ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸಲಿಂಗ ಸಂಗ ನೈಸರ್ಗಿಕ ಹೇಗಾದೀತು?

Srinivasa Murthy VN
Updated On : 19 Dec 2013, 11:51 am

ಕಳೆದೊಂದು ವಾರದಿಂದ 'ಚಪ್ಪಾಳೆ' ಸದ್ದಿಗೆ ಪರ, ವಿರೋಧದ ಧ್ವನಿ ಹೊರಹೊಮ್ಮುತ್ತಿದೆ. ಲೈಂಗಿಕ ಅಲ್ಪಸಂಖ್ಯಾತರಿಗೆ ಕಾನೂನಿನ ಮಾನ್ಯತೆ ನೀಡಿ 'ತೃಪ್ತಿ'ಪಡಿಸಿ ಎಂಬ ಘೋಷಣೆ ಮೊಳಗುತ್ತಿದೆ. ಅವರೂ ನಮ್ಮಂತೆ ಮನುಷ್ಯರೇ, ಎಲ್ಲ 'ಸುಖ'ವನ್ನು ಅವರೂ ಅನುಭವಿಸಲಿ ಎಂಬ ಮಮಕಾರದ ಮಾತುಗಳಿಗೇನೂ ಕಮ್ಮಿಯಿಲ್ಲ.
ಕಾಲ ಬದಲಾಗುತ್ತಿದೆ. ನಾವು ಹಿಂದೆ ಇದ್ದಂತೆ ಈಗ ಇಲ್ಲ. ವಿಶಾಲ ಮನೋಭಾವದಿಂದ ಬದುಕುವ ಕಾಲದಲ್ಲಿ ಬಂದು ನಿಂತಿದ್ದೇವೆ. ಎಲ್ಲರಿಗೂ ಸರಿಸಮನಾದ 'ಹಕ್ಕು' ನೀಡಬೇಕು ಎಂಬ ವಾದ ಮಂಡಿಸಲಾಗುತ್ತಿದೆ. ಅದೆಲ್ಲಾ ಒಪ್ಪಿಕೊಳ್ಳುವಂಥದ್ದೇ. ಆದರೆ, ನಿಸರ್ಗಕ್ಕೆ ವಿರುದ್ಧವಾದ ಕ್ರಿಯೆಗಳಿಗೆ ಬೆಂಬಲ ನೀಡುವಾಗ ಕೊಂಚ ಯೋಚಿಸಲೇಬೇಕಾದ ಅನಿವಾರ್ಯತೆ ಇದೆ.
ಕಲಂ 377ರ ಪ್ರಕಾರ ಅನೈಸರ್ಗಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಅಪರಾಧ. ಇದು ಇಂದು ನಿನ್ನೆ ಜಾರಿಯಾದ ಕಾನೂನಲ್ಲ. ಅನಾದಿ ಕಾಲದಿಂದಲೂ ಅಲಿಖಿತವಾಗಿ ಬಂದಿರುವಂಥದ್ದು. ಅಷ್ಟೇ ಅಲ್ಲದೆ, 1861ರಲ್ಲಿ ಬ್ರಿಟಿಷ್ ಇಂಡಿಯಾ ಕಾಲದಲ್ಲೇ ಕಾನೂನಿನ ಚೌಕಟ್ಟು ಕಟ್ಟಿದ ಬಳಿಕ ಅದಕ್ಕೆ ಮೂರ್ತ ರೂಪ ನೀಡಲಾಗಿದೆ. ಹೆಣ್ಣು-ಗಂಡಿನ ನಡುವಿನ ಪ್ರೀತಿ, ಪ್ರೇಮ, ಪ್ರಣಯ ನೈಸರ್ಗಿಕವಾದದ್ದು. ಆದರೆ, 'ಸಲಿಂಗ' ಸಂಗವನ್ನೂ ಪ್ರೀತಿ, ಪ್ರೇಮ, ಪ್ರಣಯ ಎಂದು ವಿಶ್ಲೇಷಿಸುವುದು ಮೂರ್ಖತನ. ಯಾವುದೇ ವಿಷಯದಲ್ಲಾಗಲಿ ಪ್ರಕೃತಿ ಅಥವಾ ನಿಸರ್ಗದ ವಿರುದ್ಧವಾಗಿ 'ತೃಪ್ತಿ'ಪಡಿಸಲು ಹೋದರೆ ಗಂಡಾಂತರ ತಪ್ಪಿದ್ದಲ್ಲ. ನಮ್ಮ ಅನುಕೂಲಕ್ಕೆ ತಕ್ಕಂತೆ ಬದುಕಲು ಕಾಡನ್ನೇ ನಾಡಾಗಿ ಪರಿವರ್ತಿಸಿದ್ದರಿಂದ ಇಂದು 'ತಾಪ'ಮಾನ ವೈಪರೀತ್ಯದಿಂದ ತತ್ತರಿಸುತ್ತಿದ್ದೇವೆ. ಜಲಪ್ರಳಯದಂಥ ಸಂಕಷ್ಟಕ್ಕೆ ಸಿಲುಕುತ್ತಿದ್ದೇವೆ. ಇಂಥ ನೂರಾರು ಉದಾಹರಣೆಗಳು ನಮ್ಮ ಕಣ್ಮುಂದೆಯೇ ಇರುವಾಗ 'ಸಲಿಂಗ ಕಾಮ'ದ ವಿಷಯದಲ್ಲೂ ನಿಸರ್ಗದ ವಿರುದ್ಧವಾಗಿ ನಿರ್ಧಾರ ತೆಗೆದುಕೊಳ್ಳಲು ಹೊರಟಿರುವುದು ಒಪ್ಪುವಂಥದಲ್ಲ. ಊಟವನ್ನು ಬಾಯಿಂದಲೇ ಮಾಡಬೇಕೇ ಹೊರತು ತಿರುಗಾ ಮುರುಗಾ ಮಾಡಿದರೆ ಯಾವತ್ತೂ 'ತೃಪ್ತಿ' ಸಿಗುವುದಿಲ್ಲ!
ಪರ ರಾಷ್ಟ್ರಗಳಲ್ಲಿ 'ಸಲಿಂಗ ಸಂಗ' ಸಕ್ರಮ ಇರಬಹುದು. ಅಲ್ಲಿನ ಭಾಷೆ, ಸಂಸ್ಕೃತಿ, ವೈವಿಧ್ಯತೆ ಎಲ್ಲವೂ ವಿಭಿನ್ನ. ಆದರೆ, ಭಾರತದಂಥ ವೈವಿಧ್ಯತೆಯ ರಾಷ್ಟ್ರದಲ್ಲಿ ಇದು ಅಸಾಧ್ಯದ ಮಾತು. ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರ ಎಲ್ಲವೂ ಭಿನ್ನ-ವಿಭಿನ್ನ. ಗಂಡು, ಹೆಣ್ಣಿನ ಪ್ರೀತಿ ಹೊರತುಪಡಿಸಿ ಇನ್ನಾವುದನ್ನೂ ಇಲ್ಲಿ ಒಪ್ಪಿಕೊಳ್ಳುವ ಮನಸ್ಥಿತಿ ಇಲ್ಲ. ಬದಲಾವಣೆ ಕಾಲದಲ್ಲಿ ಬಂದು ನಿಂತಿದ್ದರೂ ನಮ್ಮ ಬೇರುಗಳು ಮಾತ್ರ ನಮ್ಮ ಭವ್ಯ ಸಂಸ್ಕೃತಿ, ಆಚಾರ, ವಿಚಾರಗಳಿಗೆ ಥಳಕು ಹಾಕಿಕೊಂಡಿವೆ. ಅಷ್ಟು ಸಲೀಸಾಗಿ ಅನ್ಯ ದೇಶಗಳನ್ನು 'ಸಲಿಂಗ' ವಿಷಯದಲ್ಲಿ ಅನುಕರಣೆ ಮಾಡಲು ಸಾಧ್ಯವೇ ಇಲ್ಲ. ಸಂಸ್ಕೃತಿ ವಿಚಾರ ಪಕ್ಕಕ್ಕಿಟ್ಟು ಕಾನೂನಿನ ಮೂಲಕ 'ಸಕ್ರಮ'ಗೊಳಿಸುತ್ತೇವೆ ಎಂಬ ವಾದವೂ ಬಲವಾಗಿದೆ. ಒಂದು ವಿಷಯ ನೆನಪಿಟ್ಟುಕೊಳ್ಳಲೇಬೇಕು. ಎಲ್ಲ ವಿಷಯಕ್ಕೂ ಕಾನೂನಿನ ಚೌಕಟ್ಟು ಕಟ್ಟಿ 'ತೃಪ್ತಿ'ಪಡಿಸುವುದು ಸಾಧ್ಯವೇ ಇಲ್ಲ. ಕಾನೂನಿನ ಮೂಲಕವೇ ಎಲ್ಲವನ್ನೂ ಹತೋಟಿಗೆ ತರುವುದಾಗಿದ್ದರೆ ಇಂದು ಭ್ರಷ್ಟಾಚಾರ ಎಂಬುದು ಕೊಂಚವೂ ಇರುತ್ತಿರಲಿಲ್ಲ. ಲೈಂಗಿಕ ಅಲ್ಪಸಂಖ್ಯಾತರ ವಿಚಾರ ಎಂಬುದು ಭಾವನಾತ್ಮಕ ವಿಷಯ. ಹೀಗಾಗಿ ಜನರ ದೃಷ್ಟಿಕೋನ ಬದಲಾದರೆ ಮಾತ್ರ ಇದರಲ್ಲಿ ಬದಲಾವಣೆ ಕಾಣಲು ಸಾಧ್ಯ. ಪರದೇಶದಂತೆ ಭಾರತದಲ್ಲಿ ಇದನ್ನು ನಿರೀಕ್ಷಿಸುವುದು ತುಸು ಕಷ್ಟ.
ಇದು ಎಲ್ಲ ರಾಜಕೀಯ ಪಕ್ಷಗಳಿಗೂ ಗೊತ್ತು. ಆದರೂ ಈ ವಿಷಯಕ್ಕೆ ರಾಜಕೀಯ ಬಣ್ಣ ಬಳಿಯಲಾಗುತ್ತಿದೆ. ಸಮಾಜವಾದಿ ಪಕ್ಷ, ಬಿಜೆಪಿ 'ಸಲಿಂಗಕಾಮ' ಸಕ್ರಮಕ್ಕೆ ವಿರೋಧಿಸಿ ಧ್ವನಿ ಎತ್ತುತ್ತಿವೆ. ಅಲ್ಪಸಂಖ್ಯಾತ ಸಮುದಾಯದ ಓಲೈಕೆ ಇದ್ದರೂ ಇರಬಹುದು. ಇದೇ ವೇಳೆ, ಕಾಂಗ್ರೆಸ್ ಸೇರಿದಂತೆ ಇತರೆ ರಾಜಕೀಯ ಪಕ್ಷಗಳಿಗೆ ಮಾನ್ಯತೆ ಬೇಕು ಎನ್ನುವ ಮೂಲಕ ತಮ್ಮದೇ ಬೇಳೆ ಬೇಯಿಸಿಕೊಳ್ಳಲು ಮುಂದಾಗಿವೆ.  ಆದರೆ, ನಮ್ಮ ಸಂಸ್ಕೃತಿಗೆ ವಿರುದ್ಧವಾದ ವಿಷಯವನ್ನು ವಿರೋಧಿಸಿದಾಗಲೂ ಅದಕ್ಕೆ 'ಮತ ಬ್ಯಾಂಕ್‌' ಹಣೆಪಟ್ಟಿ ಕಟ್ಟುವುದು ತರವಲ್ಲ. ಅಲ್ಪಸಂಖ್ಯಾತ ಸಮುದಾಯಗಳನ್ನು ಓಲೈಸಲು ಇದೇ ವಿಷಯ ಮುಂದಿಟ್ಟುಕೊಂಡು ಪ್ರಚಾರ ಮಾಡಬೇಕಾದ ಅಗತ್ಯ ಉಭಯ ಪಕ್ಷಗಳಿಗೂ ಇಲ್ಲ. ಮುಂದುವರಿದ ದುನಿಯಾದಲ್ಲಿ ಬದುಕುತ್ತಿರುವಾಗ ಪರ್ಯಾಯ ಮಾರ್ಗ ಕಂಡುಕೊಳ್ಳುವ ಉಪಾಯ ಕಂಡುಕೊಳ್ಳಬೇಕೇ ಹೊರತು ಅದಕ್ಕೆ ಕಾನೂನಿನ ಮಾನ್ಯತೆ ನೀಡುತ್ತೇವೆ ಎಂದು ಮೊಂಡು ವಾದ ಮಂಡಿಸುವುದು ಸರಿಯಲ್ಲ.

- ಚನ್ನು ಮೂಲಿಮನಿ
ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement