ಈಗ ಬ್ರೇಕಿಂಗ್ ನ್ಯೂಸ್ ಕಾಲ. 24x7 ನ್ಯೂಸ್ ಚಾನೆಲ್ಗಳಲ್ಲಿ ಬ್ರೇಕಿಂಗ್ ನ್ಯೂಸ್ ಬರುತ್ತಲೇ ಇರುತ್ತದೆ. ಇದನ್ನು ನೋಡುವ ಜನ, ಮಾಹಿತಿ ಕೊಡುವ ಅಧಿಕಾರಿಗಳು ಕೂಡ ಅದಕ್ಕೆ ತಕ್ಕಂತೆ ಬದಲಾಗುತ್ತಿದ್ದಾರೆ. ವಿಶುಯಲ್ಸ್ ಲೇಟಾಗುತ್ತೆ. ಒಂದು ಬ್ರೇಕಿಂಗ್ ಕೊಡಿ ಸಾಕು ಎನ್ನುವ ಮಟ್ಟಕ್ಕೆ ಪರಿಸ್ಥಿತಿ ಬಂದು ನಿಂತಿದೆ. ಕಳೆದ ಶುಕ್ರವಾರ ರಾತ್ರಿ ಮೈಸೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿತ್ತು. ಆಗ ಟಿವಿಗಳಲ್ಲಿ ಮೈಸೂರಿನಲ್ಲಿ ಧಾರಾಕಾರ ಮಳೆ ಎಂಬ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು. ಆ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಚಾನೆಲ್ವೊಂದರ ವರದಿಗಾರನಿಗೆ ಫೋನ್ ಮಾಡಿ, ಗೋಕುಲಂನಲ್ಲಿ ಕಾರಿಗೆ ಬೆಂಕಿ, ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ದೌಡು ಎಂಬ ಬ್ರೇಕಿಂಗ್ ನ್ಯೂಸ್ ತಿಳಿಸಿದರು. ಈಗಷ್ಟೇ ಧಾರಾಕಾರ ಮಳೆ ಎಂಬ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದೀವಿ. ನೀವು ಹೇಳಿದ್ದನ್ನು ಹಾಕಿದ್ರೆ ಅಭಾಸ ಆಗೋದಿಲ್ವೆ ಎಂದು ಆ ವರದಿಗಾರ ಕೇಳಿದರು. ಆಗ ಆ ಅಧಿಕಾರಿ ಹೇಳಿದ್ದು ಏನ್ ಗೊತ್ತೆ. ಮಳೆ ಬರುವುದಕ್ಕೆ ಮೊದ್ಲೆ ಕಾರಿಗೆ ಬೆಂಕಿ ಅಂತಾ ಬದಲಾಯಿಸಿ ಕೊಡಿ ಸಾರ್.. ಎಂದಾಗ ಪತ್ರಕರ್ತ ಸುಸ್ತು!
ಬೆಂಬಿಡದ 'ಮಠ'
ಯಾಕೋ ಏನೋ ಮಠ ಎಂಬ ಪದಕ್ಕೂ ರಾಜಕಾರಣಿಗಳಿಗೂ ಆಗಿಬರುತ್ತಿಲ್ಲ. ರಾಜ್ಯದ ಪ್ರಮುಖ ರಾಜಕಾರಣಿಗಳನ್ನು ಸಮಾಜ ಪರಿವರ್ತನೆ ಸಂಸ್ಥೆಯ ಎಸ್.ಆರ್. ಹಿರೇಮಠ ಕಾಡಿದರೆ, ಶಾಸಕರು, ಭಾವಿ ಶಾಸಕರನ್ನು ರಾಜ್ಯ ಚುನಾವಣಾ ಆಯುಕ್ತ ಎಸ್.ಸಿ. ಚಿಕ್ಕಮಠ ಕಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆಗೆ ಮೊದಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಂದಿರುವುದು ಶಾಸಕರಿಗೆ, ಟಿಕೆಟ್ ಆಕಾಂಕ್ಷಿತರಿಗೆ ಪೀಕಲಾಟಕ್ಕೆ ಕಾರಣವಾಗಿದೆ. ವಿಧಾನಸಭೆ ಚುನಾವಣೆ ಮೊದ್ಲು ನಡೆದಿದ್ರೆ ಸ್ಥಳೀಯ ಸಂಸ್ಥೆಗಳ ಟಿಕೆಟ್ ಆಕಾಂಕ್ಷಿತರೆಲ್ಲಾ ಪೈಪೋಟಿಗೆ ಬಿದ್ದವರಂತೆ ಆಯಾ ಪಕ್ಷಗಳ ಪರ ಕೆಲಸ ಮಾಡೋರು. ಆಗ ಅನುಕೂಲವಾಗೋದು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಉಲ್ಟಾ ಪಲ್ಟಾ. ಶಾಸಕರು, ಟಿಕೆಟ್ ಆಕಾಂಕ್ಷಿತರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಿ, ಗೆಲವಿಗೆ ಶ್ರಮಿಸಬೇಕು. ಹೆಚ್ಚು ಸೀಟು ಗೆಲ್ಲಿಸಿದ್ರೆ ಮುಂದೆ ಎಲೆಕ್ಷನ್ನಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ. ಇಲ್ಲದಿದ್ದಲ್ಲಿ ಮಟಾಷ್ ಎಂಬ ಚಿಂತೆ. ಜತೆಗೆ ಆ ಎಲೆಕ್ಷನ್ ಜೊತೆಗೆ ಈ ಎಲೆಕ್ಷನ್ಗೂ ಬಂಡವಾಳ ಹೂಡ್ಬೇಕು ಎಂಬ ಪೀಕಲಾಟ. ಅಯ್ಯೋ ಪಾಪ ಈ ಪರಿಸ್ಥಿತಿ ಬರಬಾರದಿತ್ತು ಎಂದು ಎಲ್ಲಾ ಚಿಕ್ಕಮಠರನ್ನು ನೆನೆದು ಬೆಚ್ಚಿ ಬೀಳುತ್ತಿದ್ದಾರೆ.
ಹೀಗೊಂದು ಹೈಲೈಟಾಗುವ ಹಪಾಹಪಿ
ಹೀಗೂ ಕೆಲವರಿರುತ್ತಾರೆ, ಸ್ವಾಗತ, ಕಾರ್ಯಕ್ರಮ ನಿರೂಪಣೆ, ವಂದನಾರ್ಪಣೆ ಎಲ್ಲವನ್ನೂ ತಾವೇ ನಿರ್ವಹಿಸುವುದು. ಕಾರ್ಯಕ್ರಮ ಸಂಘಟಿಸುವುದೂ ಇವರೇ. ಉದ್ಘಾಟನೆ ವೇಳೆ ಫೋಟೋಗೂ ಇಣುಕುತ್ತಾರೆ. ಮೊನ್ನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದ ವೀರರಾಣಿ ಅಬ್ಬಕ್ಕ ದಶಮಾನೋತ್ಸವದ 2 ದಿನದ ಕಾರ್ಯಕ್ರಮದಲ್ಲೂ ಹೀಗೆಯೇ ಆಯಿತು. ಅಬ್ಬಕ್ಕ ಉತ್ಸವ 2 ವರ್ಷದಿಂದ ಸರ್ಕಾರಿ ಉತ್ಸವವಾದ್ದರಿಂದಲೋ ಏನೋ, ಸರ್ಕಾರಿ ಶಿಕ್ಷಕರೊಬ್ಬರು ಇಡೀ ಉತ್ಸವದ ಹೊಣೆ ಹೊತ್ತಂತೆ ವರ್ತಿಸುತ್ತಿದ್ದರು. ಕಾರ್ಯಕ್ರಮ ಸಂಘಟನೆ, ಅವಕಾಶ ಸಿಕ್ಕಲ್ಲೆಲ್ಲ ನಿರ್ವಹಣೆಗೆ, ಕೈಯಲ್ಲೇ ಪ್ರೆಸ್ನೋಟ್ ಹಿಡಿದುಕೊಂಡು ತಿರುಗುತ್ತಿದ್ದರು. ಉದ್ಘಾಟನೆ ವೇಳೆ ಸಂಜೆ ಬಾನಂಚಿನಲ್ಲಿ ಭಾಸ್ಕರ ಮರೆಯಾಗುತ್ತಿದ್ದರೆ, ಈ ಶಿಕ್ಷಕನ ಕೈಯಲ್ಲಿರುವ ಪ್ರೆಸ್ನೋಟ್ ಮಾತ್ರ ಮಾಧ್ಯಮದವರಿಗೆ ಎಟುಕುತ್ತಿರಲಿಲ್ಲ. ತಾನೂ ಕೊಡದೆ, ಇತರರಿಗೂ ಕೊಡಲು ಬಿಡದೆ ಠಾಕುಠೀಕಾಗಿ ಕಾರ್ಯಕ್ರಮ ನಿರ್ವಹಣೆಯಲ್ಲಿ ಬ್ಯುಸಿಯಾಗಿದ್ದರು. ಸಮಾರಂಭದ ವರದಿಗೆ ಬಂದ ಮಾಧ್ಯಮದವರನ್ನು ಕೇಳುವರರೇ ಇರಲಿಲ್ಲ ಎಂಬಂತಿತ್ತು ಪರಿಸ್ಥಿತಿ. ಈ ಬಗ್ಗೆ ಸಮಿತಿಯವರನ್ನು ಪ್ರಶ್ನಿಸಿದರೆ, ಅವರೂ ಮಾಡುತ್ತಿಲ್ಲ, ಇನ್ನೊಬ್ಬರಿಗೆ ಜವಾಬ್ದಾರಿಯನ್ನೂ ವಹಿಸುತ್ತಿಲ್ಲ ಎಂದು ಮುಸಿಮುಸಿ ಕೋಪಿಸುತ್ತಿದ್ದರು. ಬಹುಶಃ ಎಲ್ಲಿ ಉಳಿದವರು ಹೈಲೈಟ್ ಆಗುತ್ತಾರೆ ಎಂಬ ಅಂಜಿಕೆ ಶಿಕ್ಷಕನಿಗೆ ಇದ್ದಿರಬೇಕು.
ರೈಲುಗಳಲ್ಲಿ ಇಲಿಗಳ ಕಾಟಕ್ಕೆ ಲಿಖಿತ ದೂರು!
ರೇಲ್ವೆ ಇಲಾಖೆಗೆ ಮಂಗಳೂರು ಅಂದರೆ ಮೊದಲಿಂದಲೂ ಅಷ್ಟಕಷ್ಟೆ. ಅಂತಾರಾಷ್ಟ್ರೀಯ ಮಟ್ಟದ ನಿಲ್ದಾಣ ಮಾಡುವ ಬಗ್ಗೆ ಕೇಂದ್ರ ಬಜೆಟ್ ಘೋಷಣೆ ಮಾಡಿದ ಬಳಿಕ ಪ್ರಾಶಸ್ತ್ಯ ಸಿಗುತ್ತಿದೆ. ಮೊನ್ನೆ ಮಂಗಳೂರು ರೈಲು ನಿಲ್ದಾಣದ ಮೇಲ್ಸೇತುವೆ ಉದ್ಘಾಟನೆಗೆ ಸಚಿವರು, ಘಟಾನುಘಟಿ ಅಧಿಕಾರಿಗಳು ಬಂದಿದ್ದರು. ಸಿಕ್ಕಿದ್ದೇ ಚಾನ್ಸ್ ಎಂದು ರೈಲ್ವೆ ವಿಭಾಗೀಯ ಪ್ರಬಂಧಕ ಪಿಯೂಶ್ ಚಾವ್ಲಾ ಬಳಿ ಹೋರಾಟಗಾರರು ಗಂಟು ಬಿದ್ದು ರೈಲು ಲೋಪಗಳನ್ನು ಹೇಳತೊಡಗಿದರು. 'ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸಾರ್ವಜನಿಕ ಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆಗೆ ಹಣ ಸಂಗ್ರಹಿಸುವಂತಿಲ್ಲ.
ಆದರೆ ರೈಲು ನಿಲ್ದಾಣಗಳಲ್ಲಿ ಹಣ ಸಂಗ್ರಹಿಸುತ್ತಾರೆ' ಎಂದು ದೂರಿದರು ಅದಕ್ಕೆ ಚಾವ್ಲಾ 'ಆಯ್ತು, ಲಿಖಿತವಾಗಿ ದೂರು ನೀಡಿ' ಎಂದರು. ಬೆನ್ನು ಬಿಡದ ಹೋರಾಟಗಾರರು ರೈಲಲ್ಲಿ ಶುಚಿ ಇಲ್ಲ ಎಂದರು. ಇದಕ್ಕೂ ಲಿಖಿತವಾಗಿ ಬರೆದುಕೊಡಿ ಎಂದು ಅಧಿಕಾರಿ ಪ್ರತಿಕ್ರಿಯಿಸಿದರು.
ಅದೇ ಸಮಯಕ್ಕೆ ಅಲ್ಲಿದ್ದ ಗಣ್ಯರಿಗೆ, ಪತ್ರಕರ್ತರಿಗೆ ನಿಲ್ದಾಣದ ಕ್ಯಾಂಟಿನ್ನಿಂದಲೇ ಚಹಾ ಬಂತು. ತಕ್ಷಣ ಚಹಾ ಕಪ್ ಹಿಡಿದ ಹೋರಾಟಗಾರ ರೈಲು ನಿಯಮದಂತೆ 250 ಮಿ.ಲೀ. ಕಪ್ನಲ್ಲಿ ಚಹಾ ನೀಡಬೇಕು ಇಲ್ಲಿ ನೋಡಿ 150 ಮಿ.ಲೀ. ಕಪ್ನಲ್ಲಿ ಚಹಾ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಗಣ್ಯರ ಸಮ್ಮುಖದಲ್ಲಿ ಒಂದೇ ಸಮನೆ ಕಿರಿಕಿರಿ ಅನುಭವಿಸಿದ ಅಧಿಕಾರಿ 'ಹೆಚ್ಚು ಮಾತನಾಡಬೇಡಿ ಏನಿದ್ದರೂ ಲಿಖಿತವಾಗಿ ದೂರು ನೀಡಿ' ಎಂದು ಹೋರಾಟಗಾರರ ವಿರುದ್ಧ ಗರಂ ಆದರು. ಇಷ್ಟಾದರೂ ಬೆನ್ನು ಬಿಡದ ಹೋರಾಟಗಾರ 'ನಾನು ಚೆನ್ನೈಗೆ ರೈಲಲ್ಲಿ ಹೋಗುತ್ತಿರುವಾಗ ಅಮ್ಮ ಕೊಟ್ಟ ಚಿಪ್ಸ್, ಚಕ್ಕುಲಿ ತೆಗೆದುಕೊಂಡು ಹೋಗಿದ್ದೆ, ಎಲ್ಲ ತಿಂಡಿ ಇಲಿ ತಿಂದಿದೆ, ಇಲಿಗಳ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಕುಟುಕಿದರು. ಅವಮಾನದಿಂದ ಕಂಗೆಟ್ಟ ಹಿರಿಯ ಅಧಿಕಾರಿ 'ಆಯ್ತಪ್ಪಾ ನೀವು ಇಲಿಗಳ ವಿರುದ್ಧ ಲಿಖಿತವಾಗಿ ದೂರು ಕೊಡಿ' ಎಂದು ಬಿಟ್ಟರು!
- ನಂಬಿರಾಜ್