ಲಿ, ಯಾವುದೇ ವೇಷದಲ್ಲಾದರೂ ಉಗ್ರರು ದೇಶಕ್ಕೆ ನುಸುಳಬಹುದೆಂದೂ, ಹೊಸದಾಗಿ ನೌಕರಿಗೆ ಸೇರುವವರ ಹಿನ್ನೆಲೆಯನ್ನು ಸಂಪೂರ್ಣವಾಗಿ ತಿಳಿಯಬೇಕೆಂದೂ ಮೇಲಧಿಕಾರಿಗಳ ಆದೇಶವಿತ್ತು. 2010ರಲ್ಲಿ ಕಾನ್‌ಸ್ಟೇಬಲ್ ಎಂದು ನೌಕರಿಗೆ ಸೇರಿಕೊಂಡ ಗಣೇಶ ದಾಂಗಡೆ, ನಂತರದ ಎರಡು ವರ್ಷಗಳಲ್ಲಿ ಸತತ ಪರಿಶ್ರಮದಿಂದ ಎರಡು ಬಡ್ತಿ ಪಡೆದ. ಅಷ್ಟೇ ಅಲ್ಲ; ಕ್ಷಿಪ್ರ ಕಾರ್ಯಾಚರಣೆ ದಳದ ಕಮಾಂಡೋ ಹುದ್ದೆ ತಲುಪಿಕೊಂಡ. ಅವನ ದಿಢೀರ್ ಬೆಳವಣಿಗೆ ನನ್ನಲ್ಲಿ ಅನುಮಾನಗಳನ್ನು ಹುಟ್ಟು ಹಾಕಿದ್ದು ನಿಜ. ಈ ಕಾರಣದಿಂದಲೇ ಅವನ ಹಿನ್ನೆಲೆ ತಿಳಿಯಲು ಪ್ರಯತ್ನಿಸಿದ್ದೆ. ತುಂಬ ಕಠಿಣವಾಗಿಯೇ ಅವನೊಂದಿಗೆ ನಡೆದುಕೊಂಡಿದ್ದೆ. ವಿಚಾರಣೆಯ ಸಂದರ್ಭದಲ್ಲಿ -'ಸರ್, ನಾನು ಅನಾಥ' ಎನ್ನುತ್ತಾ ಆತ ಕಣ್ತುಂಬಿಕೊಂಡದ್ದನ್ನು ಕಂಡಾಗ, 'ಪಾಪ' ಅನಿಸಿತ್ತು. ಅವನ ಮೊಣಕೈ ಮೇಲೆ ಮಂದಾ ದಾಂಗಡೆ ಎಂಬ ಹಚ್ಚೆಯನ್ನು ಕಂಡಾಗ ಈ ಗುರುತಿನಿಂದಲೇ ಈ ಹುಡುಗನ ಕುಟುಂಬದವರನ್ನು ಪತ್ತೆ ಹಚ್ಚಬೇಕು ಅನ್ನಿಸಿತು.
ಮರುದಿನದಿಂದಲೇ ಗಣೇಶ ದಾಂಗಡೆ ಉಳಿದಿದ್ದ ಅನಾಥಾಶ್ರಮ, ಓದಿದ ಶಾಲೆ-ಕಾಲೇಜು, ಚಿಕಿತ್ಸೆ ಪಡೆದಿದ್ದ ಆಸ್ಪತ್ರೆಗಳಲ್ಲಿ ವಿಚಾರಿಸಲಾಯಿತು. ಆ ಪ್ರಕಾರ, ಗಣೇಶನಿಗೆ ಈಗ 30 ವರ್ಷವೆಂದೂ, ಒಂದೊಂದು ಸಂದರ್ಭದಲ್ಲಿ ಆತ ಮಾಮ ಭಾಂಜೆ ಎಂದು ಕನವರಿಸುತ್ತಿದ್ದನೆಂದೂ ತಿಳಿದು ಬಂತು. ಹಚ್ಚೆಯ ರೂಪದಲ್ಲಿರುವುದು ತಾಯಿ, ತಂಗಿ ಅಥವಾ ಅಜ್ಜಿಯ ಹೆಸರಾಗಿರಬಹುದು ಎಂದೆಲ್ಲ ಊಹಿಸಿಕೊಂಡು -'ನೀನು ವಾಸವಿದ್ದ ಏರಿಯಾ ಹೇಗಿತ್ತು ವಿವರಿಸು ಎಂದರೆ, ನಾನು ವಾಸವಿದ್ದ ಏರಿಯಾದಲ್ಲಿ ವಿಪರೀತ ಜನ ಇದ್ರು. ದರ್ಗಾ, ಚರ್ಚ್, ದೇವಸ್ಥಾನಗಳೂ ಅಲ್ಲಿದ್ದವು. ಅಷ್ಟು ಬಿಟ್ರೆ ಬೇರೇನೂ ನೆನಪಿಲ್ಲ ಎನ್ನುತ್ತಿದ್ದ ಗಣೇಶ ಧಾಂಗಡೆ.
ಈ ಹುಡುಗನ ಹೆತ್ತವರನ್ನು ಪತ್ತೆ ಹಚ್ಚಲೇಬೇಕು ಎಂಬ ಹಠದಿಂದಲೇ ನಾಲ್ಕು ತಿಂಗಳು ಶ್ರಮಿಸಿದ್ದಾಯ್ತು. ಪ್ರಯೋಜನವಾಗಲಿಲ್ಲ. ನಿರಾಸೆಯಿಂದ ಕೈ ಚೆಲ್ಲಿದ್ದಾಗಲೇ, ಮುಂಬಯಿಯ ಹೊರವಲಯದ ಥಾಣೆಯಲ್ಲಿ ಮಾಮ ಭಾಂಜೆ ಎಂಬ ಗುಡ್ಡವೂ, ಅಲ್ಲಿಯೇ ಕೊಳೆಗೇರಿಯೂ ಇದೆಯೆಂದು ಸುದ್ದಿ ಬಂತು. ನಾವು ಉಳಿದಿದ್ದುದು, ಥಾಣೆಯಿಂದ 60 ಕಿ.ಮೀ. ದೂರವಿದ್ದ ಏರಿಯಾದಲ್ಲಿ. ಮರುದಿನವೇ ಕಮ್ಯಾಂಡೋ ಲೀಡರ್ ಗಣೇಶ ದಾಂಗಡೆಯನ್ನು ಕರೆದು, ಕೊಳೆಗೇರಿಗೆ ಹೋದಾಗ ಹೇಗೆ ವಿಚಾರಣೆ ನಡೆಸಬೇಕೆಂದೂ ಹೇಳಿಕೊಟ್ಟಿದ್ದಾಯಿತು.
ಕಡೆಗೊಮ್ಮೆ ಥಾಣೆಯ ಕೊಳೆಗೇರಿಗೆ ಬಂದು ಹತ್ತು ನಿಮಿಷ ಕಳೆಯುವಷ್ಟರಲ್ಲೇ ಕಂಪಿಸುವ ದನಿಯಲ್ಲಿ ಗಣೇಶ ಹೇಳಿದ: 'ಸರ್, ಈ ಏರಿಯಾದಲ್ಲಿ ಓಡಾಡಿದೀನಿ ಅನ್ನಿಸ್ತಾ ಇದೆ...' ಆನಂತರದಲ್ಲಿ ಎದುರಿಗೆ ಸಿಕ್ಕವರನ್ನೆಲ್ಲಾ ಕೇಳಿದೆವು: 'ಮಂದಾ ದಾಂಗಡೆ ಅಂದ್ರೆ ಯಾರು?' ನೂರಕ್ಕೂ ಹೆಚ್ಚು ಜನ ಹೇಳಿದ್ದು ಒಂದೇ ಉತ್ತರ: 'ನಮಗೆ ಗೊತ್ತಿಲ್ಲ ಸ್ವಾಮಿ. ಆ ಹೆಸರಿನವರು ಯಾರೂ ಇಲ್ಲಿಲ್ಲ...' ಇಷ್ಟಾಗುತ್ತಿದ್ದಂತೆ, ಗಣೇಶನೇ ಪ್ರಶ್ನಿಸಲು ಮುಂದಾದ. ಅವನಿಗೆ ಎದುರಾದ ಅಜ್ಜನೊಬ್ಬ, ಮಂದಾ ದಾಂಗಡೆ ಎಂಬ ಹೆಸರಿನ ಮೂರು ಜನ ಇಲ್ಲಿದ್ದಾರೆ ಸ್ವಾಮಿ ಅಂದವನೇ, ಕೆಲವೇ ನಿಮಿಷದಲ್ಲಿ ಮೂವರನ್ನೂ ಕರೆ ತಂದ. ಪೊಲೀಸರನ್ನು ಕಂಡು ಹೆದರಿದ್ದ ಆ ಹೆಂಗಸರು ಗಡಗಡ ನಡುಗುತ್ತಾ ನಿಂತಿದ್ದರು. ಆಗಲೇ ಗಣೇಶ ಒಬ್ಬಾಕೆಯನ್ನು ಕೇಳಿದ: 'ತುಂಬಾ ಹಿಂದೆ, ನಿಮ್ಮ ಮಕ್ಕಳು ತಪ್ಪಿಸಿಕೊಂಡಿದ್ರಾ?' ಆ ಹೆಂಗಸು ಬಿಕ್ಕಳಿಸುತ್ತಾ ಹೇಳಿದಳು: ಆರು ವರ್ಷ ಇದ್ದಾಗಲೇ ನನ್ನ ಮಗ ಕಣ್ಮರೆ ಆಗಿಬಿಟ್ಟ ಸಾರ್. ನಾನು ತುಂಬಾ ಕಡೆ ಹುಡುಕಿದೆ. ಪೊಲೀಸರಿಗೆ ದೂರು ಕೊಟ್ಟೆ. ಹರಕೆ ಕಟ್ಟಿಕೊಂಡೆ. ಏನೂ ಪ್ರಯೋಜನ ಆಗಲಿಲ್ಲ. ಚಿನ್ನದಂಥಾ ಮಗು, ಎಲ್ಲಿ ಹೋಯ್ತೋ ಏನೋ...' ಆ ತಾಯಿಯ ಮಾತು ಮುಗಿವ ಮೊದಲೇ ಗಣೇಶ ದಾಂಗಡೆಯೇ ಕೇಳಿದ: 'ಆ ಮಗುವಿನ ಮೈ ಮೇಲೆ ಏನಾದ್ರೂ ಗುರುತು ಇತ್ತೇನಮ್ಮಾ?' ಆ ಹೆಂಗಸು ತಕ್ಷಣವೇ ಹೇಳಿಬಿಟ್ಟಳು: 'ಮಗನ ಮೊಣಕೈ ಮೇಲೆ ನನ್ನ ಹೆಸರನ್ನೇ ಹಚ್ಚೆ ಹಾಕಿಸಿದ್ದೆ ಸಾಹೇಬ್ರೇ...'
ಈ ಮಾತು ಕೇಳುತ್ತಿದ್ದಂತೆಯೇ ಗಣೇಶ ದಾಂಗಡೆಗೆ ಮಾತೇ ಹೊರಡಲಿಲ್ಲ. ಆತ ಮೌನವಾಗಿ ತನ್ನ ಮೊಣಕೈ ತೋರಿಸಿದ. ಅದನ್ನು ನೋಡುತ್ತಿದ್ದಂತೆಯೇ ಆ ಹೆಂಗಸು, ತಡವರಿಸುತ್ತಲೇ ಬಂದು ನೀನಾ, ನೀನಾ, ನೀನೇನಾ ಎನ್ನುತ್ತಾ ಗಣೇಶನನ್ನು ತಬ್ಬಿಕೊಂಡಳು. ಅವನ ಕೆನ್ನೆಗೆ, ಹಣೆಗೆ ಮುತ್ತಿಟ್ಟಳು. ನಂತರ ಒಂದೇ ವೇಗದಲ್ಲಿ ಮನೆಗೆ ನುಗ್ಗಿ ದೇವರ ಮುಂದೆ ದೀಪ ಹಚ್ಚಿದಳು. ನೀನು ಕಾಣೆಯಾದ ಆರೇ ತಿಂಗಳಿಗೆ ನಿಮ್ಮ ತಂದೆ ತೀರಿಕೊಂಡ್ರು. ಅನಿವಾರ್ಯವಾಗಿ ಎರಡನೇ ಮದುವೆಯಾದೆ. ಇಬ್ಬರು ಮಕ್ಕಳಿದ್ದಾರೆ ನನಗೆ. ಕಡೆಗೂ ನನಗೆ ಸಿಕ್ಕಿದೆಯಲ್ಲ; ನನಗೆ ಅಷ್ಟೇ ಸಾಕು ಮಗನೇ ಎಂದು ಅಳುತ್ತಲೇ ಹೇಳಿದಳು. ಹಿಂದೆ 'ಮನೆ ಬಿಟ್ಟು ಓಡಿ ಹೋಗಿದ್ದ ತುಂಟನೊಬ್ಬ, 23ವರ್ಷದ ನಂತರ ಕಮ್ಯಾಂಡೋ ಆಫೀಸರ್ ಆಗಿ ವಾಪಸ್ ಬಂದುದನ್ನು ಆ ಕೊಳೆಗೇರಿಯ ಜನ ವಿಸ್ಮಯದಿಂದ ನೋಡಿದರು. ಮೊಣಕೈ ಮೇಲಿನ ಹಚ್ಚೆಯೊಂದು ಮಾಡಿದ ಮ್ಯಾಜಿಕ್ ಕಂಡು ಬೆರಗಾದರು. 'ನನಗೆ ಈಗ ಕೇರಾಫ್ ಅಡ್ರೆಸ್ ಇದೆ ಸಾರ್. ಕುಟುಂಬದ ಹಿರಿಮಗನಾಗಿ ಎಲ್ಲರನ್ನೂ ಸಾಕುವುದು ನನ್ನ ಜವಾಬ್ದಾರಿ'- ಎಂದು ಕಮ್ಯಾಂಡೋ ಗಣೇಶ ದಾಂಗಡೆ ಹೇಳಿದಾಗ, ಭಲೇ ಭಲೇ ಎಂದು ಉದ್ಗರಿಸುವಷ್ಟು ಖುಷಿಯಾಯಿತು ಎನ್ನುತ್ತಾ ಮಾತು ಮುಗಿಸುತ್ತಾರೆ ಶಶಿಕಾಂತ ಸೋಂದೆ.
- ಎ.ಆರ್. ಮಣಿಕಾಂತ್
armanikanth@gmail.com