ಇತ್ತೀಚೆಗೆ ಓದುಗ ಮಿತ್ರರೊಬ್ಬರು, 'ನೀವು ಈ ದಿನಗಳಲ್ಲಿ ಯಾಕೋ ದುಬೈ ರೂಲರ್ ಮಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಹಿಂದೆ ಬಿದ್ದಿದ್ದೀರಿ ಅಂತ ಅನಿಸುತ್ತಿದೆ. ಆಗಾಗ ಅವರ ಬಗ್ಗೆ ಬರೆಯುತ್ತೀರಿ. ಅವರನ್ನು quote ಮಾಡುತ್ತೀರಿ. ಏನಿದರ ವಿಶೇಷ?' ಎಂದು ಕೇಳಿ ಪತ್ರ ಬರೆದಿದ್ದರು. ನಾನು ಅವರಿಗೆ ಒಂದು ಸಾಲಿನ ಉತ್ತರ ಬರೆದೆ-'ಹೌದು. ನನ್ನ ಪಾಲಿಗೆ ಮಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಹೊಸ ರಿಚರ್ಡ್ ಬ್ರಾನ್ಸನ್!'
ಅಷ್ಟಕ್ಕೂ ಪತ್ರಕರ್ತರಾದವರು ಸಾಧಕರು ಹಾಗೂ ಸಮಯ ಸಾಧಕರ ಹಿಂದೆ ಬೀಳಲೇಬೇಕು ತಾನೆ. ಅದಿರಲಿ, ಖಂಡಿತವಾಗಿಯೂ ಮಕ್ತೌಮ್ ನನಗೆ ಹೊಸ ಬ್ರಾನ್ಸನ್. ಅಂದರೆ ಮಕ್ತೌಮ್ ಅವರಲ್ಲಿ ನಾನು ಬ್ರಾನ್ಸನ್‌ನ್ನು ಕಾಣುತ್ತಿದ್ದೇನೆ. ಮೂರು ತಿಂಗಳ ಹಿಂದೆ ಮೊದಲ ಬಾರಿಗೆ ನಾನು ಮಕ್ತೌಮ್ ಅವರ ಬಗ್ಗೆ ಬರೆದಾಗ ಸಾವಿರಾರು ಓದುಗರು ಅವರ ವ್ಯಕ್ತಿತ್ವದ ಬಗ್ಗೆ ಅಚ್ಚರಿ, ಖುಷಿ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ್ದರು. ಮಕ್ತೌಮ್ ಬರೆದ 'My Vision' ಎಂಬ ಪುಸ್ತಕವನ್ನು ಸವುಡು ಮಾಡಿಕೊಂಡು ಓದಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿ, ಆ ಪುಸ್ತಕದ ಒಂದು ಪ್ರತಿಯನ್ನು ಕಳಿಸಿಕೊಟ್ಟಿದ್ದೆ. ಅವರು ಅದನ್ನು ಓದಿದಂತಿಲ್ಲ. ಓದಿದ್ದರೆ ಅವರಲ್ಲಿ ಒಂದಷ್ಟು ಗುಣಾತ್ಮಕ ಬದಲಾವಣೆ, ಚಬುಕು ಕಾಣಿಸುತ್ತಿತ್ತು.
ಇರಲಿ ಬಿಡಿ. ರಿಚರ್ಡ್ ಬ್ರಾನ್ಸನ್ ಕನಸುಗಳನ್ನು ಬೆನ್ನತ್ತಿ ಹೋದವನು. ಒಂದೊಂದೇ ಕನಸನ್ನು ಹಿಡಿದು ಮಾತಾಡಿಸಿ, ಅದನ್ನು ಒಲಿಸಿಕೊಂಡು ಸಾಕಾರ ಮಾಡಿದವನು. ಹೊಸ ಹೊಸ ಸವಾಲುಗಳಿಗೆ ಮುಖಾಮುಖಿಯಾದವನು. ಅಸಾಧ್ಯವೆನಿಸುವುದೆಲ್ಲವನ್ನೂ ಸಾಧ್ಯ ಮಾಡಿ ತೋರಿಸಿದವನು. ಅಂದುಕೊಂಡಿದ್ದೆಲ್ಲವನ್ನೂ ಮಾಡಿದ ಬಳಿಕ ಇನ್ನು ಸುಮ್ಮನಿರಬೇಕಲ್ಲ ಎಂದು ಚಡಪಡಿಸಿ ತನಗೆ ತಾನೇ ಹೊಸ ಸವಾಲುಗಳನ್ನು ಎಳೆದುಕೊಂಡು ಅವುಗಳನ್ನು ಈಡೇರಿಸಲು ಎದೆಯೊಡ್ಡುತ್ತಿರುವ ಪರಮ ಹುಂಬ, ಮಹಾಸಾಹಸಿ. ಹಣ ಮಾಡುವುದನ್ನೇ ಕಾಯಕ ಮಾಡಿಕೊಳ್ಳದೇ, ಜೀವನವನ್ನು ಇಡಿಯಾಗಿ ಅನುಭವಿಸುವ ಅದಮ್ಯ ಉತ್ಸಾಹಿ. ಇಂಥ ಅಪರೂಪದ ಸಾಹಸಿಯನ್ನು ಕಳೆದ ಏಳೆಂಟು ವರ್ಷಗಳಿಂದ ಹಿಂಬಾಲಿಸಿಕೊಂಡು ಬರುತ್ತಿದ್ದೇನೆ. ನನಗೆ ಹಿಡಿದ 'ಬ್ರಾನ್ಸನ್ ಮೇನಿಯಾ'ವನ್ನು ನನ್ನ ಓದುಗರಿಗೆ ಹತ್ತಿಸಿದ್ದೇನೆ. ಕೆಲವರು 'ನಿಮ್ಮದು ತುಸು ಅತಿಯಾಯಿತು' ಎಂದೂ ಹೇಳಿದ್ದಾರೆ. 'ತುಸು ಅತಿ'ಯಾಗದಿದ್ದರೆ ಬ್ರಾನ್ಸನ್‌ನಿಂದ ಪ್ರೇರಣೆ ಪಡೆದಿಲ್ಲ ಎಂದೇ ಅರ್ಥ. ಹುಚ್ಚು ಹತ್ತಿಸಿಕೊಳ್ಳದಿದ್ದರೆ, ಏನನ್ನೂ ಸಾಧಿಸಲು ಸಾಧ್ಯವಿಲ್ಲವೆಂಬುದೇ ಅವನ ಜೀವನ ಸಿದ್ಧಾಂತ.
ನನಗೆ ಅವನೊಬ್ಬ ಉದ್ಯಮಿ, ಶ್ರೀಮಂತನಷ್ಟೇ ಆಗಿದ್ದರೆ ಖಂಡಿತವಾಗಿಯೂ ಇಷ್ಟವಾಗುತ್ತಿರಲಿಲ್ಲ. ಶ್ರೀಮಂತ ಎಂಬ ಕಾರಣಕ್ಕೆ ನೀವು ಅಶೋಕ ಖೇಣಿ, ಮಿತ್ತಲ್, ಅಂಬಾನಿಯನ್ನು ಇಷ್ಟಪಡಲು ಸಾಧ್ಯವೇ ಇಲ್ಲ. ಇದೇ ಕಾರಣವಾಗಿದ್ದರೆ ನಮ್ಮೂರಿನ ಗಿರವಿ ಅಂಗಡಿ ಮಾಲೀಕರು, ಸೇಠುಗಳು, ರಿಯಲ್ ಎಸ್ಟೇಟು ದಂಧೆಕೋರರನ್ನೆಲ್ಲ ಇಷ್ಟಪಡಬೇಕಾಗುತ್ತಿತ್ತು. ಇನ್ನೂ ಒಂದು ಲಕ್ಷ ಕೋಟಿ ರೂಪಾಯಿ ಅವರ ಅಕೌಂಟ್‌ಗೆ ಜಮಾ ಆದರೂ ಮುಖೇಶ್ ಅಂಬಾನಿ ಶಾರ್ಕ್‌ಗಳ ಜತೆ ಈಜಲು ಸಮುದ್ರಕ್ಕಿಳಿಯುವುದಿಲ್ಲ. ಹಾಟ್ ಏರ್ ಬಲೂನ್‌ನಲ್ಲಿ ಕುಳಿತು ವಿಶ್ವಪ್ರದಕ್ಷಿಣೆಗೆ ಅಣಿಯಾಗುವುದಿಲ್ಲ. ಐವತ್ತು ಸಾವಿರ ಅಡಿ ಎತ್ತರಕ್ಕೆ ಹೋಗಿ ಅಲ್ಲಿಂದ ಜಿಗಿಯುವುದಿಲ್ಲ. ಮಂಗಳ ಯಾತ್ರೆಗೆ ಬಾಹ್ಯಾಕಾಶ ನೌಕೆಯನ್ನು ಸಿದ್ಧಪಡಿಸುವುದಿಲ್ಲ. ಕೋಟಿಗೆ ಕೋಟಿ ಸೇರುತ್ತಾ ಹೋದಂತೆಲ್ಲ ಅಂಬಾನಿಯಂಥವರು ಮನೆಯಲ್ಲಿದ್ದು ಅದನ್ನು ಕಾಪಾಡಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಾ ದೇಹವನ್ನು ಗುಡಾಣ ಮಾಡಿಕೊಳ್ಳುತ್ತಾರೆಯೇ ಶಿವಾಯ್, ಬ್ರಾನ್ಸನ್‌ನಂಥ ಸಾಹಸಕ್ಕೆ ಅಣಿಯಾಗುವುದಿಲ್ಲ. ಬ್ರಾನ್ಸನ್ ಇಷ್ಟವಾಗುವುದು ಆ ಕಾರಣಕ್ಕೆ. ಓದುಗರೇನಾದರೂ ಅವನನ್ನು ಮೆಚ್ಚಿದರೂ ಅದೇ ಕಾರಣಕ್ಕೆ. ಜತೆಗೆ ಅವನ ವಿಚಾರಗಳು.
ನನಗೆ ರಿಚರ್ಡ್ ಬ್ರಾನ್ಸನ್‌ನಂತೆ ಅಥವಾ ಅವನಿಗಿಂತ ಒಂದು ಹಿಡಿ ಜಾಸ್ತಿಯಾಗಿ ಕಂಡವನು ಮಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್. ಬ್ರಾನ್ಸನ್‌ನಂತೆ ಮಕ್ತೌಮ್ ಮುಂದೆ ಸಹ ಸಾಧನೆಯ ಸಾಗರವಿದೆ. ಮಾಯಾನಗರಿ ದುಬೈಗಿಂತ ದೊಡ್ಡ ಸಾಧನೆ ಬೇಕಾ? ಮರುಭೂಮಿಯನ್ನು ಮರುಳು ಮಾಡುವ ಭೂಮಿಯನ್ನಾಗಿ ಪರಿವರ್ತಿಸುವ ಹಿಂದಿನ ಶ್ರಮ, ಶ್ರದ್ಧೆ, ಯೋಚನೆ, ಚಿಂತನೆ, ಕರ್ತೃತ್ವ ಶಕ್ತಿಯಿದೆಯೆಲ್ಲ. ಅದಕ್ಕೆ ಎಂಥವರಾದರೂ ಬೆರಗಾಗಲೇಬೇಕು, ತಲೆದೂಗಲೇಬೇಕು. ದುಬೈ ನಗರವನ್ನು ನೋಡಿದಾಗೆಲ್ಲ ಅದನ್ನು ರೂಪಿಸಿದ ವ್ಯಕ್ತಿಯ ಆಲೋಚನೆಗಳು, ಕನಸುಗಳು ಹೇಗಿದ್ದಿರಬಹುದು, ಯಾವ ಮಹಾನ್ ಶಕ್ತಿ ಈ ನಗರದ ಬೀಜ ಬಿತ್ತಿರಬಹುದು ಎಂಬ ವಿಸ್ಮಯವುಂಟಾಗುತ್ತಿತ್ತು. ಮಕ್ತೌಮ್ ಎಂಬ ಕನಸುಗಾರನ ವಿಚಾರ, ಧ್ಯೇಯ, ಸಿದ್ಧಾಂತಗಳನ್ನು ಓದುತ್ತಾ ಹೋದಂತೆಲ್ಲ ನಾನುಅವರಲ್ಲಿ ಮತ್ತೊಬ್ಬ ಬ್ರಾನ್ಸನ್‌ನನ್ನು ಕಾಣಲಾರಂಭಿಸಿದೆ.
ರೋಮ್ ನಗರವನ್ನು ರಾತ್ರಿ-ಬೆಳಗಾಗುವುದರೊಳಗೆ ಕಟ್ಟಿಲ್ಲವಂತೆ. ಆದರೆ ರೋಮ್ ನಗರ ಈ ಸ್ಥಿತಿಗೆ ಬರಲು ತೆಗೆದುಕೊಂಡಿರುವ ಅವಧಿಯನ್ನು ಹೋಲಿಸಿದರೆ, ದುಬೈ ನಗರವನ್ನು ರಾತ್ರಿ-ಬೆಳಗಾಗುವುದರೊಳಗೆ ಕಟ್ಟಿದ್ದಾರೆಂದು ಹೇಳಬಹುದು. ಇಡೀ ಜಗತ್ತೇ ತಲೆದೂಗುವ ರೀತಿಯಲ್ಲಿ ತಲೆಯೆತ್ತಿ ನಿಲ್ಲುವಂತೆ ಮಾಡಿದ ಈ ನಗರದ ಕನಸಿನ ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡಿ, ಅದನ್ನು ಈ ಸ್ಥಿತಿಗೆ ತರುವ ತನಕ ಹೆಣಗಿದ ಮನಸ್ಸು ಹೇಗೆ ಕೆಲಸ ಮಾಡಿರಬಹುದು ಎಂಬುದು ಎಂಥವರಿಗಾದರೂ ಅಚ್ಚರಿಯೇ. ಮಕ್ತೌಮ್ ಇಷ್ಟವಾಗುವುದು ಈ ಕಾರಣಕ್ಕೆ.
ಈ ವರ್ಷದ ಆರಂಭದಲ್ಲಿ ಮಕ್ತೌಮ್ ಅವರು ಸರ್ಕಾರಿ ಅಧಿಕಾರಿಗಳ ಶೃಂಗ ಸಭೆಯನ್ನು ಏರ್ಪಡಿಸಿದ್ದರು. ಅಲ್ಲಿ ಅವರು ಮಾಡಿದ ಭಾಷಣದ ಸಿಡಿಯನ್ನು ಮಕ್ತೌಮ್ ಅವರ ಆಪ್ತರೊಬ್ಬರು ನನಗೆ ಕಳಿಸಿಕೊಟ್ಟಿದ್ದರು. ಸುಮಾರು ಮುಕ್ಕಾಲು ಗಂಟೆ ಅವಧಿಯ ಅವರ ಭಾಷಣವನ್ನು ಇತ್ತೀಚೆಗೆ ಕೇಳುತ್ತಿದ್ದೆ, ನೋಡುತ್ತಿದ್ದೆ. ಪ್ರಪ್ರಥಮವಾಗಿ ಸರ್ಕಾರಿ ಸಿಬ್ಬಂದಿ, ಅಧಿಕಾರಿಗಳನ್ನು ಕರೆದು ಅವರಿಗಾಗಿ ಶೃಂಗಸಭೆ ಏರ್ಪಡಿಸುವುದು, ಅವರಿಂದ ಅಪೇಕ್ಷೆಗಳೇನು, ನಿರೀಕ್ಷೆಗಳೇನು ಎಂದು ಬಯಸುವುದು, ಅವರ ಸಮಸ್ಯೆಗಳಿಗೆ ಕಿವಿಯಾಗುವುದು, ಅವರನ್ನು ಹುರಿದುಂಬಿಸುವುದಿದೆಯಲ್ಲ, ಅದೇ ಒಂದು ಅದ್ಭುತ! ನಮ್ಮ ಯಾವ ಮುಖ್ಯಮಂತ್ರಿ ಸರ್ಕಾರಿ ನೌಕರರನ್ನು ಭೇಟಿ ಮಾಡಿ, ಅವರಿಂದ ಏನು ನಿರೀಕ್ಷಿಸುತ್ತೇನೆ ಎಂದು ಕೇಳಿದ್ದಾರೆ? ಅವರಿಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿ ಹುರಿದುಂಬಿಸಿದ್ದಾರೆ?
ಆ ಸರ್ಕಾರಿ ಶೃಂಗಸಭೆಯಲ್ಲಿ ಸಾಮಾನ್ಯ ಸಿಬ್ಬಂದಿಯೊಬ್ಬ ಎದ್ದುನಿಂತು, 'ನೀವು ನಮ್ಮಿಂದ ಏನನ್ನು ನಿರೀಕ್ಷಿಸುತ್ತೀರಿ? ನಿಮ್ಮ ಹಕೀಕತ್ತೇನು?' ಎಂದು ಪ್ರಶ್ನಿಸಿದ. ಅದಕ್ಕೆ ಮಕ್ತೌಮ್ ಹೇಳಿದರು-'ನೀವು ದುಬೈ ರಾಯಭಾರಿಗಳು. ನಿಮ್ಮ ಯೋಗದಾನವಿಲ್ಲದೇ ಈ ಸುಂದರ, ವೈಭವದ ನಗರವನ್ನು ಈ ಮಟ್ಟಕ್ಕೆ ಬೆಳೆಸಲು ಸಾಧ್ಯವಾಗುತ್ತಿರಲಿಲ್ಲ. ನೀವು ಅಭಿವೃದ್ಧಿಯ ಚಾಲಕರು. ನೀವು ನಮ್ಮ ಬಂಡವಾಳ. ನಾವು ಜನರಿಗೆ ನೀಡುವ ಸೇವೆಯನ್ನು ಅವರಿಗೆ ತಲುಪಿಸುವುವರೇ ನೀವು. ದುಬೈ ನಗರ world class ಆಗಿದೆ. ನಮ್ಮ ಸರ್ಕಾರಿ ನೌಕರರ ಕೆಲಸದ ಮೌಲ್ಯವೂ world class ಆಗಿದೆ ಎಂದರ್ಥ. ನಮಗೆ ಬೇಕಾಗಿರುವವರು ಉತ್ಕೃಷ್ಟ, ಪರಿಪೂರ್ಣ ಕೆಲಸಗಾರರು, ಕೈಗೆತ್ತಿಕೊಂಡ ಕೆಲಸದಲ್ಲಿ ಶ್ರೇಷ್ಠತೆ ಮೆರೆಯುವವರು. A great vision can only be achieved by a great team. ಹಿಂದಿನ ವರ್ಷವೊಂದೇ ನಮ್ಮ 55 ಸಾವಿರ ಸರ್ಕಾರಿ ಸಿಬ್ಬಂದಿ ತರಬೇತಿಗಾಗಿ ಹದಿಮೂರು ಲಕ್ಷ ಗಂಟೆಗಳ ಬಂಡವಾಳ ಹೂಡಿದ್ದೇವೆ. ನೀವೇ ನಮಗೆ capital (ಬಂಡವಾಳ). ನೀವು ಜೀವನದಲ್ಲಿ ಮುಂದೆ ಬನ್ನಿ. ದುಬೈ ತನ್ನಿಂದ ತಾನೆ ಮುಂದೆ ಬರುತ್ತದೆ. ನೀವು ಕೊಡುವ ಸಾಮರ್ಥ್ಯ ಹೊಂದಿದರೆ ಮಾತ್ರ ದೇಶ ಉದ್ಧಾರವಾಗುತ್ತದೆ.'
ಅಂದು ಮಕ್ತೌಮ್ ಹೇಳಿದ ಕೆಲವು ವಿಚಾರಗಳನ್ನು ನಿಮಗೆ ಕೇಳಿಸಬೇಕು. ಒಂದು ದೇಶವನ್ನು ಮುನ್ನಡೆಸುವವರು ಹೇಗೆ ಯೋಚಿಸುತ್ತಿದ್ದಾರೆಂಬುದು ಗೊತ್ತಾದೀತು.
- ಸರ್ಕಾರಿ ನೌಕರರಾದ ನೀವು ಕಾರಕೂನರಲ್ಲ, ಹೇಳಿದ್ದಷ್ಟನ್ನೇ ಮಾಡಿ ಹೋಗುವ ಗುಮಾಸ್ತರಲ್ಲ. ನೀವು ನಿಮಗೆ ಒಪ್ಪಿಸಿದ ರಂಗದಲ್ಲಿ ಲೀಡರ್ ಎಂದು ಭಾವಿಸಿ True leadership is not in one's way of thinking. ನಿಜವಾದ ನಾಯಕನಾದವನು ತನ್ನ ಹುದ್ದೆ, ಸ್ಥಾನಮಾನದಿಂದ ಅಧಿಕಾರವನ್ನು ಪಡೆಯುವುದಿಲ್ಲ. ಆದರೆ ತನ್ನ ಜ್ಞಾನ, ವಿವೇಕ, ಜನರ ಪ್ರೀತಿ, ವೈಯಕ್ತಿಕ ವರ್ಚಸ್ಸು, ಶಿಕ್ಷಣ, ಅರ್ಹತೆಯಿಂದ ಅದನ್ನು ಪಡೆಯುತ್ತಾನೆ. ಸರ್ಕಾರಿ ನೌಕರರೇ, ನೀವೆಲ್ಲ ನಾಯಕರು. ಆದ್ದರಿಂದ ನಿಮ್ಮೆಲ್ಲರಿಗೂ ನಿರೀಕ್ಷೆಗಳನ್ನು ಮುಟ್ಟುವ ಸಾಮರ್ಥ್ಯವಿದೆ.
- ಸರ್ಕಾರಿ ನೌಕರಿಯನ್ನು ನೌಕರಿ ಎಂದು ಭಾವಿಸಿದರೆ, ನೀವು ಚಾಕರಿ ಮಾಡಿ ಎದ್ದು ಹೋಗುತ್ತೀರಿ. ಅದನ್ನು ಮಾಡಲು ನೀವೇ ಬೇಕು ಎಂದಿಲ್ಲ. ಯಾರು ಬೇಕಾದರೂ ಮಾಡುತ್ತಾರೆ. ಆದರೆ ನೀವು ನೌಕರರಲ್ಲ. ನಾಯಕರು. ಅಂದರೆ ನೀವು ಚಾಕರಿ ಮಾಡುತ್ತಿಲ್ಲ. ನಿಮ್ಮ ಸಾಮರ್ಥ್ಯ, ಜಾಣ್ಮೆ, ಕೌಶಲವನ್ನು ಪ್ರದರ್ಶಿಸಲು ಸಿಕ್ಕಿದ ಅಪೂರ್ವ ಅವಕಾಶ ಎಂದು ಭಾವಿಸಿ. ಅಲ್ಲದೇ ನಿಮ್ಮ ದೇಶದ ಇತಿಹಾಸವನ್ನು ನಿರ್ಮಿಸಲು ನಿಮಗೆ ಪ್ರಾಪ್ತವಾದ ಅದ್ಭುತ ಅವಕಾಶ ಎಂದು ಭಾವಿಸಿ. ಈ ಗುಂಗಿನಲ್ಲಿ ಕೆಲಸ ಮಾಡಿ. ಚಾಕರಿ ಮಾಡುವವರು ಬಿಕಾರಿಗಳು. ಅದಕ್ಕೆ ಯಾವ ಪರಿಣತಿಯೂ ಬೇಡ. ನೀವೊಬ್ಬ ಸುಂದರ ಪೇಂಟಿಂಗ್ ಬಿಡಿಸುವ ಕ್ಯಾನ್ವಾಸ್ ಮುಂದಿರುವ ಕಲಾವಿದ ಎಂದು ತಿಳಿಯಿರಿ. ನಿಮ್ಮನ್ನು ಇದಕ್ಕಿಂತ ಕಡಿಮೆ ಎಂದು ನಾನಂತೂ ತಿಳಿದಿಲ್ಲ.
- ದೈನಂದಿನ ಕೆಲಸ -ಕಾರ್ಯಗಳ ನಡುವೆ ನಿಮ್ಮ ಸಾಮರ್ಥ್ಯವನ್ನು ಸತತ ಹೆಚ್ಚಿಸಿಕೊಳ್ಳಿ. ನೀವು ಹೆಚ್ಚು ಹೆಚ್ಚು ಜ್ಞಾನವನ್ನು ಸಂಪಾದಿಸಿಕೊಳ್ಳಿ. ನಿಮ್ಮ ನೋಟವನ್ನು ವಿಸ್ತರಿಸಿಕೊಳ್ಳಿ. ಪರಿಶ್ರಮ, ಸಂಯಮ, ಸಮಚಿತ್ತ ಸದಾ ನಿಮ್ಮನ್ನು ಮುನ್ನಡೆಸುವ ವಾಹಕಗಳಾಗಲಿ. ನಮ್ಮ ದೇಶದ ವಿಷಯದಲ್ಲಿ ಪ್ರಥಮ ಸ್ಥಾನದ ಹೊರತಾಗಿ ನಮಗೆ ಮತ್ತ್ಯಾವ ಸ್ಥಾನ ಸಿಕ್ಕರೂ ನಾವು ಸಂತೃಪ್ತರಾಗುವುದು ಬೇಡ. ಸದಾ ಉತ್ಕೃಷ್ಟತೆಗಾಗಿ ಚಡಪಡಿಸೋಣ. ನಿಮ್ಮ ಪ್ರತಿ ಪ್ರಯತ್ನ, ಕೆಲಸ ದೇಶವನ್ನು ನಂಬರ್ ಒನ್ ಮಾಡುವ ದಿಕ್ಕಿನಲ್ಲಿ ಪೂರಕವಾಗಿರಲಿ.
- ಕೆಲವರು ನನ್ನ ಮುಂದೆ ಬಂದು 'ಈ ಕೆಲಸ ಮಾಡಲು ಸಾಧ್ಯವಿಲ್ಲ' ಅಂತಾರೆ. ನಾನು ಹಿಂದೆ ಮುಂದೆ ನೋಡದೇ 'ಸಾಧ್ಯವಿದೆ, ಸಾಧ್ಯವಿದೆ' ಎಂದು ಹೇಳುತ್ತೇನೆ. ಕಾರಣ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದು ನನಗೆ ಒಂದಲ್ಲ, ಹತ್ತಲ್ಲ, ನೂರಾರು ಸಲ ಮನವರಿಕೆಯಾಗಿದೆ. ಹೀಗಾಗಿ ಯಾರೇ ಬಂದು 'ಆಗೊಲ್ಲ' ಅಂದ್ರೆ 'ಆಗುತ್ತದೆ' ಅಂತೇನೆ. ಸಾಧ್ಯ ಮಾಡಿ ತೋರಿಸುತ್ತೇನೆ. ಹೀಗಾಗಿ ಯಾರೂ ನನ್ನ ಬಳಿ ಬಂದು 'ಇಂಪಾಸಿಬಲ್' ಎಂಬ ಪದ ಬಳಸುವುದಿಲ್ಲ. 'It's possible but' ಅಂತಾರೆ. 'But ಯಾಕೆ? It's possible' ಎಂದಷ್ಟೇ ಹೇಳಿ ಎಂದು ಹೇಳುತ್ತೇನೆ. ಈ ಮಾತನ್ನು ನಾನು ತುಸು ಧಾರ್ಷ್ಟ್ಯದಿಂದಲೇ ಹೇಳುತ್ತಿದ್ದೇನೆ. ಜಗತ್ತಿನಲ್ಲಿಯೇ ಎತ್ತರದ ಕಟ್ಟಡ ಕಟ್ಟಬೇಕೆಂದು ಹೇಳಿದಾಗ ಸಾಧ್ಯವಿಲ್ಲ ಅಂದರು. ನಾವು ದಾಖಲೆ ಅವಧಿಯಲ್ಲಿ ಬುರ್ಜ್ ಖಲೀಫಾ ಕಟ್ಟಿದೆವು. ಇದನ್ನು ಕಟ್ಟುವ ಮೊದಲು ಎಲ್ಲರೂ'ಅದು ಸಾಧ್ಯವಾಗದ ಮಾತು' ಎಂದೇ ಹೇಳಿದ್ದರು. ಹಾಗೆ ಹೇಳಿದವರು ಈಗ ಎಲ್ಲಿ ಇದ್ದಾರೋ ಗೊತ್ತಿಲ್ಲ.
- ನನ್ನ ಮನೆಯ ಹಜಾರದಲ್ಲಿ ಗ್ರಿಫಿನ್ ಎಂಬ ಕಾಲ್ಪನಿಕ ಪಕ್ಷಿಯ ಪೇಂಟಿಂಗ್ ಅನ್ನು ತಗುಲಿ ಹಾಕಿಕೊಂಡಿದ್ದೇನೆ. ಗ್ರೀಕ್ ಪುರಾಣದಲ್ಲಿ ಈ ಪಕ್ಷಿಯ ಪ್ರಸ್ತಾಪವಿದೆ. ಹದ್ದಿನ ಮುಖದ ಸಿಂಹದ ದೇಹದ ಈ ಪಕ್ಷಿ ನಮಗೆ ಅಸಾಧ್ಯವಾದುದನ್ನು ಸಾಧ್ಯಮಾಡುವುದಕ್ಕೆ ನಿರಂತರ ಪ್ರೇರಣೆ ನೀಡುತ್ತದೆ. ಈ ಪಕ್ಷಿಯ ವೈಶಿಷ್ಟ್ಯವೇನೆಂದರೆ, ಇದು ಸದಾ ಆಗಸದಲ್ಲಿ ಹಾರುತ್ತಾ ಇರುತ್ತದೆ. ನೆಲದ ಮೇಲಾಗಲಿ, ಮರದ ಮೇಲಾಗಲಿ ಕುಳಿತುಕೊಳ್ಳುವುದಿಲ್ಲ. ಎಷ್ಟೇ ಹಾರಿದರೂ ಅದಕ್ಕೆ ಸುಸ್ತಾಗುವುದಿಲ್ಲ. ಹಾರುವಾಗಲೇ ಆಕಾಶದಲ್ಲಿ ಮೊಟ್ಟೆಯಿಟ್ಟು, ಅಲ್ಲಿಯೇ ಕಾವು ಕೊಟ್ಟು ಮರಿಗಳನ್ನು ಹಾಕುತ್ತದೆ. ಮರಿಗಳು ಹುಟ್ಟಿದ ತಕ್ಷಣವೇ ಹಾರಲಾರಂಭಿಸುತ್ತವೆ. ನಿಜ ಹೇಳಿ. ಇದು ಸಾಧ್ಯವಾ? ಸಾಧ್ಯವಿಲ್ಲ ತಾನೆ. ಆದರೆ ಇದು ಕಲ್ಪನೆಯಲ್ಲಾದರೂ ಸಾಧ್ಯವಾಗಿದೆಯಲ್ಲ. ಗ್ರಿಫಿನ್ ಪಕ್ಷಿ ನಿಜವಾಗಿಯೂ ಇದ್ದಿರಬಹುದು ಎಂದೆನಿಸುತ್ತದೆ. ನಮ್ಮ ಕಲ್ಪನೆಯನ್ನು ನಿಜಗೊಳಿಸಲು, ಇಂಪಾಸಿಬಲ್‌ನ್ನು ಪಾಸಿಬಲ್ ಮಾಡಲು ಈ ಪಕ್ಷಿ ಸೃಷ್ಟಿಯಾಗಲಿ ಎಂದು ನಾನು ಯಾವತ್ತೂ ಅಂದುಕೊಳ್ಳುತ್ತೇನೆ.
- ದುಬೈಯಂಥ ಉರಿಬಿಸಿಲ ನಾಡಿನಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಾಧ್ಯವೇ ಇಲ್ಲ ಎಂದು ಎಲ್ಲರೂ ಹೇಳುತ್ತಿದ್ದರು. ಒಂದು ವೇಳೆ ಸಾಧ್ಯವಾಗುವಂತಿದ್ದರೆ, ಬೇರೆ ಅರಬ್ ದೇಶಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ ಎಂದು ಅನೇಕರು ನನ್ನ ಬಳಿ ಹೇಳುತ್ತಿದ್ದರು. ಅವರ ದೃಷ್ಟಿಯಲ್ಲಿ ದುಬೈ ಪ್ರವಾಸಿ ತಾಣವಾಗಲು ಸಾಧ್ಯವೇ ಇಲ್ಲ. ಆದರೆ ಪ್ರತಿ ವರ್ಷ ದುಬೈಗೆ ಒಂದು ಕೋಟಿ ಜನ ಬರುತ್ತಿದ್ದಾರೆ.
- ಸಮುದ್ರದ ಮೇಲೆ ಕಟ್ಟಡ, ಬಡಾವಣೆ ನಿರ್ಮಿಸುವುದು ಸಾಧ್ಯವಾ? ನಾವು ಪಾಮ್ ಐಲ್ಯಾಂಡ್ ಯೋಜನೆಯನ್ನು ಕೈಗೆತ್ತಿಕೊಂಡಾಗ ಎಲ್ಲರೂ ನಮ್ಮ ಉತ್ಸಾಹಕ್ಕೆ ತಣ್ಣೀರೆರಚಿದರು. ಜಗತ್ತಿನಲ್ಲಿ ಎಲ್ಲೂ ಈ ಯೋಜನೆ ಯಶಸ್ವಿಯಾಗಿಲ್ಲ ಎಂದರು. ಅದಕ್ಕೆ ನಾನು ಹೇಳಿದೆ-'ಜಗತ್ತಿನಲ್ಲಿ ಯಾರೂ ಇಂಥ ಯೋಜನೆ ಕೈಗೆತ್ತಿಕೊಳ್ಳಲು ಧೈರ್ಯ ಮಾಡಿಲ್ಲ'. ನಾವು ಧೈರ್ಯ ಮಾಡಿದೆವು. ಇಂದು ವಿಶ್ವದಲ್ಲಿಯೇ ಅತಿ ಭವ್ಯ ಮಾನವ ನಿರ್ಮಿತ ದ್ವೀಪವನ್ನು ನಿರ್ಮಿಸಿದ್ದೇವೆ. ಸಾವಿರಾರು ಕಟ್ಟಡಗಳನ್ನು ಕಟ್ಟಿದ್ದೇವೆ. ಲಕ್ಷಾಂತರ ಜನ ಅಲ್ಲಿ ವಾಸಿಸುತ್ತಿದ್ದಾರೆ. ಈ ಎಲ್ಲ ಘಟನೆಗಳಿಂದ ನನಗೆ ಒಂದು ಸಂಗತಿ ಸ್ಪಷ್ಟವಾಗಿದೆ. ಅಸಾಧ್ಯವೆಂಬುದು ಯಾವುದೂ ಇಲ್ಲ. ಸರ್ಕಾರಿ ಸಿಬ್ಬಂದಿಯಾಗಿ, ಸರ್ಕಾರಿ 'ನಾಯಕ'ರಾಗಿ ನಿಮ್ಮ ಮನಸ್ಸಿನಲ್ಲಿ ಇಂಪಾಸಿಬಲ್ ಎಂಬ ಪದವನ್ನು ನಿಮ್ಮ ಮನಸ್ಸಿನೊಳಗೆ ಬಿಟ್ಟುಕೊಳ್ಳಬೇಡಿ. ಆ ಒಂದು ಶಬ್ದ ನಿಮ್ಮನ್ನು ಕುಬ್ಜರನ್ನಾಗಿ, ದುರ್ಬಲರನ್ನಾಗಿ ಮಾಡುತ್ತದೆ. ಅದಕ್ಕೂ ಮುಖ್ಯವಾಗಿ ದುರ್ಬಲ ಹಾಗೂ ಸಬಲ ಎಂಬುದೂ ಇಲ್ಲ. ಒಂದು ಕಾರ್ಯವನ್ನು ಕೈಗೆತ್ತಿಕೊಳ್ಳಲು ಮನಸ್ಸಿದೆಯಾ ಅಥವಾ ಇಲ್ಲವಾ ಎಂಬುದಷ್ಟೇ ಪರಿಗಣಿತವಾಗುತ್ತದೆ.
- ನಾವು ಯೋಚಿಸುವ, ಗ್ರಹಿಸುವ ಕೆಲಸ ಮಾಡುವ ವಿಧಾನ ಕ್ಷಿಪ್ರ ಬದಲಾಗುತ್ತಿದೆ. ಅದೇ ರೀತಿ ಸರ್ಕಾರದ ಕಲ್ಪನೆಯೂ ಬದಲಾಗುತ್ತಿದೆ. ಬೆಳಗ್ಗೆ ಹತ್ತರಿಂದ ಸಾಯಂಕಾಲ ಆರರ ತನಕ ಕೆಲಸ ಮಾಡುವುದಷ್ಟೇ ಸರ್ಕಾರ ಅಲ್ಲ. ಖಾಸಗಿ ವಲಯ ವರ್ಷವಿಡೀ 24ಳ7 ಗಂಟೆ ಕೆಲಸ ಮಾಡುವುದಾದರೆ, ಸರ್ಕಾರಿ ವಲಯವೇಕೆ ನಿರಾಳವಾಗಿರಬೇಕು? ನಮ್ಮ ಸರ್ಕಾರ ನಮ್ಮ ಏರ್‌ಲೈನ್ ರೀತಿ, ದಿನದ ಇಪ್ಪತ್ನಾಲ್ಕು ಗಂಟೆ ಕೆಲಸ ಮಾಡಬೇಕು.
- ನಮ್ಮ ಸರ್ಕಾರ ಹೇಗಿರಬೇಕೆಂದರೆ, ಸಾರ್ವಜನಿಕರು ಖಾಸಗಿ ರಂಗಕ್ಕಿಂತ ಸರ್ಕಾರದ ಸೇವೆಯೇ ಉತ್ತಮವಾಗಿದೆ ಎಂದು ಪ್ರಶಂಸಿಸಬೇಕು. ಸರ್ಕಾರಿ ಕಚೇರಿಗೆ ಬರುವ ಸಾರ್ವಜನಿಕರನ್ನು, ಪಂಚತಾರಾ ಹೋಟೆಲ್‌ಗೆ ಬರುವ ಅತಿಥಿಗಳಂತೆ ಸ್ವಾಗತಿಸಲು, ಸೇವೆ ಮಾಡಲು ಏಕೆ ಸಾಧ್ಯವಿಲ್ಲ? ನಾವೂ ಅಂಥ ಸೇವೆಯನ್ನು ನೀಡಬಹುದಲ್ಲ? ಬ್ಯಾಂಕ್‌ಗಳು ಚೆಕ್‌ಗಳನ್ನು ಕ್ಲಿಯರ್ ಮಾಡುವ ರೀತಿಯಲ್ಲಿ ನಮ್ಮ ಸರ್ಕಾರಗಳು ಫೈಲ್‌ಗಳನ್ನು ಕ್ಲಿಯರ್ ಮಾಡುವಂತಾಗಬೇಕು.
- ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರೆಲ್ಲ ಇಂಟರ್‌ರ್ನೆಟ್ ಸಂಪರ್ಕ ಹೊಂದಿರುತ್ತಾರೆ. ಸದಾ ಸ್ಮಾರ್ಟ್‌ಫೋನ್, ಬ್ಲ್ಯಾಕ್‌ಬೆರಿ ಫೋನ್‌ಗಳ ಮೂಲಕ ಸದಾ ಆಫೀಸಿನೊಂದಿಗೆ connect ಆಗಿರುತ್ತಾರೆ. ಆಫೀಸಿನಲ್ಲಿಯೇ ಇರಬೇಕೆಂದಿಲ್ಲ. ಮನೆಯಿಂದ ಸಹ ಕೆಲಸ ಮಾಡುತ್ತಾರೆ. ಸರ್ಕಾರಿ 'ನಾಯಕ'ರೂ ಹೀಗೆ ಆಫೀಸಿನಲ್ಲಿ ಇಲ್ಲದಿದ್ದರೂ connect ಆಗಿರಬೇಕು. ಖಾಸಗಿಯವರಿಗೆ ಇದು ಸಾಧ್ಯವಾಗುವುದಾದರೆ, ಸರ್ಕಾರದಲ್ಲಿರುವವರಿಗೆ ಯಾಕೆ ಸಾಧ್ಯವಾಗಬಾರದು? ಖಾಸಗಿ ರಂಗದಲ್ಲಿ ಅರ್ಹತೆ, ಶ್ರಮವೇ ಕೆಲಸದಲ್ಲಿ ಮುಂದುವರೆಯುವುದಕ್ಕೆ ಅಳತೆಗೋಲು. ಈ ನಿಯಮ ಸರ್ಕಾರಿ ಸಿಬ್ಬಂದಿಗೂ ಅನ್ವಯವಾಗುವಂತಾಗಬೇಕು. ಆಫೀಸು ಸಮಯ ಮುಗಿದ ನಂತರವೂ ಸರ್ಕಾರ ಸಕ್ರಿಯವಾಗಿರಬೇಕು. ಸರ್ಕಾರಿ ಕಚೇರಿಯಲ್ಲಿ ಇಂಟರ್‌ನೆಟ್ ಸಂಪರ್ಕ, ವೈಫೈ ಕಡ್ಡಾಯವಾಗಬೇಕು. ಇದರಿಂದ ಸರ್ಕಾರ ಕ್ಷಿಪ್ರ ಗತಿಯಲ್ಲಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಒಂದು ದೇಶ ಶೀಘ್ರ ಪ್ರಗತಿ ಹೊಂದಿದೆಯೆಂದರೆ, ಅಲ್ಲಿನ ಸರ್ಕಾರ, ಆಡಳಿತ ಯಂತ್ರ ಕ್ರಿಯಾಶೀಲವಾಗಿದೆ ಎಂದರ್ಥ. ನಮ್ಮ ದೇಶ ವಿಶ್ವದಲ್ಲಿ ನಂಬರ್ ಒನ್ ಸ್ಥಾನವನ್ನು ಹೊಂದಬೇಕೆಂದು ನಾವೆಲ್ಲ ಬಯಸುವುದಾದರೆ, ಈ ಹೊಸ ಬದಲಾವಣೆಗೆ ನಮ್ಮನ್ನು ಒಡ್ಡಿಕೊಳ್ಳಬೇಕು. ದೇಶ ಮುಂದುವರಿದರೆ, ಪ್ರಗತಿಯಾದರೆ ಅದರ ಲಾಭ ನಮಗೇ ದಕ್ಕುತ್ತದೆ.
- ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲ ದೇಶಗಳಿಗೂ ಸಮ ಅವಕಾಶಗಳಿವೆ. ಯಾರು ಬೇಕಾದರೂ ನಂಬರ್‌ಒನ್ ಸ್ಥಾನಕ್ಕೆ ಬರಬಹುದು. ನಮಗಿರುವ ಅವಕಾಶವನ್ನು ಬೇರೆಯವರಿಗೆ ಬಿಟ್ಟುಕೊಡುವುದು ಮೂರ್ಖತನ.
- ವಿಶ್ವೇಶ್ವರ ಭಟ್
vbhat@me.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics