ನಿರ್ಮಾ ವಾಷಿಂಗ್ ಪೌಡರ್, ನಿರ್ಮಾ ಬಾರ್ ಸೋಪ್, ನಿರ್ಮಾ ಬಾತ್ ಸೋಪ್, ನಿರ್ಮಾ ಟೂತ್‌ಪೇಸ್ಟ್, ನಿರ್ಮಾ ಶಾಂಪೂ... ಹೀಗೆ, ಒಂದಲ್ಲ ಒಂದು ರೀತಿಯಲ್ಲಿ ಕಣ್ಣಿಗೆ ಬೀಳುವ ನಿರ್ಮಾ ಬ್ರಾಂಡ್‌ನ ವಸ್ತುಗಳನ್ನು ನೋಡದವರಿಲ್ಲ. ವಿಪರೀತ ಕಡಿಮೆ ಬೆಲೆಯ ಈ ವಸ್ತುಗಳನ್ನು ಅನುಮಾನದಿಂದಲೇ ಖರೀದಿಸಿ, ಆನಂತರದಲ್ಲಿ-'ಬಹಳ ಒಳ್ಳೆಯ ಕ್ವಾಲಿಟಿ ಇದೆ ಕಣ್ರೀ' ಎಂದು ಉದ್ಗರಿಸದವರೂ ಇಲ್ಲ. ಇವತ್ತು 4000 ಕೋಟಿ ರೂ.ಗಳ ವಾರ್ಷಿಕ ವಹಿವಾಟು ಹೊಂದಿರುವ, 14000 ಮಂದಿಗೆ ನೌಕರಿ ನೀಡಿರುವ, ವಿದೇಶಿ ಬ್ರಾಂಡ್‌ಗಳಿಗೂ ಸೆಡ್ಡು ಹೊಡೆದು ನಿಂತಿರುವ ನಿರ್ಮಾ ಕಂಪನಿಯನ್ನು, ಒಂದಿಷ್ಟು ಪಾಕೆಟ್‌ಮನಿ ಸಂಪಾದಿಸುವ ಏಕೈಕ ಉದ್ದೇಶದಿಂದ ಗುಜರಾತ್‌ನ ವ್ಯಕ್ತಿಯೊಬ್ಬ ಆರಂಭಿಸಿದ ಎಂಬ ಸಂಗತಿ ಹೆಚ್ಚಿನವರಿಗೆ ಗೊತ್ತಿರಲಾರದು. ಯಶಸ್ಸು ಮನುಷ್ಯನಿಗೆ ಹೇಗೆಲ್ಲಾ ಒಲಿಯಬಹುದು ಎಂಬುದಕ್ಕೆ ಸಾಕ್ಷಿಯಾಗುವ ನಿರ್ಮಾ ಕಂಪನಿಯ ಯಶೋಗಾಥೆ, ತೆಲುಗಿನ ಸಿನಿಮಾ ಕಥೆಗಳಂತೆಯೇ ಇದೆ.
---
ಆತನ ಹೆಸರು ಕರ್ಸನ್‌ಭಾಯಿ ಖೋಡಿದಾಸ ಪಟೇಲ್. ಗುಜರಾತ್‌ನ ರಪ್ಪರ್ ಗ್ರಾಮ ಪಟೇಲ್‌ನ ಹುಟ್ಟೂರು. ಈತನ ತಂದೆ ಕೃಷಿಕ. ರೈತನ ಮಗ ಅಂದ ಮೇಲೆ ವಿವರಿಸಬೇಕಿಲ್ಲ ತಾನೆ? 1945ರಲ್ಲಿ ಜನಿಸಿದ ಕರ್ಸನ್‌ಭಾಯಿ ಪಟೇಲ್, ಬಡತನದ ಹಲವು ಮುಖಗಳನ್ನು ನೋಡಿಕೊಂಡೇ ಬೆಳೆದ. ಕೃಷಿಯನ್ನೇ ನಂಬಿಕೊಂಡರೆ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಅನಿಸಿದ್ದರಿಂದ ಸರ್ಕಾರಿ ನೌಕರಿ ಸೇರಬೇಕೆಂಬ ಆಸೆಯಿಂದಲೇ ಬಿ.ಎಸ್ಸಿ ಪದವಿ ಪಡೆದ. ಮೊದಲು ಅಹಮದಾಬಾದ್‌ನಲ್ಲಿದ್ದ ಲಾಲ್‌ಭಾಯ್ ಗ್ರೂಪ್‌ನ ಬಟ್ಟೆ ಗಿರಣಿಯಲ್ಲಿ, ನಂತರ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಲ್ಯಾಬ್ ಟೆಕ್ನೀಷಿಯನ್ ಹುದ್ದೆಗೆ ಸೇರಿಕೊಂಡ. ತಿಂಗಳಿಗೆ 400 ರುಪಾಯಿಗಳ ಸಂಬಳವಿತ್ತು. ಇದೆಲ್ಲಾ 70ರ ದಶಕದ ಮಾತು. ಸರ್ಕಾರಿ ನೌಕರಿ ಸಿಕ್ಕಿದ ಮೇಲೆ ತಡಮಾಡುವುದುಂಟೆ? ಕರ್ಸನ್‌ಭಾಯಿ ಪಟೇಲ್‌ನ ಪೋಷಕರು, ತರಾತುರಿಯಿಂದಲೇ ಮಗನ ಮದುವೆ ಮಾಡಿದರು. ನಂತರದ ಆರು ವರ್ಷದಲ್ಲಿ ಮೂರು ಮಕ್ಕಳ ತಂದೆಯಾದ ಕರ್ಸನ್ ಭಾಯಿ ಖೋಡಿದಾಸ ಪಟೇಲ್.
ಲ್ಯಾಬ್ ಟೆಕ್ನೀಷಿಯನ್ ಅಂದ ಮೇಲೆ ವಿವರಿಸಿಹೇಳಬೇಕಿಲ್ಲ ತಾನೆ? ಬೆಳಗಿನಿಂದ ಸಂಜೆಯವರೆಗೂ ಲ್ಯಾಬ್‌ನಲ್ಲಿ, ಹಲವು ರಾಸಾಯನಿಕಗಳ ಘಾಟು ವಾಸನೆಯ ಮಧ್ಯೆಯೇ ಬದುಕಬೇಕಿತ್ತು. ಯಾವುದೇ ಮೇಲು ಸಂಪಾದನೆಯೂ ಇರಲಿಲ್ಲವಾದ್ದರಿಂದ, ಸಂಬಳದ ಹಣದಿಂದಲೇ ಹೆಂಡತಿ, ಮಕ್ಕಳು ಹಾಗೂ ತಂದೆ-ತಾಯಿಯನ್ನು ಸಾಕುವುದು ಕಷ್ಟವಾಯಿತು. ಸಂಜೆ ಹಾಗೂ ಬೆಳಗಿನ ವೇಳೆಯ ಬಿಡುವಿನಲ್ಲಿ ಸೈಡ್ ಬಿಸಿನೆಸ್ ಮಾಡಬೇಕೆಂಬ ಐಡಿಯಾ ಪಟೇಲ್‌ಗೆ ಬಂದದ್ದೇ ಆಗ. ಇಡೀ ದಿನವನ್ನು ಲ್ಯಾಬ್‌ನಲ್ಲಿ, ರಾಸಾಯನಿಕಗಳ ಮಧ್ಯೆಯೇ ಕಳೆಯುತ್ತಿದ್ದುದರಿಂದ ಹಾಗೂ ಬಟ್ಟೆ ಗಿರಣಿಯಲ್ಲಿ ದುಡಿದಾಗ ದೊರೆತ ತಿಳಿವಳಿಕೆಯಿಂದ, ಬಟ್ಟೆ ಒಗೆಯಲು ತಯಾರಿಸುವ ಪೌಡರ್‌ಗೆ ಯಾವ ಯಾವ ರಾಸಾಯನಿಕ ವಸ್ತುಗಳು ಬಳಕೆಯಾಗುತ್ತವೆ; ಅವು ತುಂಬಾ ಕಡಿಮೆ ಬೆಲೆಗೆ ಎಲ್ಲಿ ಸಿಗುತ್ತವೆ ಎಂಬ ಗುಟ್ಟು ಕರ್ಸನ್‌ಭಾಯಿ ಪಟೇಲ್‌ಗೆ ಗೊತ್ತಿತ್ತು. ತಿಂಗಳಿಗೆ 50ರಿಂದ 100 ಕೆ.ಜಿ.ಯಷ್ಟು ಬಟ್ಟೆ ಒಗೆಯುವ ಪೌಡರನ್ನು ಮನೆಯಲ್ಲಿಯೇ ತಯಾರಿಸಿ, ಅದನ್ನು ಮಾರಾಟ ಮಾಡಿದರೆ, ಸ್ವಲ್ಪ ಕಾಸು ಸಿಗುತ್ತದೆ ಎಂದಾತ ಲೆಕ್ಕ ಹಾಕಿದ.
ಆನಂತರದಲ್ಲಿ ಕರ್ಸನ್‌ಭಾಯಿ ಪಟೇಲ್ ತಡಮಾಡಲಿಲ್ಲ. ಅಪ್ಪ, ಅಮ್ಮ ಹಾಗೂ ಹೆಂಡತಿಯನ್ನು ಎದುರು ಕೂರಿಸಿಕೊಂಡು-'ಡಿಟರ್ಜೆಂಟ್ ಪೌಡರ್ ತಯಾರಿಸುವುದು ಹೇಗೆ ಎಂದು ಹೇಳಿಕೊಡುತ್ತೇನೆ. ಈ ಕೆಲಸದಲ್ಲಿ ನಂಗೆ ಸಹಾಯ ಮಾಡಿ. ಅದನ್ನು ಮಾರಾಟ ಮಾಡುವ ಜವಾಬ್ದಾರಿ ನನ್ನದು. ಈ ಬಿಜಿನೆಸ್‌ನಿಂದ ಸ್ವಲ್ಪ ಮಟ್ಟಿಗಾದ್ರೂ ನಮ್ಮ ಬಡತನ ಕಡಿಮೆಯಾಗುತ್ತೆ' ಅಂದ. ಮರುದಿನದಿಂದಲೇ ಮನೆಯ ಮೂಲೆಯಲ್ಲಿದ್ದ ಪುಟ್ಟ ಗ್ಯಾರೇಜ್‌ನಲ್ಲಿ ಡಿಟರ್ಜೆಂಟ್ ಪೌಡರ್‌ನ ತಯಾರಿಕೆ ಆರಂಭವಾಯಿತು. ಇದಿಷ್ಟೂ ನಡೆದದ್ದು 1980ರಲ್ಲಿ. ಆ ಸಂದರ್ಭದಲ್ಲಿ, ಡಿಟರ್ಜೆಂಟ್ ಪೌಡರ್‌ನ ಮಾರ್ಕೆಟ್ ಕಿಂಗ್ ಅನ್ನಿಸಿಕೊಂಡಿದ್ದುದು ಸರ್ಫ್ ಎಕ್ಸೆಲ್.
ಅದು, ಬಹುರಾಷ್ಟ್ರೀಯ ಕಂಪನಿಯಾದ ಹಿಂದೂಸ್ತಾನ್ ಲೀವರ್‌ನ ಉತ್ಪನ್ನ. ಅದಕ್ಕೆ ಎದುರು ನಿಂತು ಪೈಪೋಟಿ ನೀಡಲು ಯಾವುದೇ ಕಂಪನಿಗೂ ಸಾಧ್ಯವಿರಲಿಲ್ಲ. ಇದೆಲ್ಲಾ ಗೊತ್ತಿದ್ದರೂ ಕರ್ಸನ್‌ಭಾಯಿ ಪಟೇಲ್ ರಿಸ್ಕ್‌ಗೆ ಕೈ ಹಾಕಿದ್ದ. ತಮಾಷೆಯೆಂದರೆ, ಬಿಜಿನೆಸ್ ಆರಂಭಿಸಲು ಅಗತ್ಯವಾಗಿ ಬೇಕಾಗಿದ್ದ ಬಂಡವಾಳವೇ ಅವನಲ್ಲಿ ಇರಲಿಲ್ಲ. ಆಗ, ಪರಿಚಯದವರು ಹಾಗೂ ಗೆಳೆಯರನ್ನು ಕಾಡಿ ಬೇಡಿ 1000 ರೂ.ಗಳನ್ನು ಸಾಲವಾಗಿ ಪಡೆದಿದ್ದಾಯಿತು. ತಾನು ತಯಾರಿಸುವ ಉತ್ಪನ್ನಕ್ಕೆ ಹೆಸರು ಬೇಕು ಅನ್ನಿಸಿದಾಗ ಕರ್ಸನ್ ಭಾಯಿ ಪಟೇಲ್‌ಗೆ ನೆನಪಾಗಿದ್ದು ಮಗಳು ನಿರುಪಮಾ. ಅವಳ ಹೆಸರಿನ ಮೊದಲ ಮೂರು ಹಾಗೂ ಕೊನೆಯ ಎರಡು ಅಕ್ಷರಗಳನ್ನು ತೆಗೆದುಕೊಂಡ ಪಟೇಲ್, ಃಐಖಂಆ ಎಂಬ ಹೆಸರನ್ನು ಡಿಟರ್ಜೆಂಟ್ ಪೌಡರ್‌ಗೆ ಇಟ್ಟ.
ಮಾರುಕಟ್ಟೆಗೆ ಬರುವ ಯಾವುದೇ ಉತ್ಪನ್ನ ಜನರ ಗಮನ ಸೆಳೆಯಬೇಕೆಂದರೆ, ಅದರ ಬೆಲೆ ಕಡಿಮೆ ಇರಬೇಕು. ಕರ್ಸನ್‌ಭಾಯ್ ಪಟೇಲ್ ಕೂಡ ಇದೇ ತಂತ್ರ ಅನುಸರಿಸಿದ. ಲಾಭ ಗಳಿಸುವ ಉದ್ದೇಶವೇ ಇಲ್ಲದ್ದರಿಂದ ಆತ ಅಂಗಡಿಗಳಿಗೆ ಹೋಗಲೇ ಇಲ್ಲ. ಬದಲಿಗೆ ತನ್ನ ಸೈಕಲ್‌ನಲ್ಲಿ ದಿನವೂ 15-20 ಕೆ.ಜಿ.ಯಷ್ಟು ನಿರ್ಮಾ ಡಿಟರ್ಜೆಂಟ್ ಪೌಡರ್‌ನ ಪ್ಯಾಕ್‌ಗಳನ್ನು ಹೇರಿಕೊಂಡು ಆಫೀಸಿಗೆ ಹೋಗುತ್ತಿದ್ದ. ಅವತ್ತಿಗೆ ಸರ್ಫ್ ಎಕ್ಸೆಲ್ ಪೌಡರ್‌ನ ಬೆಲೆ ಒಂದು ಕೆ.ಜಿ.ಗೆ 13 ರೂ. ಇತ್ತು. ಹೀಗಿರುವಾಗ, ಒಂದು ಕೆ.ಜಿ.ಗೆ ಕೇವಲ 3 ರೂಪಾಯಿ ನಿಗದಿ ಮಾಡಿದ ಪಟೇಲ್, ಅದನ್ನು ಸಹೋದ್ಯೋಗಿಗಳಿಗೆ ಮಾರಿದ. ಈ ಪೌಡರ್ ಚೆನ್ನಾಗಿಲ್ಲ ಅನ್ನಿಸಿದರೆ, ಎಷ್ಟು ಉಳಿದಿರುತ್ತೋ ಅಷ್ಟನ್ನೇ ವಾಪಸ್ ಕೊಡಿ. ಅದಕ್ಕೆ ಪ್ರತಿಯಾಗಿ ಪೂರ್ತಿ ಹಣವನ್ನೇ ವಾಪಸ್ ಕೊಡುತ್ತೇನೆ ಎಂದು ಪ್ರಾಮಿಸ್ ಮಾಡಿದ. ಭಾನುವಾರಗಳಲ್ಲಂತೂ 100 ಕೆ.ಜಿ.ಯಷ್ಟು ನಿರ್ಮಾ ಪ್ಯಾಕ್‌ಗಳನ್ನು ತುಂಬಿಕೊಂಡು ಮನೆಮನೆಯ ಬಾಗಿಲು ತಟ್ಟುವುದು ಕರ್ಸನ್‌ಭಾಯ್ ಪಟೇಲ್‌ನ ಕರ್ತವ್ಯವೇ ಆಗಿ ಹೋಯಿತು.
ಸರ್ಫ್ ಎಕ್ಸೆಲ್‌ಗಿಂತ ಬೆಲೆ ತುಂಬಾ ಕಡಿಮೆಯಿತ್ತಲ್ಲ; ಅದೇ ಕಾರಣದಿಂದ ಪಟೇಲ್‌ನ ಪರಿಚಯದವರು, ಸಹೋದ್ಯೋಗಿಗಳು ಹಾಗೂ ಬಂಧುಗಳು ನಿರ್ಮಾ ವಾಷಿಂಗ್ ಪೌಡರನ್ನು ಖರೀದಿಸಿದರು. ಬೆಲೆ ಕಡಿಮೆಯಿದ್ದರೂ ಗುಣಮಟ್ಟದಲ್ಲಿ ಸರ್ಫ್ ಎಕ್ಸೆಲ್‌ಗೆ ಸರಿಸಾಟಿಯಾಗಿ ನಿಲ್ಲುವ ಸಾಮರ್ಥ್ಯ ನಿರ್ಮಾಕ್ಕಿದೆ ಎಂದು ತಿಳಿಯಲು ಹೆಚ್ಚು ಕಾಲ ಬೇಕಾಗಲಿಲ್ಲ. ಪರಿಣಾಮವಾಗಿ, ನೋಡ ನೋಡುತ್ತಲೇ ನಿರ್ಮಾಕ್ಕೆ ಡಿಮ್ಯಾಂಡ್ ಶುರುವಾಯಿತು. ಅದೊಮ್ಮೆ, ಒಂದೇ ವಾರದಲ್ಲಿ, 500 ಕೆ.ಜಿ. ಪೌಡರ್‌ಗೆ ಆರ್ಡರ್ ಬಂದಾಗ ಎರಡನೇ ಯೋಚನೆಯನ್ನೇ ಮಾಡದೆ ಪಟೇಲ್, ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿದ. ಆನಂತರದಲ್ಲಿ ಅಹಮದಾಬಾದ್‌ನ ಹೊರವಲಯದಲ್ಲಿ ಕೇವಲ 5 ಮಂದಿ ನೌಕರರೊಂದಿಗೆ ನಿರ್ಮಾ ಡಿಟರ್ಜೆಂಟಮ್ ಪೌಡರ್ ಫ್ಯಾಕ್ಟರಿ ಆರಂಭವಾಯಿತು.
ಗುಜರಾತ್‌ನ ಎಲ್ಲ ಜಿಲ್ಲೆಗಳಲ್ಲೂ ಮಾರಾಟ ಪ್ರತಿನಿಧಿಗಳನ್ನು ಹುಡುಕಿಕೊಂಡು ಫ್ಯಾಕ್ಟರಿಗೆ ಭದ್ರ ನೆಲೆ ಒದಗಿಸಬೇಕು ಎಂಬುದಷ್ಟೇ ಕರ್ಸನ್‌ಭಾಯಿ ಪಟೇಲರ ಉದ್ದೇಶವಾಗಿತ್ತು. ಆಗ, ಒಂದು ಕೆ.ಜಿ.ಯ ಪ್ಯಾಕ್‌ಗೆ 3.50 ರುಪಾಯಿ ಎಂಬ ಘೋಷಣೆಯೊಂದಿಗೇ ಗುಜರಾತ್‌ನ ಎಲ್ಲ ಜಿಲ್ಲೆಗೂ ನಿರ್ಮಾ ವಾಷಿಂಗ್ ಪೌಡರ್‌ನ್ನು ತಲುಪಿಸಿದ್ದಾಯಿತು. ಈ ಸಂದರ್ಭದಲ್ಲಿ ಹಿಂದೂಸ್ತಾನ್ ಲೀವರ್ ಕಂಪನಿಯ ಅಧಿಕಾರಿಗಳು ಉಡಾಫೆಯ ಮಾತಾಡಿದರು. 'ನಮ್ಮದು ದೈತ್ಯ ಕಂಪನಿ ಕಣ್ರೀ. ನಮ್ಮ ಮೇಲೆ ಪೈಪೋಟಿಗೆ ಬಂದು ಯಶಸ್ಸು ಕಾಣಲು ಯಾರಿಗಾದರೂ ಸಾಧ್ಯವಾ?' ಅಂದರು. ಕರ್ಸನ್‌ಭಾಯಿ ಪಟೇಲ್ ಇಂಥ ಮಾತುಗಳಿಂದ ಕಂಗಾಲಾಗಲಿಲ್ಲ. ಬದಲಿಗೆ, ಪ್ರತಿಯೊಂದು ಜಿಲ್ಲೆಗೂ ಹೋಗಿ ಅಲ್ಲಿನ ವ್ಯಾಪಾರಿಗಳೊಂದಿಗೆ ಚರ್ಚೆ ನಡೆಸಿದ. ಪರಿಣಾಮ ಏನಾಯಿತೆಂದರೆ, ಆರು ತಿಂಗಳ ಅವಧಿಯಲ್ಲಿ ನಿರ್ಮಾ ಪೌಡರ್ ಗುಜರಾತ್‌ನ ಎಲ್ಲ ಮನೆಗಳಲ್ಲೂ ಜಾಗ ಪಡೆದುಕೊಂಡಿತು. ಅಯ್ಯಯ್ಯೋ, ಇದೇನಾಗಿ ಹೋಯ್ತು ಎಂದು ಹಿಂದೂಸ್ತಾನ್ ಲೀವರ್ ಕಂಪನಿಯ ಅಧಿಕಾರಿಗಳು ತಿರುಗಿ ನೋಡುವ ಮೊದಲೇ ಸರ್ಫ್ ಎಕ್ಸೆಲ್, ಎರಡನೇ ಸ್ಥಾನಕ್ಕೆ ಬಂದು ಕೂತಿತು.
ಆನಂತರ ಏನಾಯಿತೋ ಕೇಳಿ: ಬಿಡಿ ಮಾರಾಟಗಾರರು 100, 200, 500 ಕೆ.ಜಿ.ಯ ಲೆಕ್ಕದಲ್ಲಿ ನಿರ್ಮಾ ವಾಷಿಂಗ್ ಪೌಡರನ್ನು ಖರೀದಿಸಿದರು ನಿಜ. ಆದರೆ, ಕಮೀಷನ್ ಮುರಿದುಕೊಂಡು ಹಿಂದಿರುಗಿಸಬೇಕಾಗಿದ್ದ ಹಣವನ್ನೇ ಕೊಡಲಿಲ್ಲ. ಪರಿಣಾಮ, ನಾಲ್ಕೇ ವರ್ಷದ ಅವಧಿಯಲ್ಲಿ ಕರ್ಸನ್‌ಭಾಯಿ ಪಟೇಲ್‌ಗೆ ಹಣಕಾಸಿನ ಸಮಸ್ಯೆ ಎದುರಾಯಿತು. ಆಗ ಪಟೇಲ್, ತುಂಬಾ ರಿಸ್ಕಿ ಎಂಬಂಥ ನಿರ್ಧಾರವೊಂದನ್ನು ತೆಗೆದುಕೊಂಡ. ಮರುದಿನದಿಂದಲೇ ಎಲ್ಲ ವ್ಯಾಪಾರಿಗಳಿಗೂ ತನ್ನ ಕಂಪನಿಯ ಮೆನೇಜರ್‌ಗಳ ಮೂಲಕ -'ತಕ್ಷಣವೇ ಬಾಕಿ ಹಣ ಪಾವತಿಸಿ. ಇಲ್ಲವಾದರೆ, ಮಾರಾಟವಾಗದೆ ಉಳಿದಿರುವ ನಿರ್ಮಾ ಪೌಡರನ್ನು ವಾಪಸ್ ಕಳಿಸಿ' ಎಂಬ ಕಠಿಣ ಸಂದೇಶ ಕಳಿಸಿದ. ಆಗ ವ್ಯಾಪಾರಿಗಳೆಲ್ಲ ಒಂದಾದರು. ಪಟೇಲ್‌ಗೆ ಬುದ್ಧಿ ಕಲಿಸಬೇಕು ಎಂದು ನಿರ್ಧರಿಸಿ, ಟನ್‌ಗಟ್ಟಲೆ ನಿರ್ಮಾ ಪೌಡರನ್ನು ವಾಪಸ್ ಮಾಡಿಬಿಟ್ಟರು.
ಆದರೆ, ಕರ್ಸನ್‌ಭಾಯಿ ಪಟೇಲ್‌ನ ಲೆಕ್ಕಾಚಾರವೇ ಬೇರೆಯಿತ್ತು. ಅಂಗಡಿಗಳಿಂದ ಬಂದ ಪೌಡರನ್ನು ಹೊಸ ವಿನ್ಯಾಸದ ಪ್ಯಾಕ್‌ಗಳಿಗೆ ತುಂಬಿಸಿದ. ನಂತರದ ಒಂದಿಡೀ ತಿಂಗಳು, ನಿರ್ಮಾ ವಾಷಿಂಗ್ ಪೌಡರ್‌ನ ಜಾಹೀರಾತು, ಗುಜರಾತ್‌ನ ಎಲ್ಲ ಪತ್ರಿಕೆಗಳಲ್ಲೂ ಪ್ರಕಟವಾಗುವಂತೆ ನೋಡಿಕೊಂಡ. ಇಷ್ಟಲ್ಲದೇ ರೇಡಿಯೋ ಮೂಲಕವೂ ಜನರನ್ನು ತಲುಪಬೇಕು ಅನ್ನಿಸಿದಾಗ, ವೇದಪಾಲ್ ಎಂಬ ಸಂಗೀತ ನಿರ್ದೇಶಕರನ್ನು ಭೇಟಿಯಾದ. ನಂತರದ ಕೆಲವೇ ದಿನಗಳಲ್ಲಿ ಗಲಗಲಗಲ ಎಂಬಂಥ ಹಿನ್ನೆಲೆ ಸಂಗೀತದಲ್ಲಿ ಹಾಡೊಂದು ಕೇಳಿಬಂತು.
ವಾಷಿಂಗ್ ಪೌಡರ್ ನಿರ್ಮಾ, ವಾಷಿಂಗ್ ಪೌಡರ್ ನಿರ್ಮಾ /ದೂಧ್ ಸಿ ಸಫೇದಿ, ನಿರ್ಮಾ ಸೆ ಆಯೇ/ ರಂಗೀನ್ ಕಪಡಾ ಭೀ ಖಿಲ್ ಖಿಲ್ ಜಾಯೆ/
ಸಬ್ ಕಿ ಪಸಂದ್ ನಿರ್ಮಾ/ ವಾಷಿಂಗ್ ಪೌಡರ್ ನಿರ್ಮಾ, ನಿರ್ಮಾ...
ರೇಡಿಯೋದಲ್ಲಿ ದಿನಕ್ಕೆ ಆರು ಬಾರಿ ಕಳಿಸಿದ ಈ ಹಾಡು ಅದೆಷ್ಟು ಜನಪ್ರಿಯವಾಯಿತೆಂದರೆ, ನಿರ್ಮಾ ಪೌಡರ್ ಕೊಡಿ ಎಂದು ಅಂಗಡಿಗಳಿಗೆ ದಿನವೂ ನೂರಾರು ಮಂದಿ ಬರತೊಡಗಿದರು. ಉಳಿದಿದ್ದ ಸ್ಟಾಕನ್ನು ಆಗಲೇ ಹಿಂದಿರುಗಿಸಿದ್ದರಿಂದ ಅಂಗಡಿಯವರು ಕೈ ಕೈ ಹಿಸುಕಿಕೊಂಡರು.
ಕಡೆಗೆ, ಬೇರೇನೂ ಮಾಡಲಾಗದೆ ಕರ್ಸನ್‌ಭಾಯಿ ಪಟೇಲ್‌ನ ಮುಂದೆ ನಿಂತರು. ಒಂದೇ ಬಾರಿಗೆ ಪೂರ್ತಿ ಹಣ ಪಾವತಿಸಿ ಟನ್‌ಗಟ್ಟಲೆ ನಿರ್ಮಾ ಪೌಡರ್ ಖರೀದಿಸಿದರು. ಈ ಸಂದರ್ಭದಲ್ಲಿಯೇ ದೂರದರ್ಶನ ಹಾಗೂ ಸಿನಿಮಾ ಥಿಯೇಟರ್‌ಗಳಲ್ಲಿ ಟ್ರೇಲರ್ ಪ್ರದರ್ಶನದ ಮೂಲಕವೂ ಜನರನ್ನು ತಲುಪಬಹುದು ಎಂದು ಗಮನಿಸಿದ ಪಟೇಲ್, ವಾಷಿಂಗ್ ಪೌಡರ್ ನಿರ್ಮಾ ಎಂಬ ಹಾಡನ್ನೇ ಇಟ್ಟುಕೊಂಡು ವಿಡಿಯೋ ಜಾಹೀರಾತೊಂದನ್ನು ತಯಾರಿಸಿದರು. ಈ ಜಾಹೀರಾತಿಗೆ, ತಮ್ಮ ಮಗಳು ನಿರುಪಮಾಳನ್ನೇ ಮಾಡೆಲ್ ಆಗಿ ಬಳಸಿಕೊಂಡರು. ಆ ಜಾಹೀರಾತಿನಲ್ಲಿ -'ವಾಷಿಂಗ್ ಪೌಡರ್ ನಿರ್ಮಾ, ನಿರ್ಮಾ' ಎಂಬ ಕಡೆಯ ಸಾಲು ಕೇಳಿಸುತ್ತಿದ್ದಂತೆಯೇ ಬಿಳಿಯ ಫ್ರಾಕ್ ತೊಟ್ಟ ಪುಟ್ಟ ಹುಡುಗಿಯೊಬ್ಬಳು ಗಿರ್ರನೆ ಮೂರು ರೌಂಡ್ ತಿರುಗಿ, ಮುದ್ದಾಗಿ ನಗುತ್ತಾ ನಿಂತು ಬಿಡುತ್ತಾಳೆ. ಅವಳೇ ನಿರುಪಮಾ. ಈ ಜಾಹೀರಾತು ಅದೆಷ್ಟು ಜನಪ್ರಿಯವಾಯಿತು ಅಂದರೆ, ಭಾರತದ ಎಲ್ಲ ಭಾಷೆಗಳಿಗೂ ಈ ಹಾಡನ್ನು ತರ್ಜುಮೆ ಮಾಡಿಸಲಾಯಿತು.
ಆನಂತರದಲ್ಲಿ ಕರ್ಸನ್‌ಭಾಯಿ ಪಟೇಲರು ಹಿಂತಿರುಗಿ ನೋಡಲಿಲ್ಲ. ನಿರ್ಮಾ ವಾಷಿಂಗ್ ಪೌಡರ್‌ನ ಖ್ಯಾತಿ ದೇಶಾದ್ಯಂತ ಹರಡಿತು. ಕಂಪನಿಯ ವಾರ್ಷಿಕ ವಹಿವಾಟು 4000 ಕೋಟಿಯ ಗಡಿ ದಾಟಿತು. ಕಂಪನಿಯ ನೌಕರರ ಸಂಖ್ಯೆ 14000 ವನ್ನು ದಾಟಿತು. ವಾಷಿಂಗ್ ಪೌಡರ್‌ನ ಹಿಂದೆಯೇ ನಿರ್ಮಾ ಟೂತ್‌ಪೇಸ್ಟ್, ನಿರ್ಮಾ ಶಿಕಾಕಾಯ್, ನಿರ್ಮಾ ಟಾಯ್ಲೆಟ್ ಸೋಪ್, ನಿರ್ಮಾ ಶಾಂಪೂಗಳು ಮಾರುಕಟ್ಟೆಗೆ ಬಂದವು. ಶುದ್ಧ್ ಹೆಸರಿನ ಉಪ್ಪು ಕೂಡ ನಿರ್ಮಾ ಕಂಪನಿಯ ಉತ್ಪನ್ನವಾಗಿ ಬಂತು. ನಿರ್ಮಾ ಹೆಸರಿನ ಹುಡುಗಿಯಂತೆಯೇ ಗಿರ್ರನೆ ತಿರುಗುವುದು ಮನೆಮನೆಯ ಮಕ್ಕಳ ಅಭ್ಯಾಸವಾಯಿತು. ಹೀಗೆ, ನಿರ್ಮಾ ಎಂಬ ಹೆಸರು ಎಲ್ಲರ ಮನೆ-ಮನದಲ್ಲೂ ರಿಂಗಣಿಸುತ್ತಿದ್ದಾಗಲೇ ಅನಾಹುತ ನಡೆದುಹೋಯಿತು: ನಿರ್ಮಾ ಬ್ರಾಂಡ್‌ನ ಪ್ರಮುಖ ಆಕರ್ಷಣೆಯಾಗಿದ್ದ ಕರ್ಸನ್‌ಭಾಯಿ ಪಟೇಲರ ಮಗಳು ನಿರುಪಮಾ, ಕಾರು ಅಪಘಾತದಲ್ಲಿ ಸತ್ತು ಹೋದಳು.
ಮಗಳ ಸಾವಿನಿಂದ ಶಾಕ್‌ಗೆ ಒಳಗಾದ ಪಟೇಲ್ ಆನಂತರದಲ್ಲಿ ವ್ಯವಹಾರದಲ್ಲಿ ನಿರಾಸಕ್ತಿ ತೋರಿದರು. ತಮ್ಮ ಜಾಗದಲ್ಲಿ ಮಕ್ಕಳನ್ನು ಕೂರಿಸಿದರು. ಮಗಳ ನೆನಪಿನಲ್ಲಿ ನಾಲ್ಕು ಮಂದಿಗೆ ನೆರವಾಗಬೇಕು ಎಂಬ ಸದಾಶಯದಿಂದಲೇ ಅವರೀಗ ನಿರ್ಮಾ ಮೆಮೋರಿಯಲ್ ಟ್ರಸ್ಟ್, ನಿರ್ಮಾ ಫೌಂಡೇಷನ್ ಆರಂಭಿಸಿದ್ದಾರೆ. ಸಾಯುವಾಗ ನಾವ್ಯಾರೂ ಸಂಪತ್ತನ್ನು ಕೊಂಡೊಯ್ಯಲು ಸಾಧ್ಯವಿಲ್ಲ. ಹಾಗಾಗಿ ಇರುವಷ್ಟು ದಿನ ಹತ್ತು ಮಂದಿಗೆ ಸಹಾಯ ಮಾಡಬೇಕು ಎಂಬುದಷ್ಟೇ ನನ್ನ ಗುರಿ ಎಂಬುದು ಪಟೇಲ್‌ರ ವಿನಯದ ಮಾತು.
ಭಾರತದಲ್ಲಿ ಮಾತ್ರವಲ್ಲ; ಬಾಂಗ್ಲಾದೇಶ, ರಷ್ಯಾ, ಚೀನಾ, ಆಫ್ರಿಕಾ ಹಾಗೂ ಮಧ್ಯ ಏಷ್ಯಾದ ರಾಷ್ಟ್ರಗಳಲ್ಲೂ ನಿರ್ಮಾ ವಾಷಿಂಗ್ ಪೌಡರ್‌ನ ಹೆಸರು ರಾರಾಜಿಸುವಂತೆ ಮಾಡಿದ; ಉತ್ತಮ ಗುಣಮಟ್ಟದ ವಸ್ತುವಿನಿಂದ ಮಲ್ಟಿ ನ್ಯಾಷನಲ್ ಕಂಪನಿಗಳನ್ನೂ ಬಗ್ಗು ಬಡಿಯಬಹುದು ಎಂದು ತೋರಿಸಿಕೊಟ್ಟ ಈ ಮಹಾನ್ ಸಾಧಕನಿಗೆ ಪದ್ಮಶ್ರೀ, ಅಮೆರಿಕದ ವಿ.ವಿ.ಯ ಗೌರವ ಡಾಕ್ಟರೇಟ್ ಸೇರಿದಂತೆ ನೂರಾರು ಪ್ರಶಸ್ತಿಗಳು ಲಭಿಸಿವೆ. ನಿರ್ಮಾ ಕಂಪನಿಯ ಯಶೋಗಾಥೆ ದೇಶ-ವಿದೇಶಗಳಲ್ಲಿ ಬಿಬಿಎಂ/ಎಂಬಿಎ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇದನ್ನೆಲ್ಲ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾ ಛಲ ಮತ್ತು ಶ್ರದ್ಧೆಯಿಂದ ಒಬ್ಬ ವ್ಯಕ್ತಿ ಎಷ್ಟೊಂದು ದೊಡ್ಡ ಹಂತಕ್ಕೆ ಬೆಳೆಯಬಹುದಲ್ಲವೆ ಎಂದುಕೊಂಡಾಗಲೇ ಅದೇ ಹಳೆಯ ಹಾಡು ನೆನಪಾಗುತ್ತದೆ; ವಾಷಿಂಗ್ ಪೌಡರ್ ನಿರ್ಮಾ, ವಾಷಿಂಗ್ ಪೌಡರ್ ನಿರ್ಮಾ, ದೂಧ್ ಸೀ ಸಫೇದಿ...
-ಎ.ಆರ್. ಮಣಿಕಾಂತ್
armanikanth@gmail.com