ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅರಾಜಕ ಪಾಕ್‌ನಲ್ಲಿ ಕಾಶ್ಮೀರದ ಬಿಂಬ

Srinivasa Murthy VN
Updated On : 2 Feb 2013, 12:05 pm

ಒಂದು ಸಮುದಾಯದ ಜಾತ್ಯತೀತ ಮತ್ತು ಸಾಂಸ್ಕೃತಿಕ ಲಕ್ಷಣಗಳನ್ನು ಅದು ಬಹುಸಂಖ್ಯಾತವಾಗಿರುವ ಪ್ರದೇಶಗಳಲ್ಲಿ ಕಾಣಬಹುದು. ಇನ್ನು ಅಲ್ಲಿ ಅಲ್ಪಸಂಖ್ಯಾತರೆನಿಸಿಕೊಂಡ ಸಮುದಾಯಗಳು, ಯಾವಾಗಲೂ ಸ್ವಹಿತಾಸಕ್ತಿಗಾಗಿ 'ಸಹನೆ' ಎಂಬ ಮಂತ್ರವನ್ನು ಪಠಿಸುತ್ತಲಿರುತ್ತವೆ.
ಭಾರತದ ಸುತ್ತ ಮುತ್ತ ಪ್ರಮುಖವಾಗಿ ಮೂರು ಪ್ರದೇಶಗಳಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗಿದ್ದಾರೆ.  ಪಾಕಿಸ್ತಾನ, ಕಾಶ್ಮೀರ ಮತ್ತು ಬಾಂಗ್ಲಾದೇಶದಲ್ಲಿ. ಇನ್ನು ಇವುಗಳ ಮಧ್ಯೆ ಇರುವ ಹಿಂದೂಸ್ತಾನದಲ್ಲಿ ಆ ಜನಾಂಗ ಅಲ್ಪಸಂಖ್ಯಾತವಾಗಿದೆ.
-----
ಮೊದಲು ಪಾಕಿಸ್ತಾನದತ್ತ ಗಮನ ಹರಿಸೋಣ. ಆ ದೇಶದಲ್ಲಿ ಮತದಾರರು ಅಥವಾ ಜನತೆಯನ್ನು  ಪ್ರಭುಗಳೆಂದು ಪರಿಗಣಿಸಲಾಗುವುದಿಲ್ಲ, ಬದಲಾಗಿ ಆ ಸ್ಥಾನ ದೇವರೊಬ್ಬನಿಗೇ ಸೀಮಿತವಾಗಿದೆ. ಅಲ್ಲಿನ ಸಂವಿಧಾನ ಅಲ್ಪಸಂಖ್ಯಾತರಿಗೆ ತಮ್ಮ ಸಂಸ್ಕೃತಿಯನ್ನು, ಧರ್ಮವನ್ನು ಮುಕ್ತವಾಗಿ ಬೆಳೆಸಲು 'ಸಾಕಷ್ಟು ಅವಕಾಶ' ಕೊಟ್ಟಿದೆ. 1951ರಲ್ಲಿ 'ಮುಕ್ತವಾಗಿ' ಎನ್ನುವ ಪದದ ಸೇರ್ಪಡೆಯಾಯಿತು. 1985ರಲ್ಲಿ ಆ ಪದವನ್ನು ಕಿತ್ತೆಸೆಯಲಾಯಿತು. ಮತ್ತೆ 2010ರಲ್ಲಿ ಅದು ಸಂವಿಧಾನದಲ್ಲಿ ಜಾಗ ಪಡೆಯಲು ಯಶಸ್ವಿಯಾಯಿತು. ಮುಸ್ಲಿಂ ಆಡಳಿತದ ರಾಷ್ಟ್ರಗಳಲ್ಲಿ ಹೀಗೆ ನಡೆಯುವುದು ಸಹಜ. ಏಕೆ ಎನ್ನುವುದನ್ನು ಮುಂದೆ ನಿಮಗೇ ತಿಳಿಯುತ್ತದೆ.
ಪಾಕಿಸ್ತಾನದ ಸಂವಿಧಾನ 'ಪ್ರಜಾತಂತ್ರದ ತತ್ವಗಳು, ಸ್ವಾತಂತ್ರ್ಯ, ಸಮಾನತೆ, ಸಹಿಷ್ಣುತೆಯ ಬಗ್ಗೆ ಇಸ್ಲಾಂನಲ್ಲಿ ಹೇಳಿರುವಂತೆಯೇ ನಡೆದುಕೊಳ್ಳಬೇಕು' ಎಂದು ಹೇಳುತ್ತದೆ. ಆದರೆ ಎಷ್ಟು ಪ್ರಮಾಣದಲ್ಲಿ ಅಲ್ಲಿನ ಅಲ್ಪಸಂಖ್ಯಾತರಿಗೆ ಸ್ವಾತಂತ್ರ್ಯ, ಸಮಾನತೆ ಸಿಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲೇಬೇಕಿದೆ.
ಪಾಕಿಸ್ತಾನದಲ್ಲಿ ಸಿಖ್ ಜನಾಂಗದ ವ್ಯಕ್ತಿ ಅಧ್ಯಕ್ಷನಾಗಬಾರದು, (ವಿಧಿ 4(2)), ಕ್ರಿಶ್ಚಿಯನ್ನನೊಬ್ಬ ಪ್ರಧಾನ ಮಂತ್ರಿ ಆಗಬಾರದು(ವಿಧಿ 91-5) ಎನ್ನುವ ನಿಯಮವಿದೆ. ಇವೇನೇ ಇದ್ದರೂ ಆ ದೇಶದ ಕಣ್ಣಿಗೆ ಅತಿ ದೊಡ್ಡ ವಿಲನ್ ಆಗಿ ಕಾಣಿಸುವುದು ಮಾತ್ರ ಹಿಂದುವೊಬ್ಬನೇ! ಅಲ್ಲಿನ ಶಾಲೆಗಳಲ್ಲಿ 5ನೆಯ ತರಗತಿಯ ಮಕ್ಕಳಿಗೆ ಏನು ಕಲಿಸಿಕೊಡಲಾಗುತ್ತದೆ ಗೊತ್ತೆ? 'ಹಿಂದೂಗಳು ಯಾವಾಗಲೂ ಇಸ್ಲಾಂನ ಶತ್ರುಗಳು', 'ಹಿಂದೂಗಳು ಇಕ್ಕಟ್ಟಾದ, ಕತ್ತಲು ತುಂಬಿದ ದೇವಾಲಯಗಳಲ್ಲಿ ಮೂರ್ತಿ ಪೂಜೆ ಮಾಡುತ್ತಾರೆ' ಎಂಬುದು. ಇನ್ನು  6ನೆಯ ತರಗತಿಯ ಮಕ್ಕಳು, 'ಹಿಂದೂಗಳು ಕತ್ತಲು ತುಂಬಿದ, ಅತಿ ಚಿಕ್ಕ ಮನೆಗಳಲ್ಲಿ ವಾಸಿಸುತ್ತಾರೆ', ವಿಭಜನೆ ಆಗಿದ್ದಕ್ಕೆ ಮುಖ್ಯ ಕಾರಣ ಕಾಂಗ್ರೆಸ್, ಅದು 'ಎಲ್ಲಾ ಮುಸಲ್ಮಾನರಿಗೆ ಹಿಂದೂ ಧರ್ಮ ಸ್ವೀಕರಿಸುವಂತೆ,ಇಲ್ಲದಿದ್ದರೆ ದೇಶ ಬಿಟ್ಟು ತೊಲಗುವಂತೆ ಒತ್ತಾಯ ಮಾಡಿತು' ಎಂದು ಕಲಿಯುತ್ತವೆ!
ಪಾಕಿಸ್ತಾನದಲ್ಲಿ ಶಾಸಕನಾಗುವವನಿಗೆ ಇರಬೇಕಾದ ಮೊದಲ ಅರ್ಹತೆಯೆಂದರೆ, ಅವನು ಇಸ್ಲಾಂನ ಯಾವುದೇ ನಿಯಮಗಳನ್ನು ಮುರಿದವನಾಗಿರಬಾರದು(ವಿಧಿ 62-1ಜ), ಮತ್ತು ಆತನಿಗೆ 'ಇಸ್ಲಾಂನ ಬೋಧನೆಗಳು ಹಾಗೂ ಅಭ್ಯಾಸಗಳ ಬಗೆಗೆ ಪೂರ್ಣ ಜ್ಞಾನ ಇರಬೇಕು' ಎಂಬುದು(ವಿಧಿ 62-1ಜ). ಸೆಪ್ಟೆಂಬರ್‌ನಲ್ಲಿ ರೆಹಮಾನ್ ಮಾಲಿಕ್‌ರನ್ನು ಸುಪ್ರಿಂ ಕೋರ್ಟ್ ಕೆಳಗಿಳಿಸಿದ್ದೂ ಇದೇ ಕಾರಣಕ್ಕಾಗಿಯೇ. ಅವರು ಉತ್ತಮ ಮುಸ್ಲಿಂ ಆಗಿರಲಿಲ್ಲ ಎಂದು ತನ್ನ ತೀರ್ಪಿನಲ್ಲಿ ಅದು ಹೇಳಿತ್ತು! ಇನ್ನು ಸುಪ್ರಿಂ ಕೋರ್ಟ್‌ನಿಂದ ಇದೇ ತೆರನಾಗಿ ಶಿಕ್ಷೆ ಅನುಭವಿಸಿದವರು ಪಂಜಾಬ್‌ನ ಹಣಕಾಸು ಸಚಿವ ರಾಣಾ ಆಸಿಫ್ ಮೊಹಮ್ಮದ್. ಅವರು ಪರಿಪೂರ್ಣ ಮುಸ್ಲಿಮರಂತೆ ವರ್ತಿಸುತ್ತಿಲ್ಲ ಎಂದು ಅದು ಸುಪ್ರಿಂ ಕೋರ್ಟ್ ಅವರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ತೀರ್ಪು ಕೊಟ್ಟಿತು. ನಿಮಗೆ ಆಶ್ಚರ್ಯವಾಗಬಹುದು, ಆಸಿಫ್ ಮೊಹಮ್ಮದ್ ಕ್ರಿಶ್ಚಿಯನ್ನರು! ಆದರೆ ಕೆಲವು ತಿಂಗಳ ಹಿಂದೆ ಸರ್ಕಾರಿ ಅಧಿಕಾರಿಯೊಬ್ಬ ಎಸಗಿದ ತಪ್ಪಿನಿಂದಾಗಿ ಅವರು ಮುಸಲ್ಮಾನರಾಗಬೇಕಾಯಿತು. ಸರ್ಕಾರಿ ದಾಖಲೆಯೊಂದರಲ್ಲಿ ರಾಣಾ ಅವರ ಧರ್ಮವನ್ನು ಆತ 'ಮುಸ್ಲಿಂ' ಎಂದು ತಪ್ಪಾಗಿ ನಮೂದಿಸಿಬಿಟ್ಟಿದ್ದ. ಪಾಕಿಸ್ತಾನದಲ್ಲೊಂದು ಕಾನೂನಿದೆ, ಒಂದು ಸಾರಿ ಮುಸ್ಲಿಂ ಆದವನು ಕಡೆಯವರೆಗೂ ಅದೇ ಧರ್ಮದಲ್ಲಿರಬೇಕು. ಅವನಿಗೆ ಇಷ್ಟವಿರಲಿ, ಇಲ್ಲದಿರಲಿ. ಇಸ್ಲಾಂ ಅನ್ನು ತ್ಯಜಿಸಿದರೆ ನೇರವಾಗಿ ನೇರವಾಗಿ ನೇಣುಗಂಬದತ್ತಲೇ ನಡೆಯಬೇಕಾಗುತ್ತದೆ ಎಂಬುದರ ಅರಿವು ರಾಣಾ ಆಸಿಫ್‌ಗೆ ಇತ್ತು, ಹಾಗಾಗೇ ಹೆಚ್ಚು ಮಾತಾಡದೆ, ಸುಮ್ಮನೆ ಕುರ್ಚಿಯಿಂದ ಕೆಳಗಿಳಿದರು. ಇಂಥ ಹುಚ್ಚು ಕಾನೂನನ್ನು ರೂಪಿಸಿದ್ದು ಯಾವುದೋ ಮುಲ್ಲಾನಲ್ಲ ಬದಲಾಗಿ ಪಾಕಿಸ್ತಾನದ ಚೀಫ್ ಜಸ್ಟಿಸ್ ಇಫ್ತಿಕಾರ್ ಮೋಹಮ್ಮದ್ ಚೌಧರಿ!
ಈಗ ಕಾಶ್ಮೀರದ ವಿಷಯಕ್ಕೆ ಬರೋಣ. ಭಾರತದಿಂದ ಮುಕ್ತಿ ದೊರೆಯಬೇಕೆಂದು ಹೋರಾಡುತ್ತಿರುವವರು ಜಾತ್ಯತೀತರಲ್ಲ, ಬದಲಾಗಿ ಇಸ್ಲಾಮಿಕ್ ಯೋಧರು. ಇದನ್ನು ಸಾಬೀತು ಪಡಿಸುವುದು ಅಷ್ಟೇನು ಕಷ್ಟದ ಕೆಲಸವಲ್ಲ. ಕಾಶ್ಮೀರದ ಇಬ್ಬರು ಬಲಿಷ್ಠ ನಾಯಕರು ಮೂಲಭೂತವಾದವನ್ನೇ ಪ್ರತಿಪಾದಿಸುವವರು. ಶ್ರೀನಗರದ ಉಮರ್ ಫಾರೂಕ್ ಮತ್ತು ಜಮಾತೆ ಎ ಇಸ್ಲಾಮಿ ಎನ್ನುವ ತೀವ್ರವಾದಿ ಸಂಘಟನೆಯ ಅಲಿ ಶಾಹ್ ಗಿಲಾನಿ ಶರಿಯಾ ಕಾನೂನು ಜಾರಿಯಾಗಬೇಕೆಂದು ಮೊದಲಿನಿಂದಲೂ ಹೋರಾಡುತ್ತಾ ಬಂದವರೇ.
ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರನ್ನು  ಮೊಹಮ್ಮದ್‌ನ ಯೋಧರು(ಜೈಶ್-ಎ-ಮೊಹಮ್ಮದ್), ಮೋಹಮ್ಮದ್ ಸೇನೆ( ಲಷ್ಕರ್-ಎ-ತೋಯ್ಬಾ) ಮತ್ತು ಮೋಹಮ್ಮದ್‌ನ ಸಹಾಯಕರು(ಹರ್‌ಕತ್-ಉಲ್ ಅನ್ಸರ್) ಎಂದು ಕರೆಯಲಾಗುತ್ತದೆ. ಈ ಸ್ವಾತಂತ್ರಯೋಧರು ಮುಜಾಹಿದ್‌ಗಳು. ಇವರ ಮುಖ್ಯ ಗುರಿ ಹಿಂದೂಗಳ ವಿರುದ್ಧ ಜಿಹಾದ್ ನಡೆಸುವುದು. ನಿಜ ಹೇಳಬೇಕೆಂದರೆ ಈ ಮುಜಾಹಿದ್‌ಗಳಿಗೆ ಸ್ವಾತಂತ್ರ್ಯ ಬೇಕಿರುವುದು ಭಾರತದ 'ಜಾತ್ಯತೀತ' ಪ್ರಜಾಪ್ರಭುತ್ವದಿಂದ! ಆ ಮೂಲಕ ನಂತರ ಶರಿಯಾ ಕಾನೂನನ್ನು ಜಾರಿಗೆ ತಂದು  ಮುಸ್ಲಿಂಮೇತರ ಜನಾಂಗಗಳ ಮೇಲೆ ಪಾಕಿಸ್ತಾನದಲ್ಲಿಯಂತೆ ಹಿಂಸಾಚಾರ ನಡೆಸಬಹುದು ಎನ್ನುವ ಕಾರಣಕ್ಕಾಗಿ.
----
ಬಾಂಗ್ಲಾದೇಶದಲ್ಲೂ ಇದೇ ಹಣೆ ಬರಹ...
ಬಾಂಗ್ಲಾದೇಶಿಯರ ಸಂಸ್ಕೃತಿಯೆಲ್ಲ ಹಿಂದೂಗಳಂತೆಯೇ ಇದೆ. ಹಾಗಾಗೆ ಅಲ್ಲಿನ ರಾಜಕೀಯ ವರ್ಗ ಈ ವಿಷಯವಾಗಿ ಇಬ್ಭಾಗವಾಗಿದೆ. ಈ ಸಂಸ್ಕೃತಿಯೇ ಮುಂದುವರಿಯಲಿ ಎನ್ನುವ ಬಾಂಗ್ಲಾದೇಶ್ ಆವಾಮಿ ಲೀಗಿನ ಶೇಕ್ ಹಸೀನ ಒಂದೆಡೆಯಾದರೆ, ಹಿಂದೂ ಸಂಸ್ಕೃತಿಯನ್ನು ಸಂಪೂರ್ಣವಾಗಿ ತೊಡೆದುಹಾಕಿ ಎಲ್ಲವನ್ನೂ ಇಸ್ಲಾಂಮಯಗೊಳಿಸಬೇಕು ಎನ್ನುವ ಬಾಂಗ್ಲಾದೇಶ್ ನ್ಯಾಶ್‌ನಲಿಸ್ಟ್ ಪಾರ್ಟಿ ಇನ್ನೊಂದೆಡೆ.
ಪಾಕಿಸ್ತಾನದಂತೆ ಬಾಂಗ್ಲಾದೇಶದ ಧರ್ಮವೂ ಇಸ್ಲಾಂ. ಅಲ್ಲಿ ಆ ಪರಿಸ್ಥಿತಿ ನಿರ್ಮಾಣವಾಗಿ ಬಹಳ ವರ್ಷಗಳೇ ಕಳೆದಿವೆ. 'ಇಸ್ಲಾಮಿಕ್ ಕಾನೂನನ್ನು ಹಿಂದೂಗಳ ಮೇಲೆ ಹೇರಲು ಬಿಡುವುದಿಲ್ಲ' ಎಂದು ಹೇಳುತ್ತಿದ್ದ ಹಸೀನಾ, ತಮ್ಮ ಮಾತನ್ನು ಉಳಿಸಿಕೊಳ್ಳುವಲ್ಲಿ ಸೋತಿದ್ದಾರೆ. ಏಕೆಂದರೆ ಅಲ್ಲಿನ ಬಹುಸಂಖ್ಯಾತರಿಗೆ ಜಾತ್ಯತೀತ ರಾಷ್ಟ್ರಕ್ಕಿಂತ ಇಸ್ಲಾಮಿಕ್ ರಾಷ್ಟ್ರದತ್ತಲೇ ಹೆಚ್ಚು ಪ್ರೀತಿ.
ಇಸ್ಲಾಮಿಕ್ ರಾಷ್ಟ್ರ ಎನ್ನುವ ತತ್ವದಲ್ಲಿಯೇ ಇನ್ನೊಬ್ಬರನ್ನು ತುಳಿಯಬೇಕು ಎನ್ನುವ ಅರ್ಥವಡಗಿದೆ. ಪಾಕಿಸ್ತಾನ, ಕಾಶ್ಮೀರ ಮತ್ತು ಬಾಂಗ್ಲಾದೇಶಗಳಲ್ಲಿ ಆಗುತ್ತಿರುವುದೂ ಇದೆ. ಮುಘಲ್ಲರ ಅಧಿಪತ್ಯದಲ್ಲಿ ಹಿಂದೂಗಳ ಮೇಲೆ 'ಜಝಿಯಾ' (ತೆರಿಗೆ) ಹೇರಲಾಗುತ್ತಿತ್ತು. ಕೆಲ ವರ್ಷಗಳ ನಂತರ ಅದನ್ನು ತೆಗೆದುಹಾಕಲಾಯಿತು. ನಂತರ ಮತ್ತೆ ಆ ನಿಯಮವನ್ನು ಜಾರಿಗೆ ತರಲಾಯಿತು. ಮರಾಠರು ಹೆಚ್ಚು ಪ್ರಾಬಲ್ಯ ಸಾಧಿಸುವವರೆಗೂ ಈ  'ಹೇರುವ-ತೆಗೆಯುವ' ಸಂಪ್ರದಾಯ ಮುಂದುವರಿದೇ ಇತ್ತು. ಈಗ ಪಾಕಿಸ್ತಾನದಲ್ಲೂ ಅದೇ ನಡೆಯುತ್ತಿದೆ.
ವಿಭಜನೆಯ ಸಮಯದಲ್ಲಿ ಪಾಕಿಸ್ತಾನದ ಮುಸಲ್ಮಾನರ ಜನಸಂಖ್ಯೆ 70 ಪ್ರತಿಶತದಷ್ಟಿತ್ತು, ಈಗ ಅದು 97 ಪ್ರತಿಶತಕ್ಕೇರಿದೆ. ಅಲ್ಪಸಂಖ್ಯಾತರನ್ನು ಓಡಿಸಿದ ಮೇಲೆ ಈಗ ಅಲ್ಲಿನ ಮುಸಲ್ಮಾನರಿಗೆ ಟೈಂ ಪಾಸ್ ಆಗುತ್ತಿಲ್ಲ, ಹಾಗಾಗೇ ತಮ್ಮಲ್ಲಿನವರನ್ನೇ ತಫ್ಕಿರಿ (ಪಕ್ಕಾ ಮುಸ್ಲಿಂ ಅಲ್ಲದವ) ಎಂದು ಜರಿಯುತ್ತಾ ಟೈಂ ಪಾಸ್ ಮಾಡುತ್ತಿದ್ದಾರೆ. 2000 ದಿಂದ ಇಲ್ಲಿಯವರೆಗೂ ಪಾಕಿಸ್ತಾನದಲ್ಲಿ ನಡೆದ ಹಿಂಸಾಚಾರ ಸಾವಿರಾರು ಮುಸಲ್ಮಾನರು ಸತ್ತಿದ್ದಾರೆ. ಆದರೆ ಅವರನ್ನು ಕೊಂದದ್ದು ಹಿಂದೂಗಳೋ ಅಥವಾ ಕ್ರಿಶ್ಚಿಯನ್ನರೋ ಅಲ್ಲ. ಬದಲಾಗಿ ಖುದ್ದು ಮುಸಲ್ಮಾನರೇ!
ಹಿಂದೂಗಳೇ ಬಹುಸಂಖ್ಯಾತರಾಗಿರುವ ಭಾರತದಲ್ಲಿ ಎಲ್ಲಾ ಹಿಂದೂಗಳು ನಿಶ್ಚಿಂತೆಯಿಂದ ಬದುಕುತ್ತಿದ್ದಾರೆ, ಅವರಂತೆಯೇ ಇಲ್ಲಿನ ಅಲ್ಪಸಂಖ್ಯಾತ ಮುಸಲ್ಮಾನರೂ ಕೂಡ ಆರಾಮವಾಗಿದ್ದಾರೆ.
 ವಿಭಜನೆಗೂ ಮುನ್ನ ಅವರು ನಮ್ಮೊಂದಿಗೇ ಇದ್ದರಲ್ಲವೇ? ನಾವೆಲ್ಲ ಹಿಂದೆ ಒಂದೇ ಸಂಸ್ಕೃತಿಯನ್ನು ಹಂಚಿಕೊಂಡವರು. ಪಾಕಿಸ್ತಾನಿ ಮುಸಲ್ಮಾನರನ್ನೂ ಕೂಡ ನನ್ನ ಅಣ್ಣ ತಮ್ಮಂದಿರಂತೆಯೇ ಭಾವಿಸುತ್ತೇನೆ. ಆದರೆ ಅವರೇಕೆ ಪದೇ ಪದೇ ತಪ್ಪೆಸಗುತ್ತಿದ್ದಾರೋ ತಿಳಿಯುತ್ತಿಲ್ಲ. ಏಕೆ ಈ ರೀತಿ ಧರ್ಮದ ನಶೆ ಅವರ ತಲೆಗೇರಿದೆಯೋ ತಿಳಿಯುತ್ತಿಲ್ಲ.

-ಆಕಾರ್ ಪಟೇಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement