ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಆಸ್ಟ್ರೇಲಿಯಾದ ಪ್ರವಾಸಿ ತಾಣಗಳಲ್ಲಿ ಪುಂಡ ಪೋಕರಿಗಳಿಗೆ ಜಾಗವಿಲ್ಲ!

Srinivasa Murthy VN
Updated On : 24 Feb 2013, 10:49 am

ಆಸ್ಟ್ರೇಲಿಯಾದಲ್ಲಿರುವಂತಹ ಸುಂದರ ಪರಿಸರ ನಮ್ಮ ಭಾರತದಲ್ಲಿಯೂ ಇದೆ. ಆದರೆ ಅವರು ತಮ್ಮ ಆಕರ್ಷಣೀಯ ಸ್ಥಳಗಳ ಮಾಹಿತಿಯನ್ನು ಸುಂದರವಾದ ಚಿತ್ರಗಳೊಂದಿಗೆ ಮುದ್ರಿಸಿ ತಂತ್ರಜ್ಞಾನದ ಮೂಲಕ ಎಲ್ಲರಿಗೂ ತಲುಪುವಂತೆ ಮಾಡುತ್ತಾರೆ. ಅದನ್ನು ಓದಿದವರಲ್ಲಿ 'ಈ ಜಾಗವನ್ನು ನಾವು ನೋಡದಿದ್ದರೆ ಏನನ್ನೋ ಕಳೆದುಕೊಳ್ಳುತ್ತೇವೆ' ಎನ್ನುವ ಭಾವನೆ ಮೂಡುವಂತೆ ವಿಷಯಗಳನ್ನು ಪ್ರಸ್ತಾಪಿಸಿರುತ್ತಾರೆ. ಅಲ್ಲದೆ ಪ್ರವಾಸಿಗರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ನೀರು, ಶೌಚಾಲಯ, ಶುಭ್ರತನ ಮುಂತಾದವುಗಳನ್ನು ಒದಗಿಸುವುದರ ಜೊತೆಗೆ ಪ್ರವಾಸೀ ತಾಣಗಳು ಪುಂಡ ಪೋಕರಿಗಳ ತಾಣವಾಗದಂತೆ ಗಮನ ವಹಿಸುತ್ತಾರೆ. ಇವುಗಳನ್ನು  ಅನುಸರಿಸಿದರೆ ನಮ್ಮಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗಳನ್ನು ಆಕರ್ಷಿಸಬಹುದು. ಅಲ್ಲಿನ ಸರ್ಕಾರ ಪ್ರವಾಸೋದ್ಯಮದ ಸಕಲ ಸೌಕರ್ಯಗಳನ್ನು ಕೊಡುತ್ತದೆ ಎನ್ನುವುದು ಎಷ್ಟು ನಿಜವೋ, ಅದಕ್ಕೆ ತಕ್ಕಂತೆ ಪ್ರವಾಸಿಗರೂ ಸ್ಪಂದಿಸುತ್ತಾರೆ ಎನ್ನುವುದೂ ಅಷ್ಟೇ ನಿಜ. ಸಿಕ್ಕಿದ ಕಡೆ ತಾವು ತಿಂದು-ಕುಡಿದ ಪ್ಲೇಟು, ಲೋಟಗಳನ್ನು ಬಿಸಾಡುವುದಿಲ್ಲ. ಅದಕ್ಕಾಗಿ ಮಾಡಿಟ್ಟ ಚೀಲಗಳಲ್ಲಿ ಹಾಕಿ, ಪ್ರಕೃತಿ ಸೌಂದರ್ಯವನ್ನು ಕಾಪಾಡುವುದರಲ್ಲಿ ಆಸಕ್ತಿ ವಹಿಸುತ್ತಾರೆ. ಪ್ರಕೃತಿಯನ್ನು ನಮ್ಮ ಮುಂದಿನ ಪೀಳಿಗೆಗಾಗಿ ಜತನದಿಂದ ಕಾಪಾಡಬೇಕು ಎನ್ನುವ ಮನೋಭಾವವನ್ನು ಎಲ್ಲರೂ ಹೊಂದಿರುತ್ತಾರೆ.
ಹದಿನೈದು ದಿವಸಗಳ ರಜೆಯ ಸಮಯದಲ್ಲಿ ನಾನು ಮತ್ತು ರಜನೀಶ್ ಸಿಡ್ನಿ, ಕ್ಯಾನ್ಬೆರಾ, ಗೋಲ್ಡ್‌ಕೋಸ್ಟ್, ಮುಂತಾದ ಜಾಗಗಳಿಗೆ ಹೋಗಿ ಬಂದೆವು. ಮೆಲ್ಬೋರ್ನ್‌ನಲ್ಲಿ ಹೆಚ್ಚಾಗಿ ವಯಸ್ಸಾದವರಿದ್ದು, ಅವರು ಪ್ರಕೃತಿ ಸೌಂದರ್ಯವನ್ನು ಅನುಭವಿಸುತ್ತ ಆನಂದವಾಗಿ ಕಾಲ ಕಳೆಯುವುದರಿಂದ ಅದನ್ನು 'ಪಿಂಚಣಿದಾರರ ಸ್ವರ್ಗ' ಎಂದು ಕರೆಯುತ್ತಾರೆ. ಅಲ್ಲಿ ಬಹಳಷ್ಟು ಶಾಲಾ ಕಾಲೇಜುಗಳಿವೆ. ಜುಲೈ ತಿಂಗಳಿನಲ್ಲಿ ತುಂಬಾ ಚಳಿ. ಡಿಸೆಂಬರ್‌ನಲ್ಲಿ
ಅಸಾಧ್ಯ ಸೆಕೆ. ಅಲ್ಲೊಂದು ಚಿನ್ನದ ವಸ್ತು ಸಂಗ್ರಹಾಲಯವಿದೆ. ಹಳೇ ಕಾಲದಲ್ಲಿ ಹೇಗೆ ಚಿನ್ನವನ್ನು ಗಣಿಯಿಂದ ತೆಗೆಯುತ್ತಿದ್ದರು, ಬೆಂಕಿಯಲ್ಲಿ ಹಾಕಿ ಕರಗಿಸಿ, ಪರಿಷ್ಕರಿಸಿ, ಹೇಗೆ ಚಿನ್ನದ ಗಟ್ಟಿಗಳನ್ನು ತಯಾರಿಸುತ್ತಿದ್ದರು ಎಂಬುದನ್ನು ಪ್ರಾತ್ಯಕ್ಷಿಕವಾಗಿ ತೋರಿಸುತ್ತಾರೆ. ನಮ್ಮ ಕೋಲಾರದ ಕೆ.ಜಿ.ಎಫ್ ಅಥವಾ ರಾಯಚೂರಿನ ಹಟ್ಟಿ ಚಿನ್ನದ ಗಣಿಯಲ್ಲೂ ನಾವು ಇದೇ ರೀತಿ ಚಿನ್ನದ ವಸ್ತುಸಂಗ್ರಹಾಲಯವನ್ನು ಮಾಡಬಹುದಲ್ಲ ಎಂದು ಅದನ್ನು ಕಂಡು ನನಗನ್ನಿಸಿತು.
ಮೆಲ್ಬೋರ್ನ್ ಎಷ್ಟು ಶಾಂತವಾಗಿದೆಯೋ ಅದಕ್ಕೆ ತದ್ವಿರುದ್ಧವಾಗಿದೆ ಸಿಡ್ನಿ. ಚಟುವಟಿಕೆಗಳಿಂದ ಕೂಡಿದ ನಗರವದು. ಮೆಲ್ಬೋರ್ನ್ ಅನ್ನು ನಮ್ಮ ಮೈಸೂರಿಗೆ ಮತ್ತು ಸಿಡ್ನಿಯನ್ನು ಬೆಂಗಳೂರಿಗೆ ಹೋಲಿಸಬಹುದು. ಸಿಡ್ನಿ ಆಸ್ಟ್ರೇಲಿಯಾದ ರಾಜಧಾನಿಯಾಗಿದ್ದು ಅತಿ ದೊಡ್ಡ ಮತ್ತು ಹೆಸರಾಂತ ಜಾಗ. ಆಕರ್ಷಕ ಸಮುದ್ರ ತೀರಗಳು, ಸಾಂಕೇತಿಕ ಕಟ್ಟಡಗಳು, ಪ್ರಸಿದ್ಧ ಚಾರಿತ್ರಿಕ ಘಟನೆಗಳು ನಡೆದ ಸ್ಥಳಗಳೂ ಇರುವ ಜೀವಂತ ಸಾಂಸ್ಕೃತಿಕ ನಗರ. ಸಿಡ್ನಿಯಲ್ಲಿ ಡಾಲರ್ ಹಾರ್ಬರ್ ಮತ್ತು ಒಪೇರಾ ಹೌಸ್ ತುಂಬಾ ಆಕರ್ಷಕ ಸ್ಥಳಗಳು. ಅಲ್ಲಿನ ಬಂದರಿಗೆ ಪ್ರಪಂಚದ ಎಲ್ಲೆಡೆಯಿಂದ ಜನರು ಬರುತ್ತಾರೆ. ಅವರೆಲ್ಲ ಅಲ್ಲಿಂದ ಸಮುದ್ರದ ಮೇಲೆ ಸಣ್ಣ ದೋಣಿಗಳಲ್ಲಿ ಹತ್ತಿ ಸುತ್ತ ಮುತ್ತಲಿನ ದ್ವೀಪಗಳನ್ನು ನೋಡಲು ಹೋಗುತ್ತಾರೆ. ಈಜುವುದು, ದಂಡೆಯಲ್ಲಿ ನಡೆದಾಡುವುದು, ಮಲಗಿ ಮೈಯ್ಯನ್ನು ಸೂರ್ಯನಿಗೆ ಒಡ್ಡುವುದು ಪ್ರವಾಸಿಗರ ಹವ್ಯಾಸ. ಅಲ್ಲಿ ಸರೋವರದ ವಿಹಾರ ನೌಕಾಯಾನ ಬಹಳ ಪ್ರಸಿದ್ಧ. ಸರೋವರದ ಮೇಲೆ ನಿಧಾನವಾಗಿ ಚಲಿಸುತ್ತಾ ಸುತ್ತ ಮುತ್ತಲಿನ ಪ್ರಕೃತಿ ಸೌಂದರ್ಯದಲ್ಲಿ ತಲ್ಲೀನರಾಗಿ ಆಯಾಸ ಪರಿಹಾರ ಮಾಡಿಕೊಳ್ಳುವ ವಿಶೇಷ ಸೌಲಭ್ಯವದು.
ಗೋಲ್ಡ್ ಕೋಸ್ಟ್‌ನಲ್ಲಿನ ಹಲವಾರು ಸಮುದ್ರ ತೀರಗಳು, ಅದರಲ್ಲೂ ಸಮುದ್ರದ ತೆರೆಗಳ ಮೇಲೆ ತೇಲಾಡುವ (ಸರ್ಫಿಂಗ್) ಆಟ ಅಲ್ಲಿ ಪ್ರಸಿದ್ಧ. 'ಸರ್ಫರ್ಸ್ ಪ್ಯಾರಡೈಸ್‌' ಎಂದು ಕರೆಸಿಕೊಳ್ಳುವ ಜಾಗವು ಬೆಚ್ಚಗಿನ ಪೆಸಿಫಿಕ್ ಸಾಗರ ಮತ್ತು ಕಡು ನೀಲಿ ಬಣ್ಣದ ನೆರಾಂಗ್ ನದಿಯ ಮಧ್ಯೆ ಇದೆ. ಇಲ್ಲಿ ಜನ ಸರ್ಫಿಂಗ್ ಮಾಡಲೆಂದೇ ಬರುತ್ತಾರೆ. ಅಲ್ಲದೆ ಬಂಜಿ ಜಂಪಿಂಗ್, ಮಿನಿ ಐಸ್‌ಸ್ಕೇಟಿಂಗ್ ಸ್ಪಾಟ್‌ಗಳು, ನೈಟ್ ಕ್ಲಬ್‌ಗಳು, ಬಾರುಗಳು, ಮುಂತಾದ ಅನೇಕ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಪ್ರವಾಸೋದ್ಯಮವೇ ಅಲ್ಲಿನ ಆರ್ಥಿಕ ಸಂಪತ್ತಿನ ಮೂಲ. ಹಾಗಾಗೇ ಅದಕ್ಕೆ ಬಹಳ ಪ್ರಾಶಸ್ತ್ಯ ನೀಡುತ್ತಾರೆ. ಪ್ರವಾಸಿಗರು ಕೇವಲ ಒಂದು ಬ್ಯಾಕ್ ಪ್ಯಾಕನ್ನು ಹಿಡಿದುಕೊಂಡು ಬಂದು, ಒಂದು ಹಾಸ್ಟಲ್ಲಿನಲ್ಲಿ ಇದ್ದುಕೊಂಡು ಕಡಿಮೆ ಖರ್ಚಿನಲ್ಲಿ ವಿಹರಿಸಬಹುದು. ಇಲ್ಲವೇ ಅತೀ ಹೆಚ್ಚಿನ ಹಣ ತೆತ್ತು ಫೈವ್ ಸ್ಟಾರ್ ಹೊಟೆಲ್ಲುಗಳಲ್ಲಿ ತಂಗಿ ಐಷಾರಾಮಿ ವಿಹಾರವನ್ನು ಕೂಡ ಮಾಡಬಹುದು. ಅಂದರೆ ಒಬ್ಬ ಸಾಮಾನ್ಯ ಪ್ರವಾಸಿಗ ಕೂಡ ಎಲ್ಲಾ ಸವಲತ್ತನ್ನೂ ಅನುಭವಿಸುತ್ತಾನೆ.
ಇನ್ನು ಪ್ರವಾಸಿಗರನ್ನು ಶಾರ್ಕ್ ಮೀನುಗಳಿಂದ ರಕ್ಷಿಸಲು ಅಲ್ಲಲ್ಲಿ ಬಲೆಗಳನ್ನು ಬೀಸುತ್ತಾ, ಬೆಂಗಾವಲು ಪಡೆಗಳು ದೋಣಿಗಳಲ್ಲಿ ತಿರುಗುತ್ತಿರುತ್ತವೆ. ಒಂದು ಲಕ್ಷ ಹೆಕ್ಟೇರಿನಷ್ಟು ಜಾಗವನ್ನು ಪ್ರಕೃತಿ ಸಿರಿಗಾಗೇ ಮೀಸಲಿಡಲಾಗಿದೆ. ಇದೇ ಪ್ರವಾಸಿಗರ ಆಕರ್ಷಕ ಕೇಂದ್ರ ಬಿಂದು. ಎಲ್ಲೆಡೆಯಿಂದ  ಬರುವ ಪ್ರವಾಸಿಗರಿಗಾಗಿ ಎಲ್ಲ ದೇಶಗಳ ಖಾದ್ಯಗಳು ಸಿಗುವ ಸುಮಾರು ಐನೂರು ಉಪಹಾರ ಗೃಹಗಳು ಅಲ್ಲಿವೆ.
ಇನ್ನು ಎಲ್ಲಾ ದೇಶಗಳ ವಿಮಾನಗಳೂ ಅಲ್ಲಿಗೆ ಬರುವುದು ವಿಶೇಷ. ಹಲವಾರು ಹೆಸರಾಂತ ಸಿನೆಮಾ ಸ್ಟುಡಿಯೋಗಳು ಅಲ್ಲಿವೆ. ಹಿಂದಿ ಸಿನಿಮಾ 'ಸಿಂಗ್ ಈಸ್ ಕಿಂಗ್‌' ಕೂಡ ಅಲ್ಲಿಯೇ ತಯಾರಾಯಿತು. ಥೀಮ್ ಪಾರ್ಕುಗಳೂ ತುಂಬಾ ಚೆನ್ನಾಗಿದ್ದವು. ಡ್ರೀಮ್ ವರ್ಲ್ಡ್, ವಾರ್ನರ್ ಬ್ರದರ್ಸ್ ಮೂವಿ ವರ್ಲ್ಡ್, ಸೀ ವರ್ಲ್ಡ್, ಇತ್ಯಾದಿ ಆಕರ್ಷಕ ತಾಣಗಳು ಪ್ರವಾಸಿಗರನ್ನು ಇನ್ನೊಂದು ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತವೆ. ಉದಾಹರಣೆಗೆ, ಸೀ ವರ್ಲ್ಡ್‌ನಲ್ಲಿ ನಾವು ಒಂದು ಪಾರದರ್ಶಕ ಕೊಳವೆಯ ಮೂಲಕ ಸಮುದ್ರದೊಳಗೆ ಹೋಗಿ ಜಲಚರಗಳನ್ನು ನೋಡಿದ ಅದ್ಭುತ ಅನುಭವವನ್ನು ಪಡೆದೆವು. ಒಂದು ನಿಮಿಷಕ್ಕೆ ನಾವೂ ಜಲಚರಗಳೇನೋ ಅನಿಸಿತು! ಅದೇ ರೀತಿ ಮೂವಿ ವರ್ಲ್ಡ್‌ನಲ್ಲಿ, ಒಂದು ಸಿನಿಮಾ ತೆಗೆಯಲು ಯಾವ ರೀತಿ ಚಿತ್ರೀಕರಣ ಮಾಡುತ್ತಾರೆ, ಸಾಹಸಗಳನ್ನು ಹೇಗೆ ಸುಲಭವಾಗಿ ಕ್ಯಾಮರಾದಲ್ಲಿ ತೋರಿಸಬಹುದು, ಸಾಕಿರುವ ಸಿಂಹವನ್ನು ಹೇಗೆ ಬಳಸಿಕೊಳ್ಳುತ್ತಾರೆ ಮುಂತಾದವುಗಳನ್ನು ತೋರಿಸಿಕೊಡಲಾಗುತ್ತದೆ. 'ನಾಯಕ, ನಾಯಕಿಯನ್ನು ರಕ್ಷಿಸಲು ಎತ್ತರದಿಂದ ಧುಮುಕಿ ಹೋರಾಟ ಮಾಡುವುದನ್ನು ನೋಡಿದಾಗ ನಾವು ಗಾಬರಿಯಾಗಿಬಿಡುತ್ತೇವೆ. ಎಷ್ಟು ಕಷ್ಟ ಪಡುತ್ತಿದ್ದಾರಲ್ಲ!' ಎಂದು ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುತ್ತೇವೆ. ಆದರೆ ನಾಯಕ ನಾಯಕಿಯರು ಸಮತಟ್ಟಾದ ಜಾಗದಲ್ಲಿಯೇ ನಿಂತುಕೊಂಡು ನಟಿಸುತ್ತಿದ್ದರು. ಕೇವಲ ಕ್ಯಾಮರಾವನ್ನು ತಿರುಗಿಸಲಾಗುತ್ತಿತ್ತು! ಇದನ್ನು ನೋಡುವುದಕ್ಕೆ ಪ್ರವೇಶ ಶುಲ್ಕ ಅತಿ ಹೆಚ್ಚಿದೆ. ಆದರೆ ಕೊಟ್ಟ ಹಣ ವ್ಯರ್ಥವಾಗಲಿಲ್ಲ ಎಂದು ನಂತರ ಅನ್ನಿಸಿತು. ಇನ್ನು ಬ್ರಾಡ್ ಬೀಚ್ ಎನ್ನುವ ಜಾಗದಲ್ಲಿ ಜ್ಯುಪಿಟರ್ ಕ್ಯಾಸಿನೋ ಎಂಬ ಅತಿ ದೊಡ್ಡ ಮನರಂಜನಾ ಸಂಕೀರ್ಣದಲ್ಲಿ ಸಾಕಷ್ಟು ಸಿನಿಮಾ ಹಾಲ್‌ಗಳು, ಉಪಹಾರ ಗೃಹಗಳು, ಬಾರ್‌ಗಳು ಮತ್ತು ಹಲವಾರು ಜೂಜು ಕೇಂದ್ರಗಳಿವೆ. ಅಲ್ಲೆಲ್ಲ ಪ್ರವಾಸಿಗರಿಗಾಗಿ ಉತ್ತಮ ಉಪಹಾರ ಗೃಹಗಳು ಮತ್ತು ವೈವಿಧ್ಯಮಯ ವ್ಯಾಪಾರ ಕೇಂದ್ರಗಳಿವೆ.
ನನ್ನ ಕಣ್ಣಿಗೆ ಬಿದ್ದ ಇನ್ನೊಂದು ವಿಶೇಷವೆಂದರೆ, ಅಲ್ಲಿನ ಸಂಸತ್ ಭವನವು ನೆಲಮಾಳಿಗೆಯಲ್ಲಿದ್ದದ್ದು! ಅದರ ಮೇಲೆ ಸಾಮಾನ್ಯ ಜನರಿಗಾಗಿ ಉತ್ತಮ ಹೂದೋಟವನ್ನು ಬೆಳೆಸಿದ್ದರು. ಅಂದರೆ ಪ್ರಜೆಗಳು ಯಾವಾಗಲೂ ಮೇಲೆ ಎಂದು ಪರೋಕ್ಷವಾಗಿ ಹೇಳಲಾಗಿತ್ತು. ಪ್ರಜಾಪ್ರಭುತ್ವದಲ್ಲಿ ಇದು ಉತ್ತಮ ಸ್ಫೂರ್ತಿಯ ಪ್ರತೀಕ ಎಂದರೆ ತಪ್ಪಾಗಲಾರದು. ಅದೇ ರೀತಿ ಜನರು ಒಳಗೆ ಹೋಗಿ ಸಂಸತ್ ಭವನದಲ್ಲಿ ನಡೆಯುವ ಕಲಾಪಗಳನ್ನು ನೋಡುವುದೂ ಸುಲಭವಾಗಿತ್ತು. ತುಂಬಾ ಭದ್ರತೆ ಮತ್ತು ನಿಯಮಗಳು ಇರಲಿಲ್ಲ. ಮೆಲ್ಬೋರ್ನ್‌ನ ಮೇಯರ್ ಸಂಜೆ ತಮ್ಮ ಕಾರನ್ನು ತಾವೇ ನಡೆಸಿಕೊಂಡು ಬರುತ್ತಿರುವುದಕ್ಕೆ ನಾವು ಸಾಕ್ಷಿಯಾದೆವು. ಯಾವ ಭದ್ರತಾ ಸಿಬ್ಬಂದಿಯಾಗಲೀ, ಶಿಷ್ಟಾಚಾರಗಳಾಗಲೀ ಇರಲಿಲ್ಲ. ಎಲ್ಲರ ಹಾಗೆ ಅವರೂ ಸಾಮಾನ್ಯ ಪ್ರಜೆ. ಪ್ರಜಾಪ್ರಭುತ್ವವೆಂದರೆ ಹೀಗಿರಬೇಕು ಎನಿಸಿತು. ಮೊದಲನೇ ಸ್ಥಾನ ನಾಗರಿಕರಿಗೆ. ಎಲ್ಲರೂ ಸಮಾನರೆಂಬ ಭಾವ. ಭಯೋತ್ಪಾದನೆಗೆ ಅವಕಾಶವಿಲ್ಲದಂಥಹ ವ್ಯವಸ್ಥೆ!
ಮುಂದುವರಿಯುವುದು...

-ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement