'ಶ್ರುತಿ ಸೇರಿದೆ, ಹಿತವಾಗಿದೆ' ಅಂತೇಳಿ ಕೆಜೆಪಿ ಮಾಜಿ ಪ್ರೆಸ್ಡೆಂಟ್ರು ಧನಂಜಯಪ್ನೋರು ವಸಿ ಖುಸಿಯಾಗೇ ಹಾಡ್ಕಂಡು ವೋಯ್ತಾಯಿದ್ರು.
ನಮ್ ಅಬ್ಬೇಪಾರಿ ಹೈದ ಮೈಲಾರಿ ಬೆಕ್ಕು ಅಡ್ಡ ವೊದಂಗೆ ಅವ್ರುಗೆ ಅಡ್ಡ ವೊಬುಟ್ಟ. 'ನಮುಸ್ಕಾರ ಕರಾವಳಿ ಕಿಂಗು ಧನಂಜಯಪ್ನೋರ್ಗೆ. ಏನ್ ಸಮಾಚಾರ? ಈವತ್ತು ವೊಳ್ಳೇ ಮೂಡ್ನಾಗೆ ಇರಂಗದೆ' ಅಂತೇಳಿ ಕೇಳೇಬುಟ್ಟ.
'ವೂ ಕಣ್ಲಾ ಮೈಲಾರಿ, ನಮ್ ಪಕ್ಸ ಈವಾಗ ಸ್ಟಾರ್ ಪಕ್ಸ ಆಗೋಬುಟ್ಟದೆ. ಅದುಕ್ಕೆ ಖುಸಿ ತಡ್ಕಳಕ್ಕೆ ಆಗ್ದೇ ಬಿದ್ದು ವೊದ್ದಾಡಂಗೆ ಆಗೋಗದೆ. ಬಾರ್ಲಾ ಕರಾವಳಿ ವೋಟ್ಲುಗೆ ವೋಗಿ ಬರಾವ. ನಿಂಗೆ ಪಿಸ್ ಕರಿ ಕೊಡುಸ್ತೀನಿ' ಅಂದ್ರು ಧನಂಜಯಪ್ನೋರು.
'ಅದೇನುದು ಸ್ಟಾರ್ ಪಕ್ಸ. ಕ್ರಿಸ್‌ಮಿಸ್ ಹಬ್ಬುಕ್ಕೆ ಮನೆ ಮುಂದ್ಲಾಗಡೆ ನಕ್ಸತ್ರ ಕಟ್ಟುಸ್ದಂಗೆ ಪಾರ್ಟಿ ಅಪೀಸು ಮುಂದ್ಲಾಗಡೆ ಸ್ಟಾರು ಕಟ್ಟಾಕಿದ್ದೀರ' ಅಂದ ಮೈಲಾರಿ.
'ನೀನು ಜೀರೋ ಕ್ಯಾಂಡ್ಲು ಬಲ್ಪು ಆಡ್ದಂಗೆ ಆಡ್ತಿಯಲ್ಲೋ, ಸ್ಟಾರ್ ಪಕ್ಸ ಅಂದ್ರೆ ಅದಲ್ಲ. ಸಿಕ್ಕಾಪಟ್ಟೆ ಸ್ಟಾರ್ಸು ನಮ್ ಪಕ್ಸುಕ್ಕೆ ಬಂದ್ಬುಟ್ಟವ್ರೆ. ಪೂಜಾಗಾಂಧಿ, ಶ್ರುತಿ ಸೇರ್ಕಂಬುಟ್ಟವ್ರೆ. ಇನ್ನಾ ಬರೋರು ಸ್ಯಾನೆ ಜನ ಅವ್ರೆ. ಈವಾಗೇಳು ನಮ್ದು ಸ್ಟಾರ್ ಪಕ್ಸ ಹೌದಲ್ಲೋ ?' ಅಂದ್ರು ಧನಂಜಯಪ್ನೋರು. 'ಐಶ್ವರ್ಯ ರೈನೂ ಕರ್ಕಂಡು ಬಂದ್ಬುಡಿ. ಆವಾಗ ಸೂಪರ್ ಸ್ಟಾರ್ ಪಕ್ಸ ಆಗೋಯ್ತದೆ' ಅಂದ ಮೈಲಾರಿ. 'ಸುಮ್ಕಿರಲೇ, ನನ್ ಬುಡುಕ್ಕೆ ಬಿಸ್ನೀರು ಕಾಯಿಸ್ಬೇಡ. ಹಳೇದುನ್ನ ಕೆದ್ಕಿ ನನ್ ವೊಟ್ಟೆ ಯಾಕೆ ವುರುಸ್ತೀಯ' ಅಂತೇಳಿ ಧನಂಜಯಪ್ನೋರು ಸಿಟ್ಟು ಮಾಡ್ಕಂಡು ವೊಂಟೋದ್ರು. ಅಯ್ಯೋ ಕೆಜೆಪಿ ಲೀಡ್ರುಗೆ ಅಪಾರ್ಥ ಬರಂಗೆ ಮಾತಾಡ್ಬುಟ್ನಲ್ಲ' ಅಂತೇಳಿ ಮೈಲಾರಿ ಬ್ಯಾಸ್ರ ಮಾಡ್ಕಂಡು ಹಂಗೇ ಗಾಂಧಿ ನಗ್ರುಕ್ಕೆ ವೋದ. ಅಲ್ಲಿ ಹೀರೋಯಿನ್ನು ರಮ್ಯಾ ಮೇಡಮ್ಮು ಈರುಳ್ಳಿ ದ್ವಾಸೆ ತಿಂತಾಯಿದ್ರು. 'ಅರೆ, ಇದೇನಕ್ಕ ಮಟಮಟ ಮಧ್ಯಾಹ್ನ ಈರುಳ್ಳಿ ದ್ವಾಸೆ ತಿಂತಾಯಿದ್ದೀರಿ?' ಅಂತೇಳಿ ಮೈಲಾರಿ ಕೇಳ್ದ. 'ನಾನ್‌ಸೆನ್ಸ್, ನಾನು ಯಾವ್ ಸೀಮೆ ಅಕ್ಕ ಕಣಲೇ ನಿಂಗೆ ಮುಂಡೇದೆ. ನಂಗೆ ನೀರ್ ದ್ವಾಸೆ ಆಗಾಕಿಲ್ಲ, ಅದುಕ್ಕೆ ಈರುಳ್ಳಿ ದ್ವಾಸೆ ತಿಂತಾಯಿರಾದು' ಅಂದ್ರು ರಮ್ಯಾ ಮೇಡಮ್ಮು.
'ಅದುಕ್ಕೆ ನೀರ್ ದ್ವಾಸೆ ಪಿಚ್ಚರ್ರೂ ಮಾಡಾಕಿಲ್ಲ ಅಂತ ಯೋಳ್ಬುಟ್ರಂತೆ. ನಿಮ್ಮುನ್ನ ನಂಬ್ಕಂಡು ಸಿನ್ಮಾ ಮಾಡೋ ಪ್ರೊಡ್ಯೂಸರ್ಸ್ ಕಥೆ ಏನಾಗೋದು ಯೋಳಿ. ನೀವು ಯಾವ್ ದ್ವಾಸೆನಾದ್ರೂ ತಿಂದ್ಕಳಿ. ಪ್ರೊಡ್ಯೂಸರ್ ತಲೆಮ್ಯಾಲೆ ಮಾತ್ರ ದ್ವಾಸೆ ವುಯಕ್ಕೆ ವೋಬೇಡಿ' ಅಂದ್ಬುಟ್ಟು ಮೈಲಾರಿ ಅಲ್ಲಿಂದ ಪೇರಿ ಕಿತ್ತ. 'ಅವ್ನು ಕನ್ನಡದಲ್ಲಿ ಏನೋ ಯೋಳ್ದ. ನಂಗೆ ಅರ್ಥ ಆಗ್ಲಿಲ್ಲ. ಏನದು?' ಅಂತೇಳಿ ರಮ್ಯ ಮೇಡಮ್ಮು ಪಕ್ದಾಗೆ ಇದ್ದೋರ್ನ ಕೇಳುದ್ರು. 'ಡಿಸ್ನರಿ ತಕ್ಕಂಡು ಬತ್ತೀನಿರಿ' ಅಂತೇಳಿ ಅವ್ರೂ ಎದ್ದೋದ್ರು.
ಇತ್ಲಾಗೆ ಮೈಲಾರಿ ಸೀದಾ ಜೆಪಿ ನಗ್ರದಾಗೆ ಇರೋ ಅಂಬ್ರೀಸಣ್ಣೋರು ಮನೆಗೊಂಟೋದ. ಗೇಟ್ತವ ವೋಗಿ 'ಡಾಕುಟ್ರು ಅವ್ರಾ ?' ಅಂತ ಕೇಳ್ದ. 'ಅಲ್ಲಿದ್ದೋರು ರಾಂಗ್ ನಂಬರ್ ನಡಿ ಅತ್ಲಾಗೆ' ಅಂತೇಳಿ ಬೈದ್ರು. ಕಿಟಕಿನಾಗೆ ಅಂಬ್ರೀ ಸಣ್ಣ ನೋಡ್ಬುಟ್ಟು 'ಅವ್ನು ನಮ್ ಹೈದ ಕಳುಸ್ಲಾ ವೊಳಿಕ್ಕೆ' ಅಂದ್ರು.
ಮೈಲಾರಿ ಸೀದಾ ವೋಗಿ 'ನಮುಸ್ಕಾರ ಅಂಬ್ರೀಸಣ್ಣ' ಅಂತಂದ. 'ನಿನ್ ನಮುಸ್ಕಾರುಕ್ಕೆ ಬೆಂಕಿ ಹಾಕ. ಯಾಕ್ಲಾ ಬಂದೆ?' ಅಂದ್ರು ಅಂಬ್ರೀಸಣ್ಣ. 'ಮೈಗೆ ವುಸಾರಿಲ್ಲ ಕಣಣ್ಣ. ಆವಾಗಾವಾಗ ತಲೆ ಸುತ್ತುತಾಯಿರ್ತದೆ. ವಸಿ ನಿಮ್ತಾವ ನೋಡಿಸ್ಕಂಡು ವೋಗಾಣ ಅಂತ ಬಂದೆ' ಅಂದ ಮೈಲಾರಿ. 'ಲೇ ಬೇಕೂಪ, ನಾನೇನ್ಲ ನೋಡ್ಲಿ ನಿನ್ನ. ಇದೇನು ಡಾಕುಟ್ರು ಸಾಪು ಕೆಟ್ಟೋಯ್ತ. ನಡೀಲಾ ಆಚ್ಗೆ. ಬಂದ್ಬುಟ್ಟ ನನ್ ತಲೆ ತಿನ್ನಕ್ಕೆ' ಅಂತೇಳಿ ಅಂಬ್ರೀಸಣ್ಣ ಬೈದ್ರು.
'ಅಯ್ಯೋ ಇದ್ಯಾಕಣ್ಣೋ, ಬೆಳಿಗ್ಗೆ ಪೇಪ್ರಾಗೆ ನೋಡ್ದೆ. ಅಂಬ್ರೀಸುಗೆ ಡಾಕುಟ್ರು ಪದವಿ ಸಿಕ್ಕದೆ ಅಂತ ಬರ್ದಿದ್ರು. ವೊಸ್ದಾಗಿ ಸಾಪು ಏನರ ವೋಪನ್ ಮಾಡಿದ್ದೀರೇನೋ ಅಂತ ಬಂದಿದ್ದೀನಿ. ಸುಮ್ಕೆ ನೋಡ್ಬೇಡ ಕಣಣ್ಣ. ಪೀಸು ಮಡುಗ್ತೀನಿ' ಅಂತಂದ ಮೈಲಾರಿ. 'ವೊಟ್ಟೆಗೆ ಏನ್ಲಾ ತಿಂತೀಯ ನೀನು ? ಡಾಕುಟ್ರು ಅಂತಂದ್ರೆ ಜನುಗುಳ್ನ ನೋಡೋರು ಅಂದ್ಕಂಬುಟ್ಟೇನ್ಲಾ ? ಅದು ಬ್ಯಾರೆ. ಇಲ್ಲೇ ಕುಂತಿದ್ರೆ ಎಲ್ಡು ಬುಟ್ಟು ಕಳುಸ್ತೀನಿ. ನಡೀ ನಡೀ' ಅಂತೇಳಿ ಅಂಬ್ರೀಸಣ್ಣ ಗರಂ ಆಗೋಗಿ ಮೈಲಾರಿನ ವುಗ್ದು ವೋಡ್ಸುದ್ರು.
- ಕೆ.ವಿ.ಪ್ರಭಾಕರ್
prabhukolar@yahoo.com