ಅಂಕಣಗಳು

ಐದು ವರ್ಷದಲ್ಲಿ ಜರಡಿಯಾಗಿದ್ದು ಜನರ ವಿಶ್ವಾಸ

2008, ಮೇ 28. ವಿಧಾನಸೌಧದ ಸುತ್ತ ಜನಜಾತ್ರೆ. ಅಲ್ಲಿ ಜನಸಾಗರವೇ...

2008, ಮೇ 28. ವಿಧಾನಸೌಧದ ಸುತ್ತ ಜನಜಾತ್ರೆ. ಅಲ್ಲಿ ಜನಸಾಗರವೇ ಹರಿದಿತ್ತು. ಯಾವುದೇ ಮುಖ್ಯಮಂತ್ರಿಯ ಪದಗ್ರಹಣ ಸಂದರ್ಭದಲ್ಲೂ ಕಾಣದ ಜನಸ್ತೋಮ ಅಂದು ಅಲ್ಲಿ ಜಮಾಯಿಸಿತ್ತು. ಎಲ್ಲರ ಮುಖದಲ್ಲೂ ಏನೋ ಒಂದು ನಿರೀಕ್ಷೆ, ಕಾತರ ಮನೆಮಾಡಿತ್ತು. ಯಾವುದೋ ಮಹತ್ತರ ಬದಲಾವಣೆಗೆ ತಾವು ಸಾಕ್ಷಿಯಾಗುತ್ತಿರುವ ಭಾವನೆ ಅಲ್ಲಿದ್ದವರಲ್ಲಿತ್ತು. ಪ್ರಾಯಶಃ 1982ರಲ್ಲಿ ದಶಕಗಳ ಕಾಂಗ್ರೆಸ್ ಆಡಳಿತ ಕೊನೆಗೊಂಡು ಮೊದಲ ಬಾರಿ ರಾಜ್ಯದಲ್ಲಿ ಕಾಂಗ್ರೆಸೇತರ ಸರ್ಕಾರ (ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ) ರಚನೆಯಾದಾಗ ಇದ್ದ ಹೊಸತನದ, ಬದಲಾವಣೆಯ, ಸುಧಾರಣೆಯ ತುಡಿತ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಸರ್ಕಾರದ ಚುಕ್ಕಾಣಿ ಹಿಡಿದಾಗ ಕಂಡುಬಂದಿತ್ತು. ಅಷ್ಟಕ್ಕೂ ಅದೇ ಮೊದಲ ಬಾರಿ ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. 2004ರಲ್ಲಿ ಬಿಜೆಪಿಗೆ ಅತ್ಯಧಿಕ ಸ್ಥಾನ ಪ್ರಾಪ್ತವಾದರೂ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳಗಳು ಸಹ ಸಾಕಷ್ಟು ಸಂಖ್ಯೆಯ ಸೀಟುಗಳನ್ನು ಗೆದ್ದು ಅತಂತ್ರ ವಿಧಾನಸಭೆಯಲ್ಲಿ ಬಹುಮತದ ಆಟದಲ್ಲಿ ಪರಸ್ಪರ ಕೈಜೋಡಿಸಿ ಅಧಿಕಾರ ಹಂಚಿಕೊಂಡಿದ್ದವು. ಆ ಪರಿಯ ಅತಂತ್ರ ಜನಾದೇಶ ಆತನಕ ರಾಜ್ಯ ಕಂಡಿರಲಿಲ್ಲ. ಕಾಂಗ್ರೆಸ್ ಮತ್ತು ಜನತಾ ಪರಿವಾರದ ವಿವಿಧ ಅವತರಣಿಕೆಗಳ ನಡುವೆ 1982-1999ರವರೆಗೆ ಅಧಿಕಾರ ಆಚೀಚೆಯಾಗಿತ್ತು. ಆದರೆ 2004ರ ಪರಿಸ್ಥಿತಿ ಬೇರೆಯೇ ಇತ್ತು. ಯಾವುದೇ ಪಕ್ಷಕ್ಕೆ ಸ್ಪಷ್ಟ ಜನಾದೇಶ ಇರಲಿಲ್ಲ. ಆದರೆ 2008ರಲ್ಲಿ ಹಾಗಾಗಲಿಲ್ಲ. ಬಿಜೆಪಿ ಪರ ಜನ ಮತ ಚಲಾಯಿಸಿದರು. ಈ ಪಾಸಿಟಿವ್ ವೋಟ್ ಫಲವಾಗಿ ಬಿಜೆಪಿ ತನ್ನದೇ ಸ್ವಂತ ಶಕ್ತಿಯಿಂದ ಸರ್ಕಾರ ರಚಿಸುವಂತಾಯಿತು. ಸಹಜವಾಗಿಯೇ ಆ ಸಂದರ್ಭದಲ್ಲಿ ಪಾರದರ್ಶಕ, ಪ್ರಾಮಾಣಿಕ ಆಡಳಿತ, ಸರ್ವಾಂಗೀಣ ಅಭಿವೃದ್ಧಿಯೇ ಸರ್ಕಾರದ ತಾರಕಮಂತ್ರ ಎಂದೆಲ್ಲ ಹೇಳಲಾಯಿತು. ಯಡಿಯೂರಪ್ಪನವರಂತೂ ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ನಿರೀಕ್ಷೆಯ ಮೂಟೆ ಬಲು ಭಾರವಾಗಿತ್ತು. ಐದು ವರ್ಷ ಕಳೆದಿದೆ. ಬಿಜೆಪಿ ಸರ್ಕಾರ ತನ್ನ ಪೂರ್ಣಾವಧಿಯ ಕಡೆಯ ದಿನಗಳನ್ನು ದೂಡುತ್ತಿದೆ. ಯಾವುದೇ ಸಂದರ್ಭದಲ್ಲಿ ಚುನಾವಣಾ ಆಯೋಗವು ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆ ಮಾಡಲಿದೆ. ಬಿಜೆಪಿ ಸರ್ಕಾರ ತನ್ನ ಅವಧಿಯ ಕಡೆಯ ಬಜೆಟ್ ಅನ್ನು ಸಹ ಜನರ ಮುಂದಿಟ್ಟಿದೆ. ಇಷ್ಟಾದರೂ ಐದು ವರ್ಷಗಳ ಹಿಂದಿದ್ದ ನಿರೀಕ್ಷೆಯ ಮೂಟೆ ಹಾಗೇ ಇದೆ, ಇದರ ಜೊತೆಗೆ ನಿರಾಸೆ, ಭ್ರಮನಿರಸನದ ಮೂಟೆಗಳೂ ಬಿಜೆಪಿಯ ಬೆನ್ನಿಗೇರಿದೆ. ಮೋದಿ ಮಾದರಿ ಆಡಳಿತದ ಮಾತಿರಲಿ ಕನಿಷ್ಠ ಪ್ರಾಮಾಣಿಕ ಆಡಳಿತ ನೀಡುವಲ್ಲಿ ಸಹ ದಕ್ಷಿಣ ಭಾರತದ ಮೊಟ್ಟ ಮೊದಲ ಬಿಜೆಪಿ ಸರ್ಕಾರ ಎಡವಿದೆ.
ಆಪರೇಷನ್ ಕಮಲ
ಸರಳ ಬಹುಮತಕ್ಕೆ ನಾಲ್ಕು ಸ್ಥಾನದ ಕೊರತೆ ಬಂದು ಪಕ್ಷೇತರರ (5 ಮಂದಿ) ನೆರವಿನೊಂದಿಗೆ ಬಿಜೆಪಿ ಸರ್ಕಾರ ರಚನೆಯಾಯಿತು. ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಕೈಜೋಡಿಸಿದ್ದರೂ ಸರ್ಕಾರ ಉರುಳಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗೆ ಮಾಡಬೇಕಿದ್ದಲ್ಲಿ ಅವು ಬಿಜೆಪಿ ಶಾಸಕರ ಕುದುರೆ ವ್ಯಾಪಾರ ನಡೆಸಬೇಕಿತ್ತು. ಆದರೆ ಅಂದಿನ ರಾಜಕೀಯ ಪರಿಸ್ಥಿತಿ ಮತ್ತು ಸ್ಪಷ್ಟ ಜನಾದೇಶದ ಪ್ರಭಾವದಿಂದ ಆ ಎರಡು ಪಕ್ಷಗಳೂ ಅಂತಹ ಕೆಲಸಕ್ಕೆ ಕೈಹಾಕುವ ಸಾಧ್ಯತೆ ವಿರಳವಾಗಿತ್ತು. ಆದರೆ ಬಿಜೆಪಿ ಮತ್ತು ಬಿ.ಎಸ್. ಯಡಿಯೂರಪ್ಪನವರಿಗೆ ಉತ್ತಮ ಆಡಳಿತಕ್ಕೆ ಭದ್ರತೆ ಮುಖ್ಯ ಎನಿಸಿ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಗಾಳಹಾಕಿತು. ಮೊದಲು ಐದು ಮಂದಿ ನಂತರ ಇಬ್ಬರು ಆಮೇಲೆ ಇನ್ನಿಬ್ಬರು.. ಹಿಗೆ ನಿಯಮಿತವಾಗಿ ಪ್ರತಿಪಕ್ಷಗಳ ಶಾಸಕರ ಕೈಲಿ ರಾಜಿನಾಮೆ ಕೊಡಿಸಿ ಅವರನ್ನು ತಮ್ಮ ಒಡ್ಡೋಲಗಕ್ಕೆ ಕರೆತಂದಿತು. ಇದು ತಪ್ಪಲ್ಲ. ರಾಜಕೀಯ ಲೆಕ್ಕಾಚಾರದಲ್ಲಿ ಇದು ಯಾರೂ ಮಾಡದಿದ್ದ ಕ್ರಮವೂ ಆಗಿರಲಿಲ್ಲ. ನಮ್ಮ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಳುವ ಪಕ್ಷಕ್ಕೆ ಬಹುಮತ ತೀರಾ ಅಗತ್ಯವಾಗಿ ಬೇಕಾದ ಅರ್ಹತೆಯೂ ಹೌದು. ಆದರೆ ಹೀಗೆ ಮಾಡುವ ನೆಪದಲ್ಲಿ ಬಿಜೆಪಿ ಸರ್ಕಾರ ಆ ಆರಂಭಿಕ ದಿನಗಳಲ್ಲಿ ಜನಮೆಚ್ಚುವ, ಅವರಿಗೆ ಸರಿಕಾಣುವ ರೀತಿಯಲ್ಲಿ ಆಡಳಿತ ನಡೆಸುವುದಕ್ಕೆ ಆದ್ಯತೆ ನೀಡಬೇಕಿತ್ತು. ಆದರೆ ಆಪರೇಷನ್ ಕಮಲದ ಫಲವಾಗಿ ಪದೇಪದೆ ಮರುಚುನಾವಣೆಗಳು ಎದುರಾಗಿ ಅಲ್ಲಿ ತಮ್ಮ ಹುರಿಯಾಳುಗಳನ್ನು ಗೆಲ್ಲಿಸುವಲ್ಲಿಯೇ ಪಕ್ಷ ಮತ್ತು ಸರ್ಕಾರದ ಶ್ರಮ ವ್ಯಯವಾಗಿ ಆಡಳಿತ ನೇಪಥ್ಯಕ್ಕೆ ಸರಿಯಿತು. 1991ರಿಂದ 1996ರವರೆಗೆ ಪಿ.ವಿ. ನರಸಿಂಹರಾವ್ ಅವರು ಮೈನಾರಿಟಿಯಲ್ಲಿಯೇ ದೇಶವನ್ನು ಆಳಿದ್ದ ಉದಾಹರಣೆ ಬಿಜೆಪಿ ಕಣ್ಣ ಮುಂದಿತ್ತು. ಆದರೆ ಅಧಿಕಾರಕ್ಕೆ ಬಂದ ಮೊದಲ ಒಂದು ವರ್ಷದಲ್ಲಿ ರಾಜ್ಯಕ್ಕೆ ತಾನು ನೀಡಬೇಕೆಂದಿರುವ ಆಡಳಿತದ ರೂಪುರೇಷೆಯನ್ನು ಜನರ ಮುಂದೆ ತೆರೆದಿಡುವ ಬದಲು ಬಿಜೆಪಿ ಸರ್ಕಾರ ಚುನಾವಣೆಗಳ ಬಗ್ಗೆಯೇ ಹೆಚ್ಚು ಗಮನಹರಿಸಿತು. Stabilityಯ ಜರೂರತ್ತಿನ ನೆಪ ನೀಡಿ ಪಕ್ಷ ಹಾಗೂ ಸರ್ಕಾರ ತನ್ನ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದೂ ಆಯಿತು. ಆದರೆ ಈ ಭದ್ರತೆಯ ಬೆನ್ನಿಗೆ ಬಿದ್ದು ಸರ್ಕಾರ ತನ್ನ ಆಡಳಿತಕ್ಕೆ ಅಷ್ಟೇ ಸುಭದ್ರ ಅಡಿಪಾಯ ಹಾಕುವ ಅವಕಾಶವನ್ನು ಕಳೆದುಕೊಂಡಿದ್ದೂ ನಿಜ.
ಭ್ರಷ್ಟಾಚಾರ ಮತ್ತು ಭಿನ್ನಮತ
ಸಂಖ್ಯಾಬಲದಲ್ಲಿ ಸ್ಪಷ್ಟ ಮೇಲುಗೈ ಸಾಧಿಸಿದ ಬಳಿಕ ಸರ್ಕಾರದ ಲಕ್ಷ್ಯ ಸ್ಪಷ್ಟವಾಗಬೇಕಿತ್ತು. ಬಹುಮತದ ಮ್ಯಾಜಿಕ್ ನಂಬರ್ ಕಡೆಗೆ ತಲೆಕೆಡಿಸಿಕೊಳ್ಳದೆ ಮುಂದುವರಿಯಲು ಯಾವುದೇ ಅಡೆ-ತಡೆ ಇರಲಿಲ್ಲ. ಯಾವುದೇ ಸರ್ಕಾರಕ್ಕೆ ತಾನು ಅಧಿಕಾರಕ್ಕೆ ಬಂದ ಎರಡು ಹಾಗೂ ಮೂರನೇ ವರ್ಷಸ್ಥಿರತೆ ಮತ್ತು ನಿರಂತರತೆ ಕಾಲ. ತನ್ನ ನೀತಿ, ನಿಲವುಗಳನ್ನು ಕ್ರೋಢೀಕರಿಸಿಕೊಂಡು, ಆಡಳಿತದಲ್ಲಿ ಹಿಡಿತ ಸಾಧಿಸಿ ಅಂದುಕೊಂಡಿದ್ದನ್ನು ಸಾಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅವಧಿ. ಈ ಅವಧಿಯನ್ನು ಸಂಪೂರ್ಣವಾಗಿ ತನ್ನ ಲಾಭಕ್ಕೆ ಬಳಸಿಕೊಳ್ಳುವಲ್ಲಿ ಸಹ ಬಿಜೆಪಿ ಎಡವಿತು. ಅದಕ್ಕೆ ಮೂಲ ಕಾರಣವಾಗಿದ್ದು ಭ್ರಷ್ಟಾಚಾರದ ಆರೋಪ ಹಾಗೂ ಪಕ್ಷದೊಳಗೆ ಹೊಗೆಯಾಡಿದ ಭಿನ್ನಮತ. ಯಡಿಯೂರಪ್ಪ ಸರಕಾರಕ್ಕೆ ಬಹುಮತ ದಕ್ಕಿಸಿಕೊಡುವಲ್ಲಿ ಬಳ್ಳಾರಿಯ ರೆಡ್ಡಿ ಸಹೋದರರ ರಾಜಕೀಯ ತಂತ್ರಗಾರಿಕೆ ಪ್ರಮುಖಪಾತ್ರ ವಹಿಸಿತ್ತು. ಸರ್ಕಾರ ಅಲುಗಾಡದಂತಾದ ಪರಿಸ್ಥಿತಿಯಲ್ಲಿ ಸಹಜವಾಗಿಯೇ ಅವರು ಸರ್ಕಾರದಲ್ಲಿ ಹೆಚ್ಚಿನ ಹಿಡಿತಕ್ಕೆ ಪರಿತಪಿಸಿದರು. ಜೊತೆಗೆ ಸ್ವಪಕ್ಷೀಯರು ಮತ್ತು ಪಕ್ಷಾಂತರಿಗಳ ನಡುವೆ ಸೃಷ್ಟಿಯಾಗಿದ್ದ ಕಂದಕ ದಿನೇದಿನೆ ದೊಡ್ಡದಾಯಿತೇ ವಿನಹ ಅದನ್ನು ಮುಟ್ಟುವ ಕೆಲಸಕ್ಕೆ ಪಕ್ಷದ ಮುಖಂಡರು ಕೈಹಾಕದಿದ್ದುದು ಭಿನ್ನಮತಕ್ಕೆ ಎಡೆಮಾಡಿಕೊಟ್ಟಿತು. ಪಕ್ಷ ಮತ್ತು ಸರ್ಕಾರ ಎರಡೂ ಬೇರೆ ಬೇರೆ ದಿಕ್ಕಿನಲ್ಲಿ ಸಾಗುತ್ತಿವೆಯೇನೋ ಎಂಬ ಅನುಮಾನ ಮೂಡುವಂತಹ ಹೇಳಿಕೆಗಳು ತಲೆಗೊಬ್ಬರಂತೆ, ದಿನಕ್ಕೊಂದರಂತೆ ನಿತ್ಯ ರೂಢಿಯಾಯಿತು. ಇದಾವುದೂ ಸರ್ಕಾರ ಸೆಟಲ್ ಆಗಲು ಬಿಡಲೇ ಇಲ್ಲ. ಇದೇ ಸಂದರ್ಭದಲ್ಲಿ ಚೀನಾದಲ್ಲಿ ಉಂಟಾದ ಬೂಮ್‌ನಿಂದಾಗಿ ಅದಿರು ಗಣಿಗಾರಿಕೆಯ ಪ್ರಭಾವ ದಟ್ಟವಾಯಿತು. ಇದರ ಮುಂಚೂಣಿಯಲ್ಲಿದ್ದ ರೆಡ್ಡಿ ಸಹೋದರರು ಸಹಜವಾಗಿಯೇ ಅಕ್ರಮದ ಧೂಳು ಮೆತ್ತಿಸಿಕೊಂಡರು. ಬಳ್ಳಾರಿಯ ಗಣಿಗಳಾಳದಿಂದ ಸರ್ಕಾರ ನಿಯಂತ್ರಿಸುವ ಮಟ್ಟಕ್ಕೆ ಬೆಳೆದುನಿಂತರು. ಅಲ್ಲಿಂದ ಆರಂಭವಾದ ಭ್ರಷ್ಟಾಚಾರ ಅಕ್ರಮಗಳ ಆರೋಪಗಳ ಸರದಿ ಕ್ರಮೇಣ ಸರ್ಕಾರದ ಎಲ್ಲ ಅಂಗಗಳನ್ನೂ ಆವರಿಸಿಕೊಳ್ಳಲಾರಂಭಿಸಿ ಕಡೆಗೆ ಸ್ವತಃ ಸಿಎಂ ಕುರ್ಚಿಯಲ್ಲಿದ್ದ ಯಡಿಯೂರಪ್ಪ ಅವರನ್ನೂ ಬಿಡಲಿಲ್ಲ. ಇದೆಲ್ಲದರ ಪರಿಣಾಮ  ಎ್ಟಢಜ್ಠಟಿಛಟ್ಛಿಜ ಮಾಯವಾಯಿತು. ಅದೇ ವೇಳೆಗೆ ಕೇಂದ್ರದಲ್ಲಿ ಸಹ ಭ್ರಷ್ಟಾಚಾರದ ಹಗರಣಗಳ ಮಾಲಿಕೆ ಬಯಲಾಗಿ ಇಡೀ ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧದ ಕೂಗೂ ಗಟ್ಟಿಯಾಯಿತು. ಕರ್ನಾಟಕ ಭ್ರಷ್ಟಾಚಾರಕ್ಕೆ ಉದಾಹರಣೆ ಆಯಿತು. ಭಿನ್ನಮತ ಮತ್ತು ಭ್ರಷ್ಟಾಚಾರ ಎರಡೂ ಬಿಜೆಪಿ ಸರ್ಕಾರ ಟೇಕ್‌ಆಫ್ ಆಗದಂತೆ ನೆಲಕಚ್ಚಿ ನಿಲ್ಲಿಸಿತು. ಇಲ್ಲಿ ಎಲ್ಲಿಯೂ ಬಿಜೆಪಿ course correctionಗೆ ಮುಂದಾಗಲೇ ಇಲ್ಲ. ಕಡೆಗೆ ಯಡಿಯೂರಪ್ಪ ಅವರನ್ನು ಬದಲಿಸಿ ಸದಾನಂದ ಗೌಡರನ್ನು ತಂದು ಮುಂದೆ ಅವರ ಬದಲು ಜಗದೀಶ್ ಶೆಟ್ಟರ್ ಅವರನ್ನು ತಂದು ಕೂರಿಸಿತಾದರೂ ಅದು ಡ್ಯಾಮೇಜ್ ಕಂಟ್ರೋಲ್‌ನಂತಾಯಿತು. ಈ ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಸರ್ಕಾರ ಎಡವಿದ್ದು ವಿತ್ತ ನಿರ್ವಹಣೆಯಲ್ಲಿ. ದಶಕದ ಹಿಂದೆ ಆರ್ಥಿಕವಾಗಿ ಅತ್ಯಂತ ಪ್ರಭಾವಿ ನಿರ್ವಹಣಾ ರಾಜ್ಯ ಎಂದು ಗುರುತಿಸಿಕೊಂಡಿದ್ದ ಕರ್ನಾಟಕ ಇಂದು ಹಲವು ರಂಗಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಕಳೆದ ಐದು ವರ್ಷಗಳಲ್ಲಿ ರಾಜ್ಯ ಒಂದೊಂದೇ ಹೆಜ್ಜೆ ಹಿಂದೆ ಹೋಗಿದೆಯೇ ಹೊರತು ಪ್ರಗತಿ ಕಂಡಿಲ್ಲ. ಈ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ದರ 3 ಪರ್ಸೆಂಟೇಜ್ ಪಾಯಿಂಟ್‌ನಷ್ಟು ಕುಸಿದಿರುವುದು ಆರ್ಥಿಕ ಸಮೀಕ್ಷೆಯಿಂದ ತಿಳಿಯುತ್ತದೆ. ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ಸರ್ಕಾರ ಹಮ್ಮಿಕೊಂಡಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶಗಳು ಸಹ ಯಾವುದೇ ಪರಿಣಾಮಕಾರಿ ಫಲ ನೀಡಿಲ್ಲ ಎಂಬುದು ಉತ್ಪಾದನಾ ಕ್ಷೇತ್ರದಲ್ಲಿನ ತೀವ್ರ ಕುಸಿತ ಪ್ರತಿಬಿಂಬಿಸುತ್ತದೆ. ಇನ್ನು ಈ ಕಳೆದ ಐದು ವರ್ಷಗಳ ಅವಧಿಯಲ್ಲಿ ಸರ್ಕಾರದ ಸಾಲ ವ್ಯಾಪ್ತಿ ಹೆಚ್ಚಾಗಿರುವುದು ಸೂಕ್ತ ನಿರ್ವಹಣೆಯ ಕೊರತೆಗೆ ಸಾಕ್ಷಿ ಆಗಿದೆ. ಮಧ್ಯಪ್ರದೇಶ, ಛತ್ತೀಸ್‌ಗಡ, ಗುಜರಾತ್‌ನಲ್ಲಿ ಸತತ ಅವಧಿಗೆ ಅಧಿಕಾರ ಉಳಿಸಿಕೊಂಡಿರುವ ಬಿಜೆಪಿ ಸರ್ಕಾರಗಳ ನಿರ್ವಹಣೆಗೆ ಕರ್ನಾಟಕದ ಚೊಚ್ಚಲ ಬಿಜೆಪಿ ಸರ್ಕಾರದ ಆಡಳಿತ ನಿರ್ವಹಣೆಗೂ ಅಜಗಜಾಂತರವಿದೆ. ಪಾಸಿಟಿವ್ ವೋಟ್ ಅಲೆ ಮೇಲೆ ಅಧಿಕಾರಕ್ಕೆ ಬಂದ ಸರ್ಕಾರದ ಸಾಮೂಹಿಕ ವೈಫಲ್ಯ ಕಣ್ಣಿಗೆ ರಾಚುವಂತಿದೆ. ಇಲ್ಲಿ ಬಿಜೆಪಿ ಕಳೆದುಕೊಳ್ಳಬಹುದಾದದ್ದು ಮತಗಳನ್ನಷ್ಟೇ ಅಲ್ಲ, ಬದಲಿಗೆ ಜನರ ವಿಶ್ವಾಸ.  ಒಂದು ರಾಜಕೀಯ ಪಕ್ಷವಾಗಿ ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ ಅಥವಾ ಯಾವುದೇ ಪಕ್ಷವಿರಲಿ ಮತಗಳನ್ನು ಕೃಷಿ ಮಾಡಬಹುದು, ಆದರೆ ಜನರ ವಿಶ್ವಾಸವನ್ನು, perception ಅನ್ನು ಕೃಷಿ ಮಾಡುವುದು ಕಷ್ಟ. ಈ lost opportunity(ಕೈ ಸುಟ್ಟುಕೊಂಡ ಅವಕಾಶ)ಯನ್ನು  Last opportunity (ಕೊನೆ ಅವಕಾಶ) ಆಗದಂತೆ ತಡೆಯುವುದೇ ಈಗ ಬಿಜೆಪಿ ಮುಂದಿರುವ ಸವಾಲು. Tough Luck!


- ಕೆ.ಎಸ್.ಜಗನ್ನಾಥ್
jagannath.kudinoor@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ