ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಗಡಸು ಸ್ವಭಾವ. ಭಾಷೆ ಮತ್ತು ದೇಹಭಾಷೆ ಎರಡೂ ಒರಟು. ಎದುರಿನ ವ್ಯಕ್ತಿ ಎಷ್ಟೇ ದೊಡ್ಡವರಿರಲಿ ಏಕವಚನ ಪ್ರಯೋಗ ಸಹಜ. ಅಧಿಕಾರಿಗಳಿಗಂತೂ ಮರ್ಯಾದೆ ಎಂಬುದು ತೀರಾ ಕಾಸ್ಟ್ಲಿ. ಮೊದಲಿಂದಲೂ ಅವರ ವ್ಯಕ್ತಿತ್ವಕ್ಕೆ ಆಂಟಿಕೊಂಡೇ ಬಂದಿರುವ ಈ ವರ್ತನೆಯ ಹಿಂದೆ ಯಾವುದೇ ದುರುದ್ದೇಶ ಇರುವುದಿಲ್ಲ. ಆದರೆ ಎದುರಿನ ವ್ಯಕ್ತಿಗೆ ಇದು ಅಹಂಕಾರ ಪ್ರದರ್ಶನವಾಗಿ ಗೋಚರಿಸಿಬಿಡುತ್ತದೆ. ಹೀಗಾಗಿ ಹಲವಾರು ಮಂದಿ ತೀವ್ರ ಮುಜುಗರ ಅನುಭವಿಸಿದ್ದಾರೆ.
ಇತ್ತೀಚೆಗೆ ಗೃಹ ಕಚೇರಿ 'ಕೃಷ್ಣಾ'ದಲ್ಲಿ ನಾನಾ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೀತಿತ್ತು. ಗೃಹ ಇಲಾಖೆ ಕಾರ್ಯದರ್ಶಿ ಎ.ಕೆ. ಪಟ್ನಾಯಕ್ ಅಲ್ಲಿದ್ರು. ಕೆಲಸದ ಒತ್ತಡವೋ ಏನೋ ಸಿದ್ದರಾಮಯ್ಯ ಅವರಿಗೆ ಹೆಸರುಗಳು ಮರೆತು ಹೋಗೋದು ಮಾಮೂಲು. ಹಿಂಗಾಗಿ ಪಟ್ನಾಯಕ್ ಅವರನ್ನು ಉದ್ದೇಶಿಸಿ, 'ಹೇ ಪಟ್ಟಣಶೆಟ್ಟಿ ಬಾ ಇಲ್ಲಿ' ಅಂತ ಕರೆದುಬಿಟ್ಟರು. ಮೊದಲಿಗೆ ಪಟ್ನಾಯಕ್ ಅವರಿಗೆ ಸಿಎಂ ಕರೆಯುತ್ತಿರುವುದು ತಮ್ಮನ್ನೇ ಅಂತ ಗೊತ್ತಾಗಲಿಲ್ಲ. ಏಕೆಂದರೆ ಅವರು ಕರೆದಿದ್ದು 'ಪಟ್ಟಣಶೆಟ್ಟಿ' ಅಂತ. ಬೇರೆ ಯಾರನ್ನೋ ಕರೀತಿರಬಹದು ಅಂತ ಸುಮ್ಮನಾದರು. ಆದರೆ ಸಿಎಂ ಮತ್ತೇ ಅವರತ್ತಲೇ ಕೈತೋರಿ 'ಹೇ ನಿನ್ನನ್ನೇ ಕರೆತಿರೋದು ಬಾಯ್ಯಾ' ಅಂದಾಗ ಪಟ್ನಾಯಕ್ ಬೆಚ್ಚಿ ಚಟ್ನಿಯಂತಾದರು. ಸಿಎಂ ಸುತ್ತಮುತ್ತ ಹಲವು ಮಂತ್ರಿಗಳು, ಬೇರೆ-ಬೇರೆ ಇಲಾಖೆ ಅಧಿಕಾರಿಗಳು ಇದ್ದರು. ಎಲ್ಲರ ಎದುರಿಗೇ ತಮ್ಮನ್ನು ಏಕವಚನದಲ್ಲಿ ಕರೆದದ್ದು, ಅದೂ ಹೆಸರನ್ನು ತಪ್ಪಾಗಿ ಸಂಭೋದಿಸಿದ್ದು ಪಟ್ನಾಯಕ್ ಅವರಿಗೇ ತೀರಾ ಮುಜುಗರ ಉಂಟು ಮಾಡಿತು. ಅವಮಾನದಿಂದ ಮುಖ ಕಪ್ಪಿಟ್ಟಿತು. ಆದರೇನು ಮಾಡೋದು? ಮುಖ್ಯಮಂತ್ರಿಗಳನ್ನು ಈ ಬಗ್ಗೆ ಪ್ರಶ್ನಿಸುವಂತಿಲ್ಲ. ತಿರುಗುತ್ತರ ನೀಡುವಂತಿಲ್ಲ. ಹೀಗಾಗಿ ತಲೆತಗ್ಗಿಸಿಕೊಂಡೇ ಹೋದರು, ಪಾಪ...
ಹಿಂದೆ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಸಂಪುಟದಲ್ಲಿ ಚಿಕ್ಕೇಗೌಡ ಎಂಬ ಮಂತ್ರಿಯಿದ್ದರು. ಅವರೂ ಹೀಗೆ. ಅಧಿಕಾರಿಗಳಿಗೆ ಗೌರವವನ್ನೇ ಕೊಡುತ್ತಿರಲಿಲ್ಲ. ಹಿರಿಯ ಅಧಿಕಾರಿಗಳನ್ನು 'ದೊಡ್ಡ ಕೂಲಿ' ಅಂತಲೂ, ಕಿರಿಯ ಅಧಿಕಾರಿಗಳನ್ನು 'ಚಿಕ್ಕ ಕೂಲಿ' ಅಂತಲೂ ಕರೆಯುತ್ತಿದ್ದರು. ಇವರ ವರ್ತನೆಯಿಂದ ಅಧಿಕಾರಿಗಳು ಅವಮಾನದಿಂದ ಕುದ್ದು ಹೋಗಿದ್ದರು.
ಒಮ್ಮೆ ಅರಸು ಅವರ ಮುಂದೆಯೇ ಚಿಕ್ಕೇಗೌಡರು ಹಿರಿಯ ಅಧಿಕಾರಿಯೊಬ್ಬರನ್ನು 'ಹೇ ದೊಡ್ಡಕೂಲಿ ಬಾ ಇಲ್ಲಿ' ಎಂದು ಕರೆದುಬಿಟ್ಟರು. ಇದರಿಂದ ಆ ಅಧಿಕಾರಿ ಇರಲಿ, ಸ್ವತಃ ಅರಸು ಅವರಿಗೇ ಅವಮಾನ ಆದಂತಾಯಿತು. ಜತೆಗೆ ಕೋಪವೂ ಉಕ್ಕಿಬಂತು. ತಕ್ಷಣ ಆ ಅಧಿಕಾರಿಯನ್ನು ಹೊರಗೆ ಕಳುಹಿಸಿದ ಅರಸು ಅವರು, ಚಿಕ್ಕೇಗೌಡರಿಗೆ ಕ್ಲಾಸ್ ತಗೊಂಡರು. 'ನೋಡ್ರೀ ಗೌಡ್ರೇ, ನಿಮ್ಮ ಹೆಂಡತಿ-ಮಕ್ಕಳನ್ನು ಬೇಕಾದ್ರೆ ಏಕವಚನದಲ್ಲಿ ಕರೆದುಕೊಳ್ಳಿ. ಆದರೆ ಬೇರೆಯವರನ್ನು ಹಾಗೆ ಕರೆಯಲು ನಿಮಗೆ ಯಾವುದೇ ಅಧಿಕಾರ ಇಲ್ಲ. ಇನ್ನೊಮ್ಮೆ ಹಂಗೆನಾದ್ರೂ ಏಕವಚನದಲ್ಲಿ ಕರೆದ್ರೆ, ನಿಮ್ಮನ್ನು ಸಂಪುಟದಿಂದ ಡಿಸ್‌ಮಿಸ್ ಮಾಡ್ತೀನಿ ಹುಷಾರ್..' ಅಂತ ಮಾತಲ್ಲೇ ತಪರಾಕಿ ನೀಡಿದರು.
ಆದರೆ ಈಗ..? ಅರಸು ಅವರ ಜಾಗದಲ್ಲಿ ಸಿದ್ದರಾಮಯ್ಯ ಇದ್ದಾರೆ. ಆದರೆ ಅವರ ವರ್ತನೆ ಮಾತ್ರ ಚಿಕ್ಕೇಗೌಡರದು. ಹೀಗಿರುವಾಗ ಪಟ್ನಾಯಕ್ ಅವರಂಥವರನ್ನು ರಕ್ಷಿಸೋರು ಯಾರು..? ಸ್ವಾಮಿ ಶಂಭುಲಿಂಗ..!
ಅನುಭವ ಚಿತ್ರ; ಉಮಾಶ್ರೀಗೆ ಸಂಕಟ ವಿಚಿತ್ರ!
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಉಮಾಶ್ರೀ ಅವರು ಸಚಿವರಾಗಿ ಏಳು ತಿಂಗಳಾಗಿರಬಹುದು. ಆದರೆ, ಅವರು ರಾಜಕೀಯಕ್ಕೆ ಬರುವ ಮುನ್ನ ರಂಗ ಕಲಾವಿದೆ ಆಗಿದ್ದವರು. ಕನ್ನಡ ಚಿತ್ರರಂಗದಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಮನೆ ಮಾತಾಗಿದ್ದವರು. ಆದರೆ, ಸಚಿವರಾದ ಮೇಲೆ ಉಮಾಶ್ರೀ ಅವರು ಏಕೋ ಏನೋ ಹಿಂದಕ್ಕೆ ತಿರುಗಿ ನೋಡಲು ಬಯಸುತ್ತಿಲ್ಲ. ತಾವು ರಂಗ ಕಲಾವಿದೆ, ಸಿನಿಮಾ ನಂಟಿ ಎಂಬುದನ್ನೂ ಅವರು ಮರೆತಂತೆ ಇದೆ. ಅಂಬರೀಶ್ ಸಂಸದ, ಶಾಸಕ ಮತ್ತು ಈಗ ಮಂತ್ರಿ ಆಗಿದ್ದಾರೆ. ಆದರೆ, ಅವರು ಚಿತ್ರರಂಗದ ಮೇಲಿನ ಪ್ರೀತಿಯನ್ನು ಎಂದೂ ಕಳೆದುಕೊಂಡವರಲ್ಲ. ಆದರೆ, ಉಮಾಶ್ರೀ ಅವರಿಗೆ ಏನಾಗಿದೆ ?
ನಟ, ನಿರ್ಮಾಪಕ, ನಿರ್ದೇಶಕ ಕಾಶಿನಾಥ್ ಅವರ ಚಿತ್ರ ಅನುಭವ 20-25 ವರ್ಷದ ಹಿಂದೆ ತೆರೆಕಂಡು ಭಾರಿ ಸದ್ದು ಮಾಡಿತು. ಅದು ಕಾಶಿನಾಥ್, ಅಭಿನಯ ಮತ್ತು ಉಮಾಶ್ರೀ ಅವರಿಗೆ ಭಾರಿ ಹೆಸರು ತಂದುಕೊಟ್ಟ ಚಿತ್ರವೂ ಹೌದು. ಆ ಚಿತ್ರ ಮರು ಬಿಡುಗಡೆಯಾಗಿದೆ. ಇದರಿಂದ ಆ ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಖುಷಿಯಾಗಿದೆ. ಆದರೆ, ಉಮಾಶ್ರಿ ಅವರನ್ನು ಬಿಟ್ಟು.
ಅನುಭವ ಸಿನಿಮಾ ಮತ್ತೆ ತೆರೆಗೆ ಬರುತ್ತಿದೆ ಎಂಬ ವಿಷಯ ಕೇಳಿ ಉಮಾಶ್ರೀ ಅವರು ಹೌಹಾರಿದರಂತೆ. ಅಷ್ಟೇ ಅಲ್ಲ, ಚಿತ್ರ ಬಿಡುಗಡೆಗೆ ಮುಂದಾದವರಿಗೆ ದೂರವಾಣಿ ಕರೆ ಮಾಡಿ ಯಾವುದೇ ಕಾರಣಕ್ಕೂ ಸಿನಿಮಾ ಬಿಡುಗಡೆ ಮಾಡಬೇಡಿ ಎಂದು ಕೇಳಿಕೊಂಡರಂತೆ. ಇದಕ್ಕೆ ನಿರ್ಮಾಪಕರು ಒಪ್ಪದಿದ್ದಾಗ ಹೋಗಲಿ, ಬೆಳಗಾವಿ ನಗರದಲ್ಲಿ ಬಿಡುಗಡೆ ಆಗದಂತೆ ನೋಡಿಕೊಳ್ಳಿ ಎಂದು ದುಂಬಾಲು ಬಿದ್ದರಂತೆ. ಸಿನಿಮಾ ಬಿಡುಗಡೆ ಆದಾಗ ಉಮಾಶ್ರೀ ಅವರು ಬೆಳಗಾವಿಯಲ್ಲಿದ್ದರು. ಅಲ್ಲಿ ನಡೆಯುತ್ತಿದ್ದ ವಿಧಾನ ಮಂಡಲ ಅಧಿವೇಶನದ ಕಲಾಪದಲ್ಲಿ ಭಾಗಿಯಾಗಿದ್ದರು. ಇಷ್ಟಕ್ಕೂ ಸಿನಿಮಾ ಬಿಡುಗಡೆ ಮಾಡದಂತೆ ಉಮಾಶ್ರೀ ಅವರು ತಡೆಯೊಡ್ಡಲು ಮುಂದಾಗಿದ್ದಕ್ಕೆ ಕಾರಣ ಏನು ಗೊತ್ತೆ ? ಅನುಭವ ಚಿತ್ರದಲ್ಲಿ ಉಮಾಶ್ರೀ ಅವರು ಯುವಕರನ್ನು ದಾರಿ ತಪ್ಪಿಸುವ ಯುವತಿಯ ಪಾತ್ರ ಮಾಡಿದ್ದರು. ಇದೊಂದೇ ಕಾರಣ ಅವರು ಅಡ್ಡಗಾಲು ಹಾಕುವುದಕ್ಕೆ. ನಾನೀಗ ಮಂತ್ರಿ, ನನ್ನ ಸ್ಟೇಟಸ್ ಏನು ? ಜನ ಸಿನಿಮಾ ನೋಡಿ ನನ್ನನ್ನು ಏನೆಂದುಕೊಳ್ಳಬೇಡ ಎಂಬುದು ಉಮಾಶ್ರೀ ಅವರ ಅಭಿಪ್ರಾಯವಂತೆ. ತಾವು ಈ ಮಟ್ಟಕ್ಕೆ ಬರಲು ರಂಗಭೂಮಿ ಮತ್ತು ಸಿನಿಮಾ ಎಂಬುದನ್ನೇ ಮರೆತುಬಿಟ್ಟಂತಿದೆ.
-ನಂಬಿರಾಜ್