ಅದು 12ನೇ ಶತಮಾನ. ಕ್ರಾಂತಿಪುರುಷ ಜಗಜ್ಯೋತಿ ಬಸವೇಶ್ವರರ ಕಾಲ.
ಒಮ್ಮೆ ಬಸವೇಶ್ವರರು ದಾರಿಯಲ್ಲಿ ಹೋಗುವಾಗ ಶಿವಶರಣ ಹರಳಯ್ಯ ಎದುರಾಗಿ, ಭಕ್ತಿಪೂರ್ವಕವಾಗಿ ಶರಣು ಎನ್ನುತ್ತಾರೆ. ಅದಕ್ಕೆ ಪ್ರತಿಯಾಗಿ ಬಸವೇಶ್ವರರು ಕೂಡ ಶರಣು ಶರಣಾರ್ಥಿ ಎಂದು ಹೇಳುತ್ತಾರೆ.
ಅಷ್ಟೇ, ಆ ಒಂದು ಮಾತಿನಿಂದ ಹರಳಯ್ಯ ಕುಗ್ಗಿ ಹೋಗುತ್ತಾರೆ. 'ವಂದಿಸಿದ್ದಕ್ಕೆ ಪ್ರತಿಯಾಗಿ ಬಸವೇಶ್ವರರು ಶರಣು ಶರಣಾರ್ಥಿ ಎಂದುಬಿಟ್ಟರು. ಅವರ ಋಣದಲ್ಲಿ ನಾನು ಮುಳುಗಿದೆ' ಎಂದುಕೊಳ್ಳುತ್ತಾರೆ. ಮನೆಗೆ ಬಂದರೂ ಅದೇ ಚಿಂತೆ ಅವರನ್ನು ಕಾಡುತ್ತಿರುತ್ತದೆ. ಪತಿಯನ್ನು ಗಮನಿಸುವ ಪತ್ನಿ ನೀಲಾಂಬಿಕೆ ಚಿಂತೆಗೆ ಕಾರಣ ಏನು ಎಂದು ಪ್ರಶ್ನಿಸುತ್ತಾರೆ.
'ನಾನು ದಾರಿಯಲ್ಲಿ ಬರುವಾಗ ಬಸವೇಶ್ವರರು ಸಿಕ್ಕರು. ಶರಣು ಎಂದೆ. ಅದಕ್ಕೆ ಪ್ರತಿಯಾಗಿ ಅವರು ಶರಣು ಶರಣಾರ್ಥಿ ಎಂದು ಬಿಟ್ಟರು. ನನಗೆ ಅವರು ಆ ರೀತಿ ಹೇಳುವುದೇ ? ನಾನೀಗ ಅವರ ಋಣದಲ್ಲಿದ್ದೇನೆ. ಆ ಋಣವನ್ನು ತೀರಿಸುವ ಬಗೆ ತಿಳಿಯುತ್ತಿಲ್ಲ' ಎನ್ನುತ್ತಾರೆ ಹರಳಯ್ಯ.
ತೊಡೆ ಚರ್ಮದಲ್ಲಿ ಪಾದರಕ್ಷೆ
'ಅಷ್ಟೇ ತಾನೆ, ನಮ್ಮ ತೊಡೆಯ ಚರ್ಮ ತೆಗೆದು ಅದರಲ್ಲಿ ಬಸವೇಶ್ವರರಿಗೆ ಪಾದರಕ್ಷೆ ಮಾಡಿಕೊಟ್ಟರಾಯಿತು' ಎಂದು ಸಲಹೆ ನೀಡುತ್ತಾರೆ ನೀಲಾಂಬಿಕೆ. ಅದೇ ರೀತಿ ದಂಪತಿ ಪಾದರಕ್ಷೆ ಮಾಡಿಕೊಂಡು ಹೋಗಿ ಬಸವೇಶ್ವರರ ಮುಂದಿಡುತ್ತಾರೆ. ಆದರೆ, ಬಸವೇಶ್ವರರು ಅದನ್ನು ಕಾಲಿಗೆ ಧರಿಸದೆ ತಲೆಯ ಮೇಲಿಟ್ಟುಕೊಳ್ಳುತ್ತಾರೆ. 'ಚಮ್ಮಾರಗೆ ಸಮನಾರು' ಎನ್ನುತ್ತಾರೆ.
ಆದರೆ, ಅಲ್ಲಿಯ ರಾಜ ಅದೇ ಪಾದರಕ್ಷೆಗಳನ್ನು ಕಾಲಿಗೆ ಧರಿಸಿದಾಗ ಮೈಯಲ್ಲಿ ತೀವ್ರವಾದ ಉರಿ ಉಂಟಾಗುತ್ತದೆ. ಕೊನೆಗೆ ಹರಳಯ್ಯ ಪಾದರಕ್ಷೆ ತಯಾರಿಸಲು ಬಳಸುವ ನೀರನ್ನು ತಂದು ಚಿಮುಕಿಸಿದಾಗ ಮೈಯ್ಯಲ್ಲಿನ ಉರಿ ಕಡಿಮೆಯಾಗಿ ರಾಜ ನಿರಾಳನಾಗುತ್ತಾನೆ. ಇಂತಹ ಹರಳಯ್ಯ ಅವರನ್ನು ಗುರುವಾಗಿ ಸ್ವೀಕರಿಸಿದವರೇ ಹರಳಯ್ಯ ಸಮಗಾರ ಸಮಾಜದವರು. ಅಂದರೆ, ಪಾದರಕ್ಷೆ ತಯಾರು ಮಾಡುವುದನ್ನೇ ಮೂಲ ಕಸುಬನ್ನಾಗಿ ಮಾಡಿಕೊಂಡ ಚಮ್ಮಾರರು. ಈ ಸಮಾಜದವರಿಗೆ ಒಂದೊಂದು ಕಡೆ ಒಂದೊಂದು ಹೆಸರಿದೆ. ಹಿಂದೂ ಸಮಗಾರ, ಮೋಚಿ, ಮೋಚಿಗಾರ, ಚಾಂಬಾರ್, ಚಂಬಾಗ, ಚಮ್ಮಾರ ಎಂದು ಕರೆಯುವುದುಂಟು. ಹೀಗಾಗಿ ನಾನಾ ಜಿಲ್ಲೆಗಳಲ್ಲಿ ನಾನಾ ರೀತಿಯ ಜಾತಿ ಪ್ರಮಾಣ ಪತ್ರಗಳನ್ನು ಪರಿಶಿಷ್ಟ ಜಾತಿಗೆ ಸೇರಿದ ಈ ಸಮಾಜದವರಿಗೆ ವಿತರಿಸಲಾಗುತ್ತದೆ. ಇನ್ನು ಬೀದರ್ ಜಿಲ್ಲೆಯಲ್ಲಿ ಹರಳಯ್ಯ ಸಮಗಾರ ಎಂದು ಕರೆಯುವ ಈ ಸಮಾಜದವರಿಗೆ ಅಲ್ಲಿ ಒಂದು ವಿಶೇಷವಿದೆ.
ಬೀದರ್ ಜಿಲ್ಲೆಯ ವಿಶೇಷ
ಸಣ್ಣಪುಟ್ಟದಕ್ಕೂ ಪೊಲೀಸ್ ಠಾಣೆ ಅಥವಾ ಕೋರ್ಟ್ ಮೆಟ್ಟಿಲೇರುವ ಕಾಲವಿದು. ಇಂಥ ಸನ್ನಿವೇಶದಲ್ಲೂ ಬೀದರ್‌ನಲ್ಲಿ ಹರಳಯ್ಯ ಸಮಗಾರ ಸಮಾಜ ಈ ವರೆಗೆ ಠಾಣೆ ಅಥವಾ ಕೋರ್ಟ್ ಕಟಕಟೆ ಹತ್ತಿಲ್ಲ. ಇದನ್ನು ನಂಬಲು ಕೊಂಚ ಕಷ್ಟವೇ ಆಗಬಹುದು.
ಆದರೂ ನಿಜ. ಹರಳಯ್ಯ ಸಮಗಾರ ಸಮಾಜ ಈ ವರೆಗೆ ಪೊಲೀಸ್ ಠಾಣೆ ಅಥವಾ ನ್ಯಾಯಾಲಯದ ಮುಖ ನೋಡಿಲ್ಲ. ಹಾಗಾದರೆ ಆ ಸಮಾಜದಲ್ಲಿ ತಂಟೆ, ತಕರಾರು ಇಲ್ಲವೇ ? ಎಂಬ ಪ್ರಶ್ನೆ ಕೇಳಬಹುದು. ಯಾಕಿಲ್ಲ, ಖಂಡಿತಾ ಇದೆ. ಏನೇ ವ್ಯಾಜ್ಯ ಎದುರಾದರೂ ಅದನ್ನು ಬಗೆಹರಿಸಿಕೊಳ್ಳಲು ಹರಳಯ್ಯ ಸಮಗಾರ ಸಮಾಜದಲ್ಲಿ ಪಂಚ ಕಮಿಟಿ ಇದೆ. ಆ ಕಮಿಟಿ ಕೊಟ್ಟಿದ್ದೇ ತೀರ್ಪು. ಹೇಳಿದ್ದೇ ನ್ಯಾಯ. ಈವತ್ತಿಗೂ ಬೀದರ್ ಜಿಲ್ಲೆಯಲ್ಲಿ ಈ ಪದ್ಧತಿ ಚಾಚೂತಪ್ಪದೆ ನಡೆದುಕೊಂಡು ಬಂದಿದೆ.
ಪದ್ಧತಿ ಪ್ರಕಾರ ಸಮಾಜದಲ್ಲಿ ಯಾವುದೇ ವ್ಯಾಜ್ಯ ಉಂಟಾದರೆ ಮೊದಲು ಅದನ್ನು ಪ್ರಮುಖನಿಗೆ ತಿಳಿಸಬೇಕು. ಬಳಿಕ ಪಂಚ ಕಮಿಟಿಯಲ್ಲಿ ವ್ಯಾಜ್ಯಕ್ಕೆ ಸಂಬಂಧಿಸಿದ ವಿಷಯ ಮಂಡನೆಯಾಗುತ್ತದೆ. ಇದಕ್ಕೂ ಮುನ್ನ ಸಂಘದಲ್ಲಿ ಶುಲ್ಕವಾಗಿ 350 ರುಪಾಯಿ ಪಾವತಿಸಬೇಕು. ಬಳಿಕ ಪಂಚ ಕಮಿಟಿ ಸಭೆ ಸೇರುತ್ತದೆ. ಸಭೆಗೆ ಮುನ್ನ ವಾದಿ ಮತ್ತು ಪ್ರತಿವಾದಿಗಳಿಗೆ ಸಂಘದಿಂದ ನೇಮಕಗೊಂಡ ವ್ಯಕ್ತಿಯಿಂದ ನೋಟಿಸ್ ರವಾನೆಯಾಗುತ್ತದೆ. ಪ್ರತಿ ನೋಟಿಸ್‌ಗೆ ಶುಲ್ಕ 250 ರುಪಾಯಿ.
ಪಂಚ ಕಮಿಟಿ ತೀರ್ಮಾನ
ಬೀದರ್‌ನ ಮಂಗಲ್‌ಪೇಟೆಯಲ್ಲಿರುವ ಮಂದಿರದಲ್ಲಿ ಪಂಚ ಕಮಿಟಿ ಸಭೆ ಸೇರಿ ವ್ಯಾಜ್ಯವನ್ನು ಇತ್ಯರ್ಥಗೊಳಿಸುತ್ತದೆ. ನಮ್ಮ ಸಮಾಜದ ಯಾವುದೇ ಪ್ರಕರಣ ಕಳೆದ 60 ವರ್ಷದಿಂದ ಪೊಲೀಸ್ ಠಾಣೆ ಮೆಟ್ಟಿಲೇರಿಲ್ಲ. ನ್ಯಾಯಾಲಯದ ಮೊರೆ ಹೋದವರೂ ಇಲ್ಲ ಎನ್ನುತ್ತಾರೆ ಸಮಾಜದ ಮುಖಂಡ ಸುಭಾಷ್ ಟೀಳೇಕರ ಅವರು.
ಒಂದು ವೇಳೆ ಯಾವುದಾದರೂ ಕೇಸು ಠಾಣೆಗೆ ಹೋಗಬೇಕಾದರೆ ಅಥವಾ ಹೋಗಿದೆ ಎಂದರೆ ಸಂಬಂಧಪಟ್ಟ ಠಾಣೆಯವರೇ ಬಂದು ಸಮಾಜದ ಮುಖಂಡರನ್ನು ಸಂಪರ್ಕಿಸುತ್ತಾರಂತೆ. ಆಗ ನಾವೆಲ್ಲಾ ಸಭೆ ಸೇರಿ ಆ ಕೇಸು ಬಗೆಹರಿಸುತ್ತೇವೆ ಎನ್ನುತ್ತಾರೆ ಸುಭಾಷ್. ಒಟ್ಟಿನಲ್ಲಿ ಪಂಚ ಕಮಿಟಿ ನಿರ್ಣಯ ಎಂದರೆ ಅದು ನ್ಯಾಯಾಲಯದ ತೀರ್ಪಿಗಿಂತ ಖಡಕ್. ಅದನ್ನು ವಿರೋಧಿಸುವುದಿಲ್ಲ. ಏನೇ ಆದರೂ ಎಲ್ಲರೂ ಅದಕ್ಕೆ ಬದ್ಧರಾಗಿ ನಡೆದುಕೊಳ್ಳುತ್ತಾರೆ. ಠಾಣೆ, ಕೋರ್ಟ್‌ಗೆ ಹೋದರೆ ಹಣ ಖರ್ಚಾಗುವುದರ ಜೊತೆಗೆ ಹೋದವರ ನೆಮ್ಮದಿಯೂ ಹಾಳಾಗುವುದು ಖಚಿತ ಹೀಗಾಗಿ ಹರಳಯ್ಯ ಸಮಗಾರ ಸಮಾಜದ ಬೀದರ್ ಜಿಲ್ಲೆಯ ಈ ಪಂಚ ಕಮಿಟಿ ಎಲ್ಲರಿಗೂ ಮಾದರಿಯಾಗಿದೆ.
ಆಗಬೇಕಿದೆ ಸುಧಾರಣೆ
ಹರಳಯ್ಯ ಸಮಗಾರ ಸಮಾಜದವರು ಸ್ಥಿತಿವಂತರೇನಲ್ಲ. ರಸ್ತೆ ಬದಿಯಲ್ಲಿ ಕುಳಿತು ಚಪ್ಪಲಿ ಹೊಲೆಯುವ ಅಥವಾ ರಿಪೇರಿ ಮಾಡುವುದೇ ಅವರ ಕಾಯಕ. ಹಾಗೆಂದು ಸಮಾಜದ ಎಲ್ಲರೂ ರಸ್ತೆ ಬದಿಯಲ್ಲೇ ಈ ಕೆಲಸ ಮಾಡುತ್ತಾರೆ ಎಂದು ಹೇಳುವಂತಿಲ್ಲ. ಪಾದರಕ್ಷೆಗಳ ಶೋರೂಂ ಇಟ್ಟವರು, ತಯಾರು ಮಾಡಿದ ಪಾದರಕ್ಷೆಗಳನ್ನು ವಿದೇಶಗಳಿಗೆ ರಫ್ತು ಮಾಡುವವರೂ ಇದ್ದಾರೆ. ನಮ್ಮಲ್ಲಿ ಶೇ.25ರಷ್ಟು ವಿದ್ಯಾವಂತರಿದ್ದಾರೆ. ಶೇ. 25ರಷ್ಟು ಮಂದಿ ಮಧ್ಯಮ ವರ್ಗದವರು. ಇನ್ನುಳಿದ ಶೇ.50ಷ್ಟು ಮಂದಿ ರಸ್ತೆ ಬದಿ ಚಪ್ಪಲಿ ತಯಾರಿಸುವ, ರಿಪೇರಿ ಮಾಡುವ ಕಾಯಕದಿಂದಲೇ ಹೊಟ್ಟೆ ತುಂಬಿಸಿಕೊಳ್ಳುವವರು ಎನ್ನುತ್ತಾರೆ ಹರಳಯ್ಯ ಸಮಗಾರ ಸಮಾಜದ ರಾಜ್ಯಾಧ್ಯಕ್ಷ ಜಗದೀಶ ಬೆಟಗೇರಿ.
ಈ ಸಮಾಜದವರ ಜನಸಂಖ್ಯೆ ಅಂದಾಜು 30 ಲಕ್ಷ. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವ ಸಮುದಾಯವಿದು. ಇನ್ನು ರಾಜಕೀಯ ಪ್ರಾತಿನಿಧ್ಯವಂತೂ ಇಲ್ಲವೇ ಇಲ್ಲ. 1982ರ ಬಳಿಕ ಈ ಸಮಾಜದಿಂದ ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆ ಸದಸ್ಯರಾದವರು ಇಲ್ಲ. ಬೆಳಗಾವಿಯ ಆರ್.ಡಿ.ಕಿತ್ತೂರ್ ಅವರು ಮಂತ್ರಿಯಾಗಿದ್ದೇ ಕೊನೆ. ಬಳಿಕ ರಾಜಕೀಯದಲ್ಲಿ ಯಾರೂ ಕಣ್ಣುಬಿಟ್ಟಿಲ್ಲ.
ಇದುವರೆಗೆ ಕುಲ ಕಸುಬನ್ನು ಬಿಡದೆ ನಡೆಸಿಕೊಂಡು ಬರುತ್ತಿರುವ ಈ ಸಮಾಜದವರು ತಯಾರಿಸುವ ಪಾದರಕ್ಷೆಗಳಿಗೆ ವಿದೇಶಗಳಲ್ಲಿಯೂ ಭಾರಿ ಬೇಡಿಕೆ ಇದೆ. ಹೀಗಾಗಿಯೇ ನಿಪ್ಪಾಣಿಯ ಮದಬಾವಿ ಎಂಬಲ್ಲಿ ಬೃಹತ್ ಕಾರ್ಖಾನೆಯೇ ಇದೆ. ಅಲ್ಲಿಂದ ವಿದೇಶಗಳಿಗೆ ಪಾದರಕ್ಷೆಗಳು ಭಾರಿ ಪ್ರಮಾಣದಲ್ಲಿ ರಫ್ತಾಗುತ್ತವೆ. ಇನ್ನು ಕೊಲ್ಲಾಪುರದ ಚಪ್ಪಲಿ ಎಂದರೆ ಭಾರಿ ಫೇಮಸ್ಸು. ಅದನ್ನು ತಯಾರಿಸುವುದೂ ಕರ್ನಾಟಕದ ಸಮಗಾರ ಸಮುದಾಯದವೇ ಎಂದು ಜಗದೀಶ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಸರ್ಕಾರಿ ಸ್ವಾಮ್ಯದ ಲಿಡ್ಕರ್ ಸಂಸ್ಥೆಗೂ ನಾವೇ ಪಾದರಕ್ಷೆಗಳನ್ನು ಪೂರೈಕೆ ಮಾಡುತ್ತೇವೆ ಎನ್ನುತ್ತಾರೆ ಅವರು. ಧಾರ್ಮಿಕ ವಿಚಾರಗಳ ಬಗ್ಗೆ ಹೇಳುವುದಾದರೆ ಮಹಾರಾಷ್ಟ್ರದ ಖಂಡೋಬಾ ಎಂಬ ದೇವರನ್ನು ಇವರು ಪೂಜಿಸುತ್ತಾರೆ. ರೇಣುಕಾ ಯಲ್ಲಮ್ಮ ಮನೆ ದೇವರು. ಬಸವೇಶ್ವರರ ಪ್ರಭಾವದಿಂದ ಸಮಾಜದ ಶೇ.90ರಷ್ಟು ಮಂದಿ ಮಾಂಸಾಹಾರ ತ್ಯಜಿಸಿದ್ದಾರೆ. ಎಲ್ಲ ಸಮುದಾಯಗಳಂತೆ ಇವರಲ್ಲೂ ಈ ಹಿಂದೆ ಮೂಢನಂಬಿಕೆಗಳಿತ್ತು. ಮೈಮೇಲೆ ದೇವರು ಬರುತ್ತದೆ. ಆ ದೇವರು ಹೇಳಿದಂತೆ ಕೇಳಬೇಕು ಎಂದು ನಂಬಿದ್ದ ಜನ ಇವರು. ಈಗ ಅದೆಲ್ಲಾ ಸ್ವಲ್ಪ ಕಡಿಮೆಯಾಗಿದೆ.
ಪ್ರಮುಖವಾಗಿ ನಮಗೆ ರಾಜಕೀಯ ಪ್ರಾತಿನಿಧ್ಯ ಬೇಕು. ನಮ್ಮ ಸಂಘಕ್ಕೆ ಬೆಂಗಳೂರಿನ ನಾಗರಭಾವಿಯಲ್ಲಿ ಸರ್ಕಾರ ನಿವೇಶನ ಮಂಜೂರು ಮಾಡಿದೆ. ಅದರಲ್ಲಿ ಶಾಲೆ, ಕಾಲೇಜು ಮತ್ತು ಹಾಸ್ಟೆಲ್ ಕಟ್ಟಡ ನಿರ್ಮಿಸಲು ಸರ್ಕಾರ ಅನುದಾನ ಒದಗಿಸಬೇಕು.
-ಜಗದೀಶ ಬೆಟಗೇರಿ, ರಾಜ್ಯಾಧ್ಯಕ್ಷ, ಹರಳಯ್ಯ ಸಮಗಾರ ಸಮಾಜ
- ಕೆ.ವಿ.ಪ್ರಭಾಕರ
prabhukolar@yahoo.com