ಅಂಕಣಗಳು

ಕಣ್ಮರೆಯಾಗುತ್ತಾ ಕಳವಳ ಹುಟ್ಟಿಸುತ್ತಿರುವ ಕೃಷಿ ಭೂಮಿ

ಇಂದಿನ ಕೃಷಿಗೆ ಸುಮಾರು ಹತ್ತು ಸಾವಿರ ವರ್ಷಗಳ ಇತಿಹಾಸವಿದೆಯೆಂದು ಅಂದಾಜು ಮಾಡಲಾಗಿದೆ. ಕೃಷಿ ಆರಂಭವಾಗುವುದಕ್ಕೆ ಮೊದಲು ಪರಿಸರ ಯಾವ ರೀತಿ ಇದ್ದೀತು ಎಂದು ಊಹಿಸಲೂ ಕಷ್ಟವಾಗುತ್ತದೆ. ಮಾನವ ಕೃಷಿ ಆರಂಭಿಸುವ ಮೊದಲು ಅರಿಸಿ ಮತ್ತು ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಎಂಬುದಕ್ಕೆ ಹಲವಾರು ಸಾಕ್ಷ್ಯಾಧಾರಗಳಿವೆ. ಆ ಯುಗದಲ್ಲಿ ಮಾನವ ಎಲ್ಲೂ ಒಂದೇ ಕಡೆ ಠಿಕಾಣಿ ಹೂಡಿ ವಾಸಿಸುತ್ತಿರಲಿಲ್ಲ. ಯಾವಾಗ ಮಾನವನಿಗೆ ಫಲವತ್ತಾದ ಭೂಮಿ, ನೀರು ಇರುವ ಜಾಗ ಕಂಡಿತೋ, ಆಗ ಆತ ಅಲ್ಲೇ ಮೊಕ್ಕಾಂ ಹೂಡಲು ನಿರ್ಧರಿಸಿದ. ತನಗೆ ಬೇಕಾದ ಆಹಾರ ಬೆಳೆಗಳನ್ನು ಬೆಳೆಸಲು ಸುತ್ತಮುತ್ತಲಿದ್ದ ಪರಿಶುದ್ಧ (Virgin) ಭೂಮಿಯನ್ನು ಕೃಷಿ ಮಾಡಲೋಸುಗ ತಯಾರು ಮಾಡಿದ. ಯಾವಾಗ ಈ ರೀತಿಯ ಕೃಷಿ ಆರಂಭವಾಯಿತೋ, ಅಂದಿನಿಂದ ಭೂಮಿಯ ಮೇಲಿನ ಕೃಷಿ ಪರಿಸರ ಬದಲಾಗುತ್ತಾ ಹೋಯಿತು. ಅಂದರೆ, ಮಾನವ ಒಂದು ರೀತಿಯಲ್ಲಿ ಕೃಷಿಯ ಆರಂಭದಿಂದ ಪರಿಸರವನ್ನು ಮಾರ್ಪಾಡು ಮಾಡುತ್ತಾ ಬಂದಿದ್ದಾನೆ. ಜನಸಂಖ್ಯೆ ಅಧಿಕವಾಗುತ್ತಾ ಹೋಗಲು, ಕೃಷಿ ಭೂಮಿಯನ್ನು ಹೆಚ್ಚಿಸುವ, ಕೃಷಿಯಿಂದ ಭೂಮಿಯನ್ನು ಹೆಚ್ಚಿಸುತ್ತಾ ಹೋಗಲೇಬೇಕಾದ ಅನಿವಾರ್ಯತೆಗೆ ಮಾನವ ಸಿಲುಕ್ಕಿದ್ದರಿಂದ ಪರಿಸರದ ಮೇಲೆ ತೀವ್ರ ಪರಿಣಾಮ ಉಂಟಾಗುತ್ತಾ ಬಂದಿದೆ. ಇಂದು, ಕೃಷಿ ಮಾನವನ ಸಕಲ ಚಟುವಟಿಕೆಗಳಲ್ಲಿ ಅತ್ಯಂತ ಪರಿಣಾಮಕಾರಿ ಪರಿಸರ ಕಸುಬು ಎಂದರೆ ಅತಿಶಯೋಕ್ತಿ ಆಗಲಾರದು. ಅಂದರೆ ಕೃಷಿಯಿಂದ ಉಂಟಾಗುವ ಪರಿಸರ ಪರಿಣಾಮವನ್ನು ತಡೆ ಹಿಡಿಯಬಹುದೇ ಹೊರತು, ಸಂಪೂರ್ಣವಾಗಿ ನಿಲ್ಲಿಸಲಾಗುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಭೂಮಿಯ ಮೇಲೆ ಸುಮಾರು ಏಳು ಬಿಲಿಯನ್ ಜನರು ವಾಸಿಸುತ್ತಿದ್ದಾರೆ. ಇಷ್ಟು ಜನರಿಗೆ ಆಹಾರ ಒದಗಿಸಲು ಇರುವ ಅಲ್ಪ ಭೂಮಿಯಲ್ಲಿಯೇ ಕೃಷಿ ಮಾಡಬೇಕಾದ ಅನಿವಾರ್ಯತೆ ಇದೆ. ಹಾಗಾಗಿ  intesive ಆಗಿ ಕೃಷಿ ಮಾಡಬೇಕಾಗುತ್ತಿದೆ. ಈ ರೀತಿಯ ಸಾಂದ್ರವಾದ ವ್ಯವಸಾಯಕ್ಕೆ ಹಸಿರುಕ್ರಾಂತಿ (Green revolution) ಎಂದು ಕರೆಯಲಾಗುತ್ತದೆ. ಸಾಂದ್ರವಾದ ವ್ಯವಸಾಯದಿಂದ ನಿಸ್ಸಂಶಯವಾಗಿಯೂ ಆಹಾರ ಉತ್ಪನ್ನ ಹೆಚ್ಚಾಯಿತಾದರೂ, ಅದರೊಟ್ಟಿಗೆ ಪರಿಸರದ ಮೇಲೆಯೂ ಹೆಚ್ಚು ಪರಿಣಾಮ ಉಂಟಾಗುತ್ತಿದೆ. ಹೀಗಾಗಿ, ಕೆಲ ಪರಿಸರವಾದಿಗಳು ಎಲ್ಲದಕ್ಕೂ ಹಸಿರು ಕ್ರಾಂತಿಯನ್ನೇ ದೂಷಿಸಿ, ಗತಕಾಲದ ವ್ಯವಸಾಯ ಮಾಡಬೇಕೆಂದು ವಾದಿಸುತ್ತಿದ್ದಾರೆ. ಅರವತ್ತರ ದಶಕದ ಮುಂಚೆ ಭಾರತದಲ್ಲಿ ಸಾಂದ್ರವಾದ ವ್ಯವಸಾಯವೇ ಇರಲಿಲ್ಲ. ಅದಾಗ್ಯೂ ತೊಂಬತ್ತು ಪ್ರತಿಶತದಷ್ಟು ಭಾಗದಲ್ಲಿ ಸಾವಯವ ಕೃಷಿಯೇ ನಡೆಯುತ್ತಿತ್ತು. ಆದರೆ ಆ ಕಾಲದ ಕ್ಷಾಮ ಮತ್ತು ಬರಗಾಲ ತಿಳಿದವರಿಗೆ ಗೊತ್ತು; ಎಲ್ಲವೂ ಹೇಗೆ ಬದಲಾಯಿತೆಂದು. ''Ship to mouth'' ಎಂಬ ಕಾಲವಿತ್ತು. ಅಂದರೆ, ಆಗ ಅಮೆರಿಕದಿಂದ ಹಡಗಿನಲ್ಲಿ ಆಹಾರ ಧಾನ್ಯ ಬರುತ್ತಿತ್ತು. ಎಲ್ಲರಿಗೂ ಆಹಾರ ಧಾನ್ಯವನ್ನು ಪಡಿತರ ಪ್ರಮಾಣದಲ್ಲಿ ಒಂದು ವಾರಕ್ಕೆ ಸಾಕಾಗುವಷ್ಟು ವಿತರಿಸಲಾಗುತ್ತಿತ್ತು. ಹಸಿರುಕ್ರಾಂತಿ ಬಂದ ಮೇಲೆಯೇ ಆಹಾರ ಭದ್ರತೆ ಭಾರತಕ್ಕೆ ಬಂದಿದ್ದು. ಹಸಿರುಕ್ರಾಂತಿ ಒಂದು ತಳಿಶಾಸ್ತ್ರದ ವಿಜ್ಞಾನದ ಮೇಲೆ ಆಧರಿತವಾಗಿದೆ. ಇದೇ ಮೊಟ್ಟ ಮೊದಲ ನೈಜ ವಿಜ್ಞಾನಾಧಾರಿತ ಕೃಷಿಯ ಆರಂಭ.
 ಕೃಷಿ ಭೂಮಿಮೊದಮೊದಲು ಪರಿಶುದ್ಧವಾಗಿದ್ದು, ಅದರಲ್ಲಿನ ಜೈವಿಕ ವೈವಿಧ್ಯತೆ ಸಮೃದ್ಧವಾಗಿತ್ತು. ಯಾವಾಗ ಈ ಪರಿಶುದ್ಧ ಭೂಮಿಯನ್ನು ಕೃಷಿ ಭೂಮಿಯಾಗಿ ಪರಿವರ್ತನೆ ಮಾಡಲಾಯಿತೋ, ಆಗ ಅದು ಒಂದು ಕೃತಕ ಪರಿಸರವಾಗಿ ಮಾರ್ಪಾಡಾಯಿತು. ಜೈವಿಕ ವೈವಿಧ್ಯತೆ ಎಂದೆಂದಿಗೂ ಬದಲಾಗುತ್ತಾ ಬಂದಿರುವ ಲೋಕೋತ್ತರವಾದ ಸಂಗತಿ. ಇನ್ನು ಆಧುನಿಕ ಕೃಷಿಯಲ್ಲಿ ಜೈವಿಕ ವೈವಿಧ್ಯತೆ ಮುಖ್ಯವಾದುದಲ್ಲ. ಏಕೆಂದರೆ ಕಷ್ಟಪಟ್ಟು ಬೆಳೆ ಬೆಳೆದು ಅತ್ಯಧಿಕ ಇಳುವರಿ ಪಡೆಯಬೇಕಾದರೆ, ಬಾಕಿ ಜೀವರಾಶಿಗಳನ್ನು ಹತೋಟಿಯಲ್ಲಿಟ್ಟು ಕೊಳ್ಳಬೇಕಾಗುತ್ತದೆ. ಕೃಷಿಯಲ್ಲಿ ಅತಿ ಮುಖ್ಯವಾದ ಸಂಗತಿ ಎಂದರೆ, ಉತ್ತಮವಾದ, ಹೆಚ್ಚು ಇಳುವರಿ ಕೊಡುವ ಮತ್ತು ರೋಗನಿರೋಧಕ ಶಕ್ತಿ ಹೊಂದಿರುವ ಬೀಜ. ತಳಿಶಾಸ್ತ್ರಜ್ಞರು ಬೀಜವನ್ನು ಅಭಿವೃದ್ಧಿಪಡಿಸಿ ರೈತರಿಗೆ ಕೊಟ್ಟಿದ್ದಾರೆ. ತತ್ಫಲವಾಗಿ ಬಂದುದು  improved Varieties ಮತ್ತು ಮಿಶ್ರತಳಿ (hybrid) ಬೀಜಗಳು. ಈ ರೀತಿ ಅಭಿವೃದ್ಧಿ ತಳಿಗಳು ಬಂದ ಮೇಲೆ, ಹಳೆ ಬೀಜಗಳನ್ನು ಬಿತ್ತುವುದನ್ನು ರೈತರು ಕೈ ಬಿಟ್ಟರು. ಹಾಗೆಂದಾಕ್ಷಣ, ಹಳೆಯ ತಳಿಗಳು ಸಂಪೂರ್ಣವಾಗಿ ನಾಶವಾಗಿ ಹೋದವು ಎಂದರ್ಥವಲ್ಲ.
ಸುಮಾರು ಅರವತ್ತರ ದಶಕದಿಂದ, ಭಾರತದಲ್ಲಿ ವೈಜ್ಞಾನಿಕವಾಗಿ ಹಳೆ ತಳಿಯ ಬೀಜಗಳನ್ನು ಸಂಗ್ರಹಿಸಿ Germplasm ಬ್ಯಾಂಕುಗಳಲ್ಲಿ ಇಡಲಾಗಿದೆ ಮತ್ತು ಕಾಲಕಾಲಕ್ಕೆ ಆ ತಳಿಗಳ ಸಂಶೋಧನೆ ಮಾಡಿ, ಅದರಿಂದ ಬೇಕಾದ ಗುಣಾಣುಗಳನ್ನು ಆಧುನಿಕ ತಳಿಗಳಿಗೆ ವರ್ಗಾಯಿಸಿ ಇನ್ನಷ್ಟು ಅಭಿವೃದ್ಧಿ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಾ ಬಂದಿದೆ.
ಇತ್ತೀಚೆಗಂತೂ, ಆಧುನಿಕ ಜೈವಿಕ ತಂತ್ರಜ್ಞಾನದಿಂದ ಹಿಂದೆಂದೂ ಸಾಧ್ಯವಾಗದೇ ಇದ್ದ ರೀತಿಯಲ್ಲಿ ಬೀಜಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಆಧುನಿಕ ತಂತ್ರಜ್ಞಾನದಿಂದ ಜೈವಿಕ ವೈವಿಧ್ಯದ ಸಂರಕ್ಷಣೆ ಮತ್ತಷ್ಟು ಪುಷ್ಟವಾಗಿ ನಡೆಯುತ್ತಿದೆ.
ಸುಮಾರು 2050ರ ಹೊತ್ತಿಗೆ ಪ್ರಪಂಚದ ಜನಸಂಖ್ಯೆ 9 ಬಿಲಿಯನ್ ಆಗುತ್ತದೆಂದು ಹೇಳಲಾಗುತ್ತಿದೆ. ಜನಸಂಖ್ಯೆ ಜಾಸ್ತಿ ಆದಷ್ಟೂ ಪರಿಶುದ್ಧವಾದ ಭೂಮಿಯೂ ಕ್ಷೀಣಿಸುತ್ತಾ ಬರುತ್ತಿದೆ. ಹವಾಮಾನ ಬದಲಾವಣೆಯಿಂದ ಅಂತರ್ಜಲವೂ ಬತ್ತುತ್ತಿದೆ. ಜೊತೆಗೆ ಅಭಿವೃದ್ಧಿಯಾಗುತ್ತಿರುವ ರಾಷ್ಟ್ರಗಳು ಸಕಲ ರೀತಿಯಲ್ಲಿ ಅಭಿವೃದ್ಧಿ ಹೊಂದುವ ಕಾತುರತೆಯಲ್ಲಿ, ವಿವಿಧ ಕೈಗಾರಿಕೋದ್ಯಮಗಳಿಗೆ ಫಲವತ್ತಾದ ಕೃಷಿ ಭೂಮಿಯನ್ನು ಕೊಡತೊಡಗಿವೆ. ಅಂದರೆ, 2050ರ ವೇಳೆಯಲ್ಲಿ 9 ಬಿಲಿಯನ್ ಜನರ ಹೊಟ್ಟೆ ತುಂಬಿಸಲು ಬೇಕಾಗುವ ಆಹಾರವನ್ನು, ಕ್ಷೀಣಿಸುತ್ತಿರುವ ಕೃಷಿ ಭೂಮಿಯಲ್ಲಿ, ಅತಿ ಕಡಿಮೆ ನೀರನ್ನು ಬಳಸಿ ಉತ್ಪತ್ತಿ ಮಾಡುವ ವ್ಯವಸಾಯ ತಂತ್ರಜ್ಞಾನ ಬೇಕಾಗುತ್ತದೆ. ಹಾಗೆ ಮಾಡಿದಲ್ಲಿ, ಈ ಸಾಂದ್ರವಾದ ವ್ಯವಸಾಯದಿಂದ ಪರಿಸರದ ಮೇಲೆ ಆಗತಕ್ಕಂಥ ಪರಿಣಾಮಗಳನ್ನು ತಡೆಗಟ್ಟಬಹುದು. ಮುಂಬರುವ ಕ್ಲಿಷ್ಟ ಪರಿಸ್ಥಿತಿಗೆ ಆಧುನಿಕ ತಂತ್ರಜ್ಞಾನವನ್ನು ಒಪ್ಪಿಕೊಳ್ಳದೇ ಬೇರೆ ದಾರಿಯಿಲ್ಲ. ಕೃಷಿ ಚಟುವಟಿಕೆಯಿಂದಾಗಿ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗಿದೆ. ಕೆಲವು ದುಷ್ಪರಿಣಾಮಗಳನ್ನು ತಂತ್ರಜ್ಞಾನದಿಂದ ಹಿಮ್ಮೆಟ್ಟಿಸಲು ಸಾಧ್ಯ. ಆದರೆ ಎಲ್ಲವನ್ನೂ ಪರಿಹರಿಸುವುದು ಅದರಿಂದ ಸಾಧ್ಯವಿಲ್ಲ. ಖಂಡಿತ ಆಧುನಿಕ ತಂತ್ರಜ್ಞಾನದಿಂದ ಸಂಗೋಪನಾ ಕೃಷಿ ಮಾಡಬಹುದು. ಮಾನವನ ಕೃಷಿಯೇತರ ಚಟುವಟಿಕೆಗಳಿಂದ ಆಗುತ್ತಿರುವ ಹವಾಮಾನ ಬದಲಾವಣೆ (ಹೆಚ್ಚಾಗಿ ಖಗೋಳ ತಾಪಮಾನದಿಂದ)ಗಳನ್ನು ಎದುರಿಸಬೇಕಾದರೆ ತಾಪಮಾನವನ್ನು ಎದುರಿಸುವ ಮತ್ತು ಅತಿ ಕಡಿಮೆ ನೀರಿನಲ್ಲಿ ಬೆಳೆಯುವ ತಳಿಗಳನ್ನು ತಯಾರು ಮಾಡಬೇಕಾಗಿದೆ. ಆ ಕಾರಣಕ್ಕಾಗಿಯೇ ಜೈವಿಕ ತಂತ್ರಜ್ಞಾನದ ತಳಿಗಳು ವಿಶ್ವದ ವಿವಿಧ  ಪ್ರಯೋಗಾಲಯಗಳಲ್ಲಿ ತಯಾರಾಗುತ್ತಿವೆ. ಪರಿಸರ ಬದಲಾವಣೆಯನ್ನು ತಡೆ ಹಿಡಿಯುವುದರ ಜೊತೆಗೇ, ಬದಲಾದ ಪರಿಸರದಲ್ಲಿ ಕೃಷಿ ಮಾಡತಕ್ಕಂಥ ತಳಿಗಳನ್ನೂ ತಯಾರಿಸಬೇಕಾಗಿದೆ. ಪಂಡಿತ್ ನೆಹರು ಹೇಳಿದ ಹಾಗೆ-''Everything can wait, but not agriculture''ಎಂಬ ಮಾತನ್ನು ದಿನನಿತ್ಯದ ಮಂತ್ರವಾಗಿಸಿಕೊಂಡು ಮುಂಬರುವ ದಶಕಗಳಲ್ಲಿ ಆಧುನಿಕ ಕೃಷಿ ಅಳವಡಿಸಿಕೊಳ್ಳಲೇಬೇಕು.

- ಪ್ರೊ. ಶಾಂತು ಶಾಂತಾರಾಮ್
ಐಯೋವ ರಾಜ್ಯ ಕೃಷಿ ವಿವಿ
Shanthus@iastate.edu


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!