ತಪ್ಪು ಅರ್ಥ, ದ್ವಂದ್ವ ಅರ್ಥಕ್ಕೆ ಅವಕಾಶ ಬೇಡ
ಕನ್ನಡಪ್ರಭ ಪತ್ರಿಕೆಯ ಸಂಕ್ರಾಂತಿ ವಿಶೇಷಾಂಕ ನನಗೆ ಮೆಚ್ಚುಗೆಯಾಯಿತು. ತಮಿಳು, ಮರಾಠಿ ಮತ್ತು ಇಂಗ್ಲಿಷ್ ಮೂಲದ ಅನುವಾದಿತ ಕತೆಗಳು ಚೆನ್ನಾಗಿದ್ದವು. ಎಷ್ಟೇ ಆದ್ರೂ ಭಟ್ರ ಸಾರಥ್ಯವಲ್ಲವೇ? ಎಲ್ಲವೂ ವಿಭಿನ್ನವಾಗಿ ಮೂಡಿ ಬಂದಿದೆ. ಮೊದಲ ಪುಟದಲ್ಲಿನ ಹಂಸಲೇಖರ ಸಂದರ್ಶನ ಸೊಗಸಾಗಿದೆ. ಆರ್ಕಿಡ್ ಹೂವಿನ ಬಗ್ಗೆ ಸಾಕಷ್ಟು ವಿಚಾರ ತಿಳಿದುಕೊಂಡಂತಾಯಿತು. ನನಗೆ ತುಂಬಾ ಅಚ್ಚುಮೆಚ್ಚಾದ ಕಥೆ ಎಂದರೆ ಉದ್ಯಾವರ ಮಾಧವ ಆಚಾರ್ಯರವರು ಬರೆದಿರುವ "ಸೂರ್ಯಗಾನ". ವಾರ್ಹೆ...ವಾ... ಆಚಾರ್ಯರೇ ನಿಮ್ಮ ಕಲ್ಪನಾತೀತ ಭಾವನಾತೀತ ಲೇಖನ ಶೈಲಿಗೆ ಹ್ಯಾಟ್ಸ್ ಆಫ್. ಅದೆಂತಹಾ ಕಲ್ಪನಾ ಲೋಕಕ್ಕೆ ಕರೆದೊಯ್ದಿರಿ! ರವಿ, ಕವಿಯ ಅಂತರಂಗವನ್ನು ಪ್ರವೇಶಿಸಿ ಸೂರ್ಯ ಲೋಕವನ್ನೇ ತೋರಿಸಿದ್ದೀರಿ. ಪದಗಳ ಜೋಡಣೆ ಮಹದಾನಂದ ಉಂಟು ಮಾಡಿತು. ಡಾ. ಕೆ.ಎನ್. ಗಣೇಶಯ್ಯನವರು "ಧಮನಿ ಧರ್ಮ"ದ ಮೂಲಕ ನಾಗಾರ್ಜುನಕೊಂಡವನ್ನು ನಯಾ ಪೈಸೆ ಖರ್ಚಿಲ್ಲದೆ ನಿರಾಯಾಸದಿಂದ ಸುತ್ತಿಸಿಕೊಂಡು ಬಂದು ನನ್ನೂರಿಗೆ ತಲುಪಿಸಿದರು. ನಿಜವಾಗಿಯೂ ಇದು ಉತ್ತಮ ಪ್ರಯತ್ನ. ಹೀಗೆ ಕನ್ನಡಪ್ರಭ ಇನ್ನೊಂದು ವಿಶೇಷಾಂಕವನ್ನು ನಮಗೆ ನೀಡಲಿ ಮತ್ತಷ್ಟು ಕುತೂಹಲವನ್ನು ಅರಳಿಸಲಿ. "ಯುಗಾದಿ ವಿಶೇಷಾಂಕಕ್ಕಾಗಿ ಕಾದು ಕುಳಿತಿರುವ ಕನ್ನಡಪ್ರಭ ಓದುಗ.
-ಪ್ರದೀಪ್ ಎನ್., ಚೆಲುವರಸನಕೊಪ್ಪಲು, ಪಾಂಡವರಪುರ. ಮಂಡ್ಯ
ಭಾನುವಾರ 13.1.2013ರ ಗೋಡೆ ಬರಹದಲ್ಲಿ ಹರಳಹಳ್ಳಿ ಪುಟ್ಟರಾಜು, ಪಾಂಡವಪುರ ಇವರು ಕನ್ನಡಪ್ರಭವನ್ನು ಹೊಗಳಿ ಅಟ್ಟಕ್ಕೇರಿಸಿ ನಂತರ ಹೊನ್ನ ಶೂಲಕ್ಕೂ ಏರಿಸಿ ನಂತರ ಟೀಕಿಸಿದ್ದಾರೆ. ಪುಟ ಹೆಚ್ಚಿಸಿದರೆ ಗಂಟು ಹೋಗುತ್ತಿತ್ತೇ? ಎಂಬ ಅವರ ಪ್ರಶ್ನೆ ಸರಿಯಲ್ಲ. ಆಯಾ ದಿನ, ವಾರ, ತಿಂಗಳು, ವರ್ಷವನ್ನು ಗಮನಿಸಿ ಉತ್ಕೃಷ್ಟ ಬರಹ, ಚಿತ್ರಗಳನ್ನು ಹಾಕುತ್ತಾರೆ. ಇಂದಿನ ಪೈಪೋಟಿ ದಿನಗಳಲ್ಲಿ ಜಾಹೀರಾತಿಲ್ಲದೇ ಯಾವುದೇ ಪತ್ರಿಕೆ ನಡೆಯೊಲ್ಲ. ಇಲ್ಲದಿದ್ದರೆ ಓದುಗರ ಜೇಬಿಗೆ ಕತ್ತರಿ ಬೀಳುತ್ತದೆ. ಹೆಚ್ಚು ಜಾಹೀರಾತು ಹಾಕಿ ಕಡಿಮೆ ಬೆಲೆ ಇರಿಸಿದರೆ ಉತ್ತಮವಿರುತ್ತದೆ.
-ರಾಜೇಂದ್ರ ಹೆಗಡೆ, ಹಾವೇರಿ
ಪತ್ರಿಕೆಯಲ್ಲಿ ತಾವು ದಿನನಿತ್ಯ ಬರೆಯುವ ವಕ್ರತುಂಡೋಕ್ತಿಯಲ್ಲಿನ ಕೆಲವೊಂದು ಹೇಳಿಕೆಗಳು ತುಂಬಾನೇ ಅರ್ಥಗರ್ಭಿತವಾಗಿದ್ದರೆ ಮತ್ತೆ ಕೆಲವು ಹೀಯಾಳಿಕೆ, ಮೂದಲಿಕೆ ಹಾಗೂ ಬೇಸರ ತರುವ ರೀತಿಯಲ್ಲಿರುವುದರ ಜೊತೆಗೆ ಹೆಂಗಸರನ್ನು ಹೆಚ್ಚು ಟಾರ್ಗೆಟ್ ಮಾಡುವ ಹಾಗೆಯೇ ಇರುತ್ತವೆ. ಅದರಲ್ಲಿ ಒಂದೆರಡನ್ನು ಉದಾಹರಿಸುವುದಾದರೆ, ಜನವರಿ 23ರ ತಮ್ಮ ವಕ್ರತುಂಡೋಕ್ತಿಯೊಂದು ಹೀಗಿದೆ. 'ಬೆಡ್ಶೀಟ್, ಚಾದರವನ್ನು ಎತ್ತಿ ಎತ್ತಿ ಬಡಿದು ತೊಳೆಯುವುದು ಕಷ್ಟವಾಗುತ್ತದೆ ಎಂದೆನಿಸಿದಾಗ, ಹೆಂಡತಿಯರು ತಮ್ಮ ಗಂಡಂದಿರನ್ನು ನೆನಪಿಸಿಕೊಳ್ಳಬಹುದು.' ಅಂದರೆ ಇದರರ್ಥ, ಹೆಂಡತಿಯು ಬೆಡ್ಶೀಟ್ ಹಾಗೂ ಚಾದರವನ್ನು ಎತ್ತಿ ಬಡಿಯುವುದರಷ್ಟೇ ಸಲೀಸಾಗಿ ತನ್ನ ಗಂಡನನ್ನು ಎತ್ತಿ ಬಡಿಯಬಹುದು ಎಂದೇ? ಸಂತೋಷ. ಪಾಪ, ಹೆಂಡತಿ ತನ್ನ ಗಂಡನನ್ನು ಎತ್ತಿ ಬಡಿಯದೇ ಇನ್ಯಾರನ್ನು ಎತ್ತಿ ಬಡಿಯಲು ಸಾಧ್ಯ!? ಬೇರೆಯವರನ್ನು ಎತ್ತಿ ಬಡಿದರೆ ಬಿಟ್ಟಾರೆಯೇ? ಒಟ್ಟಿನಲ್ಲಿ ಇಂತಹ ಹೇಳಿಕೆಗಳನ್ನು ಓದಿದಾಗ ಮನಸ್ಸಿಗೆ ಆನಂದವಾಗುವುದೇನೋ ನಿಜ. ಅದೇ ರೀತಿ ಜನವರಿ 24ರ ತಮ್ಮ ಮತ್ತೊಂದು ವಕ್ರತುಂಡೋಕ್ತಿ ಹೀಗಿದೆ: 'ಗಂಡಸಿನ ಹತ್ತಿರ ದುಡ್ಡಿದ್ದರೆ ಪೋಲಿಯಾಗುತ್ತಾನೆ. ಹೆಂಗಸರು ಪೋಲಿಯಾದರೆ ದುಡ್ಡು ಬರುತ್ತದೆ.' ಅಂದರೆ ಹೆಚ್ಚು ದುಡಿದ ಗಂಡಸು ಪೋಲಿಯಾಗಿ ಹಾಳಾಗುತ್ತಾನೆ ಹಾಗೂ ದುಡ್ಡು ಬಯಸೋ ಹೆಂಗಸು ಪೋಲಿಯಾದರೆ ಸಾಕು ಎಂಬರ್ಥವನ್ನು ನೀಡುತ್ತದೆ. ಈ ರೀತಿ ತಪ್ಪಾರ್ಥ ಹಾಗೂ ದ್ವಂದ್ವಾರ್ಥ ಬರುವ ಹೇಳಿಕೆಗಳು ವಕ್ರತುಂಡೋಕ್ತಿಯಲ್ಲಿ ಪ್ರಕಟವಾಗೋದು ತರವೇ?
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, ಮಂಡ್ಯಜಿಲ್ಲೆ
ಕನ್ನಡ ಪ್ರಭದಲ್ಲಿ 'ವಿಚಾರ ತೋರಣ' ಹಾಗೂ 'ಅನುಭವ ಮಂಟಪ' ಪುಟಗಳು ಚೆನ್ನಾಗಿ ಮೂಡಿಬರುತ್ತಿವೆ. 'ಹಿರಿಯರ ಹಾದಿ' ನನ್ನ ಅಚ್ಚುಮೆಚ್ಚಿನ ಅಂಕಣ. ಆದರೆ ಸೋಮವಾರ ಪ್ರಕಟವಾಗುವ ಗಾಳಿಪಟದ ಬದಲಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಸ್ಫೂರ್ತಿದಾಯಕ ಸಂಗತಿಗಳನ್ನು ಪ್ರಕಟಿಸಬಹುದೆನಿಸುತ್ತದೆ. ಅಂತೆಯೇ 'ಬೈಟು ಕಾಫಿ' ವಿಭಾಗದಲ್ಲಿ ಸುಹಾಸಿನಿ ಅಂಕಣದ ಬದಲು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಉತ್ತಮ ಅಂಶಗಳ ಬಗ್ಗೆ ಮಾಹಿತಿ ನೀಡುವುದು ಒಳಿತು.
-ಅಪೂರ್ವ ಭಟ್, apoorvabsbhat@gmail.com
ನಾನು ಬೆಳಿಗ್ಗೆ ಕನ್ನಡಪ್ರಭ ಓದದೇ ಶಾಲೆಗೆ ಹೋಗುವುದೇ ಇಲ್ಲ. ಭಾನುವಾರ ಬಂದರಂತೂ, ತಿಂಡಿ-ಊಟ ಎಲ್ಲಾ ಇದರ ಜೊತೆಗೇ ಆಗಬೇಕು. ನಾನು ವಿಶ್ವೇಶ್ವರಭಟ್ ಮತ್ತು ಪ್ರತಾಪ್ಸಿಂಹರವರ ದೊಡ್ಡ ಅಭಿಮಾನಿ. ಕಳೆದವಾರ ಪ್ರಕಟವಾದ ಪ್ರತಾಪ್ರವರ ಲೇಖನ ಅತ್ಯಮೋಘವಾಗಿತ್ತು. ಹಾಗೆಯೇ ಸುಭಾಷ್ಚಂದ್ರ ಬೋಸ್ರವರ ನಿಗೂಢ ಸಾವಿನ ಸುದ್ದಿ ವಿಷಾದಕರವಾಗಿದ್ದರೂ, ಪ್ರಕಟಿಸಿದ್ದರಿಂದ ಮಾಹಿತಿ ದೊರಕಿದಂತಾಯಿತು. ಇದರಲ್ಲಿ ಮೂಡಿ ಬರುವ ಟ್ವಿಭಾಷಿತ, ವಕ್ರತುಂಡೋಕ್ತಿ, ಹರಿಕಥೆ ಎಲ್ಲಾ ತುಂಬಾ ಚೆನ್ನಾಗಿರುತ್ತವೆ. ಆದರೆ ಇತ್ತೀಚೆಗೆ ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ರ ಹೇಳಿಕೆಯನ್ನು ಸ್ವಲ್ಪ ತಿರುಚಿ ಪ್ರಕಟಿಸಲಾಗಿತ್ತು. ಇಂತಹ ಘಟನೆಗಳು ಮುಂದೆ ಸಂಭವಿಸುವುದಿಲ್ಲವೆಂಬ ವಿಶ್ವಾಸವಿದೆ.
-ವಿದ್ಯುಲ್ಲತಾ. ಕೆ.ಎಸ್. (10ನೇ ತರಗತಿ), ಕವಿಲುಕೊಡಿಗೆ, ಶೃಂಗೇರಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.