ಅಂಕಣಗಳು

ರೊಚ್ಚಿಗೆದ್ರೆ ಮಳ್ವಳ್ಳಿ ಮಲ್ಲಮ್ಮ ರೇಜರ್ ಹಿಡಿಯಮ್ಮ

ಮಳ್ವಳ್ಳಿ ಕೈ ಪಕ್ಸದ ಲೇಡಿ ಲೀಡ್ರು ಮಲ್ಲಮ್ನೋರು ಯಾಕೋ ಏನೋ ಸ್ಯಾನೆ ಸಿಟ್ಟಾಬುಟ್ಟಿದ್ರು ಕಣೇಳಿ. ಸಿಟ್ಟು ಮಾಡ್ಕಂಡು ವೊಳ್ಳೆ ಹೆಬ್ಬಾವು ಥರ ಬುಸುಗುಟ್ಕಂಡು ವೋಡಾಡ್ತಾಯಿದ್ರು.
'ಅದ್ಯಾರು ಬತ್ತರೋ ಬರ್ಲಿ, ವೊಂದು ಕೈ ನೋಡೇಬುಡ್ತೀನಿ. ನನ್ನುನ್ನ ಏನಂಥ ತಿಳ್ಕಂಬುಟ್ಟವ್ರೆ. ನಾನು ಯಾರಂತ ಇನ್ನೂವೆ ಗೊತ್ತಿಲ್ಲ. ತಲೆ ತಗ್ದು ವೂರು ಬಾಗ್ಲುಗೆ ತೋರ್ಣ ಕಟ್ಬುಟ್ಟೇನು' ಅಂತೇಳಿ ಮಲ್ಲಮ್ನೋರು ಫುಲ್ ರಾಂಗ್ ಆಗ್ಬುಟ್ಟು ಕೂಗ್ತಾಯಿದ್ರು.
'ಸಾಂತಿ, ಸಾಂತಿ, ವಸಿ ಸಮಾಧಾನ ತಕ್ಕಳ್ಳಿ. ಈವಾಗ ಅದೇನಾಗೋಯ್ತು ಅಂತಾವ ಹಿಂಗೆ ಆವಾಜು ಬುಟ್ಕಂಡು ಸತಾಬ್ದಿ ರೈಲಂಗೆ ವೋಡಡ್ತಾಯಿದ್ದೀರಿ. ಅದ್ಯಾರು ಬತ್ತರೆ ಅಂತ ಯೋಳಿ' ಅಂತಂದು ಮೈಲಾರಿ ಎಂಟ್ರಿ ಕೊಟ್ಟ. 'ಬಾರ್ಲಾ ಬಾ. ನೋಡ್ಲಾ, ನಮ್ ಕೈ ಪಕ್ಸದ ಲೀಡ್ರುಸು ಈಕಿತ ಎಲೆಕ್ಸನ್ನಾಗೆ ನಂಗೆ ಟಿಕೆಟ್ಟು ಕೊಡಾಕಿಲ್ವಂತೆ. ನನ್ನುನ್ನ ಎದ್ರಾಕ್ಕಂಡು ವುಳೀತರೇನ್ಲಾ ಅವ್ರು' ಅಂದ್ರು ಮಲ್ಲಮ್ನೋರು.
'ಅಯ್ಯೋ ಸುಮ್ಕಿರಕ್ಕ, ಮಳ್ವಳ್ಳಿಗೆ ನೀನು ವನ್ಕೆ ವೊಬವ್ವ ಇದ್ದಂಗೆ. ನಿನ್ನುನ್ನ ಬುಟ್ಟು ಅದ್ಯಾರ್ಗೆ ಟಿಕೆಟ್ಟು ಕೊಟ್ಟಾರು. ಪಕ್ಸ ಮಲಿಕ್ಕಂಡು ಮಣ್ಣಾದ್ರೂ ನಿಂಗೇ ಅಲ್ವೇ ಕೊಡಾದು. ಯಾರೋ ನಿನ್ ತಲೆ ಕೆಡ್ಸವ್ರೆ ಬುಡು ಬುಡು' ಅಂದ ಮೈಲಾರಿ.
'ಇಲ್ಲಲೇ, ಎಲ್ಲ ಸೇರ್ಕಂಡು ಮಸ್ಲತ್ತು ಮಾಡ್ತಾವ್ರೆ. ನನ್ ನೆತ್ತಿ ಮ್ಯಾಲೆ ಮಸಾಲೆ ಅರ್ಯಕ್ಕೆ ಸ್ಕೆಚ್ಚು ಹಾಕ್ಕಂಬುಟ್ಟವ್ರೆ.  ಆ ಇಂಡಿಪೆಂಡೆಂಟು ಎಂಎಲ್‌ಎ ನರೇಂದ್ರಸ್ವಾಮಿಗೆ ಈಕಿತ ಟಿಕೆಟ್ಟು ಕೊಡ್ತರಂತೆ. ನಂಗೆ ವತ್ತಾರೆ ನ್ಯೂಸು ಬಂತು ಕಣ್ಲಾ. ಈವಾಗೇಳು ವುರೀತದೋ ಇಲ್ವೋ? ಆ ಇಸ್ಯ ಕೇಳಿ ನಂಗೆ ತಲೆ ಕೆಟ್ಟೋಗದೆ ಮೈಲಾರಿ. ಕೊಡ್ಲಿ ಅದೆಂಗೆ ಕೊಡ್ತಾರೋ ನಾನೂವೆ ನೋಡೇಬುಡ್ತೀನಿ. ಮುಲಾಜೇ ಇಲ್ಲ, ನನ್ ಹಳೇ ಅವ್ತಾರ ತೋರುಸ್ಬುಡ್ತೀನಿ' ಅಂದ್ರು ಮಲ್ಲಮ್ನೋರು.
'ಅಸಿಸಿ ಬುಡಿ, ಇಷ್ಟುಕ್ಕೆ ನೀವು ಕಮಲಹಾಸನ್ ಥರ ವಿಶ್ವರೂಪ ತೋರುಸ್ಬುಟ್ರೆ ಹೆಂಗೆ? ಜನ ಏನಂದಾರು? ಅದೇನು ನಿಮ್ದು ಹಳೇ ಅವ್ತಾರ ಅದುನ್ನಾದ್ರೂ ವಸಿ ಯೋಳಿ. ಕೇಳ್ಬುಟ್ಟು ಪುಣ್ಯ ಕಟ್ಕತೀವಿ' ಅಂದ ಮೈಲಾರಿ.
'ನಾನು ಯಾರ್ಲಾ? ಮೈಸೂರು ಮಹಾರಾಣಿ ಕಾಲೇಜ್ನಾಗೆ ವೋದ್ದೋಳು. ಅಲ್ಲೋಗಿ ಕೇಳುದ್ರೆ ಗೋಡೆ ಗೋಡೇನೂ ನನ್ ವಿಚಾರ ಯೋಳ್ತದೆ. ವೋದೋವಾಗ ಇಡೀ ಕಾಲೇಜ್ಗೆ ನಾನು ಡಾನ್ ಇದ್ದಂಗಿದ್ದೆ. ಕಾಲೇಜು ವೊಳಿಕ್ಕೆ ವೋಯ್ತಾಯಿದ್ದಂಗೆ ಜನ ಹಂಗೇ ಸೈಡ್ಗೆ ವೊಂಟೋಬುಡೋರು. ಯಾಕೇಳು ಮೂದೇವಿ?' ಅಂದ್ರು ಮಲ್ಲಮ್ನೋರು.
'ನಂಗೇನಕ್ಕ ಗೊತ್ತು, ಗಾಚಾರ ಯಾಕ್ಬೇಕು ಅಂತೇಳಿ ಇರ್ಬೋದು' ಅಂದ ಮೈಲಾರಿ. 'ಥೂತ್ತೇರಿಕೆ, ನಿನ್ ಬಾಯ್ಗೆ ನನ್ ಹಳೇ ಎಕ್ಡ ಸಿಕ್ಕಾಕ. ನನ್ ಸ್ಟೋರೀನೆ ಬ್ಯಾರೆ ಕಣ್ಲಾ' ಅಂದ್ರು ಮಲ್ಲಮ್ಮ.
'ಆಯ್ಯೋ ಕುಯ್ಬೇಡ ಕಣಕ್ಕಾ, ಇಸ್ಯ ಯೋಳು' ಅಂದ ಮೈಲಾರಿ. 'ಕಾಲೇಜ್ನಾಗೆ ನಾನು ಜೀನ್ಸು ಪ್ಯಾಂಟು, ಟೀ ಸರ್ಟು ಹಾಕ್ಕಂಡು ಜೇಬ್ನಾಗೆ ರೇಜರ್ರು ಮಡಿಕ್ಕಂಡು ವೋಡಾಡ್ತಾಯಿದ್ದೆ. ರೇಜರ್ ತೋರ್ಸಿ ಕಾಲೇಜು ಬಾಗ್ಲು ಮುಚ್ಚಿ ಅಂದ್ರೆ ಮುಚ್ಚೋರು, ತೆಗೀರಿ ಅಂದ್ರೆ ತೆಗೆಯೋರು. ಅಂಥಾ ಡಾನು ಈವಾಗ ಡೌನು ಆಗೋಗಿದ್ದೀನಿ' ಅಂತೇಳುದ್ರು ಮಲ್ಲಮ್ನೋರು.
'ಸೂಪರ್ ಕಣಕ್ಕ, ವೋಬವ್ವ ವನ್ಕೆ, ಕಿತ್ತೂರು ರಾಣಿ ಚನ್ನಮ್ಮ ಕತ್ತಿ ಮಡಿಕ್ಕಂಡಿದ್ರು. ನೀನು ರೇಜರ್ರು, ಸಂದಾಕದೆ ಸ್ಟೋರಿ' ಅಂತೇಳ್ದ ಮೈಲಾರಿ.
'ಹೌದು ಕಣಲೇ, ತಿರ್ಗ ರೇಜರ್ ಎತ್ಕತೀನಿ. ಸೀದಾ ಕೈ ಪಕ್ಸದ ಆಪೀಸ್ಗೆ ವೋಯ್ತೀನಿ. ರೇಜರ್ರು ಟೇಬಲ್ ಮ್ಯಾಲೆ ಮಡ್ಗಿ ಟಿಕ್ಕೆಟ್ಟು ಕೊಡ್ತೀರೋ ಇಲ್ವೋ? ಅಂತ ಆವಾಜು ಬುಡ್ತೀನಿ. ಆವಾಗ ನೋಡು ಹೆದ್ರುಕಂಡು ಮಳ್ವಳ್ಳಿ ಏನು ಸುತ್ತುಮುತ್ತ ಇರೋ ಕ್ಸೇತ್ರದ ಟೆಕೆಟ್ಟೆಲ್ಲಾ ನಂಗೆ ಕೊಟ್ಟಾಕ್ತರೆ. ಹೆಂಗದೆ ಐಡಿಯಾ ಮೈಲಾರಿ' ಅಂದ್ರು ಮಲ್ಲಮ್ಮ.
'ಚಂಡಾಲವಾಗಿ ಐತೆ. ಅಲ್ಲಕ್ಕೋ, ರೇಜರ್ರು ಮಡಿಕ್ಕಂಡು ವೋಗಕ್ಕೆ ನೀನೇನರ ಮಾಜಿ ರೌಡಿನಾ? ನ್ಯಾಸ್ನಲ್ ಪಾರ್ಟಿ ಲೀಡ್ರು ತಿಳೀತಾ. ಹಂಗೇನರ ಮಾಡುದ್ರೆ ಜನ ಏನಂದಾರು? ಇದೆಲ್ಲಾ ಬ್ಯಾಡ ಬುಡು' ಅಂದ ಮೈಲಾರಿ. 'ವೋಗಿ ವೋಗಿ ನಿಂತಾವ ಯೋಳಿದ್ನಲ್ಲ. ಕೋಣನ ಮುಂದ್ಲಾಗಡೆ ಕಿನ್ನರಿ ಬಾರಿಸ್ದಂಗೆ ಆಯ್ತು ಬುಡು' ಅಂತೇಳಿ ಮಲ್ಲಮ್ಮ ರೇಜರ್ರು ವುಡ್ಕಕ್ಕೆ ವೊಂಟ್ರು.

- ಕೆ.ವಿ.ಪ್ರಭಾಕರ್
prabhukolar@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡುವುದಿಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ

ಹೆಲಿಕಾಪ್ಟರ್‌ನಿಂದ ಉಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ, Video

ಹೀಗೂ ಉಂಟೆ?: BJP ಶಾಸಕನ ಬಂಗಲೆ ತೊಳೆಯಲು ಹೋದ ಅಗ್ನಿಶಾಮಕ ವಾಹನ; ವಿಡಿಯೋ ವೈರಲ್‌ ಬೆನ್ನಲ್ಲೇ ₹2,700 ದಂಡ!