ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

'ಭಾವನೆ ಘಾಸಿ' ಉಗ್ರವಾದ! ಇದು ನಿಂದನಾ ದ್ವಂದ್ವ!

Parashurama
Updated On : 3 Feb 2013, 9:47 am

'ಇತ್ತೀಚೆಗಂತೂ ಭಾರತೀಯರ ಭಾವನೆಗಳಿಗೆ ಪದೇಪದೆ  ಘಾಸಿಯಾಗುತ್ತಿರುವುದರಿಂದ, ಸರ್ಕಾರ ಈ ಕೂಡಲೇ 'ಭಾವನೆ ಘಾಸಿ' ಎನ್ನುವ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸುವ ಬಗ್ಗೆ ಗಂಭೀರವಾಗಿ ಆಲೋಚಿಸುವುದೊಳಿತು.' ಇಂತಹ ವ್ಯಂಗ್ಯಮಿಶ್ರಿತ ಹೇಳಿಕೆ ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿದೆ. ಆದರೆ ಒಂದಂತೂ ಸತ್ಯ. ಈಗಂತೂ ಪ್ರತಿ ವಾರವೂ ಒಂದಿಲ್ಲೊಂದು ಕಾರಣಗಳಿಂದ 'ನಮ್ಮ ಭಾವನೆಗಳಿಗೆ ಘಾಸಿಯಾಗಿದೆ' ಎಂದು ಜನ ಬೀದಿಗಿಳಿಯುವುದು ಸಾಮಾನ್ಯವಾಗಿಬಿಟ್ಟಿದೆ. ಹಾಗಾಗೇ ಅಂಥವರ ರಕ್ಷಣೆಗಾಗಿ ಪ್ರತ್ಯೇಕ ಸಚಿವಾಲಯವೊಂದು ಜಾರಿಗೆ ಬಂದರೆ ಒಳ್ಳೆಯದು. ಏಕೆಂದರೆ ಈ 'ಘಾಸಿಗೊಂಡವರು', ಹೊಸ ಸಚಿವಾಲಯದ ಸುತ್ತ ನ್ಯಾಯಕ್ಕಾಗಿ ಗಿರಕಿ ಹೊಡೆಯತೊಡಗುತ್ತಾರೆ, ಆಗ ನಮಗೆಲ್ಲ ಭಾರತವನ್ನು ಕಾಡುತ್ತಿರುವ ನಿಜವಾದ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದಕ್ಕಾದರೂ ಸಮಯ ಸಿಗುತ್ತದೆ.
ಬಡತನದ ಸಮಸ್ಯೆಯನ್ನು ಪರಿಹರಿಸಲು ನಮ್ಮ ರಾಜಕಾರಣಿಗಳು ವಿಫಲರಾಗುತ್ತಿರುವುದರಿಂದ ಅತಿ ಹೆಚ್ಚು ನಷ್ಟ ಅನುಭವಿಸುತ್ತಿರುವವರು ದಲಿತರು, ಮುಸಲ್ಮಾನರು ಮತ್ತು ಆದಿವಾಸಿಗಳು. ಏಕೆಂದರೆ ಭಾರತದಲ್ಲಿ ಬಡತನದ ರೇಖೆಗಿಂತ ಕೆಳಗೆ ವಾಸಿಸುತ್ತಿರುವವರಲ್ಲಿ ಇವರುಗಳ ಸಂಖ್ಯೆಯೇ ಹೆಚ್ಚು. ಇಂತಹ ದೊಡ್ಡ ಸಮಸ್ಯೆಯೇ ಅವರೆದುರಿಗಿರುವಾಗ, ಜೈಪುರದಲ್ಲಿ ಸಮಾಜಶಾಸ್ತ್ರಜ್ಞನೊಬ್ಬನ ಹೇಳಿಕೆಯ ಬಗ್ಗೆ ಮತ್ತು ಉಗ್ರವಾದಿಗಳ ಕುರಿತಾದ ಚಿತ್ರದ ಬಗ್ಗೆ ಅದೇಕೆ ಅಷ್ಟು ತಲೆಕೆಡಿಸುಕೊಳ್ಳುತ್ತಿದ್ದಾರೋ ತಿಳಿಯುತ್ತಿಲ್ಲ. ಇಂದು ಜಗತ್ತು ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯೆಂದರೆ ಉಗ್ರವಾದ. ಅದನ್ನು ಸೃಷ್ಟಿಸುತ್ತಿರುವವರು ತಮ್ಮನ್ನು ತಾವು 'ಜಿಹಾದಿ'ಗಳೆಂದು ಕರೆದುಕೊಳ್ಳುವವರು. ಅವರ ಬಗ್ಗೆ ಕಮಲ್‌ಹಾಸನ್ ಚಿತ್ರ ಮಾಡಿದರೆ ಇವರೇಕೆ ಸಿಟ್ಟಾಗಬೇಕು? ಮುಖ ಊದಿಸಿಕೊಂಡು ಕೂಡಬೇಕು?
ದುರದೃಷ್ಟವಶಾತ್ 'ಏಕೆ ಸಿಟ್ಟಾಗಬೇಕು?' ಎನ್ನುವ ಪ್ರಶ್ನೆಯೇ ಇವರುಗಳ ಭಾವನೆಗಳಿಗೆ ಘಾಸಿಮಾಡುತ್ತದೆ.
ಇದರ ಬದಲಾಗಿ, ತಮ್ಮ ಜನಾಂಗವನ್ನು ಕಾಡುತ್ತಿರುವ ಭಯಾನಕ ಬಡತನವನ್ನು ನೋಡಿ ಇವರುಗಳ ಮನ ಮಿಡುಕಿತ್ತೆಂದರೆ ಎಷ್ಟೋ ಚೆನ್ನಾಗಿರುತ್ತಿತ್ತಲ್ಲ!? ಆದರೆ ಇವರೆಲ್ಲ ಆ ರೀತಿಯಲ್ಲಿ ಯೋಚನೆ ಶುರುವಿಟ್ಟುಕೊಂಡರೆ ತಾವು ನೀಡಿದ ಭರವಸೆಗಳನ್ನೆಲ್ಲ ಈಡೇರಿಸಬೇಕಾಗುತ್ತದೆ ಎನ್ನುವ ಭಯ ರಾಜಕಾರಣಿಗಳಿಗೆ. ಹಾಗಾಗೆ ಸದಾ ಅವರನ್ನು ಹಾದಿ ತಪ್ಪಿಸಿ ತಾವು ಹಾಯಾಗಿರುತ್ತಾರೆ. ಸಲ್ಮಾನ್ ರಶ್ದಿ ಅಥವಾ ಕಮಲ್‌ಹಾಸನ್‌ರಂಥವರ ವಿರುದ್ಧ ಜನರನ್ನು ಎತ್ತಿಕಟ್ಟಿಬಿಟ್ಟರೆ ಅಲ್ಲಿಗೆ ಮುಗಿಯಿತು. ಪೋಸ್ಟರುಗಳನ್ನು, ಪುಸ್ತಕಗಳನ್ನು ಸುಡುವ ಉತ್ಸಾಹದಲ್ಲಿ ತಮ್ಮ  ಮುಖ್ಯಮಂತ್ರಿಗಳ ವೈಫಲ್ಯವನ್ನೆಲ್ಲ ಜನ ಮರೆತುಬಿಡುತ್ತಾರೆ.
ಭಾರತದ ಮಧ್ಯಮ ವರ್ಗದ ಸಂಖ್ಯೆ ಹೆಚ್ಚುತ್ತಿದೆ. ಜತೆಗೆ ಸಾಮಾಜಿಕ ಮಾಧ್ಯಮವೂ ಬೆಳೆದು ಎಲ್ಲರ ಕೈಗೂ ನಿಲುಕತೊಡಗಿದೆ. ಸಾಮಾಜಿಕ ಮಾಧ್ಯಮಗಳ ಹೆಚ್ಚಳದೊಂದಿಗೆ, 'ಭಾವನೆಗಳಿಗೆ ಘಾಸಿಯಾಯಿತು' ಎನ್ನುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇಂತಹ ದುರ್ಬಲ ಹೃದಯದವರನ್ನು ಆಟವಾಡಿಸುವ ವಿದ್ಯೆಯನ್ನು ನಮ್ಮ ರಾಜಕಾರಣಿಗಳು ಬಹಳ ಹಿಂದೆಯೇ ಕಲಿತುಕೊಂಡಿದ್ದಾರೆ. ನಿಮಗೆ ನೆನಪಿರಬಹುದು- ಸಲ್ಮಾನ್ ರಶ್ದಿಯವರ ಪುಸ್ತಕ 'ಸಟಾನಿಕ್ ವರ್ಸಸ್‌'ನ ಮೇಲೆ ನಿಷೇಧ ಹೇರಿದ ಮೊದಲ ರಾಷ್ಟ್ರ ಭಾರತ. ಆ ಪುಸ್ತಕವನ್ನು ಬ್ಯಾನ್ ಮಾಡಿದ ಸಮಯದಲ್ಲಿ ನಮ್ಮಲ್ಲಿನ ಬಹಳಷ್ಟು ಜನರು ಆ ಪುಸ್ತಕದ ಹೆಸರನ್ನೇ ಕೇಳಿರಲಿಲ್ಲ! ಘಾಸಿಯಾದವರ ಪರವಾಗಿ ದನಿಯಾದ ಭಾರತ ಸರ್ಕಾರ, ರಶ್ದಿಯವರನ್ನು ಪರಿ ಪರಿಯಾಗಿ ಪೀಡಿಸಿತು. ಈ ಹಳೆಯ ಸಂಪ್ರದಾಯವನ್ನು ತಲೆಯಲ್ಲಿಟ್ಟುಕೊಂಡೇ ಕಳೆದ ವಾರ ಮಮತಾ ಬ್ಯಾನರ್ಜಿ ರಶ್ದಿ ಅವರನ್ನು ಕೋಲ್ಕತಾಗೆ ಕಾಲಿಡದಂತೆ ಮಾಡಿದರು.
ಎಲ್ಲರೂ 'ಭಾವನೆಗೆ ಘಾಸಿ' ಎನ್ನುವ ಉನ್ಮಾದದಲ್ಲಿ ಬಿದ್ದು ಭಾರತವನ್ನು ಪ್ರಜಾತಾಂತ್ರಿಕ, ಜಾತ್ಯತೀತ ರಾಷ್ಟ್ರ ಎನ್ನುವುದನ್ನೇ ಮರೆಯುತ್ತಿದ್ದಾರೆ. ಭಾರತದ ಈ ಕಲ್ಪನೆ ಉಳಿಯಬೇಕೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯವೂ ಬದುಕುಳಿಯಬೇಕು. ಅಂದರೆ ಸಿನೆಮಾದವರಿಗೆ ಅಥವಾ ಬರಹಗಾರರಿಗೆ ಸಿನೆಮಾ ಅಥವಾ ಬರಹದಲ್ಲಿ ಧರ್ಮದ ಬಗ್ಗೆ ಮಾತನಾಡುವ ಸ್ವಾತಂತ್ರ್ಯ ಸಿಗಬೇಕು. ಇತ್ತೀಚೆಗೆ ನನ್ನ ಅಂಕಣವೊಂದರಲ್ಲಿ ಓವೈಸಿಯನ್ನು ಬಂಧಿಸಿದ್ದು ಸರಿಯಲ್ಲ, ಏಕೆಂದರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮಾತನಾಡುವ ಹಕ್ಕು ಎಲ್ಲಿರಿಗೂ ಇದೆ ಎಂದು ನಾನು ಹೇಳಿದ್ದೆ. ಹಿಂದುತ್ವ ಶಕ್ತಿಗಳಿಗೆ ಸಿಟ್ಟು ಬಂತೆಂದರೆ ಆ ವಿಷಯವನ್ನು ನ್ಯಾಯಾಲಯಕ್ಕೊಯಬೇಕು, ಅದನ್ನು ಬಿಟ್ಟು ಹಿಂಸಾಚಾರದಲ್ಲಿ ತೊಡಗಬಾರದು. ಹಾಗೆಯೇ ಸರ್ಕಾರ ಕೂಡಲೆ, ಇನ್ನೊಬ್ಬರ ಭಾವನೆಗಳಿಗೆ ಘಾಸಿ ಮಾಡುವವರನ್ನು ಬಂಧಿಸಬೇಕು.
ಚಿತ್ರಮಂದಿರಗಳನ್ನು ಸುಟ್ಟು ಹಾಕಲು ಯೋಜನೆ ಹಾಕಿಕೊಂಡ ಮುಸಲ್ಮಾನರ ಮೇಲೆ, ಎಮ್.ಎಫ್.ಹುಸೇನ್‌ರ ಕಲಾಕೃತಿಗಳನ್ನು ಸುಟ್ಟುಹಾಕಿದ ಹಿಂದೂಗಳ ಮೇಲೆ, ಕೋಲ್ಕತಾ ಸಾಹಿತ್ಯೋತ್ಸವದಲ್ಲಿ ರಶ್ದಿ ಕಾಲಿಡದಂತೆ ನೋಡಿಕೊಂಡವರ ಮೇಲೆ ಅಲ್ಲಿನ ಸರ್ಕಾರಗಳು ಇದೇ ರೀತಿಯ ಉಗ್ರ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಇದೆಲ್ಲ ಏಕೆ ಸಾಧ್ಯವಾಗುತ್ತಿಲ್ಲ? ಉಗ್ರಗಾಮಿಗಳಿಗಿಂತ, ಪೇಂಟರ್‌ಗಳನ್ನು, ಲೇಖಕರನ್ನು, ಸಿನೆಮಾದವರನ್ನು ಬಂಧಿಸುವುದು ಸುಲಭವೆಂಬ ಕಾರಣಕ್ಕೋ?
ಇದೂ ಕೂಡ ಭಾರತದಲ್ಲಿ ಹಿಂದಿನಿಂದಲೂ ಜಾರಿಯಿರುವ ಸಂಪ್ರದಾಯ. ಉಗ್ರವಾದಿಗಳನ್ನು ಬಂಧಿಸುವುದಕ್ಕೆ ಹಿಂದೆ ಮುಂದೆ ನೋಡುವ ನಮ್ಮ ವ್ಯವಸ್ಥೆ, ಅಶಕ್ತರನ್ನು ಬಂಧಿಸುವಲ್ಲಿ ಮಾತ್ರ ಒಂದು ಕ್ಷಣವೂ ತಡಮಾಡುವುದಿಲ್ಲ. ಸಮುದ್ರ ದಂಡೆಯಲ್ಲಿ, ಪಾರ್ಕುಗಳಲ್ಲಿ ಅಡ್ಡಾಡುವ ಪ್ರೇಮಿಗಳನ್ನು ಅರೆಸ್ಟ್ ಮಾಡಲಾಗುತ್ತದೆ, ಆದರೆ ಅತ್ಯಾಚಾರಿಗಳನ್ನು ಮಾತ್ರ ಬಂಧಿಸಲಾಗುವುದಿಲ್ಲ. ಹಾಗಾಗೇ ಮಾನ್ಯ ಪ್ರಧಾನ ಮಂತ್ರಿಗಳು 'ಭಾವನೆ ಘಾಸಿ' ಸಚಿವಾಲಯವನ್ನು ಆದಷ್ಟು ಬೇಗ ಸ್ಥಾಪಿಸಿದರೆ, ಬೀದಿಯಲ್ಲಿ ಗದ್ದಲ ಮಾಡುವವರ ಸಂಖ್ಯೆಯಾದರೂ ಕಡಿಮೆಯಾದೀತು. ಆಗ ನಾವು ಮೇಲೆ ತಿಳಿಸಿದಂತಹ ಸಮಸ್ಯೆಗಳತ್ತ ಸುಲಭವಾಗಿ ಗಮನಹರಿಸಬಲ್ಲೆವು. ಅವರಿಗೆ ಇನ್ನೊಂದು ಸಲಹೆಯನ್ನೂ ಕೊಡಲು ಬಯಸುತ್ತೇನೆ. ಈ ಸಚಿವಾಲಯದ ಮುಂದೆ ವಿಶಾಲವಾದ ಖಾಲಿ ಜಾಗವೂ ಇರಲಿ, ಆಗ ಎಲ್ಲಾ ಗುಂಪುಗಳಿಗೆ ಶಾಂತಿಯುತವಾಗಿ ಸಿಟ್ಟನ್ನು ಹೊರಗೆಡವಲು ಜಾಗ ಸಿಕ್ಕಂತಾಗುತ್ತದೆ. ಹಿಂಸಾಚಾರವೂ ತಪ್ಪುತ್ತದೆ. ಬೌದ್ಧಿಕ ಭಯೋತ್ಪಾದನೆಯೂ ನಿಲ್ಲುತ್ತದೆ.

ವಿಶ್ವರೂಪಂ ವಿವಾದವೇನೋ ಮುಗಿದಿದೆ. ಆದರೆ ಇನ್ನು ಮುಂದೆ ಸೃಜನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವವರು ಯಾರೆಲ್ಲರ ಹಿತಾಸಕ್ತಿ ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ ಎಂಬ ಪ್ರಶ್ನೆ ಮಾತ್ರ ಜಟಿಲ. ಮಾಧ್ಯಮ ವಿಮರ್ಶೆಗೆ ಮೀಸಲಾಗಿರುವ ಮೀಡಿಯಾ ಕ್ರೂಕ್ ತಾಣವು ಈ ನಿಷೇಧ ಪರ್ವವನ್ನು ತುಸು ಭಿನ್ನ ನೆಲೆಯಲ್ಲಿ ವಿಶ್ಲೇಷಿಸಿದೆ. 'ಸಂವೇದನೆಗೆ ಘಾಸಿ'ಯಾಗುವಿಕೆ 'ನಿಂದನಾತ್ಮಕ' ಎಂಬುದನ್ನೆಲ್ಲ ಬುದ್ಧಿಜೀವಿಗಳ ಗುಂಪು ಕೇವಲ ಸಮುದಾಯವೊಂದಕ್ಕೆ ಮಾತ್ರವೇ ಅನ್ವಯಿಸಿ ತನ್ನ ದ್ವಂದ್ವ ಪ್ರದರ್ಶಿಸಿಕೊಂಡು ಬಂದಿದೆ ಎಂಬ ಪ್ರತಿಪಾದನೆ ಇಲ್ಲಿದೆ.

ನೀವು ಲೇಖನವನ್ನೋ, ಪುಸ್ತಕವನ್ನೋ ಬರೆಯುತ್ತಿದ್ದರೆ, ಇಲ್ಲವೇ ಚಿತ್ರ ನಿರ್ಮಿಸುತ್ತಿದ್ದರೆ ಮೊದಲಿಗೆ ಯಾರೆಲ್ಲ ಅದರಿಂದ ಘಾಸಿ-ನಿಂದನೆಗೆ ಒಳಗಾಗಬಹುದು ಎಂಬ ಪಟ್ಟಿಯನ್ನು ಮುಂದೆ ಇರಿಸಿಕೊಳ್ಳಿ. ಆ ಮೂಲಕ ನಿಮ್ಮ ಕೃತಿಗೆ ಸಂವೇದನೆ ತುಂಬಿ. ಈ ಧಾಟಿಯ ಅಭಿಪ್ರಾಯ ವ್ಯಕ್ತವಾಗಿರುವುದು ಸಂವಾದವೊಂದರಲ್ಲಿ ಶಶಿ ಥರೂರ್ ಅವರಿಂದ. ಇವರೂ ಸೇರಿದಂತೆ ಉದಾರವಾದಿಗಳ ಗಣ ನಂಬುವುದೇನೆಂದರೆ, ಹಿಂದುಗಳ ಸಂವೇದನೆ ಮೇಲೆ ದಾಳಿ ಮಾಡುವ ಎಲ್ಲ ಬಗೆಯ ಕೃತಿಗಳೂ ಪ್ರಶಂಸಾರ್ಹ. ಆದರೆ ಮುಸ್ಲಿಂ ಸಮುದಾಯದ ಬಗ್ಗೆ ಚಿತ್ರಿಸುವಾಗ ಎಚ್ಚರಿಕೆ ಅಗತ್ಯ ಎಂಬ ಧಾಟಿ.
ಒಬಿಸಿ ಮತ್ತು ದಲಿತ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಎತ್ತಿದ ಆಶೀಶ್ ನಂದಿ ಅದಕ್ಕೆ ಬೆಲೆ ತೆರುವ ಹಂತದಲ್ಲಿದ್ದಾರೆ ಪಾಪ! ಇದಾಗಿದ್ದು ಜೈಪುರದ 'ಲಿಟ್ಟರ್‌'ಫೆಸ್ಟ್‌ನಲ್ಲಿ. ಉದ್ದೇಶಪೂರ್ವಕವಾಗಿ ಹೀಗೆ ಕರೆದಿದ್ದು. ಏಕೆಂದರೆ ಇಲ್ಲಿ ಸಾಹಿತ್ಯ ಚರ್ಚೆಗಳಿಗಿಂತ ರಾಜಕೀಯ ಸಂವಾದಗಳೇ ಅಧಿಕ. ಹಿಂದಿನ ವರ್ಷ ಇದೇ ಉತ್ಸವದಲ್ಲಿ ಸಲ್ಮಾನ್ ರಶ್ದಿ ಭಾಗವಹಿಸದಂತೆ ನೋಡಿಕೊಳ್ಳುವುದಕ್ಕೆ ಮುಸ್ಲಿಂ ಗುಂಪುಗಳು ಯಶಸ್ವಿಯಾಗಿದ್ದವು. ಸಟಾನಿಕ್ ವರ್ಸಸ್ ಪುಸ್ತಕದ ಮೂಲಕ ಅವರ ಭಾವನೆಗೆ ಧಕ್ಕೆ ತಂದಿದ್ದರಂತೆ ರಶ್ದಿ. ತೆಹೆಲ್ಕಾದ ಥಿಂಕ್‌ಫೆಸ್ಟ್ ನಡೆದಾಗ ಗೋವಾ ಸರ್ಕಾರದಿಂದ ಜಾಹೀರಾತಿಗಾಗಿ ಹೆದರಿಸಿದ ಆಪಾದನೆ ತರುಣ್ ತೇಜಪಾಲ್ ಮೇಲಿತ್ತು. ಇಂಥದೇ ಉತ್ಸವದಲ್ಲಿ ಕಾರ್ನಾಡರು ನೈಪಾಲರ ಮೇಲೆ ಕಾರಿಕೊಂಡಿದ್ದು ತಿಳಿದೇ ಇದೆ.
ರಾಜಸ್ಥಾನ ಸರ್ಕಾರವು ಶೀಘ್ರದಲ್ಲೇ ಆಶೀಶ್ ನಂದಿ ವಿರುದ್ಧ ಎಫ್‌ಐಆರ್ ದಾಖಲಾಗುವಂತೆ ನೋಡಿಕೊಂಡಿತು. ಆದರೆ 'ಹಿಂದು ಟೆರರ್‌' ಭಾಷಣ ಹೊಡೆದ ಸುಶೀಲ್ ಕುಮಾರ್ ಶಿಂಧೆ ವಿರುದ್ಧ ಅಂಥ ಕ್ರಮಗಳೇನೂ ಆಗಲಿಲ್ಲ. ನಿರಂತರವಾಗಿ ದ್ವೇಷದ ಭಾಷಣ ಮಾಡಿಕೊಂಡು ಬಂದಿದ್ದ ಓವೈಸಿ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಆಂಧ್ರ ಸರ್ಕಾರವು ಪ್ರಕರಣ ನಡೆದ ನಂತರ ತಿಂಗಳುಗಳ ಸಮಯ ತೆಗೆದುಕೊಂಡಿತು. ಶಿಂಧೆ ಅವರೇನಾದರೂ 'ಮುಸ್ಲಿಂ ಟೆರರ್‌' ಬಗ್ಗೆ ಮಾತನಾಡಿದ್ದರೆ ಸಂಬಂಧಿತ ಗುಂಪುಗಳು ಅಂದೇ ಅವರ ಮನೆಯನ್ನು ನೆಲಸಮ ಮಾಡುತ್ತಿದ್ದವು. ಇನ್ನು, ಶಾರುಖ್ ಖಾನ್ ಅವರಿಗೂ ಈ ದೇಶದಲ್ಲಿ 'ಬಲಿಪಶು' ಆಗಿರುವ ಭಾವ. ಶಿಂಧೆ ಮತ್ತು ಶಾರುಖ್ ಇಬ್ಬರಿಗೂ ಹಫೀಜ್ ಸಯೀದ್‌ನಂಥವರ ಸ್ನೇಹಹಸ್ತ ಚಾಚಿಕೊಳ್ಳುವುದು ಸಹಜವಾಗಿಯೇ ಇದೆ. ಇಸ್ಲಾಂ ತೀವ್ರವಾದವನ್ನು ಖಂಡಿಸುವುದಕ್ಕೆ ಹೆದರುವ ಮಾಧ್ಯಮ, ಮುಸ್ಲಿಮರನ್ನು 'ಸ್ಟಿರಿಯೋಟೈಪ್‌', ಏಕಮುಖಿ ಆಯಾಮದಲ್ಲಿ ಚಿತ್ರಿಸಲಾಗುತ್ತಿದೆ ಎಂದು ಕಳವಳ ಪಡುತ್ತದೆ. ಆದರೆ ಕೆಲ ಮುಸ್ಲಿಂ ಗುಂಪುಗಳು ಆಗಾಗ್ಗೆ ಕ್ಷುಲ್ಲಕ ಕಾರಣಗಳಿಗೆ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸುವುದನ್ನು ಕಂಡಾಗ 'ಏಕಮುಖಿ ಆಯಾಮ' ಅಡಗಿರುವುದಾದರೂ ಎಲ್ಲಿ ಎಂಬ ಪ್ರಶ್ನೆ ಎದುರಾಗುತ್ತದೆ.
ಜೋಕುಗಳು ಈ ಸಮುದಾಯದ ಗುಂಪಿಗೆ ನಿಂದನಾತ್ಮಕವಾಗಿ ಕಾಣುತ್ತವೆ, ಪುಸ್ತಕಗಳು ಅವರ ಮೇಲಿನ ಆಕ್ರಮಣವಾಗಿ ಕಾಣುತ್ತವೆ, ಲೇಖನಗಳು ಆಕ್ರಮಕ ಎನಿಸುತ್ತವೆ, ಸಂಗೀತ-ಚಲನಚಿತ್ರಗಳು ಆಕ್ರಮಕ ಎನಿಸುತ್ತವೆ. ಅಂದರೆ ಇವರಿಗೆ ಇದು ತಮ್ಮ ಮೇಲಿನ ಆಕ್ರಮಣ ಎಂದು ಅನ್ನಿಸದ ಸಂಗತಿಗಳೇ ವಿರಳ! 25 ವರ್ಷಗಳ ಕಾಲ ಬೋಫೋರ್ಸ್ ಹಗರಣದ ಆರೋಪ ಹೊರಬೇಕಾಗಿ ಬಂದರೂ ಅಮಿತಾಭ್ ಬಚ್ಚನ್ ಅವರು ತಾವು ಈ ದೇಶದಲ್ಲಿ 'ಬಲಿಪಶು' ಆಗಿದ್ದಾಗಿ ಹೇಳಿಕೊಳ್ಳಲಿಲ್ಲ. ಆದರೆ ಮುಸ್ಲಿಂ ಆಗಿರುವ ಕಾರಣಕ್ಕೆ ಶಾರುಖ್ ಖಾನ್‌ಗೆ ಹಾಗೆನಿಸಿಬಿಡುತ್ತದೆ!
ಮೂರು ವರ್ಷಗಳ ಹಿಂದೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಭೇಟಿ ನೀಡಿದಾಗ ಕೆಲ ಮುಸ್ಲಿಮರು ಪ್ರತಿಭಟಿಸಿದರು. ಅದಕ್ಕೆ ಕಾರಣವೆಂದರೆ ಒಬಾಮಾ ಭದ್ರತಾ ಪಡೆಯ ನಾಯಿಯೊಂದಕ್ಕೆ ಖಾನ್ ಎಂದು ಹೆಸರಿಡಲಾಗಿತ್ತಂತೆ. ಇದೇ ಆಧಾರವಾಗಿಟ್ಟುಕೊಂಡರೆ ಬಾಲಿವುಡ್‌ನ ಎಷ್ಟೋ ಚಿತ್ರಗಳಲ್ಲಿ ಮನೆ ಕೆಲಸದ ಪಾತ್ರವನ್ನು 'ರಾಮು ಕಾಕಾ' ಎಂಬ ಹೆಸರಿನಲ್ಲಿ ಕರೆಯಲಾಗಿದೆ. ರಾಮಭಕ್ತರು ಕ್ಷುಲ್ಲಕವಾಗಿ ಯೋಚಿಸಿದ್ದರೆ ಅವೆಷ್ಟು ಚಿತ್ರಗಳು ಬ್ಯಾನ್ ಆಗಿಬಿಡಬೇಕಿತ್ತು, ಎಷ್ಟು ಚಿತ್ರಮಂದಿರಗಳು ಬೆಂಕಿಗಾಹುತಿಯಾಗಬೇಕಿತ್ತು!
ತಮಿಳುನಾಡಿನಲ್ಲಿ ವಿಶ್ವರೂಪಂ ಅನ್ನು ಪ್ರಾರಂಭದಲ್ಲಿ ನಿಷೇಧಿಸಿದ್ದಕ್ಕೆ ಮುಸ್ಲಿಮರು ಪ್ರತಿಭಟಿಸಿದರು ಎಂಬುದೇ ಕಾರಣ. ಅವರೇಕೆ ಪ್ರತಿಭಟಿಸಿದರು ಎಂಬ ಅಂಶವೂ ಅಸ್ಪಷ್ಟ. ತಮಿಳು ಮಾತನಾಡುವ ಚಿತ್ರದ ಪಾತ್ರವು ಅಫ್ಘಾನಿಸ್ತಾನದಲ್ಲಿ ಜಿಹಾದಿಯಾಗಿ ಚಿತ್ರಣಗೊಂಡಿದೆ ಎನ್ನಲಾಗಿದೆ. ಅದಕ್ಕೆ ಮುಸ್ಲಿಮರೇಕೆ ಆಕ್ರೋಶಗೊಳ್ಳಬೇಕೋ ಅರ್ಥವಾಗುತ್ತಿಲ್ಲ. ಜನ ಸಾಮಾನ್ಯರು ವೀಕ್ಷಿಸುವುದಕ್ಕೂ ಮೊದಲು ಚಿತ್ರ ಆಕ್ಷೇಪಾರ್ಹವಾಗಿದೆ ಎಂದರೆ ಏನರ್ಥ? ನಿಷೇಧ ತೆರವುಗೊಳಿಸುವಂತೆ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಹೇಳಿತು- 'ಪರಿಹಾರ ಕಂಡುಕೊಳ್ಳುವುದಕ್ಕೆ ಪ್ರತಿಭಟಿಸುತ್ತಿರುವ ಗುಂಪಿನೊಂದಿಗೆ ಮಾತುಕತೆ ನಡೆಸಿ'. ತುಷ್ಟೀಕರಣ ಎನ್ನುವುದು ಭಾರತವನ್ನು ಎಲ್ಲಿಗೆ ತಂದು ನಿಲ್ಲಿಸಿದೆ ನೋಡಿ. ಕಾನೂನು ಉಲ್ಲಂಘಿಸುತ್ತಿರುವವರ ಜತೆ ಚರ್ಚೆಗೆ ಕೂತು ಸಮಸ್ಯೆ ಬಗೆಹರಿಸಿಕೊಳ್ಳುವ ಸ್ಥಿತಿಗೆ ನಾವು ತಲುಪಿದ್ದೇವೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದವಳಿಗೆ ಆಕ್ರಮಣಕಾರನ ಜತೆ ಕೂತು ವಿಷಯ ಬಗೆಹರಿಸಿಕೋ ಎಂದೆನ್ನುವ ದಿನಗಳೂ ಬಂದಾವು!
ಭಾರತೀಯ ಕಾನೂನಿನ ಪರಿಧಿಯಲ್ಲೇ ಚಿತ್ರವೊಂದು ರೂಪುಗೊಂಡಿದೆಯೇ ಎಂದು ಪರಿಶೀಲಿಸಿಯೇ ಅನುಮತಿ ನೀಡುವುದಕ್ಕೆ ಫಿಲ್ಮ್ ಸರ್ಟಿಫಿಕೇಷನ್ ಬೋರ್ಡ್ ಇದೆ. ಅದರಿಂದ ಲೋಪವಾಗಿದ್ದರೆ ಆ ಅಂಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕೇ ಹೊರತು ಬೀದಿಯಲ್ಲಿ ದಾಂಧಲೆ ಎಬ್ಬಿಸುವ ಮೂಲಕ ಅಲ್ಲ. ಲೋಕಪಾಲ್‌ಗಿಂತಲೂ ಪೂರ್ವದಲ್ಲಿ ಬಹುಶಃ ಕೆಲ ಮುಸ್ಲಿಮರಿಗೆ ಏನೆಲ್ಲ ನಿಂದನಾತ್ಮಕವಾಗಿ ತೋರುತ್ತದೆ ಎಂಬ ಬಗ್ಗೆ ಪಟ್ಟಿ ಹೊರಡಿಸುವುದು ಒಳಿತು. ಮುಸ್ಲಿಂ ಗುಂಪುಗಳಿಗೆ ಏನೆಲ್ಲ ನಿಂದನಾತ್ಮಕವಾಗಿ ತೋರುವುದಿಲ್ಲ ಎಂಬ ಪಟ್ಟಿ ತಯಾರಿಸಿದರೆ ಅದೇ ಚಿಕ್ಕದಿದ್ದೀತು. ನಾವೆಲ್ಲ ಅದನ್ನು ಅನುಸರಿಸಿ ನಡೆಯಬಹುದು.
ಈ ಲೇಖನವೂ ನಿಂದನಾತ್ಮಕ ಎನಿಸಿದರೆ ಸಂಧಾನಕ್ಕೆ ಕೂರಬೇಕಷ್ಟೇ!

- ತವ್ಲೀನ್ ಸಿಂಗ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments