ಅಂಕಣಗಳು

ಬಂಡಾಯವಲ್ಲ, ಬಯಲಾದದ್ದು ಬರಗೂರರ ಬಂಡವಾಳ!

ಮೊಸರಲ್ಲಿ ಕಲ್ಲು ಹುಡುಕುವವರಿಗೆ ಪ್ರಪಂಚದಲ್ಲಿ ಕೊರತೆಯಿಲ್ಲ. ಆದರೆ ಹಾಲು ಕರೆದ ನಂತರ...

ಮೊಸರಲ್ಲಿ ಕಲ್ಲು ಹುಡುಕುವವರಿಗೆ ಪ್ರಪಂಚದಲ್ಲಿ ಕೊರತೆಯಿಲ್ಲ. ಆದರೆ ಹಾಲು ಕರೆದ ನಂತರ ಕೆಚ್ಚಲು ಕೊಯ್ಯುವುದು ಮೊಸರಲ್ಲಿ ಕಲ್ಲು ಹುಡುಕುವುದಕ್ಕಿಂತ ಕೆಟ್ಟ ಕೆಲಸ. ಅಂತಹ ಕೆಲಸಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ಕೈ ಹಾಕಿದ್ದಾರೆ. ಆಳ್ವಾಸ್ ನುಡಿಸಿರಿಯಲ್ಲಿ ಭಾಗವಹಿಸಿದ್ದಕ್ಕಾಗಿ ವಿಚಾರವ್ಯಾಧಿಗಳ ಗುಂಪಿನಿಂದ ಬಂದ ಟೀಕೆಗಳಿಂದ ಬಚಾವ್ ಆಗಲು ಬರಗೂರು ರಾಮಚಂದ್ರಪ್ಪ ಅವರು ಸುಳ್ಳನ್ನೂ ಬೆರೆಸಿದ್ದಾರೆ.
ತಮ್ಮದೇ ಗುಂಪಿನವರ ಟೀಕೆಯಿಂದ ಬಚಾವ್ ಆಗಲು, ತಮ್ಮ ಸಿದ್ಧಾಂತಕ್ಕೆ ಕಟ್ಟುಬೀಳಬೇಕು ಎಂಬ ಏಕೈಕ ಕಾರಣಕ್ಕೆ ಇಂತಹ ಹಸಿಸುಳ್ಳು ಹೇಳುವ ಕೀಳುತನಕ್ಕೆ ಇಳಿಯುವ ಅಗತ್ಯ ಬರಗೂರು ಅವರಿಗೇನಿತ್ತು?
ಅವರು ಮೂಡೂಬಿದಿರೆಯಲ್ಲಿ ನಡೆದ ಆಳ್ವಾಸ್ ವಿಶ್ವ ನುಡಿಸಿರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸನ್ಮಾನ ಸ್ವೀಕರಿಸಿದ್ದಾರೆ. ಆರತಿ ಬೆಳಗಿಸಿಕೊಂಡಿದ್ದಾರೆ. ಸನ್ಮಾನದ ನೆಪದಲ್ಲಿ ಡಾ. ಮೋಹನ ಆಳ್ವ ಅವರು ನೀಡಿದ 50,000 ದುಡ್ಡನ್ನೂ ಸ್ವೀಕರಿಸಿದ್ದಾರೆ. ನಂತರ ಮರುದಿನ ಅಂದರೆ ಡಿ.20ರಂದು ಮುಖ್ಯ ವೇದಿಕೆಯಲ್ಲಿ ಬರಗೂರು ಅವರು "ಸಮಾಜ" ಎಂಬ ವಿಷಯದ ಕುರಿತು ಉಪನ್ಯಾಸ ನೀಡಬೇಕಿತ್ತು. ಆದರೆ ಬರಗೂರು ಅದಕ್ಕೆ ಬರಲಿಲ್ಲ. ಇಷ್ಟೇ ಆಗಿದ್ದರೆ ಅದೇನೋ ಅನಿವಾರ್ಯ ಬರಲಿಲ್ಲ ಅಂದುಕೊಳ್ಳಬಹುದಿತ್ತು. ಆದರೆ ಬರಗೂರು ಅವರು "ವಿಶ್ವನುಡಿಸಿರಿಯಲ್ಲಿ ವೈಭವ ಹೆಚ್ಚಾಗಿದೆ. ನುಡಿಸಿರಿಯ ನಿಜ ಆಶಯಕ್ಕೆ ಧಕ್ಕೆ ಬಂದಿದೆ ಎಂದು ಅನಿಸಿತು. ಅಲ್ಲಿರಲಾಗದೇ ಬಂದುಬಿಟ್ಟೆ" ಎಂದು ಹೇಳಿದ್ದಾರೆ.
ಸನ್ಮಾನ ಸ್ವೀಕರಿಸುವಾಗ, 50,000 ರುಪಾಯಿ ಸ್ವೀಕರಿಸುವಾಗ ಇಲ್ಲದ ಬಂಡಾಯವನ್ನು ಆಮೇಲೆ ಬಡಿದೆಬ್ಬಿಸಿದವರಾರು? ಬರಗೂರರೇ, ಹಣ ಸ್ವೀಕರಿಸುವಾಗ ನಿಮ್ಮ ಬಂಡಾಯವನ್ನೆಲ್ಲ ಎಲ್ಲಿ ಬಚ್ಚಿಟ್ಟಿದ್ದಿರಿ? ನಿಜವಾಗಿಯೂ ಬರಗೂರರಿಗೆ ವಿಶ್ವನುಡಿಸಿರಿಯ ವೈಭವದ ಬಗ್ಗೆ ವಿರೋಧವಿದ್ದರೆ ಅವರು ಸನ್ಮಾನಕ್ಕೆ ಮೊದಲೇ ಬಂಡಾಯದ ಬಾವುಟ ಹಾರಿಸಬೇಕಿತ್ತು. ಅದುಬಿಟ್ಟು ಸನ್ಮಾನವಾಗುವ ತನಕ ಸುಮ್ಮನಿದ್ದು ನಂತರ ಆರ್ಭಟಿಸಿದ್ದೇಕೆ? ಇದು ವಿಚಾರವಾದಿಗಳ ದ್ವಿಮುಖ ನೀತಿಯ ಇನ್ನೊಂದು ಸ್ಪಷ್ಟ ಉದಾಹರಣೆ.
ವಿಶ್ವನುಡಿಸಿರಿಯ ವೈಭವವನ್ನು ಹಣಪಡೆದ ನಂತರ ವಿರೋಧಿಸಿದ್ದು, ಒಂದು ದ್ವಂದ್ವವಾದರೆ, ವೈಭವವನ್ನು ವಿರೋಧಿಸುವವರು ಬಸ್ಸಿನಲ್ಲೋ, ಕಾರಿನಲ್ಲೋ ಬಂದಿದ್ದರೆ ಒಪ್ಪಿಕೊಳ್ಳಬಹುದು. ಆದರೆ ಅವರು ಬಂದಿದ್ದು ವಿಮಾನದಲ್ಲಿ. ಅದೂ ಮೋಹನ ಆಳ್ವರು ಕೊಡಿಸಿದ ಟಿಕೆಟ್ ಮೂಲಕ. ಆಗೆಲ್ಲಿ ಅಡಗಿ ಕುಳಿತಿತ್ತು ಇವರ ಬಂಡಾಯ? ಬರಗೂರರೇ ದುಡ್ಡನ್ನು ನೀವು ಸ್ವೀಕರಿಸದೇ ಇದ್ದಿದ್ದರೆ, ವಿಮಾನದಲ್ಲಿ ಬರದೇ ಇದ್ದಿದ್ದರೆ ನಿಮ್ಮ ಬಂಡಾಯಕ್ಕೆ ಬೆಲೆ ಇರುತ್ತಿತ್ತು.
ನಿಜವಾಗಿಯೂ ಬರಗೂರರಿಗೆ ವಿಶ್ವನುಡಿಸಿರಿಯ ವೈಭವ, ಅಲ್ಲಿನ ಶ್ರೀಮಂತಿಕೆ ನೋಡಿದ ನಂತರ ಅದು ಸರಿಬಾರದೇ ಇದ್ದಿದ್ದರೆ ವಿಮಾನದ ಖರ್ಚನ್ನು ಹಿಂತಿರುಗಿಸದೇ ಇದ್ದರೂ, ಅತ್ಯಂತ ನಯವಾಗಿಯೇ ಸನ್ಮಾನದಲ್ಲಿ ಭಾಗವಹಿಸದೇ ಇರುವ, ಸನ್ಮಾನದ ಭಾಗವಾಗಿ ಅವರು ಕೊಡುವ ಹಣವನ್ನು ಸ್ವೀಕರಿಸದೇ ಇರುವ ಅವಕಾಶ ಖಂಡಿತ ಇತ್ತು. ಆದರ ಅವರು ಹಾಗೆ ಮಾಡಲಿಲ್ಲ.
ಯಾಕೆಂದರೆ ಅದರ ಹಿಂದೆ ಇನ್ನೊಂದು ಕಾರಣವಿದೆ. ಬರಗೂರು ರಾಮಚಂದ್ರಪ್ಪ ಅವರು ತುಂಬ ಮೊದಲೇ, ಅಂದರ ವಿಶ್ವನುಡಿಸಿರಿಯ ಆಹ್ವಾನ ಪತ್ರಿಕೆ ಮುದ್ರಣಗೊಳ್ಳುವಾಗಲೇ 'ಸಮಾಜದ' ಬಗ್ಗೆ ಉಪನ್ಯಾಸಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದು ಆಳ್ವರಿಗೂ ಹೇಳಿದ್ದರು. ಅದರ ಪರಿಣಾಮವಾಗಿಯೇ ಮೊದಲ 20,000 ಆಮಂತ್ರಣ ಪತ್ರಿಕೆಯಲ್ಲಷ್ಟೇ ಅವರ ಹೆಸರು ಮುದ್ರಣವಾಗಿದೆ. ಉಳಿದ 80,000 ಆಮಂತ್ರಣ ಪತ್ರಿಕೆಯಲ್ಲಿ ಧರಣಿದೇವಿ ಮಾಲಗತ್ತಿ ಅವರ ಹೆಸರು ಅಚ್ಚಾಗಿದೆ. ಇಷ್ಟೆಲ್ಲ ಮಾಡಿ, ಸನ್ಮಾನ ಸ್ವೀಕರಿಸಿದ ನಂತರ ದಿಢೀರನೆ ಜ್ಞಾನೋದಯವಾದವರಂತೆ ನಾಟಕವಾಡಿದ್ದಾರೆ. ಇತ್ತ ದುಡ್ಡೂ ಸಿಗಬೇಕು, ಅತ್ತ ವಿಚಾರವಾದಿಗಳ ಗುಂಪಿನ ಸಖ್ಯವೂ ಸಿಗಬೇಕು. ನಿಜವಾದ ಬುದ್ಧಿವಂತರು ಅಂದರೆ ಅವರೇ ನೋಡಿ!
ಇಷ್ಟಕ್ಕೂ ಯಾವುದು ಸ್ವಾಮಿ ವೈಭವ? ಯಾವುದು ಸ್ವಾಮಿ ದುಂದುವೆಚ್ಚ?
ವರ್ಷದ ಹೆಚ್ಚಿನ ಸಮಯವನ್ನು ಖಾಲಿಯಾಗಿ ಕಳೆಯುವ ಕಲಾವಿದರನ್ನು ಕರೆದು, ಅವರಿಗೆ ಹಣ ನೀಡುವುದು ದುಂದುವೆಚ್ಚವೇ? ವಿಶ್ವನುಡಿಸಿರಿ ಮೆರವಣಿಗೆಯಲ್ಲಿ ರಾಜ್ಯದ ಪ್ರತಿ ಜಿಲ್ಲೆಯ ಕಲಾತಂಡಗಳು ಭಾಗವಹಿಸಿದ್ದವು. ಅವರಿಗೆಲ್ಲ ಹಣಕೊಟ್ಟಿದ್ದು ದುಂದುವೆಚ್ಚವೇ? ರಾಜ್ಯದ ಪ್ರತಿ ಜಿಲ್ಲೆಯ ಕಲಾತಂಡಗಳನ್ನು ಕನ್ನಡಿಗರು ಒಂದೇ ಕಡೆ ನೋಡಲು ಅವಕಾಶ ಕಲ್ಪಿಸಿದ್ದು ವೈಭವವೇ?
ವೈಭವ, ದುಂದುವೆಚ್ಚದ ಬಗ್ಗೆ ಮತನಾಡುವ ಸಾಹಿತಿಗಳೇನು ಪುಕ್ಕಟೆ ಬಂದು ಭಾಷಣ ಮಾಡುತ್ತಾರೆಯೇ? ಕೊಟ್ಟಿದ್ದಕ್ಕಿಂತ ಹೆಚ್ಚು ಕೇಳುವ, ಸಂಗಾತಿಗೂ ಟಿ.ಎ-ಡಿ.ಎ ಕೇಳುವ ಸಾಹಿತಿಗಳೇ ಹೆಚ್ಚು. "ಮೋಹನ ಆಳ್ವರೇ ನೀವು ತುಂಬ ವೆಚ್ಚ ಮಾಡಿ ನುಡಿಸಿರಿ ನಡೆಸುತ್ತೀರಿ. ಕನ್ನಡಕ್ಕಾಗಿ ಇಷ್ಟೆಲ್ಲ ಖರ್ಚು ಮಾಡುತ್ತೀರಿ. ನಮ್ಮದೂ ಒಂದು ಅಳಿಲು ಸೇವೆ ಇರಲಿ ಎಂದು ಗೌರವಧನವನ್ನು ಬೇಡ ಎಂದಿದ್ದಾರೆಯೇ?" ಅತ್ಯಂತ ಸರಳವಾಗಿ ರಾಜಹಂಸದಲ್ಲೋ, ಸ್ಲೀಪರ್‌ನಲ್ಲೋ ಬಂದು ಹೋಗಿದ್ದಾರೆಯೇ? ಇಲ್ಲ. ತಮಗೆ ದುಡ್ಡು ಕೊಟ್ಟರೆ, ವಿಮಾನದಲ್ಲಿ ಕರೆಸಿಕೊಂಡರೆ ಅದು ವೈಭವವಲ್ಲ. ಬೇರೆಯದ್ದೆಲ್ಲ ವೈಭವ, ದುಂದುವೆಚ್ಚ.
ಅಂದರೆ ನಿಮಗೆ ಬೇಕಾದ ಹಾಗೆ ನಡೆದುಕೊಳ್ಳುವುದೇ ನಿಮ್ಮ ಸಿದ್ಧಾಂತದ ಮೂಲಗುಣವೇ? ಹಾಗೆ ನೋಡಿದರೆ ಈ ಎಡಪಂಥೀಯರು ಹೇಳಿಕೊಂಡು ಬಂದಿರುವುದನ್ನು ಡಾ. ಎಂ. ಮೋಹನ ಆಳ್ವ ಅವರು ಮಾಡಿ ತೋರಿಸಿದ್ದಾರೆ. ಈಗ ಬಂಡಾಯದ ಬಡಾಯಿ ಕೊಚ್ಚಿಕೊಳ್ಳುವವರ ಸಿದ್ಧಾಂತ ಹೇಳುವುದೇನು? ಇದ್ದವರಿಂದ ತೆಗೆದುಕೊಂಡು ಇಲ್ಲದವರಿಗೆ ಕೊಡು ಎಂದಲ್ಲವೇ? ಮೋಹನ ಆಳ್ವರು ಇದ್ದವರಿಂದ ಪಡೆದು, ಇಲ್ಲದವರಿಗೆ ಕೊಡುತ್ತಿದ್ದಾರೆ. ಕಲಾವಿದರಿಗೆ, ಸಾಹಿತಿಗಳಿಗೆ ಜಾನಪದ ಕಲಾವಿದರಿಗೆ ಗೌರವಧನ ನೀಡುವುದು ದುಂದುವೆಚ್ಚವಾಗಲು ಹೇಗೆ ಸಾಧ್ಯ?
ಇಷ್ಟಕ್ಕೂ ಮೋಹನ ಆಳ್ವರು ದುಂದುವೆಚ್ಚ ಮಾಡುತ್ತಿದ್ದಾರೆ ಎಂದು ಬೊಬ್ಬೆ ಹೊಡೆಯುವ ನೈತಿಕತೆ ನಿಮಗೆಲ್ಲಿದೆ? ಅದು ಅವರ ಹಣ. ಅವರು ಸಂಗ್ರಹಿಸಿದ ಹಣ. ಅವರ ದುಡಿಮೆಯ ಹಣ. ಅವರ ಸಂಘಟನಾ ಚಾತುರ್ಯಕ್ಕೆ ಫಲವಾಗಿ ದೊರೆತ ಬೆಂಬಲದ ಹಣ. ಅದು ಸಾರ್ವಜನಿಕರ ಹಣ. ಪ್ರತಿನಿಧಿಗಳು ಕೊಟ್ಟಿದ್ದರೆ ಅದು ಅವರು ಇಷ್ಟಪಟ್ಟು ಕೊಟ್ಟ ಹಣ.
ಬರಗೂರು ರಾಮಚಂದ್ರಪ್ಪನವರು ತಮ್ಮ ಜೀವನದುದ್ದಕ್ಕೂ 'ಬಂಡಾಯ', 'ಶ್ರಮಿಕ ವರ್ಗ' ಎಂಬ ಪದಗಳನ್ನು
ಪುಂಖಾಂನುಪುಂಖವಾಗಿ ಹರಿಸುತ್ತಾ ಬಂದವರು. ಆದರೆ ಆ ಶ್ರಮಿಕ ವರ್ಗಕ್ಕಾಗಿ ಅವರು ನಿಜಕ್ಕೂ ಮಾಡಿದ್ದೇನು? ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್, ಅವರಿಗೆ 2013-2014ನೇ ಸಾಲಿನ 'ನೃಪತುಂಗ' ಪ್ರಶಸ್ತಿಯನ್ನು ನೀಡಿತು. ಪ್ರಶಸ್ತಿಯ ಮೊತ್ತವೆಷ್ಟು ಗೊತ್ತೆ? 7 ಲಕ್ಷ ರುಪಾಯಿ! ಇದನ್ನು ಬಿಎಂಟಿಸಿ ಸಂಸ್ಥೆಯು ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಸ್ಥಾಪಿಸಿರುವ ದತ್ತನಿಧಿಯ ಬಡ್ಡಿ ಹಣದಿಂದ ಕೊಡಲಾಗುತ್ತದೆ. ಬಿಎಂಟಿಸಿಯಲ್ಲಿಯೂ ಶ್ರಮಿಕ ವರ್ಗವಿದೆ, ಆ ವರ್ಗ ಎಷ್ಟು ಹಿಂಸೆ, ಕಿರುಕುಳ ಅನುಭವಿಸುತ್ತಿದೆ ಎನ್ನುವುದು ಬರಗೂರು ಅವರಿಗೆ ತಿಳಿಯದೇ? ಶ್ರಮಿಕ ವರ್ಗದ ಬಗ್ಗೆ ನಿಜಕ್ಕೂ ಕಾಳಜಿಯಿದ್ದರೆ ತಮಗೆ ಬಂದ ಪ್ರಶಸ್ತಿ ಮೊತ್ತದಲ್ಲಿ ಒಂದು ಪಾಲನ್ನು ಬಿಎಂಟಿಸಿಯ ಕೆಲಸಗಾರರಿಗೆ  ನೀಡಬಹುದಿತ್ತಲ್ಲವೇ? ಕೊನೇ ಪಕ್ಷ ಆ ಕೆಲಸಗಾರರ ಕಷ್ಟಗಳ ಬಗ್ಗೆಯಾದರೂ ಮಾತನಾಡಬಹುದಿತ್ತಲ್ಲ? ಹೇಳುವುದೊಂದು, ಮಾಡುವುದೊಂದು ಎಂದು ಇದಕ್ಕೇ ಹೇಳುತ್ತಾರೇನೋ!
ಬರಗೂರು ರಾಮಚಂದ್ರಪ್ಪ ಅವರಂತೆ ಇನ್ನೂ ಕೆಲವರು ಇದೇ ರೀತಿಯ ದ್ವಂದ್ವ ನಿಲುವು ತಾಳಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಭಿಹಾ ಭೂಮಿಗೌಡ ಎಂಬ "ಭಾರೀ" ಹೋರಾಟಗಾರ್ತಿಯೊಬ್ಬರಿದ್ದಾರೆ. ಅವರು ಕಳೆದ 9 ವರ್ಷಗಳ ನುಡಿಸಿರಿಯಲ್ಲಿ ವಿವಿಧ ಸಮಿತಿಗಳಲ್ಲಿ ಕೆಲಸ ಮಾಡಿದ್ದಾರೆ. ಅದರ ಸಭೆಗಳಿಗೆ ಹಾಜರಾದಾಗ ಮೋಹನ ಆಳ್ವರಿಂದ ಹಣ ಸ್ವೀಕರಿಸಿದ್ದಾರೆ. ಅಷ್ಟೇ ಏಕೆ ವಿಶ್ವನುಡಿಸಿರಿಗೆ ಸಭಿಹಾ ಭೂಮಿಗೌಡ ಅವರು ರು. 2000 ದೇಣಿಗೆಯನ್ನೂ ನೀಡಿದ್ದರು. (ಮೋಹನ ಆಳ್ವರು ಅದನ್ನು ಈಗ ಮರಳಿಸಿದ್ದಾರೆ). ಇದೆಲ್ಲ ಆದ ನಂತರ ಅವರಲ್ಲಿರುವ ಬಂಡಾಯ ಬುಸುಗುಟ್ಟಿದೆ. ಅವರು ಕೆಲವು ಎಡಪಂಥೀಯರ ಜತೆ ಸೇರಿ "ನುಡಿಸಿರಿ ಎಂಬುದು ವೈಭವದ ಸಂಕೇತ. ದುಂದುವೆಚ್ಚ ಮಾಡಲಾಗುತ್ತಿದೆ" ಎಂಬೆಲ್ಲ ನೆಪ ಹೇಳಿ, ಮೋಹನ ಆಳ್ವ ಅವರಿಗೊಂದು ಬಹಿರಂಗ ಪತ್ರ ಬರೆದರು. ಆದರೆ ಅವರಿಗೆ ಇದೆಲ್ಲ ಅರಿವಾಗಿ, ಜ್ಞಾನೋದಯವಾಗಲು 9 ವರ್ಷ ಬೇಕಾಯಿತೇ?! ಒಬ್ಬ ಅಧ್ಯಾಪಕಿಯಾಗಿ ಇಷ್ಟು ವರ್ಷಗಳ ಸಮಯ ಬೇಕಾಯಿತು ಅಂದರೆ ವಿದ್ಯಾರ್ಥಿಗಳಿಗೆ ಅವರ ಅರಿವಿನ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡಿದರೆ ಅಚ್ಚರಿಯಿಲ್ಲ.
ಕರಾವಳಿಯ ತಲ್ಲಣಗಳ ಬಗ್ಗೆ ಆಳ್ವಾಸ್ ನುಡಿಸಿರಿ ಸ್ಪಂದಿಸುತ್ತಿಲ್ಲ ಎಂಬ ಆರೋಪವನ್ನೂ ಮಾಡಲಾಗಿದೆ. ಆಳ್ವರ ಮೇಲೆ ಹೀಗೆ ಆರೋಪ ಮಾಡುವವರು ಕರಾವಳಿಯ ತಲ್ಲಣಗಳ ಬಗ್ಗೆ ಮಾತಾಡಿದ್ದೆಷ್ಟು? ಕರಾವಳಿಯಲ್ಲಿ ನಂದಿಕೂರು, ನಿಡ್ಡೋಡಿಗಳಲ್ಲಿ ವಿದ್ಯುತ್ ಸ್ಥಾವರ ಯೋಜನೆ ಜಾರಿಯಾಗುವುದನ್ನು ಜನ ವಿರೋಧಿಸಿದಾಗ "ತಲ್ಲಣಗಳ" ಬಗ್ಗೆ ಮಾತನಾಡುವವರು ಸ್ಪಂದಿಸಿದ್ದೆಷ್ಟು?
ಎನ್‌ಕೌಂಟರ್‌ಗಳಲ್ಲಿ ನಕ್ಸಲೀಯರು ಸತ್ತಾಗ ಸಂತಾಪ ಸೂಚಿಸಿ, ಏನ್‌ಕೌಂಟರ್‌ಗೆ ವಿರೋಧ ಸೂಚಿಸುವುದು. ಪೊಲೀಸರು ಮೃತಪಟ್ಟಾಗ ಸುಮ್ಮನಿರುವುದು ಇವರು ಕರಾವಳಿಯ ತಲ್ಲಣಗಳಿಗೆ ನೀಡುವ ಸ್ಪಂದನೆ! ಸರ್ಕಾರದಿಂದಲೇ ಸಂಬಳ ಪಡೆದು, ಸರ್ಕಾರದ ಭಾಗವಾದ ಪೊಲೀಸರ ವಿರುದ್ಧ ಮತ್ತು ಸರ್ಕಾರದ ವಿರೋಧಿಗಳಾದ ನಕ್ಸಲೀಯರ ಪರವಾಗಿ ಮಾತನಾಡುವುದು ಇವರ ಸ್ಪಂದನೆ!
ಇಷ್ಟಕ್ಕೂ ಸಭಿಹಾ ಭೂಮಿ ಗೌಡ ಮತ್ತು ಸಂಗಡಿಗರು ನಡೆಸಿದ ನುಡಿಸಿರಿ ಪರ್ಯಾಯ ಸಮಾವೇಶಕ್ಕೆ ಬಂದ ಜನರೆಷ್ಟು? ನುಡಿಸಿರಿಯಲ್ಲಿನ ಶಿಸ್ತು ಅಲ್ಲಿ ಅಳವಡಿಸಲು ಸಾಧ್ಯವಾಯಿತೇ? ನುಡಿಸಿರಿಯ ಪ್ರಮಾಣದಲ್ಲಿ ಎಲ್ಲ ವರ್ಗವನ್ನು ಆಕರ್ಷಿಸಲು ಅದು ಸಮರ್ಥವಾಗಿತ್ತೇ? ಎಂಬುದನ್ನು ಅವರೇ ಪರಿಶೀಲಿಸಲಿ. ಇವರ ಮನಸ್ಸಿನಲ್ಲಿ ಹುಳುಕು ಯಾವ ಪ್ರಮಾಣದಲ್ಲಿತ್ತೆಂದರೆ ವಿಶ್ವನುಡಿಸಿರಿಗೆ ಆಗಮಿಸುವ ಬಹುತೇಕರಿಗೆ ದೂರವಾಣಿ ಕರೆ ಮಾಡಿ, "ಹೋಗಬೇಡಿ, ಹೋದರೆ ನಿಮ್ಮನ್ನು ನಮ್ಮ ಗುಂಪಿನಿಂದ ಹೊರಗಿಡುತ್ತೇವೆ" ಎಂಬಂತಹ ಬೆದರಿಕೆಗಳನ್ನು ಹಾಕಿದ್ದಾರೆ! ಸಾಲದ್ದಕ್ಕೆ ಮೋಹನ ಅಳ್ವರು ನೀಡುವ ಪ್ರಯಾಣದ ವೆಚ್ಚವನ್ನು ನಾವೇ ನೀಡುತ್ತೇವೆ ಎಂಬ ಮಟ್ಟಕ್ಕೂ ಹೋಗಿದ್ದಾರೆ. ಇಂತಹ ಕೀಳು ಬುದ್ಧಿಯಿಂದ ಯಾರೂ ಬುದ್ಧಿಜೀವಿಯಾಗಲು ಸಾಧ್ಯವಿಲ್ಲ. ಬದಲಾಗಿ ದುರ್ಬುದ್ದಿಜೀವಿಗಳಾಗಬಹುದಷ್ಟೇ. ಇವರ ಇಬ್ಬಂದಿತನವನ್ನು ಬಹಿರಂಗಗೊಳಿಸಿ, ಸತ್ಯ ಸಂಗತಿ ಬರೆದರೆ ನಮ್ಮನ್ನು ಮೂರ್ಖ ಮಾಧ್ಯಮ ಎಂದು ಕರೆಯುವ ದುರ್ಬುದ್ಧಿಯ ನಿತ್ಯಾನಂದರೂ ಈ ವರ್ಗದಲ್ಲಿದ್ದಾರೆ.
ಆದರೆ ನುಡಿಸಿರಿಗೆ ಇಷ್ಟೆಲ್ಲ ಜನ ಯಾಕೆ ಬರುತ್ತಾರೆ ಎಂಬ ಸರಳ ಸತ್ಯ ಇವರಿಗೆಲ್ಲ ಇನ್ನೂ ಅರ್ಥವಾಗಿಲ್ಲ. ಡಾ. ಮೋಹನ ಆಳ್ವರು ಯಾವತ್ತೂ ಎಡ, ಬಲ ಸಿದ್ಧಾಂತಗಳಿಗೆ, ಕೈ-ಕಮಲ, ತೆನೆಹೊತ್ತ ಮಹಳೆಯತ್ತ ವಾಲಿದವರಲ್ಲ. ಅವರು ಮೊದಲಿನಿಂದಲೂ ಸಾಹಿತ್ಯ ಮತ್ತು ಸಂಸ್ಕೃತಿಯಷ್ಟನ್ನೇ ಗಮನದಲ್ಲಿರಿಸಿಕೊಂಡು ನುಡಿಸಿರಿ ಆಯೋಜಿಸುತ್ತ ಬಂದಿದ್ದಾರೆ. ಬರೂಗೂರು ರಾಮಚಂದ್ರಪ್ಪ ಅವರನ್ನು ನುಡಿಸಿರಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಹಾಗೆಯೇ ಡಾ. ಎಸ್. ಎಲ್. ಭೈರಪ್ಪ ಅವರನ್ನೂ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆರಂಭದಿಂದಲೂ ಸಾಹಿತಿಗಳ ಸಾಧನೆ, ಬರವಣಿಗೆಯನ್ನೇ ಆಧಾರವಾಗಿರಿಸಿಕೊಂಡು ನುಡಿಸಿರಿ ಆಯೋಜಿಸುತ್ತಿದ್ದಾರೆ. ಎಲ್ಲ ಪಕ್ಷ, ಎಲ್ಲ ಪಂಥ, ಜಾತಿ, ಧರ್ಮಗಳನ್ನು ಜತೆಯಲ್ಲಿಟ್ಟುಕೊಂಡು, ಕೇವಲ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಗುರಿಯಾಗಿಸಿಕೊಂಡು ನುಡಿಸಿರಿ ಮತ್ತು ವಿರಾಸತ್ ಆಚರಿಸುತ್ತಿದ್ದಾರೆ. ಆದರೆ ಕೊಳಕುಮನಸ್ಸಿನ, ಬುದ್ಧಿಗೆ ವ್ಯಾಧಿಹಿಡಿಸಿಕೊಂಡ ಜನ ಅದರಲ್ಲೂ ಕಲ್ಲು ಹುಡುಕಲು ಆರಂಭಿಸಿದ್ದಾರೆ. ತಮ್ಮ ಮನಸ್ಸಿನ ಕೊಳಕುಗಳನ್ನು ಆಳ್ವರ ಮೇಲೆ ಹೇರುತ್ತಿದ್ದಾರೆ.
ನುಡಿಸಿರಿಯಂತಹ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಲು ಸಾಧ್ಯವಿದ್ದರೆ ಆಯೋಜಿಸಿ ತೋರಿಸಲಿ.  ಅದುಬಿಟ್ಟು ಆಯೋಜನೆಗೆ ಅಡ್ಡಿ ಉಂಟುಮಾಡುವುದು, ಕಿರಿ ಕಿರಿ ಮಾಡುವುದು ಸಣ್ಣತನವನ್ನು ತೋರಿಸುತ್ತದೆ. ಕೊನೇಪಕ್ಷ ಬರಗೂರು ಅವರಂಥ ಪ್ರಜ್ಞಾವಂತರು ಎಂದು ಕರೆಸಿಕೊಳ್ಳುವವರು ಇಂತಹ ಕೀಳು ಕೆಲಸ ಮಾಡುವವರ ಬೆಂಬಲಕ್ಕೆ ನಿಲ್ಲಬಾರದಿತ್ತು. ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ತಮ್ಮ ವ್ಯಕ್ತಿತ್ವ ಕುಸಿಯಲು, ನಗೆಪಾಟಲಿಗೆ ಈಡಾಗಲು ಅವಕಾಶ ನೀಡಬಾರದಿತ್ತು
 
- ವಿನಾಯಕ ಭಟ್ಟ ಮೂರೂರು, ಕನ್ನಡಪ್ರಭ
vakradanta@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

ವೃತ್ತಿ ಜೀವನದ ಬಹು ದೊಡ್ಡ ಕನಸನ್ನು ರಿವೀಲ್ ಮಾಡಿದ ವೈಭವ್ ಸೂರ್ಯವಂಶಿ! Video