ಸ್ಥಳೀಯರು ಸಕ್ರಿಯವಾಗಿ ಪಾಲ್ಗೊಂಡರೆ ಮಾತ್ರ ಅಭಿವೃದ್ಧಿ ಸಾಧ್ಯ
ಶಾಲಿನಿ: ನಾನು ಧಾರವಾಡದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಮಾಡಿದ ಇನ್ನೊಂದು ಮುಖ್ಯ ಕೆಲಸವನ್ನು ನಿಮ್ಮೊಡನೆ ಹಂಚಿಕೊಳ್ಳಬೇಕು. ನಮ್ಮ ಸಂವಿಧಾನದ 73ನೇ ತಿದ್ದುಪಡಿಯಂತೆ ಎಲ್ಲಾ ರಾಜ್ಯಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಸ್ಥಾಪಿಸಬೇಕಾದದ್ದು ಕಡ್ಡಾಯ. ಈ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸಾಮಾನ್ಯ ಗ್ರಾಮೀಣ ಜನರ ಅಭಿವೃದ್ಧಿಗೆ ಗ್ರಾಮ ಸಭೆಯ ಪಾತ್ರ ಅತಿ ಅಮೂಲ್ಯವಾದಂತಹುದು. ಈ ಒಂದೇ ಒಂದು ಪ್ರಕ್ರಿಯೆಯಿಂದ ಸ್ಥಳೀಯರು ಅಭಿವೃದ್ಧಿ ಯೋಜನೆಗಳಲ್ಲಿ ಭಾಗಿಯಾಗುತ್ತಾರೆ. ಅಂದರೆ ಯಾವ ಯೋಜನೆಗೆ ಯಾವ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗುತ್ತದೆ, ಯಾವ ಕಾಮಗಾರಿಗಳನ್ನು ಎಲ್ಲಿ ಅತಿ ಅಗತ್ಯವಾಗಿ ತೆಗೆದುಕೊಳ್ಳಬೇಕಾಗಿದೆ ಹಾಗೂ ಕಾಮಗಾರಿಗಳು ಮತ್ತು ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿದೆಯೇ ಇಲ್ಲವೇ ಎನ್ನುವುದರ ಬಗ್ಗೆ ಪ್ರತಿಯೊಬ್ಬರಿಗೆ ಮೇಲ್ವಿಚಾರಣೆ ಮಾಡಲು ಅಧಿಕಾರ ನೀಡಲಾಗುತ್ತದೆ.
ಆಗ ವರ್ಷದಲ್ಲಿ ಕನಿಷ್ಠ ಎರಡು ಗ್ರಾಮ ಸಭೆಗಳನ್ನು ಮಾಡಬೇಕಾಗಿತ್ತು. ಆದರೆ ಬಹುತೇಕ ಕಡೆ ಸಭೆಗಳನ್ನು ಕರೆಯುತ್ತಿರಲಿಲ್ಲ. ಎಲ್ಲೆಲ್ಲಿ ಗ್ರಾಮ ಸಭೆಗಳನ್ನು ಕರೆಯಲಾಗುತ್ತಿತ್ತೋ ಅಲ್ಲಿ ಹೆಚ್ಚಾಗಿ ಜನ ಸೇರುತ್ತಿರಲಿಲ್ಲ ಹಾಗೂ ಸೇರಿದವರೂ ಪಂಚಾಯತ್ ಸದಸ್ಯರ ಪರವಾಗಿ ಇರುತ್ತಿದ್ದುದರಿಂದ ಸಕಾರಾತ್ಮಕ ಅಥವಾ ಪಾರದರ್ಶಕ ರೀತಿಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಈ ವ್ಯವಸ್ಥೆ ದೇಶದ ಎಲ್ಲಾ ಭಾಗದಲ್ಲೂ ಇದೆ. ಕರ್ನಾಟಕದಲ್ಲಿ 1987 ರಿಂದ ಪಂಚಾಯತ್ ರಾಜ್ ವ್ಯವಸ್ಥೆ ಇದ್ದುದರಿಂದ ಸ್ವಲ್ಪಮಟ್ಟಿಗೆ ಜನಜಾಗೃತಿ ಬೇರೆ ಕಡೆಗಳಿಗಿಂತ ಹೆಚ್ಚಾಗಿತ್ತು. ಆದರೂ ಗ್ರಾಮ ಪಂಚಾಯತ್ ವ್ಯವಹಾರಗಳ ನಡಾವಳಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜನರ ಪಾಲ್ಗೊಳ್ಳುವಿಕೆ ಆಗುತ್ತಿರಲಿಲ್ಲ ಹಾಗೂ ಉತ್ತಮ ಗ್ರಾಮೀಣ ಅಭಿವೃದ್ಧಿ ಕಂಡುಬರುತ್ತಿರಲಿಲ್ಲ.
ಈ ಹಿನ್ನಲೆಯಲ್ಲಿ ಗ್ರಾಮಸಭೆಯನ್ನು ನಡೆಸಲು ಜಿಲ್ಲಾ ಪಂಚಾಯತ್ನಲ್ಲಿ ಕೆಲವು ಮಾನದಂಡಗಳನ್ನು ತಯಾರಿಸಲಾಯಿತು. ಉದಾಹರಣೆಗೆ, ಗ್ರಾಮ ಸಭೆಗಳು ನಡೆಸಬೇಕಾದ ಸಮಯವನ್ನು ನಿರ್ದಿಷ್ಟಪಡಿಸಲಾಯಿತು. ಪ್ರತಿಯೊಂದು ಗ್ರಾಮಸಭೆಯ ಮೇಲೂ ಉಸ್ತುವಾರಿಯನ್ನು ಮಾಡಲು ಒಬ್ಬ ತಾಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೇಮಿಸಲಾಯಿತು. ಈ ಅಧಿಕಾರಿಗಳು ಕನಿಷ್ಠ ಮೂರರಿಂದ ಗರಿಷ್ಠ ಐದು ಗ್ರಾಮ ಪಂಚಾಯ್ತಿಯ ಗ್ರಾಮ ಸಭೆಗಳ ಉಸ್ತುವಾರಿಯನ್ನು ಮಾಡಬೇಕಿತ್ತು. ಈ ಅಧಿಕಾರಿಗಳಿಗೆ ಒಂದು ಕಾರ್ಯಾಗಾರವನ್ನು ಏರ್ಪಡಿಸಲಾಯಿತು. ಅದರಲ್ಲಿ ಒಂದು ತಾಳೆಪಟ್ಟಿ (ಚೆಕ್ಲಿಸ್ಟ್) ಯನ್ನು ನೀಡಲಾಯಿತು. ಅದರ ಪ್ರಕಾರ ಗ್ರಾಮ ಸಭೆಗಳ ನಡಾವಳಿಗಳನ್ನು ಏರ್ಪಡಿಸಿ ಒಂದು ವರದಿಯನ್ನು ಕೊಡಬೇಕಾಗಿ ಸೂಚಿಸಲಾಯಿತು. ಅದರಲ್ಲಿದ್ದ ಮೂಲ ಅಂಶಗಳೆಂದರೆ:
- ಗ್ರಾಮಸಭೆಗಳ ನಿರ್ಧರಿತ ಸಮಯದ ಕುರಿತು ಹತ್ತರಿಂದ ಹದಿನೈದು ದಿವಸಗಳ ಮುಂಚೆಯೇ ಗ್ರಾಮದಲ್ಲಿ ಪ್ರಚಾರ ಮಾಡಲಾಗಿದೆಯೇ?
- ದುರ್ಬಲರು, ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವರ್ಗದವರು, ಮಹಿಳೆಯರು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಯುವಕರಿಗೆ ಆ ಕುರಿತು ವಿಶೇಷ ತಿಳವಳಿಕೆಯನ್ನು ನೀಡಲಾಗಿದೆಯೇ?
- ಹಿಂದಿನ ವರ್ಷದ ಆಯವ್ಯಯದಲ್ಲಿ ಪ್ರತಿಯೊಂದು ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ ಗ್ರಾಮ ಪಂಚಾಯ್ತಿ ಗೋಡೆಯ ಮೇಲೆ ಅಂಟಿಸಲಾಗಿದೆಯೇ?
- ಹಿಂದಿನ ವರ್ಷದ ಕಾಮಗಾರಿಗಳ ಪಟ್ಟಿಯನ್ನು ತಯಾರಿಸಿ ಪ್ರತಿಯೊಂದರ ಅಂದಾಜು ವೆಚ್ಚ ಹಾಗೂ ಅದರ ಮೇಲೆ ಆಗಿರುವ ಭೌತಿಕ ಮತ್ತು ಆರ್ಥಿಕ ಪ್ರಗತಿಯ ವಿವರವನ್ನು ಪ್ರಕಟಿಸಲಾಗಿದೆಯೇ?
- ಪ್ರಸ್ತುತ ವರ್ಷದ ಬೇರೆಬೇರೆ ಇಲಾಖೆಯಿಂದ ಬರತಕ್ಕಂತಹ ಯೋಜನೆಗಳಲ್ಲಿ ಲಭ್ಯವಿರುವ ಅನುದಾನದ ವಿವರವನ್ನು ಗ್ರಾಮಸಭೆಗೆ ತಿಳಿಸಲಾಗಿದೆಯೇ?
- ಪ್ರಸಕ್ತ ವರ್ಷದ ಕಾಮಗಾರಿಗಳ ಆದ್ಯತೆ ಪಟ್ಟಿಯನ್ನು ಗ್ರಾಮಸಭೆಯಲ್ಲಿ ಓದಿ ಹೇಳಿಲಾಗಿದೆಯೇ?
- ಗ್ರಾಮದ ಮೂಲಭೂತ ಸಂಪನ್ಮೂಲಗಳನ್ನು ಒಂದು ಗ್ರಾಮ ನಕಾಶೆ ಮೂಲಕ ಗ್ರಾಮಸ್ಥರಿಗೆ ತಿಳಿಸಲಾಗಿದೆಯೇ?
- ಗ್ರಾಮ ಪಂಚಾಯ್ತಿಯ ಆಸ್ತಿ ವಿವರ ಹಾಗೂ ತೆರಿಗೆ ವಸೂಲಾತಿಯ ವಿವರವನ್ನು ಗ್ರಾಮಸಭೆಯ ಮುಂದೆ ಇಡಲಾಗಿದೆಯೇ? ತೆರಿಗೆ ಕಟ್ಟದೇ ಇರುವವರ ಪಟ್ಟಿಯನ್ನು ಗ್ರಾಮಸಭೆಯಲ್ಲಿ ಓದಿ ಹೇಳಲಾಗಿದೆಯೇ?
- ಗ್ರಾಮದ ವಿಶೇಷ ಸಮಸ್ಯೆಗಳನ್ನು ಚರ್ಚಿಸಿ ತಾಲೂಕು/ಜಿಲ್ಲಾ ಅಥವಾ ರಾಜ್ಯಮಟ್ಟಕ್ಕೆ ಕಳುಹಿಸಲು ಪ್ರಸ್ತಾವನೆ ತಯಾರಿಸಲಾಗಿದೆಯೇ?
- ಸ್ಥಳೀಯರ ಶ್ರಮದಾನ ಅಥವಾ ವಂತಿಗೆಯಿಂದ ಮಾಡಬೇಕಾದ ಕಾರ್ಯಕ್ರಮಗಳ ಪಟ್ಟಿಯನ್ನು ತಯಾರಿಸಲಾಗಿದೆಯೇ? ಉದಾ- ಸಸಿ ನೆಡುವುದು, ಅರಣ್ಯ ವೃಕ್ಷರೋಪಣ, ಸ್ವಚ್ಛತಾ ಆಂದೋಲನ, ಸಾಕ್ಷರತಾ ಆಂದೋಲನ, ಕೆರೆ ಹೂಳೆತ್ತುವುದು ಇತ್ಯಾದಿ.
- ಗ್ರಾಮ ಪಂಚಾಯ್ತಿ ವ್ಯಾಪ್ತಿಯೊಳಗೆ ಇರುವ ಶಾಲೆ, ಅಂಗನವಾಡಿ, ರೈತ ಸಂಪರ್ಕ ಕೇಂದ್ರಗಳು, ಸಾಕ್ಷರತೆ ಕೇಂದ್ರಗಳು, ವಾಚನಾಲಯ, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಅಭಿವೃದ್ಧಿ ಇತ್ಯಾದಿ ಕೆಲಸಗಳ ಕಾರ್ಯವೈಖರಿ ಬಗ್ಗೆ ಜನ ಸಾಮಾನ್ಯರ ಅಭಿಪ್ರಾಯ ಸಂಗ್ರಹಿಸಲಾಗಿದೆಯೇ?
- ಸರ್ಕಾರದ ಹೊಸ ಯೋಜನೆಗಳ ಬಗ್ಗೆ ಜನ ಸಾಮಾನ್ಯರಿಗೆ ತಿಳಿವಳಿಕೆ ನೀಡಲಾಗಿದೆಯೇ?
- ಗ್ರಾಮಸಭೆಯಲ್ಲಿ ಬಂದಿರುವ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರ ಸಂಖ್ಯೆಯನ್ನು ಪ್ರತ್ಯೇಕವಾಗಿ ನಮೂದಿಸಲಾಗಿದೆಯೇ?
ಮೇಲೆ ತಿಳಿಸಿದಂಥ ಎಲ್ಲಾ ಅಂಶಗಳ ಬಗ್ಗೆ, ತಾಲ್ಲೂಕು ಮಟ್ಟದಲ್ಲಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಿ ಪೂರ್ವ ಸಿದ್ಧತೆಯೊಂದಿಗೆ ಗ್ರಾಮ ಸಭೆಗಳನ್ನು ನಡೆಸಬೇಕೆಂದು ಸೂಚಿಸಲಾಯಿತು. ಇದರಿಂದ ಮುಂದೆ ಬರುವ ಗ್ರಾಮ ಸಭೆಗಳ ಬಗ್ಗೆ ಸರಿಯಾಗಿ ಪ್ರಚಾರ ಮಾಡಿದಾಗ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದರು. ಆದರೆ ಒಂದು ದುರ್ದೈವದ ಸಂಗತಿ ಏನೆಂದರೆ, ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಸಿಬ್ಬಂದಿಗಳಾಗಲೀ, ಚುನಾಯಿತ ಪ್ರತಿನಿಧಿಗಳಾಗಲೀ ಒಳ್ಳೆಯ ಕೆಲಸ ಮಾಡದಿರುವ ಸಂದರ್ಭಗಳಲ್ಲಿ ಗಲಾಟೆ ಶುರುವಾಯಿತು. ಎರಡು ಗುಂಪುಗಳು, ಅಂದರೆ ಚುನಾಯಿತ ಸದಸ್ಯರು, ವಿರೋಧಿ ಚುನಾಯಿತ ಸದಸ್ಯರುಗಳು ಇರುವ ಕಡೆ ಆಗಬಹುದಾದ ಗಲಾಟೆಯನ್ನು ನಿಯಂತ್ರಿಸಲು ಬಂದೋಬಸ್ತ್ ಪೊಲೀಸ್ ವ್ಯವಸ್ಥೆಯನ್ನು ಮಾಡಬೇಕಾಯಿತು. ಇದರಿಂದಾಗಿ ಒಂದು ಒಳ್ಳೆಯ ಸೌಹಾರ್ದಯುತ ವಾತಾವರಣದಲ್ಲಿ ಕಿರಿಕಿರಿ ಹೆಚ್ಚಿತು. ಜನರ ಮನಸ್ಸಿನಲ್ಲಿ ಸರ್ಕಾರದ ನಡತೆ ಬಗ್ಗೆ ಅಸಮಾಧಾನ ಇರುವಾಗ ಮಾತ್ರ ಇಂತಹ ಉದ್ವೇಗ ಉಂಟಾಗುತ್ತದೆ. ಆದರೆ ಎಲ್ಲಿ ಜನ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದರೋ ಅಲ್ಲಿ ಬಹಳಷ್ಟು ಅಭಿವೃದ್ಧಿ ಪರ ಚರ್ಚೆ ಹಾಗೂ ಮುಂದಿನ ಯೋಜನೆಗಳ ಬಗ್ಗೆ ಜನರ ಪಾಲ್ಗೊಳ್ಳುವಿಕೆ, ಶ್ರಮಾದಾನ ಮತ್ತು ಕೆಲವೊಮ್ಮೆ ಆರ್ಥಿಕ ಕೊಡುಗೆಗಳು ಸಹ ಮುಂದೆ ಬಂದವು.
ಗ್ರಾಮ ಪಂಚಾಯ್ತಿಗಳಲ್ಲಿ ಆಗ ಒಂದರಿಂದ ಎರಡು ಲಕ್ಷ ರುಪಾಯಿಗಳಷ್ಟು ಮಾತ್ರ ಸರ್ಕಾರದಿಂದ ಅನುದಾನ ಸಿಗುತ್ತಿತ್ತು. ಬೇರೆಬೇರೆ ಇಲಾಖೆಯಿಂದ ಬರತಕ್ಕಂತಹ ಅನುದಾನದ ಬಗ್ಗೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಅರಿವು ಇರಲಿಲ್ಲ. ಆದರೆ ಈ ಪ್ರಕ್ರಿಯೆ ಮೂಲಕ ಸಂಬಂಧಪಟ್ಟ ಇಲಾಖೆಗಳು (ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಮೀನುಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಮುಂತಾದ ಇಲಾಖೆಗಳು) ತಮ್ಮ ಯೋಜನೆಗಳ ವಿವರವನ್ನು ನೀಡಿದಾಗ ಗ್ರಾಮಸ್ಥರಿಗೆ ಹಳ್ಳಿಗೆ ಎಷ್ಟು ಪ್ರಮಾಣದಲ್ಲಿ ಹಣ ಬರುತ್ತಿತ್ತು ಎಂಬ ಮಾಹಿತಿಯ ಅರಿವೂ ಆಯಿತು. ಅಲ್ಲದೇ ಸ್ಥಳೀಯರ ಸಹಭಾಗಿತ್ವದಿಂದ ಅರ್ಹ ಫಲಾನುಭವಿಗಳ ಆಯ್ಕೆ ಮಾಡಲು ಸಾಧ್ಯವಾಯಿತು. ನಿಜವಾಗಿ ಯಾರಿಗೆ ಸರ್ಕಾರದ ಸೌಲಭ್ಯ ಬೇಕಾಗಿದೆ ಅಂಥವರ ಬಗ್ಗೆ ಎರಡು ಅಭಿಪ್ರಾಯವಿರಲು ಸಾಧ್ಯವಿರುವುದಿಲ್ಲ. ಬಹಳಷ್ಟು ಯುವಕ ಯುವತಿಯರು ಸ್ವಯಂಪ್ರೇರಣೆಯಿಂದ ಮುಂದೆಬಂದು ಸರ್ಕಾರದ ಸಾಕ್ಷರತಾ, ನೈರ್ಮಲ್ಯೀಕರಣ ಮುಂತಾದ ಯೋಜನೆಗಳಲ್ಲಿ ಕೈ ಜೋಡಿಸಿದರು, ಜೊತೆಗೆ ಜನರ ಬೇಡಿಕೆ ಪಟ್ಟಿ ಸಹ ದೊಡ್ಡದಾಯಿತು. ಅವುಗಳನ್ನು ಸಂಗ್ರಹಿಸಿ, ನಮ್ಮ ತಾಲೂಕು ಮಟ್ಟದ ಹಾಗೂ ಜಿಲ್ಲಾಮಟ್ಟದ ಆಯವ್ಯಯ ಹಾಗೂ ಕ್ರಿಯಾ ಯೋಜನೆಯಲ್ಲಿ ಕಾಮಗಾರಿಗಳನ್ನು ಸೇರಿಸಿ ಹಾಗೂ ಹೆಚ್ಚುವರಿ ಕೆಲಸಗಳಿಗಾಗಿ ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಅನುದಾನ ಕೋರಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒಂದು ಹೊಸ ಚಾಲನೆ ನೀಡಲು ಸಾಧ್ಯವಾಯಿತು.
ಈ ಒಂದು ಪ್ರಕ್ರಿಯೆಯೆ ಯಶಸ್ಸನ್ನು ನೋಡಿ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯವರು ನಮ್ಮ ತಾಳೆಪಟ್ಟಿಯನ್ನು ತೆಗೆದುಕೊಂಡು ಇಡೀ ರಾಜ್ಯದಲ್ಲಿ ಇದೇ ರೀತಿ ಮಾಡುವ ಬಗ್ಗೆ ಒಂದು ಸುತ್ತೋಲೆಯನ್ನು ಹೊರಡಿಸಿದರು. ಈ ರೀತಿ ಆದಾಗ ನಾವು ಮಾಡುವ ಕೆಲಸದ ಬಗ್ಗೆ ಉತ್ಸಾಹ ಇನ್ನೂ ಇಮ್ಮಡಿಯಾಗುತ್ತದೆ ಮತ್ತು ಮನಸ್ಸು ಸದಾ ಪ್ರಗತಿಪರ ಚಿಂತನೆಯಲ್ಲಿ ತೊಡಗಿರುತ್ತದೆ.
(ಮುಂದುವರೆಯುವುದು)
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.