ಮಗನನ್ನು ಆಸ್ಪತ್ರೆಗೆ ಸೇರಿಸಿ ಆಗಲೇ ತಿಂಗಳಾಗುತ್ತಾ ಬಂತು. ಡಾಕ್ಟರು ಖಡಕ್ಕಾಗಿ ಏನೂ ಹೇಳುತ್ತಿಲ್ಲ. 'ಬಂದಿರುವ ಕಾಯಿಲೆ ಜ್ವರವೋ, ತಲೆನೋವೋ, ಕೀಲುನೋವೋ ಆಗಿದ್ದರೆ, ಇಂತಿಷ್ಟೇ ದಿನದಲ್ಲಿ ವಾಸಿಯಾಗುತ್ತದೆ ಎಂದು ಹೇಳಬಹುದಿತ್ತು. ಆದರೆ, ನಿಮ್ಮ ಮಗುವಿಗೆ ಬಂದಿರುವ ಕಾಯಿಲೆ ಅಂತಿಂಥದ್ದಲ್ಲ; ಕ್ಯಾನ್ಸರ್. ಅದಕ್ಕೆ ಚಿಕಿತ್ಸೆ ಕಷ್ಟ. ಆದರೂ ನಮ್ಮ ಪ್ರಯತ್ನ ನಾವು ಮಾಡ್ತೇವೆ. ಈ ದಿನಗಳಲ್ಲಿ ತುಂಬಾ ಜನ ಕ್ಯಾನ್ಸರ್ ಗೆದ್ದಿದ್ದಾರೆ. ಈ ಸಂಬಂಧವಾಗಿ ಪ್ರತಿ ತಿಂಗಳೂ ಪೇಪರಿನಲ್ಲಿ ಸುದ್ದಿ ಪ್ರಕಟವಾಗುತ್ತಿದೆ. ನಿಮ್ಮ ಮಗನ ಕಾಯಿಲೆಯೂ ಗುಣವಾಗಲಿ ಎಂದೇ ಪ್ರಾರ್ಥಿಸೋಣ. ಪ್ರಯತ್ನ ಮಾತ್ರ ನಮ್ಮದು. ಫಲಿತಾಂಶ ನಮ್ಮ ಕೈಯಲ್ಲಿಲ್ಲ' ಎನ್ನುತ್ತಿದ್ದಾರೆ. ಮುಂದೇನು ಮಾಡುವುದು? ಹತ್ತು ವರ್ಷದ ಹಿಂದೆ ಸಣ್ಣದೊಂದು ಸೂಚನೆಯನ್ನೂ ಕೊಡದೆ ಸತ್ತು ಹೋದ ಗಂಡನ ನೆನಪಿಗೆ ಇದ್ದವನು ಒಬ್ಬ ಮಗ. ಇವನು ಭವಿಷ್ಯದಲ್ಲಿ ಆಸರೆಯಾಗುತ್ತಾನೆ ಎಂದುಕೊಂಡರೆ ಏನಾಗಿ ಹೋಯಿತಲ್ಲ ಭಗವಂತಾ ಎಂದು ಯೋಚಿಸುತ್ತ, ಕ್ಯಾನ್ಸರ್ ಆಸ್ಪತ್ರೆಯ ಒಂದು ಮೂಲೆಯಲ್ಲಿ ಕೂತಿದ್ದಳು ಸರೋಜಮ್ಮ.
ಹೀಗಿರುವಾಗಲೇ ಆಪರೇಷನ್ ವಾರ್ಡ್‌ನಿಂದ ಡಾಕ್ಟರು ತುಂಬ ನಿಧಾನವಾಗಿ ನಡೆದು ಬರುವುದು ಕಾಣಿಸಿತು. ಅಷ್ಟೆ: ಸರೋಜಮ್ಮ ಗಡಿಬಿಡಿಯಿಂದ ಅವರತ್ತ ಓಡಿ ಹೋದಳು. ಸ್ವಲ್ಪ ಜೋರು ದನಿಯಲ್ಲೇ -'ಡಾಕ್ಟ್ರೆ ಡಾಕ್ಟ್ರೆ, ನನ್ನ ಮಗ ಪೂರ್ತಿ ಹುಶಾರಾದ್ನಾ? ನಿನ್ನೆ ಅವನಿಗೆ ಪ್ರಜ್ಞೆ ಇರಲಿಲ್ಲ. ಈಗ ಪ್ರಜ್ಞೆ ಮರಳಿದೆಯಾ? ಅವನು ಮಾತಾಡ್ತಾನಾ ಡಾಕ್ಟ್ರೆ? ಅವನಿಗೆ ಏನೂ ತೊಂದರೆ ಇಲ್ಲ ತಾನೆ? ಕ್ಯಾನ್ಸರ್‌ನಿಂದ ತುಂಬಾ ಜನ ಬಚಾವ್ ಆಗಿದ್ದಾರೆ ಅಂತೀರಲ್ಲ: ಅಂಥವರ ಪಟ್ಟಿಗೆ ನನ್ನ ಮಗನೂ ಸೇರ್ತಾನಾ ಡಾಕ್ಟ್ರೆ ಎಂದೆಲ್ಲ ಒಂದೇ ಸಮನೆ ಪ್ರಶ್ನೆ ಹಾಕಿದಳು. ಡಾಕ್ಟರು ತಣ್ಣನೆಯ ದನಿಯಲ್ಲಿ 'ಸಾರಿ' ಅಂದರು. ಸರೋಜಮ್ಮನಿಗೆ ಅದು ಸರಿಯಾಗಿ ಅರ್ಥವಾಗಲಿಲ್ಲ. ಏನಂದ್ರಿ ಡಾಕ್ಟ್ರೆ? ನನ್ನ ಮಗನನ್ನು ಯಾವತ್ತು ಡಿಸ್‌ಚಾರ್ಜ್ ಮಾಡ್ತೀರಿ ಎಂದು ಕೇಳಿದಳು.
ಡಾಕ್ಟರು ಅಲ್ಲಿಯೇ ನಿಂತರು. ಸರೋಜಮ್ಮನನ್ನು ಮರುಕದಿಂದ ನೋಡುತ್ತಾ ಹೇಳಿದರು: 'ವೆರಿ ಸಾರಿ. ನಿಮ್ಮ ಮಗ ನಿನ್ನೆ ಮಧ್ಯರಾತ್ರಿ ಹೋಗಿಬಿಟ್ಟ. ಅವನನ್ನು ಉಳಿಸಿಕೊಳ್ಳಲು ನಾವು ಶಕ್ತಿಮೀರಿ ಪ್ರಯತ್ನಿಸಿದ್ವಿ. ಆದರೆ ಸಾಧ್ಯವಾಗಲಿಲ್ಲ. ಕ್ಯಾನ್ಸರ್‌ನಿಂದ ಬಚಾವಾಗುವ ಅದೃಷ್ಟ ಕೆಲವೇ ಮಂದಿಗೆ ಮಾತ್ರ ಇರುತ್ತೆ. ಅಂಥವರ ಪಟ್ಟಿಯಲ್ಲಿ ನಿಮ್ಮ ಮಗ ಇರಲಿಲ್ಲ ಅಂದುಕೊಳ್ಳಿ' ಅಂದು ಬಿಟ್ಟರು.
ಈ ಮಾತನ್ನು ಸರೋಜಮ್ಮ ಖಂಡಿತ ನಿರೀಕ್ಷಿಸಿರಲಿಲ್ಲ. ಅದು ಆಸ್ಪತ್ರೆ ಸುತ್ತಲೂ ನೂರಾರು ಜನರಿದ್ದಾರೆ, ಡಾಕ್ಟರು, ನರ್ಸ್‌ಗಳು ಓಡಾಡುತ್ತಲೇ ಇದ್ದಾರೆ ಎಂಬುದನ್ನೂ ಮರೆತು ಆಕೆ ಭೋರಿಟ್ಟು ಅತ್ತಳು. ಅರ್ಧ ಗಂಟೆಯ ನಂತರ ಸಿಟ್ಟಿಗೆದ್ದವಳಂತೆ -ದೇವರಂತೆ ದೇವರು, ಎಲ್ಲಿದ್ದಾನೆ ಸ್ವಾಮಿ ಆ ದೇವ್ರು? ಮಕ್ಕಳು ಕಾಯಿಲೆ ಬಂದು ಸತ್ತು ಹೋಗ್ತಾ ಇವೆ. ಆದ್ರೂ ಅವನಿಗೆ ಕನಿಕರವಿಲ್ಲ. ಮಕ್ಕಳಿಗೆ ಕಾಯ್ಲೆ ಕೊಡೋನು ಹೇಗೆ ದೇವರಾಗ್ತಾನೆ ಸ್ವಾಮಿ? ಇಂಥ ಕ್ರೂರಿಯನ್ನು ನಾವೆಲ್ಲ ಪೂಜೆ ಮಾಡ್ತೀವಲ್ಲ, ಅದು ಅನ್ಯಾಯ ಅನ್ನಿಸಲ್ವ ಸ್ವಾಮಿ ಎಂದು ಎದುರು ಸಿಕ್ಕವರನ್ನೆಲ್ಲ ಕೇಳಿದಳು-'ಸಮಾಧಾನ ಮಾಡಿಕೊಳ್ಳಮ್ಮ' ಎಂದಷ್ಟೇ ಹೇಳಿ ಜನ ಹೋಗಿಬಿಟ್ಟರು. ಹದಿನೈದು ನಿಮಿಷದ ನಂತರ ಸರೋಜಮ್ಮನ ಮನಸ್ಸು ಕಂಟ್ರೋಲ್‌ಗೆ ಬಂತು. ಅದೇ ವೇಳೆಗೆ ಅಲ್ಲಿಗೆ ಬಂದ ಸರ್ಜನ್-ನಿಮ್ಮ ಮಗನೊಂದಿಗೆ ಸ್ವಲ್ಪ ಹೊತ್ತು ಇದ್ದು ಬನ್ನಿ. ಇನ್ನು 1 ಗಂಟೆಯ ನಂತರ ಅವನ ಶರೀರವನ್ನು ಮೆಡಿಕಲ್ ಆಸ್ಪತ್ರೆಗೆ ಕಳಿಸಲಾಗುತ್ತದೆ. ಈಗ ನಿಮ್ಮೊಂದಿಗೆ ನಮ್ಮ ಹೆಡ್ ನರ್ಸ್ ಇರುತ್ತಾರೆ. ಹೋಗಿ ನೋಡ್ಕೊಂಡು ಬನ್ನಿ' ಎಂದರು.
ಸರೋಜಮ್ಮ ತುಂಬ ನಿಧಾನವಾಗಿ ಒಂದೊಂದೇ ಹೆಜ್ಜೆ ಇಟ್ಟು ಬಂದಳು. ಅಚ್ಚ ಬಿಳುಪಿನ ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಮಗನ ಶವವನ್ನು ನೋಡಿ ಆಕೆಗೆ ದುಃಖ ಒತ್ತರಿಸಿಕೊಂಡು ಬಂತು. ಮತ್ತೆ ಹತ್ತು ನಿಮಿಷ ಗೋಳಾಡಿದಳು. ಆನಂತರ ಸರೋಜಮ್ಮನ ಹೆಗಲು ತಟ್ಟಿದ ನರ್ಸ್-'ಸಮಾಧಾನ ಮಾಡ್ಕೊಳ್ಳಮ್ಮಾ. ಈಗ ನಿಮ್ಮ ಮಗನ ತಲೆಗೂದಲನ್ನು ಕತ್ತರಿಸಿ ಕೊಡ್ತೇವೆ. ಆಗಬಹುದೆ? ದೇಹವನ್ನು ದಾನ ಮಾಡುವ ಮೊದಲು ನಾವು ಇದೊಂದು ಕೆಲಸ ಮಾಡಬಹುದು. ಕಳೆದು ಹೋದ ಕಂದನ ನೆನಪಿಗೊಂದು ಅವನ ಮುದ್ದಾದ ಕೂದಲನ್ನು ನೀವು ಇಟ್ಕೊಂಡಿರಬಹುದು' ಎಂದಳು.
'ಹಾಗೇ ಆಗಲಮ್ಮ' ಎಂದು ಸರೋಜಮ್ಮ ಹೇಳುತ್ತಿದ್ದಂತೆಯೇ ಆ ನರ್ಸ್ ಚಕಚಕನೆ ಮೃತ ದೇಹದ ತಲೆಗೂದಲನ್ನು ಕತ್ತರಿಸಿ ಒಂದು ಪ್ಲಾಸ್ಟಿಕ್ ಕವರ್‌ಗೆ ಹಾಕಿಟ್ಟಳು. ಅದನ್ನು ಎತ್ತಿಕೊಂಡು ಭಾವುಕಳಾದ ಸರೋಜಮ್ಮ ಹೇಳಿದಳು: ಕ್ಯಾನ್ಸರ್ ಎಂದು ಗೊತ್ತಾದಾಗ ನನ್ನ ಮಗ ಒಂದು ದಿನ ದೃಢವಾಗಿ ಹೇಳಿದ್ದ. ಅಮ್ಮಾ, ಒಂದು ವೇಳೆ ನಾನೇನಾದ್ರೂ ಸತ್ತು ಹೋದ್ರೆ ನನ್ನನ್ನು ಸುಡಬೇಡ. ಹೂಳಲೂ ಬೇಡ. ಹೀಗೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನನ್ನ ಶವವನ್ನು ಯಾವುದಾದ್ರೂ ಮೆಡಿಕಲ್ ಆಸ್ಪತ್ರೆಗೆ ಕೊಟ್ಟು ಬಿಡು. ಅದರಿಂದ ತುಂಬಾ ಜನರಿಗೆ ಉಪಯೋಗ ಆಗುತ್ತೆ ಎಂದಿದ್ದ. ಅವನ ಮಾತಿಗೆ ನಾನು ಒಪ್ಪಲಿಲ್ಲ. ಒಂದು ವೇಳೆ ಅಂಥ ಸಂದರ್ಭ ಬಂದ್ರೆ ಸಂಪ್ರದಾಯದ ಪ್ರಕಾರವೇ ಅಂತ್ಯಸಂಸ್ಕಾರ ಮಾಡ್ತೇನೆ ಅಂದಿದ್ದೆ. ಆಗ ಅವನು, ಅಂತ್ಯ ಸಂಸ್ಕಾರದಿಂದ ಏನಾಗುತ್ತಮ್ಮಾ? ಅದರಿಂದ ದೇಹ ಸುಟ್ಟು ಬೂದಿಯಾಗುತ್ತೆ. ಇಲ್ಲಾಂದ್ರೆ ಕೊಳೆತು ಕೊಳೆತು ಮಣ್ಣು ಸೇರುತ್ತೆ. ಅದರ ಬದಲು ಮೆಡಿಕಲ್ ಕಾಲೇಜಿಗೆ ದಾನ ಮಾಡಿದ್ರೆ ಎಷ್ಟೋ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತೆ ಅಂದಿದ್ದ. ಅವನದು ಚಿನ್ನದಂಥಾ ಮನಸು. ಅವನು ಚಿನ್ನದಂಥಾ ಹುಡುಗ ಎಂದೆಲ್ಲಾ ಹೇಳಿದಳು.
ನಂತರ, ಮಗನನ್ನು ಅಡ್ಮಿಟ್ ಮಾಡಿದ ಸಂದರ್ಭದಲ್ಲಿ ಆಸ್ಪತ್ರೆಯ ವಾರ್ಡ್‌ನಲ್ಲೇ ಇಟ್ಟುಕೊಂಡಿದ್ದ ನೀರಿನ ಬಾಟಲ್, ಬಟ್ಟೆ, ಫ್ಲಾಸ್ಕ್, ತಟ್ಟೆ ಮುಂತಾದ ವಸ್ತುಗಳನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಮನೆಗೆ ಬಂದಳು ಸರೋಜಮ್ಮ. ಬಾಗಿಲು ತೆರೆದು ಒಳಗೆ ಹೋಗುತ್ತಿದ್ದಂತೆ ಯಾವುದೋ ಅಪರಿಚಿತ ಸ್ಥಳಕ್ಕೆ ಬಂದಂಥ ಅನುಭವವಾಯಿತು. ಭಾರವಾದ ಹೆಜ್ಜೆಯೊಂದಿಗೆ ಮಗನ ರೂಂ ಹೊಕ್ಕಳು. ಅವನಿಗೆ ಸೇರಿದ ಗೊಂಬೆಗಳು, ಪುಸ್ತಕಗಳು, ಆಟದ ಸಾಮಾನುಗಳು, ತಲಾ ನಾಲ್ಕರ ಲೆಕ್ಕದಲ್ಲಿದ್ದ ಕ್ರಿಕೆಟ್ ಬ್ಯಾಟ್-ಬಾಲ್, ಹಾವು-ಏಣಿ ಆಟದ ಒಂದು ಚಾರ್ಟ್, ಮ್ಯಾಗ್ನೆಟಿಕ್ ಚೆಸ್ ಬೋರ್ಡ್...ಈ ಎಲ್ಲವನ್ನೂ ಮತ್ತೆ ಒಪ್ಪವಾಗಿ ಜೋಡಿಸಿದಳು. ಮಗ ಓದಲು ಕೂರುತ್ತಿದ್ದ ಟೇಬಲ್‌ನ ಮೇಲೆ, ಅವನ ತಲೆಗೂದಲನ್ನು ಬಾಟಲೊಂದಕ್ಕೆ ತುಂಬಿ ಇಟ್ಟಳು. ನಂತರ ಮಲಗುವ ಸಂದರ್ಭದಲ್ಲಿ ಆತ ಬಳಸುತ್ತಿದ್ದ ಬೆಡ್‌ಶೀಟ್, ತಲೆದಿಂಬು ಹಾಗೂ ಮಿಕ್ಕಿಮೌಸ್ ಗೊಂಬೆಯನ್ನು ಎತ್ತಿಕೊಂಡು ಸಮಾಧಾನವಾಗವಷ್ಟು ಅತ್ತಳು. ಈ ಮಧ್ಯೆಯೇ ರಾತ್ರಿಯಾಯಿತು. ನೆಪ ಮಾತ್ರಕ್ಕೆ ಊಟದ ಶಾಸ್ತ್ರ ಮುಗಿಸಿದ ಸರೋಜಮ್ಮ ನಿದ್ರೆಗೆ ಜಾರಿದಳು.
ಆನಂತರದ ಮೂರು ದಿನಗಳ ಕಾಲ ಮತ್ತೆ ಮತ್ತೆ ಮಗನನ್ನು ನೆನಪಿಸಿಕೊಂಡು ಗೋಳಾಡುವುದು, ಅದೇ ಸಂದರ್ಭದಲ್ಲಿ, ಹೀಗೆಲ್ಲ ಅನ್ಯಾಯ ಮಾಡಿದೆಯಲ್ಲ? ನೀನು ಮಾಡಿದ್ದು ಸರೀನಾ ದೇವ್ರೇ ಎಂದು ಕಾಣದ ಭಗವಂತನನ್ನು ಪ್ರಶ್ನಿಸುವುದು ಸರೋಜಮ್ಮನ ದಿನಚರಿಯೇ ಆಗಿ ಹೋಯ್ತು. ನಾಲ್ಕನೇ ದಿನ ಮಧ್ಯರಾತ್ರಿ, ಆಕೆಗೆ ಇದ್ದಕ್ಕಿದ್ದಂತೆ ಎಚ್ಚರವಾದಂತಾಯಿತು. ಏನೂ ಅರ್ಥವಾಗದಂಥ ಮಂಪರಿನ ಸ್ಥಿತಿ ಆಕೆಯದು. ಎದ್ದು ಲೈಟ್ ಹಾಕಿ, ಬೇರೇನೂ ತೋಚದೆ ಮಗ ಮಲಗುತ್ತಿದ್ದ ರೂಂಗೆ ಬಂದಳು. ಆ ರೂಂನ ಟೇಬಲ್ ಮೇಲೆ ಒಂದು ಪತ್ರವಿತ್ತು. ಪತ್ರದಲ್ಲಿರುವ ಕೈ ಬರಹ ಆಕೆಯ ಮಗನದ್ದೇ ಆಗಿತ್ತು. ಸರೋಜಮ್ಮ ಕುತೂಹಲದಿಂದ ನೋಡಿದಳು. ಅದರಲ್ಲಿ ಹೀಗಿತ್ತು:
ಪ್ರೀತಿಯ ಅಮ್ಮ, ಈ ವೇಳೆಗೆ ನೀನು ನೂರು ಬಾರಿಯಾದರೂ ಮಿಸ್ ಯೂ ಕಂದಾ ಎಂದು ಅತ್ತಿರ್ತೀಯ. ಮಗ ನನ್ನ ಕೈ ಬಿಟ್ಟು ಹೋದ, ನಾನಿನ್ನು ಒಂಟಿ, ಒಬ್ಬಂಟಿ ಎಂದು ಮತ್ತೆ ಮತ್ತೆ ಹೇಳಿಕೊಂಡಿರ್ತೀಯ. ಆದ್ರೆ ಅಮ್ಮಾ, ಹಾಗೆಲ್ಲಾ ಚಿಂತಿಸಬೇಡ. ಅನಿವಾರ್ಯವಾಗಿ ನಾನು ದೂರ ಬಂದಿರೋದು ನಿಜ. ಆದರೆ ನಾನು ನಿನ್ನನ್ನು ಮರೆತಿಲ್ಲ. ಮರೆಯೊದಾದ್ರೂ ಹೇಗೆ ಸಾಧ್ಯ? ನಾನು ನಿಂತ ಜಾಗದಲ್ಲಿಯೇ ದಿನಕ್ಕೆ ಕಡಿಮೆ ಅಂದ್ರೂ ನಲವತ್ತು ಬಾರಿ ಅಮ್ಮಾ ಅಂದಿರ್ತೇನೆ. ಅದು ನಿನಗೆ ಕೇಳಿಸದಷ್ಟು ದೂರದಲ್ಲಿ ನಾನಿದೀನಿ. ಅದೇ ಸಮಸ್ಯೆ. ಈಗ ಒಂದು ಕೆಲ್ಸ ಮಾಡು. ಒಂದು ಗಂಡು ಮಗೂನ ದತ್ತು ತಗೋ. ಹಾಗೆ ಮಾಡಿದ್ರೆ ನನ್ನ ರೂಂನಲ್ಲೇ ಅವನನ್ನೂ ಉಳಿಸಬಹುದು. ನಾನು ಇಟ್ಟುಕೊಂಡಿದ್ದ ಗೊಂಬೆಗಳನ್ನೇ ಅವನಿಗೂ ಕೊಡಬಹುದು. ಒಂದು ವೇಳೆ ನೀನು ಹೆಣ್ಣು ಮಗೂನ ದತ್ತು ತಗೊಂಡ್ರೆ ಅವಳಿಗೆ ಬೇರೆಯದೇ ಗೊಂಬೆ ತೆಗೆದುಕೊಡಬೇಕಾಗ್ತದೆ. ಯಾಕಂದ್ರೆ ಹುಡುಗರು ಇಷ್ಟಪಡುವ ವಸ್ತುಗಳನ್ನು ಹುಡುಗಿಯರು ಇಷ್ಟಪಡೋದಿಲ್ಲ...
ಅಮ್ಮಾ, ಒಂದು ವಿಷಯ ಗೊತ್ತಾ? ಈಗ ಬಂದಿದೀನಲ್ಲ, ಇದು ಬಹಳ ಒಳ್ಳೆಯ ಜಾಗ. ಅಜ್ಜಿ, ತಾತ, ಅಪ್ಪ ಎಲ್ರೂ ಇಲ್ಲಿದ್ದಾರೆ. ಅವಾಗವಾಗ ಸಿಕ್ತಾ ಇರ್ತಾರೆ. ಇಲ್ಲಿರುವ ದೇವದೂತರು ತುಂಬಾ ಒಳ್ಳೆಯವರು. ನಾನು ಹಕ್ಕಿಯ ಥರಾ ಹಾರಬೇಕು ಅಂದ್ರೆ ತಕ್ಷಣವೇ ಹಾರಾಡಿಸ್ತಾರೆ. ಈಜಾಡಬೇಕು ಅಂದ್ರೆ ಮೀನಿನ ಜೊತೆಗೆ ಬಿಡ್ತಾರೆ! ಮೊನ್ನೆ ಏನಾಯ್ತು ಗೊತ್ತಾ? ನಾನು ದೇವರನ್ನು ನೋಡಬೇಕು ಅಂದೆ. ತಕ್ಷಣವೇ ತಡಮಾಡಲಿಲ್ಲ. ನನ್ನನ್ನು ದೇವರ ಬಳಿಗೇ ಕರೆದೊಯ್ದರು. ಕ್ಯಾಲೆಂಡರಿನಲ್ಲಿ ಇದ್ದಾನಲ್ಲ, ಅದೇ ಥರಾ ಇದ್ದ ದೇವರು, ನನ್ನನ್ನು ಕರೆದು ತೊಡೆಯ ಮೇಲೆ ಕೂರಿಸಿಕೊಂಡಿತು. ತುಂಬ ಖುಷಿಯಿಂದ ಮಾತನಾಡಿಸಿತು. ಅದೇ ಸಮಯಕ್ಕೆ, ಅಮ್ಮನಿಗೆ ನಾನೊಂದು ಪತ್ರ ಬರೀಬೇಕು ದೇವರೇ ಎಂದು ಬೇಡಿಕೊಂಡೆ. ತಕ್ಷಣವೇ ಹಾಳೆ-ಪೆನ್ನು ಕೊಟ್ಟು, ಬರಿ ಮಗೂ, ತಪ್ಪದೇ ಪತ್ರ ಬರಿ ಎಲ್ಲಿದ್ದಾನೆ ಆ ಹಾಳಾದ ದೇವರು ಎಂಬುದು ನಿಮ್ಮ ಅಮ್ಮನ ಪ್ರಶ್ನೆ. ಮುದ್ದು ಮಕ್ಕಳು ಎಲ್ಲಿರ್ತಾರೋ ಅಲ್ಲೆಲ್ಲ ಇರ್ತೇನೆ ಎಂದು ದೇವರು ಹೇಳಿದ್ದಾನಮ್ಮಾ ಎಂದೂ ಸೇರಿಸಲು ಹೇಳಿದ. ನಿನ್ನ ಪ್ರಶ್ನೆಗೆ ಅದು ಉತ್ತರವಂತೆ...
'ಇನ್ನೊಂದ್ ಮಜಾ ಗೊತ್ತಾ? ಇವತ್ತು ಜೊತೇಲಿ ಊಟ ಮಾಡೋಣ ಎಂದೂ ದೇವರೇ ಹೇಳಿದ್ದಾನೆ. ದೇವದೂತರು ಬಗೆಬಗೆಯ ಸಿಹಿ ತಿಂಡಿ ತಯಾರಿಸ್ತಾ ಇದ್ದಾರೆ. ಹಾಂ, ನಿನಗೆ ಹೇಳಲಿಕ್ಕೆ ಮರೆತೆ. ನನಗೆ ಈಗ ಕ್ಯಾನ್ಸರ್ ಇಲ್ಲ. ಹಾಗಾಗಿ ಇಂಜೆಕ್ಷನ್, ಮಾತ್ರೆ, ಕೀಮೋಥೆರಪಿಗೆ ಹೋಗಬೇಕಾಗಿಲ್ಲ. ನಿಶ್ಯಕ್ತಿಯಿಂದ ನಡುಗ ಬೇಕಾಗಿಲ್ಲ. ನಂಗೆ ತೊಂದರೆ ಕೊಡಲಿಕ್ಕೆ ಒಬ್ಬರೂ ಇಲ್ಲ. ಎಲ್ರೂ ನನ್ನನ್ನು ತುಂಬಾ ಮುದ್ದು ಮಾಡ್ತಾರೆ. ನನ್ನ ಬಗ್ಗೆ ಹೇಳಲು ಶುರು ಮಾಡಿ, ನಿನ್ನ ವಿಷಯ ಕೇಳುವುದನ್ನೇ ಮರೆತೆ. ನೀನು ಹೇಗಿದ್ದೀಯಾ ಅಮ್ಮ? ದೇವರು ಮತ್ತೆ ನೆನಪಿಸಿದ್ದಾನೆ. ಮಕ್ಕಳು ಇರುವ ಕಡೆಯಲ್ಲೇ ಅವನು ಇರ್ತಾನಂತೆ. ಹಾಗಂತ ನಿನಗೆ ತಿಳಿಸಲು ಹೇಳಿದ್ದಾನೆ... ಇವತ್ತಿಗೆ ಇಷ್ಟು ಸಾಕು. ಟಾಟಾ, ಸೀಯೂ...ಬೈಬೈ...
ಇಂತಿ ನಿನ್ನ ಮುದ್ದು ಮಗ.
---
ಥಟ್ಟನೆ ಕಣ್ತೆರೆದಳು ಸರೋಜಮ್ಮ. ಅದುವರೆಗೂ ಕಂಡದ್ದು ಕನಸು ಎಂದು ಅರ್ಥವಾದಾಗ, ನನ್ನ ಪೆದ್ದುಪೆದ್ದು ಪ್ರಶ್ನೆಗಳಿಗೆ ಎಂಥ ಉತ್ತರ ಕೊಟ್ಟೆಯಪ್ಪಾ ದೇವರೇ ಎನ್ನುತ್ತಾ ಕೂತಲ್ಲೇ ಕೈ ಮುಗಿದಳು.
---
ಸ್ನೇಹಿತನೊಬ್ಬ ಹೇಳಿದ ಈ ಕತೆಯನ್ನು ಓದುಗ ಸ್ನೇಹಿತರಾದ ನಿಮಗೂ ಹೇಳಬೇಕೆನಿಸಿತು.
-ವಿಶ್ವೇಶ್ವರ ಭಟ್
vbhat@me.com