ಅಂಕಣಗಳು

ಅಲ್ಲಿಗೆ ಹೋದ್ರೂ ಮನಸ್ಸೆಲ್ಲಾ ಇಲ್ಲೇ ಇತ್ತು!

ಚುನಾವಣೆಗಳು ಬಂತೆಂದರೆ ರಾಜಕಾರಣಿಗಳು ಪಕ್ಷದಿಂದ ಪಕ್ಷಕ್ಕೆ ಹಾರುತ್ತಾರೆ. ಇದಕ್ಕೆ ಕೆಲವರು ತತ್ವ, ಸಿದ್ಧಾಂತದ ಲೇಪನ ಹಚ್ಚುತ್ತಾರೆ. 2008ರ ಚುನಾವಣೆಯ ನಂತರ ರಾಜ್ಯದಲ್ಲಿ ನಡೆದಿದ್ದೆಲ್ಲಾ 'ಆಪರೇಷನ್ ಕಮಲ'. ಇದಕ್ಕೆ ಕಾಂಗ್ರೆಸ್, ಜೆಡಿಎಸ್ ಶಾಸಕರು ಕೂಡ ಬಲಿಯಾಗಿ ತತ್ವ- ಸಿದ್ಧಾಂತ ಪದದ ಅರ್ಥವನ್ನೇ ಕೆಡಿಸಿದ್ದಾರೆ. ಈಗ ಮತ್ತೆ ವಿಧಾನಸಭಾ ಚುನಾವಣೆ ಬರುತ್ತಿರುವುದರಿಂದ ಪಕ್ಷಾಂತರ ಪರ್ವ ಆರಂಭವಾಗಿದೆ. ಬಿಜೆಪಿಯಿಂದ ಕಾಂಗ್ರೆಸ್, ಜೆಡಿಎಸ್, ಕೆಜೆಪಿಗೆ ಹೋಗುತ್ತಿದ್ದಾರೆ. ಜೆಡಿಎಸ್‌ನಿಂದ ಕಾಂಗ್ರೆಸ್- ಹೀಗೆ ಪಕ್ಷಾಂತರಗಳು ನಡೆಯುತ್ತಲೇ ಇವೆ. ಎಚ್.ಡಿ. ಕುಮಾರಸ್ವಾಮಿ ಅವರು ಬಿ.ಎಸ್. ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಿಲ್ಲ ಎಂದು ಕಳೆದ ಚುನಾವಣೆ ಕಾಲಕ್ಕೆ ಬಿಜೆಪಿಗೆ ಹೋಗಿದ್ದ ಮಾಜಿ ಸಚಿವ ಜಿ.ಟಿ. ದೇವೇಗೌಡರು 'ಅಲ್ಲಿದ್ದದ್ದು ಸುಮ್ಮನೆ ಇಲ್ಲಿದೆ ನಮ್ಮನೆ' ಎಂಬಂತೆ ಇದೀಗ ಮರಳಿ ಜೆಡಿಎಸ್‌ಗೆ ಬರುತ್ತಿದ್ದಾರೆ. ಅದಕ್ಕೆ 'ಮರಳಿ ಮನೆಗೆ' ಹೆಸರಿನಲ್ಲಿ ಸಮಾವೇಶ ನಡೆಸುತ್ತಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಅವರನ್ನು ಪತ್ರಕರ್ತರು ಪ್ರಶ್ನಿಸಿದರೆ, 'ಅವ್ರು ಬಿಜೆಪಿಗೆ ಹೋಗಿದ್ರು ಮನಸ್ಸೆಲ್ಲಾ ಇಲ್ಲೇ ಇತ್ತು ಅಂದ್ರು'. ಜೈ ಮತದಾರ ಪ್ರಭುವೇ ಬ್ರಾಹ್ಮೀ ಮುಹೂರ್ತಕ್ಕೆ ಎದ್ದು ಮೂತ್ರ ಮಾಡೋರು!

ಜಾಸ್ತಿ ಸಲಹೆ ಕೊಡಬಾರದು. ಅದರಲ್ಲೂ ಪುಕ್ಕಟ್ಟೆ ಸಲಹೆ ಕೊಟ್ಟರೆ, ಕೆಲವೊಮ್ಮೆ ನಾವೇ ಪೇಚಿಗೆ ಸಿಕ್ಕಿಹಾಕಿಕೊಳ್ಳುತ್ತೇವೆ. ಈಗ ಆಗಿರುವುದೂ ಹೀಗೆ.
ಏನಾಯಿತೆಂದರೆ, ಮಂಗಳೂರು ಕೊಂಕಣಿ ಅಕಾಡೆಮಿ ಆಶ್ರಯದಲ್ಲಿ ಕೊಂಕಣಿ ಅಭಿಮಾನ್ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಉಪನ್ಯಾಸಕ ಡಾ.ಬಿ.ಎಂ. ಹೆಗ್ಡೆ ಅವರು ಆಹಾರ, ಆರೋಗ್ಯ ಕುರಿತು ಗಂಭೀರ ಭಾಷಣ ಬಿಗಿಯುತ್ತಿದ್ದರು. 'ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದೇಳಬೇಕು. ಆಗ ದೇಹದಲ್ಲಿ ಶಕ್ತಿ ಉದ್ದೀಪನವಾಗುತ್ತದೆ. ಜ್ಞಾಪಕಶಕ್ತಿ ಪ್ರಬಲವಾಗಿರುತ್ತದೆ. ಅಷ್ಟೇ ಅಲ್ಲ ದಿನವಿಡೀ ಮನಸ್ಸು ಹುರುಪಿನಿಂದ ಇರುತ್ತದೆ. ದೇಹದಲ್ಲಿ ಬೆಳಗಿನಿಂದ ಮಧ್ಯಾಹ್ನವರೆಗೆ ಚೈತನ್ಯ ಹೆಚ್ಚುತ್ತದೆ. ಮಧ್ಯಾಹ್ನದ ಬಳಿಕ ರಾತ್ರಿಯವರೆಗೆ ದೇಹದ ಚೈತನ್ಯ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ ಈಗಿನ ಮಂದಿ ಮಧ್ಯಾಹ್ನಕ್ಕೆ ಎದ್ದು ರಾತ್ರಿ ಕೆಲಸ ಮಾಡುತ್ತಾ ಚೈತನ್ಯ ಕಳೆದುಕೊಳ್ಳುತ್ತಿದ್ದಾರೆ' ಎಂದು ಬುದ್ಧಿವಾದ ಹೇಳಿದರು. ಗಂಭೀರವದನರಾಗಿ ಆಸೀನರಾಗಿದ್ದ ಕೊಂಕಣಿ ಅಕಾಡೆಮಿ ಅಧ್ಯಕ್ಷ ಕಾಸರಗೋಡು ಚಿನ್ನ ಅವರು, ಹೆಗ್ಡೆ ಭಾಷಣ ಮುಗಿಸಿದ ಬಳಿಕ ಮೈಕ್ ಬಳಿ ಹೋಗಿ, 'ನಾವು ಪ್ರತಿ ದಿನ ಬೆಳಗ್ಗೆ 4 ಗಂಟೆಗೆ ಏಳುತ್ತೇವೆ. ಎದ್ದು ಮೂತ್ರ ಮಾಡಿ ಮತ್ತೆ ಮಲಗುತ್ತೇವೆ' ಎಂದರು! ನಗುವುದೋ ಅಳುವುದೋ ನಿನ್ನಾಟವ ಕಂಡು ಎಂದು ಹೆಗ್ಡೆಯವರು ಮನಸ್ಸಿನಲ್ಲಿಯೇ ಹೇಳಿಕೊಂಡಿರಬೇಕು!

ಬಿ.ಜನಾರ್ದನ ಪೂಜಾರಿ ಅಂದ್ರೆ ಬಿಜೆಪಿ!
ಮಂಗಳೂರಲ್ಲಿ ಜನಾರ್ದನ ಪೂಜಾರಿ ಅವರು ಮುಖಂಡರಿಗೆ ಪ್ರಶ್ನೆ ಕೇಳುವುದು, ಮಕ್ಕಳಿಗೂ ಪ್ರಶ್ನೆ ಕೇಳಿ ಬಹುಮಾನ ನೀಡುವುದು ಮೊದಲಾದ ಕೆಲಸಗಳಿಂದ ಗಮನ ಸೆಳೆಯುತ್ತಾರೆ. ಮೊನ್ನೆ ಕಾಂಗ್ರೆಸ್ ಚುನಾವಣೆ ಉಸ್ತುವಾರಿ ವಹಿಸಿದ ದಿನ ಪತ್ರಿಕಾಗೋಷ್ಠಿ ನಡೆಸುವಾಗ ಮಾಜಿ ಮೇಯರ್ ಆಶ್ರಫ್ ಸಿಟ್ಟಿಗೆದ್ದು ರಂಪ ಮಾಡಿಬಿಟ್ಟರು. ಸಿಟ್ಟಿಗೆದ್ದ ಕಾರ್ಯಕರ್ತರೆಲ್ಲ ರಸ್ತೆ ಬದಿಯಲ್ಲಿ ಪರಸ್ಪರ ದೂಡಾಡಿಕೊಂಡರು. ಅಲ್ಪಸಂಖ್ಯಾತರ ಪಕ್ಷಪಾತಿ ಎಂದು ವಿರೋಧಿಗಳು ಆರೋಪ ಮಾಡಿದರೆ, ಕಾಂಗ್ರೆಸ್ ಕಾರ್ಯಕರ್ತರು ಸೇರಿಕೊಂಡು ಪೂಜಾರಿಯವರಿಗೆ ಆರ್‌ಎಸ್‌ಎಸ್ ಎಂದು ಬೊಬ್ಬೆ ಹೊಡೆದರು. ಆಶ್ರಫ್ ಬೆಂಬಲಿಗರು ರಸ್ತೆಯಲ್ಲಿ ಕೂಗಾಡಿ, 'ಬಿ. ಜನಾರ್ದನ ಪೂಜಾರಿ ಎಂದರೆ ಬಿಜೆಪಿ' ಎಂದು ಟೀಕಿಸಿದರು. 'ನಮ್ಮವರಿಗೆ ಟೆಕೆಟ್ ನೀಡದಿದ್ದರೆ ನಾವೆಲ್ಲ ಕೆಜೆಪಿಗೆ ಬೆಂಬಲ ನೀಡಿ ಗೆಲ್ಲಿಸುತ್ತೇವೆ' ಎಂದು ಹೇಳುವುದನ್ನು ಮರೆಯಲ್ಲಿಲ್ಲ!

ಸಿದ್ದುಗಿಂತ ನಾನೇ ಸೀನಿಯರ್ರು
ಕಾಂಗ್ರೆಸ್ಸಿನಲ್ಲಿ ಸಿನಿಯಾರಿಟಿ ಹೇಳಿಕೊಳ್ಳುವವರ ದೊಡ್ಡ ಪಟ್ಟಿಯೇ ಇದೆ. ಈಗ ಅವರ ಸಾಲಿಗೆ ಬಾದಾಮಿ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿ ಮಂತ್ರಿಗಿರಿಯೂ ಅನುಭವಿಸಿ, ಸತತ ಎರಡು ಬಾರಿ ಸೋತಿರುವ ಬಿ.ಬಿ.ಚಿಮ್ಮನಕಟ್ಟಿ ಅವರೂ ಸೇರಿದ್ದಾರೆ.
ಇಷ್ಟೆಲ್ಲ  ಗೆಲವು-ಸೋಲು ಉಂಡಿರುವ ಚಿಮ್ಮನಕಟ್ಟಿ ಅವರಿಗೆ ಈಗ ಇದ್ದಕ್ಕಿದ್ದಂತೆ ಸಿನಿಯಾರಿಟಿಯ ಜತೆಗೆ ರಾಜ್ಯ ಕುರುಬ ಸಮಾಜದ ಹಿರಿಯ ನಾಯಕ ಎನ್ನುವ ಜ್ಞಾನೋದಯವೂ ಆಗಿದೆ. ಕಾರಣ, ಜಿಲ್ಲೆಯಲ್ಲಿ ಪಕ್ಷದ ವತಿಯಿಂದ ಆಯೋಜಿಸುವ ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲಿ ಯಾರೂ ವಿನಾಕಾರಣ ಸಿದ್ದರಾಮಯ್ಯ ಅವರನ್ನು ಹೊಗಳಬಾರದು. ಒಂದು ವೇಳೆ ಹೆಸರು ಎತ್ತಿದರೆ, ವಾಚಾಮಗೋಚರ ಬೈಗುಳ ಗ್ಯಾರಂಟಿ.

ಇತ್ತೀಚೆಗೆ ವೀಕ್ಷಕರಾಗಿ ಜಿಲ್ಲೆಗೆ ಆಗಮಿಸಿದ್ದ ಮಲ್ಲಿಕಾರ್ಜುನ ನಾಗಪ್ಪ, ಪಾರಸಮಲ್ ಜೈನ್ ಎದುರಿಗೇ ಇಂಥದೊಂದು ಯಡವಟ್ಟು ಶುರುವಿಟ್ಟುಕೊಂಡರು ಚಿಮ್ಮನಕಟ್ಟಿ. ಸಭೆಯಲ್ಲಿ ಏನು ನಡೆಯುತ್ತಿದೆ, ಅದ್ಯಾಕೆ ಚಿಮ್ಮನಕಟ್ಟಿ ಅವರು ಸಿದ್ದರಾಮಯ್ಯ ಹೆಸರೆತ್ತಬೇಡಿ ಎನ್ನುತ್ತಾರೆ ಎನ್ನುವುದೇ ಅರ್ಥವಾಗಲಿಲ್ಲ. ಬಳಿಕ ಹಿರಿಯರೊಬ್ಬರು ಚಿಮ್ಮನಕಟ್ಟಿ ಸಿಟ್ಟಿನ ಕಾರಣವನ್ನು ಬಿಚ್ಚಿಟ್ಟದ್ದು ಹೀಗೆ-
-30 ವರ್ಷಗಳಿಂದ ಕಾಂಗ್ರೆಸ್ಸಿನಲ್ಲಿ ಇದ್ದೇನೆ. ಶಾಸಕನಾಗಿದ್ದೇನೆ, ಮಂತ್ರಿಯಾಗಿದ್ದೇನೆ. ಮೇಲಾಗಿ ಬಹು ದೊಡ್ಡ ಸಮಾಜವಾದ ಕುರುಬರ ನಾಯಕ ನಾನು. ನಿನ್ನೆ ಮೊನ್ನೆ ಪಕ್ಷಕ್ಕೆ ಬಂದಿರುವ ಸಿದ್ದರಾಮಯ್ಯ ಅವರಿಗಿಂತ ನನ್ನ ಸಿನಿಯಾರಿಟಿ ಹೆಚ್ಚಿಗೆ ಇದೆ. ನಾನು ಮೊದಲು ಕುರುಬರ ನಾಯಕ. ಪಕ್ಷ ನಿಷ್ಠೆಯಿಂದ ಕುರುಬ ಸಮಾಜಕ್ಕೆ ಸಲ್ಲುವ ಗೌರವ ನನಗೆ ಸಲ್ಲಬೇಕು- ಎನ್ನುವುದು ಚಿಮ್ಮನಕಟ್ಟಿ ಕ್ಲೇಮು ಎಂಬುದು ಆಮೇಲೆ ತಿಳಿಯಿತು!

ಸನ್ಮಾನಿತರೇ ಚಪ್ಪಾಳೆ ತಟ್ಟಿ ತೃಪ್ತಿಪಟ್ಟರು!
ಕಾರ್ಯಕ್ರಮ ನಿರೂಪಕರು ಸಭೆ- ಸಮಾರಂಭಗಳಲ್ಲಿ ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ನೀಡಿ ಎಂದು ಕೇಳುವುದು ಮಾಮೂಲು. ಸಭಿಕರಿಗೆ ಇಷ್ಟವಿರಲಿ, ಇಲ್ಲದಿರಲಿ ನಿರೂಪಕರು ಹೇಳಿದಾಗ ಕರತಾಡನ ಮಾಡುವುದು ಉಂಟು. ಆದರೆ, ಮೈಸೂರಿನಲ್ಲಿ ಕಳೆದ ವಾರ ನಡೆದ ಸಮಾರಂಭವೊಂದರಲ್ಲಿ ಇದಕ್ಕೆ ತದ್ವಿರುದ್ಧ ನಿರೂಪಕರು, ಪದೇ ಪದೇ ಮನವಿ ಮಾಡಿಕೊಂಡರೂ ಸಭಿಕರು ಚಪ್ಪಾಳೆ ತಟ್ಟಲಿಲ್ಲ. ಇದ್ದ ಜನರೂ ಕಡಿಮೆ. ಹೀಗಾಗಿ ಸನ್ಮಾನ ಸಮಾರಂಭ ನಡೆದಾಗ ಸನ್ಮಾನಿತರೇ ಚಪ್ಪಾಳೆ ತಟ್ಟಿ, ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡವರಂತೆ ತೃಪ್ತಿಪಟ್ಟರು!

-ನಂಬಿರಾಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ